Uncategorizedಹಿಂದಣ ಹೆಜ್ಜೆ

ಹಿಂದಣಹೆಜ್ಜೆ/ ಮಲಯಾಳಂ ಸಾಹಿತ್ಯದ ದಿಟ್ಟ ಪ್ರತಿಭೆಗಳು – ಡಾ. ಪಾರ್ವತಿ ಜಿ, ಐತಾಳ್


ಸ್ತ್ರೀವಾದಿ ಚಿಂತನೆ ಭಾರತದಲ್ಲಿ ಹರಡಿ ಅದು ಸಾಹಿತ್ಯದ ಮೇಲೆ ಪ್ರಭಾವ ಬೀರುವುದಕ್ಕೆ ಮೊದಲೇ ಮಲಯಾಳಂ ಭಾಷೆಯ ಹಲವು ಲೇಖಕಿಯರು ಪುರುಷ ಪ್ರಾಧಾನ್ಯದ ವಿರುದ್ಧ ದನಿ ಎತ್ತಿ ಬರೆಯಲು ಆರಂಭಿಸಿದ್ದರು. ಕುಟುಂಬದಲ್ಲಿ, ಸಮಾಜದಲ್ಲಿ ಪುರುಷರ ಆಕ್ರಮಣಕಾರಿ ನಿಲುವನ್ನು ಪ್ರಶ್ನಿಸಿದ್ದು, ತಮ್ಮ ಮಹಿಳಾ ಕಥಾಪಾತ್ರಗಳಲ್ಲಿ ಅದರ ವಿರುದ್ಧ ಬರೆದದ್ದು ಆ ಕಾಲಕ್ಕೆ ವಿಶೇಷವಾಗಿತ್ತು. ಅಂಥವರಲ್ಲಿ ಮೂವರ ಪರಿಚಯ ಇಲ್ಲಿದೆ.

ಕೆ. ಸರಸ್ವತಿ ಅಮ್ಮ

ಸ್ತ್ರೀವಾದಿ ಸಿದ್ಧಾಂತ ಹಾಗೂ ಸ್ತ್ರೀಪರ ಹೋರಾಟಗಳು ಭಾರತವನ್ನು ಪ್ರವೇಶಿಸುವುದಕ್ಕೆ ಎಷ್ಟೋ ಮೊದಲೇ ಸ್ತ್ರೀಪರ ಹೋರಾಟಗಾರ್ತಿಯ ದಿಟ್ಟ ಶೈಲಿಯಲ್ಲಿ ಪುರುಷ ಪ್ರಾಧಾನ್ಯದಿಂದ ಸ್ತ್ರೀಯರಿಗಾಗುವ ಅನ್ಯಾಯಗಳ ವಿರುದ್ಧ ಕಥೆಗಳನ್ನು ಬರೆದವರು ಕೆ. ಸರಸ್ವತಿ ಅಮ್ಮ (1909-1976).
ಸರಸ್ವತಿ ಅಮ್ಮ ಅವರ ಹಲವಾರು ಕಥಾ ಸಂಕಲನಗಳು ಅಮೆರಿಕಾದಲ್ಲಿ ಪಠ್ಯಗಳಾಗಿವೆ. ಜಾನ್ಸಿ ಜೇಮೆಸ್ ಎಂಬ ವಿಮರ್ಶಕರ ಪ್ರಕಾರ ‘ಇಡೀ ಕೇರಳದ ಮಹಿಳಾ ಸಾಹಿತ್ಯದ ಇತಿಹಾಸದಲ್ಲಿ ಇವರಷ್ಟು ಮಹಿಳಾ ಬೌದ್ಧಿಕತೆಯನ್ನು ನಿರ್ಲಕ್ಷ್ಯ ಮಾಡಿಸಿಕೊಂಡವರು ಬೇರೆ ಯಾರೂ ಇಲ್ಲ.’ ಸರಸ್ವತಿ ಅಮ್ಮನ ಮೊದಲ ಕಥಾ ಸಂಕಲನವು 1938ರಲ್ಲಿ ಪ್ರಕಟವಾಯಿತು. ಅನಂತರ ಸಾಲಾಗಿ 12 ಕಥಾ ಸಂಕಲನಗಳು, ಒಂದು ಕಾದಂಬರಿ ಮತ್ತು ಒಂದು ನಾಟಕ ಪ್ರಕಟವಾದವು. 1958ರಲ್ಲಿ ‘ಪುರುಷರಿಲ್ಲದ ಲೋಕ’ ಎನ್ನುವ ಒಂದು ಪ್ರಬಂಧ ಸಂಕಲನವೂ ಪ್ರಕಟವಾಯಿತು. ಆಕೆ ಜೀವಿಸಿದ್ದ ಕಾಲದಲ್ಲಿ ಆಕೆಯನ್ನು ಎಲ್ಲರೂ ‘ಪುರುಷ ದ್ವೇಷಿ’ ಎಂದು ಕರೆದರೂ, ನಂತರದ ಕಾಲದಲ್ಲಿ ಸ್ತ್ರೀವಾದಿಗಳು ಆಕೆಯನ್ನು ಬಹಳವಾಗಿ ಗೌರವಿಸಿದರು.

ಇಂಗ್ಲಿಷ್‍ಗೆ ಭಾಷಾಂತರಗೊಂಡ ಸರಸ್ವತಿ ಅಮ್ಮ ಅವರ ಸಾಹಿತ್ಯದ ಕುರಿತಾದ ಕೃತಿ ‘ದಿ ಸ್ಟೋರೀಸ್ ಫ್ರಂ ಎ ಫರ್ಗಾಟನ್ ಫೆಮಿನಿಸ್ಟ್’. ಅದರ ಮುನ್ನುಡಿಯಲ್ಲಿ ಜಾನ್ಸಿ ಜೇಮ್ಸ್ ಹೇಳುತ್ತಾರೆ : ‘ಸರಸ್ವತಿ ಅಮ್ಮ ತಮ್ಮ ಕಥೆಗಳಲ್ಲಿ ಪುರುಷರು ಮತ್ತು ಅವರ ಪ್ರೀತಿಯ ಬಗೆಗಿನ ಭ್ರಮೆಗಳನ್ನು ಕಿತ್ತೊಗೆಯುತ್ತಾರೆ. ಮಾತ್ರವಲ್ಲದೆ ಪಿತೃ ಮೌಲ್ಯಗಳನ್ನು ಖಡಾಖಂಡಿತ ವಿರೋಧಿಸುತ್ತಾರೆ. ಇವು ಆಕೆಯಲ್ಲಿದ್ದ ಸಶಕ್ತ ಸ್ತ್ರೀವಾದಿ ನಿಲುವುಗಳನ್ನು ಸಮರ್ಥಿಸುತ್ತದೆ.’
ಪ್ರೇಮಭಾಜನಂ (1944) ಎಂಬ ಕಾದಂಬರಿ, ದೇವದೂತ ಎಂಬ ನಾಟಕ (1945) ಪೊನ್ನುಂ ಕುಡಂ (ಹೊನ್ನಿನ ಕೊಡ, 1946) ಸ್ತ್ರೀಜನ್ಮಂ (1946), ಕೀಳ್ ಜೀವನಕ್ಕಾರಿ (ಗುಲಾಮಳಾಗಿದ್ದವಳು 1949), ಕಲಾಮಂದಿರಂ (1949), ಪೆಣ್ ಬುದ್ಧಿ (ಹೆಣ್ಣಿನ ಬುದ್ಧಿವಂತಿಕೆ 1951), ಕನತ್ತ ಮದಿಲ್ (1953), ಪ್ರೇಮ ಪರೀಕ್ಷಣಂ (1955), ಚುವನ್ನ ಪೂಕ್ಕಳ್ (ಕೆಂಪು ಹೂಗಳು, 1955), ಚೋಲಮರಂಗಳ್ (ನೆರಳು ಮರಗಳು, 1958) ಇಷ್ಟು ಸರಸ್ವತಿ ಅಮ್ಮನ ಕೃತಿಗಳು. ಅವರು ಯಾವಾಗಲೂ ಸ್ತ್ರೀಯರ ಸ್ವಾತಂತ್ರ್ಯದ ಪರವಾಗಿ ವಾದಿಸಿದರು. ಮಲಯಾಳಂ ಮಹಿಳಾ ಸಾಹಿತ್ಯದಲ್ಲಿ ಒಂದು ತಿರುವನ್ನು ತಂದವರು, ಒಂದು ಹೊಸ ಭಾಷ್ಯವನ್ನು ಬರೆದವರು ಎಂಬ ಹೆಸರು ಅವರಿಗೆ ಇಂದಿಗೂ ಇದೆ. ಪ್ರಾಯಶಃ ಅವರು ತಮ್ಮ ವೈಯಕ್ತಿಕ ಬದುಕಿನಲ್ಲಿ ಎದುರಿಸಿದ ಕಷ್ಟಗಳು ಮತ್ತು ಅನುಭವಿಸಿದ ಅಪಮಾನಗಳು ಅವರ ಪ್ರತಿಭಟನೆ ಮನೋಭಾವಕ್ಕೆ ಕಾರಣವಾಗಿರಬಹುದು. ತಮ್ಮ ಹದಿನೇಳನೆಯ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಅವರು ತಂದೆಯ ಆಶ್ರಯವಿಲ್ಲದೆಯೇ ಹೊರ ಜಗತ್ತಿನಲ್ಲಿ ಬದುಕನ್ನು ಕಂಡುಕೊಳ್ಳ ಬೇಕಾಯಿತು. ಗಂಡಸರ ಲೋಕದಲ್ಲಿ ಬದುಕಲು ಹೆಣ್ಣು ಎಷ್ಟು ಕಷ್ಟ ಪಡಬೇಕಾಗುತ್ತದೆ ಎಂಬುದನ್ನು ಅವರು ಅರ್ಥ ಮಾಡಿಕೊಂಡಳು. ಅಂತೆಯೇ ತಮ್ಮ ಕೃತಿಗಳಲ್ಲಿ ತಮ್ಮ ಅನುಭವಗಳಿಗೆ ಅಭಿವ್ಯಕ್ತಿ ನೀಡಿದರು.

ಕೆ. ಬಾಲಾಮಣಿಯಮ್ಮ

ಮಲಯಾಳಂ ಸಾಹಿತ್ಯದ ಆರಂಭಿಕ ಕವಯಿತ್ರಿ ಬಾಲಾಮಣಿಯಮ್ಮ 1909ರ ಜುಲೈ 19ರಂದು ಗುರುವಾಯೂರು ಸಮೀಪದ ಪುನ್ನಯೂರ್ಕುಳದ ನಾಲಪ್ಪಾಟ್ಟ್ ಮನೆತನದಲ್ಲಿ ಜನಿಸಿದರು. ಸತತವಾಗಿ ಕವಿತೆಗಳನ್ನು ಬರೆಯುತ್ತಿದ್ದ ಅವರ ಹೆಸರು ಮಲಯಾಳಂ ಸಾಹಿತ್ಯದಲ್ಲಿ ಬಹಳ ಪ್ರಸಿದ್ಧಿ ಪಡೆದಿತ್ತು. ಅವರಿಗೆ ‘ಮಾತೃತ್ವದ ಕವಯಿತ್ರಿ ‘ಎನ್ನುವ ಹೆಸರಿತ್ತು. ಅವರು ಶಾಲಾ ಶಿಕ್ಷಣ ಪಡೆದವರಲ್ಲ. ತಮ್ಮ ಸೋದರಮಾವನೂ ಲೇಖಕರೂ ಆಗಿದ್ದ ನಲಪ್ಪಾಟ್ ನಾರಾಯಣ ಮೆನೊನ್ ಅವರ ಗ್ರಂಥ ಸಂಗ್ರಹದಿಂದ ಪುಸ್ತಕಗಳನ್ನು ಓದುತ್ತ ಬೆಳೆದರು. ಮಹಾಕವಿ ವಲ್ಲತ್ತೋಳ್ ಅವರ ಕವಿತೆಗಳಿಂದ ಪ್ರಭಾವಿತರಾದರು. ಇಪ್ಪತ್ತಕ್ಕಿಂತಲೂ ಹೆಚ್ಚು ಕವನ ಸಂಕಲನಗಳು, ಅನುವಾದಗಳು ಮತ್ತು ಗದ್ಯ ಕೃತಿಗಳನ್ನು ಅವರು ರಚಿಸಿದರು.

ಬಾಲಾಮಣಿಯಮ್ಮ ಬಹಳ ಚಿಕ್ಕವರಿದ್ದಾಗಲೇ ಬರೆಯ ತೊಡಗಿದರು. ಅವರ ಮೊದಲ ಕವನ ‘ಕೂಪ್ಪುಕೈ’ (ಜೋಡಿಸಿದ ಕೈ) 1930ರಲ್ಲಿ ಪ್ರಕಟವಾಯಿತು. ಕೊಚ್ಚಿಯ ರಾಜ ಪರೀಕ್ಷಿತ ತಂಬುರಾನ್ ಅವರಿಂದ ‘ಸಾಹಿತ್ಯ ನಿಪುಣ ಪುರಸ್ಕಾರ’ ಲಭಿಸಿದ ನಂತರ ಆಕೆ ಬಹಳ ಪ್ರಸಿದ್ಧರಾದರು. 1959ರಿಂದ 1986ರ ತನಕ ಅವರು ರಚಿಸಿದ ಕವಿತೆಗಳು ‘ನಿವೇದ್ಯಂ’ ಅನ್ನುವ ಹೆಸರಿನಲ್ಲಿ ಪ್ರಕಟವಾಯಿತು. ಅವರು ತಮ್ಮ ಸಾಹಿತ್ಯ ರಚನೆಗೆ ಸದಾ ಸ್ಫೂರ್ತಿಯಾಗಿದ್ದ ಸೋದರ ಮಾವ ತೀರಿಕೊಂಡಾಗ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಒಂದು ನೀಳ್ಗವನವನ್ನು ಬರೆದರು.

ಕುಟುಂಬಿನಿ, ಧರ್ಮ ಮಾರ್ಗತ್ತಿಲ್, ಸ್ತ್ರೀಹೃದಯಂ, ಪ್ರಭಾಂಕುರಂ, ಭಾವನಯಿಲ್, ಊಞ್ಞಆಲಿನ್ ಮೇಲೆ (ಉಯ್ಯಾಲೆಯ ಮೇಲೆ) ಕಾಲಿ ಕೊಟ್ಟ ( ಖಾಲಿ ಲಕೋಟೆ), ವೆಳಿಚ್ಚತ್ತಿಲ್, ಅವರ್ ಪಾಡುನ್ನು (ಅವರು ಹಾಡುತ್ತಾರೆ), ಪ್ರಣಾಮಂ, ಲೋಕಾಂತರಂಗಳಿಲ್, ಸೋಪಾನಂ, ಮುತ್ತಶ್ಶಿ (ಮುತ್ತಜ್ಜಿ) ಮಳುವಿಂಡೆ ಕಥ ( ಕೊಡಲಿಯ ಕಥೆ) ಅಂಬಲತ್ತಿಲೇಕ್ಕು (ದೇವಾಲಯದತ್ತ) ವೆಯಿಲಾರುಂಬೋಳ್ (ಬಿಸಿಲು ಆರುವಾಗ) ಅಮೃತಂಗಮಯ, ಸಂಧ್ಯಾ, ಟು ಮೈ ಡಾಟರ್, ಮತ್ತು ಕುಲಕ್ಕಾಡ್ ಅವರ ಕವಿತಾ ಸಂಕಲನಗಳು. ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆಗಾಗಿ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿದವು. ಅವರು 2004 ಸೆ.29ರಂದು ತಮ್ಮ 95ನೆಯ ವಯಸ್ಸಿನಲ್ಲಿ ತೀರಿಕೊಂಡರು.

ಟಿ.ಎ.ರಾಜಲಕ್ಷ್ಮಿ

ಮಲಯಾಳಂ ಮಹಿಳಾ ಸಾಹಿತ್ಯದ ಆರಂಭ ಕಾಲದ ಕಥೆಗಾರ್ತಿ ರಾಜಲಕ್ಷ್ಮಿಯವರು 1930 ಜೂನ್ 2ರಂದು ಪಾಲಕ್ಕಾಡಿನ ಚೆರ್ಪುಲಶ್ಶೇರಿ ಎಂಬಲ್ಲಿ ಮಾರತ್ತ್ ಅಚ್ಯುತ ಮೆನೋನ್ ಮತ್ತು ತಕ್ಕಾಟ್ಟು ಅಮಯಾಂಕೊಟ್ಟು ಕುಟ್ಯಮ್ಮಾಳು ಅಮ್ಮರ ಕೊನೆಯ ಮಗಳಾಗಿ ಜನಿಸಿದರು. ಕೇರಳದ ದೊಡ್ಡ ಗಣಿತ ಶಾಸ್ತ್ರಜ್ಞೆಯೂ ವಿದ್ವಾಂಸರೂ ಆಗಿದ್ದ ಟಿ.ಎ.ಸರಸ್ವತಿ ಅಮ್ಮ ಇವರ ಅಕ್ಕ. ರಾಜಲಕ್ಷ್ಮಿ ಎರ್ನಾಕುಲಂನ ಮಹಾರಾಜಾಸ್ ಕಾಲೇಜಿನಲ್ಲಿ ಭೌತಶಾಸ್ತ್ರದಲ್ಲಿ ಬಿ.ಎಸ್‍ಸಿ ಮುಗಿಸಿ ಮಲಯಾಳಂ ಸಾಹಿತ್ಯದಲ್ಲಿ ಎಂ.ಎ. ಮಾಡಲು ತಿರುವನಂತಪುರದ ಯೂನಿವರ್ಸಿಟಿ ಕಾಲೇಜಿಗೆ ಹೋದರು. ಆದರೆ ಅದನ್ನು ಅರ್ಧದಲ್ಲೇ ಬಿಟ್ಟು ಬನಾರಸ್ ಯೂನಿವರ್ಸಿಟಿಗೆ ಹೋಗಿ ಭೌತಶಾಸ್ತ್ರದಲ್ಲಿ ಎಂ.ಎಸ್‍ಸಿ. ಮಾಡಿದರು. ಅನಂತರ ಕೇರಳದ ನಾಯರ್ಸ್ ಸರ್ವಿಸ್ ಸೊಸೈಟಿಗೆ ಸೇರಿದ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದರು.

ರಾಜಲಕ್ಷ್ಮಿ ಮಲಯಾಳಂನ ಎಮಿಲಿ ಬ್ರಾಂಟೆ ಅನ್ನುವ ಹೆಸರಿತ್ತು. 1956ರಲ್ಲಿ ಮಾತೃಭೂಮಿ ಪತ್ರಿಕೆಯಲ್ಲಿ ಪ್ರಕಟವಾದ ‘ಮಗಳ್’ ಎನ್ನುವುದು ಅವರ ಮೊದಲ ಸಣ್ಣಕಥೆ. ಅದು ಎಲ್ಲ ಓದುಗರ ಗಮನ ಸೆಳೆಯಿತು. ಅನಂತರ ಏಳು ಸಣ್ಣಕಥೆಗಳನ್ನೂ ಎರಡು ಕವನ ಸಂಕಲನಗಳನ್ನೂ ಮೂರು ಕಾದಂಬರಿಗಳನ್ನೂ ಪ್ರಕಟಿಸಿದರು. ‘ಒರು ವಳಿಯುಂ ಕುರೆ ನಿಳಲುಗಳುಂ’ (ಒಂದು ದಾರಿ ಮತ್ತು ಅನೇಕ ನೆರಳುಗಳು’ ಎಂಬ ಕಾದಂಬರಿಯಲ್ಲಿ ಆಕೆ ಹೆಣ್ಣುಮಕ್ಕಳ ಸೂಕ್ಷ್ಮ ಭಾವನೆಗಳನ್ನು ಚಿತ್ರಿಸಿದರು. ಆ ಕೃತಿಗೆ ಕೇರಳ ಸಾಹಿತ್ಯ ಅಕಾಡೆಮಿಯ ಬಹುಮಾನವೂ ಬಂತು. ಉಚ್ಚ ವೆಯಿಲುಂ ಇಳಂ ನಿಲಾವುಂ (ಮಧ್ಯಾಹ್ನದ ಬಿಸಿಲು ಮತ್ತು ಎಳೆ ಬೆಳದಿಂಗಳು ) ಮತ್ತು ‘ನಾನೆನ್ನ ಭಾವಂ’ ಇವರ ಇನ್ನೆರಡು ಕಾದಂಬರಿಗಳು.

ಸರಸ್ವತಿ ಅಮ್ಮನಂತೆ ರಾಜಲಕ್ಷ್ಮಿಯವರೂ ಮಲಯಾಳಂನಲ್ಲಿ ಸ್ತ್ರೀವಾದಿ ಚಳುವಳಿ ಆರಂಭವಾಗುವುದಕ್ಕಿಂತ ತುಂಬಾ ಮೊದಲೇ ಸ್ತ್ರೀಪರವಾಗುಳ್ಳ ಸಶಕ್ತ ಕಥೆಗಳನ್ನು ಬರೆಯ ತೊಡಗಿದರು. ಅವರು ಸತತವಾಗಿ ಬರೆಯಲಾರಂಭಿಸಿದ್ದು 1945ರ ನಂತರವಾಗಿತ್ತು. ಅವರ ಕಥೆಗಳ ಸ್ತ್ರೀಪಾತ್ರಗಳು ಪುರುಷ ಪ್ರಾಧಾನ್ಯದ ದಮನಕ್ಕಾಗಲಿ ನಿಯಂತ್ರಣಕ್ಕಾಗಲಿ ಎಂದೂ ಬಗ್ಗಲಿಲ್ಲ. ಅವರೆಲ್ಲರೂ ತಮ್ಮ ಇಷ್ಟದ ಪ್ರಕಾರ ನಡೆದುಕೊಂಡವರು. ಸ್ವತಂತ್ರವಾಗಿ ಇರಬಯಸಿದವರು. ಸಂಪ್ರದಾಯದ ಎಲ್ಲ ಕಟ್ಟುಪಾಡುಗಳನ್ನು ಮೆಟ್ಟಿ ನಿಂತು ಸ್ತ್ರೀಯರು ಮನೆಯೊಳಗಿನ ಕತ್ತಲೆಯಿಂದ ಹೊರ ಬಂದು ಸಮಾಜದ ಮುಂದೆ ಧೈರ್ಯವಾಗಿ ಕಾರ್ಯ ಪ್ರವೃತ್ತರಾಗ ಬೇಕೆಂದು ಅವರು ಕರೆ ನೀಡಿದರು. ಅವರ ಕಥಾಪಾತ್ರಗಳು ದಿಟ್ಟತನ ಮತ್ತು ಆತ್ಮ ಗೌರವಗಳ ಪ್ರತೀಕವಾಗಿದ್ದವು. ಮಗಳ್, ಒರು ಅಧ್ಯಾಪಿಕ ಜೀವಿಕ್ಕುನ್ನು (ಒಬ್ಬ ಅಧ್ಯಾಪಕಿ ಬದುಕಿದ್ದಾಳೆ), ದೇವಾಲಯತ್ತಿಲ್ (ದೇವಾಲಯದಲ್ಲಿ) ಮೊದಲಾದ ಕಥೆಗಳಲ್ಲಿ ಆಕೆ ಸ್ತ್ರೀಯರು ತೀವ್ರವಾಗಿ ಅನುಭವಿಸುವ ಕಷ್ಟಗಳನ್ನೂ ಎದುರಿಸುವ ಸಮಸ್ಯೆಗಳನ್ನೂ ಚಿತ್ರಿಸುತ್ತ ಅವರು ಪ್ರೀತಿಗಾಗಿ ಯಾವ ರೀತಿ ಹಂಬಲಿಸುತ್ತಾರೆಂಬುದನ್ನು ಹೃದಯಸ್ಪರ್ಶಿಯಾಗಿ ಚಿತ್ರಿಸುತ್ತಾರೆ.

‘ನಾನೆನ್ನ ಭಾವಂ’ ಎಂಬ ಕಥೆಯ ಅಮ್ಮಿಣಿ ಎಂಬ ಪಾತ್ರವು ಸ್ವಾಭಿಮಾನ ಮತ್ತು ಆತ್ಮ ಗೌರವದೊಂದಿಗೆ ಬದುಕನ್ನು ಪ್ರವೇಶಿಸಿದರೂ ಪುರುಷ ಪ್ರಧಾನ ಸಮಾಜವು ಅವಳನ್ನು ಅಪಮಾನಿಸುತ್ತಲೇ ಇರುತ್ತದೆ. ಕಥಾನಾಯಕ ಕೃಷ್ಣನ್ ಕುಟ್ಟಿ ಆಕೆಯ ಮಾತೃಹೃದಯ, ಕರುಣೆ ಮತ್ತು ಸಹೃದಯತೆಯನ್ನು ಅರ್ಥ ಮಾಡಿಕೊಳ್ಳುವ ಬದಲು ಆಕೆಯನ್ನು ಅಹಂಕಾರಿಯೆಂದು ಪರಿಗಣಿಸುತ್ತಾನೆ. ರಾಜಲಕ್ಷ್ಮಿಯವರು ಈ ಕತೆಯಲ್ಲಿ ಪುರುಷಾಹಂಕಾರದಿಂದಾಗಿ, ಮಾರ್ದವಗೊಳ್ಳಬೇಕಾದ ಕೌಟುಂಬಿಕ ಸಂಬಂಧಗಳು ಹೇಗೆ ನಜ್ಜುಗುಜ್ಜಾಗಿ ನಾಶವಾಗುತ್ತವೆ ಎಂಬುದನ್ನು ಚಿತ್ರಿಸಿದ್ದಾರೆ. ಪುರುಷನ ದೃಷ್ಟಿಯಲ್ಲಿ ಹೆಂಡತಿಯಾದವಳು ತಾನು ಹೇಳಿದಂತೆ ಕೇಳಿಕೊಂಡು ಬಿದ್ದಿರಬೇಕಾದ ಗುಲಾಮಳಷ್ಟೇ ಹೊರತು ಸಮಾನಳಾಗಿರಲು ಎಂದೂ ಸಾಧ್ಯವಿಲ್ಲ. ಅವನ ಈ ಧೋರಣೆಯಿಂದ ಸಂಬಂಧಗಳು ಶಿಥಿಲಗೊಂಡು ಹೆಣ್ಣಿನ ಪಾಲಿಗೆ ಬದುಕು ನರಕವಾಗುತ್ತದೆ. ಒಂದು ವೇಳೆ ಆಕೆ ಪ್ರತಿಭಟಿಸಿದರೆ ಆಕೆ ಕುಟುಂಬದಿಂದ ಹೊರನಡೆಯ ಬೇಕಾಗುತ್ತದೆ.

ರಾಜಲಕ್ಷ್ಮಿಯವರ ಕಥೆಗಳು ವಸ್ತುನಿಷ್ಠವೂ, ಅಂತರ್ಮುಖತೆಯುಳ್ಳವೂ, ಕಾಲ್ಪನಿಕವೂ ಆಗಿದ್ದು ತೀವ್ರ ಸ್ತ್ರೀಪರ ಚಿಂತನೆಯಿಂದ ಕೂಡಿವೆ. ಅವರ ಸಹೋದರಿ ಎದುರಿಸಿದ ಕಷ್ಟಗಳು ಮತ್ತು ಆಕೆಯ ಅಕ್ಕ ಪಕ್ಕದ ಮನೆಗಳ ಹೆಣ್ಣುಮಕ್ಕಳು ತಮ್ಮ ಜೀವನದಲ್ಲಿ ಅನುಭವಿಸಿದ ಸಂಕಟಗಳನ್ನು ತೀವ್ರ ಶೋಧನೆಗೆ ಒಳಗಾಗಿಸಿ ಅವರು ಕಥೆಗಳನ್ನು ರಚಿಸಿದ್ದಾರೆ. ಇದರಿಂದಾಗಿ ಆಕೆಯ ಬಂಧುಗಳಿಂದಲೇ ಆಕೆ ತೀವ್ರ ಟೀಕೆಗಳಿಗೊಳಗಾದರು- ಆಕೆ ಇತರರ ಕಥೆಗಳನ್ನು ಬರೆದು ಹಣ ಮಾಡುತ್ತಿದ್ದಾಳೆ ಅಂದರು. ಇದರಿಂದಾಗಿ ಅವರು ಸ್ವಲ್ಪ ಕಾಲ ಬರೆಯುವುದನ್ನೇ ನಿಲ್ಲಿಸಿದರು. ಪುನಃ ಬರೆಯಲಾರಂಭಿಸಿದರೂ ಟೀಕೆ ಮತ್ತೆ ಮುಂದುವರೆದಾಗ ಸೂಕ್ಷ್ಮ ಮನಸ್ಸಿನ ಅವರಿಂದ ಅದನ್ನು ಸಹಿಸಿಕೊಳ್ಳಲಾಗಲಿಲ್ಲ. ಪರಿಣಾಮವಾಗಿ ಅವರು ಆತ್ಮಹತ್ಯೆ ಮಾಡಿಕೊಂಡರು. ಜನವರಿ 18, 1965ರಂದು ಕಾಲೇಜಿನಿಂದ ಸೀದಾ ಮನೆಗೆ ಬಂದು ಕೋಣೆಗೆ ಹೋಗಿ ಕೊರಳಿಗೆ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡರು. ತನ್ನಿಂದಾಗಿ ಯಾರಿಗೂ ತೊಂದರೆಯಾಗುವುದು ಬೇಡವೆಂದು ತನ್ನ ಬದುಕಿಗೆ ವಿದಾಯ ಹೇಳುತ್ತಿದ್ದೇನೆಂದು ಅವರು ಚೀಟಿಯಲ್ಲಿ ಬರೆದಿಟ್ಟರು. ಹೀಗೆ ಸ್ವೋಪಜ್ಞ ಮನಸ್ಸಿನ ಓರ್ವ ಅತ್ಯಂತ ಸೃಜನ ಶೀಲ ಕಥೆಗಾರ್ತಿಯನ್ನು ಮಲಯಾಳಂ ಸಾಹಿತ್ಯವು ಕಳÉದುಕೊಂಡಿತು. ಇಂಗ್ಲಿಷ್ ಕಾದಂಬರಿಕಾರ್ತಿ ಅನಿತಾ ನಾಯರ್ ರಾಜಲಕ್ಷ್ಮಿ ಅವರ ದುರಂತ ಬದುಕಿನ ಬಗ್ಗೆ 2018ರಲ್ಲಿ ‘ಈಟಿಂಗ್ ವಾಸ್ಪ್ಸ್’ ಎಂಬ ಕಾದಂಬರಿಯನ್ನು ಬರೆದಿದ್ದಾರೆ.


-ಡಾ. ಜಿ. ಪಾರ್ವತಿ ಐತಾಳ್

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *