Latestದೇಶಕಾಲ

 ಕ್ರೀಡಾಗಸದಲ್ಲಿ ತಾರೆಗಳ ಗೊಂಚಲು – ಮಾಲತಿ ಭಟ್

ದೇಶದ ಕ್ರೀಡಾಗಸದಲ್ಲಿ ಮಿಂಚುತ್ತಿರುವ ಈ ತಾರೆಯರೆಲ್ಲ ಹೆಣ್ಣು ಮಕ್ಕಳಲ್ಲಿ ಆತ್ಮವಿಶ್ವಾಸ ಹುಟ್ಟಿಸುವ, ಭಾರತೀಯ ಸಮಾಜಕ್ಕೆ ಸಮಾನತೆಯ ಸಂದೇಶ ಕೊಡುವ ಬೆಳ್ಳಿ ಕಿರಣಗಳಾಗಿ ಗೋಚರಿಸುತ್ತಿದ್ದಾರೆ.

ಕಳೆದ ವಾರ ಅಸ್ಸಾಂನ ಬುಡಕಟ್ಟು ಜನಾಂಗದ 18ರ ಬಾಲೆ ಹಿಮಾ ದಾಸ್ ವಿಶ್ವ ಜ್ಯೂನಿಯರ್ ಅಥ್ಲೆಟಿಕ್ ಕ್ರೀಡಾಕೂಟದ 400 ಮೀ ಓಟದಲ್ಲಿ ಚಿನ್ನ ಗೆದ್ದಾಗ ಇಡೀ ದೇಶ ಸಂಭ್ರಮಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಹಿಮಾ ಯಶೋಗಾಥೆಯೇ ಅನುರಣಿಸುತ್ತಿತ್ತು. ಪುಟ್ಟ ಯುವತಿ ಹಿಮಾ ಚಿನ್ನ ಗೆದ್ದುದ್ದಕ್ಕಿಂತ ಹೆಚ್ಚಾಗಿ ಆಕೆ ಅಸ್ಸಾಂನ ಕುಗ್ರಾಮವೊಂದರಲ್ಲಿ ಭತ್ತ ಬೆಳೆಯುವ ರೈತನೊಬ್ಬನ ಮಗಳು ಎನ್ನುವುದು ಈ ಸುದ್ದಿಗೆ ಮತ್ತಷ್ಟು ಮಹತ್ವ ತಂದುಕೊಟ್ಟಿತ್ತು. ಈ ನಡುವೆ ಗೂಗಲ್ ಸರ್ಚ್ ಎಂಜಿನ್‍ನಲ್ಲಿ ಅತಿ ಹೆಚ್ಚು ಜನ ಹಿಮಾಳ ಜಾತಿಯನ್ನು ಹುಡುಕಿ ವಿಕೃತಿ ಮೆರೆದದ್ದೂ ಸುದ್ದಿಯಾಯಿತು.

ಹಾಗೆ ನೋಡಿದರೆ ಭಾರತದ ಕ್ರೀಡಾಂಗಣ ಮೊದಲಿನಂತಿಲ್ಲ. 80, 90ರ ದಶಕದಲ್ಲಿ ಶಾಲಾ ಮಕ್ಕಳಿಗೆ ಆದರ್ಶ ಮಹಿಳಾ ಕ್ರೀಡಾಪಟುಗಳ ಹೆಸರು ಹೇಳಬೆಕೆಂದರೆ ಪಿ.ಟಿ. ಉಷಾ ಹೊರತಾಗಿ ಯಾರೂ ನೆನಪಾಗುತ್ತಿರಲಿಲ್ಲ. ದಶಕದ ಹಿಂದಿನವರೆಗೂ ಕೊಡಗಿನ ಗ್ಲಾಮರಸ್ ತಾರೆ ಅಶ್ವಿನಿ ನಾಚಪ್ಪ, ಆಂಧ್ರದ ಕರ್ಣಂ ಮಲ್ಲೇಶ್ವರಿ ಹೊರತಾಗಿ ಯಾವುದೇ ಮಹಿಳಾ ಕ್ರೀಡಾಪಟುಗಳ ಹೆಸರೂ ಕಾಣಸಿಗುತ್ತಲೇ ಇರಲಿಲ್ಲ.

ಈಗ ಹಾಗಲ್ಲ. ಕಳೆದ ಒಂದು ದಶಕದಿಂದ ದೇಶದ ಕ್ರೀಡಾ ಕ್ಷೇತ್ರದಲ್ಲಿ ಸಾಲು, ಸಾಲು ಯುವತಿಯರು ಮಿಂಚುತ್ತಿದ್ದಾರೆ. ಕ್ರಿಕೆಟ್, ಹಾಕಿ, ಬ್ಯಾಡ್ಮಿಂಟನ್, ಟೆನಿಸ್, ಅಥ್ಲೆಟಿಕ್ಸ್….ಹೀಗೆ ಎಲ್ಲ ಕ್ರೀಡೆಗಳಲ್ಲೂ ನಮ್ಮ ದೇಸಿ ಹುಡುಗಿಯರು ಛಾಪು ಮೂಡಿಸಿದ್ದಾರೆ. ಅದು ಈಶಾನ್ಯ ಭಾರತದ ಬುಡಕಟ್ಟು ಜನಾಂಗಕ್ಕೆ ಸೇರಿದ ಮೇರಿ ಕೋಮ್ ಇರಬಹುದು ಅಥವಾ ಹೈದರಾಬಾದ್‍ನ ಮೇಲ್ಮಧ್ಯಮ ವರ್ಗಕ್ಕೆ ಸೇರಿದ ಸಾನಿಯಾ ಮಿರ್ಜಾ ಆಗಿರಬಹುದು.

ಈ ಹೆಣ್ಣುಮಕ್ಕಳೆಲ್ಲ ಕೇವಲ ತಮ್ಮ ತಮ್ಮ ಕ್ರೀಡೆಗಳಲ್ಲಿ ಪಾರಮ್ಯ ಮೆರೆದು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ದೇಶಕ್ಕೆ ಟ್ರೋಫಿಗಳನ್ನಷ್ಟೇ ಹೊತ್ತು ತರುತ್ತಿಲ್ಲ, ಅಸಂಖ್ಯಾತ ಅಪ್ಪ-ಅಮ್ಮಂದಿರಿಗೆ, ಬಾಲಕಿಯರಿಗೆ ಆದರ್ಶ ಮಾದರಿಯಾಗಿ ಕಾಣುತ್ತಿದ್ದಾರೆ. ಹೆಣ್ಣುಮಗುವನ್ನು ಭ್ರೂಣದಲ್ಲೇ ಚಿವುಟಿ ಹಾಕುವ ಪದ್ಧತಿ ಚಾಲ್ತಿಯಲ್ಲಿರುವ, ವರದಕ್ಷಿಣೆಗಾಗಿ ಯುವತಿಯರನ್ನು ಬೆಂಕಿ ಹಚ್ಚಿ ಕೊಲ್ಲುವ ಅನಿಷ್ಟಗಳನ್ನು ಆಹ್ವಾನಿಸಿಕೊಂಡಿರುವ ಭಾರತೀಯ ಸಮಾಜಕ್ಕೆ ಸಾಧನೆಯ ಹಾದಿ ತೋರುವ, ಸಮಾನತೆಯ ಸಂದೇಶ ಕೊಡುವ ಬೆಳ್ಳಿ ಕಿರಣಗಳಾಗಿ ಗೋಚರಿಸುತ್ತಿದ್ದಾರೆ.

ಹರಿಯಾಣಾದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಅತ್ಯಂತ ಹೆಚ್ಚು ಲಿಂಗ ಅಸಮಾನತೆ ಇರುವ ರಾಜ್ಯವದು. 80-90ರ ದಶಕದಲ್ಲಿ ಹೆಣ್ಣು ಭ್ರೂಣ ಹತ್ಯೆ ಮಿತಿಮೀರಿದ ಕಾರಣದಿಂದ ಅಲ್ಲಿನ ಯುವಕರು ಮದುವೆಗಾಗಲು ಬಿಹಾರ, ಬಂಗಾಳದ ಬಡ ಹುಡುಗಿಯರನ್ನು ಹಸುಗಳಂತೆ ಖರೀದಿಸಿ ತರುವ ಸ್ಥಿತಿ ಉಂಟಾಗಿತ್ತು. ಆದರೆ, ಅಂತಹ ಹರಿಯಾಣಾ ಈಗ ಬದಲಾಗುತ್ತಿದೆ. ಏಷ್ಯನ್ ಕ್ರೀಡಾಕೂಟ, ಕಾಮನ್‍ವೆಲ್ತ್ ಕ್ರೀಡಾಕೂಡ, ವಿಶ್ವ ಕುಸ್ತಿ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಸರಣಿಯಲ್ಲಿ ಗೆದ್ದುತಂದ ಪೋಗಟ್ ಸಹೋದರಿಯರು ಈಗ ಆ ರಾಜ್ಯದ ಐಕಾನ್ ಆಗಿದ್ದಾರೆ. 2016ರ ರಿಯೊ ಒಲಿಂಪಿಕ್ಸ್‍ನಲ್ಲಿ ಕುಸ್ತಿಯಲ್ಲಿ ಕಂಚು ಗೆದ್ದುಕೊಟ್ಟ  ರೋಹ್ಟಕ್‍ನ ಸಾಕ್ಷಿ ಮಲಿಕ್ ಕಣ್ಣಿನ ಹೊಳಪನ್ನು ಯಾರು ತಾನೇ ಮರೆಯಲು ಸಾಧ್ಯ. ಪೋಗಟ್ ಸಹೋದರಿಯರ ಕಥೆಯನ್ನಾಧರಿಸಿದ ‘ದಂಗಲ್’ ಚಲನಚಿತ್ರ ದೇಶಾದ್ಯಂತ ಮೂಡಿಸಿದ ಸಂಚಲನವೂ ದೊಡ್ಡದೇ. ಈ ಸಹೋದರಿಯರ ಅಪ್ಪ ಮಹಾವೀರ್ ಪೋಗಟ್ ತಮ್ಮ ಊರಿನ ಜನರ ಕೊಂಕು ಮಾತಿಗೆ ಬಗ್ಗದೇ ಹೆಣ್ಣುಮಕ್ಕಳಿಗೆ ಕುಸ್ತಿಯ ಪಟ್ಟುಗಳನ್ನು ಕಲಿಸಿದರು. ಸಾಕ್ಷಿ ಮಲಿಕ್ ಸಹ ಆರಂಭದ ದಿನಗಳಲ್ಲಿ ಗಂಡು ಮಕ್ಕಳಂತೆ ಅಂಗಿ, ಚೊಣ್ಣ ಧರಿಸಿ ಗಂಡು ಮಕ್ಕಳ ಕುಸ್ತಿ ಶಾಲೆಗೆ ಹೋಗುತ್ತಿದ್ದರು. ಹೈನುದಾರಿಕೆ, ಕೃಷಿಯನ್ನೇ ಅವಲಂಬಿಸಿರುವ ಹರಿಯಾಣಾದ ಹಳ್ಳಿಗಾಡಿನಲ್ಲಿ ಈಗ ಹೆಣ್ಣು ಮಗು ಹುಟ್ಟಿದರೇ ಮುಖ ಸಿಂಡರಿಸುವ ಪರಿಸ್ಥಿತಿಯಿಲ್ಲ.

ಈಶಾನ್ಯದ ಮೂಲೆಯ ಅಗರ್ತಲಾದ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ಸಾಧನೆಯೂ ಅಷ್ಟೇ ರೋಚಕ. ರಿಯೊ ಒಲಿಂಪಿಕ್ಸ್‍ನ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ ವಿಭಾಗದಲ್ಲಿ ನಾಲ್ಕನೆಯ ಸ್ಥಾನ ಪಡೆದ ದೀಪಾ ದೇಶದ ಅಸಂಖ್ಯಾತ ಜಿಮ್ನಾಸ್ಟಿಕ್ ಪಟುಗಳಿಗೆ ಈಗ ಆದರ್ಶ. ಜಿಮ್ನಾಸ್ಟಿಕ್‍ನಲ್ಲಿ ಒಲಿಂಪಿಕ್ಸ್‍ಗೆ ಅರ್ಹತೆ ಪಡೆದ ದೇಶದ ಮೊದಲ ಕ್ರೀಡಾಪಟು ಆಕೆ.  ಅಲ್ಲಿ ದೀಪಾ ಪ್ರದರ್ಶಿಸಿದ ‘ಪ್ರೊಡುನೋವಾ ವಾಲ್ಟ್’ ಅತ್ಯಂತ ಕಠಿಣವಾದದ್ದು. ಕಾಮನ್‍ವೆಲ್ತ್, ಏಷ್ಯನ್ ಗೇಮ್ಸ್, ವಿಶ್ವ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ಛಾಂಪಿಯನ್‍ಶಿಪ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಲೆಕ್ಕವಿಲ್ಲದಷ್ಟು ಪದಕಗಳು ಆಕೆಯ ಜೋಳಿಗೆ ಸೇರಿವೆ.

ನಮ್ಮ ಹೆಮ್ಮೆಯ ಮೇರಿ ಕೋಮ್ ಬಗ್ಗೆಯಂತೂ ಹೆಚ್ಚು ಹೇಳುವುದೇ ಬೇಡ. ಮಣಿಪುರದ ಗುಡ್ಡಗಾಡು ಜಿಲ್ಲೆಯಿಂದ ಬಂದ ಮೇರಿ ಕೋಮ್ ಪಾಲಕರು ಮತ್ತೊಬ್ಬರ ಗದ್ದೆಗಳಲ್ಲಿ ಜೀತದಾಳಂತೆ ದುಡಿಯುತ್ತಿದ್ದವರು. ಶಾಲಾ ಪಠ್ಯದಲ್ಲಿ ಹಿಂದುಳಿದಿದ್ದರೂ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಪುಟ್ಟ ಮೇರಿಗೆ ಅಥ್ಲೆಟಿಕ್ಸ್‍ನಲ್ಲಿ ಆಸಕ್ತಿ ಕುದುರಿತ್ತು. 1998ರ ಏಷ್ಯನ್ ಗೇಮ್ಸ್‍ನಲ್ಲಿ ಮಣಿಪುರಿ ಬಾಕ್ಸರ್ ಡಿಂಗ್ಕೊ ಸಿಂಗ್ ಚಿನ್ನದೊಂದಿಗೆ ಮರಳಿದಾಗ ಹದಿಹರೆಯದ ಮೇರಿ ಕೋಮ್‍ಗೆ ಬಾಕ್ಸಿಂಗ್ ಬಗ್ಗೆ ಆಕರ್ಷಣೆ ಹುಟ್ಟಿತು. ಭಾರತದ ಮಹಿಳಾ ಬಾಕ್ಸಿಂಗ್ ಇತಿಹಾಸದಲ್ಲಿ ಈಗ ಮೇರಿ ಕೋಮ್ ಧ್ರುವತಾರೆಯಾಗಿದ್ದಾರೆ.

ಜ್ಯೂನಿಯರ್ ವಿಂಬಲ್ಡನ್‍ನಂತಹ ಪ್ರಶಸ್ತಿ ಗೆದ್ದ ಸಾನಿಯಾ ಮಿರ್ಜಾ ಸಾಧನೆ ಕಡಿಮೆಯೇನಲ್ಲ. ದಶಕಗಳಿಗೂ ಹೆಚ್ಚು ಕಾಲ ಅಂತಾರಾಷ್ಟ್ರೀಯ ಟೆನಿಸ್‍ನಲ್ಲಿ ಮಿಂಚಿದ ಸಾನಿಯಾ ಆಂಧ್ರಪ್ರದೇಶ ಸರ್ಕಾರದ ‘ಹೆಣ್ಣು ಮಗು ಉಳಿಸಿ’ ಆಂದೋಲನದ ಬ್ರಾಂಡ್ ಅಂಬಾಸಡರ್ ಆಗಿದ್ದರು.

ಹಿರಿಯ ಬ್ಯಾಡ್ಮಿಂಟನ್ ಆಟಗಾರ ಪುಲ್ಲೇಲ ಗೋಪಿಚಂದ್ ಗರಡಿಯಲ್ಲಿ ಪಳಗಿರುವ ಸೈನಾ ನೆಹ್ವಾಲ್, ಪಿ.ವಿ. ಸಿಂಧು ಈ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದಿದ್ದಾರೆ. ರಿಯೊ ಒಲಿಂಪಿಕ್ಸ್‍ನಲ್ಲಿ ಬೆಳ್ಳಿ ಗೆದ್ದ ಸಿಂಧು ಸಾಧನೆಯೂ ಹಿಮಾಲಯದೆತ್ತರದ್ದು.

ನಗರ ಪ್ರದೇಶದ ಮೇಲು ಮಧ್ಯಮ ವರ್ಗಕ್ಕೆ ಸೇರಿದ ಸಾನಿಯಾ, ಸೈನಾ, ಸಿಂಧು ಒಂದೆಡೆಯಾದರೆ, ಬಿಲ್ಲುಗಾರಿಕೆಯಲ್ಲಿ ಒಲಿಂಪಿಕ್ಸ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಛಾಪು ಮೂಡಿಸಿದ ದೀಪಿಕಾ ಕುಮಾರಿ ಸಾಧನೆಯೂ ಗಮನಾರ್ಹವೇ. ರಾಂಚಿಯ ಆಟೊ ಚಾಲಕರೊಬ್ಬರ ಮಗಳಾದ ದೀಪಾಕುಮಾರಿ ಬುಡಕಟ್ಟುಗಳೇ ಹೆಚ್ಚಿರುವ ಜಾರ್ಖಂಡ್‍ನ ಹೆಣ್ಣುಮಕ್ಕಳಿಗೆ ಮಾದರಿಯಾಗಿದ್ದಾರೆ

ಕಳೆದ ವರ್ಷ ಇಂಗ್ಲೆಂಡ್‍ನಲ್ಲಿ ನಡೆದ ಮಹಿಳಾ ಕ್ರಿಕೆಟ್ ವಿಶ್ವಕಪ್‍ನಲ್ಲಿ ರನ್ನರ್ ಅಪ್ ಆದ ಭಾರತ ತಂಡದ ಕ್ರಿಕೆಟ್ ಕಲಿಗಳು ಸಹ ಹೊಸ ಭರವಸೆಯೊಂದನ್ನು ಕಟ್ಟಿಕೊಟ್ಟಿದ್ದಾರೆ. ದೇಶದ ಕ್ರೀಡಾಗಸದಲ್ಲಿ ಮಿಂಚುತ್ತಿರುವ ಈ ತಾರೆಯರೆಲ್ಲ ಅಸಂಖ್ಯಾತ ಹೆಣ್ಣು ಮಕ್ಕಳಲ್ಲಿ ಆತ್ಮವಿಶ್ವಾಸ ಹುಟ್ಟಿಸುವ ಸೆಲೆಗಳಂತೆ ಕಾಣುತ್ತಿದ್ದಾರೆ.

 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

2 thoughts on “ ಕ್ರೀಡಾಗಸದಲ್ಲಿ ತಾರೆಗಳ ಗೊಂಚಲು – ಮಾಲತಿ ಭಟ್

  • Pramod g.k

    ಮಾಲತಿ ಮೇಡಂ, ಲೇಖನ ಚೆನ್ನಾಗಿದೆ

    Reply

Leave a Reply to Pramod g.k Cancel reply

Your email address will not be published. Required fields are marked *