Latestಅಂಕಣ

ಕಣ್ಣು ಕಾಣದ ನೋಟ/ದೇವರು ಕೊಡದ್ದು – ಎಸ್.ಸುಶೀಲ ಚಿಂತಾಮಣಿ

ಹಲವರ ಎತ್ತರದ ಬದುಕು ನಮ್ಮಂತಹವರ ಬರಿಯ ಕಣ್ಣಿಗೆ ಕಾಣುವುದಿಲ್ಲ. ಕಣ್ಣಿಗೆ ಕಾಣದ ಆ ಎತ್ತರದ ಬದುಕಿನ ಕಡೆಗಿನ ನೋಟ ನಮ್ಮದಾಗುವುದು ಯಾವಾಗಲೋ?

ನನ್ನ ಗುಮಾಸ್ತನ ಬಗ್ಗೆ ನಾನು ಬರೆಯಲೇ ಬೇಕು. ಅವನು ನನ್ನ ಕಛೇರಿಯನ್ನು ಸೇರಿದ್ದು ನನ್ನ ಕಾರಿನ ಡ್ರೈವರ್ ಆಗಿ. 8 ಘಂಟೆಗೆ ಹೊರಡೋಣ ಎಂದು ನಾನು ಹೇಳಿದ್ದರೆ ಅವನು ಏಳೂ ಮುಕ್ಕಾಲಿಗೇ ಹಾಜರು. ಜಿ.ಪಿಎಸ್ ಇಲ್ಲದ ಕಾಲದಲ್ಲಿ ಹೊಸ ಜಾಗಕ್ಕೆ ಹೋಗಬೇಕಾದರೆ, ಒಂದು -ಎರಡು ಕಡೆ ಕಾರನ್ನು ಪಕ್ಕಕ್ಕೆ ನಿಲ್ಲಿಸಿ, ತಾನೇ ಹೋಗಿ ಸರಿಯಾದವರನ್ನು ಅಡ್ರೆಸ್ ಕೇಳಿ ಕರೆದುಕೊಂಡು ಹೋಗಿ ಸರಿಯಾದ ಜಾಗದಲ್ಲಿ ಶಿಸ್ತಾಗಿ ನಿಲ್ಲಿಸುವ ರೀತಿ. ಯಾರೇ ಆಗಲಿ ಕಾರಿನ ಬಾಗಿಲನ್ನು ತಾನೇ ತೆಗೆದು ತಾನೇ ಹಾಕುತ್ತಿದ್ದ. ಬೇಡ ನಾನೇ ಹಾಕಿಕೊಳ್ಳುತ್ತೇನೆ ಎಂದರೆ “ಬೇಡ ಮೇಡಂ . ನೀವಾಗಲೀ ಬೇರೆಯವರಾಗಲೀ ಡಬಾರ್ ಅಂತ ಕಾರಿನ ಬಾಗಿಲು ಹಾಕಿದರೆ ನನಗೆ ಎದೆ ಒಡೆದಂತೆ ಆಗುತ್ತೆ” ಅನ್ನುತ್ತಿದ್ದ. ‘ಕಾರನ್ನು ಹತ್ತ ಬೇಕಾದರೆ ಚಪ್ಪಲಿಗೆ ಅಂಟಿಕೊಂಡ ಮಣ್ಣನ್ನು ಉದುರಿಸಿ ಹತ್ತ ಬೇಕು’ ಎಂದು ನನಗೂ ಕೇಳುವಂತೆ ನನ್ನ ಆಫೀಸಿನ ಇತನ ಕಿರಿಯ ಸಹೋದ್ಯೋಗಿಗಳಿಗೆ ಹೇಳಿದ್ದ. ಬೆಲೆಬಾಳುವ ವಾಚು ಕಟ್ಟಿಕೊಳ್ಳುವ ನಾನು ಸಮಯ ತಪ್ಪಿಸಬಹುದು. ಆದರೆ ವಾಚೇ ಕಟ್ಟಿಕೊಳ್ಳದೆಯೂ ಅವನೆಂದೂ ಸಮಯ ಮೀರಿದ್ದೇ ಇಲ್ಲ. ಮೆಲ್ಲಮೆಲ್ಲನೇ ಆಫೀಸು ಕೆಲಸ ಕಲಿಯುತ್ತಾ ಗುಮಾಸ್ತನೂ ಆದ.

ಹೀಗೊಂದು ದಿನ ಮಲ್ಲೇಶ್ವರಂ ಕಡೆ ಹೋಗುತ್ತಿದ್ದಾಗ ಒಬ್ಬ ವ್ಯಕ್ತಿಯನ್ನು ನಾವು ದಾಟಿದೆವು. ‘ಮೇಡಂ ಕಾರನ್ನು ಸ್ವಲ್ಪ ಸೈಡಿಗೆ ಹಾಕುತ್ತೇನೆ. ಅವರ ಹತ್ತಿರ ಒಂದು ನಿಮಿಷ ಮಾತಾಡ ಬೇಕು’. ನನ್ನ ಅನುಮತಿ ಕೇಳಿ ಕಾರನ್ನು ಪಕ್ಕಕ್ಕೆ ನಿಲ್ಲಿಸಿ ಅವರಿಗೆ ನಮಸ್ಕಾರ ಹಾಕಿ ಮಾತಾಡಿಸಿದ. “ ನಮಸ್ಕಾರಾ ಸಾರ್. ನಾನು ನಿಮ್ಮ ಸ್ಟೂಡೆಂಟ್. ನೆನಪಿದೆಯಾ ಸರ್. ನಿಮ್ಮ ಬರಹಗಳನ್ನು ಈಗ್ಲೂ ಓದುತ್ತೇನೆ “.  ಥಟ್ಟನೆ ಅವನ ಗುರುತನ್ನು ಅವರು ಹಿಡಿದರು. “ಏನಪ್ಪಾ ಚೆನ್ನಾಗಿದ್ದೀಯಾ? ದೊಡ್ಡವನಾಗಿ ಬಿಟ್ಟೆ . ತುಂಬಾ ಸಂತೋಷ “ ಅವನನ್ನೂ ಕಾರನ್ನೂ ನೋಡುತ್ತಾ ಹೇಳಿದರು. ತಕ್ಷಣಕ್ಕೆ ಇವನು ಹೇಳಿದ” ಸಾರ್ ಕಾರು ನನ್ನದಲ್ಲ. ನಾನು ಡ್ರ್ಯೆವಿಂಗ್ ಮತ್ತೆ ಕ್ಲರ್ಕ್‌  ಕೆಲಸ ಈ ಮೇಡಂ ಹತ್ತಿರ ಮಾಡ್ತಾ ಇದ್ದೀನಿ. ನಾನು ಹೊಟ್ಟೆಗೆ ಕಷ್ಟಾಂತ ಓದೋದು ಮೊದಲ ಪಿ.ಯೂ.ಸಿಗೇ ನಿಲ್ಲಿಸಿಬಿಟ್ಟೆ ಸರ್”. ನನ್ನ ಕಡೆ ನೋಡಿ ನನಗೆ ಅವರನ್ನು ಪರಿಚಯ ಮಾಡಿಸಿದ. ಕಾರಿನಿಂದ ಇಳಿದ ನಾನು “ನಿಮ್ಮ ಶಿಷ್ಯ ತುಂಬಾ ಒಳ್ಳೆಯವನು ಸರ್” ಅಂದೆ. ಅವರೂ ಒಪ್ಪಿಗೆಯ ನಗೆ ಬೀರಿದರು. ನನ್ನ ದೃಷ್ಟಿಯಲ್ಲಿ ಆದಿನ ಅವನು ಇನ್ನೂ ಎತ್ತರಕ್ಕೆ ಬೆಳೆದ. ಕಾರು ತನ್ನದೆಂದು ಮತ್ತೊಬ್ಬರು ತಿಳಿದುಕೊಳ್ಳಬಾರದು ಎನ್ನುವ ಸಂದೇಶ ಕೊಡಲೋ ಅಥವಾ ದೊಡ್ಡ ಕಾರಿನ ಕಾರಣದಿಂದ ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ದೊಡ್ಡವ್ಯಕ್ತಿ ಎಂದು ತಿಳಿದುಕೊಳ್ಳಬಾರದು ಎನ್ನುವ ಸಂದೇಶ ಕೊಡಲೋ ನನ್ನ ಗುಮಾಸ್ತ ‘ಕಾರು ತನ್ನದಲ್ಲ’ ಎನ್ನುವುದನ್ನು ಅವನ ಗುರುಗಳಿಗೆ ಸ್ಪಷ್ಟಪಡಿಸಿದ್ದ.

ಅವನ ಹೆಂಡತಿಯನ್ನು ಅವನು ಪ್ರೀತಿಸುವ ಅವಳಿಗೆ ಗೌರವ ಕೊಡುವ ಅವಳಿಗೆ ಕಾಳಜಿ ತೋರಿಸುವ ಆಗಾಗ ಅವಳನ್ನು ಮೆಲ್ಲಗೆ ತಿದ್ದುವ ಅವನ ರೀತಿ ಇನ್ನೂ ಮೇಲಿನದು. ಭಾನುವಾರ ಎಷ್ಟೇ ಹಣ ಬರುವ ಕೆಲಸವಿರಲಿ ಅವನು ಒಪ್ಪುವುದಿಲ್ಲ. ಹೆಂಡತಿಯ ಜೊತೆ ಸಮಯ ಕಳೆಯುವುದನ್ನು ತಪ್ಪಿಸುವುದಿಲ್ಲ. ಆ ದಿನ ಅವನದೇ ಅಡುಗೆಯಂತೆ. ಅವರಿಗೆ ಒಂದು ದಿನವಾದರೂ ರೆಸ್ಟ್ ಇಲ್ಲದಿದ್ದರೆ ಹೇಗೆ? ಎನ್ನುವುದು ಅವನ ಪ್ರಶ್ನೆ. ಹಳ್ಳಿಯ ಹುಡುಗಿಯನ್ನು ಮದುವೆಯಾಗಿ ಅವಳಿಗೆ ಹೊಲಿಗೆ ಕಸೂತಿ ಕಲಿಸಿ ಅವಳನ್ನು ಬೆಳೆಸುತ್ತಿದ್ದಾನೆ. ಅವಳ ಸಂಬಳಕ್ಕೆ ಕೈಹಾಕುವುದಿಲ್ಲ ಎನ್ನುವುದು ಅವನ ಪಾಲಿಸಿಯಂತೆ. “ಅದೇನು? ನಾಳೆ ಬೆಳಿಗ್ಗೆ ಆಫೀಸಿಗೆ ಹೋಗೋಕ್ಕೆ, ಆಫೀಸಿನಿಂದ ಬಂದ ತಕ್ಷಣ, ಆ ಮುನ್ನೂರು ರೂಪಾಯಿ ಶೂಸನ್ನು ಅದೆಷ್ಟು ಉಜ್ತೀರಿ?” ಅವನ ಹೆಂಡತಿ ಒಮ್ಮೆ ಎಲ್ಲರ ಮುಂದೆ ಜೋರುಮಾಡಿ ಕೇಳಿದಾಗ ಅವನು ಅವಳ ಕಡೆ ಒಮ್ಮೆ ನೋಡಿ ಮುಗುಳ್ನಗೆ ಬೀರುತ್ತಾ ಹೇಳಿದ “ ನೋಡು ಛೊಕ್ರೀ, ಭಗವಂತ ಯಾರಿಗಾದರೂ ಬಡತನ ಕೊಟ್ಟಿರಬಹುದು . ಆದರೆ ಗಲೀಜುತನ ಕೊಟ್ಟಿರಲ್ಲ. ಆ ದೇವ್ರೇ ಕೊಡ್ದೇ ಇರೋದನ್ನ ನಾವ್ಯಾಕೆ ಇಟ್ಟುಕೋ ಬೇಕು?” ಅವನು ಆದಿನ ಕೊಟ್ಟ ಆ ಉತ್ತರ ನನಗೆ ದಿಗ್ಭ್ರಮೆ ಮೂಡಿಸಿತು.

ಹಲವರ ಎತ್ತರದ ಬದುಕು ನಮ್ಮಂತಹವರ ಬರಿಯ ಕಣ್ಣಿಗೆ ಕಾಣುವುದಿಲ್ಲ. ಕಣ್ಣಿಗೆ ಕಾಣದ ಆ ಎತ್ತರದ ಬದುಕಿನ ಕಡೆಗಿನ ನೋಟ ನಮ್ಮದಾಗುವುದು ಯಾವಾಗಲೋ?

ಎಸ್.ಸುಶೀಲ ಚಿಂತಾಮಣಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *