Uncategorizedಕಥಾ ಕ್ಷಿತಿಜಸಾಹಿತ್ಯ ಸಂಪದ

ಕಥಾ ಕ್ಷಿತಿಜ/ ಭ್ರೂಣ – ಟಿ.ಎಸ್. ಶ್ರವಣ ಕುಮಾರಿ

ಸಿಡಿಲಿನ ಹೊಡೆತಕ್ಕೆ ಗುಲ್ ಮೊಹರ್ ಪಕ್ಕದಲ್ಲಿದ್ದ ತೆಂಗಿನ ಮರ ಮುರಿದು ಬಿದ್ದಿತ್ತು. ಆ ಹೊಡೆತಕ್ಕೆ ಕೊಂಬೆಯ ಜೊತೆಗೆ ಆ ಹಕ್ಕಿಗಳ ಗೂಡೂ ಕೆಳಗೆ ಬಿದ್ದು ಮೊಟ್ಟೆಗಳೆಲ್ಲಾ ಒಡೆದುಹೋಗಿದ್ದವು. ರೆಕ್ಕೆ ಪುಕ್ಕ ತರಿದಿದ್ದ ಆ ಹಕ್ಕಿಗಳೆರಡರ ಧ್ವನಿಯೂ ಉಡುಗಿಹೋಗಿ ಆ ಮೊಟ್ಟೆಗಳ ಮುಂದೆ ರೋದಿಸುತ್ತಿದ್ದಂತಿತ್ತು. ರಾತ್ರಿಯೆಲ್ಲಾ ಇಬ್ಬರಿಗೂ ನಿದ್ರೆ ಬರಲಿಲ್ಲ… ಅವೆರಡೂ ಹಕ್ಕಿಗಳು ಚಿವ್ ಚಿವ್ ಎನ್ನುವುದು ಕೇಳುತ್ತಲೇ ಇತ್ತು…

ಸ್ಮಿತಾ ನಾಲ್ಕನೆಯ ಬಾರಿಗೆ ಬಂದು ವರಾಂಡದ ಕಿಟಕಿಯಿಂದ ಇಣಕಿದಳು. ಈಗಲೂ ಎದುರಿಗಿದ್ದ ಉದ್ದಾನುದ್ದದ ರಸ್ತೆಯಲ್ಲಿ ಗಂಗಮ್ಮ ಬರುವುದು ಕಾಣುತ್ತಿಲ್ಲ ʻಸಮಯವೆಂದರೆ ಎಲ್ಲರೂ ಮಾಣಿಕ್ಯಗಳೇ, ನಿನ್ನೆ ನಾಲ್ಕು ನಾಲ್ಕು ಸಲ ಗಿಣಿಗೆ ಹೇಳಿದಾಗೆ ಹೇಳಿದೀನಿ. ಏನೋ ಕೆಲಸ್ವಿದೆ; ಎಂಟೂವರೆಗೆ ಮನೆ ಬಿಡ್ಬೇಕು. ಏಳು ಗಂಟೆಗೇ ಬಂದುಬಿಡು ಅಂತ. ಏಳೂವರೆಯಾದ್ರೂ ಪತ್ತೆಯಿಲ್ಲ. ಪಾತ್ರೆ ನೋಡಿದ್ರೆ ರಾಶಿ ಬಿದ್ದಿದೆ. ಒರೆಸದಿದ್ರೂ ಬೇಡ, ಕಸವಾದ್ರೂ ಗುಡಿಸ್ಬೇಕಲ್ವಾʼ ಮನದಲ್ಲೇ ಬೈದುಕೊಂಡಳು. ಮೊದಲೇ ಮನಸ್ಸು ಸರಿಯಿಲ್ಲ; ಇಂತಹ ಪಿರಿಪಿರಿಗಳು ಬೇರೆ… ಥತ್! ನಾಗೇಶ ಬೆಳಗ್ಗೆ ಕಾಫಿ ಕುಡಿದವನೇ ಮನೆ ಬಿಟ್ಟಿದ್ದಾನೆ. ಹೊರಡುವ ಮುಂಚೆ ಶೂಸ್ ಕಟ್ಟಿಕೊಳ್ಳುತ್ತಾ “ಒಂಭತ್ತು ಗಂಟೆಯೊಳಗೆಲ್ಲಾ ಹಾಸ್ಪಿಟಲ್ಗೆ ಬಂದ್ಬಿಡು. ಅಷ್ಟರೊಳಗೇ ನಾನೂ ಅಲ್ಲಿರ್ತೀನಿ. ಎಲ್ಲಾನೂ ವಿಚಾರಿಸ್ಕೊಂಡು ಬರೋಣ. ಏನೋ ನೆಪ ಹೇಳ್ಕೊಂಡು ಲೇಟ್ ಮಾಡ್ಬೇಡ. ಆಮೇಲೆ ಡಾಕ್ಟ್ರು ಬ್ಯುಸಿಯಾಗ್ಬಿಟ್ರೆ ಕಷ್ಟ” ಎಂದವನು ಸ್ಮಿತಾಳ ಕಡೆಗೆ ತಿರುಗಿದರೆ ಅವಳು ಬಾಲ್ಕನಿಯಿಂದ ಹೊರನೋಡುತ್ತಾ ಕಣ್ಣೊರಸಿಕೊಳ್ಳುತ್ತಿದ್ದಳು.

ಎದ್ದು ಬಂದು ಅವಳನ್ನು ತನ್ನ ಕಡೆಗೆ ತಿರುಗಿಸಿಕೊಂಡವನು “ಇನ್ನೂ ನಿಂಗೆ ಬೇಜಾರಾ ಸ್ಮಿತ್, ನೋಡು ನಮ್ಮ ಮದುವೆ ಆಗಿ ಇನ್ನೂ ಆರು ತಿಂಗ್ಳಾಯ್ತು ಅಷ್ಟೇ. ನಮ್ಗಿನ್ನೂ ಎಷ್ಟು ಮಹಾ ವಯಸ್ಸು. ನಿಂಗೆ ಇಪ್ಪತ್ತೈದು ನಂಗೆ ಮೂವತ್ತು ದಾಟಿಲ್ಲ. ಈಗ್ಲೇ ಮಗು ಬೇಕೂನ್ನೋಕೆ ಏನವಸರ ಇದೆ ಹೇಳು? ಒಂದೆರಡು ವರ್ಷವಾದ್ರೂ ಹಾಯಾಗಿ ಎಲ್ಲಾ ಕಡೆ ತಿರುಕ್ಕೊಂಡು ಬರೋಣ. ಮದುವೆಗೆ ಮುಂಚೇನೇ ಹನಿಮೂನ್ಗೆ ಯೂರೋಪ್ ಟ್ಯೂರ್ ಹೋಗೋಣ ಅಂತ ಪ್ಲಾನ್ ಮಾಡ್ದವ್ರು ತಕ್ಷಣದಲ್ಲೇ ಬೇರೆ ಪ್ರಾಜೆಕ್ಟ್ಗೆ ಹೋಗ್ಬೇಕಾಗಿ ಬಂತೂಂತ ಕ್ಯಾನ್ಸಲ್ ಮಾಡ್ಬೇಕಾಯ್ತು. ನಿಂಗೇ ಗೊತ್ತಲ್ವಾ. ಮತ್ತೆ ಮುಂದಿನ ತಿಂಗ್ಳು ಕಡೇಗೆ ಬುಕ್ ಮಾಡಿದ್ದಾಗಿದೆ. ಅಷ್ಟರೊಳಗೆ ಇದನ್ನ ಮುಗಿಸ್ಕೊಂಡು ಬಿಟ್ರೆ ನಿಶ್ಚಿಂತೆ ಅಲ್ವಾ?” ಅವಳನ್ನು ತೋಳೊಳಗೆ ಕರೆದುಕೊಂಡು ಮಗುವಿನಂತೆ ರಮಿಸುತ್ತಾ ಕೇಳಿದ್ದ. “ಎಲ್ಲಾ ಸರಿ, ಆದ್ರೂನೂ… ನಂಗ್ಯಾಕೋ ಮನಸ್ಸಾಗ್ತಿಲ್ಲ” ಸ್ಮಿತಾ ಅವನ ಎದೆಗೊರಗಿ ಥೇಟ್ ಮಗುವಿನಂತೇ ಹೇಳಿದ್ದಳು. “ನಿಜ, ಬೇಜಾರಾಗತ್ತೆ. ಆದ್ರೆ ಯೋಚ್ನೆ ಮಾಡು. ನಾವು ಫ್ಲಾಟ್ಗೆ ಬುಕ್ ಮಾಡಾಗಿದೆ. ಇನ್ನೆರಡು ವರ್ಷದಲ್ಲಿ ಕೈಗೆ ಬರತ್ತೆ. ಮೊದ್ಲು ಮನೆ, ಆಮೇಲೆ ಮಗು ಆದ್ರೆ ಚೆನ್ನಾಗಿರತ್ತಲ್ವಾ. ನಿಂಗೆ ನಾವಿಬ್ರೇ ಇನ್ನೊಂದೆರಡು ವರ್ಷ ಹಾಯಾಗಿರೋಣ ಅನ್ನಿಸಲ್ವಾ, ಇನ್ನೂ ನಮ್ಮ ಹನಿಮೂನೇ ಮುಗಿದಿಲ್ಲ” ರಮಿಸುತ್ತಾ ಹೇಳಿ “ಃe bಡಿಚಿve, ಈಗಿನ್ನೂ ಎರಡು ತಿಂಗ್ಳೂ ತುಂಬಿಲ್ಲ. ಈಗ್ಲೇ ಆದ್ರೆ ಹೆಚ್ಚು ತೊಂದರೆಯಾಗಲ್ಲಂತೆ. ಡಾಕ್ಟ್ರತ್ರ ಕೇಳೋಣ. ಇವತ್ತೇ ಆದ್ರೆ ಮಾಡ್ಬಿಡ್ಲಿ. ಹೆದರ್ಬೇಡ; ನಾನಿದೀನಿ ನಿನ್ನ ಜೊತೆ” ಎಂದು ಬೆನ್ನು ತಟ್ಟಿ ಬೇಗನೇ ಮನೆಬಿಟ್ಟಿದ್ದ. “ಆಫೀಸಿಗೆ ಹೋಗಿ ಒಂದರ್ಧ ಗಂಟೆ ಅಷ್ಟೇ, ಒಂದು ಇಂಪಾರ್ಟೆಂಟ್ ಕೆಲ್ಸ ಇದೆ. ಮುಗಿಸ್ಕೊಂಡು ಅಲ್ಲಿಗೇ ಬರ್ತೀನಿ. ಎಂಟೂ ಕಾಲಿಗೇ ಊಬರ್ ಬುಕ್ ಮಾಡ್ಬಿಡು; ಮರೀಬೇಡ” ಎರಡೆರಡು ಮೆಟ್ಟಲನ್ನು ಒಮ್ಮೆಗೇ ಇಳಿಯುತ್ತಾ ಮತ್ತೊಮ್ಮೆ ಹೇಳಿ ಕಾರನ್ನು ಆಚೆಗೆ ತೆಗೆದಿದ್ದ.

ಕರೆಗಂಟೆಯ ಸದ್ದಾಯಿತು. ʻಬಂದಳೇನೋʼ ಎಂದುಕೊಂಡು ಸಿಂಕಿನಲ್ಲಿ ಮುಖ ತೊಳೆದುಕೊಂಡು ಒರಸಿಕೊಳ್ಳುತ್ತಾ ಬಾಗಿಲು ತೆರೆದಳು. ದಿನವೂ ಉತ್ಸಾಹದ ಚಿಲುಮೆಯ ಹಾಗೇ ಬರುತ್ತಿದ್ದ ಗಂಗಮ್ಮ ಇವತ್ಯಾಕೋ ಮುಖ ಸಪ್ಪಗೆ ಮಾಡಿಕೊಂಡೇ ಒಳಗೆ ಕಾಲಿಟ್ಟಳು. ಅತ್ತ ಹಾಗೂ ಇತ್ತು. “ಏನಾಯ್ತು ಗಂಗಮ್ಮಾ? ಅತ್ತಿದೀಯ ಅನ್ಸುತ್ತೆ ಮುಖ ನೋಡಿದ್ರೆ” ಕೇಳುತ್ತಾ ಅವಳನ್ನೇ ನೋಡಿದಳು. “ಅಯ್ಯೋ ನೋಡು ಸ್ಮಿತಾಮ್ಮ, ಆ ರಂಡೆ ಹಂಗೆ ಮಾಡ್ಬೋದಾ” ಮತ್ತೆ ಕಣ್ಣೀರು ಒರಸಿಕೊಳ್ಳುತ್ತಲೇ ಕೇಳಿದಳು. ಏನೂ ಅರ್ಥವಾಗದೇ, “ಯಾರವಳು? ಏನು ಹೇಳ್ತಿದೀಯಾ” ಎಂದಳು ಸ್ಮಿತಾ. “ನೀನು ನಿನ್ನೇನೇ ಬೇಗ್ಬಾ ಅಂದಿದ್ಯಲ್ಲಾಂತ ನಾನೂ ಬೇಗ್ನೇ ಮನೇಂದ ಒರಟ್ನಿ. ಅಲ್ಲಿ ನಮ್ ಬಸ್ಟಾಪ್ ತಾಕೆ ಕಸದ ತೊಟ್ಟಿ ಐತಲ್ಲಾ, ಅಲ್ಲಿ ಜನ್ವೋ ಜನ. ಏನಪ್ಪಾ ಆಯ್ತು ನೋಡುಮಾ ಅಂದ್ರೆ ಹುಟ್ಟಿದ್ ಮಗೀನ ಸಾಯ್ಸಿ ಅದ್ರಾಗೆ ಬಿಸಾಡವ್ರೆ. ಅದ್ಯಾವ ಪಾಪಿ ರಂಡೆ ಇರ್ಬೈದು! ಎಂಥಾ ಚಂದಾಗದೆ ಮಗೂ ಅಂತೀ, ಬೆಳ್ಳುಗೆ ಬೆಣ್ಣೆ ಮುದ್ದೆ ಅಂಗದೆ. ಅಂತಾ ಅಸುಮಗೀನ ಸಾಯ್ಸಾಕೆ ಎಂಗಾರಾ ಮನಸ್ಬಂತು ಕಾಣವ್ವಾ… ಗಂಡ್ಮಗು ಕಣ್ ಸ್ಮಿತಾಮ್ಮ. ಇನ್ನೂ ಹೊಕ್ಕುಳ್ಬಳ್ಳಿ ಸೈತಾ ಬಿದ್ದಿಲ್ಲ. ಕಸದ ತೊಟ್ಟೀಲೆಸ್ದವ್ರಲ್ಲಾ; ಮನ್ಷರಾ ಅವ್ರು… ಅಂಗ್ ತೊಟ್ಟೀಲೆಸ್ಯೋ ಬದ್ಲು ಬದ್ಕಿರಾ ಕೂಸ್ನ ನಂಮನೆ ಬಾಕ್ಲಲ್ಲಿ ಇಟ್ಟೋಗಿದ್ರೆ ನಾ ಸಾಕ್ತಿರ್ನಿಲ್ವಾ. ನಾ ತಿನ್ನೋದ್ರಾಗೊಂದು ತುತ್ತು ಮಗೀಗೆ ಇಟ್ಟಿದ್ರೆ ಎಂಗೋ ಬೆಳ್ಕತಿತ್ತು. ನಂಗ್ಯಾಕೋ ಬಲ್ ದುಃಖವಾಗೋಯ್ತು ಕಣವ್ವಾ” ಕಣ್ಣೊರಸಿಕೊಳ್ಳುತ್ತಲೇ ಕಸ ಗುಡಿಸತೊಡಗಿದಳು…

ಸ್ಮಿತಾಗೆ ಹೊಟ್ಟೆಯೆಲ್ಲಾ ಕಲಕಿದಂತಾಯಿತು. ಉಮ್ಮಳಿಸಿ ಬಂದು ಬೆಳಗ್ಗೆ ಕಾಫಿಯ ಜೊತೆ ತಿಂದಿದ್ದ ಬ್ರೆಡ್ ಬಾಯಿಗೇ ಬಂದ ಹಾಗಾಗಿ ತಕ್ಷಣವೇ ಬಾತ್ರೂಮಿಗೆ ಓಡಿ ವಾಶ್ಬೇಸಿನ್ನಿನಲ್ಲಿ ಹೊಟ್ಟೆಯಲ್ಲಿದ್ದದ್ದನ್ನೆಲ್ಲಾ ಬಗ್ಗಿಸಿ ಸುಸ್ತಾಗಿ ಮುಚ್ಚಿದ ಬಾಗಿಲಿಗೆ ಒರಗಿ ನಿಂತಳು. ಎರಡು ನಿಮಿಷ ಸುಧಾರಿಸಿಕೊಂಡು ʻಆಗಲೇ ಎಂಟು ಗಂಟೆಯಾಯ್ತೇನೋ, ಇನ್ನರ್ಧ ಗಂಟೆಗೆ ಹೊರಡಬೇಕುʼ ಎಂದುಕೊಳ್ಳುತ್ತಾ ಹೊರಬಂದು ಬಟ್ಟೆಗಳನ್ನು ತೆಗೆದಿಟ್ಟುಕೊಂಡು “ಇವತ್ತು ಒರಸೋದೇನೂ ಬೇಡ ಗಂಗಮ್ಮ, ಗುಡಿಸಾದ ತಕ್ಷಣ ಪಾತ್ರೆ ಮಾತ್ರಾ ತೊಳೆದಿಟ್ಬಿಡು ಸಾಕು. ನಾನು ಬೇಗ ಸ್ನಾನ ಮುಗ್ಸಿ ಬರ್ತೀನಿ. ಬಂದು ನಿಂಗೆ ಕಾಫಿ ಕೊಡ್ತೀನಿ” ಎನ್ನುತ್ತಾ ರೂಮಿನ ಬಾಗಿಲನ್ನು ಹಾಕಿಕೊಂಡಳು. ಸ್ನಾನ ಮಾಡುವಾಗಲೂ ಯಾಕೋ ಕಣ್ಮುಂದೆ ಗಂಗಮ್ಮ ಹೇಳಿದ ಮಗುವೇ ಬಂದ ಹಾಗಾಯಿತು. ಕಸ, ಕಡ್ಡಿ, ಹಳೆ ಬಟ್ಟೆ, ಪೇಪರ್ರು, ಒಡಕಲು ಮುರುಕುಲು ಸಾಮಾನುಗಳು, ಕೊಳೆತ ತರಕಾರಿ, ಹಣ್ಣು, ಬಾಯಿ ಹಾಕೋ ನಾಯಿ, ಹಂದಿ… ಕೆಟ್ಟ ವಾಸನೆಗಳ ಮಧ್ಯೆ ಸತ್ತ ಕೂಸು…. ನನ್ನ ಹೊಟ್ಟೆಯಲ್ಲಿರುವ ಪುಟ್ಟ ಮೊಳಕೆಯೂ……?? ಮತ್ತೆ ಬಗ್ಗಿಸುವ ಹಾಗಾದರೂ, ಹೊಟ್ಟೆಯಲ್ಲಿ ಏನೂ ಇಲ್ಲದ್ದರಿಂದ ಆಚೆಗೆ ಬರಲಿಲ್ಲ… ಹೇಗೋ ಸ್ನಾನ ಮುಗಿಸಿಕೊಂಡು ಹೊರಬಂದು ಹೊರಡಲು ಸಿದ್ಧವಾದಳು.

ಗಂಗಮ್ಮ ಪಾತ್ರೆ ತೊಳೆಯುವುದು ಮುಗಿದಿತ್ತು. ಸ್ಮಿತಾ ಕಾಫಿ ಬಿಸಿಗಿಡಲು ಹೋದರೆ “ಕಾಫಿ ಬ್ಯಾಡ ಬಿಡವ್ವಾ, ಯಾಕೋ ಏನೂ ಬೇಡಾನ್ನೋಂಗಾಗದೆ. ನಾಳೆ ವತಾರೆ ಬಂದು ಎರಡ್ದಿನದ್ದೂ ಬಟ್ಟೆ ಒಗೀತೀನಿ” ಎನ್ನುತ್ತಾ ಹೊರಟಳು. ʻಹೋಗ್ಲಿ ಬಿಡು, ನಂಗೂ ಮನಸ್ಸೇ ಸರಿಯಿಲ್ಲʼ ಅಂದುಕೊಂಡಳು ಸ್ಮಿತಾ. ಮೆಟ್ಟಲಿಳಿಯುವಾಗಲೂ ಗಂಗಮ್ಮ ಗೊಣಗುಟ್ಟಿಕೊಂಡು ಯಾರೋ ಕಾಣದವಳನ್ನು ಬೈಯುತ್ತಿರುವುದು ಕೇಳುತ್ತಲೇ ಇತ್ತು. ಆಗಲೇ ಎಂಟೂ ನಲವತ್ತು. ಇನ್ನೂ ಊಬರ್ ಬುಕ್ ಮಾಡಿಲ್ಲವೆಂದು ಜ್ಞಾಪಕ ಬಂದು ತಕ್ಷಣ ಮೊಬೈಲ್ ತೆರೆದಳು. ಐದು ನಿಮಿಷದ ಹಾದಿಯಲ್ಲೇ ಒಂದು ಇತ್ತು; ತಕ್ಷಣ ಬುಕ್ ಮಾಡಿ ಪರ್ಸನ್ನು, ಮನೆಯ ಕೀಯನ್ನು ತೆಗೆದುಕೊಳ್ಳುವಾಗಲೇ ನಾಗೇಶನ ಫೋನ್ ಬಂತು. “ಹೊರಟ್ಯಾ ಇಲ್ವಾ ಆಗ್ಲೇ ಎಂಟೂ ಮುಕ್ಕಾಲಾಗ್ತಾ ಬಂತು. ನಾನು ಇನ್ನು ಐದು ನಿಮಿಷದಲ್ಲಿ ಅಲ್ಲಿರ್ತೀನಿ” ಎಂದ. “ಹೊರಟೆ, ಊಬರ್ಗೆ ಕಾಯ್ತಿದೀನಿ” ಎನ್ನುತ್ತಾ ಮೆಟ್ಟಲಿಳಿದಳು. ಕಾರಲ್ಲಿ ಕೂತಮೇಲೂ ಯಾಕೋ ʻನಾನ್ಯಾಕೆ ಹೊರ್ಟೆ? ಇಲ್ಲ, ನಂಗೆ ಮನಸ್ಸಿಲ್ಲ. ಬೇಡಾಂದ್ರೆ ಬೇಡ ಕಣೋʼ ಅಂತ ಅವನ ಹತ್ರ ಹೇಳ್ಬಿಡಬಹುದಿತ್ತಲ್ವಾ ಅನ್ನಿಸಿಬಿಟ್ಟಿತು. ಏನಾಗ್ತಿತ್ತು? ಅವ್ನಿಗೊಂದ್ಸ್ವಲ್ಪ ನಿರಾಸೆ ಆಗ್ತಿತ್ತು. ಕೋಪಾನೂ ಬರ್ತಿತ್ತೇನೋ… ಆದ್ರೂ ಇದು ನಮ್ಮ ಕುಡೀನೇ ಅಲ್ವಾ… ನಾವು ಮಾಡ್ಕೊಂಡಿದ್ದರ ಜವಾಬ್ದಾರಿ ನಾವೇ ಹೊರಬೇಕು ತಾನೇ… ಇನ್ನೆರಡು ವರ್ಷ ಹಾಯಾಗಿರೋಣ ಅನ್ನೋದಕ್ಕೆ, ನಮ್ಮದೇ ವೈಯಕ್ತಿಕ ಕಾರಣಗಳಿಗೆ ನಾವು ಒಂದು ಜೀವಾನ ನಿವಾರಿಸ್ಕೊಳ್ಳೋದು ಎಷ್ಟು ಸರಿ? ಎಷ್ಟು ಸಲ ಇದನ್ನ ಹೇಳಿದ್ರೂ ಅವ್ನಿಗೆ ಅವನದ್ದೇ ಹಟ… ಈಗ ನಾನು ಬೇಡ ಅಂದಿದ್ದನ್ನೇ ಹಿಡ್ಕೊಂಡು, ಕೋಪ ಮಾಡ್ಕೊಂಡು ನಮ್ಮ ಸಂಬಂಧದ ಮಧ್ಯೆ ಬಿರುಕು ಬಿಟ್ರೆ… ನಾಳೆ ಏನ್ ಪರಿಸ್ಥಿತಿ ಬಂದ್ರೂ ಎಲ್ಲಕ್ಕೂ ನನ್ನೇ ದೂರ್ತಾ ಕೂತ್ರೆ… ಹೊಸತೊಂದು ಜೀವ ಬರುವಾಗ ಇಬ್ರಿಗೂ ಅದರ ಬಗ್ಗೆ ಅಕ್ಕರಾಸ್ತೆ ಇರ್ಬೇಕು. ಆದ್ರೆ ʻಹೀಗಿರ್ಬೋದುʼ ಅಂದ ತಕ್ಷಣ ಅವನ ಮುಖ ಹೇಗೆ ಕಪ್ಪಿಟ್ಟು ಹೋಯ್ತು. ʻಈಗ್ಲೇ ಆಗೋದು ನಂಗೊಂಚೂರೂ ಇಷ್ಟವಿಲ್ಲʼ ಅಂತ ಎಷ್ಟು ಖಂಡ ತುಂಡವಾಗಿ ಹೇಳ್ದ… ನಂಗೂ ಈಗ್ಲೇ ಬೇಕು ಅಂತೇನಿರ್ಲಿಲ್ಲ. ಆದ್ರೆ ಈಗಾಗಿರೋದನ್ನ ತೆಗೆಸ್ಬೇಕು ಅನ್ನೋ ಮನಸ್ಸು ಬರ್ತಿಲ್ಲ…… ಅವ್ನಿಗೆ ಹೇಗೆ ಅರ್ಥ ಮಾಡಿಸ್ಬೇಕೂ ಅಂತ್ಲೇ ತಿಳೀತಿಲ್ಲ… ಅದು ಹೇಗೋ ಮಾಡಿ ಅವ್ನಿಗೆ ನನ್ನನ್ನ ಒಪ್ಸೋ ಕಲೆ ಗೊತ್ತಿದೆ… ಅಥ್ವಾ ನಾನೇ ಸುಲಭದಲ್ಲಿ ಸೋತ್ಬಿಡ್ತೀನಾ?!ʼ. ನರ್ಸಿಂಗ್ ಹೋಮಿನ ಮುಂದೆ ಕಾರು ನಿಂತಿತು.

ನಾಗೇಶ ಗೇಟಿನ ಮುಂದೆಯೇ ಶತಪತ ಹಾಕುತ್ತಿದ್ದ. ʻಹತ್ತು ನಿಮಿಷ ಲೇಟಾಗಿದೆ ಅವನಿಗೆ ಕೋಪ ಬಂದಿದೆ…ʼ ಎನ್ನುವುದು ಅವನು ಓಡಾಡುತ್ತಿದ್ದ ರೀತಿಯಲ್ಲೇ ಅರ್ಥವಾಗಿಹೋಯಿತು. “ಯಾಕೆ ಲೇಟು, ಆಗ್ಲೇ ಇಬ್ರು ಪೇಶೆಂಟು ಬಂದಾಗಿದೆ. ಇನ್ನು ಅರ್ಧ ಗಂಟೇನಾದ್ರೂ ಲೇಟಾಗುತ್ತೆ ಈಗ” ಎಂದು ಸಿಡುಕುತ್ತಾ ಅವಳೆಡೆಗೆ ತಿರುಗಿದ. ಅವಳ ಮುಖವನ್ನು ನೋಡಿದ ಮೇಲೆ ʻಹಾಗನ್ನಬಾರದಿತ್ತುʼ ಅನ್ನಿಸಿ ಹತ್ತಿರ ಬಂದು ಭುಜ ತಟ್ಟಿ, “ಸಾರಿ, ನಿಜ್ವಾಗ್ಲೂ ಸಾರೀನೋ… ಸರಿ ನೀನು ಬಾ, ಮೊದ್ಲು ಹೋಗಿ ರಿಸೆಪ್ಷನ್ನಲ್ಲಿ ಹೆಸರು ಬರ್ಸಿ ಬರ್ತೀನಿ” ಎಂದು ಧಡಧಡನೆ ಮೆಟ್ಟಿಲನ್ನು ಹತ್ತಿ ಒಳಗೆ ಹೋದ. ನಿಧಾನವಾಗಿ ಹಿಂಬಾಲಿಸಿದವಳು ವೈಟಿಂಗ್ ಲಾಂಜ್ನಲ್ಲಿ ಕುಳಿತಳು. ಫಾರಂ ತುಂಬಿ ಬಂದವನು “ಡಾಕ್ಟ್ರು ಏನೋ ಬ್ಯುಸೀನಲ್ಲಿದಾರಂತೆ. ಒಂದರ್ಧ ಗಂಟೆ ಲೇಟಾಗ್ಬೋದು ಶುರು ಮಾಡಕ್ಕೆ ಅಂದ್ಳು. ಅಲ್ಲಿಗೆ ಇನ್ನೊಂದು ಗಂಟೇನೇ ಕಾಯ್ಬೇಕಾಗತ್ತೆ” ಅಸಹನೆಯಿಂದ ಹೇಳುತ್ತಾ ಪಕ್ಕದಲ್ಲಿ ಕುಳಿತ.

ಏನೋ ಗಡಿಬಿಡಿಯಿಂದ ಒಳಗೆ, ಹೊರಗೆ ದಾದಿಯರು, ಆಯಾಗಳು ಓಡಾಡುತ್ತಿದ್ದರು. ಆಸ್ಪತ್ರೆಗೆ ಸಂಬಂಧಪಟ್ಟವನೇ ಇರ್ಬೇಕು, ಯಾರೋ ರಿಸೆಪ್ಷನಿಷ್ಟ ಬಳಿ “ಇನ್ನು ಹತ್ತು ನಿಮ್ಷದಲ್ಲಿ ಬರ್ತಾರಂತೆ” ಅನ್ನುತ್ತಿದ್ದ. ಆ ರಿಸೆಪ್ಷನಿಷ್ಟ್ “ಬೆಳಗಾಗೆದ್ದು ಏನು ರಗಳೇನೋ ಇದು. ಹೆಸರು, ಅಡ್ರೆಸ್ಸು, ಫೋನ್ ನಂಬರ್ ಎಲ್ಲಾ ಕೊಟ್ಟು ಒಂದಷ್ಟು ದುಡ್ಡೂ ಕಟ್ಟಿದಾರೆ. ಈಗ ಫೋನ್ ಮಾಡಿದ್ರೆ ʻನಂಬರ್ ಡಸ್ ನಾಟ್ ಎಕ್ಸಿಸ್ಟ್ʼ ಅಂತ ಬರ್ತಾ ಇದೆ. ಎಂಥೆಂಥಾ ಜನಗಳೂ ಇರ್ತಾರಪ್ಪಾ ಪ್ರಪಂಚದಲ್ಲಿ! ಸುಮ್ನೆ ನಮ್ಗೆಲ್ಲಾ ತಲ್ನೋವು. ಇವತ್ತು ಡಿಸ್ಚಾರ್ಜ್ ಆಗ್ಬೇಕಿತ್ತು. ನಿನ್ನೆ ರಾತ್ರಿ ಡಾಕ್ಟ್ರು ʻನಾಳೆ ಬಂದ ತಕ್ಷಣ ಬಿಲ್ ಮಾಡಿ; ಅವರು ಸ್ವಲ್ಪ ಬೇಗನೇ ಹೋಗ್ಬೇಕಂತೆʼ ಅಂತ ಹೇಳಿ ಹೋಗಿದ್ರು. ಈಗ ನೈಟ್ ಡ್ಯೂಟೀನವ್ರನ್ನೆಲ್ಲಾ ಕರ್ಸಿ ಉಗ್ದು ಉಪ್ಪಾಕ್ತಿದಾರೆ. ಅದ್ಯಾವ ಮಾಯದಲ್ಲಿ ಅವ್ರು ಜಾಗ ಖಾಲಿ ಮಾಡಿದಾರೆ ಅಂತ್ಲೇ ಗೊತ್ತಿಲ್ಲ” ಅವಳು ಅಲವತ್ತುಕೊಳ್ಳುತ್ತಿದ್ದಳು. “ಪಾರ್ಕಿಂಗ್ ರಿಜಿಸ್ಟರ್ನಲ್ಲಿ ಅವರ ಕಾರ್ ನಂಬರ್ ಬರ್ಕೊಂಡಿರ್ಲಿಲ್ವಾ” ಅವ್ನು ಕೇಳ್ತಿದ್ದ. “ಅವ್ರು ಟ್ಯಾಕ್ಸಿ ಮಾಡ್ಕೊಂಡು ಬಂದಿದ್ದು ಅನ್ಸತ್ತೆ. ಈಗ ಅದು ಹೇಗೆ ಕಣ್ ತಪ್ಸಿ ಹೋದ್ರೋ ಗೊತ್ತಿಲ್ಲ… ಗಾರ್ಡು ತಿಮ್ಮಣ್ಣ ಬೆಳಗ್ಗೆ ಲ್ಯಾವೆಟೆರಿಗೆ ಹೋಗಿದ್ದ ಸಮಯದಲ್ಲಿ ಎಸ್ಕೇಪ್ ಆಗ್ಬಿಟ್ಟಿದಾರೆ”. ಸನಿಹದಲ್ಲೇ ಮ್ಯಾಗಸೀನ್ ರ಼್ಯಾಕ್ನಲ್ಲಿದ್ದ ಒಂದು ಮ್ಯಾಗಸೀನನ್ನು ತೆಗೆದುಕೊಂಡು ಓದುವವನಂತೆ ನಿಂತಿದ್ದ ನಾಗೇಶನಿಗೆ ಒಳಗೆ ನಡೆಯುತ್ತಿರುವ ಗಡಿಬಿಡಿಯೇನು ಎನ್ನುವುದರ ಒಂದು ಕಲ್ಪನೆ ಬಂತು. ಸ್ಮಿತಾಳ ಕಡೆ ತಿರುಗಿದ. ʻಏನುʼ ಎನ್ನುವಂತೆ ಅವಳು ಹುಬ್ಬು ಹಾರಿಸಿದಳು. ʻತಡಿʼ ಎನ್ನುವಂತೆ ಸನ್ನೆ ಮಾಡಿ ಅಲ್ಲೇ ಏನನ್ನೋ ಓದುತ್ತಿರುವವನಂತೆ ನಿಂತ.

ಅಷ್ಟರಲ್ಲಿ ನೈಟ್ ಡ್ಯೂಟಿ ನರ್ಸ್ ಒಳಗಿಂದ ಬಂದಳು. ರಿಸೆಪ್ಷನಿಷ್ಟ್ ಅವಳನ್ನು ಕರೆದು ನಿಲ್ಲಿಸಿ “ಏನು ನಳಿನಿ ಹೇಗಾಯ್ತು ಇದೆಲ್ಲಾ?” ಕೇಳಿದಳು. ರಾತ್ರಿಯೆಲ್ಲಾ ನಿದ್ದೆಕೆಟ್ಟು ಕೆಲಸ ಮುಗಿಯೋ ಹೊತ್ತಲ್ಲಿ ಈ ರಗಳೆ ಶುರುವಾಗಿದ್ದು ಅವಳಿಗೆ ಮೈಯೆಲ್ಲಾ ಪರಚಿಕೊಳ್ಳುವಷ್ಟು ಕೋಪ ತರಿಸಿತ್ತು. “ನೋಡು ಕಲಾ. ಬೆಳಗ್ಗೆ ನಾನೇ ಆಯಮ್ಮಂಗೆ ಸ್ನಾನ ಮಾಡ್ಸಿ, ಮಗೂಗೂ ಸ್ನಾನ ಮಾಡಿಸ್ಕೊಟ್ಟು ಪಕ್ಕದ ರೂಮಿಗೆ ಹೋಗಿದೀನಿ. ನಿಂಗಮ್ಮ ಹಿಂದೇನೇ ಬಾತ್ ರೂಂ ಕ್ಲೀನ್ ಮಾಡಿ ನೆಲ ಒರಸಕ್ಕೆ ಹೋಗಿದಾಳೆ. ನಾನು ಪಕ್ಕದ ರೂಮಿನ ಪೇಶೆಂಟ್ ಸ್ನಾನ ಮುಗಿಸಿ, ಈಯಮ್ಮಂಗೆ ಒಂದು ಇಂಜೆಕ್ಷನ್ ಚುಚ್ಚೋದಿತ್ತು ಅಂತ ಬಂದೆ; ಬಾಗ್ಲಾಕ್ಕೊಂಡು ಬಾತ್ ರೂಂ ಕ್ಲೀನ್ ಮಾಡ್ತಿದ್ದ ನಿಂಗಮ್ಮಾನೂ ಆವಾಗೇ ಹೊರಗೆ ಬಂದ್ಳು. ಅಷ್ಟ್ರಲ್ಲಿ ಅಮ್ಮ ಮಗಳು ಗಾಯಬ್ ಆಗ್ಬಿಟ್ಟಿದಾರೆ. ಹಾಸ್ಪಿಟಲ್ ಗೌನನ್ನ ಬಿಚ್ಚಿ ಹಾಸಿಗೆ ಮೇಲೆ ಎಸ್ದು ಮಗೂನ ಎತ್ಕೊಂಡು ಅದೆಷ್ಟು ಬೇಗ ಪರಾರಿ ಆಗಿದಾರೆ ನೋಡು! ಅವಳಪ್ಪ ನಿನ್ನೇ ರಾತ್ರೀನೇ ʻಹೇಗೂ ನಾಳೆ ಡಿಸ್ಚಾರ್ಜ್ ಅಲ್ವಾ; ಅದಕ್ಕೆ ಒಂಜೊತೆ ಬಟ್ಟೆ ಬಿಟ್ಟು ಮಿಕ್ಕಿದ್ದೆಲ್ಲಾ ತೊಗೊಂಡು ಹೋಗಿರ್ತೀನಿ. ಹೊರಡ್ವಾಗ ಗಡಿಬಿಡಿ ಆಗಲ್ಲʼ ಅಂತ ನನ್ನೆದುರೇ ಹೇಳಿ ಆಯಮ್ಮನ ಹತ್ರ ಬಟ್ಟೆ, ಬರೆ, ಮಿಕ್ಕಿದ್ದೆಲ್ಲಾ ಸಾಮಾನೂ ತೊಗೊಂಡು ಹೋಗಿದ್ದ. ಅದ್ರಲ್ಲಿ ಯಾರು ತಪ್ಪು ಕಂಡುಹಿಡೀತಾರೆ ಕಲಾ, ಈಗ್ನೋಡು ಡಾಕ್ಟ್ರ ಹತ್ರ ಅಂತ ಬಾಯಿಗೆ ಬಂದ್ಹಾಗೆ ಬೈಸ್ಕೊಂಡಿದ್ದಾಯ್ತು. ಇಷ್ಟು ದಿನ ಮಾಡಿದ್ ಕೆಲಸ್ವೆಲ್ಲಾ ಮುಂಡಾಮೋಚ್ಕೊಂಡು ಹೋಯ್ತು. ನನ್ನ ಗ್ರಾಚಾರ ಸರೀಗಿಲ್ಲ ಅಷ್ಟೇ” ಎಂದು ಗೊಣಗುಟ್ಟುತ್ತಾ “ಇನ್ನು ಅವ್ರೆಲ್ಲಾ ಬರೋತಂಕ ಇಲ್ಲೇ ಕಾಯ್ಕೊಂಡು ಬಿದ್ದಿರ್ಬೇಕು. ತಲೆ ನೋಯ್ತಿದೆ. ಒಂದು ಕಾಫೀನಾದ್ರೂ ಕುಡ್ದು ಬರ್ತೀನಿ” ಎನ್ನುತ್ತಾ ಕೋಪದಲ್ಲೇ ಪಕ್ಕದ ಕ್ಯಾಂಟೀನ್ಗೆ ಹೊರಟಳು. “ಸರಿ, ನೋಡೋಣ ಏನ್ವಿಷ್ಯಾ ಅಂತ” ಎನ್ನುತ್ತಾ ಪಕ್ಕದಲ್ಲಿದ್ದವನು ಒಳಗೆ ಹೋದ. ಯಾರೋ ಹೆಸರು ಬರೆಸಲು ಬಂದರು. ರಿಸೆಪ್ಷನಿಷ್ಟ್ ತನ್ನ ಕೆಲಸದಲ್ಲಿ ಮುಳುಗಿಹೋದಳು.

ಸ್ಮಿತಾಳ ಪಕ್ಕ ಬಂದು ಕುಳಿತು ತನಗೆ ತಿಳಿದಷ್ಟು ವಿಷಯವನ್ನು ಅವಳ ಹತ್ತಿರ ಹೇಳಿದ. ಅವಳ ಮುಖದಲ್ಲಿ ಆತಂಕ ಕಂಡೊಡನೆ ಹೇಳ್ಬಾರ್ದಿತ್ತೇನೋ ಅಂದುಕೊಂಡ. ಆದರೆ ಸ್ಮಿತಾ ಏನೂ ಮಾತಾಡದೆ ಕಣ್ಣು ಮುಚ್ಚಿಕೊಂಡು ಕುರ್ಚಿಯ ಹಿಂದೊರಗಿ ಕುಳಿತುಕೊಂಡಳು. ಅವಳ ತಲೆಯಲ್ಲಿ ಬೆಳಗ್ಗೆ ಗಂಗಮ್ಮ ಹೇಳಿದ ವಿಷಯವೇ ಮರುಕಳಿಸಿತು. ಹೊತ್ತು ಹೋಗದೇ ನಾಗೇಶ ಒಂದು ಸಿಗರೇಟಾದರೂ ಸೇದಿ ಬರೋಣವೆಂದು ಹೊರಗೆ ಹೊರಟ. ಬಾಗಿಲ ಹೊರಗೆ ಒಬ್ಬ ಆಯ ಇನ್ನೊಬ್ಬಳೊಂದಿಗೆ “ಏನಾಯ್ತು ನಿಂಗಮ್ಮ. ಯಾಕೆ ದಾಕುಟ್ರು ಗರಂ ಆಗವ್ರೆ” ಕೇಳುತ್ತಿದ್ದಳು. “ಅದೇ ಅದ್ನೆಂಟ್ನೇ ರೂಮಿನ ಡಿಲಿವರಿ ಪೇಸೆಂಟಿರ್ನಿಲ್ವಾ. ನಿನ್ನೇನೇ ನಾನಿಂಗೇಳ್ದೆ ನೋಡು – ಏನೋ ಸರಿಗಿಲ್ಲ ಆ ಕೇಸು. ಆ ಉಡ್ಗೀಗೆ ಮದ್ವೇನೇ ಆಗಿಲ್ಲ ಅನ್ನೋಂಗದೆ. ಚೊಚ್ಲು ಎರ್ಗೆ ಅಂದ್ರೆ ಅಪ್ಪ, ಅಮ್ಮ ಎಲ್ರೂ ಎಂಥಾ ಖುಸೀಲಿರ್ತಾರೆ. ಗಂಡ್ನೂ ಬಂದು ತಕತಕ ಕುಣೀತಿರ್ತಾನೆ. ಅವ್ರನ್ ನೋಡಿದ್ರೆ ಏನೋ ಸಾಯೋ ಪೇಸೆಂಟನ್ನ ನೋಡ್ಕಳಾ ಗಾಬ್ರೀಲವ್ರೆ ಅಂತ. ಬಂದಾಗಿಂದೂ ಒಳ್ಗೊಳ್ಗೇ ಏನೋ ಪಿಸಿಪಿಸಿ ಮಾತ್ಕತೆ. ನಾವ್ಯಾರಾರ ಬರೋ ಸುಳ್ವು ಸಿಕ್ತೂಂದ್ರೆ ಎಲ್ಲಾ ಗಪ್ಚಿಪ್. ನಂಗೆ ಡೌಟೇ ಇತ್ತು ಪದ್ಮ. ಅವ್ಗುಳ್ ದೆಸೀನಿಂದ ಇವತ್ತು ನಾವೆಲ್ಲಾ ಬೈಗೋಳು ತಿಂದ್ವೋ. ಪಾಪ ನಳಿನಿ ಸಿಸ್ಟರ್ ಕಣ್ಣಲ್ಲಿ ನೀರಾಕ್ಕಂಬಿಟ್ರು” ಅಂದಳು. “ಪೂರಾ ದುಡ್ಕೊಡ್ದೇ ಓಡೋದ್ರು ಅಂತನಾ ಗಲಾಟೇ…” ಪದ್ಮ ರಾಗವಾಗಿ ಕೇಳಿದಳು. “ದುಡ್ಕೊಡ್ದಿದ್ರೆ ಆಳಾಗೋಗ್ಲಿ; ಆ ಉಣ್ಸೇಮರದ ಸ್ಟಾಪ್ ಇದ್ದದಲ್ಲಾ ಇಲ್ಲೇ ನಾಕು ಸ್ಟಾಪ್ ಆಚ್ಗೆ… ಕಟ್ಟಿಕೆರೇನಲ್ಲಿ; ಆ ಸ್ಟಾಪ್ ಪಕ್ಕ ಕಸದ್ತೊಟ್ಟಿ ಐತೆ; ಅದ್ರಾಗೆ ಮಗೀನ ಎಣ ಸಿಕ್ತಂತೆ. ಮಗೀಗೆ ಸುತ್ತಿದ್ ಆಸ್ಪತ್ರೆ ಬಟ್ಟೆ ಅಲ್ಲೇ ನಾಕೆಜ್ಜೆ ದೂರ್ದಾಗಿರೋ ಚರಂಡಿ ಪಕ್ಕಕ್ಕೆ ಬಿದ್ದಿದ್ವಂತೆ. ದೊಡ್ಡ ಚರಂಡಿ ಅದು. ಒಳೀಕೆ ಎಸ್ಯಾಕೋದ್ರೋ ಏನೋ, ಈಚ್ಗೇ ಬಿದ್ದದೆ. ಬೆಳಿಗ್ಗೆ ಆರೂಮುಕ್ಕಾಲಿಗೇ ಯಾರೋ ಕಸ ಆಕಕ್ಕೆ ಬಂದವ್ರಿಗೆ ಮಗ ಕಂಡದೆ. ಜನವೋ ಜನ ಸೇರ್ಕಂಡ್ರಂತೆ. ಯಾರೋ ಪೋಲೀಸ್ ಸ್ಟೇಷನ್ನಿಗೆ ಪೋನ್ ಮಾಡಿ ಇಂಗಿಂಗೇ ಅಂತ ಏಳವ್ರೆ. ಅವ್ರು ಬಂದು ಸುತ್ತಮುತ್ತ ನೋಡ್ವಾಗ ಈ ಆಸ್ಪತ್ರೆ ಬಟ್ಟೆ ಅಲ್ಲೇ ಸಿಕ್ಕದೆ” ಸೊಂಟದಲ್ಲಿದ್ದ ಅಡಿಕೆಚೀಲದಿಂದ ಒಂದು ಅಡಿಕೆಯನ್ನು ತೆಗೆದು ಬಾಯಿಗೆಸದುಕೊಂಡಳು. ಪದ್ಮನ ಕುತೂಹಲ ತಣಿದಿಲ್ಲ “ಮತ್ತೀಗ, ಏನ್ಮಾಡ್ತರಂತೆ?” ಸಂಭಾಷಣೆಯನ್ನು ಮುಂದುವರೆಸಿದಳು. ಪೋಲೀಸ್ನವ್ರು ಮಗೀನ ಎಣ ಇಲ್ಲಿಗೆ ತರ್ತಾರಂತೆ. ಇಲ್ಲಿನ ದಾಕಟ್ರು, ನಾವೂ ಎಲ್ರೂ ಅದೇ ಮಗೂನಾ ಅಂತ ನೋಡಿ ಏಳ್ಬೆಕಂತೆ” ಅನ್ನುತ್ತಿರುವಂತೇ ಪೋಲೀಸ್ ಜೀಪು ಬಂದು ನಿಂತಿತು.

ಒಬ್ಬ ಪೇದೆ ಬಟ್ಟೆಯಲ್ಲಿ ಸುತ್ತಿದ್ದ ಮಗುವಿನ ಹೆಣವನ್ನು ತಂದ. ಕುತೂಹಲದಿಂದ ನಾಗೇಶನೂ ಮಗುವಿನ ಕಡೆಗೆ ಕಣ್ಣು ಹಾಯಿಸಿದ. ಮುಖ ಮಾತ್ರ ಕಾಣುವಂತೆ ಬಟ್ಟೆಯಲ್ಲಿ ಸುತ್ತಿತ್ತು. ಮೈಕೈತುಂಬಿಕೊಂಡ ಹಾಗಿತ್ತು. ಮುದ್ದಾಗಿತ್ತು ಮಗು. ಕೆಂಪಗಿದ್ದಿರಬಹುದಾಗಿದ್ದ ತುಟಿ ಈಗ ಕಪ್ಪಗಾಗಿತ್ತು. ಬಿಳಿಯ ಮೈಬಣ್ಣ ನೀಲಿ ಬಣ್ಣಕ್ಕೆ ತಿರುಗುತ್ತಿರುವ ಛಾಯೆಯಿತ್ತು. ಯಾಕೋ ಹೊಟ್ಟೆಯಲ್ಲೆಲ್ಲಾ ಸಂಕಟವಾಯಿತು. ಅದ್ಯಾವ ಮಾಯದಲ್ಲಿ ಸ್ಮಿತಾ ಎದ್ದು ಬಾಗಿಲಿಗೆ ಬಂದಿದ್ದಳೋ, ಅವಳೂ ಮಗುವಿನ ಹೆಣವನ್ನು ನೋಡಿದಳು. “ಜಾಗ ಬಿಡಿ” ಗದರಿಕೊಳ್ಳುತ್ತಾ ಪೋಲೀಸಿನವರು ಸತ್ತ ಮಗುವನ್ನೆತ್ತಿಕೊಂಡು ಒಳಗೆ ಹೋದರು. ನಳಿನಿ ಸಿಸ್ಟರ್, ನಿಂಗಮ್ಮ ಇಬ್ಬರೂ ಒಳಹೋದರು. ಹಿಂದೆಯೇ ಬಂದ ನಾಗೇಶ ಸ್ಮಿತಾಳನ್ನು ಕರೆದುಕೊಂಡು ಮತ್ತೆ ವೇಟಿಂಗ್ ಲಾಂಜಿನ ಕಡೆ ನಡೆದ. “ಏನಾಯ್ತು?” ಎಂದಳು ಸ್ಮಿತಾ ಗಾಭರಿಯಿಂದ. ತನಗೆ ತಿಳಿದಷ್ಟು ವಿಷಯವನ್ನು ಹೇಳಿದವನು ತಲೆಯ ಮೇಲೆ ಕೈಹೊತ್ತು ಕುಳಿತ. ಪೇದೆಗಳಿಬ್ಬರು ರಿಸೆಪ್ಷನಿಷ್ಟ್ ಹತ್ತಿರ ಬಂದು ಜೋರಾಗೇ ಮಾತಾಡುತ್ತಾ ದಾಖಲೆಗಳನ್ನು ಪರಿಶೀಲಿಸತೊಡಗಿದರು. ಅದರಲ್ಲಿದ್ದ ನಂಬರ್ಗೆ ಪೇದೆಯೊಬ್ಬ ಫೋನ್ ಮಾಡಿದ. ಒಂದೆರಡು ನಿಮಿಷ ಬಿಟ್ಟು “ದರಿದ್ರ ನನ್ಮಕ್ಳು. ಹಾದರ ಮುಚ್ಚಿಡೋಕೆ ಏನು ಮಾಡಕ್ಕೂ ಹೇಸಲ್ಲ. ಯಾವ್ದೋ ತಪ್ಪುತಪ್ಪು ನಂಬರ್ ಕೊಟ್ಟವ್ರೆ. ಕಾಲೇ ಓಗ್ತಿಲ್ಲ” ಒಬ್ಬ ಇನ್ನೊಬ್ಬನ ಹತ್ತಿರ ಹೇಳುತ್ತಿದ್ದ. ದಾಖಲೆಗಳ ಕ್ಸೆರಾಕ್ಸ್ ಪ್ರತಿಯನ್ನು ಮಾಡಿಸಿಕೊಳ್ಳುತ್ತಿದ್ದ ಇನ್ನೊಬ್ಬ “ತೆವ್ಲು ತೀರಿಸ್ಕೊಣೋವಾಗಿರೋ ಖುಸಿ, ಮಗುವಾದಾಗ ಯಾಕಿರ್ತದೆ ಏಳು. ಮಜಾ ಮಾಡ್ಬೇಕು; ಜವಾಬ್ದಾರಿ ಬೇಕಿಲ್ಲ. ಏನು ಜನಗ್ಳೋ. ಅಲ್ವಾ ಮೇಡಂ” ಎಂದ ರಿಸೆಪ್ಷನಿಷ್ಟ್ ಕಡೆಗೆ ತಿರುಗಿ. ಉತ್ತರ ಕೊಡಲು ಇಷ್ಟವಿಲ್ಲದೆ ಆ ರಿಸಿಪ್ಷನಿಷ್ಟ್ ಕ್ಸೆರಾಕ್ಸ್ ಪ್ರತಿಗಳನ್ನು ಅವನ ಮುಂದಿರಿಸಿ ತನ್ನ ಕುರ್ಚಿಗೆ ಮರಳಿ ಕಂಪ್ಯೂಟರಿನಲ್ಲಿ ಏನನ್ನೋ ನೋಡುತ್ತಿರುವಂತೆ ಮಾತು ತಪ್ಪಿಸಿದಳು.

ಸ್ವಲ್ಪ ಹೊತ್ತಿನಲ್ಲೇ ಶವವನ್ನೆತ್ತಿಕೊಂಡಿದ್ದ ಪೋಲೀಸಿನವರು ಹೊರಟರು. ಹಿಂದೆಯೇ ನಳಿನಿ, ನಿಂಗಮ್ಮ ಇಬ್ಬರೂ ಹೊರಬಂದರು. ರಿಸೆಪ್ಷನಿಷ್ಟ್ ಹತ್ತಿರ ಬಂದ ನಳಿನಿ “ಕಲಾ, ಪೋಲೀಸ್ನೋರು ಅವ್ರನ್ನ ಹುಡುಕಕ್ಕೆ ಶುರುಮಾಡಿದಾರಂತೆ. ಸಿಕ್ರೆ ತಕ್ಷಣ ನಮ್ಮನ್ನೆಲ್ಲಾ ಪೋಲೀಸ್ ಸ್ಟೇಷನ್ನಿಗೆ ಕರಸ್ತಾರಂತೆ ಐಡೆಂಟಿಫೈ ಮಾಡಕ್ಕೆ. ನಾನು ಮನೆಗೆ ಹೋಗಿರ್ತೀನಿ. ನಿಂಗೆ ಮೆಸೇಜ್ ಬಂದ್ರೆ ನಂಗೆ ಫೋನ್ ಮಾಡು. ನಂಗೇನಾದ್ರೂ ನಿದ್ರೆ ಬಂದಿದ್ರೆ ಬೇಗ ಎಚ್ಚರಾಗಲ್ಲ. ನಿದ್ರೆ ಬರೋದು ಡೌಟೇ. ಆದ್ರೂ ತೆಗೀದಿದ್ರೆ ಮತ್ಮತ್ತೆ ಟ್ರೈ ಮಾಡು” ಎನ್ನುತ್ತಾ ಭಾರವಾದ ಹೆಜ್ಜೆಯನ್ನಿಡುತ್ತಾ ಹೊರಟಳು. ಹಿಂದೆಯೇ ಬಂದ ನಿಂಗಮ್ಮ “ನಂಗೆ ಓಗ್ಲೇಬೇಡ ಅಂದವ್ರೆ. ಇಲ್ಲೇ ರೆಕಾರ್ಡು ರೂಮಿನ ಮೂಲೇಲಿ ಮಲ್ಗಿರ್ತಿನಿ. ಕರುದ್ರೆ ಎಬ್ಸಕ್ಕೆ ಯಾರ್ನಾದ್ರೂ ಕಳ್ಸವ್ವಾ” ಎನ್ನುತ್ತಾ ರೆಕಾರ್ಡ್ ರೂಮಿನ ಕಡೆ ಹೆಜ್ಜೆ ಹಾಕಿದಳು. ಕಲಾ ಇಬ್ಬರಿಗೂ ತಲೆಯಾಡಿಸಿ ಮತ್ತೆ ಬಂದ ಪೇಶೆಂಟುಗಳ ವಿವರಗಳನ್ನು ಕಂಪ್ಯೂಟರಿನಲ್ಲಿ ತುಂಬಿಸತೊಡಗಿದಳು. ಅರ್ಧಂಬರ್ಧ ವಿಷಯ ತಿಳಿದಿದ್ದ ವೇಟಿಂಗ್ ಲಾಂಜ್ನಲ್ಲಿ ದುಂಬಿಗಳ ಗುಂಜಾರವದಂತೆ ಅಕ್ಕಪಕ್ಕದವರೊಡನೆ ಗುಜುಗುಜು ಶುರುವಾಯಿತು.

ಅಸಹನೆಯಿಂದ ನಾಗೇಶ ಟೈಂ ನೋಡಿಕೊಂಡ; ಆಗಲೇ ಹತ್ತು ಗಂಟೆ. ಸ್ಮಿತಾ ಏನೋ ಯೋಚನೆಯಲ್ಲಿದ್ದಂತೆ ಮೌನವಾಗಿದ್ದಾಳೆ. ವ್ಯರ್ಥವಾಗಿ ಸಮಯ ಹೋಗುತ್ತಿರುವುದರಿಂದ ಅವನ ಅಸಹನೆ ಹೆಚ್ಚಾಗುತ್ತಿದ್ದರೂ, ಯಾರ ಮೇಲೆ ತೋರಿಸಬೇಕು! ಇನ್ನೂ ಎಷ್ಟು ಹೊತ್ತಾಗತ್ತೋ ಕೇಳಬೇಕು ಎಂದುಕೊಂಡು ಎದ್ದ. ಅಷ್ಟರಲ್ಲಿ ಸ್ವಾಗತಕಾರಿಣಿ ಮೊದಲನೆಯ ಹೆಸರನ್ನು ಕರೆದಳು. ʻಸಧ್ಯ! ಅಂತೂ ಶುರುವಾಯಿತಲ್ಲʼ ಎಂದುಕೊಂಡು ತನ್ನ ಜಾಗದಲ್ಲಿ ಕುಳಿತ. ಇನ್ನೊಬ್ಬಳ ನಂತರ ತಮ್ಮ ಸರದಿ. ಈಗವನಿಗೆ ಡಾಕ್ಟರ ಹತ್ತಿರ ಈ ವಿಷಯ ಹೇಗೆ ಪ್ರಸ್ತಾಪ ಮಾಡಬೇಕೆಂಬ ಗಲಿಬಿಲಿ ಶುರುವಾಯಿತು. ಸ್ಮಿತಾ ಖಂಡಿತಾ ಮಾತಾಡುವುದಿಲ್ಲ; ತಾನೇ ಮಾತಾಡಬೇಕು…. ಏನೇನು ಹೇಳಬೇಕು ಎಂದು ಮನದಲ್ಲೇ ರಿಹರ್ಸಲ್ ಮಾಡುತ್ತಾ ಕುಳಿತುಕೊಂಡ. ಯೋಚನೆಯಲ್ಲಿ ಮುಳುಗಿದ್ದಾಗಲೇ ಸ್ಮಿತಾಳ ಹೆಸರನ್ನು ಕರೆದರು. ಗಡಬಡಿಸಿ ಎದ್ದು ಸ್ಮಿತಾಳನ್ನೂ ಕರೆದುಕೊಂಡು ಡಾಕ್ಟರ ರೂಮಿಗೆ ಹೊರಟ…

ಪಕ್ಕಕ್ಕೆ ತಿರುಗಿ ಕಂಪ್ಯೂಟರಿನಲ್ಲಿ ಏನನ್ನೋ ನೋಡುತ್ತಿದ್ದ ಡಾಕ್ಟರು ಕುಳಿತುಕೊಳ್ಳಿ ಎಂದರು. ಇಬ್ಬರೂ ಮೌನವಾಗಿ ಕುಳಿತರು. ಒಂದೆರಡು ನಿಮಿಷದ ನಂತರ ತಿರುಗಿ “ಏಸ್…” ಅನ್ನುತ್ತಾ ಹುಬ್ಬೇರಿಸಿದರು. ನಾಗೇಶ ತಡೆತಡೆದು ವಿಷಯ ಹೇಳಿದ. ಗಂಭೀರವಾಗಿ ಕೇಳಿಸಿಕೊಳ್ಳುತ್ತಿದ್ದ ಡಾಕ್ಟರನ್ನು ನೋಡಿ ಅವನಿಗೆ ಸ್ವಲ್ಪ ಹಿಂಜರಿಕೆಯಾಯಿತು. ಅವರಿರುವುದೇ ಹೀಗೋ… ಇವತ್ತಿನ ಪ್ರಸಂಗದಿಂದ ಗಂಭೀರವಾಗಿದ್ದಾರೋ… ಅಥವಾ ನಾನು ಹೇಳುತ್ತಿರುವ ವಿಷಯ ಅವರಿಗೆ ಇಷ್ಟವಾಗುತ್ತಿಲ್ಲವೋ… ಅವನಿಗೆ ಅರ್ಥಮಾಡಿಕೊಳ್ಳಲಾಗಲಿಲ್ಲ… ಅವರ ಮುಖವನ್ನೇ ನೋಡುತ್ತಾ ಸುಮ್ಮನೆ ಕುಳಿತುಬಿಟ್ಟ. ಒಂದು ಕ್ಷಣ ತಲೆತಗ್ಗಿಸಿ ಏನನ್ನೋ ಯೋಚಿಸುತ್ತಿರುವಂತೆ ಕುಳಿತ ಡಾಕ್ಟರು ತಲೆಯೆತ್ತಿ “ನೋಡಿ, ಬಲವಾದ ಕಾರಣ… ಅಂದರೆ… ಏನಾದರೂ ಆರೋಗ್ಯದ ಸಮಸ್ಯೆ… ಈ ತರದ ಕಾರಣವಿರದ ಹೊರತು ಚೊಚ್ಚಲ ಮಗುವಿನ ಅಬಾರ್ಷನ್ ಮಾಡೋದನ್ನ ನಾನು ವಿರೋಧಿಸ್ತೀನಿ. ನೀವಿಬ್ರೂ ಗಂಡ ಹೆಂಡಿರು, ಇದು ನಿಮ್ಮದೇ ಮಗು. ನೀವು ಹೇಳ್ತಿರೋ ಕಾರಣಗಳನ್ನ ಒಬ್ಬ ವೈದ್ಯಳಾಗಿ ಒಪ್ಪಿಕೊಳ್ಳಕ್ಕೆ ಸಾಧ್ಯವಿಲ್ಲ. ಇರಲಿ… ಅಬಾರ್ಷನ್ ಬಗ್ಗೆ ಆಮೇಲೆ ಯೋಚನೆ ಮಾಡೋಣ, ಮೊದಲು ಪ್ರೆಗ್ನಿನ್ಸಿ ಕನ್ಫರ್ಮ್ ಆಗಿದ್ಯಾ” ಎಂದರು. ನಾಗೇಶನೇ ಚೆಕ್ಕಿಟ್ನಿಂದ ಪರೀಕ್ಷೆ ಮಾಡಿಕೊಂಡಾಗಿದೆ ಅಂದ. ಮಿಕ್ಕ ಪ್ರಶ್ನೆಗಳನ್ನು ಸ್ಮಿತಾಳನ್ನು ಕೇಳತೊಡಗಿದರು. ಒಂದೋ, ಎರಡೋ ಮಾತುಗಳಲ್ಲಿ ಉತ್ತರಿಸುತ್ತಿದ್ದ ಸ್ಮಿತಾಳನ್ನು ನೋಡಿ “ನಿಮಗೆ ಈ ಬಸಿರು ಇಷ್ಟ ಇಲ್ವಾ?” ಅಂದರು. “ಹಾಗಲ್ಲ; ಇಷ್ಟು ಬೇಗ ಬೇಡ ಅಂತಾ” ನಾಗೇಶ ತಕ್ಷಣವೇ ಬಾಯಿ ಹಾಕಿದ. ಡಾಕ್ಟರು ಸ್ವಲ್ಪ ಕೋಪಗೊಂಡು “ನಾನು ಕೇಳ್ತಿರೋದು ನಿಮ್ಮ ಹೆಂಡತಿಯನ್ನ” ಅಂದು ಅವಳೆಡೆಗೆ ತಿರುಗಿದರು. ತಕ್ಷಣವೇ ಸ್ಮಿತಾ “ಹೌದು ಮೇಡಂ ಇನ್ನೊಂದೆರಡು ವರ್ಷ ಕಳೆದು ಆಗ್ಲಿ ಅಂತ” ಅಂದಳು ನಿಧಾನವಾಗಿ. ನಾಗೇಶ ಸಮಾಧಾನವಾಗಿ ನಿಟ್ಟುಸಿರು ಬಿಟ್ಟ. “ಈಗ ನಿಮಗೆ ಏಳು ವಾರವಾಗಿದೆ. ಯಾವುದೇ ನಿರ್ಧಾರಕ್ಕೆ ಬರೋ ಮೊದಲು ಒಂದು ಸ್ಕ್ಯಾನಿಂಗ್ ಮಾಡಿಸ್ಬೇಕು. ಬರೆದುಕೊಡ್ತೀನಿ. ನೀವು ಇವತ್ತೋ, ನಾಳೆಯೋ ರಿಸೆಪ್ಷನ್ನಲ್ಲಿ ಅಪಾಯಿಂಟ್ಮೆಂಟ್ ಫಿಕ್ಸ್ ಮಾಡಿಕೊಳ್ಳಿ. ಆ ರಿಪೋರ್ಟ್ ನೋಡಿದ್ಮೇಲೆ ಮುಂದೆ ಮಾತಾಡೋಣ” ಎಂದವರೇ ತಮ್ಮ ಮುಂದಿದ್ದ ಪ್ಯಾಡ್ನಲ್ಲಿ ಬರೆದು ಅವರ ಕೈಗಿತ್ತು ʻಇನ್ನು ಹೊರಡಬಹುದುʼ ಎನ್ನುವಂತೆ ತಲೆಯಾಡಿಸಿದರು. ಇಬ್ಬರೂ ಹೊರಬಂದು ರಿಸೆಪ್ಷನ್ಗೆ ಬಂದರೆ ಅವಳು “ಇವತ್ತಿಗೆ ಈಗಾಗ್ಲೇ ಆರು ಕೇಸಿದೆ. ಇನ್ನೂ ಯಾಕೋ ಆ ಡಾಕ್ಟರ್ ಬಂದೇ ಇಲ್ಲ. ಇನ್ನು ಮೂರು ಗಂಟೇನಾದ್ರೂ ಕಾಯ್ಬೇಕಾಗ್ಬಹುದು” ಅಂದಳು. ಕಾಯುವ ಮನಸ್ಸಿಲ್ಲದೆ ಮರುದಿನಕ್ಕೆ ಮೊದಲ ಅಪಾಯಿಂಟ್ಮೆಂಟ್ ತೆಗೆದುಕೊಂಡು ಹೊರಟರು.

ಮನೆಗೆ ಹೋಗುವ ತನಕ ಇಬ್ಬರೂ ಮಾತಾಡಲಿಲ್ಲ. ಒಳಗೆ ಬಂದವಳೇ ಸ್ಮಿತಾ ಬಟ್ಟೆ ಬದಲಾಯಿಸಿ, ಹಗುರಾದ ಒಂದು ನೈಟಿಯನ್ನು ಧರಿಸಿ ಹಾಸಿಗೆಯ ಮೇಲೆ ಒರಗಿಕೊಂಡಳು. ಒಂದು ಲೋಟ ನಿಂಬೆಹಣ್ಣಿನ ಶರಬತ್ತನ್ನು ಮಾಡಿಕೊಂಡು ಬಂದ ನಾಗೇಶ ಪ್ರೀತಿಯಿಂದ ಅವಳನ್ನು ಎಬ್ಬಿಸಿ ಕೂರಿಸಿ ಎದೆಗೊರಗಿಸಿಕೊಂಡು “ಬಾ, ನಾನೇ ನಿಂಗೆ ಕುಡಿಸ್ತೀನಿ” ಎನ್ನುತ್ತಾ ಲೋಟವನ್ನು ಅವಳ ತುಟಿಗೆ ಹಿಡಿದ. ಎರಡು ಗುಟುಕು ಕುಡಿದವಳು ಸಾಕು ಎನ್ನುವಂತೆ ಸನ್ನೆ ಮಾಡಿದಳು. ಪಕ್ಕದ ಟೇಬಲ್ಲಿನ ಮೇಲೆ ಲೋಟವಿಟ್ಟು “ಯಾಕಿಷ್ಟು ಅಪ್ಸೆಟ್ ಆಗಿದೀಯ ಸ್ಮಿತಾ. ಡಾಕ್ಟ್ರು ಹಾಗೆ ಹೇಳಿದ್ರೂಂತಾನಾ” ಅಂದ. “ಆ ಸತ್ತ ಮಗೂನ ನೋಡಿದ್ಮೇಲೂ ನಿಂಗೆ ನಮ್ಮಗೂನ ತೆಗೆಸ್ಬೇಕು ಅನ್ಸತ್ತಾ…” ಎನ್ನುತ್ತಾ ಮುಖ ಮುಚ್ಚಿಕೊಂಡು ಅಳತೊಡಗಿದಳು. ಆ ಮಗುವಿನ ಮುಖ ನೆನಪಾಗಿ ನಾಗೇಶನ ಮುಖವೂ ಕಪ್ಪಿಟ್ಟುಹೋಯಿತು. ಬಿಳುಪಿಂದ ನೀಲಿಗೆ ತಿರುಗುತ್ತಿದ್ದ ಗುಂಡಗಿದ್ದ ಕಂದಮ್ಮ… ಇನ್ನೂ ಸರಿಯಾಗಿ ಕಣ್ಣು ಬಿಟ್ಟು ಜಗತ್ತನ್ನೂ ನೋಡದ ಮಗು… ಬೆಳಕು ಎಂದರೇನು ಎಂದು ಗೊತ್ತಾಗುವ ಮುಂಚೆಯೇ ಶಾಶ್ವತವಾದ ಕತ್ತಲಿನಲ್ಲಿ ಕಳೆದುಹೋಗಿದ್ದ ಜೀವ… ಮತ್ತೊಮ್ಮೆ ಕಣ್ಮುಂದೆ ಬಂತು. ಅವಳ ಮುಂದೆ ಕೂರಲಾಗಲಿಲ್ಲ. ಬಾಲ್ಕನಿಗೆ ನಡೆದು ಕುರ್ಚಿಯಲ್ಲಿ ಕುಳಿತು ಸಿಗರೇಟು ಹಚ್ಚಿದ. ಬಾಲ್ಕನಿಯಿಂದ ಕಾಣುತ್ತಿದ್ದ ಗುಲ್ಮೊಹರ್ ಮರದಲ್ಲಿ ಒಂದು ವಾರದ ಹಿಂದೆ ಹಕ್ಕಿ ಗೂಡು ಕಟ್ಟಿತ್ತು. “ಮೊಟ್ಟೆ ಇಡಕ್ಕೆ ಬಂದಿದಾವೇನೋ” ಎಂದಿದ್ದಳು ಸ್ಮಿತಾ. “ಇರಬಹುದೇನೋ” ಅಂದಿದ್ದ ನಾಗೇಶ. ಅಂದಿನಿಂದ ಬಾಲ್ಕನಿಗೆ ಬಂದು ಕುಳಿತ ಕೂಡಲೇ ಒಂದು ಸಲ ಕಣ್ಣು ಆ ಮರದ ಕಡೆ ತಿರುಗುತ್ತಿತ್ತು. ಹೆಣ್ಣು ಹಕ್ಕಿ ಗೂಡಿನ ಬಾಗಿಲಲ್ಲೇ ಅತ್ತಿತ್ತ ಕಾಯುತ್ತಿತ್ತು. ಒಂದೈದು ನಿಮಿಷವಾಯಿತೇನೋ, ಗಂಡು ಹಕ್ಕಿಯೂ ಎಲ್ಲಿಂದಲೋ ಹಾರಿಬಂದು ಅವುಗಳ ಚಿಲಿಪಿಲಿ ಶುರುವಾಯಿತು. ನೋಡುತ್ತಾ ಹಾಗೆಯೇ ಕುಳಿತ… ಮರೆತಂತಿದ್ದ ಆ ಮಗುವಿನ ಮುಖ ಮತ್ತೆ ಕಣ್ಮುಂದೆ ಬಂದು ಹೊಗೆ ಗಂಟಲಲ್ಲಿ ಸಿಕ್ಕಿಕೊಂಡು ಕೆಮ್ಮು ಒತ್ತರಿಸಿಕೊಂಡು ಬಂತು. ಸಿಗರೇಟನ್ನು ಆಶ್ ಟ್ರೇನಲ್ಲಿ ಹೊಸಕಿ ಕೆಮ್ಮತೊಡಗಿದ…

ಮಧ್ಯಾಹ್ನದ ಮೇಲಾದರೂ ಆಫೀಸಿಗೆ ಹೋಗಬೇಕೆಂದುಕೊಂಡಿದ್ದವನು ಹೋಗುವ ಮನಸ್ಸಿಲ್ಲದೆ ಎರಡು ದಿನ ರಜೆಯಲ್ಲಿದ್ದೇನೆಂದು ತಿಳಿಸಿ ಫೋನ್ ಮಾಡಿದ. ಒಳಗೆ ಬಂದರೆ ಸ್ಮಿತಾ ಒರಗಿಕೊಂಡಿದ್ದಂತೆಯೇ ನಿದ್ರೆಗೆ ಜಾರಿದ್ದಳು. ಅವಳ ಕಣ್ಣಿಂದ ಜಾರಿದ ನೀರು ಹಾಗೇ ಕರೆಕಟ್ಟಿತ್ತು. ರಾತ್ರಿಯೆಲ್ಲಾ ನಿದ್ರೆಯಿಲ್ಲದೆ ಹೊರಳಾಡಿದ್ದವಳು, ಈಗಾದರೂ ಸ್ವಲ್ಪ ಮಲಗಲಿ ಎಂದುಕೊಂಡು ಫ್ಯಾನನ್ನು ತಿರುಗಿಸಿ ತೆಳ್ಳನೆಯ ಹೊದಿಕೆಯನ್ನು ಹೊದಿಸಿ ಲಿವಿಂಗ್ ರೂಮಿಗೆ ಬಂದು ಟೀವಿ ಹಾಕಿದ. ಎಲ್ಲೂ ಒಂದು ಒಳ್ಳೆಯ ಸುದ್ದಿಯಿಲ್ಲ…. ಬೇಸತ್ತು ಕಡೆಗೆ ನ್ಯಾಷನಲ್ ಜಿಯಾಗ್ರಫಿ ಚಾನಲ್ಗೆ ತಿರುಗಿಸಿದ. ಲೈಫ್ ಚೈನ್ ಬಗ್ಗೆ ಪ್ರೋಗ್ರಾಂ. ಕೀಟ ಕಪ್ಪೆಗೆ, ಕಪ್ಪೆ ಹಾವಿಗೆ, ಹಾವು ಗರುಡಕ್ಕೆ… ಹೀಗೆ ಆಹಾರದ ಸರಪಳಿ. ಪ್ರಾಣಿಗಳ ಮಿಲನ… ವಿವರಣೆ ನೀಡುತ್ತಿದ್ದವನು ಆಹಾರಕ್ಕಾಗಿ ಮಾತ್ರ ಇನ್ನೊಂದು ಪ್ರಾಣಿಯನ್ನು ಕೊಲ್ಲುವ, ಸಂತಾನಾಭಿವೃದ್ಧಿಗಾಗಿ ಮಾತ್ರ ಮೈಥುನದ ಪ್ರವೃತ್ತಿಯ ಬಗ್ಗೆ ವಿವರಿಸುತ್ತಿದ್ದ. ತಲೆಯೆತ್ತಿ ಗಡಿಯಾರ ನೋಡಿದರೆ ಆಗಲೇ ಹನ್ನೆರಡೂವರೆ. ಅಡುಗೆಯ ಕತೆ ಏನಾಗಿದೆಯೋ ನೋಡೋಣವೆಂದು ಅಡುಗೆಮನೆಗೆ ಹೋದರೆ ಎಲ್ಲವೂ ತಣ್ಣಗೆ ಮಲಗಿತ್ತು. ಕುಕ್ಕರ್ ನಲ್ಲಿ ಅನ್ನ, ಬೇಳೆ ಬೇಯಲಿಟ್ಟ. ಸಾರು ಮಾಡಿದರೆ ಸಾಕು ಎಂದುಕೊಂಡು ಜೊತೆಗಿರಲಿ ಎಂದು ಒಂದು ಸೌತೆಕಾಯಿ, ಕ್ಯಾರೆಟ್ಟನ್ನು ಹೆಚ್ಚಿಟ್ಟ. ಅಡುಗೆ ಮುಗಿಸಿ ಹೊರಬರುವಾಗ ಮಧ್ಯಾಹ್ನ ಒಂದೂವರೆ ದಾಟಿತ್ತು. ಕೋಣೆಯೊಳಗೆ ಇಣುಕಿದ. ಮಲಗಿದ್ದವಳ ಪಕ್ಕ ಕುಳಿತು ತಲೆನೇವರಿಸಿದ. ಎಚ್ಚರವಾಗಿ ಕಣ್ಬಿಟ್ಟಳು. “ಊಟ ಮಾಡೋಣ್ವಾ” ಎಂದ. “ಯಾಕೋ ಬೇಕು ಅನ್ನಿಸ್ತಿಲ್ಲ” ಅಂದಳು. “ಹಾಗಂದ್ರೆ ಹೇಗಪ್ಪಾ, ನಾನೇ ಕಲಸಿ ಕೊಡ್ತೀನಿ. ತಿಳಿ ಸಾರು ಅನ್ನ, ಸ್ವಲ್ಪ ತಿಂದು ಮತ್ತೆ ಮಲಗುವೆಯಂತೆ” ಬಲವಂತವಾಗಿ ಅವಳನ್ನು ಎಬ್ಬಿಸಿಕೊಂಡು ಡೈನಿಂಗ್ ಟೇಬಲ್ಲಿಗೆ ಕರೆದುಕೊಂಡು ಹೋದ. ನಾಲ್ಕು ತುತ್ತು ತಿನ್ನುವಷ್ಟರಲ್ಲಿ ಸಾಕಾಯಿತು. ಒಂದು ಲೋಟ ಮಜ್ಜಿಗೆಯನ್ನು ಕುಡಿದು ಮೇಲೆದ್ದಳು. “ನೀನು ಇನ್ನೂ ಸ್ವಲ್ಪ ಹೊತ್ತು ಮಲಕ್ಕೋ, ನಾನೇ ಎಲ್ಲಾ ಕ್ಲೀನ್ ಮಾಡಿ ಬರ್ತೀನಿ” ಎಂದ. ಅವಳು ಎದ್ದು ರೂಮಿಗೆ ಹೋದಳು. ಎಲ್ಲವನ್ನೂ ಒಪ್ಪ ಮಾಡಿ ಬಂದವನು ಅವಳ ಪಕ್ಕದಲ್ಲೇ ಉರುಳಿಕೊಂಡು ಅವಳನ್ನು ತನ್ನ ತೋಳಮೇಲೆ ಮಲಗಿಸಿಕೊಂಡು ಮಗುವಿನಂತೆ ಹಿತವಾಗಿ ತಟ್ಟತೊಡಗಿದ. ಸ್ವಲ್ಪ ಹೊತ್ತಿನಲ್ಲೇ ಇಬ್ಬರೂ ನಿದ್ರೆಗೆ ಜಾರಿದರು.

ಸಂಜೆ ಸ್ಮಿತಾಳೇ ಟೀ, ಬಿಸ್ಕತ್ತನ್ನು ಬಾಲ್ಕನಿಗೆ ತಂದಳು. ಇಬ್ಬರಿಗೂ ಆ ವಿಷಯವನ್ನು ತೆಗೆಯುವುದು ಬೇಕಿರಲಿಲ್ಲ. ಮಾತು ಮರೆಸಿ ಬೇರೆ ಏನೋ ಮಾತಾಡುತ್ತಾ ಕುಳಿತರು. ಸ್ವಲ್ಪ ಹೊತ್ತಿನಲ್ಲೇ ಯಾವತ್ತಿನ ನಗು, ಚೇಷ್ಟೆ ಅವರ ಮಧ್ಯೆ ತಾನಾಗಿ ಬಂತು. ಖುಷಿಯಾಗಿ ಏನೇನೋ ಹರಟುತ್ತಾ ಕುಳಿತರು. ಇದ್ದಕ್ಕಿದ್ದ ಹಾಗೆ ಜೋರಾಗಿ ಮಳೆಗಾಳಿ ಬೀಸಲು ಶುರುವಾಗಿ ದಟ್ಟನೆಯ ಮೋಡ ಕವಿಯತೊಡಗಿ ಹಿಂದೆಯೇ ರಪ ರಪ ಮಳೆ ಶುರುವಾಗೇ ಬಿಟ್ಟಿತು. ಒದ್ದೆಯಾಗುವುದನ್ನು ತಪ್ಪಿಸಿಕೊಳ್ಳಲು ಇಬ್ಬರೂ ಒಳಗೋಡಿದರು. ತಕ್ಷಣವೇ ದೊಡ್ಡ ಮಿಂಚು ಮನೆಯೊಳಗೂ ಬೆಳಕು ತೋರಿ ಮಾಯವಾಯಿತು. ಹಿಂದೆಯೇ ಜೋರಾದ ಸಿಡಿಲು, ಎಲ್ಲೋ ಏನೋ ಧಡಾರ್ ಎಂದು ಬಿದ್ದ ಸದ್ದು. ಕರೆಂಟು ಹೋಗಿ ಇನ್ವರ್ಟರ್ ಶುರುವಾಯಿತು. ʻಏನಾಯಿತೋʼ ಎಂದುಕೊಂಡರು ಇಬ್ಬರೂ. “ಸ್ವಲ್ಪ ಚಿಪ್ಸ್ ತರ್ಲಾ, ಹೀಗೆ ಮಳೆ ಬರ್ತಿರೋವಾಗ ಖಾರಖಾರವಾಗಿ ತಿನ್ನಕ್ಕೆ ಚೆನ್ನಾಗಿರತ್ತೆ” ಎನ್ನುತ್ತಾ ಎದ್ದು ತಟ್ಟೆಯಲ್ಲಿ ಚಿಪ್ಸ್ ತೆಗೆದುಕೊಂಡು ಬಂದಳು. ತಿನ್ನುತ್ತಾ ಇಬ್ಬರೂ ಹರಟೆಯನ್ನು ಮುಂದುವರೆಸಿದರು. ಒಂದರ್ಧ ಗಂಟೆಯ ನಂತರ ಮಳೆ ನಿಲ್ಲುತ್ತಾ ಬಂತು. “ಇಷ್ಟು ಮಳೆಗೆ ಎಷ್ಟು ಆರ್ಭಟ” ಎನ್ನುತ್ತಾ ಎದ್ದವಳು ಬಾಲ್ಕನಿಯಲ್ಲಿದ್ದ ಟೀಕಪ್ಪುಗಳನ್ನು ತರಲು ಹೋದಳು. ಸ್ಕ್ಯಾನಿಂಗ್ ಗೆ ಶತಪಥ ಲಾಂಜ್ ನಲ್ಲಿ ಭ್ರೂಣ

ಎಷ್ಟು ಹೊತ್ತಾದರೂ ಅವಳು ಹಿಂತಿರುಗದಿದ್ದಾಗ ನಾಗೇಶ ಎದ್ದು ತಾನೂ ಬಾಲ್ಕನಿಗೆ ಹೊರಟ. ಹೊರಗೆ ಏನನ್ನೋ ನೋಡುತ್ತಾ ಸ್ಮಿತಾ ಕಲ್ಲಿನಂತೆ ನಿಂತುಬಿಟ್ಟಿದ್ದಳು. ಸಿಡಿಲಿನ ಹೊಡೆತಕ್ಕೆ ಗುಲ್ ಮೊಹರ್ ಪಕ್ಕದಲ್ಲಿದ್ದ ತೆಂಗಿನ ಮರ ಮುರಿದು ಆ ಮರದ ಮೇಲೇ ಬಿದ್ದಿತ್ತು. ಆ ಹೊಡೆತಕ್ಕೆ ಕೊಂಬೆಯ ಜೊತೆಗೆ ಆ ಹಕ್ಕಿಗಳ ಗೂಡೂ ಕೆಳಗೆ ಬಿದ್ದು ಮೊಟ್ಟೆಗಳೆಲ್ಲಾ ಒಡೆದುಹೋಗಿದ್ದವು. ರೆಕ್ಕೆ ಪುಕ್ಕ ತರಿದಿದ್ದ ಆ ಹಕ್ಕಿಗಳೆರಡರ ಧ್ವನಿಯೂ ಉಡುಗಿಹೋಗಿ ಆ ಮೊಟ್ಟೆಗಳ ಮುಂದೆ ರೋದಿಸುತ್ತಿದ್ದಂತಿತ್ತು. ತಕ್ಷಣವೇ ನಾಗೇಶ ಕೆಳಗೆ ಓಡಿ ಆ ಹಕ್ಕಿಗಳೆರಡನ್ನೂ ಮನೆಗೆ ತಂದ. ಅವುಗಳ ಗಾಯಗಳನ್ನು ತೊಳೆದು ಬ್ಯಾಂಡೇಜ್ ಮಾಡಿ ಒಂದು ಕಾರ್ಟನ್ ಡಬ್ಬಿಯಲ್ಲಿ ಮೆತ್ತಗಿನ ಬಟ್ಟೆಯನ್ನು ಹಾಸಿ ಅವುಗಳನ್ನು ಅದರೊಳಗೆ ಕೂರಿಸಿ ಕಾಳು, ನೀರು ತಂದಿಟ್ಟ. ಗರಬಡಿದಂತಿದ್ದ ಸ್ಮಿತಾಳನ್ನು ಕರೆದುಕೊಂಡು ಒಳಬಂದ. ರಾತ್ರಿಯೆಲ್ಲಾ ಇಬ್ಬರಿಗೂ ನಿದ್ರೆ ಬರಲಿಲ್ಲ… ಅವೆರಡೂ ಹಕ್ಕಿಗಳು ಚಿವ್ ಚಿವ್ ಎನ್ನುವುದು ಕೇಳುತ್ತಲೇ ಇತ್ತು…

ಎಂದಿನಂತೆಯೇ ದಿನವೊಂದು ಶುರುವಾಯಿತು. ಎದ್ದವನೇ ನಾಗೇಶ ಕಾರ್ಟನ್ ಡಬ್ಬಿಯಲ್ಲಿ ಇಣುಕಿದ. ಎರಡೂ ಹಕ್ಕಿಗಳು ಸ್ವಲ್ಪ ಚೇತರಿಸಿಕೊಂಡಂತೆ ಕಾಣುತ್ತಿದ್ದವು. ಖುಷಿಯಾಗಿ ಡಬ್ಬಿಯನ್ನು ತಂದು ಬಾಲ್ಕನಿಯಲ್ಲಿರಿಸಿದ. ಕಾಫಿಲೋಟವನ್ನು ಹಿಡಿದು ಬಂದ ಸ್ಮಿತಾಳಿಗೂ ಖುಷಿಯಾಯಿತು. ಅಲ್ಲೇ ಕುಳಿತು ಇಬ್ಬರೂ ಕಾಫಿ ಹೀರತೊಡಗಿದರು. ನಾಗೇಶ ಏನೋ ಹೇಳಲು ಹೊರಟ. ಅಷ್ಟರಲ್ಲಿ ಹೊರಗೆ ಕಾಲಿಂಗ್ ಬೆಲ್ ಸದ್ದಾಯಿತು. ಗಂಗಮ್ಮ ಬಂದಳೇನೋ ಎಂದುಕೊಂಡು ಇಬ್ಬರೂ ಎದ್ದರು. ಕಸಗುಡಿಸುತ್ತಾ ಗಂಗಮ್ಮ ಕತೆಯನ್ನು ಮುಂದುವರೆಸಿದಳು “ಸ್ಮಿತಾಮ್ಮ ಅವ್ರು ಸಿಕ್ಕಾಕ್ಕೊಂಡು ಬಿಟ್ರಂತೆ. ಕನಕಪುರದಲ್ಲಿ ವಾಸು ಓಟ್ಲಲ್ಲಿ ಮಸಾಲೆ ದೋಸೆ ತಿಂತಾ ಕುಂತ್ಕಂಡಿದ್ರಂತೆ. ಇಡ್ಕಂಡು ಬಂದ್ರಂತೆ”. “ನಿಂಗೆ ಹೆಂಗೆ ಗೊತ್ತಾಯ್ತು?” ಎಂದಳು ಸ್ಮಿತಾ. ಅಯ್ಯಾ ನಮ್ಮ ಗೋಪಣ್ಣನೇ ಅಲ್ವಾ ಕಂಪ್ಲೀಂಟ್ ಕೊಟ್ಟಿದ್ದದು. ಅವ್ನೂ ಮದ್ಲಿಗೆ ಟೇಸನ್ನಾಗೆ ಕೆಲ್ಸ ಮಾಡ್ತಿದ್ನಲಾ. ನಮ್ಮನೀಂದ ಮೂರ್ನೇ ಮನ್ಯೇ ಅವುಂದು. ಅಂತೂ ಇಡ್ಕಂಬಂದ್ರಂತೆ ನೋಡು” ಎಂದವಳು ಗುಡಿಸುವುದನ್ನು ನಿಲ್ಲಿಸಿ ಹಾಗೇ ನಿಂತು ಮಾತು ಮುಂದುವರೆಸಿದಳು “ಅಲ್ಕಣಮ್ಮಾ ಇಂಗೂ ಇದ್ದದಾ ಜಗತ್ತಲ್ಲಿ. ಆ ಉಡ್ಗಿ ಯಾರ್ನೋ ಪಿರೀತಿ ಮಾಡಿ ಬಸಿರಾಗಿ ಅಪ್ಪ ಅಮ್ನಿಂದ ಮುಚ್ಚಿಟ್ಟಿದ್ಲಂತೆ. ಅವ್ರಿನ್ ಎಂತಾ ಅಪ್ಪ ಅಮ್ದೀರು! ಅವ್ರಿಗ್ ತಿಳ್ಯೋ ವತ್ಗೆ ನಾಕು ತುಂಬಿ ಐದಕ್ಕೆ ಬಿದ್ದದಂತೆ. ಆ ಉಡ್ಗನ್ನ ಕೇಳಿದ್ಕೆ, ʻಮಗು ಇದ್ರೆ ನಮ್ಮಮ್ಮ, ಅಪ್ಪ ವಪ್ಪಲ್ಲ. ತೆಗಿಸ್ಕಳ್ಳಿ. ನಾನೇ ಅವ್ರತ್ರ ಮಾಡಾಡಿ ಮದ್ವೆಗೆ ವಪ್ಪುಸ್ತಿನಿ. ಖಂಡ್ತಾ ಮದ್ವೆ ಮಾಡ್ಕತಿನಿʼ ಅಂದ್ನಂತೆ. ದಾಕುಟ್ರತ್ರ ಓದ್ರೆ ಇನ್ನೇನು ಐದು ತುಂಬಕ್ಕೆ ಬಂದದೆ, ಈಗೇನೂ ಮಾಡಕ್ಕಾಗಲ್ಲ ಅಂದ್ರಂತೆ. ಎಲ್ಲೋ ಬನ್ನೂರು ಅತ್ರದ ಅಳ್ಳಿಯಂತೆ. ಮನೆಕಡೆ ಚಂದಾಗವ್ರಂತೆ. ಅದ್ಕೇ ಎರ್ಗೆಯಾದ್ಮೇಕೆ ಕರ್ಕಂಡು ಓಗ್ತೀವಿ ಅಂತ ಇಲ್ಲಿ ಸ್ವಾದರಮಾವ್ನ ವಪ್ಸಿ ಅವ್ರ ಮನೇಲಿ ಬಿಟ್ಟಿದ್ರಂತೆ. ಮೊನ್ನಿಂದಿನ ಆಸ್ಪತ್ರೇಂದ ಅಂಗೇ ಕರ್ಕಂಡೋಯ್ತೀವಿ ಅಂತ ಅವಂಗೆ ಯೋಳಿದ್ರಂತೆ. ಊರ್ಗೆ ವಾಪ್ಸು ಓಗ್ತಾ ಎಂಥಾ ಕೆಲ್ಸ ಮಾಡವ್ರೆ ನೋಡಿ… ಯಪ್ಪಾ ಸಿವ್ನೆ” ಎಂದು ಮತ್ತೆ ಪೊರಕೆ ಕೈಗೆ ತೆಗೆದುಕೊಂಡಳು. ನಾಗೇಶ, ಸ್ಮಿತಾ ಇಬ್ಬರೂ ಒಂದು ಕ್ಷಣ ಮಂಕಾಗಿ ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಗಡಿಯಾರ ನೋಡಿದ ಸ್ಮಿತಾ “ಸರಿ, ಇಡ್ಲಿಗೆ ಇಡ್ತೀನಿ, ಚಟ್ನಿ ಪುಡಿ ಜೊತೆ ತಿಂದ್ರಾಯ್ತು” ಎನ್ನುತ್ತಾ ಒಳನಡೆದಳು. “ನಾನೂ ಬೇಗ ಸ್ನಾನ ಮುಗ್ಸಿ ಬಿಡ್ತೀನಿ” ಎನ್ನುತ್ತಾ ನಾಗೇಶ ಒಳನಡೆದ. ಇಬ್ಬರೂ ರೆಡಿಯಾಗಿ ಬಂದು ತಿಂಡಿ ತಿನ್ನುತ್ತಾ ಗಂಗಮ್ಮನಿಗೂ “ತಿಂಡಿ ತೊಗೋ ಬಾ” ಎಂದು ಕರೆದರು.

ವಟವಟ ಗೊಣಗುಟ್ಟುತ್ತಲೇ ಕೆಲಸ ಮಾಡುತ್ತಿದ್ದ ಗಂಗಮ್ಮ ಪಾತ್ರೆಗಳ ಬುಟ್ಟಿಯನ್ನು ಅಡುಗೆಮನೆಯಲ್ಲಿರಿಸಿ ಕೈ ಒರಸಿಕೊಂಡು ಬಂದು ತಿಂಡಿಯ ತಟ್ಟೆ ತೆಗೆದುಕೊಂಡಳು. ಒಂದು ತುಂಡು ಬಾಟಲ್ಲಿ ಇಟ್ಟುಕೊಂಡವಳೇ “ಅಲ್ಲಾ ಸ್ಮಿತಮ್ಮಾ ನೀನೇ ಯೋಳು, ತಾನು ಉಟ್ಸಿದ್ ಮಗೂನೇ ಕೊಂದ್ಬಿಡು ಅಂದ ಮನ್ಸ ಅವ್ಳಿಗೆ ಇನ್ನೆಂತಾ ಬಾಳು ಕೊಟ್ಟಾನು. ಅವ್ನು ಇನ್ನೆಂತಾ ಮನ್ಸ! ಇವ್ಳು ಚಂಡಾಲಿ, ಅವ್ನನ್ ನಂಬ್ಕಂಡು ಇಂತಾ ಪಾಪ ಮಾಡವ್ಳಲ್ಲ, ಇದ್ಸರೀನಾ. ಅವ್ರಿಗೆ ಬ್ಯಾಡ್ದಿದ್ರೆ ಮಕ್ಳಿಲ್ದೋರು ಎಸ್ಟೋ ಜನ ಅವ್ರೆ, ಮದ್ಲೆ ಅಂತಾವ್ರು ಯಾರ್ನಾರಾ ಉಡ್ಕಿ ಕೊಡ್ಬೋದಿತ್ತಲ್ವ. ಬ್ಯಾಡ ಯಾವ್ದಾರೂ ಆಸ್ರಮಗೋಳಿರ್ತಾವಲ್ಲಾ ಅಲ್ಲಾದ್ರೂ ಇಟ್ಟೋಗಿದ್ರೆ… ಇಂತಾ ಪಾಪಿ ಕೆಲ್ಸ ಮಾಡ್ತಾರಾ ನೀನೇ ಯೋಳು ಸ್ಮಿತಮ್ಮಾ” ಕಣ್ಣೊರಸಿಕೊಂಡು “ನನ್ನ ಮಗ್ಳ ಮಗು ಸತ್ತು ಉಟ್ತು ಕಣಮ್ಮಾ, ಮತ್ತೆ ಮಕ್ಳಾಗ್ನಿಲ್ಲ. ನಂಗಾರಾ ಆ ಮಗು ಸಿಗ್ಬಾರ್ದಿತ್ತಾ. ನನ್ ಮಗ್ಳಿಗ್ ಕೊಟ್ಟು ಬೆಳೆಸ್ತಿದ್ದೆ” ಎನ್ನುತ್ತಾ ತಿಂಡಿ ತಿಂದು ಮುಗಿಸಿ ಎದ್ದಳು. ಸ್ಮಿತಾ, ನಾಗೇಶ ಏನೂ ಮಾತಾಡದೆ ಎದ್ದು ಕೈ ತೊಳೆದು ಹೊರಡಲನುವಾದರು. ಗಂಗಮ್ಮನ ಕೆಲಸವೂ ಮುಗಿದಿತ್ತು. ಅವಳೂ ತಟ್ಟೆಗಳನ್ನು ತೊಳೆದಿಟ್ಟು ತನ್ನ ಪಾಡಿಗೆ ತಾನು ಮಾತಾಡುತ್ತಲೇ ಹೊರಟಳು. ಆಗಲೇ ಒಂಭತ್ತೂವರೆ. ಮೊದಲ ಅಪಾಯಿಂಟ್ಮೆಂಟ್ ತಮ್ಮದು. ನಾಗೇಶ ಕಾರು ತೆಗೆಯಲು ಗಡಬಡಿಸಿ ಓಡಿದ. ಸ್ಮಿತಾ ಬಾಲ್ಕನಿಗೆ ಹೋಗಿ ಒಂದು ಬ್ರೆಡ್ಡನ್ನು ಚೂರು ಚೂರು ಮಾಡಿ ಆ ಹಕ್ಕಿಗಳ ಡಬ್ಬಿಗೆ ಹಾಕಿ ಬಟ್ಟಲಿಗೆ ನೀರು ತುಂಬಿಸಿ ಬಾಲ್ಕನಿಯ ಬಾಗಿಲನ್ನು ಎಳೆದುಕೊಂಡು ಬಂದು ಆಸ್ಪತ್ರೆಯ ರೆಕಾರ್ಡ್, ಮನೆ ಬೀಗದಕೈಯನ್ನು ತೆಗೆದುಕೊಂಡು ಬಾಗಿಲನ್ನು ಎಳೆದುಕೊಂಡು ಬಂದು ಕಾರಲ್ಲಿ ಕುಳಿತಳು.

ಸ್ವಲ್ಪ ದೂರ ಹೋದ ತಕ್ಷಣ ಏನೋ ಹೇಳಲೆಂಬಂತೆ ನಾಗೇಶ “ಸ್ಮಿತ್” ಎನ್ನುತ್ತಾ ಅವಳೆಡೆಗೆ ತಿರುಗಿದ. ಏನೋ ಯೋಚನೆಯಲ್ಲಿ ಮುಳುಗಿದ್ದವಳು ಅವನೆಡೆಗೆ ತಿರುಗುವಾಗಲೇ ಅವನಿಗೆ ಆಫೀಸಿನ ಕರೆ ಬಂತು. ಹ್ಯಾಂಡ್ಫ್ರೀನಲ್ಲಿ ಮಾತಾಡುತ್ತಲೇ ಕಾರು ಚಲಾಯಿಸಿದ. ಆಸ್ಪತ್ರೆ ಬಂದರೂ ಅವನ ಕರೆ ಮುಗಿದಿರಲಿಲ್ಲ. ಬಾಗಿಲು ತೆರೆದು ಒಳಗೆ ಹೋದ ಸ್ಮಿತಾ ರಿಸೆಪ್ಷನ್ನಲ್ಲಿ ಫೈಲನ್ನು ಕೊಟ್ಟಳು. ಅವಳು ಸ್ಕ್ಯಾನಿಂಗ್ ರೂಮಿನ ದಾರಿ ತೋರಿ “ಅಲ್ಲೇ ಹೊರಗಡೆ ಇರುವ ಸೋಫಾದಲ್ಲಿ ಕಾಯ್ತಿರಿ. ನೀರು ಸಾಕಷ್ಟು ಕುಡೀತಿರಿ, ಇನ್ನೇನು ಡಾಕ್ಟ್ರು ಬಂದ್ಬಿಡ್ತಾರೆ” ಎಂದಳು. ಸ್ಮಿತಾ ಅಲ್ಲೇ ಹೋಗಿ ಕುಳಿತು ಇನ್ನೊಂದಿಷ್ಟು ನೀರನ್ನು ಕುಡಿದು ನಾಗೇಶನ ಹಾದಿ ಕಾಯತೊಡಗಿದಳು. ನಾಗೇಶ ಬಂದು ಪಕ್ಕಕ್ಕೆ ಕುಳಿತು “ಏನಂತೆ” ಅನ್ನುವ ಹೊತ್ತಿಗೆ ಅವಳ ಹೆಸರನ್ನು ಕರೆದರು. ನಾಗೇಶನನ್ನೂ ಒಳಗೆ ಹೋಗಲು ಬಿಟ್ಟರು. ಪೈಲ್ ನೋಡಿದ ಡಾಕ್ಟರ್ ತಮ್ಮ ಕೆಲಸ ಶುರುಮಾಡಿದರು. ತೆರೆಯ ಮೇಲೆ ಬಂದಿದ್ದೇನೂ ಇಬ್ಬರಿಗೂ ಅರ್ಥವಾಗಲಿಲ್ಲ, ಅವರು ಹೇಳಲೂ ಇಲ್ಲ. ಮುಗಿದ ತಕ್ಷಣ “ನಿಮ್ಮ ಡಾಕ್ಟ್ರಿಗೆ ರಿಪೋರ್ಟ್ ಕಳಿಸ್ತೀನಿ. ನೀವು ಅವರಿಗಾಗಿ ಕಾಯಿರಿ” ಎಂದವರೇ ನರ್ಸ್ ಬಳಿ ಮುಂದಿನವರನ್ನು ಕರೆಯಲು ತಿಳಿಸಿದರು. ಇವರಿಬ್ಬರೂ ಹೊರಬಂದು ವೈಟಿಂಗ್ ಲಾಂಜ್ನಲ್ಲಿ ಕುಳಿತರು.

“ಇನ್ನೂ ಎಷ್ಟು ಹೊತ್ತಾಗತ್ತೋ…” ಎಂದಳು ಆತಂಕದಲ್ಲಿದ್ದ ಸ್ಮಿತಾ. “ಆದ್ರೆ ಜಾಸ್ತಿ ಜನ ಇದ್ದ ಹಾಗಿಲ್ಲ” ಎಂದ ನಾಗೇಶ ಮಾತು ಮುಂದುವರೆಸುವುದರೊಳಗೆ ಮತ್ತೆ ಆಫೀಸಿನ ಕರೆ. ಎದ್ದು ಹೊರನಡೆದ. ಹತ್ತು ನಿಮಿಷವಾಯಿತೇನೋ. ಇವಳ ಹೆಸರನ್ನು ಕರೆದರು. ರಿಸೆಪ್ಷನಿಷ್ಟ್ ಬಳಿ ನಾಗೇಶ ಬಂದ ತಕ್ಷಣ ಒಳ ಕಳಿಸುವಂತೆ ಹೇಳಿ ಡಾಕ್ಟರ್ ಚೇಂಬರಿಗೆ ಹೋದಳು. ಐದು ನಿಮಿಷ ಮಾತಿಲ್ಲದೆ ಇವಳ ರಿಪೋರ್ಟನ್ನು ನೋಡುತ್ತಿದ್ದ ಡಾಕ್ಟರ್ “ಎಲ್ಲಿ ನಿಮ್ಮ ಹಸ್ಬೆಂಡ್” ಎಂದರು. “ಯಾವ್ದೋ ಆಫೀಸ್ ಕಾಲ್ ಬಂತು, ಬರ್ತಾರೆ” ಎಂದಳು. ಕೆಲಕ್ಷಣದಲ್ಲೇ ನಾಗೇಶ ಒಳ ಬಂದ. ಡಾಕ್ಟರ್ “ನೀವು ಅಬಾರ್ಷನ್ ಮಾಡಿಸಿಕೊಳ್ಳೋ ನಿರ್ಧಾರ ಮಾಡಿದೀರಲ್ವಾ?” ಎಂದರು. ತಕ್ಷಣವೇ ನಾಗೇಶ “ಮಾಡಿದ್ವಿ, ಆದ್ರೆ ಈಗ ಬೇಡ ಅಂದ್ಕೋತಿದೀನಿ. ಸ್ಮಿತಂಗೆ ತೆಗ್ಸೋಗೆ ಅಷ್ಟು ಮನಸ್ಸಿರ್ಲಿಲ್ಲ; ನಾನು ಕನ್ವೀನ್ಸ್ ಮಾಡಿದ್ದೆ ಅಷ್ಟೇ. ಈಗ ನಂಗೂ ಅವ್ಳ ನಿರ್ಧಾರಾನೇ ಸರಿ ಅನ್ನಿಸ್ತಿದೆ” ಅಂದ. ನಂಬಲಾಗದಂತೆ ಸ್ಮಿತಾ ಅವನ ಮುಖ ನೋಡಿದಳು. ನಾಗೇಶ ʻಹೌದುʼ ಎನ್ನುವಂತೆ ಅವಳ ಕೈ ಅದುಮಿದ.

ಈಗ ಡಾಕ್ಟರ್ ಮತ್ತಷ್ಟು ಗಂಭೀರವಾಗಿ “ಈಗಾಗ್ಲೇ ಎಂಟನೇ ವಾರದಲ್ಲಿದೀರಿ. ಆದ್ರೆ ಒಳಗಿರೋ ಮಗುವಿನ ಬೆಳವಣಿಗೆ ಆರು ವಾರಗಳಷ್ಟೂ ಇಲ್ಲ. ಹೃದಯದ ಬಡಿತ ಬಿಟ್ಟೂ ಬಿಟ್ಟೂ ಕೇಳ್ತಿದೆ ಅಂತ ರಿಪೋರ್ಟ್ ಬಂದಿದೆ. ಹೀಗೇ ಮುಂದುವರೆದರೆ ಮಗುವಿನ ಬೆಳವಣಿಗೆ ಎಕ್ಸ್ಪೆಕ್ಟೆಡ್ ರೀತಿಯಲ್ಲಿ ಆಗದೇ ಇರಬಹುದು. ಕೆಲವೊಮ್ಮೆ ಮಿರಾಕಲ್ ಅನ್ನುವ ಹಾಗೆ ಒಂದೆರಡು ವಾರಗಳಲ್ಲಿ ಸರಿಹೋದ ನಿದರ್ಶನಗಳೂ ಇವೆ. ಇಂಥ ಕೇಸುಗಳಲ್ಲಿ ಕೆಲವೊಮ್ಮೆ ತಾನೇ ತಾನಾಗಿ ಅಬಾರ್ಟ್ ಆಗಿಬಿಡುವ ಸಾಧ್ಯತೆ ಕೂಡ ಇವೆ. ಎಲ್ಲವೂ ಪ್ರಕೃತಿಯ ನಿಯಮವೇ. ಈಗ ನೀವೇ ನಿರ್ಧರಿಸಿ. ಒಂದೆರಡು ವಾರ ಕಾಯುವ ಹಾಗಿದ್ದರೆ ಪರವಾಗಿಲ್ಲ, ಒಂದು ಛಾನ್ಸ್ ತೊಗೋಬಹ್ದು. ಮುಂದಿನವಾರ ಮತ್ತೆ ಸ್ಕ್ಯಾನ್ ಮಾಡಿ ನೋಡೋಣ, ಡೆವಲಪ್ಮೆಂಟ್ ಇದ್ರೆ ಇನ್ನೂ ಒಂದು ವಾರ ಕಾದು ಮತ್ತೂ ಒಂದ್ಸಲ ಸ್ಕ್ಯಾನ್ ಮಾಡಿ ಡಿಸಿಷನ್ ತೊಗೋಬಹುದು. ʻಮಗು ಹೇಗಿದ್ದರೂ ನಮಗೆ ಪರವಾಗಿಲ್ಲʼ ಅನ್ನೋ ಹಾಗಿದ್ದರೆ ಅದು ನಿಮ್ಮ ನಿರ್ಧಾರ. ಆರೋಗ್ಯವಂತ ಮಗುವೇ ಬೇಕು ಅನ್ನುವ ಹಾಕಿದ್ದರೆ ಅದೂ ನಿಮ್ಮದೇ ನಿರ್ಧಾರ. ಮನೆಗ್ಹೋಗಿ ನಿಧಾನವಾಗಿ ಯೋಚನೆ ಮಾಡಿ. ಕಾಯುವುದಿದ್ದರೆ ಫೋನ್ ಮಾಡಿ ಮುಂದಿನ ಸ್ಕ್ಯಾನಿಂಗ್ಗೆ ಅಪಾಯಿಂಟ್ಮೆಂಟ್ ತೊಗೊಳಿ” ಎಂದು ಸುಮ್ಮನೆ ಕುಳಿತರು. “ಇನ್ನು ಎರಡು ವಾರ… ಆಮೇಲೂ ನಾವು ಬೇಡ ಅನ್ನೋ ಡಿಸಿಷನ್ ತೊಗೊಂಡ್ರೆ ಏನೂ ತೊಂದ್ರೆ ಇಲ್ವಾ” ನಾಗೇಶನೇ ಕೇಳಿದ. “ಎಂಟೊಂಭತ್ತು ವಾರಗಳಲ್ಲಿ ಏನೂ ತೊಂದರೆಯಿಲ್ಲ. ತುಂಬಾ ಸುಲಭ. ಮೂರುತಿಂಗಳಿಗೆ ಬಂದುಬಿಟ್ಟರೆ ಸ್ವಲ್ಪ ಮೆಡಿಕಲ್ ಸೂಪರ್ವಿಷನ್ನಲ್ಲಿ ಮಾಡ್ಬೇಕಾಗತ್ತೆ” ಎನ್ನುತ್ತಾ ಮುಖ ನೋಡಿದರು. ನಾಗೇಶ ಸ್ಮಿತಳ ಮುಖ ನೋಡಿದ. “ಕಾಯೋಣ ಅಲ್ವಾ” ಕೇಳಿದಳು ಸ್ಮಿತಾ. “ಕಾದು ನೋಡೋಣ ಅನ್ಸುತ್ತೆ” ಅಂದ ನಾಗೇಶ. “ಬೆಸ್ಟ್ ಆಫ್ ಲಕ್” ಎಂದ ಡಾಕ್ಟರು ಕೈಕುಲುಕಿ ಬೀಳ್ಕೊಟ್ಟು ರಿಸೆಪ್ಷನ್ನವರಿಗೆ ಮುಂದಿನವರನ್ನು ಕಳಿಸಲು ಕರೆಮಾಡಿದರು.

ಮತ್ತೆ ಫೋನ್ ಮಾಡುವುದಿನ್ನೇನು ಎಂದುಕೊಂಡು ಸ್ಕ್ಯಾನಿಂಗ್ಗೆ ಬರೆಸಿ ಮನೆಗೆ ಹೊರಟರು. ಕೆಲಕಾಲ ಮೌನವಾವರಿಸಿತ್ತು. ಕಿಟಕಿಯ ಕಡೆ ಮುಖ ಮಾಡಿದ್ದವಳನ್ನು ನಾಗೇಶ “ಸ್ಮಿತ್…” ಎಂದು ಕರೆದ. ನೀರುತುಂಬಿದ ಕಣ್ಣುಗಳನ್ನು ಅವನೆಡೆಗೆ ತಿರುಗಿಸಿದಳು. “ಇಷ್ಟಕ್ಕೆಲ್ಲಾ ಅಳ್ತಾರಾ ಸ್ಮಿತ್… ಡೋಂಟ್ ವರಿ, ಎ ಮಿರಾಕಲ್ ಮೇ ಹಾಪನ್” ಎಂದ ಅವಳ ಕೈಅದುಮುತ್ತಾ. ಅವಳೇನೂ ಮಾತಾಡದೆ ಮತ್ತೆ ಕಿಟಕಿಯ ಕಡೆಗೆ ತಿರುಗಿದಳು… ಮನೆ ಬಂತು. ಬಾಗಿಲು ತೆರೆದು ರೂಮಿಗೆ ಹೋದವಳಿಗೆ ಬಾಲ್ಕನಿಯಲ್ಲಿನ ಹಕ್ಕಿಗಳ ಜ್ಞಾಪಕ ಬಂದು ನೋಡಲು ಹೋದಳು. ಪೆಟ್ಟಿಗೆಯಲ್ಲಿ ಅವಿರಲಿಲ್ಲ. ಯಾವುದಾದರೂ ಪ್ರಾಣಿ ಅವನ್ನು ತಿಂದಿರಬಹುದೇ ಎಂದು ಭಯವಾಗಿ ಎದೆ ಹೊಡೆದುಕೊಳ್ಳತೊಡಗಿತು. ಅಷ್ಟರಲ್ಲಿ ಚಿಲಿಪಿಲಿ ಶಬ್ದ ಕೇಳಿ ಆ ದಿಕ್ಕಿಗೆ ತಿರುಗಿದಳು. ಅವಾಗಲೇ ತಮ್ಮ ಮರವನ್ನು ಸೇರಿ ಮತ್ತೆ ಗೂಡು ಕಟ್ಟುವ ತಯಾರಿಯಲ್ಲಿದ್ದವು. ಕೆಳಗೆ ಬಿದ್ದಿದ್ದ ಒಂದೊಂದೇ ಕಡ್ಡಿಗಳನ್ನು, ಹುಲ್ಲಿನ ಎಸಳುಗಳನ್ನು ನಿಧಾನವಾಗಿ ಮೇಲಕ್ಕೆ ಒಯ್ದು ಜೋಡಿಸುತ್ತಿದ್ದವು. ತನ್ಮಯತೆಯಿಂದ ಅದನ್ನೇ ನೋಡುತ್ತಾ ನಿಂತುಬಿಟ್ಟಳು. ಹಿಂದೆಯೇ ಬಂದು ಅವಳ ದೃಷ್ಟಿಯನ್ನು ಅನುಸರಿಸಿ ನೋಡಿದ ನಾಗೇಶನ ಮುಖದಲ್ಲೂ ಸಂಭ್ರಮವರಳಿತು. ಹಿತವಾಗಿ ಅವಳನ್ನು ಬಳಸಿ ನಿಂತುಕೊಂಡ. ಹಕ್ಕಿಗಳು ತಮ್ಮಪಾಡಿಗೆ ತಾವು ಹೊಸಗೂಡನ್ನು ಕಟ್ಟಿಕೊಳ್ಳುತ್ತಿದ್ದವು…

ಟಿ.ಎಸ್. ಶ್ರವಣ ಕುಮಾರಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಕಥಾ ಕ್ಷಿತಿಜ/ ಭ್ರೂಣ – ಟಿ.ಎಸ್. ಶ್ರವಣ ಕುಮಾರಿ

  • ಸರೋಜಾ ಸಂತಿ

    ತುಂಬಾ ಚನ್ನಾಗಿದೆ, ಪ್ರಕೃತಿ ಮತ್ತು ಮಾನವನ ಸಂಬಂಧದ ಕೊಂಡಿ ಮಾನವನನ್ನು ಎಚ್ಚರಿಸುತ್ತಲೇ ಇರುತ್ತದೆ.

    Reply

Leave a Reply to ಸರೋಜಾ ಸಂತಿ Cancel reply

Your email address will not be published. Required fields are marked *