Uncategorizedಕವನ ಪವನಸಾಹಿತ್ಯ ಸಂಪದ

ಕವನ ಪವನ/ ಅಮ್ಮ… -ಮಮತಾ ಅರಸೀಕೆರೆ

ಅಮ್ಮ ….
1
ನಾಲ್ಕುಹೆಜ್ಜೆ ನಡೆದೆ
ಕಾಲಲ್ಲಿ ಅಗಾಧ ಸೋಲು
ಅಮ್ಮ ಅದ್ಹೇಗೆ ಇಷ್ಟು ದೂರ
ಸವೆಸಿದಳೋ
2
ನನ್ನ ಅಂಗೈ ಸವರಿದ
ಕರವಸ್ತ್ರ ಸದಾ ಒದ್ದೆ ಒದ್ದೆ
ಅಮ್ಮನ ಸೆರಗೆಂದೂ
ಹಸಿ ಬೆಚ್ಚಗೆ
3
ಒಲೆಯ ಮೇಲಿಟ್ಟ ಅನ್ನ
ಒಂದೇ ಬಾರಿಗೆ ಸೀದಿತ್ತು
ಅಮ್ಮ ದಾಸೋಹವನ್ನೇ
ನಡೆಸಿದ್ದಳು
4
ಒಂದೇ ಕೂಸಿಗೆ ಮೊಲೆಯಲ್ಲಿ ಹಾಲಿಲ್ಲ.
ಅಮ್ಮ ಹತ್ತು ಹೆತ್ತಾಕೆ
ಹಾಲ್ಗಡಲಲ್ಲೇ ಅದ್ದಿದ್ದಳು
5
ಉಳಿಪೆಟ್ಟು ತಿನ್ನುವಾಗಲೆಲ್ಲಾ ಚೀರಿದ್ದೆ
ಅಮ್ಮ ಶಿಲ್ಪಿ ಕಡೆದ ಮೂರ್ತಿ
6
ಕೆಂಗಣ್ಣು, ಅಸಹನೆಗೆ
ಮೈಯೆಲ್ಲಾ ತಹತಹ
ಅಮ್ಮನ ನೋಟಕ್ಕೆ
ಕಲ್ಲೂ ಕರಗಿತ್ತು
7
ಕೊರಳಿಗೆ ಬಿದ್ದ ಪದವಿ ಹಾರಕ್ಕೆ
ಅಹಂಕಾರ ಅಟ್ಟ ಏರಿತ್ತು
ಅಮ್ಮನ ಅನುಭವದೆದುರು
ಬಣ್ಣ ಅಳಿಸಿಹೋಗಿತ್ತು
8
ಬದುಕಿನಾಘಾತಕ್ಕೆ
ಸತ್ತು ಹುಟ್ಟಿದ್ದು ಅದೆಷ್ಟು ಬಾರಿಯೋ
ಯಮನನ್ನೂ ಅಟ್ಟಿದ್ದ
ಅಮ್ಮನ ಕಂಗಳಲ್ಲಿ
ಅದೆಷ್ಟು ಜೀವಂತಿಕೆ!

-ಮಮತಾ ಅರಸೀಕೆರೆ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *