ಜಗದಗಲ

ಬಾಣಲೆಯಿಂದ ಬೆಂಕಿಗೆ- ಮೈತ್ರಿ ಬೆಂಗಳೂರು

ಕಾರಾಗೃಹಗಳ ಎತ್ತರದ ಗೋಡೆಗಳು ಅಪರಾಧಿಗಳನ್ನು ನಾಗರಿಕ ಸಮಾಜದಿಂದ ಬೇರ್ಪಡಿಸುವ ಕೆಲಸವನ್ನೇನೋ ಮಾಡುತ್ತವೆ. ಆದರೆ ಅದೇ ಸಮಾಜದಲ್ಲಿರುವ ಹಾನಿಕಾರಕ ಶಕ್ತಿಗಳಿಂದ ಅಪರಾಧಿಗಳನ್ನು ದೂರವಿಟ್ಟು, ಅವರ ಮನಃಪರಿವರ್ತನೆಗೆ ಅವಕಾಶವನ್ನು ಮಾಡಿಕೊಡುವ ಜವಾಬ್ದಾರಿಯೂ ಕಾನೂನು ವ್ಯವಸ್ಥೆಯ ಮುಖ್ಯ ಕರ್ತವ್ಯವಲ್ಲವೆ?

 

“ನನ್ನನ್ನು ಜನ ಮೃಗದಂತೆ ಕಾಣುತ್ತಿದ್ದರು. ನಾನು ಕಸದ ತೊಟ್ಟಿಯ ಹಿಂದೆ ಸತ್ತು ಬಿದ್ದರೆ ಕೇಳುವವರೂ ಇಲ್ಲದ ಪರಿಸ್ಥಿತಿಯಲ್ಲಿದ್ದೆ. ನನ್ನ ಮನಸ್ಸು ಸತ್ತಾಗಿತ್ತು; ನನ್ನ ದೇಹ ಸಾಯುವುದಕ್ಕೆ ಕಾಯುತ್ತಾ ಇದ್ದೆ,” ಎಂದು ಗದ್ಗದಿತರಾಗಿ ಹೇಳುತ್ತಾರೆ ನಿಕೋಲ್ ಬೆಲ್. ನಿಕೋಲ್ ಲಿವಿಂಗ್ ಇನ್ ಫ್ರೀಡಂ ಟುಗೆದರ್ (ಲಿಫ಼್ಟ್) ಎಂಬ ಸಂಸ್ಥೆಯ ಸ್ಥಾಪಕರು. ಸ್ವತಃ ಕಳ್ಳಸಾಗಾಣಿಕೆದಾರರ ಜಾಲಕ್ಕೆ ಬಲಿಯಾದ ನಿಕೋಲ್ ಅಮೇರಿಕಾದ ಮ್ಯಾಸಚೂಸೆಟ್ಸ್ ನಲ್ಲಿ ತಮ್ಮ ಸಂಸ್ಥೆಯ ಮೂಲಕ ಇಂದು ಕಳ್ಳಸಾಗಾಣಿಕೆಯ ಬಗ್ಗೆ ಅರಿವನ್ನು ಮೂಡಿಸುವ ಕೆಲಸದಲ್ಲಿ ತೊಡಗಿದ್ದಾರೆ.

ಬಡತನ, ಅಸಹಾಯಕತೆಗಳಿಂದ ವೇಶ್ಯಾವಾಟಿಕೆಗೆ ದೂಡಲ್ಪಡುವ ಹೆಣ್ಣುಮಕ್ಕಳು ಅಪಾರವಾದ ಹಿಂಸೆ ಮತ್ತು ಶೋಷಣೆಗೆ ಒಳಗಾಗುತ್ತಾರೆ. ಇಂತಹ ಶೋಷಣೆಗೆ ಬಲಿಯಾಗುವ ಹೆಣ್ಣುಮಕ್ಕಳ ರಕ್ಷಣೆಯನ್ನು ಕಾನೂನು ವ್ಯವಸ್ಥೆಯಾಗಲಿ ಸಮಾಜವಾಗಲಿ ಸಮರ್ಪಕವಾಗಿ ಮಾಡಿಯೇ ಇಲ್ಲ. ಬದಲಾಗಿ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತದೆ. ವೇಶ್ಯಾವಾಟಿಕೆಯ ಆರೋಪದ ಮೇಲೆ ಜೈಲು ಶಿಕ್ಷೆಯನ್ನು ಅನುಭವಿಸುವ ಮಹಿಳೆಯರ ಪಾಡಾದರೂ ಏನು?

ಇತ್ತೀಚೆಗೆ ಗಾರ್ಡಿಯನ್ ಪತ್ರಿಕೆ ಅಮೆರಿಕಾದ ಜೈಲುಗಳಲ್ಲಿರುವ ಮಹಿಳಾ ಕೈದಿಗಳ ಬಗ್ಗೆ ತನಿಖೆಯನ್ನು ನಡೆಸಿ ತನ್ನ ವರದಿಯನ್ನು ಪ್ರಕಟಿಸಿತು. ಮಹಿಳಾ ಕೈದಿಗಳಿಗೆ ಸಹಾಯ ಮತ್ತು ಸಾಂತ್ವನ ನೀಡುವ ನೆಪದಲ್ಲಿ ಅವರನ್ನು ಹೇಗೆ ವೇಶ್ಯಾವಾಟಿಕೆಗೆ ತಳ್ಳಲಾಗುತ್ತಿದೆಯೆಂಬ ಕರಾಳ ಚಿತ್ರಣವನ್ನು ತನ್ನೆ ಓದುಗರ ಮುಂದೆ ಗಾರ್ಡಿಯನ್ ‘ದಿ ಟ್ರ್ಯಾಪ್’ ಎಂಬ ಸಾಕ್ಷ್ಯಚಿತ್ರದ ಮೂಲಕ ತೆರೆದಿಟ್ಟಿದೆ. ಈ ಅಪರಾಧ ಜಾಲ ಕಾನೂನು ವ್ಯವಸ್ಥೆಯನ್ನೇ ದುರುಪಯೋಗಪಡಿಸಿಕೊಂಡು ಮಹಿಳಾ ಕೈದಿಗಳನ್ನು ಶೋಷಿಸುತ್ತಿದೆ. ಮಹಿಳಾ ಕೈದಿಗಳ ನಿಸ್ಸಹಾಯಕತೆಯನ್ನೇ ಬಂಡವಾಳಾವಾಗಿಟ್ಟುಕೊಂಡು ನಡೆಸುತ್ತಿರುವ ಈ ಉದ್ಯಮ ಅಮೇರಿಕಾ ದೇಶದ ಎಲ್ಲೆಡೆ ಹರಡಿದ್ದರೂ ಈ ವಿಷಯ ಅಧಿಕಾರಿಗಳ ಗಮನಕ್ಕೆ ಬಂದೇ ಇಲ್ಲದಿರುವ ಸಂಗತಿ ನಮ್ಮನ್ನು ಬೆಚ್ಚಿಬೀಳಿಸುವಂಥದ್ದು. ಇಲ್ಲಿಯವರೆಗೆ ರಿಚರ್ಡ್ ರಾಲ್ಸ್ ಎಂಬ ಕಳ್ಳವ್ಯಾಪಾರಿಯೊಬ್ಬನನ್ನು ಬಿಟ್ಟರೆ ಇನ್ನಾರನ್ನೂ ಬಂಧಿಸಲು ಪೋಲೀಸರಿಗೆ ಸಾಧ್ಯವಾಗಿಯೇ ಇಲ್ಲ.

ಹೆಂಗಸರ ಕಳ್ಳ ಸಾಗಾಣಿಕೆಯೆಂದೊಡನೆ ಮನಸ್ಸಿಗೆ ಬರುವ ಚಿತ್ರ — ದೊಡ್ಡ ತಂಡಗಳನ್ನೊಳಗೊಂಡಿರುವ, ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಸಲಾಗುವ ಹೆಣ್ಣುಮಕ್ಕಳ ಸಾಗಾಣಿಕೆ. ಆದರೆ ಈ ವೇಶ್ಯಾವಾಟಿಕೆಯ ಜಾಲ ಈ ಯಾವ ಗುಣಲಕ್ಷಣಗಳನ್ನೂ ಹೊಂದಿಲ್ಲ. ಇದಕ್ಕೆ ಬಲಿಯಾದ ಹೆಣ್ಣುಮಕ್ಕಳು ಅಮೇರಿಕಾದ ನಾಗರಿಕರೇ ಆಗಿದ್ದಾರೆ. ಅಲ್ಲದೆ ಈ ಜಾಲವನ್ನು ಬೀಸುವ ತಂಡಗಳು ದೇಶದ ಒಳಗೇ ಕೆಲಸ ಮಾಡುವ ಚಿಕ್ಕ ತಂಡಗಳು. ಆದರೂ ಅವುಗಳು ಉಂಟುಮಾಡುತ್ತಿರುವ ಹಾನಿ ಊಹೆಗೂ ಮೀರಿದ್ದು. ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆಗೆ ತಳ್ಳುವುದಲ್ಲದೆ ಅವರಿಗೆ ಮಾದಕ ವಸ್ತುಗಳ ಚಟವನ್ನೂ ಹತ್ತಿಸಲಾಗುತ್ತಿದೆ.

ಈ ಜಾಲ ತನ್ನ ಬಲೆಯನ್ನು ಬೀಸುವುದಾದರೂ ಹೇಗೆ? ಅಮೇರಿಕಾದ ಕಾರಾಗೃಹಗಳಿಗೆ ಹೊಸ ಕೈದಿಯೊಬ್ಬ ಬರುತ್ತಿದ್ದಂತೆಯೇ ಆ ವ್ಯಕ್ತಿಗೆ ಯಾವ ಪ್ರಕರಣದಲ್ಲಿ ಶಿಕ್ಷೆಯಾಗಿದೆ, ಜೈಲುವಾಸದ ಅವಧಿ ಎಷ್ಟು, ಜಾಮೀನು ಸಿಗುವಂತಹ ಪ್ರಕರಣವೆ — ಇಂತಹ ವಿವರಗಳಲ್ಲದೆ ಕೈದಿಯ ಭಾವಚಿತ್ರ, ವಿಳಾಸ ಮುಂತಾದ ಎಲ್ಲ ವಿವರಗಳೂ ಕಾರಾಗೃಹ ಇಲಾಖೆಯ ಜಾಲತಾಣಗಳಲ್ಲಿ ಲಭ್ಯವಿವೆ. ಅಂತರ್ಜಾಲದಲ್ಲಿ ಹಾಗೂ ಮಾಧ್ಯಮ ವರದಿಗಳಲ್ಲಿಯೂ ಅಪರಾಧಗಳ ವಿವರಗಳು ಪ್ರಕಟಗೊಳ್ಳುತ್ತವೆ. ಇಷ್ಟೇ ಅಲ್ಲದೆ ಜೈಲುಗಳಲ್ಲಿ ಕಳ್ಳಸಾಗಾಣಿಕೆ ಜಾಲಗಳ ಸದಸ್ಯರು ಸದ್ದಿಲ್ಲದೆಯೇ ಸಕ್ರಿಯವಾಗಿ ಕೆಲಸ ಮಾಡುತ್ತಿರುತ್ತಾರೆ. ಈ ಎಲ್ಲ ವಿವರಗಳನ್ನು ಕಲೆಹಾಕಿ ಅತ್ಯಂತ ದುರ್ಬಲವಾದ, ಸುಲಭವಾಗಿ ಪ್ರಭಾವಕ್ಕೊಳಗಾಗುವ, ಸುಂದರವಾದ ಹೆಣ್ಣುಮಕ್ಕಳನ್ನು ಗುರುತಿಸಲಾಗುತ್ತದೆ. ನಂತರ ಕಳ್ಳ ಸಾಗಾಣಿಕೆದಾರರು ಇಂತಹ ಕೈದಿಗಳೊಡನೆ ಪತ್ರ ವ್ಯವಹಾರ ಆರಂಭಿಸುತ್ತಾರೆ. ಆಗಾಗ್ಗೆ ಅವರಿಗೆ ದುಡ್ಡನ್ನೂ ಕಳಿಸುತ್ತಾರೆ. ಹೆಚ್ಚಾಗಿ ಮದ್ಯವ್ಯಸನ ಮತ್ತು ವೇಶ್ಯಾವಾಟಿಕೆಯ ಪ್ರಕರಣಗಳಲ್ಲೇ ಶಿಕ್ಷೆಯನ್ನು ಅನುಭವಿಸುತ್ತಿರುವ ಮಹಿಳಾ ಕೈದಿಗಳು ತಮ್ಮ ಕುಟುಂಬಗಳ, ಹಿತೈಷಿಗಳ ಬೆಂಬಲವಿಲ್ಲದವರು. ಇಂತಹ ಪರಿಸ್ಥಿತಿಯಲ್ಲಿ ಅಪರಿಚಿತರಾರೋ ಸ್ವಲ್ಪ ಪ್ರೀತಿ, ಆಸಕ್ತಿ ತೋರಿದೊಡನೆ ಸುಲಭವಾಗಿ ಅವರ ಪ್ರಭಾವಕ್ಕೊಳಗಾಗುತ್ತಾರೆ. ಜಾಮೀನು ಪಡೆಯಲು ಬೇಕಾದ ನೆರವನ್ನೂ ನೀಡುತ್ತಾರೆ. ಬಿಡುಗಡೆಯಾದ ನಂತರ ಹಣ, ಮನೆ, ಕೆಲಸ — ಇವಾವೂ ಇಲ್ಲದ ಮಹಿಳಾ ಕೈದಿಗಳಿಗೆ ಈ ಕಳ್ಳಸಾಗಾಣಿಕೆದಾರರೇ ಆಸರೆ. ಇಂತಹ ’ಪಿಂಪ್’ಗಳು ನಯವಾದ ಮಾತುಗಳನ್ನಾಡುತ್ತಾ ಹೆಣ್ಣುಮಕ್ಕಳನ್ನು ವಂಚಿಸಿ ಅವರನ್ನು ತಮ್ಮೊಡನೆ ಕರೆದೊಯ್ಯುತ್ತಾರೆ. ಅವರ ಮನೆಗಳೊಳಗೆ ಕಾಲಿಟ್ಟ ನಂತರವೇ ತಿಳಿಯುವುದು ಅಲ್ಲಿನ ಕರಾಳ ಸತ್ಯ — ಇದು ಬಿಡುಗಡೆಯೇ ಇಲ್ಲದ ಮತ್ತೊಂದು ಜೈಲು ಎಂಬುದು. ಒಂದು ಮನೆಯಲ್ಲಿ 20-25 ಹೆಣ್ಣುಮಕ್ಕಳಿರುತ್ತಾರೆ. ಈ ಜಾಲಕ್ಕೆ ಸಿಕ್ಕ ಹೆಂಗಸರನ್ನು ವೇಶ್ಯಾವಾತಿಕೆಗೆ ತಳ್ಳಲಾಗುತ್ತದೆ. ವೇಶ್ಯಾವಾಟಿಕೆಯ ಆರೋಪದ ಮೇಲೆ ಜೈಲುಶಿಕ್ಷೆಯನ್ನು ಅನುಭವಿಸಿದ ಮಹಿಳೆಯರಿಗೆ ಇದು ಹೊಸ ಅನುಭವವಲ್ಲವಾದರೂ ಆ ವ್ಯವಸ್ಥೆಯಿಂದ ಬಿಡುಗಡೆಯೇ ಇಲ್ಲದಂತಹ ಪರಿಸ್ಥಿತಿಯೊದಗುತ್ತದೆ. ಅಲ್ಲದೆ ಮಹಿಳೆಯರನ್ನು ತಮ್ಮ ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ಈ ಪಿಂಪ್ ಗಳು ಮಾದಕವಸ್ತುಗಳು, ಸಾರಾಯಿ ಹಾಗೂ ಬಲದ ಪ್ರಯೋಗವನ್ನು ಧಾರಾಳವಾಗಿಯೇ ಮಾಡುತ್ತಾರೆ ಎಂದು ರಿಚರ್ಡ್ ರಾಲ್ಸ್‍ನ ಜಾಲಕ್ಕೆ ಬಲಿಯಾಗಿದ್ದ ಮಹಿಳೆಯೊಬ್ಬರು ಸಾಕ್ಷ್ಯಚಿತ್ರದಲ್ಲಿ ಹೇಳುತ್ತಾರೆ.

ವೇಶ್ಯಾವಾಟಿಕೆಗೆ ದೂಡಲ್ಪಟ್ಟ ಮಹಿಳೆಯರಿಗೆ ಅದರಿಂದ ಮುಕ್ತಿ ಸಿಗುವುದು ಅಸಾಧ್ಯವೇ. ಹಲವಾರು ಹೆಣ್ಣುಮಕ್ಕಳಿಗೆ ಪದೇ ಪದೇ ಜೈಲುವಾಸ ಅತ್ಯಂತ ಸಾಮಾನ್ಯವಾದ ಸಂಗತಿಯಾಗಿ ಹೋಗಿದೆ. ಇನ್ನು ಕೆಲವರು ಮಾದಕವಸ್ತುಗಳ ದಾಸರಾಗಿ ತಮ್ಮ ಪ್ರಾಣವನ್ನೇ ಕಳಿದುಕೊಂಡಿದ್ದಾರೆ. ಹಾಗಾದರೆ ಇಂತಹ ಶೋಷಣೆಯ ಜಾಲದಿಂದ ಮುಕ್ತಿ ಸಾಧ್ಯವೇ? ಅತ್ಯಂತ ಕಷ್ಟವಾದರೂ ಸಾಧ್ಯವಿದೆ ಎನ್ನುತ್ತಾರೆ ನಿಕೋಲ್. ಅವರು ತಮ್ಮ ಸಂಸ್ಥೆಯ ಮೂಲಕ ಕಳ್ಳಸಾಗಾಣಿಕೆ ಜಾಲಗಳಿಗೆ ಬಲಿಯಾದ ಮಹಿಳೆಯರಿಗೆ ಸಹಾಯ ಮಾಡುತ್ತಿದ್ದಾರೆ. ಅಲ್ಲದೆ ಕಾರಾಗೃಹಗಳಿಗೆ ತೆರಳಿ ಅಲ್ಲಿನ ಮಹಿಳಾ ಕೈದಿಗಳಿಗೆ ಕಳ್ಳಸಾಗಾಣಿಕೆಯ ಬಗ್ಗೆ ಅರಿವನ್ನು ಮೂಡಿಸುತ್ತಿದ್ದಾರೆ ನಿಕೋಲ್.

ವೇಶ್ಯಾವಾಟಿಕೆ ಮತ್ತು ಮದ್ಯವ್ಯಸನಕ್ಕೆ ಬಲಿಯಾಗಿ ಜೈಲು ಸೇರಿದ್ದ ಮತ್ತೊಬ್ಬ ಮಹಿಳೆ ಮರಿಯಾನ್ ಹ್ಯಾಚರ್. ಇಂದು ಅವರು ಮತ್ತೊಮ್ಮೆ ತಮ್ಮ ಕುಟುಂಬದೊಡನೆ ಕೂಡಿಕೊಂಡು ಸುರಕ್ಷಿತವಾದ ಜೀವನವನ್ನು ನಡೆಸುತ್ತಿದ್ದಾರೆ. ಕಳ್ಳಸಾಗಾಣಿಕೆಗೆ ಬಲಿಯಾದ ಹೆಣ್ಣುಮಕ್ಕಳನ್ನು ರಕ್ಷಿಸುವುದು ನಮ್ಮ ಕಾನೂನು ವ್ಯವಸ್ಥೆಯ ಹೊಣೆ. ಬದಲಾಗಿ ಜೈಲುಗಳಲ್ಲಿದ್ದರೂ ಇಂತಹ ಜಾಲಗಳಿಗೆ ಅವರು ಬಲಿಯಾಗುತ್ತಿದ್ದಾರೆ ಎಂದರೆ ಅದು ನಮ್ಮ ವ್ಯವಸ್ಥೆಯಲ್ಲಿರುವ ದೋಷವಲ್ಲವೆ ಎಂದು ಅವರು ಪ್ರಶ್ನಿಸುತ್ತಾರೆ.

ಕಾರಾಗೃಹಗಳು ಕಾನೂನು ವ್ಯವಸ್ಠೆಯ ಅವಿಭಾಜ್ಯ ಅಂಗಗಳಾಗಿವೆ. ಅಪರಾಧಿಗಳಿಗೆ ಕಾರಾಗೃಹ ವಾಸವನ್ನು ವಿಧಿಸುವ ಉದ್ದೇಶ ಅವರು ಮಾಡಿರುವ ತಪ್ಪಿಗೆ ಶಿಕ್ಷೆಕೊಡುವುದಷ್ಟಕ್ಕೇ ಸೀಮಿತವಾಗಿರದೆ ಅವರ ಸುಧಾರಣೆಯೂ ಆಗಲಿ ಎನ್ನುವುದು. ಕಾರಾಗೃಹಗಳ ಎತ್ತರದ ಗೋಡೆಗಳು ಅಪರಾಧಿಗಳನ್ನು ನಾಗರಿಕ ಸಮಾಜದಿಂದ ಬೇರ್ಪಡಿಸುವ ಕೆಲಸವನ್ನೇನೋ ಮಾಡುತ್ತವೆ. ಆದರೆ ಅದೇ ಸಮಾಜದಲ್ಲಿರುವ ಹಾನಿಕಾರಕ ಶಕ್ತಿಗಳಿಂದ ಅಪರಾಧಿಗಳನ್ನು ದೂರವಿಟ್ಟು, ಅವರ ಮನಃಪರಿವರ್ತನೆಗೆ ಅವಕಾಶವನ್ನು ಮಾಡಿಕೊಡುವ ಜವಾಬ್ದಾರಿಯೂ ಕಾನೂನು ವ್ಯವಸ್ಥೆಯ ಮುಖ್ಯ ಕರ್ತವ್ಯವಲ್ಲವೆ?

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

2 thoughts on “ಬಾಣಲೆಯಿಂದ ಬೆಂಕಿಗೆ- ಮೈತ್ರಿ ಬೆಂಗಳೂರು

  • ಎನ್ ಶೈಲಜಾ ಹಾಸನ

    ಹಿತೈಷಿಣಿ ಪತ್ರಿಕೆ ಮಹಿಳೆಯರ ಬಗ್ಗೆ ತಿಳುವಳಿಕೆ ನೀಡುವ ಪತ್ರಿಕೆಯಾಗಿದ್ದು ಅನೇಕ ವಿಚಾರಗಳನ್ನು ತಿಳಿಯಲು ಸಹಾಯಕವಾಗಿದೆ.

    Reply
  • I read Hitaishini articles. this magazine is really good.

    Reply

Leave a Reply to ಎನ್ ಶೈಲಜಾ ಹಾಸನ Cancel reply

Your email address will not be published. Required fields are marked *