Latestಅಂಕಣ

ಚಿತ್ರ ಭಾರತಿ/ ನೀರು ಕುಡಿಸಿದ ಕೆಂಪು ಮೆಣಸಿನಕಾಯಿ!- ಭಾರತಿ ಹೆಗಡೆ

ನೀರು ಕುಡಿಸಿದ ಕೆಂಪು ಮೆಣಸಿನಕಾಯಿ!

ಅದು ಗುಜರಾತ್‍ನ ಒಂದು ಚಿಕ್ಕ ಹಳ್ಳಿ. ಬ್ರಿಟಿಷರು ಭಾರತವನ್ನು ಆಳುತ್ತಿದ್ದಂಥ ಕಾಲವದು. ತೆರಿಗೆ ಸಂಗ್ರಹಿಸುವ ನೆಪದಲ್ಲಿ ಸುಬೇದಾರ್, ಇಡೀ ಹಳ್ಳಿಯನ್ನು ಆಟ ಆಡಿಸುತ್ತಿರುವವನು. ಹಾಗಾಗಿ ಕುದುರೆಯ ಖುರಪುಟದ ಸದ್ದು ಕೇಳಿದರೆ ಆ ಹಳ್ಳಿಯ ಜನ ಬೆಚ್ಚಿ ಬೀಳುತ್ತಾರೆ. ಕುದುರೆ ಸದ್ದು ಹತ್ತಿರವಾದಂತೆಲ್ಲ ಊರವರೆಲ್ಲರೂ ಓಡಿಹೋಗಿ ಬಾಗಿಲು ಮುಚ್ಚಿಕೊಳ್ಳುತ್ತಾರೆ. ಅಷ್ಟು ಹೆದರಿಕೆ ಇಟ್ಟುಕೊಂಡಿರುವ ಮನುಷ್ಯ ಸುಬೇದಾರ್. ಅಂಥವನನ್ನು ಎದುರಿಸಿ ನಿಂತದ್ದು ಸೋನ್‍ಬಾಯಿ ಎಂಬೊಬ್ಬ ಅನಕ್ಷರಸ್ಥ ಮಹಿಳೆ.

ಅದಿಕ್ಕೆ ಊರಿನವರೆಲ್ಲರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಹೀಗಿದ್ದೂ ಒಂದಿನಿತೂ ಕದಲುವುದಿಲ್ಲ ಅವಳು.

ಆಗಿದ್ದು ಇಷ್ಟೇ. ಸೋನ್‍ಬಾಯಿ ಎಂದಿನಂತೆ ಊರ ಹೊರಗಿನ ಹೊಳೆಗೆ ಹಳ್ಳಿಯ ಹೆಂಗಸರೊಂದಿಗೆ ನೀರು ತರಲು ಹೊರಟಿದ್ದಾಳೆ. ಅಷ್ಟೊತ್ತಿಗೆ ಕುದುರೆಯ ಖುರಪುಟದ ಸದ್ದು ಕೇಳಿದ ಅವಳೊಂದಿಗಿದ್ದ ಮಹಿಳೆಯರೆಲ್ಲ ದಿಕ್ಕಾಪಾಲಾಗಿ ಓಡುತ್ತಾರೆ. ಆದರೆ ಸೋನ್‍ಬಾಯಿ ಒಬ್ಬಳೇ ದಿಟ್ಟವಾಗಿ ನಿಂತು ಹೇಳುತ್ತಾಳೆ. ‘ಇದು ಮನುಷ್ಯರ ಬಳಕೆಗೆ ಇರುವ ನೀರು. ಪ್ರಾಣಿಗಳಿಗೆ ಆ ಕಡೆ ಇದೆ ಹೋಗಿ’ ಎಂದು. ಅಷ್ಟು ದಿಟ್ಟವಾಗಿ ನಿಂತು ಹೇಳಿದ ಸೋನ್‍ಬಾಯಿಯನ್ನೇ ಎವೆಯಿಕ್ಕದೇ ನೋಡುವ ಸುಬೇದಾರ್, ನಿಧಾನಕ್ಕೆ ಕುದುರೆಯಿಂದ ಕೆಳಗಿಳಿದು ನೀರುಬೇಕೆಂದು         ಬೊಗಸೆಯೊಡ್ಡುತ್ತಾನೆ, ತಲೆಯಮೇಲೊಂದು, ಕೈಯ್ಯಲ್ಲೊಂದು ಬಿಂದಿಗೆ ಹಿಡಿದಿಟ್ಟ ಸೋನ್‍ಬಾಯಿ ನಿಧಾನಕ್ಕೆ ನೀರು ಹಾಕುತ್ತಾಳೆ ಅವನ ಕೈಗೆ. ಅವನೂ ಅವಳನ್ನು ನೋಡುತ್ತ ನೋಡುತ್ತ ಬೊಗಸೆ ತುಂಬ ನೀರು ಕುಡಿಯುತ್ತಾನೆ. ಮಿಕ್ಕ ಹೆಂಗಸರೆಲ್ಲ ಸುಬೇದಾರನ ಸೈನಿಕರ ಅಟ್ಟಹಾಸಕ್ಕೆ ಬೆದರಿ ಓಡಿಹೋಗುತ್ತಿದ್ದರೆ ಸೋನ್‍ಬಾಯಿ ಮಾತ್ರ ಸುಬೇದಾರನಿಗೆ ನೀರು ಕುಡಿಸುತ್ತಿರುತ್ತಾಳೆ. ಅಂಥ ಹೆಣ್ಣಿನ ಮೇಲೆ ಸುಬೇದಾರನ ಕಣ್ಣು.

ಸುಬೇದಾರನ ಕಣ್ಣಿಗೆ ಬಿತ್ತೆಂದರೆ ಅಲ್ಲಿಗೆ ಮುಗಿದಂತೆಯೇ. ಅಷ್ಟೊತ್ತಿಗಾಗಲೇ ಹಳ್ಳಿಯ ಸಾಕಷ್ಟು ಮಹಿಳೆಯರನ್ನು ಬಲವಂತವಾಗಿ ಪಡೆದವನು ಅವನು. ಆದರೆ ಸೋನ್‍ಬಾಯಿ ಮಾತ್ರ ಇದಕ್ಕೆಲ್ಲ ಸೊಪ್ಪು ಹಾಕಿದವಳಲ್ಲ. ಒಮ್ಮೆ ನೀರು ತರಲು ಅದೇ ನದೀತೀರಕ್ಕೆ ಹೋದಾಗ ಸಂಗೀತ ಕೇಳುತ್ತ ದಾಡಿ ಮಾಡಿಸಿಕೊಳ್ಳುತ್ತಿದ್ದ ಸುಬೇದಾರ ಅವಳನ್ನು ನೋಡಿದವನೇ ಅರ್ಧಕ್ಕೇ ಎದ್ದು ಹೋಗಿ ಅವಳ ಕೈ ಹಿಡಿದೆಳೆಯುತ್ತಾನೆ. ಎತ್ತಿ ಅವನ ಕೆನ್ನೆಗೆ ಬಾರಿಸಿದ ಸೋನ್‍ಬಾಯಿಗೆ, ತಕ್ಷಣಕ್ಕೇ ಎಚ್ಚರವಾಗುತ್ತದೆ, ತಾನು ಹೊಡೆದದ್ದು ಎಂಥವನಿಗೆ ಎಂದು. ಭಯದಿಂದ ಅಲ್ಲಿಂದ ಓಡುತ್ತಾಳೆ. ಅನಿರೀಕ್ಷಿತವಾದ ಈ ಹೊಡೆತದಿಂದ ಸುಬೇದಾರ್ ಕೂಡ ಅಲ್ಲಾಡಿಹೋಗುತ್ತಾನೆ. ಯಾರ ಹೆಸರನ್ನು ಕೇಳಿದರೆ ಇಡೀ ಊರೇ ಭಯದಿಂದ ನಡುಗುತ್ತಿತ್ತೋ ಅಂಥವನಿಗೆ ಒಬ್ಬ ಹೆಣ್ಣು ಹೊಡೆಯುವುದೆಂದರೆ…? ಸಹಿಸಲಾದೀತೇ..? ಅವಳನ್ನು ಹಿಡಿಯಲು ತನ್ನ ಜನರನ್ನು ಬಿಡುತ್ತಾನೆ. ಅಟ್ಟಿಸಿಕೊಂಡು ಬರುವ ಸುಬೇದಾರನ ಸೈನಿಕರಿಂದ ತಪ್ಪಿಸಿಕೊಳ್ಳಲು ಕಲ್ಲುಮುಳ್ಳು ಏನೊಂದೂ ಲೆಕ್ಕಿಸದೇ ಓಡುತ್ತಾಳೆ ಸೋನ್‍ಬಾಯಿ. ರಕ್ಷಣೆಗಾಗಿ ಊರಲ್ಲಿದ್ದ ಏಕೈಕ ಮೆಣಸಿನ ಕಾಯಿ ಕಾರ್ಖಾನೆಯೊಳಕ್ಕೆ ನುಗ್ಗುತ್ತಾಳೆ. ಊರಿನ ಬಹುತೇಕ ಮಹಿಳೆಯರು ಆ ಕಾರ್ಖಾನೆಯಲ್ಲೇ ಕೆಲಸ ಮಾಡುವವರು. ಆ ಕಾರ್ಖಾನೆಯ ಚೌಕೀದಾರ ಅಬುಮಿಯಾ ಆದರ್ಶವೇ ಮೂರ್ತಿವೆತ್ತಂತವನು. ಭಯದಿಂದ ಓಡಿಬಂದ ಅವಳನ್ನು ನೋಡಿಯೇ ಕೋಟೆಯಂತಿರುವ ಆ ಕಾರ್ಖಾನೆಯ ಬಾಗಿಲನ್ನು ಹಾಕುತ್ತಾನೆ. ಓಡಿಓಡಿ ಸುಸ್ತಾಗಿ ಮಾತನಾಡಲೂ ತ್ರಾಣವಿಲ್ಲದ ಸೋನ್‍ಬಾಯಿ ನಡೆದದ್ದೆಲ್ಲವನ್ನೂ ಹೇಳಿ ನಿರಾಳವಾಗುತ್ತಾಳೆ. ಇವಳ ಜಾಡು ಹಿಡಿದ ಸೈನಿಕರು ಕಾರ್ಖಾನೆಯ ಬಾಗಿಲು ತಟ್ಟುತ್ತಾರೆ. ಅವರು ಬಾಗಿಲು ತಟ್ಟಿದಂತೆಲ್ಲ ಒಳಗಿದ್ದವರ ಹೃದಯ ಭಯದಿಂದ ಹೊಡೆದುಕೊಳ್ಳುತ್ತದೆ. ಆದರೆ ಅವರಿಗೆಲ್ಲ ಅಭಯದಂತೆ ನಿಂತವನು ಹಿರಿಯಜ್ಜ ಅಭುಮಿಯಾ. ಅಷ್ಟೊತ್ತಿಗೆ ಈ ಸುದ್ದಿ ಕಾಳ್ಗಿಚ್ಚಿನಂತೆ ಊರಿಗೆಲ್ಲ ವ್ಯಾಪಿಸಿ ಎಲ್ಲರೂ ಭಯಭೀತರಾಗುತ್ತಾರೆ.

ಈಗ ಸುಬೇದಾರನಿಗೆ ಅವಳನ್ನು ಪಡೆಯಲೇ ಬೇಕೆಂಬ ಹಂಬಲವಿರುವುದು ಅವಳ ಮೇಲಿನ ಮೋಹದಿಂದಲ್ಲ, ಮೋಹ ಹೋಗಿ ಹಠ ಮನೆಮಾಡಿದೆ. ಅವನ ಅಹಮಿಕೆಗೆ ಒಡ್ಡಿದ ಸವಾಲದು. ಅವನ ಹಠದ ಮುಂದೆ ಇಡೀ ಹಳ್ಳಿ ಸೋಲುತ್ತದೆ. ಊರಿನ ಮುಖಂಡ ಮುಖಿ, ಪೂಜಾರಿ ಎಲ್ಲರೂ ಅವನ ಪರ ನಿಂತು ಸೋನೂಬಾಯಿಯ ಮನವೊಲಿಸಲು ಬರುತ್ತಾರೆ. ‘ಈ ಜಗತ್ತೇ ಒಂದು ಮೋಹ ಮಾಯ. ನೀನ್ಯಾವ ತಪ್ಪೂ ಮಾಡುತ್ತಿಲ್ಲ. ಒಂದು ಹಳ್ಳಿ ಉದ್ಧಾರ ಮಾಡಲು ಹೊರಟಿರುವೆ ನೀನು.. ಬಾ..’ ಎಂದು ಕರೆಯುತ್ತಾನೆ ಊರಿನ ಪಂಡಿತ. ಯಾರೇನೇ ಎಂದರೂ ಸೋನ್‍ಬಾಯಿಯ ನಿರ್ಧಾರ ಅಚಲ. ಒಂದಿಂಚೂ ಅವಳಿಟ್ಟ ಹೆಜ್ಜೆಯಿಂದ ಹಿಂತೆಗೆಯುವುದಿಲ್ಲ. ಒಳಗಿರುವ ಹೆಂಗಸರೂ, ಹೊರಗಿರುವವರೆಲ್ಲರೂ ಅವಳಿಗೆ ಬೈದು, ದ್ವೇಷಿಸಿದರೂ ಅವಳು ಏಕಾಂಗಿಯಾಗಿ ಹೋರಾಡುತ್ತಾಳೆ.

ಇದು 1987ರಲ್ಲಿ ತೆರೆಕಂಡ ಕೇತನ್ ಮೆಹ್ತಾ ನಿರ್ದೇಶನದ ಸ್ಮಿತಾ ಪಾಟೀಲ್ ಅಭಿನಯದ ಮಿರ್ಚ್ ಮಸಾಲಾ ಸಿನಿಮಾ. ಬರಹಗಾರ ಚುನಿಲಾಲ್ ಮಾಡಿಯಾ ಅವರ ಸಣ್ಣಕಥಾಸಂಕಲನ ಅಬು ಮಕ್ರಾನಿಯ ಕಥೆಯ ಆಧಾರಿತವಾದ ಈ ಸಿನಿಮಾದಲ್ಲಿ ಸ್ಮಿತಾ ಪಾಟೀಲ್, ನಾಸಿರುದ್ದೀನ್ ಶಾ, ಓಂಪುರಿ, ದೀಪ್ತಿ ನವಲ್ ಮುಖ್ಯ ಭೂಮಿಕೆಯಲ್ಲಿದ್ದು, ರಾಜ್‍ಬಬ್ಬರ್ ಅತಿಥಿ ಕಲಾವಿದರಾಗಿ ನಟಿಸಿದ್ದಾರೆ. ಇಡೀ ಸಿನಿಮಾ ಆವರಿಸಿಕೊಳ್ಳುವುದು ಸ್ಮಿತಾ ಪಾಟೀಲರ ಪ್ರಬುದ್ಧ ಅಭಿನಯ. ಹಾಗಾಗಿಯೇ ಅವರ ಪಾತ್ರವನ್ನು `ಭಾರತೀಯ ಚಿತ್ರರಂಗದ 25 ಅತ್ಯುತ್ತಮ ಅಭಿನಯಗಳಲ್ಲಿ ಒಂದು’ ಎಂದು ಈ ಸಿನಿಮಾದಲ್ಲಿ ಪರಿಗಣಿಸಲಾಗಿದೆ.

ಸಿನಿಮಾದಲ್ಲಿ ಮಹಿಳೆಯೆಂದರೆ ಗ್ಲಾಮರ್ ಅಥವಾ ಗೋಳು ಈ ಎರಡರ ಸುತ್ತಲೇ ಸುತ್ತುವ ಸಂದರ್ಭದಲ್ಲಿ 80ರ ದಶಕದಲ್ಲೇ ಬಂದ ಈ ಸಿನಿಮಾ ಪುರುಷಾಧಿಪತ್ಯ ಮೌಲ್ಯಗಳಿಗೆ ಸೆಡ್ಡುಹೊಡೆದು ನಿಂತಂಥಂಥದ್ದು.ಇಡೀ ಹಳ್ಳಿಗೆ ಹಳ್ಳಿಯೇ ಬಂದು ಸೋನ್‍ಬಾಯಿಯನ್ನು ಮನವೊಲಿಸಲು ಬಂದರೂ ಅವಳು ಹಿಂದೆಗೆಯುವುದಿಲ್ಲ.‘ಸುಬೇದಾರನೇ ನಿನ್ನ ಕೇಳಿದ್ದಾನೆಂದರೆ ಭಾಗ್ಯದ ಬಾಗಿಲೇ ನಿನ್ನ ಬಳಿಗೆ ಬಂದಿದೆ ಎಂದರ್ಥ.. ಒಪ್ಪಿಕೋ’ ಎಂಬ ಮನವೊಲಿಕೆ ಎಲ್ಲರಿಂದ. ಆದರೆ ಯಾವುದು ಭಾಗ್ಯ ಎಂಬ ಅರಿವಿದೆ ಸೋನ್‍ಬಾಯಿಗೆ. ಅನಕ್ಷರಸ್ಥೆಯಾದರೇನಂತೆ. ಅವಳ ಆತ್ಮಾಭಿಮಾನಕ್ಕೆ ಯಾವ ಅನಕ್ಷರತೆಯೂ ಇರಲಿಲ್ಲ. ಸಂಪೂರ್ಣ ಆ ಹಳ್ಳಿಯೇ ಸುಬೇದಾರನ ಮುಷ್ಟಿಯಲ್ಲಿ ಸಿಲುಕಿರುವ ಸಂದರ್ಭದಲ್ಲಿ ಸೋನ್‍ಬಾಯಿಯೊಬ್ಬಳೇ ಅಲ್ಲ ಅದನ್ನು ಎದುರಿಸಿ ನಿಂತದ್ದು. ಆ ಊರಿನ ಗಾಂಧೀವಾದಿ ಶಾಲಾ ಮಾಸ್ತರ ಮತ್ತು ಮುಖಿಯ ಪತ್ನಿ ಸರಸ್ವತಿ. ತನ್ನ ಮಗಳನ್ನು ಶಾಲೆಗೆ ಕಳಿಸುವುದರ ಮೂಲಕ, ಕ್ರಾಂತಿಕಾರಿ ಹೆಜ್ಜೆ ಇಡುತ್ತಾಳೆ. ಸೋನ್‍ಬಾಯಿಯನ್ನು ಕೆಣಕಿದ ಸುಬೇದಾರನ ವಿರುದ್ಧ ಇಬ್ಬರೂ ಬೇರೆಬೇರೆ ರೀತಿಯಲ್ಲಿ ಪ್ರತಿಭಟಿಸಿದವರೇ. ‘ಈ ಸುಬೇದಾರ ಇಂದು ಸೋನ್‍ಬಾಯಿ ಬೇಕೆನ್ನುತ್ತಾನೆ, ನಾಳೆ ನಿಮ್ಮ ನಿಮ್ಮ ಹೆಂಡತಿಯರನ್ನೇ ಕೇಳುತ್ತಾನೆ. ಆಗೇನು ಮಾಡುತ್ತೀರಿ. ಅದಕ್ಕೇ ಎಲ್ಲರೂ ಒಗ್ಗಟ್ಟಾಗಿ ವಿರೋಧಿಸೋಣ’ ಎಂದ ಮೇಷ್ಟ್ರಿಗೆ ಹಳ್ಳಿಗರಿಂದ ಹೊಡೆತ ಬೀಳುತ್ತದೆ. ಮುಖಿಯ ಹೆಂಡತಿ ಸರಸ್ವತಿ ಹಳ್ಳಿಯ ಹೆಂಗಳೆಯರನ್ನು ಒಟ್ಟುಸೇರಿಸಿ ಜಾಗಟೆ ಹೊಡೆಯುತ್ತ ಇಡೀ ಊರನ್ನು ಸುತ್ತುವಾಗ ಎದುರಿಗೆ ಇವಳ ಗಂಡ ಮುಖಿಯೇ ಬಂದಾಗ ಅವಳಿಗೆ ಬೀಳುವುದೂ ಗಂಡನಿಂದ ಹೊಡೆತ. ಹೀಗೆ ಪ್ರತಿಭಟನೆಯ ಕಾವು ಅಲ್ಲಲ್ಲಿ ಏರುತ್ತ ಇದ್ದರೂ ಇಡೀ ಹಳ್ಳಿಯನ್ನು ಅದು ವ್ಯಾಪಿಸುವುದಿಲ್ಲ. ಅದು ತೀವ್ರವಾಗಿ ಪ್ರಕಟಗೊಳ್ಳುವುದು ಅದೇ ಕಾರ್ಖಾನೆಯೊಳಗೆ.

ಎಲ್ಲರ ಪ್ರಯತ್ನವೂ ವಿಫಲವಾದಾಗ, ಕಡೆಯಲ್ಲಿ ಸುಬೇದಾರ್ ಬಲವಂತವಾಗಿ ಕಾರ್ಖಾನೆಯ ಬಾಗಿಲು ತೆರೆಸುತ್ತಾನೆ. ಎದುರಿಗೆ ಬಂದೂಕು ಹಿಡಿದು ನಿಂತ ಅಬುಮಿಯಾನನ್ನು ಗುಂಡಿಕ್ಕಿ ಕೊಲ್ಲಲಾಗುತ್ತದೆ. ಭಯದಿಂದ ಕತ್ತಿಹಿಡಿದು ನಿಂತ ಸೋನ್‍ಬಾಯಿಯ ಬಳಿ ವಿಜಯದ ನಗೆಯಿಂದ ಬೀಗುತ್ತಾ ಒಂದೊಂದೇ ಹೆಜ್ಜೆ ಇಡುತ್ತಾ ಬರುತ್ತಾನೆ ಸುಬೇದಾರ. ಆದರೆ ಅದ್ಯಾವ ಧೈರ್ಯವಿತ್ತೋ..ಸೋನ್‍ಬಾಯಿಯನ್ನು ಬೈದ ಅದೇ ಹೆಂಗಸರು, ಪ್ರಾಯದವರು, ಅಜ್ಜಿಯಂದಿರು, ಹುಡುಗಿಯರು ಎಲ್ಲ ಸೇರಿ ಸುಬೇದಾರನ ಮೇಲೆ ಇರಬರ ಮೆಣಸಿನ ಪುಡಿಯನ್ನು ಎರಚುತ್ತಾರೆ. ಉರಿ ತಡೆಯಲಾರದೇ ವಿಕಾರವಾಗಿ ಕೂಗುತ್ತಾ ಒದ್ದಾಡುತ್ತಾನೆ ಸುಬೇದಾರ. ಅವನ ಪ್ರತಿ ಒದ್ದಾಡುವಿಕೆಗೂ ಗಟ್ಟಿಯಾಗಿ ಕಡೆಗೂ ಗೆದ್ದೆನೆಂಬ ಭಾವದಲ್ಲಿ ನಿಲ್ಲುವ ಸೋನ್‍ಬಾಯಿ. ಒದ್ದಾಡುತ್ತ ಕುಸಿಯುವ ಸುಬೇದಾರ. ಅಲ್ಲಿಗೆ ಸಿನಿಮಾ ಕೊನೆಗೊಳ್ಳುತ್ತದೆ.

ಕಡೆಯಲ್ಲಿ ಸುಬೇದಾರ ಒದ್ದಾಡುತ್ತ ಕುಸಿಯುತ್ತಿದ್ದಂತೆ ಗೆಲುವಿನ ಭಾವ ಹೊತ್ತ ಸೋನ್‍ಬಾಯಿಯ ಅದೊಂದೇ ಅಭಿನಯ ಆ ಇಡೀ ಚಿತ್ರವನ್ನು ಮೇಲಕ್ಕೆತ್ತಿಬಿಡುತ್ತದೆ. ಇನ್ನೇನು ಅವನ ಕೈಗೆ ತಾನು ಸಿಕ್ಕಿಯೇ ಹೋದೆ ಎಂದು ಒದ್ದಾಡುತ್ತಿದ್ದವಳಿಗೆ ಈ ಅನಿರೀಕ್ಷಿತ ಘಟನೆ ಅವಳಲ್ಲಿ ಆತ್ಮವಿಶ್ವಾಸ ತಂದರೆ ಅವನಲ್ಲಿ ತಡೆಯಲಾರದ ಆಘಾತವುಂಟುಮಾಡುತ್ತದೆ. ಸಿನಿಮಾ ಮುಗಿದಮೇಲೂ ನಮ್ಮ ನೆನಪಲ್ಲುಳಿಯುವುದು ಕತ್ತಿಹಿಡಿದು ಗಟ್ಟಿತನದಿಂದ ನಿಂತ ಸೋನ್‍ಬಾಯಿ.

ಸಿನಿಮಾದಲ್ಲಿ ಸೋನ್‍ಬಾಯಿಯಾಗಿ ಸ್ಮಿತಾಪಾಟೀಲರ ಪ್ರಬುದ್ಧ ಅಭಿನಯ, ಅಬುಮಿಯಾನಾಗಿ ಓಂಪುರಿ, ಗಂಡನ ವಿರುದ್ಧ ನಿಂತು ಸೋನ್‍ಬಾಯಿಯ ಪರವಾಗಿ ಹೋರಾಡುವ ಮುಖಿಯ ಹೆಂಡತಿ ಸರಸ್ವತಿಯಾಗಿ ದೀಪ್ತಿನವಲ್, ಸರ್ವಾಧಿಕಾರತ್ವವನ್ನು ನರನಾಡಿಗಳಲ್ಲಿ ಆವಾಹಿಸಿಕೊಂಡಂತೆ ಅಭಿನಯಿಸಿರುವ ನಾಸಿರುದ್ದೀನ್ ಶಾ…ಹೀಗೆ ಒಬ್ಬರಿಗೊಬ್ಬರು ಪೈಪೋಟಿಯೆಂಬಂತೆ ನೀಡಿದ ಅಭಿನಯ ಸಿನಿಮಾದ ಯಶಸ್ಸಿಗೆ ಕಾರಣವಾಗಿದ್ದರೆ, ಸಿನಿಮಾ ಭಾಷೆ ಹೆಣ್ಣನ್ನು ನೋಡುವ ರೀತಿ ಈಗಲೂ ಬದಲಾಗಿರದ ಸಂದರ್ಭದಲ್ಲಿಯೇ ಮಹಿಳಾ ಅಸ್ಮಿತೆಯನ್ನು ಆ ಕಾಲದಲ್ಲೇ ಎತ್ತಿ ಹಿಡಿದಂಥ ಮಿರ್ಚ್‍ಮಸಾಲದಂಥ ಸಿನಿಮಾ ತುಂಬ ಭಿನ್ನವಾಗಿ ನಿಲ್ಲುತ್ತದೆ. ಜೊತೆಗೆ ಉಪ್ಪು ತಿಂದಮೇಲೆ ನೀರು ಕುಡಿಯಲೇ ಬೇಕು ಎಂಬಂತೆ ಮೆಣಸಿನ ಪುಡಿ, ನೀರು ಕುಡಿಸುವುದು ಈ ಎರಡನ್ನೂ ಸಿನಿಮಾಕ್ಕೆ ಬಳಸಿಕೊಂಡಿದ್ದು ತುಂಬ ಪರಿಣಾಮಕಾರಿಯಾಗಿದೆ.

ಭಾರತಿ ಹೆಗಡೆ

 

 

 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *