Latestಅಂಕಣ

ವಸುಮಾತು/ಲೈಂಗಿಕ ದೌರ್ಜನ್ಯಕ್ಕೆ ಹಲವು ಮುಖಗಳು – ಡಾ. ವಸುಂಧರಾ ಭೂಪತಿ

ಆಧ್ಯಾತ್ಮಿಕ ಮಾರ್ಗದರ್ಶನ ಕೊಡುತ್ತೇವೆಂಬ ಮುಸುಕಿನಲ್ಲಿ ಲೈಂಗಿಕ ಚಾಪಲ್ಯ ತೀರಿಸಿಕೊಂಡ ಸ್ವಯಂ ಘೋಷಿತ ಗುರುಗಳ ಪಟ್ಟಿಯಲ್ಲಿ ಗುರ್ಮೀತ್ ರಾಮ್ ರಹೀಮ್, ಅಸಾರಾಂ ಬಾಪು, ಸಂತ ರಾಮ್ ಪಾಲ್, ನಿತ್ಯಾನಂದ ಸ್ವಾಮಿ, ಆಶು ಮಹಾರಾಜ್ ಮುಂತಾದವರ ಒಂದು ದೊಡ್ಡ ಪಟ್ಟಿಯೇ ಇದೆ. ಧಾರ್ಮಿಕ ಸ್ಥಳಗಳು ಲೈಂಗಿಕ ಹಗರಣಗಳ ಆವಾಸ ಸ್ಥಳಗಳಾಗುತ್ತಿವೆ. ಇತ್ತೀಚೆಗೆ ಕೇರಳದಲ್ಲಿ ಕ್ರೈಸ್ತ ಸಂನ್ಯಾಸಿಯ ಮೇಲೆ ಪಾದ್ರಿಯಿಂದ ಅತ್ಯಾಚಾರ ಪ್ರಕರಣ, ಬೌದ್ಧ ಬಿಕ್ಷುವಿನಿಂದ ಅತ್ಯಾಚಾರ , ಹರಿಯಾಣದಲ್ಲಿ ಗುರುಪುತ್ರಿಯ ಮೇಲೆ ಸೈನ್ಯಾಧಿಕಾರಿಯೊಬ್ಬ ನಡೆಸಿದ ಅತ್ಯಾಚಾರ ….. ಮನೆಯಲ್ಲಿ, ಬೀದಿಯಲ್ಲಿ, ಶಾಲೆಯಲ್ಲಿ,  ಕಛೇರಿಗಳಲ್ಲಿ, ಆಸ್ಪತ್ರೆಯಲ್ಲಿ , ಕೊನೆಗೆ ಪೂಜಾ ಸ್ಥಳದಲ್ಲಿ, ಎಲ್ಲೆಂದರಲ್ಲಿ ಎಲ್ಲಿ ನೋಡಿದರೂ ಅತ್ಯಾಚಾರದ ಪ್ರಕರಣಗಳೇ. ಅತ್ಯಾಚಾರ ಎಂಬ ಶಬ್ದವನ್ನು ಉಚ್ಚರಿಸಲು ಜಿಗುಪ್ಸೆ ಮೂಡುವಷ್ಟು ಅತ್ಯಾಚಾರಿಗಳ ಅಟ್ಟಹಾಸ ಹೆಚ್ಚುತ್ತಿದೆ. 

ಈ ಭೂಮಿಯ ಮೇಲೆ ಮಕ್ಕಳಿಂದ ಹಿಡಿದು ವೃದ್ಧೆಯವರೆಗೆ. ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಅತ್ಯಾಚಾರದಿಂದಾಗುವ ದೈಹಿಕ ಮತ್ತು ಮಾನಸಿಕ ನೋವು, ಹಿಂಸೆ ಒಂದೆಡೆಯಾದರೆ, ಅತ್ಯಾಚಾರದ ನಂತರ ಪೊಲೀಸರನ್ನು, ವೈದ್ಯರನ್ನು ಮತ್ತು ನಾಯ್ಯಾಂಗ ವ್ಯವಸ್ಥೆಯನ್ನು ಎದುರಿಸಬೇಕಾದಾಗ ಪದೇ ಪದೇ ಅವರು ಕೇಳುವ ಪ್ರಶ್ನೆಗಳಿಂದ ಮಾನಸಿಕ ಅತ್ಯಾಚಾರ ಅವ್ಯಾಹತವಾಗಿ ನಡೆಯುತ್ತಿದೆ.

ಕರ್ನಾಟಕದ ಮೂಲೆ ಮೂಲೆಗಳಲ್ಲಿ ಜರುಗುತ್ತಿರುವ ಅತ್ಯಾಚಾರದ ಘಟನೆಗಳು ಪುಂಖಾನುಪುಂಖವಾಗಿ ಹೊರಬರುತ್ತಿವೆ. ಒಂದೇ ಬಾರಿಗೆ ಇಷ್ಟೆಲ್ಲ ಪ್ರಕರಣಗಳು ಬೆಳಕಿಗೆ ಬರುತ್ತಿರುವುದು ಆತಂಕವನ್ನು ಸೃಷ್ಟಿಸುತ್ತಿರುವುದು ನಿಜವಾದರೂ, ಅತ್ಯಾಚಾರಕ್ಕೊಳಗಾದ ಮಹಿಳೆಯರಿಗೆ ನ್ಯಾಯ ಸಿಗುತ್ತದೆಂದು ಧೈರ್ಯದಿಂದ ಮನೆಯಿಂದ ಹೊರಬಂದು ದೂರು ನೀಡಲು ಸಿದ್ಧವಾಗಿರುವುದು ಕೂಡ ಕೊಂಚ ನೆಮ್ಮದಿ ಮೂಡಿಸಿದೆ. ಇದುವರೆಗೂ ಅತ್ಯಾಚಾರಕ್ಕೊಳಗಾದವರು ನೋವನ್ನುಂಡು ಮನೆಯಲ್ಲಿ ಮೌನವಾಗಿ ಇರುತ್ತಿದ್ದರು. ನಮ್ಮ ಸಮಾಜ ಹೇಗಿದೆಯೆಂದರೆ ದೌರ್ಜನ್ಯಕೊಳಗಾದವಳು ಮಹಿಳೆ, ಅತ್ಯಾಚಾರಕ್ಕೊಳಗಾಗಿ ಅವಮಾನಿತವಾಗುವವಳೂ ಮಹಿಳೆ. ಬುದ್ಧಿ ಹೇಳಬೇಕಾದವರು ದೌರ್ಜನ್ಯವೆಸಗಿದವರಿಗಲ್ಲವೇ? ಅದನ್ನು ಬಿಟ್ಟು ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತ ಮಹಿಳೆಯರಿಗೇ ವಿವೇಕದ ಪಾಠ ಹೇಳುತ್ತಿರುವುದು ವಿಪರ್ಯಾಸ. ವಿಕೃತ ಮನಸ್ಸುಗಳಿಗೆ, ಪುರುಷಪ್ರಧಾನ ಮಾನಸಿಕ ಅಸ್ವಸ್ಥರಿಗೆ ಮಹಿಳಾ ಪರ ಸಂವೇದನೆ ಉಂಟುಮಾಡುವ ಬದಲು ಮಹಿಳೆಯರಿಗೇ ಪಾಠ ಹೇಳಲು ಹೊರಟಿದ್ದಾರೆ.

ಮಹಿಳೆ ಮತ್ತು ಪುರುಷ ಸಮಾನರು ಎಂದು ಸಾರುವ ದೇಶ ನಮ್ಮದು. ಜಾತಿತಾರತಮ್ಯ, ಲಿಂಗತಾರತಮ್ಯ ಎರಡೂ ಸಂವಿಧಾನ ವಿರೋಧಿ ಮತ್ತು ಅವೈಜ್ಞಾನಿಕವಾದುದು. ಆದರೆ ಮಹಿಳೆಯನ್ನು ಮನುಷ್ಯಳನ್ನಾಗಿ ಕಾಣುವ ಪ್ರವೃತ್ತಿ ಬೆಳೆದುಬಂದಿಲ್ಲ. ಇಂದು ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾಳೆ. ನಮ್ಮ ಸಂವಿಧಾನದ 44ನೇ ಕಾಲಂ ಮಹಿಳೆ ಮತ್ತು ಪುರುಷ ಸಮಾನರು. ಆದ್ದರಿಂದ ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾದ ಅವಶ್ಯಕತೆ ಇದೆ. ಮನುವಾದಿಗಳಿಗೆ ತಗುಲಿರುವ ಮನೋವ್ಯಾಧಿ ದೂರಮಾಡಬೇಕಾದ ಅವಶ್ಯಕತೆ ಇದೆ.

Rape ಎಂಬ ಶಬ್ದ Rapia ದಿಂದ ಬಂದಿದೆ. Rapina ಎಂಬ ಶಬ್ದ ಲ್ಯಾಟಿನ್ ಭಾಷೆಯದ್ದು. ಇದು ‘ವಸ್ತು’ ಅಥವಾ ‘ಆಸ್ತಿ’ ಎಂಬ ಅರ್ಥವನ್ನು ನೀಡುತ್ತದೆ. ಇನ್ನೊಬ್ಬರ ವಸ್ತುಗಳನ್ನು ಬಲವಂತವಾಗಿ ಕಸಿದುಕೊಂಡು ಸ್ವಂತಕ್ಕೆ ಬಳಸಿಕೊಳ್ಳುವುದು ಎಂದರ್ಥ. ಅತ್ಯಾಚಾರಗಳು ಎಕೆ ಹೆಚ್ಚುತ್ತಿವೆ? ಸಮಾಜದ ಆರೋಗ್ಯ ಕೆಡುತ್ತಿರುವುದರ ಕಾರಣಗಳೇನು ಎಂಬುದರ ಬಗ್ಗೆ ಅವಲೋಕನ, ವಿಶ್ಲೇಷಣೆ ಅವಶ್ಯಕ. ಲೈಂಗಿಕ ದೌರ್ಜನ್ಯದ ಪ್ರಕರಣಗಳು ಮಾಧ್ಯಮಗಳಲ್ಲಿ ನಾವು ನೋಡುತ್ತಿರುವ ಘಟನೆಗಳಿಗೆ ಮಾತ್ರ ಸೀಮಿತವಾಗಿವೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೆ) ಪ್ರಕಾರ ಭಾರತದಲ್ಲಿ ಶೇಕಡಾ 35ರಷ್ಟು ಮಹಿಳೆಯರು ತಮ್ಮ ಅತ್ಯಂತ ನಿಕಟವರ್ತಿ ಸಂಬಂಧಿ ಅಂದರೆ ಪತಿಯಿಂದಲೇ ದೌರ್ಜನ್ಯವನ್ನು ಅನುಭವಿಸುತ್ತಾರೆ. ಮನೆಯೊಳಗೆ ನಡೆಯುತ್ತಿರುವ ಇಂತಹ ದೌರ್ಜನ್ಯಗಳು ನಿಲ್ಲಲು ಮನಸ್ಥಿತಿಯ ಬದಲಾವಣೆಯ ಅಗತ್ಯವಿದೆ.

ಅತ್ಯಾಚಾರದ ಆರೋಪ ಎದುರಿಸುತ್ತಿರುವವರಲ್ಲಿ ಪುಡಿರೌಡಿಗಳಿಂದ ಹಿಡಿದು ಶಿಕ್ಷಕರು, ಅಧಿಕಾರಿಗಳು, ವೈದ್ಯರು, ಧರ್ಮಗುರುಗಳು, ಶಾಸಕರು ಮುಂತಾದ ಗೌರವದ ಸ್ಥಾನದಲ್ಲಿರುವವರು, ಉನ್ನತ ಶಿಕ್ಷಣ ಪಡೆದವರು ಸೇರಿದ್ದಾರೆ. ನಮ್ಮ ಶಿಕ್ಷಣ ಅವರನ್ನು ಅಕ್ಷರಸ್ಥರನ್ನಾಗಿಸಿವೆಯೇ ಹೊರತು ಸುಶಿಕ್ಷಿತರನ್ನಲ್ಲ. ನಮ್ಮ ಶಿಕ್ಷಣ ಅವರನ್ನು ಮಹಿಳೆಯರ ಕುರಿತು ಸಂವೇದನಾಶೀಲತೆಯನ್ನು ಬೆಳೆಸಿಲ್ಲ ಮತ್ತು ಅದಕ್ಕೆ ಬದಲಾಗಿ ಮಹಿಳೆಯನ್ನು ಸರಕನ್ನಾಗಿ ನೋಡುವ ದೃಷ್ಟಿಕೋನವನ್ನು ಬೆಳಿಸುತ್ತಿರುವುದು ಅರಿವಾಗುತ್ತದೆ. ಮನುಷ್ಯನ ಲೈಂಗಿಕ ನಡುವಳಿಕೆಗಳು ಇತರ ಪ್ರಾಣಿಗಳಿಗಿಂತ ವಿಭಿನ್ನ. ಮನುಷ್ಯನ ಲೈಂಗಿಕ ವರ್ತನೆಯಲ್ಲಿ ಬಹಳ ಮುಖ್ಯ ಪಾತ್ರವಹಿಸುವ ಮತ್ತು ಚಿದೆ ಬರಿಸುವಂತಹ ಸಂಕೇತಗಳನ್ನು ಹುಟ್ಟಿಸುವ ಇನ್ನೊಂದು ಅಂಶ ಬಾಲ್ಯದ ಅನುಭವಗಳು. ಇವು ಮನೆ, ಪರಿಸರ ಹಾಗೂ ಸಮಾಜದಲ್ಲಿ ಸುತ್ತಮುತ್ತ ನೋಡಿದ ವಿಷಯಗಳಿಂದ ಮನಸ್ಸಿನ ಮೇಲಾಗುವ ಪರಿಣಾಮಗಳ ಒಟ್ಟು ಪ್ರಭಾವ ಈ ಅನುಭವಗಳು, ನಾವು ಸಮಾಜದಲ್ಲಿ ನಡೆದುಕೊಳ್ಳುವ ರೀತಿಯ ಮೇಲೆ ಅಗಾಧ ಪ್ರಭಾವ ಬೀರುತ್ತದೆ. ನಮ್ಮಲ್ಲಿನ ಆಕ್ರಮಣಶೀಲ ಗುಣವು ಹಿಂಸೆ, ದೌರ್ಜನ್ಯ, ಅತ್ಯಾಚಾರದಂತಹ ಪ್ರಕರಣಗಳಿಗೆ ಕಾರಣವಾಗುತ್ತಿದೆ. ಈ ಆಕ್ರಮಣಶೀಲತೆಯ ಗುಣ ಅವನಿಗೆ ಸಮಾಜದಿಂದಲೇ ಬೆಳೆದು ಬಂದಿರುತ್ತದೆ. ಮನೆಯಲ್ಲಿ ಜರುಗಿದ ತಂದೆ, ತಾಯಿಯ ಜಗಳ, ಸುತ್ತಮುತ್ತಲೂ ನಡೆಯುವ ಹೊಡೆದಾಟ, ಬಡದಾಟಗಳಿರಬಹುದು, ಧಾರಾವಾಹಿಗಳು, ಸಿನಿಮಾ ಅಥವಾ ಅಂತರ್ಜಾಲದಲ್ಲಿ ನೋಡಿದ ಹಿಂಸೆಯ ದೃಶ್ಯಗಳಿಂದ ಇರಬಹುದು, ಯಾವ ಘಟನೆಗಳು ಕೆಟ್ಟ ಅನುಭವಗಳನ್ನು ಉಂಟುಮಾಡುತ್ತಿರುವೆಯೆಂಬುದರ ಬಗ್ಗೆ ಅಧ್ಯಯನ ಅವಶ್ಯಕ.

1) ಪುರುಷ ಪ್ರಧಾನ ಮೌಲ್ಯಗಳು – ಪುರುಷಾಹಂಕಾರದ ಮದ
2) ಹೆಣ್ಣುಭ್ರೂಹತ್ಯೆ ಹೆಚ್ಚಾಗಿರುವುದು
3) ಹೆಣ್ಣನ್ನು ಸರಕು ಸಂಸ್ಕøತಿಯ ಭಾಗವಾಗಿ ಸಮಾಜ ನೋಡುತ್ತಿರುವುದು
4) ಸಮಾಜದಲ್ಲಿನ ಮುಕ್ತ ಲೈಂಗಿಕ ಚಟುವಟಿಕೆಗಳು
5) ಮಹಿಳೆಯರ ಅಕ್ರಮ ಕಳ್ಳಸಾಗಣಿಕೆ
6) ಮಾಧ್ಯಮಗಳ ಪುರುಷ ಪ್ರಧಾನ ಮೌಲ್ಯಗಳನ್ನೇ ಬಿಂಬಿಸುತ್ತಿರುವುದು
7) ಶಾಲಾ ಪಠ್ಯಪುಸ್ತಕಗಳಲ್ಲಿಯೂ ಪುರುಷ ಪ್ರಧಾನಮೌಲ್ಯಗಳ ಪ್ರತಿಷ್ಠಾಪನೆ.
8) ಲಿಂಗಾನುಪಾತ ಇಳಿಕೆಯಾಗಿರುವುದು
9) ಮಾನಸಿಕ ಕಾರಣಗಳು

ರೌಡಿಸಂ ಪ್ರದರ್ಶಿಸುತ್ತಿರುವ ಲಾಂಗು-ಮಚ್ಚುಗಳೇ ನಾಯಕ ನಾಯಕಿಯಾಗಿರುವ ನೂರಾರು ಸಿನಿಮಾಗಳ ಹಿಂಸೆ, ಕ್ರೌರ್ಯ, ಅರೆನಗ್ನ ಪ್ರದರ್ಶನ, ಸಾಧ್ಯವಾದರೆ ಮುಕ್ತ ಪ್ರದಾರ್ಶನ, ಮಹಿಳೆಯರನ್ನು ಕಾಮದ ಬೊಂಬೆಗಳಾಗಿ ಚಿತ್ರಿಸುತ್ತಿರುವ ಸಿನಿಮಾಗಳು, ಸಾಮಾಜಿಕ ಜಾಲತಾಣಗಳು, ಅಂತರ್ಜಾಲ, ಮೊಬೈಲ್ ಮುಖಾಂತರ ಮುಕ್ತವಾಗಿ ಹರಿದಾಡುತ್ತಿರುವ ಕಾಮಲೀಲೆಯ ದೃಶ್ಯಗಳು ಲೈಂಗಿಕ ಪ್ರಚೋದನೆಯನ್ನು ಹೆಚ್ಚಿಸುತ್ತಿವೆ.

ಜಾಗತೀಕರಣದಿಂದ ಬದಲಾದ ಕಾರ್ಪೋರೇಟ್ ಜೀವನ ಶೈಲಿ, ಮಾಲ್ ಸಂಸ್ಕøತಿಗಳು, ಬ್ಲೇಡ್‍ನಿಂದ ಕಾರ್‍ನವರೆಗೆ ಎಲ್ಲದಕ್ಕೂ ಮಹಿಳೆಯೇ ರೂಪದರ್ಶಿಯಾಗಿರುವ ಜಾಹೀರಾತುಗಳು, ಬಡವರು ಶ್ರೀಮಂತರ ನಡುವಿನ ಹೆಚ್ಚುತ್ತಿರುವ ಅಂತರ ಇವೆಲ್ಲವೂ ನಮಲಾ ಸಾಂಸ್ಕøತಿಕ ವಾತಾವರಣವನ್ನು ಹಾಳುಗೆಡಬಿಟ್ಟಿವೆ.

ಅತ್ಯಾಚಾರಕ್ಕೆ ಅನೇಕ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕøತಿಕ ಕಾರಣಗಳನ್ನು ಅವಲೋಕಿಸಬೇಕಾಗುತ್ತದೆ. ಪುರುಷ ಪ್ರಧಾನ ಸಮಾಜದ ಮೂಲ ಲಕ್ಷಣವೆಂದರೆ ಮಹಿಳೆಯ ಮೇಲೆ ತಮ್ಮ ದೌರ್ಜನ್ಯ ಸಂಪೂರ್ಣ ಹತೋಟಿಯನ್ನು ಸಾಂಸ್ಥಿಕರಣ ಮಾಡುವುದು ಪ್ರತಿಯೊಬ್ಬ ಮನುಷ್ಯನಲ್ಲಿಯ ಕಾಮುಕ ದೃಷ್ಟಿಕೋನ ನೆಲೆಸಿರುತ್ತದೆ. ಅವಕಾಶ ಸಿಕ್ಕಿದಾಗ ಪುರುಷ ಪ್ರಧಾನ ಧೋರಣೆ ಜಾಗೃತವಾಗಿ ಕಾಮುಕತೆಗೆ ಮುಂದಾಗುತ್ತದೆ. ಪುರುಷ ಪ್ರಧಾನ ವ್ಯವಸ್ಥೆಯನ್ನು ಒಪ್ಪಿ ಅನುಸರಿಸುವ ಪ್ರತಿಯೊಬ್ಬ ಪುರುಷನ ಧೋರಣೆಯೆಂದರೆ ಮಹಿಳೆಯರ ಮೇಲಿನ ಹಿಡಿತ ಸಾಧಿಸುವುದು. ಮಹಿಳೆಯರಿಗೆ ಹಕ್ಕುಗಳು ಮತ್ತು ಸ್ವಾತಂತ್ರ್ಯ ಕೇವಲ ತೋರಿಕೆಗೆ ಮಾತ್ರ. ಅವೆಲ್ಲವೂ ಪುರುಷನ ಮುಲಾಜಿಗೆ ಒಳಪಟ್ಟಿರುತ್ತವೆ. ಪುರುಷ ಪ್ರಭುತ್ವವೇ ಮಹಿಳೆಯರ ಮೇಲಿನ ನಿರಂತವಾಗಿ ಜರುಗುವ ದೌರ್ಜನ್ಯದ ಮೂಲಕಾರಣವಾಗಿವೆ. ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರದ ಪ್ರಯತ್ನಗಳು ಪುರುಷನ ಶಕ್ತಿ ಮತ್ತು ಅಧಿಕಾರದ ಸಂಕೇತವಾಗಿರುತ್ತದೆ. ಇಂದಿಗೂ ಮಹಿಳೆಯನ್ನು ಎರಡನೇ ದರ್ಜೆಯ ಪ್ರಜೆಯನ್ನಾಗಿ ಸಮಾಜ ಕಾಣುತ್ತಿದೆ.

ಪ್ರಸಿದ್ಧ ಮನಶ್ಯಾಸ್ತ್ರಜ್ಞರಾದ ಕ್ಲಿಫೋರ್ಡ್ ಮೋರ್ಗನ್‍ರವರು ತಮ್ಮ ‘ಇಂಟ್ರಡಕ್ಷನ್ ಟು ಸೈಕಾಲಜಿ’ ಪುಸ್ತಕದಲ್ಲಿ ಲೈಂಗಿಕ ನಡವಳಕೆ ಬಗ್ಗೆ ಹೀಗೆ ಹೇಳುತ್ತಾರೆ. ‘ಮಹಿಳೆಯರಲ್ಲಿ ದೇಹದ ಈಸ್ಟ್ರೋಜೆನ್ ಪ್ರಮಾಣ ಮತ್ತು ಲೈಂಗಿಕ ಆಸಕ್ತಿಯ ಬಗೆಗಿನ ಪ್ರಯೋಗಗಳಿಂದ ಹಾರ್ಮೋನುಗಳ ಮತ್ತು ಬೆದೆ ಬರುವುದಕ್ಕೆ ನೇರವಾದ ಸಂಬಂಧ ಕಲ್ಪಿಸುವುದು ಸಾಧ್ಯವಾಗಿಲ್ಲ. ಇಲ್ಲಿ ಬಾಹ್ಯ ಸಂಕೇತಗಳು ಹೆಚ್ಚು ಕೆಲಸ ಮಾಡುತ್ತವೆ. ಪುರುಷರಲ್ಲಿ ಲೈಂಗಿಕ ಭಾವನೆಗಳು ಹುಟ್ಟಲು ಒಂದು ಪ್ರಮಾಣದ ಟೆಸ್ಟೋಸ್ಟಿರಾನ್ ಬೇಕು. ಆದರೆ ಇದರ ಪ್ರಮಾಣ ಹೆಚ್ಚಾಗುವುದರಿಂದ ಲೈಂಗಿಕಾಸಕ್ತಿ ಹೆಚ್ಚಾಗುವುದಿಲ್ಲ. ಪುರುಷನಿಗೆ ಬಾಹ್ಯ ಕೇತಗಳಿಂದಲೂ ಲೈಂಗಿಕ ಕ್ರಿಯೆ ನಡೆಸಬೇಕೆಂಬ ಪ್ರಚೋದನೆ ಉಂಟಾಗುತ್ತದೆ. ಈ ಸಂಕೇತಗಳು ಮಹಿಳೆಯ ರೂಪ, ಹಾವಭಾವ, ಸ್ವರ, ಉಡುಗೆ ಹಾಗು ದೇಹದ ವಾಸನೆಗಳಿಂದ ಹುಟ್ಟಬಹುದು. ಇದಲ್ಲದೇ ಮೋರ್ಗನ್ ಹೇಳುವ ಮತ್ತೊಂದು ಕಾರಣವೆಂದರೆ ‘ಸೋಷಿಯಲ್ ಮೋಟಿವ್’.

ಆರ್ಥಿಕವಾಗಿ ಕೆಸ್ತರದ ಕುಟುಂಬಗಳಲ್ಲಿ ಇಂದಿಗೂ ಚಿಕ್ಕಗುಡಿಸಿಲಿನಲ್ಲಿ ತಂದೆ ತಾಯಿ, ಮಕ್ಕಳು ಒಟ್ಟಿಗೇ ಮಗಲಗುತ್ತಾರೆ. ರಾತ್ರಿ ಮಕ್ಕಳು ಮಲಗಿದೆಯೆಂದು ಅಪ್ಪ ತಡರಾತ್ರಿ ಕುಡಿದು ಬಂದು ಅಮ್ಮನಿಗೆ ಹೊಡೆದು ಬಡಿದು ಲೈಂಗಿಕವಾಗಿ ತನ್ನ ಇಚ್ಚೆ ಪೂರೈಸಿಕೊಳ್ಳುವುದನ್ನು ನೋಡುತ್ತಲೇ ಬೆಳೆಯುವ ಗಂಡುಮಗು ಬದುಕೆಂದರೆ ಹೀಗೆಯೇ ಎನೋ ಎಂಬ ಮನಸ್ಥಿತಿಗೆ ಬಂದಿರುತ್ತದೆ. ಅಲ್ಲದೇ ಅವನಲ್ಲಿ ಪುರಷಾಹಂಕಾರ ನಿಧಾನವಾಗಿ ಚಿಗುರುತ್ತದೆ. ಮಧ್ಯಮ ಮತ್ತು ಮೇಲ್ವರ್ಗದ ಕುಟುಂಬಗಳಲ್ಲಿ ಸುಲಭವಾಗಿ ದೊರೆಯುವ ಅಂತರ್ಜಾಲ, ಟಿ.ವಿ., ಸಿನಿಮಾಗಳಿಂದ ಲೈಂಗಿಕತೆ ಬಗ್ಗೆ ಕೆಟ್ಟ ಕುತೂಹಲ ಮಕ್ಕಳು ಬೆಳೆಸಿಕೊಳ್ಳುತ್ತಾರೆ. ಬೆಳೆದು ದೊಡ್ಡವರಾಗಿ ಅವರಿಗೆ ಅವಕಾಶ ದೊರೆತಾಗ ಪ್ರಾಯೋಗಿಸಲು ಮುಂದಾಗುತ್ತಾರೆ. ಬಹುಪಾಲು ಕುಟುಂಬಗಳಲ್ಲಿ ಮಕ್ಕಳು ಚಿಕ್ಕವರಾಗಿದ್ದಾಗ ಹತ್ತಿರದ ಸಂಬಂಧಿಗಳು ಲೈಂಗಿಕಚೇಷ್ಟೆ ತೋರಿಸುತ್ತಾರೆ. ನಮ್ಮಲ್ಲಿ ಜೋಕುಮಾರಸ್ವಾಮಿಯನ್ನು(ಪುರುಷ ಜನನಾಂಗದ ಆಕಾರ) ಪೂಜಿಸುವ ಆಚರನೆ ಹಳ್ಳಿಗಳಲ್ಲಿ ಜಾರಿಯಲ್ಲಿದೆ. ಅಲ್ಲದೇ ದೇವಸ್ಥಾನಗಳಲ್ಲಿ ಲೈಂಗಿಕ ಚಟುವಟಿಕೆಗಳನ್ನು ಕಲ್ಲಿನಲ್ಲಿ ಕೆತ್ತಿರುವುದು ಎಲ್ಲೆಡೆ ರಾರಾಜಿಸುತ್ತದೆ. ಲೈಂಗಿಕ ಚೇಷ್ಟೆಗಳು, ಪುರುಷನೊಬ್ಬ ಮೂರ್ನಾಲ್ಕು ಸ್ತ್ರೀಯರೊಂದಿಗೆ ನಡೆಸುವ ಲೈಂಗಿಕಕ್ರಿಯೆಯು ಚಿತ್ರಗಳು ಎಲ್ಲರ ಕಣ್ಣಿಗೆ ಬೇಡವೆಂದರೂ ರಾಚುತ್ತದೆ. ದೇವರ ಹೆಸರಿನಲ್ಲಿ ನಡೆಯುವ ಬೆತ್ತಲೆಸೇವೆ, ದೇವದಾಸಿ ಪದ್ಧತಿಗಳು ಆಚರಣೆಗಳು ಮಹಿಳೆಯನ್ನು ಲೈಂಗಿಕ ಆಟದ ವಸ್ತು ಎಂಬಂತಯೇ ಬಿಂಬಿಸುತ್ತವೆ.

ನಮ್ಮ ಸಮಾಜದಲ್ಲಿ ಇರುವ ಕೆಲವು ಅನಿಷ್ಟ ಪದ್ಧತಿಗಳಿಂದಾಗಿ ಹೆಣ್ಣು ಅಧಿಕ ಹೊರೆ ಎಂಬ ಭಾವನೆ ಹೆಚ್ಚಾಗಿದೆ. ಬಾಲ್ಯವಿವಾಹ, ವೈಧವ್ಯ, ಬಂಜೆತನ, ಬಹುಪತ್ನಿತ್ವ, ಗಂಡು ಸಂತಾನವಿಲ್ಲದಿರುವಿಕೆ, ದೇವದಾಸಿ ಪದ್ಧತಿ, ವರದಕ್ಷಿಣೆ ಪದ್ಧತಿ ಮುಂತಾದವುಗಳು ಹಣ್ಣಿನ ಬದುಕನ್ನು ನರಕಸದೃಶ್ಯವಾಗಿವೆ. ಈ ಎಲ್ಲ ಕಾರಣಗಳಿಂದಾಗಿ ಹೆಣ್ಣು ಬೇಡವೆಂದು ಭ್ರೂಣಹತ್ಯೆಗೆ ಮುಂದಾಗುತ್ತಾರೆ. ಅದರ ಪರಿಣಾಮವಾಗಿ ಜನಗಣತಿಯಲ್ಲಿ ಮಹಿಳೆಯರ ಸಂಖ್ಯೆಯಲ್ಲಿ ಇಳಿಕೆಯಾಗಿರುವುದಲ್ಲದೇ ದೌರ್ಜನ್ಯಗಳು ಅತ್ಯಾಚಾರಗಳು ಹೆಚ್ಚಾಗುತ್ತಿವೆ.

ಭಾರತದಲ್ಲಿ 1000 ಪುರುಷರಿಗೆ 940 ಮಹಿಳೆಯರಿದ್ದರೆ ಕರ್ನಾಟಕದಲ್ಲಿ 968, ಬೆಂಗಳೂರಿನಲ್ಲಿ ಕೇವಲ 908 ಮಹಿಳೆಯರಿದ್ದಾರೆ. 6 ವರ್ಷದೊಳಗಿನ ಹೆಣ್ಣು ಮಕ್ಕಳ ಸಂಖ್ಯೆ 944. ಹೆಣ್ಣು ಭ್ರೂಣಹತ್ಯೆ ಒಂದು ಜಾಗತಿಕ ಸಮಸ್ಯೆಯಾಗುತ್ತಿದೆ. ಶತಮಾನಗಳಿಂದಲೂ ಲಿಂಗಭೇದ ನೀತಿಯನ್ನು ಅನುಕರಿಸಿಕೊಂಡು ಬರುತ್ತಿರುವ ಸಮಾಜ ನಮ್ಮದು. ಇದಕ್ಕೆ ಯಾವುದೇ ವ್ಯಕ್ತಿ, ಸಮುದಾಯ, ಜನಾಂಗಗಳು ಕಾರಣವಲ್ಲವಾದರೂ ಇಡೀ ಸಾಮಾಜಿಕ ವ್ಯವಸ್ಥೆಯೇ ಕಾರಣವಾಗಿದೆ. ಇಂತಹ ವಿಷಯದಲ್ಲಿ ಸಾಮಾಜಿಕ ಪದ್ಧತಿಯಲ್ಲಿ ಕಾಣಿಸಿಕೊಳ್ಳುವ ಯಾವುದೇ ಬಗೆಯ ವೈಜ್ಞಾನಿಕ ಬದಲಾವಣೆಗಳಾದರೂ ವರವಾಗುವ ಬದಲು ಶಾಪವಾಗಿಯೇ ಪರಿಣಮಿಸುತ್ತವೆ. ಇದಕ್ಕೆ ಸಾಕ್ಷಿ ಎಂದರೆ ಅಲ್ಟ್ರಾಸೋನೋಗ್ರಫಿ ಅಥವಾ ಸ್ಕ್ಯಾನಿಂಗ್ ಯಂತ್ರ. ಸ್ಕ್ಯಾನಿಂಗ್ ಯಂತ್ರ ವೈದ್ಯಕೀಯ ಕ್ಷೇತ್ರದ ಬಹುದೊಡ್ಡ ಸಾಧನೆಯಾಗಿದೆ. ಏಕೆಂದರೆ ಇದರಿಂದ ಗರ್ಭದಲ್ಲಿರುವ ಭ್ರೂಣದ ಬೆಳವಣಿಗೆ ಮತ್ತು ಆರೋಗ್ಯದ ಸ್ಥಿತಿಗತಿಯನ್ನು ನಿಖರವಾಗಿ ಗುರುತಿಸಬಹುದಾಗಿದೆ. ಭ್ರೂಣ ಮತ್ತು ತಾಯಿಗಿರುವ ತೊಂದರೆಗಳನ್ನು ಬಹಳ ಸುಲಭವಾಗಿ ಪತ್ತೆಹಚ್ಚಬಹುದಾಗಿದೆ. ಧ್ವನಿಅಲೆಗಳ ಮುಖಾಂತರ ಮಾಡುವ ಈ ಪರೀಕ್ಷೆ ಸುರಕ್ಷಿತವಾದುದು. ಹೀಗೆ ಪರೀಕ್ಷಿಸುವಾಗ ಭ್ರೂಣದ ಲಿಂಗವೂ ಅಂದರೆ ಮಗು ಗಂಡೋ, ಹೆಣ್ಣೋ ಎಂಬುದು ತಿಳಿದುಬರುತ್ತವೆ. ಲಿಂಗಪತ್ತೆಯು ವೈದ್ಯಲೋಕದ ಆಕಸ್ಮಿಕ ವಿಸ್ಮಯವಾಗಿದೆ. ಆದರೆ ಅದು ಮಹಿಳೆಯರ ಹಕ್ಕನ್ನೇ ಕಸಿದುಕೊಳ್ಳುತ್ತಿರುವುದು ವಿಪರ್ಯಾಸ.

ಹಿಂದಿನಿಂದಲೂ ಮಹಿಳೆಯರ ಬಗೆಗಿನ ಅವರ ಕೀಳರಿಮೆ, ನಿರ್ಲಕ್ಷ್ಯ ಅಸಡ್ಡೆ ಮತ್ತು ಪುರುಷ ಪ್ರಾಧನ್ಯತೆಯಿಂದ ಹೆಣ್ಣು ಶಿಶುಗಳ ಹತ್ಯೆ ನಡೆಯುತ್ತಿತ್ತು. ಈಗ ಹೊಟ್ಟೆಯಲ್ಲಿರುವಾಗಲೇ ಭ್ರೂಣದ ಲಿಂಗಪತ್ತೆಯಾಗುವುದರಿಂದ ಭ್ರೂಣಹತ್ಯೆ ಸುಲಭವಾಗಿದೆಯಾದ್ದರಿಂದ ಮಹಿಳೆಯರ ಸಂಖ್ಯೆ ಪುರುಷರ ಸಂಖ್ಯೆಗಿಂತ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿವೆ. ಇದೊಂದು ಅನಿಷ್ಟ, ಅನಾಗರಿಕ ಬೆಳವಣಿಗೆಗೆ ಮಹಿಳೆಯರ ಆರೋಗ್ಯ ಮತ್ತು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸುರಕ್ಷಿತ ಗರ್ಭಪಾತ (MTP – Medical Termination of Pregnancy) ಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಹಾಗೆಂದು ಹೆಣ್ಣು ಭ್ರೂಣಹತ್ಯೆಗೆ ಮುಂದಾಗುವುದು ವೈದ್ಯಕೀಯ ವೃತ್ತಿಗೆ ಮಾಡುವ ಅಪಚಾರಗಳು. ಇಲ್ಲಿ ಸಾಮಾಜಿಕವಾಗಿ ತಾಯಿ ಮತ್ತು ಹುಟ್ಟದೇ ಇರುವ ಮಗುವಿನ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಗಂಡು ಬೇಕು ಎನ್ನುವ ಸಮಾಜ ಮತ್ತು ಹಣಕ್ಕಾಗಿ ನೈತಿಕತೆಯನ್ನು ಮರೆತ ವೈದ್ಯಲೋಕ ಇಬ್ಬರೂ ಇದಕ್ಕೆ ಕಾರಣಕರ್ತರಾಗುತ್ತಾರೆ.

ರಾಮಾಯಣದ ಸೀತಾಪಹರಣ, ಶೂರ್ಪನಖಿಯ ಕಿವಿ, ಮೂಗು ಕತ್ತರಿಸಿದ ಘಟನೆ ಮಹಿಳೆಯರನ್ನು ಯಾವ ದೃಷ್ಟಿಕೋನದಲ್ಲಿ ನೋಡುತ್ತಿದ್ದರೆಂಬುದನ್ನು ಪ್ರತಿಪಾದಿಸುತ್ತದೆ. ಅಹಲ್ಯೆ ಕಲ್ಲಾದದ್ದು, ಜಮದಗ್ನಿಯ ಪತ್ನಿ ರೇಣುಕೆಯನ್ನು ಮಗ ಪರಶುರಾಮನಿಂದಲೇ ತಲೆಕಡಿಯುವಂತೆ ಮಾಡಿದ್ದು ಇವೆಲ್ಲವೂ ಯಾವ ನೈತಿಕತೆಯನ್ನು ಸಂಸ್ಕøತಿಯನ್ನು ಬಿಂಬಿಸುತ್ತವೆ? ರಜಪೂತರಲ್ಲಿ ಕುಲದೇವಿಯನ್ನು ಆರಾಧಿಸುತ್ತಿದ್ದರೂ ಅವರಲ್ಲಿಯೇ ಸತಿಪದ್ಧತಿ ಜೀವಂತವಾಗಿದೆ.

ರೇಪ್ ಸಂಸ್ಕೃತಿ ಲಿಂಗದ್ವೇಷದ ರೂಪ ಪಡೆಯುತ್ತದೆಯೇ? ಗಂಡಿನ ಸೇಡು ತೀರಿಸಿಕೊಳ್ಳುವಿಕೆಗೆ ಮಹಿಳೆಯ ದೇಹ ಒಂದು ಉಪಕರಣವಾಗಿ ಬಳಕೆಯಾಗುತ್ತಿದೆಯೇ? ತಮ್ಮ ‘ಆಸ್ತಿ’ಯಾದ ಮಹಿಳೆಯನ್ನು ಹೇಗಾದರೂ ಬಳಸಿಕೊಳ್ಳಬಹುದು ಎಂದು ಗಂಡ, ಕುಟುಂಬ, ಸಮಾಜ ಭಾವಿಸಿದೆಯೇ? ಮಹಿಳಾ ಪೋಲಿಸ್ ಸ್ಟೇಷನ್, ಮಹಿಳಾ ಆಯೋಗ, ರೇಪ್ ಸೆಲ್ ಎಲ್ಲವೂ ಇದ್ದರೂ ಮಹಿಳೆಯ ಬಗೆಗಿನ ಧೋರಣೆ ಬದಲಾಗದಿದ್ದಲ್ಲಿ ಅತ್ಯಾಚಾರ ತಡೆಗಟ್ಟಲು ಹೇಗೆ ಸಾಧ್ಯ?

ಅತ್ಯಾಚಾರಿಗಳ ಬಗ್ಗೆ ಮತ್ತು ಅತ್ಯಾಚಾರಕ್ಕೆ ಒಳಗಾದ ಮಹಿಳೆಯರ ಬಗ್ಗೆ ನಮ್ಮ ಸಮಾಜ ತಳೆದಿರುವ ನಿಲುವಿನ ಬಗ್ಗೆ ಅಧ್ಯಯನ ನಡೆಸಿದಾಗ ತಿಳಿದುಬಂದದ್ದೇನೆಂದರೆ ಶೇ.60 ಪ್ರಕರಣಗಳಲ್ಲಿ ಅತ್ಯಾಚಾರಗಳಿಂದ ಮಹಿಳೆಯರನ್ನು ಅವರ ಕುಟುಂಬದವರೇ ಹೀನಾಯವಾಗಿ ಕಾಣುತ್ತಾರೆ. ಶೇ.12.5ರಷ್ಟು ಅತ್ಯಾಚಾರದ ಪ್ರಕರಣಗಳಲ್ಲಿ ಅತ್ಯಾಚಾರಕ್ಕೆಗೊಳಗಾದ ಮಹಿಳೆಯನ್ನೇ ದೂರುತ್ತಾರೆ. ಪ್ರತಿ ಮೂರನೇ ಬಲಿಪಶು ಇನ್ನು ಚಿಕ್ಕವಯಸ್ಸಿನ ಹುಡುಗಿಯಾಗಿರುತ್ತಾಳೆ ಎಂಬ ಅಂಕಿ ಅಂಶವನ್ನು ರಾಷ್ಟ್ರೀಯ ಅಪರಾಧ ಬ್ಯೂರೋ ನೀಡಿದೆ. ಬೆಂಗಳೂರು ನಗರ ದೇಶದಲ್ಲಿ 4ನೇ ಸ್ಥಾನ ಪಡೆದುಕೊಂಡಿದೆ ಎಂಬುದು ಅತ್ಯಂತ ದುಃಖದ ಸಂಗತಿ. ಪ್ರತಿ 20 ನಿಮಿಷಗಳಿಗೊಮ್ಮೆ ಅತ್ಯಾಚಾರವಾಗುತ್ತದೆಂಬುಂದು ನಿಜಕ್ಕೂ ಆತಂಕ ಹುಟ್ಟಿಸುತ್ತಿದೆ. ಒಟ್ಟು 23,582 ಅತ್ಯಾಚಾರ ಪ್ರಕರಣಗಳು ನಡೆದಿದ್ದರೆ ಶಿಕ್ಷೆಯಾಗಿದ್ದು ಕೇವಲ ಶೇಕಡಾ 25ರಷ್ಟು ಪ್ರಕರಣಗಳಲ್ಲಿ ಮಾತ್ರ. ಇನ್ನುಳಿದ ಶೇಕಡಾ 75 ರಷ್ಟು ಪ್ರಕರಣಗಳಲ್ಲಿ ಖುಲಾಸೆ ಆಗಿದ್ದಾರೆ. ಇತ್ತೀಚೆಗೆ ನಡೆದ 65 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಮತ್ತು ಕೊಲೆ, 25 ವರ್ಷದ ಗರ್ಭಿಣಿ ಮೇಲೆ ಅತ್ಯಾಚಾರವೆಸಗಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು. ಇಡೀ ದೇಶದಲ್ಲಿ 30 ರಿಂದ 40 ಶಾಸಕರ ಮೇಲೆ ಅತ್ಯಾಚಾರದ ಪ್ರಕರಣಗಳು ದಾಖಲಾಗಿದ್ದರೆ, ಅವರಲ್ಲಿ ಎಷ್ಟು ಜನರಿಗೆ ಶಿಕ್ಷೆಯಾಗಿದೆ? ಅವರೆಲ್ಲರೂ ಮತ್ತೆ ಚುನಾವಣೆಗೆ ಸ್ಪರ್ಧಿಸಿ ವಿಧಾನಸಭೆ, ಲೋಕಸಭೆಗೆ ಪ್ರವೇಶಿಸುತ್ತಾರೆ. ಇಂತಹ ಶಾಸಕರಿಂದ ಮಹಿಳಾಪರ ಸಂವೇದನೆಯನ್ನು ನಾವು ನಿರೀಕ್ಷಿಸುವುದು ಹೇಗೆ ಸಾಧ್ಯ?

2011 ರಲ್ಲಿ ಬೆಂಗಳೂರಿನಲ್ಲಿ 97 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದರೆ, 2012 ರಲ್ಲಿ 75 ದಾಖಲಾಗಿವೆ. ಇದರಲ್ಲಿ ಎರಡು ಸಾಮೂಹಿಕ ಅತ್ಯಾಚಾರಗಳು, 14 ಮಕ್ಕಳ ಮೇಲಿನ ಅತ್ಯಾಚಾರಗಳು, 59 ಇತರೆ ದಾಖಲಾಗಿವೆ. ಮಹಿಳೆಯನ್ನು ಹಂಚಿಕೊಳ್ಳಬಹುದಾದ ವಸ್ತು, ಸರಕು ಅದರಲ್ಲೂ ಸಾಮೂಹಿಕ ಸರಕು ಎಂದು ಭಾವಿಸಿರುವುದೇ ಅತ್ಯಂತ ಅಪಾಯಕಾರಿ. ಒಬ್ಬ ಪುರುಷ ಒಬ್ಬ ಮಹಿಳೆಯ ಮೇಲೆ ಅತ್ಯಾಚಾರ ಮಾಡುವುದೇ ಅಪರಾಧ. ಸಾಮಾನ್ಯವಾಗಿ ಯುದ್ಧದ ಸಮಯದಲ್ಲಿ ಸಾಮೂಹಿಕ ಅತ್ಯಾಚಾರದ ಪ್ರಕರಣಗಳು ಕಂಡುಬರುತ್ತವೆ. ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಮತ್ತು ಮಹಿಳೆಯರು ಧರಿಸುವ ಉಡುಪು ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತದೆ ಎನ್ನುವುದಾದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಎಲ್ಲಿಯೂ ಸಾಮೂಹಿಕ ಅತ್ಯಾಚಾರಗಳು ನಡೆದಿರುವುದು ವರದಿಯಾಗಿಲ್ಲ. ಸಾಮೂಹಿಕ ಅತ್ಯಾಚಾರಗಳ ಪ್ರಕರಣಗಳು ನಮ್ಮ ದೇಶದ ಸಾಂಸ್ಕೃತಿಕ , ಸಾಮಾಜಿಕ, ಕಾನೂನು ಸುವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿವೆ. ಸಮಾಜ, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು.

ಡಾ. ವಸುಂಧರಾ ಭೂಪತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *