Latestಅಂಕಣ

ಮೇಘ ಸಂದೇಶ/ ಹೆಣ್ಣಿಗೆ ಒಬ್ಬಳೇ ಓಡಾಟ ಮಾಡೋದು ಕಷ್ಟಾನಾ? – ಮೇಘನಾ ಸುಧೀಂದ್ರ

ಹೆಣ್ಣು ಮಕ್ಕಳಿಗೆ ಈ ಸ್ಟಾಕಿಂಗ್ ಎಂಬ ರೋಗ ಅದೆಷ್ಟು ಬಾಧಿಸುತ್ತದೆ ಎಂದರೆ ಅದು ಒಮ್ಮೊಮ್ಮೆ ಅವರ ಕೆಲಸ, ಓದನ್ನ ಅರ್ಧ ಮೊಟಕುಗೊಳಸಿದ್ದು ಇದೆ… ಈ ಸ್ಟಾಕಿಂಗ್ ಆಗುವ ಸಮಯದಲ್ಲಿ ಹೆಣ್ಣಿಗೆ ಒಬ್ಬರೇ ಓಡಾಡೋದು ಬಹಳ ಕಷ್ಟಾನಾ ಅಂತ ..

ಅರ್ಧ ಬೆಂಗಳೂರನ್ನು ಸುತ್ತುವ ೫೦೦ ಸಿ ಎ ಬಸ್ಸು ಏದುಸಿರು ಬಿಟ್ಟುಕೊಂಡು ವೈಟ್ ಫೀಲ್ಡ್ ತಲುಪೋದಕ್ಕೆ ೨೦ ನಿಮಿಷವಿರುವಷ್ಟರಲ್ಲಿ ಸಡನ್ನಾಗಿ ಒಂದು ಸ್ಟಾಪಿನಲ್ಲಿ ನಿಲ್ಲುತ್ತದೆ. “ಅಲ್ಲೊಂದು ಹತ್ತು ನಿಮಿಷ ಥು” ಎಂದು ಹುಡುಗಿ ಅಂದಿದ್ದು ಡ್ರೈವರಿಗೆ ಕೇಳಿಸುತ್ತದೆ. ಆರಾಮಾಗಿ ಅಮೆಝಾನ್ ಪ್ರೈಮಿನಲ್ಲಿ ಇನ್ನರ್ಧ ಸಿನೆಮಾ ನೋಡಿ ಅವಳು ಇಳಿಯುವ ಸ್ಟಾಪ್ ಬಂದಾಗ ಡ್ರೈವರ್ ಮಾತ್ರ “ಅದು ಮೇಡಮ್ ಬನಶಂಕರಿಯಿಂದ ಹೊರಟಾಗ ಬೆಳಗ್ಗೆ ಬೇಗ ಆಗಿರತ್ತೆ, ladies ಕಂಡಕ್ಟರ್ ಅಲ್ವಾ ಅದಕ್ಕೆ ಇಲ್ಲಿ ವಾಷ್ ರೂಮ್ ಇದೆ. ಅದಿಕ್ಕೆ ನಿಲ್ಲಿಸಿದ್ವಿ ” ಎಂದಾಗ ಹುಡುಗಿಗೆ ಅವಳ ಬಗ್ಗೆ ಅವಳಿಗೆ ಬೇಜಾರಾಗಿ ಟೆಕ್ ಪಾರ್ಕಿನ ಒಳಗೆ ಓಡುತ್ತಾಳೆ. ಅವಳೂ ಅವಳ ಮನೆಯ ಅರ್ಧ ಇರುವ ಮಿಣಕ ಮಿಣಕ ವಾಷ್ ರೂಮಿಗೆ ಹೋಗಿ ಮುಖ ತೊಳೆದುಕೊಂಡು ಖುರ್ಚಿಯಲ್ಲಿ ಕೂತಾಗ ಅನ್ನಿಸಿದ್ದು “ಅರೇ ಇದೇ ಸಮಸ್ಯೆ ನಮಗೂ ಇರುತ್ತದಲ್ಲಾ ಒಬ್ಬೊಬ್ಬರೇ ಟ್ರೆಕಿಂಗ್ ಹೋಗೋದು, ಇಲ್ಲ ಟ್ರಾಫಿಕ್ಕಿನಲ್ಲಿ ಹೋಗೋದು ಎಷ್ಟು ಕಷ್ಟ” ಎಂದು ಈ ಕಡೆ ತಿರುಗಿದಾಗಲೆ ಸನ್ನಿಧಿ ಜೋರಾಗಿ ಫೋನಿನಲ್ಲಿ “Dude I got Periods in Bangalore Traffic, it was so messy” ಎಂದು ಗೆಳತಿಗೆ ಹೇಳುತ್ತಿದ್ದಳು.

ಅಬ್ಬಾ ಎಂತೆಂಥ ಸಮಸ್ಯೆ ಗುರು ಇದು ಎಂದು ಕಟಕಟ ಹೆಬ್ಬಾವು ಕೋಡ್ ಬರೆಯೋದಕ್ಕೆ ಶುರು ಮಾಡಿದಳು. ಸಡನ್ನಾಗಿ ಸುದ್ದಿ ಆಪಿನಲ್ಲಿ “ಲೇಡಿ ಕಂಡೆಕ್ಟರನ್ನ ಗ್ರೋಪ್ ಮಾಡಲಾಗಿದೆ” ಎಂಬ ವಿಷಯ ಓದಿ “ಬೆಂಕಿ ಬಿತ್ತು ಇವರ ಸಮಾನತೆಗೆ” ಎಂದು ಅಂದುಕೊಳ್ಳುವಾಗಲೇ, ಅವಳ ಆಫೀಸಿನ ಲೀಡ್ ಸಂದೀಪ್ “ಮಗಾ ನನ್ನ ಎನ್ಫೀಲ್ಡನ್ನೇ ಅದೊಂದು ಪಿಂಕ್ ಸ್ಕೂಟಿ ಓವರ್ ಟೇಕ್ ಮಾಡ್ಬಿಡಕ್ಕೆ ಹೋಯ್ತು, ಬಿಡ್ತೀನಾ ಫುಲ್ ಹೆದರಿಸಿ ಬಂದೆ, ಆ ಹುಡುಗಿ ಪಾಪ ಆಮೇಲೆ ಸೈಡಲ್ಲಿ ಹಾಕೊಂಡು ಸುಧಾರಿಸ್ಕೊಂಡಳು” ಎಂದು ನಗುತ್ತಾ ಬೇನಲ್ಲಿ ಕೂರೋದನ್ನ ನೋಡಿ “ಗೂಬೆ ” ಎಂದು ಬೈದುಕೊಂಡಳು.

ಅಲ್ಲ, ಹೆಣ್ಣುಮಕ್ಕಳು ಒಬ್ಬೊಬ್ಬರೇ ಹೀಗೆ ಓಡಾಡೋದು ಅಷ್ಟು ಕಷ್ಟಾನಾ ಎಂದು ಹುಡುಗಿ ಡೀಪ್ ಆಲೋಚನೆಯಲ್ಲಿ ಮುಳುಗಿದ್ದಳು. ಒಂದು ವರ್ಷದ ಹಿಂದೆ  ಬೆಲ್ಜಿಯಂ ಏರ್ಫೋಟಿನಲ್ಲಿ ಒಬ್ಬಳೇ ನಿಂತಿದ್ದಾಗ ಲಗೇಜ್ ಟ್ಯಾಗಿನಲ್ಲಿ ಕಂಡ ಹೆಸರನ್ನು ಫೇಸ್ಬುಕಿನಲ್ಲಿ ಹುಡುಕಿ “ಐ ವಾಸ್ ಶೈ ಟು ಟಾಕ್ ಟು ಯೂ ಫಾರ್ ಕಾಫಿ” ಎಂದು ಕರೆದ ಹುಡುಗ ಮತ್ತೆ ಇಂಡಿಯಾ ಸೆಂಟರಿನಲ್ಲಿ ಕಾಣಿಸಿದಾಗ ಸಿಕ್ಕಾಪಟ್ಟೆ ಭಯವಾಗಿ ಅಲ್ಲಿಂದ ಟ್ಯಾಕ್ಸಿ ಹಿಡಿದು ಕಾಲ್ಕಿತ್ತಿದ್ದ  ಘಟನೆ ಇನ್ನೂ ಮನಸಿನಲ್ಲಿ ಹಸಿರಾಗಿತ್ತು. ಲಕ್ಸಮ್ ಬರ್ಗಿನ ಟ್ರೇನಿನಲ್ಲಿ ಭಾರತೀಯ ಉಡುಗೆ ತೊಟ್ಟಿದ್ದ ಇವಳನ್ನ “ನೋಡಿ ಹೇ ಪಾಕಿ” ಎಂದು ಕರೆದು ದಾರಿ ಉದ್ದಕ್ಕೂ ಮಾತಾಡಿಸಿಕೊಂಡು ಬಂದ ಹುಡುಗರನ್ನ ನೋಡಿ ಅಲ್ಲಿನ ಠಾಣೆಗೆ ದೂರು ಕೊಟ್ಟಿದ್ದು ಇವೆಲ್ಲಾ ನೆನಪಾಗಿ “ಉಶಪ್ಪಾ ಬಿ ಎಮ್ ಟಿ ಸಿ ಬಸ್ಸೇ ವಾಸಿ ” ಎಂದು ಕೆಲಸದಲ್ಲಿ ಮಗ್ನಳಾದಳು.

ವಾಪಸ್ಸು ಮನೆಗ ಬರುವಾಗ ಬಸ್ಸು ಯಾಕೆ ಎಂದು ಕ್ಯಾಬ್ ಹಿಡಿದು ಸಡನ್ನಾಗಿ ಬಂದ ಸಜೆಷನಿನಲ್ಲಿ ನೋಡಿದ ಸ್ಟಾಕಿಂಗ್ ಲಾರ ಸಿನೆಮಾ ಅವಳ ಹಣೆಯಲ್ಲಿ ಬೆವರನ್ನೇ ತರಿಸಿತು. ಆಫೀಸಿಗೆ ಇಂಟರ್ನ್ ಆಗಿ ಸೇರಿಕೊಂಡ ಲಾರಾ ಅವಳ ಆಫೀಸಿನಲ್ಲಿಯೇ ಇದ್ದ ಸೀನಿಯರ್ ಅವಳನ್ನು ಹುಚ್ಚನಾಗಿ ಪ್ರೀತಿಸಿ ಅವಳನ್ನ ಮನೆಗೆ ಡ್ರಾಪ್ ಮಾಡುತ್ತೇನೆ ಅನ್ನುವುದೇನು, ಬೆಳಗ್ಗೆ ಅವಳ ಶಿಫ್ಟಿಗೆ ತಿಂಡಿ ತರುವುದೇನು, ಆಮೇಲೆ ಅವಳಿಗೆ ಅವನು ಅದೆಷ್ಟು ಸಮಂಜಸ ಹುಡುಗ ಎಂದು ವಿವರಿಸುವುದೇನು… ಹೀಗೆ ಆಗಿ ಆಗಿ ಅವಳು ಲಾಯರನ್ನ ಭೇಟಿಯಾಗಿ ಕೋರ್ಟಿಗೆ ಹೋಗಿ ಅವನ್ನನ್ನ ಹ್ಯಾರಾಸ್ಮೆಂಟ್ ಕೇಸಿನಲ್ಲಿ ವಜಾ ಮಾಡಿಸಿದ ಮೇಲೆ ಅವನು ಹುಚ್ಚನಾಗಿ ಅಂಗಡಿಗೆ ಹೋಗಿ ೫೦,೬೦ ಸುತ್ತು ಗುಂಡುಗಳನ್ನು ಖರೀದಿಸಿ ಆಫೀಸಿನಲ್ಲಿ ಕಂಡ ಕಂಡವರಿಗೆ ಗುಂಡು ಹೊಡೆದ ನಂತರ, ಪೋಲಿಸಿಗೆ ಸಿಕ್ಕಿಹಾಕೊಂಡ ಮೇಲೆ ಕೇಳಿದ ಮಾತೊಂದೇ “ಲಾರಾ ಇಷ್ಟೆಲ್ಲಾ ಮಾಡಿದ ಮೇಲೆ ನನ್ನನ್ನ ನೆನಪಿನಲ್ಲಿ ಇಟ್ಟುಕೊಳ್ಳುತ್ತಾಳಲ್ಲವಾ” ಎಂದಾಗ ಪೋಲೀಸರು ಎರಡು ಬಿಟ್ಟು ಒಳಗೆ ಕರೆದುಕೊಂಡು ಹೋಗುತ್ತಾರೆ. ಇದರ ನಂತರ ಕ್ಯಾಲಿಫೋರ್ನಿಯಾದಲ್ಲಿ ಆಂಟಿ ಸ್ಟಾಕಿಂಗ್ ಲಾ ಬರುತ್ತದೆ ಎಂದು ತಿಳಿದು ಹುಡುಗಿ ಅರಿತು ಬೆವರು ಒರೆಸಿಕೊಂಡಳು.

ಅಷ್ಟರಲ್ಲಿ ಕ್ಯಾಬಿನ ಡ್ರೈವರ್ “ಮೇಡಮ್ ಹೋದ ವಾರ ಆ ಪತ್ರಿಕೆಯಲ್ಲಿ ಬರೆದಿದ್ದು ನೀವೇನಾ , ನಿಮ್ಮ ಫೋಟೋ ಬಂದಿತ್ತು, ಇಲ್ಲೇ ಮನೇನಾ, ಒಬ್ರೇ ಇದೀರಾ ಮೇಡಮ್ ” ಎಂದು ಕೇಳುವ ಸ್ಪೀಡಿಗೆ ಭಯ ಆಗಿ “ಹಾಗೆಲ್ಲ ಇಲ್ಲ , ಇರಿ ಫೋನು ಬರುತ್ತಿದೆ” ಎಂದು ಹೇಳಿ ಮನೆಯ ಹತ್ತಿರ ಬಂದ ತಕ್ಷಣ ಅಲ್ಲೇ ಸೈಡಿನಲ್ಲಿ ನಿಲ್ಲಿಸಿ ಎಂದು ಹೇಳಿ , ೨೦೦ರ ನೋಟು ತುರುಕಿ ಛೇಂಜಿಗೂ ಕಾಯದೇ ಮನೆಗೆ ಓಡಿ ಹೋದಮೇಲೆ, ಒಬ್ಬೊಬ್ಬರೇ ಓಡಾಡೋದು ಇಷ್ಟೊಂದು ಕಷ್ಟವಾ ಎಂದು ಅಂದುಕೊಂಡು ಟೀವಿ ಹಾಕಿದಳು, ಅಲ್ಲಿ ಬಂದ ಹಾಡು “ತಗೊಳ್ಳೆ ತಗೊಳ್ಳೆ ನನ್ನೇ ತಗೋಳ್ಳೆ, ಹೃದಯ ಬೇಕಾ” ಎಂದು ಕೇಳಿ ಕೋಪಗೊಂಡು ಅದೂ ಆರಿಸಿದಳು.

ಉಶಪ್ಪಾ… 

ಮೇಘನಾ ಸುಧೀಂದ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *