Uncategorizedಅಂಕಣ

ಹೆಣ್ಣು ಹೆಜ್ಜೆ/ ಮನದಲ್ಲುಳಿಯುವ ಪುಟ್ಟ ಮನೆಗಳು – ಡಾ. ಕೆ.ಎಸ್. ಪವಿತ್ರ

ಹಲವರ ಬಾಲ್ಯಕಾಲದ ಮರೆಯದ ನೆನಪುಗಳಲ್ಲಿ ಲಾರಾ ಇಂಗಲ್ಸ್ ವೈಲ್ಡರ್ ಬರೆದ ಪುಟ್ಟಮನೆಯ ಕಥೆಗಳೂ ಉಳಿದಿರುತ್ತವೆ. ತಲೆಮಾರುಗಳನ್ನು ಹಾದುಬರುವ ಕಥೆಗಳಲ್ಲಿ ಅಪ್ಪ, ಅಮ್ಮ, ಮಕ್ಕಳ ಬಾಂಧವ್ಯ, ಮಕ್ಕಳನ್ನು ಬೆಳೆಸುವ ಬಗೆ- ಇವು ಕಾಲದಿಂದ ಕಾಲಕ್ಕೆ ಹೊಸತನದ ಕಳೆಯೊಂದಿಗೆ ಹರಿಯುವುದನ್ನು ಓದುವುದೇ ಚಂದ. ಮಕ್ಕಳ ಮನೋವಿಜ್ಞಾನಕ್ಕೆ, ಮಕ್ಕಳನ್ನು ಬೆಳೆಸುವ ವಿಧಾನಕ್ಕೆ ಸಂಬಂಧಿಸಿದ ಅನೇಕ ಮುಖ್ಯ ಅಂಶಗಳನ್ನು ಇಲ್ಲಿನ ಕಥೆಗಳು ಒಳಗೊಂಡಿವೆ. ಗಂಡು- ಹೆಣ್ಣು ಮಕ್ಕಳ ಬದುಕನ್ನು ನಿರ್ದಿಷ್ಟ ಚೌಕಟ್ಟಿನಲ್ಲಿ ಹುದುಗಿಸದೆ ಹೊಸ ಚಿಂತನೆಯಲ್ಲಿ ವರ್ಣಿಸುವುದು ಈ ಸರಣಿಯ ಬಹಳ ಗಮನಾರ್ಹ ಸಂಗತಿ. ಜೀವನಕ್ಕೆ ಬೇಕಾದದ್ದು ಏನು ಎಂದು ಇವುಗಳಲ್ಲಿ ಹೇಳಿರುವುದು ಆ ಕಾಲಕ್ಕೂ ಈ ಕಾಲಕ್ಕೂ ಸಲ್ಲುತ್ತವೆ.


ಲಿಟಲ್ ಹೌಸ್ ಬುಕ್ ಸೀರೀಸ್" ಎಂಬ ಪುಸ್ತಕ ಮಾಲಿಕೆ ಅಮೇರಿಕೆಯಲ್ಲಿ ಬಹು ಹೆಸರಾಗಿರುವಂಥದ್ದು. ಲಾರಾ ಇಂಗಲ್ಸ್ ವೈಲ್ಡರ್ ಬರೆದಿರುವ ಈ ಪುಸ್ತಕಗಳನ್ನು ನಾನು ಓದಲಾರಂಭಿಸಿದ್ದು ಸುಮಾರು 4-5ನೇ ತರಗತಿಯಲ್ಲಿದ್ದಾಗ. ನನ್ನ ಬಾಲ್ಯದ ಸ್ನೇಹಿತೆ ದೀಪಾ (ಈಗ ಖ್ಯಾತ ನಟಿ ದೀಪಾ ರವಿಶಂಕರ್)ಳ ಮನೆಯಲ್ಲಿ ಅವಳ ಅಜ್ಜಿ ಮನೆ ಮೈಸೂರಿನಿಂದ ತಂದಿದ್ದ ಕೆಲವು ಬಣ್ಣದ ಮುಖಪುಟ ಪುಸ್ತಕಗಳು ಸಿಕ್ಕಿದ್ದವು. ಹೆಸರುಗಳು ಒಂಥರಾ ಆಕರ್ಷಣೀಯ.‘ಪ್ಲಂ ನದಿಯ ತೀರದಲ್ಲಿ’, ‘ಸಿಲ್ವರ್ ಲೇಕ್ ದಡದಲ್ಲಿ' ಹೀಗೆ ಆಗಲೇ ‘ಹಳೆಯವು’ ಎನ್ನುವ ರೂಪ ಪಡೆದಿದ್ದ ಅವುಗಳನ್ನು ನಾನು ಮತ್ತೆ ಮತ್ತೆ ಓದಿದೆ. ಅವು ನನ್ನ ಆಗಿನ ಮನಸ್ಸಿಗೆ ಎಷ್ಟು ರುಚಿಸಿದ್ದವು ಎಂದರೆ, ಅವುಗಳ ಬಗ್ಗೆ ಹುಡುಕಿ-ಹುಡುಕಿ, ಕೊನೆಗೆ ಆಶಾ ಶಿವರಾಂ ಎಂಬುವರ ಮನೆಯಲ್ಲಿದ್ದ ಆ ಏಳೂ ಪುಸ್ತಕಗಳನ್ನು ತಂದು ಓದಿದ್ದೆ. ನಾನು ಓದಿದ್ದು ಕನ್ನಡಕ್ಕೆ ಅನುವಾದವಾದ ಎಸ್. ಅನಂತನಾರಾಯಣ ಅವರ ‘ಲಾರಾ' ಮಾಲೆಯನ್ನು.

ಮುಂದೆ ಅಕ್ಕ ಚೈತ್ರಾ ಅಮೇರಿಕೆಯಲ್ಲಿದ್ದಾಗ ಅವಳಿಗೆ ಅಲ್ಲಿ ಹುಡುಕುವಂತೆ ಕೇಳಿ ಲಿಟಲ್ ಹೌಸ್ ಬುಕ್ ಸೆಟ್ ಅನ್ನೇ ಕೊಡುಗೆಯಾಗಿ ಕೇಳಿದ್ದೆ. ಅಲ್ಲಿಗೆ ಆ ಮಾಲಿಕೆಯ ಒಂಭತ್ತೂ ಪುಸ್ತಕಗಳನ್ನು ಓದುವ ನನ್ನ ಹಂಬಲ ಪೂರ್ತಿಯಾಗಿತ್ತು.

ಅಂತರಜಾಲದ ಮಾಯಾಜಾಲ ನನ್ನ ಎಂ.ಬಿ.ಬಿ.ಎಸ್. ಮುಗಿಯುವ ಹೊತ್ತಿಗೆ ಆರಂಭವಾಗಿತ್ತು. ಸರಿ, ಕುತೂಹಲಕ್ಕೆಂದು ಒಮ್ಮೆ ‘ಲಿಟಲ್ ಹೌಸ್’ ಮಾಲಿಕೆಯನ್ನು ಗೂಗಲ್ ಮಾಡಿದರೆ, ಅಲ್ಲಿದ್ದದ್ದು 'ಪುಟ್ಟಮನೆ ಮಾಲಿಕೆ' ಗಳ ಸರಮಾಲೆ! ಲಾರಾಳ ಅಮ್ಮ, ಅಜ್ಜಿ, ಮುತ್ತಜ್ಜಿ ಮತ್ತು ಮಗಳು ಇವರಿಷ್ಟೂ ಜನರ ಜೀವನ ಚಿತ್ರಗಳು. ಇವರಲ್ಲಿ ಲಾರಾ ಇಂಗಲ್ಸ್ ವೈಲ್ಡರ್ ಮಾಲಿಕೆ ತುಂಬ ಪ್ರಸಿದ್ಧವಾದದ್ದು, ಜನ ಪ್ರೀತಿಯಿಂದ ಬೇರೆ ಭಾಷೆಗಳಿಗೂ ಅನುವಾದವಾಗಿರುವಂತಹದ್ದು. ಉಳಿದವು ಇಂಗ್ಲಿಷ್‍ನಲ್ಲಿ ಮಾತ್ರ ಸಿಕ್ಕುವಂತಹವು. ಮತ್ತೇನಿರಬಹುದು ಎಂಬ ಕುತೂಹಲದಿಂದ ಎಲ್ಲ ಮಾಲಿಕೆಯ ಪುಸ್ತಕಗಳನ್ನು ಕೆಲವರ ಬಳಿ ತರಿಸಿ, ಮತ್ತೆ ಕೆಲವನ್ನು ಅಂತರಜಾಲದಲ್ಲಿ ಕೆದಕಿ ಪಡೆದು ನಾನು ಓದಿಯೇ ಬಿಟ್ಟೆ. ಮಕ್ಕಳ ಇಂಗ್ಲಿಷ್ ಪುಸ್ತಕಗಳಲ್ಲಿ ಅವುಗಳನ್ನು ಯಾವ ವಯಸ್ಸಿನವರು ಓದಬಹುದು ಎಂಬ ಬಗ್ಗೆ ಉಲ್ಲೇಖವಿರುವುದು ಸಾಮಾನ್ಯವಷ್ಟೆ. ಪುಟ್ಟಮನೆಗಳ ಮಾಲಿಕೆಯಲ್ಲಿ ಇದನ್ನು ``8 ವರ್ಷ''ದ ಮಕ್ಕಳು ಓದಬಹುದಾದಂತಹ ಪುಸ್ತಕ ಸರಣಿ ಎಂದು ಉಲ್ಲೇಖಿಸಿದೆ. ಹಾಗಿದ್ದರೆ ಇದರಲ್ಲಿ ದೊಡ್ಡವರು ಓದುವಂತಹದ್ದೇನೂ ಇಲ್ಲ ಎಂದು ನೀವು ಬದಿಗಿರಿಸಿಬಿಟ್ಟರೆ ನೀವು ಬಹಳಷ್ಟನ್ನು ಕಳೆದುಕೊಳ್ಳುತ್ತೀರಿ!

ಹಾಗಿದ್ದರೆ ಇದರಲ್ಲಿ ಇರುವುದೇನು?? ಸ್ಕಾಟ್‍ಲೆಂಡ್‍ನಿಂದ ಅಮೇರಿಕೆಗೆ ಮಾರ್ಥಾ (ಲಾರಾಳ ಮುತ್ತಜ್ಜಿ) ಯ ಕುಟುಂಬ ವಲಸೆ ಬರುತ್ತದೆ. ಹಾಗಾಗಿಯೇ ಅವರು ಆಡುನುಡಿಯ ಉಚ್ಚಾರಣೆ ನಮ್ಮ ಇಂಗ್ಲೀಷ್‍ಗಿಂತ ಬೇರೆ. ಅದಾದ ನಂತರ ಬರುವ ಮಾರ್ಥಾಳ ಮಗಳು ಶಾಲೋಟ್‍ಳ ಕಥೆ ಪ್ರೀತಿ, ವೈಧವ್ಯ, ಮಕ್ಕಳನ್ನು ಒಬ್ಬಳೇ ಸಾಕಬೇಕಾದ ಕಷ್ಟ, ಸ್ವಾಭಿಮಾನದ ವಲಸೆ ಬದುಕು, ಮರುಮದುವೆ ಇವುಗಳ ಚಿತ್ರಣದಿಂದ ಕೂಡಿದೆ. ಕೆರೋಲಿನ್ -ಲಾರಾಳ ಪ್ರೀತಿಯ `ಮಾ’ಳ ಬಾಲ್ಯದ ಕಥೆಗೆ ಒಟ್ಟು ಏಳು ಪುಸ್ತಕಗಳು. ಕೆರೋಲಿನ್‍ಳ ಕಾಲದ ಹಳೆಯ ಅಮೇರಿಕೆಯ ಚಿತ್ರ, ಆಧುನಿಕತೆಯತ್ತ ತಿರುಗುವ ಅಮೇರಿಕಾ, ಅಂದಿನ ಶಾಲೆಗಳು, ಹದಿಹರೆಯದ ಪ್ರೀತಿ-ಪ್ರೇಮ ಇವು ವಿವರವಾಗಿ ಚಿತ್ರಿಸಲ್ಪಟ್ಟಿವೆ.

ಕೆರೋಲಿನ್‍ಗೆ ಹುಟ್ಟುವ ಮಕ್ಕಳಲ್ಲಿ ಎರಡನೆಯವರು ಈ ಇಡೀ ಮಾಲಿಕೆಗೆ ಸ್ಫೂರ್ತಿಯಾದ ಲಾರಾ. ಲಾರಾಳ ಮಗಳು ರೋಸ್ ವೈಲ್ಡರ್‍ಲೇನ್ ತನ್ನ ತಾಯಿಯನ್ನು ಈ ಕಥೆಯನ್ನು ಬರೆಯುವಂತೆ, ಪ್ರಕಟಿಸುವಂತೆ, ಪೆÇ್ರೀತ್ಸಾಹಿಸಿದಳಂತೆ. ಸ್ವತಃ ಪತ್ರಿಕೋದ್ಯಮದಲ್ಲಿದ್ದ ಅವಳು ತಾಯಿ ಬರೆದಿದ್ದ ಕಥೆಯನ್ನು ತಿದ್ದುಪಡಿ ಕೂಡ ಮಾಡಿದಳು. ಅದು ಭಾವನಾತ್ಮಕವಾಗಿ ಜನರ ಮನದಲ್ಲುಳಿಯುವಂತೆ ಮಾಡಿದಳು. ಹೆಚ್ಚಿನ ಖ್ಯಾತ ಇಂಗ್ಲಿಷ್ ಕಥೆಗಾರರ ಕಥೆಯಂತೆ ಲಾರಾಳ ಈ ಮಾಲಿಕೆಯೂ ವಿವಾದಗಳಿಂದ ಮುಕ್ತವಾಗಿಲ್ಲ; ಅತಿ ಪ್ರೀತಿಯಿಂದ ತನ್ನದೇ ಒಂದು ಟ್ರಸ್ಟ್ ಕೂಡ ಮಾಡಿಕೊಂಡು, ಆ ಟ್ರಸ್ಟ್ ಈ ಪುಸ್ತಕ ಮಾಲಿಕೆಯ ಶಾಖೆ-ರೆಕ್ಕೆ-ಪುಕ್ಕಗಳನ್ನು ಮತ್ತೆ ಮತ್ತೆ ಪ್ರಕಟಿಸಿದೆ. ಲಾರಾ ಬರೆದದ್ದಕ್ಕಿಂತ ಬೆರೆಯೇ ಆಗಿ ಅವಳ ಜೀವನವಿದೇ ಎಂಬ ವರದಿಗಳು ಇವೆ. ಈ ಸಂಗತಿಗಳನ್ನು ಬದಿಗಿರಿಸಿ ಪ್ರಸ್ತುತ ಲಭ್ಯವಿರುವ ಪುಟ್ಟ ಮನೆಯ ಪುಸ್ತಕಗಳು ನೀಡುವ ಜೀವನ ಚಿತ್ರಗಳು ಏಕೆ ಮನಸ್ಸಿಗೆ ಆಪ್ತವಾಗುತ್ತವೆ ಎಂಬುದನ್ನು ನೋಡುವುದು ಇಲ್ಲಿಯ ಉದ್ದೇಶ.

ಒಬ್ಬ ಮಹಿಳೆಯಾಗಿ ಈ ಪುಸ್ತಕಗಳು ನನ್ನನ್ನು ಇಷ್ಟು ಕಾಲ ಹಿಡಿದಿಟ್ಟಿರುವುದು ಅಚ್ಚರಿಯೇನಲ್ಲ. ಪ್ರತಿ ತಲೆಮಾರಿನ ಮಹಿಳೆಯ ಜೀವನ ಚಿತ್ರಣಗಳು ಇವು ಎನ್ನುವುದೇ ಒಂದು ವಿಶೇಷ. ಹಳೆಯ ಅಮೇರಿಕೆಯೇನೂ ಸಾಂಪ್ರದಾಯಿಕ ಕಟ್ಟುಪಾಡುಗಳಿಂದ ಮುಕ್ತವಾಗಿರಲಿಲ್ಲ. ಆದರೂ ಪ್ರತಿ ಮಹಿಳೆಯ ಹೆಸರು ಮೊದಲು ಆಕೆಯ ಹೆಸರಿನಿಂದ ಆರಂಭವಾದರೆ, ನಂತರ ಪತಿ-ತಂದೆ ಇಬ್ಬರ ಕುಟುಂಬದ ಹೆಸರೂ ಇದೆ. ಯಾವುದೇ ಮಗು (ಗಂಡಾಗಲಿ, ಹೆಣ್ಣಾಗಲಿ) ಹುಟ್ಟುವಾಗ ಈ ಕುಟುಂಬಗಳು ಆರ್ಥಿಕವಾಗಿ ಸದೃಢ ಎನ್ನುವಂತಿಲ್ಲದಿದ್ದರೂ ಸಂಭ್ರಮಿಸುತ್ತವೆ, ಸ್ವಾಗತಿಸುತ್ತವೆ. ಗಂಡು ಮಕ್ಕಳು ಹೊರಗೆ ಹೊಲಗೆಲಸ ಮಾಡುವಂತೆ, ಹೆಣ್ಣು ಮಕ್ಕಳು ಒಳಗೆ ದುಡಿಯಬೇಕು. ಕೆಲಸ ಹೆಚ್ಚಾಗಿದ್ದಾಗ ಇಬ್ಬರೂ ಎರಡೂ ಕಡೆ ಕೆಲಸ ಮಾಡುವ ಪರಿಪಾಠ. ಕಡ್ಡಾಯವಾಗಿ ಹೆಣ್ಣು ಮಕ್ಕಳು ಹೊಲಿಗೆ ಕಲಿಯಬೇಕು, ಹಾಗೆಯೇ ಗಂಡು ಮಕ್ಕಳು ಮರಗೆಲಸ ಕಲಿಯಬೇಕು. ಇದು ಕ್ರಮೇಣ ಬದಲಾಗುವುದನ್ನೂ ಮಾಲಿಕೆಯ ಕೊನೆಯ ಎರಡು ತಲೆಮಾರುಗಳಲ್ಲಿ ನೋಡಬಹುದು. ಲಾರಾ ತನ್ನ ಪತಿ ಆಲ್ಮಾಂಜೋವಿನ ಕುದುರೆಗಳನ್ನು ಪಳಗಿಸುವುದನ್ನು ಕಲಿತರೆ, ಅವಳ ಮಗಳು ರೋಸ್ ತಾನು ಟೆಲಿಗ್ರಾಫ್ ಆಪರೇಟರ್ ಆಗುತ್ತಾಳೆ, ದೂರದ ಊರಿನಲ್ಲಿದ್ದು, ಒಬ್ಬಳೇ ರೂಮ್ ಮಾಡಿಕೊಂಡು ಉಳಿಯುತ್ತಾಳೆ.

ಮನೋವಿಜ್ಞಾನದ ಪಾಠ

ಅಷ್ಟೂ ಕುಟುಂಬಗಳಲ್ಲಿ ಮಕ್ಕಳನ್ನು ಬೆಳೆಸುವ ರೀತಿ ಇಂದಿನ ಆಧುನಿಕ ಮನೋವಿಜ್ಞಾನದ ಪಾಠದಂತೆ ನನಗೆ ತೋರುತ್ತದೆ. ಭಾಷೆಯನ್ನು ನಯವಾಗಿ ತಿದ್ದುವ ರೀತಿ, ಶಿಸ್ತನ್ನು ತಂದೆ-ತಾಯಿ ವಿಧಿಸುವ ವಿಧಾನಗಳು, ಅಪರೂಪವಾಗಿ ದೈಹಿಕ ಶಿಕ್ಷೆಯನ್ನು ಉಪಯೋಗಿಸುವುದು ಇವೆಲ್ಲ ಗಮನ ಸೆಳೆಯುತ್ತವೆ. ಒಮ್ಮೆ ಲಾರಾ ಕೆರೆಗೆ ಹೋಗಿ ಅಲ್ಲಿ ಮುಳುಗೇಳುತ್ತಾಳೆ. ಇನ್ನೇನು ಮುಳುಗೇ ಬಿಟ್ಟೆ ಎನ್ನುವಷ್ಟರಲ್ಲಿ ಪಾರಾಗುತ್ತಾಳೆ. ಆಕೆ ಹೇಳದಿದ್ದರೆ ಪಾ-ಮಾ ರಿಗೆ ಅದು ಗೊತ್ತಾಗಲು ಸಾಧ್ಯವೇ ಇಲ್ಲ. ಆದರೂ ಅವಳಿಗೆ ಸತ್ಯ ಹೇಳದೇ ಇರಲು ಸಾಧ್ಯವಿಲ್ಲ. ಪಾ ಅದಕ್ಕಾಗಿ ವಿಧಿಸುವ ಶಿಕ್ಷೆ ನಂತರದ ಒಂದು ಪೂರ್ತಿ ದಿನ ‘ಮಾ'ಳ ಕಣ್ಣ ಮುಂದೆಯೇ ಇದ್ದು,‘ಇನ್ನು ಮಾ- ಪಾ ಲಾರಾಳನ್ನು ನಂಬಬಹುದು’ ಎಂಬುದನ್ನು ನಿರೂಪಿಸುವುದು.

ಶಾಲೆಯ ಶಿಕ್ಷಣಕ್ಕೆ ಅಮ್ಮಂದಿರು ನೀಡುವ ಪ್ರಾಮುಖ್ಯ ಕೆರೋಲಿನ್ ಮತ್ತು ಲಾರಾ ಮಾಲಿಕೆಗಳಲ್ಲಿ ಎದ್ದು ತೋರುತ್ತದೆ. ಕೆರೋಲಿನ್ ಹೊಸ ರೀತಿಯ ಕಾಲೇಜ್ ಕಲಿಯಲು ತನ್ನ ಚಿಕ್ಕಪ್ಪನ ಮನೆಗೆ ಹೋಗುವುದು, ಅಲ್ಲಿ ಅವಳು ಹೊಸ ಶಿಕ್ಷಣ ಕ್ರಮಗಳಿಗೆ ತೆರೆದುಕೊಳ್ಳುವ ರೀತಿ, ಅಂದಿನ ಅಮೇರಿಕೆಯಲ್ಲಿ ನಡೆಯುತ್ತಿದ್ದ ಬದಲಾವಣೆಗಳು, ಪತ್ರಿಕೆಗಳ ಪ್ರಕಟಣೆ, ಹೋಟೆಲ್‍ಗಳ ಆರಂಭ ಇವು ನಮ್ಮನ್ನು ಅಂದಿನ ಅಮೇರಿಕೆಗೆ ಕರೆದೊಯ್ಯುತ್ತವೆ.

ಪ್ರತಿ ತಲೆಮಾರಿನ ಮಾಲಿಕೆಯಲ್ಲಿಯೂ ಮುಖ್ಯವಾಗಿ ಎದ್ದು ನಿಲ್ಲುವಂತಹದ್ದು “ಅಡಿಗೆ"! ಇಲ್ಲಿನ ಅಮ್ಮಂದಿರು ಜೀವನ ಪ್ರೀತಿಯಿಂದ ಅಡಿಗೆ ಮಾಡುತ್ತಾರೆ. ತಮ್ಮ ಹೆಣ್ಣು ಮಕ್ಕಳಿಗೆ ಕಲಿಸುತ್ತಾರೆ. ಅದು ಬೇಸರ-ಹತಾಶೆಯಿಂದಲ್ಲ. ಶಾಲೆಗೂ ಕಳಿಸುತ್ತಾರೆ! ಮಜ್ಜಿಗೆ ಕಡೆಯುವ ಸರದಿ ಹುಡುಗರಿಗೂ ಬರುತ್ತದೆ! ಕುಟುಂಬದವರೆಲ್ಲರೂ ಒಟ್ಟಿಗೆ ಊಟಕ್ಕೆ ಸೇರುತ್ತಾರೆ. ಸ್ವತಃ ಸಸ್ಯಾಹಾರಿಯಾದ ನನಗೆ, `ಆಕರ್ಷಕ' `ಸಹಜ' ಎನ್ನುವಷ್ಟು ವಿಧದ ವಿವಿಧ ಮಾಂಸದಡುಗೆಗಳನ್ನು ಪ್ರತಿ ಸರಣಿಯಲ್ಲಿಯೂ ಚಿತ್ರಿಸಲಾಗುತ್ತದೆ.

ರೈತ ಕುಟುಂಬಗಳ ಕಷ್ಟಕರ, ಆದರೆ ಸ್ವಾವಲಂಬೀ ಜೀವನ ಈ ಪುಸ್ತಕಗಳ ಮುಖ್ಯ ಪಾಠ ಎಂದು ನನಗನ್ನಿಸುತ್ತದೆ. ಸಣ್ಣ ಸಣ್ಣ ಸಂಗತಿಗಳು ಅವರಿಗೆ `ದೊಡ್ಡ’ ಎನ್ನುವ ಸಂತಸ ಹುಟ್ಟಿಸುತ್ತವೆ. ಒಂದು ಮುಸುಕಿನ ಜೋಳದ ದಿಂಡು, ಒಂದು ಚಿಂದಿ ಬಟ್ಟೆಯನ್ನುಟ್ಟು ಪ್ರೀತಿಯ ಗೊಂಬೆಯಾಗುತ್ತದೆ. ಈ ಜೀವನ ಶ್ರದ್ಧೆಯೇ ಅವರನ್ನು ಬರಗಾಲ, ಮಿಡತೆ ಹವಾ, ಹಿಮದ ಏಳು ತಿಂಗಳ ಭೀಕರ ಚಳಿಗಾಲಗಳಲ್ಲಿ ಅವರನ್ನು ಕಾಯುತ್ತದೆ. ಮರು ಮದುವೆ, ಮತ್ತು ಪ್ರತಿ ಮಕ್ಕಳನ್ನು ಕಳೆದುಕೊಳ್ಳುವ ಶೋಕ ಇವೆರಡೂ ಚಿತ್ರಣಗಳು ಮನಸ್ಸನ್ನು ಬಹುಕಾಲ ಕಾಡುತ್ತವೆ. ಮಕ್ಕಳಿಗೆ ಇವುಗಳನ್ನು ನಿಭಾಯಿಸುವ ಬಗೆಯನ್ನು ತಾಯಿ ಹೇಳಿಕೊಡುವುದು ವಿಶೇಷ.

ಪಾಶ್ಚಾತ್ಯರ ಬಗೆಗೆ ನಮಗಿರುವ ತಪ್ಪು ಕಲ್ಪನೆ -“ಅಲ್ಲೆಲ್ಲಾ ಡೈವೋರ್ಸ್- ಮತ್ತೆ ಮದುವೆ ಬಹು ಸಾಮಾನ್ಯ” ಎನ್ನುವ ಭಾವನೆಯೊಂದಿಗೆ ಈ ಪುಸ್ತಕಗಳನ್ನು ಓದಿದರೆ ಅಚ್ಚರಿಯೇ ಎದುರಾಗುತ್ತದೆ. ಸತ್ತ ಮಗುವನ್ನು ಸಮಾಧಿ ಮಾಡಿದ ಸ್ಥಳಕ್ಕೆ ಪ್ರತಿನಿತ್ಯ ತಾಯಿಯೊಂದಿಗೆ ಒಂದೊಂದು ಮಕ್ಕಳು ಹೋಗಿ ಹೂವಿರಿಸುವುದನ್ನು, ಒಂದಿಷ್ಟು ಸಮಯ ತಾಯಿ ಮೌನವಾಗಿ ಪ್ರಾರ್ಥಿಸುವಾಗ ಅವಳೊಂದಿಗೆ ತಾವೂ ಕುಳಿತಿರುವುದು ಮತ್ತೆ ತಾಯಿ ತಾನೂ ಸಹಜ ಜೀವನಕ್ಕೆ ಮರಳುವುದು, ಮರಳುವಂತೆ ಮಕ್ಕಳನ್ನು ಪ್ರೇರೇಪಿಸುವುದು ಇವು ಶೋಕವನ್ನು ನಿಭಾಯಿಸುವ ಪ್ರಾಯೋಗಿಕ ಮಾದರಿಗಳಾಗಿ ತೋರುತ್ತವೆ. ಮರು ಮದುವೆಯಾದರೂ ಅಷ್ಟೆ, ಇಲ್ಲಿ ಪ್ರಬುದ್ಧರ ನಡುವೆ ನಡೆಯುವ, ಮಕ್ಕಳ ಹಿತವನ್ನು ಗಮನದಲ್ಲಿರಿಸಿಕೊಂಡ, ಪರಸ್ಪರ ಗೌರವದ ಮದುವೆ. ಕೊನೆಯ ಮಾಲಿಕೆ ರೋಸ್ ವೈಲ್ಡರ್ ಲೇನ್‍ಳ ಕಥೆಯಲ್ಲಿ ಆಧುನಿಕ ಮನೋಭಾವದ ಹುಡುಗಿ ರೋಸ್ ಸಾಂಪ್ರದಾಯಿಕತೆಯ ವಿರುದ್ಧ ಈಜತೊಡಗುತ್ತಾಳೆ. ತನ್ನದೇ ಬದುಕು ಕಟ್ಟಿಕೊಳ್ಳುತ್ತಾಳೆ. ತಾನು ಪ್ರೀತಿಸಿದ ಹುಡುಗ ತನ್ನ ಸ್ವಾವಲಂಬಿತನವನ್ನು ಒಪ್ಪಿಕೊಳ್ಳಲಾರ ಎಂಬ ಸುಳಿವು, ತಮ್ಮಿಬ್ಬರ ಒಟ್ಟಿಗಿನ ಬದುಕು ಪ್ರಾಯೋಗಿಕವಲ್ಲ ಎಂಬ ಸುಚನೆ ಸಿಕ್ಕೊಡನೆ ದೂರವಾಗುವ ಧೈರ್ಯ ತೋರುತ್ತಾಳೆ – ಹದಿಹರೆಯದ 18ರ ಮಗಳ ಕಷ್ಟದ ಸಮಯದಲ್ಲಿ, ಇತರರಿಂದ ಅವಳ ಕಷ್ಟ ತಿಳಿಯುವ ತಾಯಿ ಮಗಳಿಗೆ ಬರೆಯುವ ವಾಕ್ಯ “ರೋಸ್, ಮನೆಗೆ ಬಂದು ಬಿಡು, ನಾನಾಗಲೀ, ಪಾ ಆಗಲೀ ಒಂದೂ ಮಾತನ್ನೂ ಆಡುವುದಿಲ್ಲ!"

ಹದಿಹರೆಯದ ಸಂಘರ್ಷದಲ್ಲಿರುವ ಮಕ್ಕಳಿಗೆ ಇದೊಂದು ಬಹು ಮುಖ್ಯ ಮಾತು! ಜೀವನಕ್ಕೆ ಮುಖ್ಯವಾದವು ಏನು ಎಂಬ ಬಗ್ಗೆ ಲಾರಾ ಹೇಳಿರುವ ಈ ಮಾತುಗಳೇ ಇಡೀ ಸರಣಿಯನ್ನು ಕೆಲವೇ ಮಾತುಗಳಲ್ಲಿ ಹಿಡಿದಿಡುತ್ತವೆ.ಪುಟ್ಟ ಮನೆಯ ಪುಸ್ತಕಗಳು ಬಹು ಹಿಂದಿನ ಕಥೆಗಳು. ನಾವಿದ್ದ ಕಾಲ, ನಾವು ಹೋಗಿದ್ದ ಶಾಲೆಗಳು ಇಂದಿಗೆ ಹೋಲಿಸಿದರೆ ಬೇರೆ. ಈಗ ಕಲಿಕೆ-ಜೀವನ ಎರಡೂ ಬದಲಾವಣೆಗಳಿಂದ ಸುಲಭವಾಗಿವೆ. ಆದರೆ ನಿಜಸಂಗತಿಗಳು ಬದಲಾಗಿಲ್ಲ! ಈಗಲೂ ಸತ್ಯಸಂಧತೆ-ಪ್ರಾಮಾಣಿಕತೆಗಳೇ ಅತ್ಯುತ್ತಮ. ಸರಳ ಸಂಗತಿಗಳಲ್ಲಿ ಸಂತಸ, ಉತ್ಸಾಹ, ಪರಿಸ್ಥಿತಿ ನಮಗೆ ಬೇಕಾದಂತೆ ನಡೆಯದಿದ್ದಾಗ, ಕಷ್ಟ ಬಂದಾಗ ಎದುರಿಸುವ ಧೈರ್ಯ ಇವೇ ಇಂದೂ ಬೇಕಾಗಿರುವಂತಹವು!”. ಈ ಸತ್ಯ ಸಂಗತಿಗಳ ಚಿತ್ರಣದಿಂದಾಗಿಯೇ ಪುಟ್ಟ ಮನೆಗಳು ಶಾಶ್ವತವಾಗಿ ಮನದಲ್ಲುಳಿಯುತ್ತವೆ!

  • ಡಾ. ಕೆ.ಎಸ್. ಪವಿತ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *