Latestಅಂಕಣ

ನಮ್ಮ ಕಥೆ/ ಭಾರತದ ಜೋನ್ ಆಫ್ ಆರ್ಕ್ – ಎನ್. ಗಾಯತ್ರಿ

ಭಾರತದ ಸ್ವಾತಂತ್ರ್ಯ ಚಳುವಳಿಯ ಕ್ರಾಂತಿಕಾರಿ ವೀರರತ್ನಗಳಾದ ಭಗತ್ ಸಿಂಗ್, ರಾಜಗುರು, ಆಜ಼ಾದ್, ಪ್ರೀತಿಲತಾ ವಾಡೇರ್…. ಮುಂತಾದವರ ಸಾಲಿನಲ್ಲಿ ಶೋಭಿಸುವ ಬೀನಾದಾಸ್ ಕೂಡ ಅಪರೂಪದ ಪ್ರಕಾಶಮಣಿ. ಅವರ ಆತ್ಮಕಥೆ ’ಶೃಂಖಲ್ ಝಂಕಾರ್’ನ ಪರಿಚಯ ಇಲ್ಲಿದೆ.

 

“ನಮ್ಮ ಸ್ವಾತಂತ್ರ್ಯ ಚಳುವಳಿಯ ಚರಿತ್ರೆಗೆ ಮಹಾತ್ಮ ಗಾಂಧಿಯವರು ನೀಡಿರುವ ಕೊಡುಗೆಯನ್ನು ಅಗೌರವಿಸುವಂತಹ ಬುದ್ದಿ ವಿಕಲ್ಪ ನನಗಿಲ್ಲ…. ಆದರೂ ನಮ್ಮ ದೇಶದ ಜನರನ್ನು ಅವರ ಮಡುಗಟ್ಟಿದ ನಿಷ್ಕ್ರಿಯೆಯ ಆಳವಾದ ನಿದ್ರಾವಸ್ಥೆಯಿಂದ ಎಚ್ಚರಿಸಲು 1908ರ ನಂತರದ ಯುವಕರ ಆತ್ಮಬಲಿದಾನದ ದಾಳಿಗಳಿಲ್ಲದಿದ್ದರೆ ಮಹಾತ್ಮ ಗಾಂಧಿಯ ಶಸ್ತ್ರವಾದ ಅಹಿಂಸೆಯನ್ನು ಬಳಸಲು ಜನರು ಶಕ್ತರಾಗುತ್ತಿರಲಿಲ್ಲ. ಭಾರತದ ಸ್ವಾತಂತ್ರ್ಯ ಚಳುವಳಿಯ ಚರಿತ್ರೆಯು ಕೇವಲ ಗಾಂಧೀಜಿ ಮತ್ತು ಅವರ ಕಾರ್ಯಕ್ರಮಗಳನ್ನು ಮಾತ್ರ ಹೇಳಿದರೆ ಸಂಪೂರ್ಣವೆನಿಸಿಕೊಳ್ಳುವುದಿಲ್ಲ. ಅದು ಬಾಗಾ ಜತೀನ್ ನ ಹೆಸರನ್ನೂ ಒಳಗೊಳ್ಳಬೇಕು. ಅದು ಚರಿತ್ರಾರ್ಹ ಚಿತ್ತಗಾಂಗ್ ಶಸ್ತ್ರಾಸ್ತ್ರ ದಂಗೆಯನ್ನು ಪರಿಗಣಿಸಬೇಕು. ಇಂಫಾಲಕ್ಕೆ ಹೊರಟ ನೇತಾಜಿಯ ಮೆರವಣಿಗೆಯನ್ನೂ ಸೇರಿಸಿಕೊಳ್ಳಬೇಕು. ಮೇದಿನೀಪುರ, ಬಲೂರ್ ಘಾಟ್, ಸತಾರಾ, ಬಲಿಯ ಮತ್ತು ಅಲ್ಲಿ ಸ್ಥಾಪಿತವಾದ ಕ್ರಾಂತಿಕಾರಿ ಸರ್ಕಾರಗಳನ್ನು ಮರೆಯಬಾರದು. ಪೊಲೀಸರ ಗುಂಡಿಗೆ ಎದೆಯೊಡ್ಡಿ ಹೋರಾಡಿದ ಬಡ ರೈತ, ಕೂಲಿ ಕಾರ್ಮಿಕರ ಸಾಹಸವನ್ನು ಇದರಲ್ಲಿ ಸೇರಿಸಿಕೊಳ್ಳಬೇಕು.”

ಈ ನಿಲುವನ್ನು ಹೊಂದಿದ್ದ ಬಂಗಾಲದ ಬೀನಾ ದಾಸ್ ಭೂಗತ ಚಳುವಳಿಯಲ್ಲಿ ಭಾಗವಹಿಸಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಲವಾರು ಸ್ತ್ರೀಶಕ್ತಿಗಳಲ್ಲಿ ಪ್ರಮುಖಳು. ಬ್ರಹ್ಮ ಸಮಾಜದ ನೇತಾರ ಮತ್ತು ಸುಭಾಷ್ ಚಂದ್ರ ಬೋಸ್ ರ ಗುರುವಾಗಿದ್ದ ಬೇಣಿ ಮಾಧವ ದಾಸರ ಮಗಳಾದ ಬೀನಾ ದಾಸ್ ಕಲ್ಕತ್ತೆಯ ಕ್ರಾಂತಿಕಾರಿ ಹೋರಾಟಗಾರರ ಗುಂಪಿಗೆ ಸೇರಿದವಳು. 1932ರಲ್ಲಿ ಫೆಬ್ರವರಿ 6ರಂದು ಬಂಗಾಲದ ಗವರ್ನರ್ ಆಗಿದ್ದ ಸ್ಟಾನ್ಲೇ ಜಾಕ್ ಸನ್ ಕಲ್ಕತ್ತಾ ವಿಶ್ವವಿದ್ಯಾಲಯದ ಘಟಿಕೋತ್ಸವ ಭಾಷಣ ಮಾಡಲು ಬಂದಾಗ ಅವರತ್ತ ಐದು ಗುಂಡುಗಳನ್ನು ಹಾರಿಸಿ ವಸಾಹತುಶಾಹಿಯ ವಿರುದ್ಧ ತನ್ನ ಪ್ರತಿಭಟನೆಯನ್ನು ತೋರಿದಳು. ಅವಳು ಹಾರಿಸಿದ ಗುಂಡು ವಿಫಲವಾದದ್ದಲ್ಲದೆ ಅವಳು ಪೊಲೀಸರ ಕೈಗೆ ಸಿಕ್ಕು ಏಳು ವರ್ಷಗಳ ಕಾಲ ಸೆರೆಮನೆ ವಾಸ ಅನುಭವಿಸಬೇಕಾಯಿತು. ನಂತರ ಹೊರಗೆ ಬಂದ ಮೇಲೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಕ್ಕಾಗಿ ಅನುಭವಿಸಿದ್ದು ಮತ್ತೆ ಮೂರು ವರ್ಷಗಳ ಸೆರೆಮನೆ ವಾಸ. ಬ್ರಿಟಿಷ್ ವೃತ್ತಪತ್ರಿಕೆಗಳು ಅವಳ ಸಾಹಸವನ್ನು ಬಣ್ಣಿಸಿ ಅವಳನ್ನು ಭಾರತದ ’ಜೋನ್ ಆಫ್ ಆರ್ಕ್’ ಎಂದು ಕರೆದವು. ತನ್ನೆಲ್ಲ ಹೋರಾಟದ ಅನುಭವವನ್ನು ಈ ಕ್ರಾಂತಿಕನ್ಯೆ “ಶೃಂಖಲ್ ಝಂಕಾರ್’ ಎಂಬ ತನ್ನ ಆತ್ಮಚರಿತ್ರೆಯಲ್ಲಿ ನಿವೇದಿಸಿಕೊಂಡಿದ್ದಾರೆ.

ಅವಳ ಆತ್ಮಚರಿತ್ರೆ ’ಶೃಂಖಲ್ ಝಂಕಾರ್’ ಅಂದಿನ ಕ್ರಾಂತಿಕಾರಿ ಹೋರಾಟದಲ್ಲಿರುವ ಮಹಿಳೆಯರ ಜೀವನ, ಸಾಹಸ ಮತ್ತು ಸಾಮರ್ಥ್ಯವನ್ನು ಬಿಚ್ಚಿಡುತ್ತದೆ. ಈ ಆತ್ಮ ಕಥಾನಕವನ್ನು ಬೀನಾ ದಾಸ್ ಬರೆಯಲು ಆರಂಭಿಸಿದ್ದು 1947ರ ಜುಲೈ 8ರಂದು. ಅದೇ ಆಗಸ್ಟ್ ರ 10ರಂದು ಈ ಬರವಣಿಗೆಯನ್ನು ಮುಗಿಸುತ್ತಾರೆ. ಅಂದರೆ ಸ್ವಾತಂತ್ರ್ಯೋತ್ಸವಕ್ಕೆ ಐದು ದಿನಗಳಿಗೆ ಮುಂಚೆ. ಆಗಸ್ಟ್ 15, 1947 ಸ್ವಾತಂತ್ರ್ಯೋತ್ಸವದ ನೆನಪುಗಳನ್ನು ಮುಂದಿಟ್ಟುಕೊಂಡು ಇಲ್ಲಿ ಬೀನಾ ದಾಸ್ ಳ ಕಥೆ ಬಿಚ್ಚಿಕೊಳ್ಳುತ್ತದೆ. ಲೇಖಕಿಗೆ ಸ್ವಾತಂತ್ರ್ಯ ಪಡೆದ ಅಗಾಧ ಸಂತೋಷ, ಸಂಭ್ರಮದ ನಡುವೆಯೇ, ಮತೀಯ ಘರ್ಷಣೆಗಳ ಭಯಂಕರ ರಕ್ತಪಾತದಿಂದ ಹುಟ್ಟಿದ ದೇಶ ವಿಭಜನೆಯ ಕಹಿ ಗಳಿಗೆಯನ್ನು ನುಂಗಬೇಕಾಗಿ ಬಂದಿದೆ. ಆ ಸಂದರ್ಭದಲ್ಲಿ ಪಡೆದ ಸ್ವಾತಂತ್ರ್ಯವು ಎಷ್ಟೊಂದು ಸೀಮಿತವಾದುದು ಎಂಬುದರ ಅರಿವು ಅವರಿಗಿತ್ತು. ಈ ಎಲ್ಲ ದೌರ್ಬಲ್ಯಗಳ ನಡುವೆ ಅವರಂತಹ ಕ್ರಾಂತಿಕಾರಿಯನ್ನು ಸದಾ ಕಾಲ ಒಂದು ಪ್ರಶ್ನೆ ಕಾಡುತ್ತಲೇ ಇರುತ್ತದೆ. ಇಲ್ಲಿಗೆ ಅವರ ಅಂತಿಮ ಹೋರಾಟವು ಕೊನೆಗೊಂಡಿತೇ? ಮಾರ್ಗ ಮಧ್ಯದಲ್ಲಿ ಗತಿಸಿಹೋದ ಸಂಗಾತಿಗಳ ನೆನಪಿನಿಂದ ಹೃದಯ ಭಾರವಾಗುತ್ತದೆ. ಈ ಸಂದರ್ಭದಲ್ಲಿ ಲೇಖಕಿ ಹಿಂದಕ್ಕೊಮ್ಮೆ ತಿರುಗಿ ನೋಡಿ ತನ್ನ ಬದುಕನ್ನು ಆತ್ಮಾವಲೋಕನಕ್ಕೆ , ಆತ್ಮ ವಿಮರ್ಶೆಗೆ ಒಡ್ಡಿಕೊಳ್ಳುತ್ತಾ ತಮ್ಮ ಬದುಕಿನ ಕಥೆಯನ್ನು ಬಿಚ್ಚಿಕೊಳ್ಳುತ್ತಾರೆ.

ತಂದೆ ಬೇಣಿ ಮಾಧವದಾಸ್, ಸುಭಾಷ್ ಚಂದ್ರ ಬೋಸರ ಗುರುವಾಗಿದ್ದವರು. ಜೊತೆಗೆ ಬ್ರಹ್ಮ ಸಮಾಜದ ನೇತಾರ. ತಾಯಿ ಸರಳಾ ದೇವಿ ಸೀಮಿತ ಆದಾಯವುಳ್ಳ ಮಧ್ಯಮ ವರ್ಗದ ಕುಟುಂಬದಲ್ಲಿ ಕೌಟುಂಬಿಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಲೇ ನೊಂದ ಮಹಿಳೆಯರಿಗೆ ಸೂರು ಕಲ್ಪಿಸಿಕೊಡುವ ಕೆಲಸಕ್ಕೆ ಸಮಯವನ್ನು ಹೊಂದಿಸಿಕೊಳ್ಳುತ್ತಿದ್ದರು. ಅವಳು ಮಹಿಳೆಯರನ್ನು ಸಂಘಟಿಸಿ, ಅವರ ಮೂಲಕ ಬಡವರಿಗೆ ಓದಲು, ಬರೆಯಲು ಕಲಿಸುತ್ತಿದ್ದರು. ಜೊತೆಗೆ, ಹೊಲಿಗೆಯಲ್ಲಿ ತರಬೇತಿಯನ್ನು ಕೊಡುತ್ತಿದ್ದರು. ಅವರಿಗೆ ನೋಡಿಕೊಳ್ಳಲು ಅವರದೇ ಕುಟುಂಬವಿದ್ದರೂ ಬಡ ನಿರಾಶ್ರಿತ ಹೆಣ್ಣು ಮಕ್ಕಳಿಗಾಗಿ ಆಶ್ರಮವೊಂದನ್ನು ಆರಂಭಿಸಿದ್ದರು. ವಿದೇಶಿ ಆಳ್ವಿಕೆಯನ್ನು ಪ್ರತಿಭಟಿಸಲು ಮಹಾತ್ಮ ಗಾಂಧಿಯವರು ಆರಂಭಿಸಿದ ಅಸಹಕಾರ ಚಳುವಳಿಯು ದೇಶವಿಡಿ ಹಬ್ಬಿದ್ದು ಅದು ಬೀನಾ ದಾಸ್ ಅವರ ಕುಟುಂಬವನ್ನೂ ಹೊಕ್ಕಿತ್ತು. ಬೀನಾಳ ಅಣ್ಣ ನಿರ್ಮಲ ಚಂದ್ರ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಸೆರೆಮನೆ ಸೇರಿದ್ದ. ಹೀಗಾಗಿ ಖಾದಿ ಮತ್ತು ಚರಖಾ ಅವರ ಮನೆಯನ್ನು ಕಾಯಂ ಆಗಿ ಪ್ರವೇಶಿಸಿದ್ದವು. ಇಂತಹ ಆದರ್ಶ ತಂದೆ ತಾಯಿಯರಿಗೆ ಜನಿಸಿದ ಬೀನಾ ದಾಸಳ ರಾಜಕೀಯ ಪ್ರವೇಶಕ್ಕೆ ಮನೆಯಲ್ಲಿ ಉತ್ಸಾಹಿ ವಾತಾವರಣವಿದ್ದು, ಅವಳು ಕಾಂಗ್ರೆಸ್ ಕಾರ್ಯಕರ್ತಳಾಗಿ ಮತ್ತು ಸಮಾಜ ಸೇವಕಿಯಾಗಿ ಗಾಂಧಿ ಪ್ರತಿಪಾದಿಸಿದ ಅಹಿಂಸಾ ಚಳುವಳಿಗೆ ತನ್ನನ್ನು ಮುಡಿಪಾಗಿಟ್ಟಳು. ನಂತರ ಕ್ರಮೇಣ ಅವರ ದೃಷ್ಟಿಕೋನದಲ್ಲಿ ಬದಲಾವಣೆಯಾಗುತ್ತಿದ್ದಂತೆ ಸಶಸ್ತ್ರಕ್ರಾಂತಿಯ ತತ್ವದಲ್ಲಿ ಅಚಲ ಶ್ರದ್ಧೆಯನ್ನು ಬೆಳೆಸಿಕೊಂಡಳು. ಅವರ ತಂದೆಯ ಶಿಷ್ಯರಾಗಿದ್ದ ಸುಭಾಷ ಚಂದ್ರ ಬೋಸರು ಅವಳಿಗೆ ಮಾರ್ಗದರ್ಶಕರಾಗಿದ್ದು ಅವಳಿಗೆ ಆದರಣೀಯರೂ ಆಗಿದ್ದರು. ಅವಳ ಅಕ್ಕ ಕಲ್ಯಾಣಿ ಭಟ್ಟಾಚಾರ್ಯ ಕೂಡ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದು ಸೆರೆಮನೆವಾಸವನ್ನೂ ಅನುಭವಿಸಿದವಳು.

ಬೀನಾ ತನ್ನ ಬಾಲ್ಯದ ಮತ್ತು ಶಾಲಾ ದಿನಗಳ ಜೀವನವನ್ನು ವರ್ಣಿಸುವಾಗ ಆ ಕಾಲದ ಬಂಗಾಲದ ಕ್ರಾಂತಿಕಾರಿ ಯುವಜನರ ಮನಸ್ಸು ಮತ್ತು ಸಂವೇದನೆಗಳನ್ನು ಮನಮುಟ್ಟುವಂತೆ ಚಿತ್ರಿಸುತ್ತಾರೆ. ಬ್ರಿಟಿಷರಿಂದ ಶಿಕ್ಷಣ ಪಡೆಯುತ್ತಿರುವಾಗಲೂ ಬ್ರಿಟಿಷ್ ವಿರೋಧಿ ಮನಃ ಸ್ಥಿತಿಯನ್ನು ರೂಪಿಸಿಕೊಳ್ಳುತ್ತಲೇ ಅದನ್ನು ಕ್ರಿಯೆಗೆ ಇಳಿಸುವ ನಿರ್ಧಾರ ತೆಗೆದುಕೊಳ್ಳುತ್ತಾಳೆ. ಯಾವುದೇ ಪೂರ್ವ ತಯಾರಿಯಿಲ್ಲದೆ ಸ್ನೇಹಿತೆಯಿಂದ ಪಿಸ್ತೂಲು ಪಡೆದು ಬ್ರಿಟಿಷ್ ಅಧಿಕಾರಿಯತ್ತ ಗುಂಡು ಹಾರಿಸುವ ಬೀನಾಳ ಧೈರ್ಯಕ್ಕೆ ಯಾರಾದರೂ ಬೆರಗಾಗಬೇಕು.

ಈ ಇಡೀ ಆತ್ಮಚರಿತ್ರೆಯನ್ನು ಎರಡು ನೆಲೆಯಲ್ಲಿ ನೋಡಬಹುದು. ಒಂದು, ಬೀನಾ ದಾಸ್ ಅವರ ಸೆರೆಮನೆ ವಾಸದ ಬದುಕಿನ ಅನುಭವಗಳು, ಮತ್ತೊಂದು ಸೆರೆಮನೆಯಾಚೆಗಿನ ಅವರ ಅವರ ಕ್ರಿಯಾಶೀಲ ಚಟುವಟಿಕೆಗಳು.

ಪುಸ್ತಕದ ಶೀರ್ಷಿಕೆಯೇ ಹೇಳುವಂತೆ ’ಶೃಂಖಲೆಯ ಝೇಂಕಾರ’ ಅವರ ಜೀವನದ ಬಹುಮುಖ್ಯ ಭಾಗ. ಭಾರತೀಯರ ದಾಸ್ಯಕ್ಕೆ ಕಾರಣವಾದ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಬೀನಾ ದಾಸ್ ಎರಡು ಬಾರಿ ಸೆರೆಮನೆಗೆ ಹೋದವರು. ಜೈಲುವಾಸ ಸಾಮಾನ್ಯ ವ್ಯಕ್ತಿಗಳ ಜೀವನದಲ್ಲಿ ಎಂಥ ಪರಿಣಾಮ ಬೀರಬಲ್ಲುದು ಎಂಬುದರ ಅಪರೂಪದ ಚಿತ್ರಣ ಇಲ್ಲಿದೆ. ಅವರೊಂದಿಗೆ ರಾಜಕೀಯ ಖೈದಿಗಳಲ್ಲದೆ, ವಿವಿಧ ಅಪರಾಧಗಳಿಗಾಗಿ ಸೆರೆಮನೆವಾಸ ಅನುಭವಿಸಿದ ಇತರ ಖೈದಿಗಳು ಇತರರಿರುತ್ತಿದ್ದರು. ಕೆಲವೊಮ್ಮೆ ಮಕ್ಕಳು ಇರುತ್ತಿದ್ದರು. ಅವರು ಸೆರೆಮನೆವಾಸಕ್ಕೆ ಯಾವುದೇ ಕಾರಣಕ್ಕೆ ಬಂದಿರಲಿ, ಹೆಣ್ಣಾಗಿ ಅನುಭವಿಸಿರುವ ನೋವಿನಲ್ಲಿ ವಿಶಿಷ್ಟತೆಯಿತ್ತು. ಜೈಲುವಾಸಿಗಳ ವಿವಿಧ ಭಾವನೆಗಳ ತಾಕಲಾಟವನ್ನು, ಅವುಗಳ ವೈವಿಧ್ಯಮಯ ಅನುಭವವನ್ನು ಲೇಖಕಿ ಈ ಕೃತಿಯಲ್ಲಿ ಬಿಚ್ಚಿಡುತ್ತಾರೆ. ಬಂಧಿತಳಾದ ಬೀನಾದಾಸಳನ್ನು ನೋಡಲು ಮಹಾತ್ಮ ಗಾಂಧಿಯವರು ಜೈಲಿಗೆ ಒಮ್ಮೆ ಭೇಟಿ ನೀಡಿರುತ್ತಾರೆ. ಶೃಂಖಲ್ ಝೇಂಕಾರ್ ಬಿನಾದಾಸರೊಬ್ಬರ ಕಥೆಯಾಗದೆ, ಆ ಕಾಲದ ಕ್ರಾಂತಿಕಾರಿ ಹೋರಾಟಗಾರರ ಬದುಕಿನ ಹಲವಾರು ಮುಖಗಳನ್ನು ಪರಿಚಯಿಸುತ್ತದೆ. ಅವರು ತಮ್ಮ ಹೋರಾಟದ ಬದುಕಿನಲ್ಲಿ ಭೇಟಿಯಾದ ಗಾಂಧಿ, ಸುಭಾಷ ಚಂದ್ರ ಬೋಸರಲ್ಲದೆ, ಅರುಣಾ ಅಸಫ್ ಆಲಿ, ಮೀನು ಮಸಾನಿ ಮುಂತಾದ ನಾಯಕರೊಂದಿಗಿನ ಅನುಭವವನ್ನು ಹಂಚಿಕೊಂಡಿದ್ದಾರೆ.
ಸೆರೆಮನೆವಾಸದಿಂದ ಹೊರಬಂದ ಮೇಲೆ ಬೀನಾದಿಯಂತಹ ಸಾಮರ್ಥ್ಯವಿರುವ ಆದರ್ಶವಾದಿಗಳು ಭಾರತ ಸ್ವತಂತ್ರವಾದ ಮೇಲೆ, ತಾವು ಆಯ್ದುಕೊಂಡ ದಾರಿಯ ಬಗ್ಗೆ ಆತ್ಮಶೋಧನೆ ಮತ್ತು ಸ್ವಲ್ಪಮಟ್ಟಿನ ಅಂಜಿಕೆಯನ್ನು ಬೆಳೆಸಿಕೊಳ್ಳುವಂತಹ ಅಗತ್ಯ ಉಂಟಾಯಿತು. ಹೋರಾಟದ ಆತ್ಯಂತಿಕ ಗುರಿಯಾದ ಸ್ವಾತಂತ್ರ್ಯದ ಗುರಿಯನ್ನು , ಅದರಲ್ಲಿ ಎಷ್ಟೇ ನ್ಯೂನತೆಗಳಿದ್ದಾಗ್ಯೂ ಸಾಧಿಸಿದ್ದಾಗಿತ್ತು. ಕೋಮು ಸಂಘರ್ಷದಿಂದಾಗಿ ದೇಶವು ಹುಚ್ಚಾಪಟ್ಟೆಯಾಗಿ ಛಿದ್ರವಾಗಿ ವಿಭಜನೆಗೊಂಡದ್ದರಿಂದ ಆ ಕ್ಷಣದ ಆತಂಕವು ದೇಶದ ಭವಿಷ್ಯವು ಏನಾಗಬಹುದು, ಎಂಬುದರತ್ತ ಕೇಂದ್ರೀಕೃತವಾಗಿತ್ತು. ಜಾತೀಯತೆ ಮತ್ತು ಅಸ್ಪೃಶ್ಯತೆಯು ಹಿಂದೂ ಸಮಾಜವನ್ನು ಸಂಪೂರ್ಣವಾಗಿ ವಿಘಟನೆಗೊಳಿಸಿ ವಿಕಲಾಂಗಗೊಳಿಸಿತ್ತು. ಎಲ್ಲಕ್ಕಿಂತ ಹೆಚ್ಚಾಗಿ, ಬಡವ, ಸಿರಿವಂತರ ನಡುವೆ ತುಂಬಲಾಗದ ಆರ್ಥಿಕ ಅಂತರವು ಏರ್ಪಟ್ಟಿತ್ತು. ಈ ವಿಶಾಲ ನಾಡನ್ನು ಪುನರ್ನಿರ್ಮಾಣ ಮಾಡಬೇಕಾದ ಸಂದರ್ಭದಲ್ಲಿ ಇರುವ ಬಡತನ, ಅನಕ್ಷರತೆ , ಜಾತೀಯತೆ ಮತ್ತು ಕೋಮು ಸಾಮರಸ್ಯದಂತಹ ಮೂಲಭೂತ ಸಮಸ್ಯೆಗಳನ್ನು ಎದುರಿಸುವುದು ಹೇಗೆ? ಎಂಬುದರ ಚಿಂತೆಯನ್ನು ಬೀನಾದಾಸ್ ಮಾಡುತ್ತಾರೆ. ಈ ಸಮಸ್ಯೆಗಳು ಸ್ವಾತಂತ್ರ್ಯ ಹೋರಾಟಕ್ಕಿಂತ ಹೆಚ್ಚು ಸಂಕೀರ್ಣವೂ, ಗಾಬರಿಗೊಳಿಸುವಂಥವು ಆಗಿದ್ದವೆಂಬುದನ್ನು ಬೀನಾ ಮನಗಾಣುತ್ತಾರೆ. ಈ ಪುಸ್ತಕದಲ್ಲಿ ಈ ಸಂಬಂಧವಾಗಿ ಅಭಿವ್ಯಕ್ತಗೊಂಡಿರುವ ಆಕೆಯ ಹೇಳಿಕೆಗಳು ಆ ಕಾಲಘಟ್ಟದಲ್ಲಿ ಆಕೆಯ ಮನಸ್ಸಿನ ತುಯ್ದಾಟವನ್ನು ಪರಿಚಯಿಸುತ್ತದೆ.

ಸೆರೆಮನೆವಾಸದಿಂದ ಹೊರಬಂದ ನಂತರ ಕಾಂಗ್ರೆಸ್ ಕಾರ್ಯಕರ್ತಳಾಗಿ ಕೆಲಸ ಮಾಡುತ್ತಿದ್ದಾಗ ಬಂಗಾಲದ ಚರಿತ್ರಾರ್ಹ ಧರಮ್ ತಲ ಸತ್ಯಾಗ್ರಹದಲ್ಲಿ ಬೀನಾ ನಿದ್ರೆಗಳಿಲ್ಲದ ಹಲವಾರು ರಾತ್ರಿಗಳನ್ನು ಕಳೆಯುತ್ತಾರೆ. ಹಾಗೆಯೇ ಅಮೃತ ಬಜಾರ್ ಪತ್ರಿಕೆಯ ಶೋಷಿತ ಕಾರ್ಮಿಕರು ನಡೆಸುತ್ತಿದ್ದ ಮುಷ್ಕರದ ನೇತೃತ್ವ ವಹಿಸಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸುತ್ತಾರೆ. ಗಲಭೆಯೆದ್ದ ನೌಖಾಲಿಯಲ್ಲಿ ಗಾಂಧಿಯವರೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡು ಪರಿಹಾರ ಕಾರ್ಯಗಳಿಗಾಗಿ ದುಡಿಯುತ್ತಾರೆ. ಶಾಲೆಗಳಿಲ್ಲದ ಹಳ್ಳಿಗೆ ಹೋಗಿ ಅಲ್ಲಿ ಶಾಲೆಗಳನ್ನು ಆರಂಭಿಸುವ ಕಾರ್ಯದಲ್ಲಿ ತೊಡಗಿಕೊಂಡರು. ಕೊನೆಗೆ, ಸ್ವಾತಂತ್ರ್ಯ ಬಂದ ನಂತರ ಪ್ರಜಾಪ್ರಭುತ್ವದ ಚುನಾವಣಾ ರಾಜಕೀಯ ಕ್ಷೇತ್ರಕ್ಕೆ ಸೆಳೆಯಲ್ಪಟ್ಟು, ಅವರ ಪಕ್ಷದ ನಿರ್ದೇಶನದ ಮೇರೆಗೆ ಶಾಸಕಾಂಗ ಸಭೆಯ ಸದಸ್ಯರಾಗಿ ಚುನಾಯಿತರಾಗುತ್ತಾರೆ. ಆಗ ಸಮಕಾಲೀನ ರಾಜಕೀಯದಲ್ಲಿ ವ್ಯಾಪಿಸಿದ್ದ ಬದಲಾವಣೆಯನ್ನು ಕಂಡು ಅತ್ಯಂತ ವೇದನೆಗೊಳಗಾಗುತ್ತಾರೆ. ಆತ್ಮಾರ್ಪಣೆಯ ಆದರ್ಶದ ರಾಜಕಿಯದ ಜಾಗವನ್ನು ತಕ್ಷಣವೇ ಅಧಿಕಾರದ ರಾಜಕೀಯವು ಆವರಿಸಿರುವುದನ್ನು ಕಾಣುತ್ತಾರೆ. ಅಸಂಖ್ಯ ಅನುಯಾಯಿಗಳಿದ್ದು, ಹೇಗೆ ಗಾಂಧೀಜಿಯವರು ಒಂಟಿಯಾದರೋ ಹಾಗೆಯೇ ಬೀನಾ ಕೂಡ ಮೌಲ್ಯಗಳ ಪಲ್ಲಟದೊಡನೆ ಹೊಂದಾಣಿಕೆ ಮಾಡಿಕೊಳ್ಳಲಾಗದೆ ಒಂಟಿಯಾಗುತ್ತಾರೆ.

ಈ ಆತ್ಮಕಥಾನಕವನ್ನು ತಾನು ಏಕೆ ಬರೆದೆ ಎಂದು ಪ್ರಶ್ನಿಸಿಕೊಳ್ಳುತ್ತಾ ಕೊನೆಯಲ್ಲಿ ಹೀಗೆ ಬರೆಯುತ್ತಾರೆ:
“ ಇದನ್ನು ಬರೆಯಲು ಆರಂಭಿಸಿದಾಗ ನಾನು ಏನು ಹೇಳಬೇಕೆಂದಿದ್ದೆ, ಎಂಬುದರ ಬಗ್ಗೆ ನನಗೆ ತಿಳಿಯದು. ನನ್ನ ಕಾರ್ಯಕ್ಷೇತ್ರಕ್ಕೆ ವಿದಾಯ ಹೇಳಬಯಸಿದ್ದನೆ? ನನ್ನ ಜೀವನ ರಥದ ಚಕ್ರಗಳ ಅವಿರತ ಚಲನೆಗೆ ಇತಿಶ್ರೀ ಹಾಡಬೇಕೆಂದಿದ್ದೆನೆ? ನಿಜವಾಗಿಯೂ ಕೆಲವೊಮ್ಮೆ ನನ್ನ ಮನಸ್ಸು ಮತ್ತು ಶರೀರವು ಆಯಾಸದಿಂದ ಬಳಲಿ ಬೆಂಡಾಗಿ ಸೋತುಹೋಗುತ್ತದೆ.

ಮಾನವಕುಲದ ದುಃಖ-ದುಮ್ಮಾನಗಳನ್ನು ಕೇಳುತ್ತಲೇ ನಾನು ನನ್ನ ಜೀವನ ಯಾತ್ರೆಯನ್ನು ಆರಂಭಿಸಿದೆ. ಮನುಷ್ಯನ ಸಂಕಷ್ಟಗಳಿಗೆ ಕೊನೆಯೇ ಇಲ್ಲವಾಗಿದೆ.ನಮ್ಮ ಸುತ್ತಲೂ ಹಸಿವಿನ ಆಕ್ರಂದನ, ವಂಚಿತರ ನೋವುಗಳು ಸದಾ ಮೊರೆಯುತ್ತಲೇ ಇವೆ. ವಿರಮಿಸಲು ಸಮಯ ಇನ್ನೂ ದೂರವಿದೆ. ಇಂದು ನನ್ನ ಪ್ರಾರ್ಥನೆ ಒಂದೇ. ಸಂಕಷ್ಟಕ್ಕೆ ಸಿಲುಕಿರುವ ಮನುಕುಲದ ಹಿತಕ್ಕಾಗಿ ಸಕ್ರಿಯವಾಗಿ ಉಳಿಯುವುದು. ನಿಷ್ಕ್ರಿಯೆಯ ಉಸುಕಿನಲ್ಲಿ ಸಿಕ್ಕಿ ಕಳೆದುಹೋಗದೇ ಇರುವುದು. ನನ್ನ ಜೀವನದ ಕೊನೆಯವರೆಗೂ ಕವಿ ರವೀಂದ್ರನಾಥರ ನುಡಿಯನ್ನು ನುಡಿಯುವಷ್ಟು ಶಕ್ತಿ ಉಳಿದಿರಲೆಂದು ಆಶಿಸುತ್ತೇನೆ.

ನಿರಂತರ ಚಟುವಟಿಕೆಯಿಂದ ದಣಿವಾಗಿದ್ದರೂ
ಕೂರಲಾರೆನು ನಾನು ಶಾಂತಳಾಗಿ
ಮುಗಿಲು ಮುಟ್ಟುವ ಮನುಕುಲದ ಆಕ್ರಂದನ
ಎಂದು ನಿಲ್ಲುವುದೋ
ಅನಾಚಾರಿಗಳ ಖಡ್ಗವು
ತನ್ನ ಕ್ರೂರ ಕಾದಾಟವನ್ನು ಎಂದು ಕೊನೆಗೊಳಿಸುವುದೊ
ನನಗಿಲ್ಲ ವಿರಾಮ ಅಲ್ಲಿಯತನಕ.

 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

3 thoughts on “ನಮ್ಮ ಕಥೆ/ ಭಾರತದ ಜೋನ್ ಆಫ್ ಆರ್ಕ್ – ಎನ್. ಗಾಯತ್ರಿ

  • shadakshary

    very interesting article

    Reply
  • G. ramakrishna

    have gone through Dr. Gayathri’s very fine piece on Beena das. That is the kind of stuff our youngsters should be reading. Congratulations.

    Reply
  • Dr. H. G. Jayalakshmi

    Dr. Gayathri’s article on the life of a freedom fighter Bina Das is very inspiring. My heartfelt congratulations to her.

    Reply

Leave a Reply to Dr. H. G. Jayalakshmi Cancel reply

Your email address will not be published. Required fields are marked *