ಹೆಣ್ಣು ಹೆಜ್ಜೆ/ ಶೌಚಾಲಯ ಶಿಕ್ಷಣದ ಅವಶ್ಯಕತೆ – ಡಾ. ಕೆ.ಎಸ್. ಪವಿತ್ರ

ಗಂಡುಮಕ್ಕಳ ಪಾಲಿಗೆ ಇಡೀ ಜಗತ್ತೇ ಶೌಚಾಲಯ, ಆದರೆ ಹೆಣ್ಣುಮಕ್ಕಳು ಅದನ್ನು ಬಳಸಲು ಹುಡುಕಾಡಬೇಕು, ಅದಿಲ್ಲದಿದ್ದರೆ ಪರದಾಡಬೇಕು. ಸಾರ್ವಜನಿಕ ಆರೋಗ್ಯ ಪರಿಣತರ ಪ್ರಕಾರ ಪ್ರತಿ ಪುರುಷ ಶೌಚಾಲಯಕ್ಕೆ, ಮೂರು ಮಹಿಳಾ ಶೌಚಾಲಯಗಳಿರಬೇಕು. ಆದರೆ ಅದರ ಕೊರತೆಯೇ ಎಲ್ಲೆಡೆ ಬಾಧಿಸುತ್ತದೆ. ಮೂತ್ರನಾಳದ ಸೋಂಕು ರೋಗಗಳಿಗೆ ಮಹಿಳೆಯರಲ್ಲಿ ಪ್ರಕೃತಿ ಸಹಜ ಜೈವಿಕ ಕಾರಣಗಳಿಗಿಂತ, ಈ ನೀರು -ಸ್ವಚ್ಛತೆಯ ಕೊರತೆ, ಶೌಚಾಲಯ ಉಪಯೋಗಿಸದೇ ಮೂತ್ರವನ್ನು ತಡೆಹಿಡಿದಿರುವುದು ಇವು ಮುಖ್ಯ ಕಾರಣಗಳು. ಶಾಲೆಗಳಲ್ಲಿ ಶೌಚಾಲಯ ಶಿಕ್ಷಣ ಎನ್ನುವುದು ಆರೋಗ್ಯ ಮತ್ತು ಸಾಮಾಜಿಕ ದೃಷ್ಟಿಯಿಂದ ಬಹಳ ಅಗತ್ಯ.

ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಸುಮಾರು ಐದು ವರ್ಷಗಳ ಹಿಂದೆ, ಅಂದರೆ 2014ರಲ್ಲಿ, ಶೌಚಕ್ಕೆಂದು ಗದ್ದೆಗೆ ಹೋದ ಇಬ್ಬರು ಹೆಣ್ಣು ಮಕ್ಕಳು ಸಮೂಹ ಅತ್ಯಾಚಾರಕ್ಕೆ ಒಳಗಾದದ್ದು ದೇಶದ ಎಲ್ಲೆಡೆ ಸುದ್ದಿಯಾಗಿ, ನಮ್ಮ ಮಾಧ್ಯಮಗಳಲ್ಲಿ ಮಿಂಚಿ ಮರೆಯಾಗಿತ್ತು. ಇದೀಗ ಸ್ವಚ್ಛತಾ ಅಭಿಯಾನದೊಂದಿಗೆ ಶೌಚಾಲಯದ ಅಭಿಯಾನವೂ ಜೋರಾಗಿಯೇ ಸಾಗಿದೆ. ಬೆಳಕು ಹರಿಯುವ ಮುನ್ನ, ಕತ್ತಲಾದ ಮೇಲೆ ಹೀಗೆ ಸುಮಾರು 12 ಗಂಟೆಗಳ ಅಂತರವಿಟ್ಟು ಮಹಿಳೆಯರು ಸಾಗಿಸಬೇಕಾಗಿದ್ದ `ಶೌಚ’ ಎಂಬ ಪ್ರಕ್ರಿಯೆ ಸ್ವಲ್ಪ ಸುಲಭವಾಗಿದೆ ಎಂದುಕೊಳ್ಳಬಹುದು.

ಆದರೂ ಪುರುಷರಿಗೆ `ಶೌಚ’ ಎಂಬುದು ಸುಲಭದ ಕೆಲಸವಾಗಿರುವಂತೆ, ಮಹಿಳೆಯರಿಗೆ ಆಗಿಲ್ಲ ಎಂಬುದು ನಾವೆಲ್ಲರೂ ಒಪ್ಪಲೇಬೇಕು. ಇದು ಕೇವಲ ಶೌಚಾಲಯದ ಲಭ್ಯತೆ /ಅಲಭ್ಯತೆಗೆ ಸಂಬಂದಿಸಿದ್ದಲ್ಲ. ಬಿಡುವಿಲ್ಲದ `ರೆಸ್ಟ್ ರೂಂ’ ನಲ್ಲಿ ಮಹಿಳೆಯರು ಪುರುಷರಿಗಿಂತ 34 ಪಟ್ಟು ಹೆಚ್ಚು ಸಮಯ ಕಾಯುತ್ತಾರೆ ಎಂದು ಅಧ್ಯಯನವೊಂದು ತೋರಿಸಿದೆ! ಕನ್ನಡಿಗಳೂ ಶೌಚಾಲಯದಲ್ಲಿರುವುದರಿಂದ `ಮೇಕಪ್’ ದೆಸೆಯಿಂದಲೇ ಈ ದೀರ್ಘ ‘ಕ್ಯೂ’ ಎಂದು ಪುರುಷರು ಹೇಳಬಹುದು. ಆದರೆ ಮಹಿಳೆಯರು ಸಹಜವಾಗಿ ಎದುರಿಸಬೇಕಾದ ಋತುಸ್ರಾವದ ಸ್ವಚ್ಛತೆಗೂ ಶೌಚಾಲಯವೇ ಬೇಕು. ಹಾಗೆಯೇ ಮಹಿಳೆಯರು ಹೆಚ್ಚು ಬಟ್ಟೆಗಳನ್ನು ತೆಗೆಯುವ, ಲಾಡಿ ಬಿಚ್ಚುವ ಈ ರೀತಿಯ ಕೆಲಸಗಳೂ ಸಮಯ ಕಬಳಿಸುತ್ತವೆ. ಇವಲ್ಲದೆ ಮಹಿಳೆಯರೊಡನೆ ಇರುವ ಚಿಕ್ಕ ಮಕ್ಕಳು, ಗಂಡು ಮಕ್ಕಳಾಗಲಿ – ಹೆಣ್ಣು ಮಕ್ಕಳಾಗಲಿ, ಶೌಚಾಲಯಕ್ಕೆ ಹೋಗುವುದು ಮಹಿಳೆಯರೊಂದಿಗೇ ತಾನೇ? ಈ ಮೂರೂ ಅಂಶಗಳು ಸೇರಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಸಮಯ ಶೌಚಾಲಯಗಳಲ್ಲಿ ಕಳೆಯುತ್ತಾರೆ, ಹೆಚ್ಚು ಸಮಯ ಕಾಯುತ್ತಾರೆ. ಅವರು `ಕ್ಯೂ’ ಗಳಲ್ಲಿ ನಿಲ್ಲದೆ ಬೇಗ ಹೊರಬರಬೇಕೆಂದರೆ ಸಾರ್ವಜನಿಕ ಆರೋಗ್ಯ ಪರಿಣತರ ಪ್ರಕಾರ ಪ್ರತಿ ಪುರುಷ ಶೌಚಾಲಯಕ್ಕೆ, ಮೂರು ಮಹಿಳಾ ಶೌಚಾಲಯಗಳಿರಬೇಕು.

ಮಿಲಿಯನ್‍ಗಟ್ಟಲೆ ಅಂಶಗಳಿಂದ ದೇವರು ನಮ್ಮೆಲ್ಲರನ್ನು ಪ್ರತ್ಯೇಕಿಸಿದ್ದರೂ, ತಿನ್ನುವುದು – ನಿದ್ರಿಸುವುದು- ಮಲಮೂತ್ರ ವಿಸರ್ಜನೆ ಎಂಬ ಈ ಮೂರು ಅಂಶಗಳು ನಮಗೆಲ್ಲರಿಗೂ ಒಂದೇ. ಹಾಗಾಗಿಯೇ ಜಗತ್ತಿನ ಎಲ್ಲಾ ಸಂಸ್ಕøತಿಗಳಲ್ಲೂ ಈ ಮೂರಕ್ಕೂ ಮಹತ್ವ ನೀಡಲಾಗುತ್ತದೆ. ಆಹಾರದ ಬಗ್ಗೆ ಎಲ್ಲರೂ ಗಮನಿಸುವಂತೆ, ಆಕರ್ಷಕವಾಗಿ, ಹೆಮ್ಮೆಯಿಂದ ಮಾತನಾಡಿದರೆ, ನಿದ್ರೆಯ ಬಗ್ಗೆ, ಅದರ ಮಹತ್ವದ ಬಗೆಗೆ ನುಡಿಗಟ್ಟುಗಳು-ಗಾದೆಗಳು-ಬುದ್ಧಿಮಾತುಗಳು ಎಲ್ಲೆಡೆ ಪ್ರಚಲಿತ. ಇವೆರಡರಷ್ಟೇ ಮುಖ್ಯ ಎಂದು ಸರ್ವಾನುಮತದಿಂದ ನಾವು ಒಪ್ಪಿದರೂ ಆಹಾರ-ನಿದ್ರೆಗಳ ಬಗ್ಗೆ ಮುಕ್ತವಾಗಿ, ಆರಾಮವಾಗಿ ಮಾತನಾಡಲು ಅನುಮತಿ ಕೊಟ್ಟಂತೆ, ಶೌಚಾಲಯದ ಬಗ್ಗೆ `ಒಂದು -ಎರಡು’ ಬರುವ ಜಾಗಗಳನ್ನು ನಾವು ಹೇಳಲು ಬಿಡಲಾರೆವು. `ಕುಂ…’ ‘ಮು…’ ಎಂದು ಬಾಯಿ ತೆರೆದರೆ ಸಾಕು, ಮಕ್ಕಳಿಗೆ -ದೊಡ್ಡವರಿಗೆ ನಗುವಿನ ಜೊತೆಗೆ `ಮುಜುಗರ’ವೂ ಮೊದಲಾಗುತ್ತದೆ! ಇದಕ್ಕೆ ಕಾರಣಗಳು ಬಹುಶಃ ಎರಡು. ಮೊದಲನೆಯದು ಅವು `ಕೊಳಕು’ `ಮುಟ್ಟಬಾರದ್ದು’ `ಹೊರಹೋಗುವ ತ್ಯಾಜ್ಯವಾದ ಮಲ-ಮೂತ್ರಗಳನ್ನು ವಿಸರ್ಜಿಸುವ ಅಂಗಗಳು’ ಎಂಬುದು. ಎರಡನೆಯದು ಲೈಂಗಿಕತೆಗೂ, ಈ ಅಂಗಗಳಿಗೂ ಇರುವ ಅವಿನಾಭಾವ ಸಂಬಂಧ. ಹಾಗಾಗಿಯೇ `ಶೌಚಾಲಯ-ಶೌಚ’ ಎಂದರೂ ಈ ಸಂಕೋಚ -ಹಿಂಜರಿಕೆ ಮುಂದುವರಿಯುತ್ತದೆ.

ಮಕ್ಕಳು ಶಾಲೆಗಳಲ್ಲಿ ಮಲ-ಮೂತ್ರಕ್ಕಾಗಿ ಶೌಚಾಲಯ ಬಳಸಬೇಕು ಎಂದು ಮುಕ್ತವಾಗಿ ಕೇಳುವುದನ್ನೂ ಸಾಮಾನ್ಯವಾಗಿ ನಾವು ಪೆÇೀತ್ಸಾಹಿಸುವುದಿಲ್ಲ. ಹೆಣ್ಣು ಮಕ್ಕಳಂತೂ ಹತ್ತನೆಯ ತರಗತಿಗೆ ಬರುವಾಗಾಗಲೇ ಮೂತ್ರ ಕಟ್ಟಿಕೊಂಡು, ಸಾಯಂಕಾಲ ಮನೆಗೆ ಬಂದೇ ಶೌಚಾಲಯ ಬಳಸುವುದನ್ನು ಅಭ್ಯಾಸ ಮಾಡಿಕೊಂಡುಬಿಡುತ್ತಾರೆ! ಹಾಗೆ ಮೂತ್ರ ತಡೆಹಿಡಿದುಕೊಂಡಿರಬೇಕೆಂದರೆ ನೀರು ಕಡಿಮೆ ಕುಡಿಯಬೇಕು! ಹಾಗಾಗಿ ಸಾಕಷ್ಟು ನೀರು ಕುಡಿಯದಿರುವುದು, ಶೌಚಾಲಯವನ್ನು ಆಗಾಗ್ಗೆ ಬಳಸದಿರುವುದು, ಒಂದೊಮ್ಮೆ ಹೋಗಲೇಬೇಕಾಗಿ ಬಂದರೆ, ಗಡಿಬಿಡಿಯಿಂದ ಉಪಯೋಗಿಸಿ, ನೀರು ಹಾಕದೇ ಹೊರಬರುವುದು ಇವೆಲ್ಲವೂ ಬಹುಬೇಗ ಅಭ್ಯಾಸವಾಗಿ ಬಿಡುತ್ತವೆ. ಇದು ಬಾಲಕಿಯರು, ಮುಂದೆ ಯುವತಿ – ಮಹಿಳೆಯರಾದಾಗಲೂ ಮುಂದುವರಿಯುವ ಸಾಧ್ಯತೆ ಹೆಚ್ಚು. ಮೂತ್ರನಾಳದ ಸೋಂಕು ರೋಗಗಳಿಗೆ ಮಹಿಳೆಯರಲ್ಲಿ ಪ್ರಕೃತಿ ಸಹಜ ಜೈವಿಕ ಕಾರಣಗಳಿಗಿಂತ, ಈ ನೀರು -ಸ್ವಚ್ಛತೆಯ ಕೊರತೆ, ಶೌಚಾಲಯ ಉಪಯೋಗಿಸದೇ ಮೂತ್ರವನ್ನು ತಡೆಹಿಡಿದಿರುವುದು ಇವು ಮುಖ್ಯ ಕಾರಣಗಳು.

ನಿಲ್ಲಲೇಬೇಕು : ಗಂಡು ಮಕ್ಕಳು ಇಡೀ ಜಗತ್ತೇ ತಮ್ಮ `ಬಾತ್‍ರೂಂ’ ಎಂದುಕೊಂಡು ಎಲ್ಲೆಂದರಲ್ಲಿ, ತಮ್ಮ ದೇಹದ ಕರೆಗೆ ಸ್ಪಂದಿಸಿ ಮೂತ್ರ ವಿಸರ್ಜನೆ ಮಾಡಿದಂತೆ, ಮಹಿಳೆಯರು ಮಾಡಲಾರರಷ್ಟೆ. ಹಾಗೆ ಗಂಡು ಮಕ್ಕಳಾಗಲಿ, ಹೆಣ್ಣು ಮಕ್ಕಳಾಗಲಿ ಮಾಡುವುದು ಸರಿಯೂ ಅಲ್ಲ, ಆರೋಗ್ಯಕರವೂ ಅಲ್ಲ. ಆದರೆ ಹೆಣ್ಣು ಮಕ್ಕಳು ಬಯಲಲ್ಲಿ, ಶೌಚಾಲಯದ ಹೊರಗೆ ಮೂತ್ರ ವಿಸರ್ಜನೆ ಮಾಡದಿರುವ ಉದ್ದೇಶ `ಅನಾರೋಗ್ಯಕರ’ ಎಂಬುದಕ್ಕಿಂತ `ನಾಚಿಕೆ’, `ಸಂಕೋಚ’ ಗಳು ಎಂಬುದು ಗಮನಾರ್ಹ. ಬಯಲು ಶೌಚ ವಿಸರ್ಜನೆ ಸಾರ್ವಜನಿಕವಾಗಿ ಆರೋಗ್ಯದ ದೃಷ್ಟಿಯಿಂದ ನಿಲ್ಲಲೇಬೇಕು. ಆದರೆ ಅದರೊಂದಿಗೇ ಶೌಚಾಲಯದ ಸ್ವಚ್ಛತೆಯ ಬಗೆಗೂ ನಾವು ಗಮನ ಹರಿಸಲೇಬೇಕಾಗಿದೆ. ಲಿಂಗ ಭೇದವಿಲ್ಲದೆ ಶೌಚಾಲಯದ ಸ್ವಚ್ಛತೆ (ನಾವು ಉಪಯೋಗಿಸುವ ಯಾವುದೇ ಶೌಚಾಲಯ -ಮನೆಯ ಹೊರಗೆ-ಒಳಗೆ ಎರಡೂ) ಗಾಗಿ ಸಾಕಷ್ಟು ನೀರು ಬಳಸಬೇಕಾದ್ದು, ಶೌಚಾಲಯದ ಒಳಗೆ ವಿಸರ್ಜನೆ ಮಾಡಬೇಕಾದ ಸ್ಥಳದಲ್ಲಿ ಮಾತ್ರ ಮಾಡಬೇಕಾದ್ದು, ಅತ್ಯಗತ್ಯ. ಹಾಗೆಯೇ ನಾವು ಬಳಸುವಾಗ ಆ ಶೌಚಾಲಯವನ್ನು ಮತ್ತೆ ಇನ್ನೊಬ್ಬರು ಬಳಸುತ್ತಾರೆ ಎಂಬ ಅರಿವು ನಮಗಿರಬೇಕು. ಅದರೊಂದಿಗೇ ಶೌಚದ ನಂತರ ನಮ್ಮ ಸ್ವಚ್ಛತೆಯೂ ಆರೋಗ್ಯಕ್ಕೆ ಅತಿ ಅವಶ್ಯ. ವಿಶೇಷವಾಗಿ ಹೆಣ್ಣು ಮಕ್ಕಳಲ್ಲಿ ತೇವ ಉಳಿಯದಂತೆ ಸ್ವಚ್ಛಪಡಿಸಿಕೊಳ್ಳುವುದು, ಟಿಶ್ಯೂ ಪೇಪರ್ ಉಪಯೋಗಿಸಿ ಅದನ್ನು ಕಸದ ಬುಟ್ಟಿಗೇ ಎಸೆಯುವುದು, ಸೋಪು ಬಳಸಿ ಕೈ ತೊಳೆಯುವುದು ಸೋಂಕು ತಡೆಯುವಲ್ಲಿ ಬಹಳ ಮುಖ್ಯ.

ಮಕ್ಕಳಿಗೆ ನಾವು ಚೆನ್ನಾಗಿ ನೀರು ಕುಡಿಯುವಂತೆ ಹೇಳುತ್ತೇವಷ್ಟೆ. ಮಕ್ಕಳಿಗೆ ನೀರು ಕುಡಿಸುವುದೇನೋ ಸರಿ, ಆದರೆ ಕುಡಿದ ನೀರನ್ನು ಬಿಡಲು ಶೌಚಾಲಯಗಳ ಲಭ್ಯತೆ? ಮೂತ್ರದ ಸೋಂಕು ತಡೆಯಲು, ಹೆಣ್ಣು ಮಕ್ಕಳು ಶೌಚಾಲಯವನ್ನು ಆರಾಮವಾಗಿ ಉಪಯೋಗಿಸುವಂತೆ ಮಾಡಲು ಶಾಲೆಗಳಲ್ಲಿ ಸ್ವಚ್ಛ ಶೌಚಾಲಯಗಳನ್ನು ಇರಿಸಬೇಕಾದ ಅಗತ್ಯವಿದೆ. ಅದಕ್ಕೆ ಬೇಕಾದದ್ದು ಕೇವಲ ವ್ಯವಸ್ಥೆ – ದುಡ್ಡು ಅಲ್ಲ. ಮನೆಯಿಂದ ಆರಂಭವಾಗಿ, ಶಾಲೆಯಲ್ಲಿ ಬಲಗೊಳ್ಳಬೇಕಾದ ಶೌಚಾಲಯದ ಶಿಕ್ಷಣ. ಮಲಮೂತ್ರ ವಿಸರ್ಜನೆಯ ಬಗೆಗೆ ಸರಿಯಾದ ಮಾಹಿತಿ, ಅವುಗಳ ಸುಗಮತೆಗೆ ಕುಡಿಯಬೇಕಾದ ಸಾಕಷ್ಟು ಪ್ರಮಾಣದ ನೀರು, ಶೌಚಾಲಯ ಬಳಸಬೇಕಾದ ರೀತಿ, ಸ್ವಚ್ಛತೆಯ ಜ್ಞಾನ ಇವು ಬಾಲ್ಯದಲ್ಲಿಯೇ ಆರಂಭವಾಗಬೇಕು. ಋತುಸ್ರಾವದ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಸ್ವಚ್ಛತೆಯ ಬಗೆಗೆ ವಿಶೇಷ ಗಮನ, ಉಪಯೋಗಿಸಿದ ನ್ಯಾಪಕಿನ್‍ಗಳನ್ನು ಫ್ಲಶ್' ಮಾಡದೆ, ಕಸದ ಬುಟ್ಟಿಗೇ ಎಸೆಯುವುದು, ಆಗಾಗ್ಗೆ ಶೌಚಾಲಯವನ್ನು ಉಪಯೋಗಿಸುವುದು ಮುಖ್ಯ.

ಇವೆಲ್ಲ ನೇರವಾಗಿ ಶೌಚದ ಅಭ್ಯಾಸಗಳಿಗೆ ಸಂಬಂಧಿಸಿದ್ದಾದರೆ, ಮಧ್ಯ ವಯಸ್ಸಿನ ಮಹಿಳೆಯರಲ್ಲಿ ಕಂಡು ಬರುವ ಮಂಡಿ ನೋವಿಗೂ, ಶೌಚಾಲಯಕ್ಕೂ ಸಂಬಂಧವಿದೆ! ಮಂಡಿ ನೋವಿನಿಂದ ನರಳುವ ಬಹುಪಾಲು ಮಹಿಳೆಯರು ಕೆಳಗೆ ಕುಳಿತುಕೊಳ್ಳಬೇಡಿ ಎಂದಾಕ್ಷಣ ಬೇರೆಲ್ಲವನ್ನೂ ಕುರ್ಚಿ-ಕಟ್ಟೆಯ ಮೇಲೆ ಕುಳಿತು ಮಾಡುವ ಅಭ್ಯಾಸವನ್ನೇನೋ ರೂಢಿಸಿಕೊಳ್ಳುತ್ತಾರೆ. ಆದರೆ ಶೌಚಕ್ಕೆ ಕುಕ್ಕರುಗಾಲಿನಲ್ಲಿ ಕುಳಿತುಕೊಳ್ಳುವುದನ್ನು ಬಿಡುವುದಿಲ್ಲ!ಕಮೋಡ್’ ಉಪಯೋಗಿಸಿ ಎಂದಾಕ್ಷಣ ಅಯ್ಯೋ ಅದರಲ್ಲಿ ಕುಳಿತರೆ ನನಗೆಆಗೋದೇ’ ಇಲ್ಲ ಡಾಕ್ಟ್ರೇ’ ಎಂದು ಬೇಸರ ಪಡುತ್ತಾರೆ. ಮಂಡಿನೋವಿನಿಂದ ನರಳುವುದನ್ನು ಮುಂದುವರೆಸುತ್ತಾರೆ. ಇಲ್ಲಿ ನಾವು ಗಮನಿಸಬೇಕಾದ್ದು ಬೇರೆಲ್ಲಾ ಬೆಳೆಸಿಕೊಳ್ಳಬಹುದಾದ – ಬಿಡಬಹುದಾದ ಅಭ್ಯಾಸಗಳಂತೆ ಶೌಚವೂ ಒಂದು ಅಭ್ಯಾಸ. ಆದ್ದರಿಂದ ಬದಲಿಸುವುದು ಸಾಧ್ಯ. ಬದಲಿಸಲು ಬೇಕಾದದ್ದು ಮನಸ್ಸು, ಸುಮಾರು 20 ದಿನಗಳ ಕಾಲಾವಕಾಶ, ಹೊಸ ಅಭ್ಯಾಸ ರೂಢಿಸಿಕೊಳ್ಳುವ ಸಹನೆ.

ಕೆಲವು ವರ್ಷಗಳ ಹಿಂದೆ ಖ್ಯಾತ ಲೇಖಕಿ ವೈದೇಹಿಯವರು ಸರ್ಕಾರಕ್ಕೆ ಖಾಸಗೀ ಬಸ್ಸುಗಳಲ್ಲಿ ಪಯಣಿಸುವಾಗ ಶೌಚಾಲಯದ ಬಗ್ಗೆ ಮಹಿಳೆಯರ ಫಜೀತಿ ಬಗ್ಗೆ ಬಹಿರಂಗ ಪತ್ರವನ್ನು ಬರೆದಿದ್ದರು. ಹಾಗೇ ಹಿರಿಯ ರೈತ ಮುಖಂಡ ಕಡಿದಾಳು ಶಾಮಣ್ಣ ಬಹು ವರುಷಗಳ ಹಿಂದೆ ತಮ್ಮ ಹಳ್ಳಿಯಲ್ಲಿ ಶೌಚಾಲಯಕ್ಕಾಗಿ ಆಗ್ರಹ ಮಾಡುವಾಗ ಶೌಚಾಲಯದ ಚಿತ್ರವನ್ನೇ ತಮ್ಮ ಪತ್ರದ ಶೀರ್ಷಿಕೆಯಲ್ಲಿ ಮುದ್ರಿಸಿ ಸರ್ಕಾರಕ್ಕೆ ಕಳಿಸಿದ್ದೂ ಇಲ್ಲಿ ನೆನಪಾಗುತ್ತದೆ. ಮಹಿಳೆಯರ ಆರೋಗ್ಯಕ್ಕೂ, ಸಾಮಾಜಿಕ ಸ್ಥಿತಿಗತಿಗಳಿಗೂ ಇರುವ ನಂಟನ್ನು ಇದು ನಮಗೆ ನೆನಪಿಸುತ್ತದೆ. ಹೆಚ್ಚಿನ ಜನಸಂಖ್ಯೆಯೇ ಭಾರತದಲ್ಲಿ ಸಾರ್ವಜನಿಕ ಶೌಚಾಲಯಗಳ, ಸಂಚಾರ ಸಾರಿಗೆ ವ್ಯವಸ್ಥೆಯಲ್ಲಿನ ಶೌಚಾಲಯಗಳ ನಿರ್ವಹಣೆಗೆ ಇರುವ ಅಡ್ಡಿ ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ. ಆದರೆ ಮಹಿಳೆಯರಲ್ಲಿ ಕೆಲ ಮಟ್ಟಿಗೆ ಅರಿವಿನ ಕೊರತೆ, ಬಹು ಮಟ್ಟಿಗೆ ಸಂಕೋಚ – ಮುಜುಗರಗಳು, ಜನರಲ್ಲಿ ಸ್ವಚ್ಛತೆಯ ಬಗೆಗಿರುವ ಆತ್ಮಸಾಕ್ಷಿ'ಯ ಕೊರತೆ ಇವು ನಿಜವಾದ ಕಾರಣಗಳು ಎಂದು ನನಗನ್ನಿಸುತ್ತದೆ. ಉರಿಮೂತ್ರ’ ಹೀಟು'ಬಲು ಉಷ್ಣವಾಗಿ ಬಿಟ್ಟಿದೆ’ ಎಂದು ವೈದ್ಯರಲ್ಲಿ ಮತ್ತೆ ಮತ್ತೆ ಓಡುವ ಮಹಿಳೆಯರಿಗೆ ನಿಜವಾಗಿ ಬೇಕಾದ್ದು ಮಾತ್ರೆಯಲ್ಲ, ಆ್ಯಂಟಿಬಯಾಟಕ್ ಅಲ್ಲ. ಹಾಗೆ ನೋಡಿದರೆ ಬಹುತೇಕ ಮೂತ್ರದ ಸೋಂಕಿನ ಬ್ಯಾಕ್ಟೀರಿಯಾಗಳು `ಆ್ಯಂಟಿಬಯಾಟಿಕ್ ರೆಸಿಸ್ಟೆಂಟ್’ ಆಗಿಬಿಟ್ಟಿವೆ. ಅವರಿಗೆ ಬೇಕಾದ್ದು ಸ್ವಚ್ಛ ಕುಡಿಯುವ ನೀರು, ಮೂತ್ರ ವಿಸರ್ಜನೆಯ ಪ್ರಕೃತಿ ಕರೆ ಬಂದಾಗ ಅದನ್ನು ಹಾಗೆಯೇ ತಡೆಹಿಡಿಯದೆ ಮಾಡಲು ಸ್ವಚ್ಛ ಶೌಚಾಲಯ ಮತ್ತು ಅದನ್ನು ಸರಿಯಾಗಿ ಬಳಸುವ ಅವಕಾಶ!

ಡಾ. ಕೆ.ಎಸ್. ಪವಿತ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *