MeToo ಅಭಿಯಾನ ಹೇಗೆ ಪಾಸಿಟಿವ್ ?- ಮಲ್ಲಿಗೆ ಸಿರಿಮನೆ

ನಮ್ಮ ಸಮಾಜದಲ್ಲಿನ  ಕೆಲವು ಮಂದಿಗೆ MeToo ಅಭಿಯಾನ  ನೆಗೆಟಿವ್ ಆಗಿ ಕಾಣುತ್ತಿದೆ. ಆ ಮಂದಿಗೆ ಮಲ್ಲಿಗೆ ಸಿರಿಮನೆ ಎಸೆದಿರುವ ಪ್ರಶ್ನೆಗಳ ಸರಮಾಲೆಯಿಲ್ಲಿದೆ. ಇದು ಮಹಿಳಾ ಚಳುವಳಿಯಲ್ಲಿ ಭಾಗಿಯಾಗಿರುವ ಹಲವಾರು ಕಾರ್ಯಕರ್ತೆಯರ ಪ್ರಶ್ನೆಗಳೂ ಆಗಿವೆ. 

MeToo ಅಭಿಯಾನ ಎಲ್ಲಾ ಕ್ಷೇತ್ರದ ಮಹಿಳೆಯರಿಗೆ ಇರುವುದು ಇದೊಂದೇ ಸಮಸ್ಯೆ ಎಂದು ಹೇಳುತ್ತಿಲ್ಲ. ಶ್ರುತಿ ಹರಿಹರನ್ ಮುಂದೆ ತಂದಿರುವುದು ತಮ್ಮ ಕ್ಷೇತ್ರದಲ್ಲಿ ಮಹಿಳೆಯಾಗಿ ತಾನು ಎದುರಿಸುತ್ತಿರುವ ಲೈಂಗಿಕ ಹಿಂಸಾಚಾರವನ್ನು….! ಇದು ಸುಳ್ಳು ಎಂದು ನಿಮ್ಮ ಅಭಿಪ್ರಾಯವೇ?

ಪತ್ರಕರ್ತೆಯರು, ಸಿನೆಮಾ ನಟಿಯರು, ವಿಶ್ವವಿದ್ಯಾಲಯಗಳಲ್ಲಿರುವ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು, ಮಹಿಳಾ ಪೊಲೀಸ್ ಪೇದೆಗಳು….ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಹೆಣ್ಣುಮಕ್ಕಳು ಸಮಾಜದ ಇತರ ಮಹಿಳೆಯರಿಗಿಂತ ಸವಲತ್ತುಗಳುಳ್ಳವರು ಎಂಬುದು ನಿಜ, ಶೋಷಿತ ಹೆಣ್ಣುಮಕ್ಕಳ ಸಮಸ್ಯೆಗಳಿಗೆ ಅವರು ದನಿ‌ ಸೇರಿಸಿಲ್ಲ ಎಂಬುದೂ ಒಂದಷ್ಟು ಮಟ್ಟಿಗೆ ನಿಜ….ಇದರರ್ಥ ಅವರು ತಮ್ಮ ಕ್ಷೇತ್ರದಲ್ಲಿ ಎದುರಿಸುತ್ತಿರುವ ಕಿರುಕುಳದ ಬಗ್ಗೆ ಮಾತನಾಡಬಾರದು ಎಂದೇ? ಮಾತನಾಡಿದರೆ ಅವರ ಮೇಲೆ ಶೋಷಿತ ಹೆಣ್ಞುಮಕ್ಕಳ ಹಿತದ ವಿಚಾರ ಮುಂದಿಟ್ಟು ದಾಳಿ ಮಾಡುತ್ತೇವೆ ಎಂದೇ?

ಸಮಾಜದಲ್ಲಿ‌ ಇತರ ಮಹಿಳೆಯರಿಗಿಂತ ಹೆಚ್ಚು ಪ್ರಭಾವಶಾಲಿಗಳಾದ ಈ ಹೆಣ್ಣುಮಕ್ಕಳು ತಮ್ಮ ತಮ್ಮ ಕ್ಷೇತ್ರದಲ್ಲೂ ಅತ್ಯಂತ ಪ್ರಭಾವಶಾಲಿಗಳೇ? ಉದಾಹರಣೆಗೆ ಮಹಿಳಾ ಪೊಲೀಸ್ ಪೇದೆ ಪೊಲೀಸ್ ಇಲಾಖೆಯಲ್ಲಿ ಬಲಾಢ್ಯರೋ ಅಥವಾ ಅವರ ಮೇಲೆ ದೌರ್ಜನ್ಯ ಎಸಗುತ್ತಿರುವ ಮೇಲಧಿಕಾರಿಗಳೋ? ನಟಿಯರು ಸಿನೆಮಾ ರಂಗದಲ್ಲಿ ಹೆಚ್ಚು ಅಧಿಕಾರ ಹೊಂದಿದ್ದಾರೋ ಅಥವಾ ಅವರ ಜೊತೆ ಅಸಭ್ಯವಾಗಿ ವರ್ತಿಸುವ ಸೂಪರ್ ಸ್ಟಾರ್‌ಗಳು ಮತ್ತು ಅವಕಾಶ ಬೇಕೆಂದರೆ ನನ್ನ ಜೊತೆ ಮಲಗಬೇಕೆಂದು ನಿರ್ಲಜ್ಜವಾಗಿ ಒತ್ತಾಯಿಸುವ ನಿರ್ಮಾಪಕರು ಮತ್ತು ನಿರ್ದೇಶಕರೋ…..ಯಾರು ಬಲಾಢ್ಯರು? ಇಲ್ಲಿ ಈ ಹೆಣ್ಣುಮಕ್ಕಳು ಆರೋಪ ಮಾಡುತ್ತಿರುವುದು ಶೋಷಿತ ಸಮುದಾಯಗಳಿಗೆ ಸೇರಿದ, ಯಾವ ರೀತಿಯಲ್ಲೂ ಅಧಿಕಾರ ಹೊಂದಿರದ ದುರ್ಬಲ ವರ್ಗಗಳ ಗಂಡಸರ ಮೇಲೋ ಅಥವಾ ಅರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಕೆಲವೊಮ್ಮೆ ಜಾತಿಯಲ್ಲೂ ಕೂಡಾ ತಮಗಿಂತ ಬಲಿಷ್ಠರಾದ ಪ್ರಭಾವಶಾಲಿಗಳಾದ ಅಧಿಕಾರಸ್ಥರ ಮೇಲೋ?

ಮಾಧ್ಯಮಗಳು ಮತ್ತು ವ್ಯವಸ್ಥೆ ತನ್ನ ಜಾತಿ/ವರ್ಗ/ಜೆಂಡರ್ ಭೇಧಭಾವದ ಕಾರಣಕ್ಕೆ ಕೆಲವರ ದನಿಗಳಿಗಷ್ಟೆ ಪ್ರಾಮುಖ್ಯತೆ ನೀಡುತ್ತದೆ….ಇದೂ ಕೂಡ ಬ್ಯಾಹ್ಮಣೀಯ ಪಿತೃಪ್ರಧಾನ್ಯತೆಯ ಒಂದು ಹುನ್ನಾರ.‌    ಆ ಕಾರಣಕ್ಕಾಗಿಯೇ ಚಳುವಳಿಗಳು- ಮುಖ್ಯವಾಗಿ ಮಹಿಳಾ ಚಳುವಳಿ- ಶೋಷಿತರಲ್ಲೇ ಅತ್ಯಂತ ಅತ್ಯಂತ ಶೊಷಿತರಾದ ಆದಿವಾಸಿ, ದಲಿತ, ಅಲ್ಪಸಂಖ್ಯಾತ ಮಹಿಳೆಯರು , ಲೈಂಗಿಕ ಅಲ್ಪಸಂಖ್ಯಾತರು, ಪೌರ ಕಾರ್ಮಿಕರು, ಸೆಕ್ಸ್ ವರ್ಕರ್ಸ್, ಅಸಂಘಟಿತ ಕಾರ್ಮಿಕರು… ಇಂತಹವರ ಸಮಸ್ಯೆಗಳನ್ನು ಆದ್ಯತೆಯ ಮೇಲೆ ಎತ್ತಿಕೊಳ್ಳಬೇಕೆಂಬ ಕೂಗು ಎದ್ದಿರುವುದು. ಮಾಧ್ಯಮ, ಸರ್ಕಾರ ಮತ್ತು ಇಡೀ ವ್ಯವಸ್ಥೆಯೇ ನಿರ್ಲಕ್ಷಿಸುವ ಇಂತಹವರ ದನಿಗಳನ್ನು ಮುನ್ನೆಲೆಗೆ ತರುವುದು ಚಳವಳಿಗಳ ಜವಾಬ್ದಾರಿಯೂ ಹೌದು. ಆದರೆ ಶ್ರೇಣೀಕೃತ ವ್ಯವಸ್ಥೆಯ ಈ ಹುನ್ನಾರಕ್ಕೆ ತಮ್ಮ ನೆಲೆಯಲ್ಲಿ ತೊಂದರೆಗೊಳಗಾಗಿರುವ,  ‘ಮೀಟೂ’  ಎನ್ನುತ್ತಿರುವ ಈ ಹೆಣ್ಣುಮಕ್ಕಳನ್ನು ಹೇಗೆ ಹೊಣೆಯಾಗಿಸುತ್ತೀರ??

MeToo ಅಭಿಯಾನದ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ಸಂಘಟನೆಗಳು ಈ ಹಿಂದೆ ಇತರ ಶೋಷಿತ ಜನ ಸಮುದಾಯಗಳ ಪರವಾಗಿ ಹೋರಾಟ ಮಾಡಿರಲಿಲ್ಲವೇ? ಅಂಗನವಾಡಿ/ಆಶಾ ಕಾರ್ಯಕರ್ತೆಯರು, ದಿಡ್ಡಳ್ಳಿ ಆದಿವಾಸಿಗಳು, ಹಕ್ಕಿಪಿಕ್ಕಿ ಸಮುದಾಯದವರು….ಇತ್ಯಾದಿ ಶೋಷಿತ ಸಮುದಾಯಗಳ ಜನರ ಮತ್ತು ಮಹಿಳೆಯರ ಸಮಸ್ಯೆಗಳನ್ನು ಮುಂದಿಟ್ಟು ಹೋರಾಡಲಿಲ್ಲವೇ?

ಕೊನೆಯದಾಗಿ, ಈ ಪ್ರಶ್ನೆಗಳನ್ನು ಧೈರ್ಯವಾಗಿ ಮೇಲೆತ್ತುವ ಮೂಲಕ ಈ ಮಹಿಳೆಯರು ತಮ್ಮ ಕ್ಷೇತ್ರದಲ್ಲಿ  ಉಕ್ಕಿ ಹರಿಯುತ್ತಿರುವ ಪುರುಷರ ಲಜ್ಜೆಗೇಡು ಕಾಮಾಂಧತೆಯ ದುರಾಕ್ರಮಣವನ್ನು ಈ ಹೆಣ್ಣುಮಕ್ಕಳು ಬಯಲಿಗೆಳೆದಿದ್ದಾರೆ ತಾನೆ? ಅತ್ಯಂತ ಶೋಷಿತ ದಲಿತ ಆದಿವಾಸಿ ಹೆಣ್ಣುಮಕ್ಕಳಿಂದ ಹಿಡಿದು, ದುರ್ಬಲ ವರ್ಗಗಳ ಕೃಷಿ ಕೂಲಿ ಕಾರ್ಮಿಕ ಮಹಿಳೆಯರಿಂದ ಹಿಡಿದು, 2-3 ವರ್ಷದ ಮುಗ್ಧ ಕಂದಮ್ಮಗಳಿಂದ ಹಿಡಿದು ಪ್ರಭಾವಿ ನಟಿಯರತನಕ ಪುರುಷಾಧಿಪತ್ಯದ ಕಬಂಧ ಬಾಹುಗಳು ಚಾಚಿವೆ ಎಂಬುದನ್ನು ಇದು ತೋರಿಸುವುದಿಲ್ಲವೇ?

ಸರಿಯಾದ ಪ್ರಶ್ನೆಗಳನ್ನೇ ಎತ್ತಿರುವ ಈ ಚಳವಳಿಯನ್ನು ಇನ್ನಷ್ಟು ವಿಸ್ತರಿಸಿ ಸಮಾಜದ ಕಟ್ಟಕಡೆಯ ಹೆಣ್ಣುಮಕ್ಕಳವರೆಗೂ ಕೊಂಡೊಯ್ಯುವ ಹೊಣೆಗಾರಿಕೆ ಚಳುವಳಿಗಳು ಮತ್ತು ಪ್ರಜ್ಣಾವಂತರ ಮೇಲಿದೆ. ಆ ಪ್ರಯಾಣದಲ್ಲಿ ಈಗ ದನಿಯೆತ್ತಿರುವ ಮಹಿಳೆಯರೂ ನಮ್ಮೊಂದಿಗೆ ಬರಬೇಕೆಂದು ಒತ್ತಾಯಿಸುವ ಅಧಿಕಾರ ನಮಗಿದೆ. ಆದರೆ ಅವರು ಪ್ರಶ್ನೆ ಕೇಳಿದಾಕ್ಷಣ ಜಗತ್ತಿನ ಎಲ್ಲ ಸಮಸ್ಯೆಗಳಿಗೆ ನೀವ್ಯಾಕೆ ಮಾತಾಡಲಿಲ್ಲ ಎಂದು ಮರುಪ್ರಶ್ನೆ ಕೇಳುತ್ತೀರಾದರೆ, ಮಾಧ್ಯಮಗಳ ಹುನ್ನಾರಕ್ಕೆ ಹೊಣೆ ಮಾಡುತ್ತೀರಾದರೆ, ಪರೋಕ್ಷವಾಗಿ ನೀವು ಯಾರ ಹಿತ ಕಾಪಾಡುತ್ತಿದ್ದೀರ ಎಂಬುದನ್ನೊಮ್ಮೆ ಯೋಚಿಸಿ. ನಿಜವಾಗಿ ದಮನಿತ ಮಹಿಳೆಯರ ಹಿತವೋ ಅಥವಾ ಇಂದು ಆರೋಪಿ ಸ್ಥಾನದಲ್ಲಿ ನಿಂತಿರುವ ಬಲಾಢ್ಯ ಪುರುಷರ ಹಿತವೋ?
ಆಯ್ಕೆ ನಿಮ್ಮದು!

ನಾನು ಈವರೆಗೆ ಶೋಷಿತರಾದ ದಲಿತ, ಆದಿವಾಸಿ, ಮುಸ್ಲಿಂ ಹೆಣ್ಣುಮಕ್ಕಳ ಪರವಾಗಿಯೂ ಹೋರಾಡಿದ್ದೇನೆ, ಇಂದು ಮೀಟೂ ಎನ್ನುತ್ತಿರುವವರನ್ನೂ ಬೆಂಬಲಿಸುತ್ತೇನೆ.

ಮಲ್ಲಿಗೆ ಸಿರಿಮನೆ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *