ತ್ರಿವಳಿ ತಲಾಖ್ ಅಪರಾಧವೇ?- ಹೇಮಲತಾ ಮಹಿಷಿ

ಕೇಂದ್ರ ಸರ್ಕಾರ ಕಳೆದ ವರ್ಷ ಮಂಡಿಸಿರುವ ‘ಮುಸ್ಲಿಂ ಮಹಿಳೆಯರ (ವೈವಾಹಿಕ ಹಕ್ಕುಗಳ ರಕ್ಷಣೆ) ಮಸೂದೆ 2017’ರಲ್ಲಿ ತ್ರಿವಳಿ ತಲಾಖ್ ಆಚರಣೆಯನ್ನು ಅಪರಾಧ ಎಂದು ಪರಿಗಣಿಸಲಾಗಿದೆ. ದಂಪತಿ ಮತ್ತೆ ಹೊಂದಿಕೊಂಡು ಬಾಳುವೆ ಮಾಡುವಲ್ಲಿ ಈ ‘ಅಪರಾಧ’ ಎಂಬ ವ್ಯಾಖ್ಯಾನ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಆತಂಕವನ್ನು ಹಿರಿಯ ವಕೀಲರಾದ ಹೇಮಲತಾ ಮಹಿಷಿ ವ್ಯಕ್ತಪಡಿಸಿದ್ದಾರೆ.

 

ಯಾವುದೇ ದೇವಸ್ಥಾನಕ್ಕೆ ಪ್ರವೇಶ ಪಡೆಯಲು ಮತ್ತು ದೇವರನ್ನು ಪೂಜಿಸಲು ತಮಗೆ ಮುಕ್ತವಾದ, ಸಮಾನವಾದ ಅವಕಾಶವಿರಬೇಕೆಂದು ಮಹಿಳೆಯರು ಕಾನೂನು ಹೋರಾಟ ಆರಂಭಿಸಿದ ಪ್ರಕರಣದ ನಂತರ, ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಮತ್ತೊಂದು ಪ್ರಮುಖ ಪ್ರಕರಣವೆಂದರೆ ‘ತ್ರಿವಳಿ ತಲಾಖ್’ ಪ್ರಕರಣ. ಬಹು ವಿವಾದಾತ್ಮಕವಾದ ಈ ವಿಚಾರದಲ್ಲಿ ಮುಸ್ಲಿಂ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಕಾನೂನು ಹೋರಾಟ ಆರಂಭಿಸಿದ್ದು ಸಹ ಅಷ್ಟೇ ಮಹತ್ವದ ಸಂಗತಿ.

ಈ ಹಿಂದೆ ವೈಯಕ್ತಿಕ ಕಾನೂನುಗಳ ತಿದ್ದುಪಡಿಗೆ ಸಂಘ-ಸಂಸ್ಥೆಗಳು ಒತ್ತಾಯಿಸಿದಾಗಲೆಲ್ಲ ಆಯಾ ಸಮುದಾಯದ ಮಹಿಳೆಯರಿಂದಲೇ ಹಕ್ಕೊತ್ತಾಯ ಬರಬೇಕೆಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಹಾಗಾಗಿ ಇದೇ ಮೊದಲ ಬಾರಿ ಮುಸ್ಲಿಂ ಮಹಿಳೆಯರು ‘ತ್ರಿವಳಿ ತಲಾಖ್’ ಕಾನೂನು ಸಮರ ಕೈಗೆತ್ತಿಕೊಂಡಿದ್ದರು. ಷರಯಾಬಾನು ಈ ಕಾನೂನು ಹೋರಾಟದ ಮುಂಚೂಣಿಯಲ್ಲಿದ್ದರು.

ಅಂತೂ ಅನೇಕ ಶತಮಾನಗಳಿಂದ ಮುಸ್ಲಿಂ ಮಹಿಳೆಯರ ಸಾಂಸಾರಿಕ ಜೀವನಕ್ಕೆ ಮುಳ್ಳಾಗಿದ್ದ ಈ ಪದ್ಧತಿ ತಾರ್ಕಿಕವಾಗಿ ಕೊನೆಗೊಂಡು ಮಹಿಳೆಯರಿಗೆ ಸ್ವಲ್ಪ ಮಟ್ಟಿನ ಸುರಕ್ಷತಾ ಭಾವನೆಯನ್ನು ನೀಡಿದೆ. ಷಾಬಾನೋ ಪ್ರಕರಣದ ನೆನಪಿದ್ದವರಿಗೆ ಈ ಪ್ರಕರಣದ ಮಹತ್ವ ಅರ್ಥವಾಗುತ್ತದೆ.

ತ್ರಿವಳಿ ತಲಾಖ್ ಬಗ್ಗೆ ಕಳೆದ ವರ್ಷದ ಆಗಸ್ಟ್‍ನಲ್ಲಿ (22-8-2017) ಸುಪ್ರೀಂಕೋರ್ಟ್ ಪೀಠ ತೀರ್ಪು ನೀಡುವಾಗ  ‘ತ್ರಿವಳಿ ತಲಾಖ್’ ಕಾನೂನುಬದ್ಧವೇ? ಇಲ್ಲವೇ? ಎಂಬ ಪ್ರಶ್ನೆಯನ್ನೇ ಕೈಗೆತ್ತಿಕೊಂಡಿತ್ತು. ತ್ರಿವಳಿ ತಲಾಖ್ ವಿರುದ್ಧ ಹಲವು ಮಹಿಳೆಯರು ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ಒಟ್ಟಾಗಿ ವಿಚಾರಣೆ ನಡೆಸಿದ ನಂತರ ಬಹುಮತದ ತೀರ್ಪು ನೀಡಿದ ಐವರು ನ್ಯಾಯಮೂರ್ತಿಗಳ ನ್ಯಾಯಪೀಠ ತ್ರಿವಳಿ ತಲಾಖ್ ಕುರಾನಿನ ಮೂಲತತ್ತ್ವಗಳಿಗೆ ಹಾಗೆಯೇ 1937ರ ಷರಿಯತ್ ಕಾನೂನಿಗೆ ವಿರುದ್ಧವಾದುದು. ಹಾಗಾಗಿ ದೇಶದ ಕಾನೂನಿಗೂ ವಿರುದ್ಧವಾದುದು ಎಂದು ತ್ರಿವಳಿ ತಲಾಖ್ ಮೇಲೆ ನಿರ್ಬಂಧ ಹೇರಿತು.

ಎಲ್ಲರಿಗೂ ತಿಳಿದಿರುವಂತೆ ಮುಸ್ಲಿಂ ಸಮುದಾಯದಲ್ಲಿ ಮೂರು ರೀತಿಯ ತಲಾಖ್ ಆಚರಣೆಯಲ್ಲಿದೆ. ಅವುಗಳೆಂದರೆ “ತಲಾಖ್-ಎ-ಅಹಸಾನ್’, ‘ತಲಾಖ್-ಎ-ಹಸನ್’ ಮತ್ತು ‘ತಲಾಖ್-ಎ-ಬಿದ್ದತ್’. ಇವುಗಳಲ್ಲಿ ಮೊದಲರೆಡು ತಲಾಖ್‍ನ್ನು ಕುರಾನ್ ಮಾನ್ಯ ಮಾಡಿದೆ. ಮೂರನೇ ವಿಧದ ತ್ರಿವಳಿ ತಲಾಖ್ ಹದೀತ್‍ನ ಮಾನ್ಯತೆ ಪಡೆದಿಲ್ಲ. ಅದು ಇಸ್ಲಾಂ ಧರ್ಮ ಹುಟ್ಟಿದ ಎಷ್ಟೋ ಕಾಲದ ನಂತರ ಆಚರಣೆಗೆ ಬಂದ ಪದ್ಧತಿ. ಮೊದಲೆರಡು ಪದ್ಧತಿಗಳಲ್ಲಿ ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಳ್ಳಲು ಮೂರು ತಿಂಗಳ ಕಾಲಾವಧಿ ಇರುತ್ತದೆ ಮತ್ತು ಆ ಅವಧಿಯಲ್ಲಿ ಗಂಡ-ಹೆಂಡತಿ ಮನಸ್ತಾಪ ಮರೆತು ಒಟ್ಟಿಗೆ ಬಾಳಲು ಅವಕಶವಿರುತ್ತದೆ. ಆದರೆ, ತ್ರಿವಳಿ ತಲಾಖ್ ಪದ್ಧತಿಯಲ್ಲಿ ಒಂದರ ಹಿಂದೆ ಒಂದರಂತೆ ಪತಿ ತಲಾಖ್, ತಲಾಖ್, ತಲಾಖ್ ಎಂದು ಹೇಳಿದಲ್ಲಿ ತಕ್ಷಣ ವಿಚ್ಛೇದನ ಜಾರಿಗೆ ಬರುವದರಿಂದ ಒಂದಾಗಿ ಪುನಃ ದಾಂಪತ್ಯ ನಡೆಸಲು ಅವಕಾಶ ಇರುವುದಿಲ್ಲ. ಒಂದು ವೇಳೆ ಇಂತಹ ದಂಪತಿ ಮತ್ತೆ ಒಟ್ಟಾಗಿ ಬಾಳಬೇಕು ಎಂದಲ್ಲಿ ವಿಚ್ಛೇದಿತ ಪತ್ನಿ ಮತ್ತೊಬ್ಬನನ್ನು ಮದುವೆಯಾಗಿ ದೈಹಿಕ ಸಂಪರ್ಕ ಹೊಂದಿ ನಂತರ ಆತನಿಗೆ ವಿಚ್ಛೇದನ ಪಡೆಯಬೇಕಾಗುತ್ತದೆ. ಇಲ್ಲವೇ ಎರಡನೇ ಪತಿ ಸತ್ತು ವಿಧವೆಯಾದಲ್ಲಿ ಮೊದಲ ಗಂಡನೊಡನೆ ಪುನಃ ವಿವಾಹವಾಗಬಹುದು. ಇದನ್ನು ‘ನಿಖಾ ಹಲಾಲ್’ ಎಂದು ಕರೆಯುತ್ತಾರೆ.

ತ್ರಿವಳಿ ತಲಾಖ್ ಅನೂರ್ಜಿತ ಎಂದು ಘೋಷಿಸಲು ಮೂವರು ನ್ಯಾಯಮೂರ್ತಿಗಳ ಬಹುಮತದ ಪೀಠ ಕೊಟ್ಟ ಕಾರಣಗಳೆಂದರೆ,

1) ಮುಸ್ಲಿಂ ಪುರುಷನೊಬ್ಬ ಸಕಾರಣವಿಲ್ಲದೇ ತನ್ನ ಮನಸ್ಸಿಗೆ ಬಂದ ಹಾಗೆ ನಿರಂಕುಶ ಅಧಿಕಾರ ಚಲಾಯಿಸಿದಾಗ, ವಿವಾಹವನ್ನು ಉಳಿಸಲು ಎರಡೂ ಕುಟುಂಬಗಳ ಮಧ್ಯಸ್ಥಿಕೆದಾರರಿಗೆ ಅವಕಾಶ ದೊರೆಯದೇ ತಕ್ಷಣವೇ ವಿಚ್ಛೇದನ ಜಾರಿಗೆ ಬರುವುದರಿಂದ ಈ ಪದ್ಧತಿ ಸಂವಿಧಾನದ 14ನೇ ಅನುಚ್ಛೇದವನ್ನು ಉಲ್ಲಂಘಿಸುತ್ತದೆ.

2) ಇದರಿಂದಾಗಿ 1937ರ ಷರಿಯತ್ ಕಾನೂನಿನಲ್ಲಿ ತ್ರಿವಳಿ ತಲಾಖಿಗೆ ಸಂಬಂಧಿಸಿದ ಅಧ್ಯಾಯ ಸಹಜವಾಗಿ ಅನೂರ್ಜಿತವಾಗುತ್ತದೆ.

2) ಕುರಾನ್‍ನಲ್ಲಿ ತಲಾಖ್ ಕೊಡಲು ಸಕಾರಣವಿರಬೇಕು ಎಂದು ಹೇಳಲಾಗಿದೆ. ಹಾಗೆಯೇ ವಿಚ್ಛೇದನ ಜಾರಿಗೆ ಬರುವ ಮೊದಲು ಮಧ್ಯಸ್ಥಿಕೆ ಮಾಡಿ ಗಂಡ ಹೆಂಡಿರ ನಡುವೆ ರಾಜಿ ಮಾಡಿಸಲು ಅವಕಾಶವಿರಬೇಕು ಎಂದು ಹೇಳಲಾಗಿದೆ.

ಇಬ್ಬರು ನ್ಯಾಯಮೂರ್ತಿಗಳ ಪೀಠದ ಅಲ್ಪಮತದ ತೀರ್ಪಿಗೆ ಕೊಟ್ಟ ಕಾರಣ.

1) ತ್ರಿವಳಿ ತಲಾಖ್ ಹನಫಿ ಸುನ್ನಿಗಳು 1400 ವರ್ಷಗಳಿಗಿಂತ ಹೆಚ್ಚು ಕಾಲ ಆಚರಿಸಿಕೊಂಡು ಬಂದ ಪದ್ಧತಿ. ಹಾಗಾಗಿ ಅದು ಧಾರ್ಮಿಕ ನಂಬಿಕೆಯ ಭಾಗ. ಅವರ ವೈಯಕ್ತಿಕ ಕಾನೂನಿನ ಭಾಗ. ಹಾಗಾಗಿ ನ್ಯಾಯಾಲಯ ಅದನ್ನು ಅನೂರ್ಜಿತಗೊಳಿಸಲಾಗದು.
2) ಇದು ಸಂವಿಧಾನದ 14, 15 ಹಾಗೂ 21ನೇ ಅನುಚ್ಛೇದಗಳನ್ನು ಉಲ್ಲಂಘಿಸುವುದಿಲ್ಲ.
3) ವೈಯಕ್ತಿಕ ಕಾನೂನಿನ ಭಾಗವಾಗಿ ಈ ಪದ್ಧತಿ ಬೇರೆ ಮೂಲಭೂತ ಹಕ್ಕುಗಳಿಗೆ ಸಮನಾಗಿದೆ.
4) ಸಾಮಾಜಿಕವಾಗಿ ಒಪ್ಪಿಕೊಳ್ಳಲಾಗದ ಬೇರೆ, ಬೇರೆ ಧರ್ಮಗಳಿಗೆ ಸಂಬಂಧಿಸಿದ ವೈಯಕ್ತಿಕ ಕಾನೂನಿನ ಸುಧಾರಣೆಯನ್ನು ಶಾಸನಾತ್ಮಕ ಮಧ್ಯಪ್ರವೇಶದ ಮೂಲಕವೇ ಮಾಡಬೇಕಾಗುತ್ತದೆ. ಅದಕ್ಕೆ ಸಂವಿಧಾನದಲ್ಲಿ ಅವಕಾಶವಿದೆ.

ಆದರೆ, ಸುಪ್ರೀಂಕೋರ್ಟ್‍ನ ಮೂವರು ನ್ಯಾಯಮೂರ್ತಿಗಳ ಪೀಠ ತ್ರಿವಳಿ ತಲಾಖ್ ವಿರುದ್ಧ ಕೊಟ್ಟ ತೀರ್ಪಿನಲ್ಲಿಯೂ ಕೊರತೆಗಳಿವೆ. ತ್ರಿವಳಿ ತಲಾಖ್ ವಿರುದ್ಧ ಹೋರಾಡಿದ್ದ ಮಹಿಳೆಯರು ಈ ಪದ್ಧತಿ ಏಕೆ ತಾರತಮ್ಯದಿಂದ ಕೂಡಿದೆ ಎನ್ನುವ ವಾದವನ್ನು ಮುಂದಿಟ್ಟಿದ್ದರು. ಈ ತರಹ ತಲಾಖ್ ನೀಡುವ ಅವಕಾಶ ಪುರುಷರಿಗೆ ಮಾತ್ರ ಇದೆ. ಮಹಿಳೆಯರು ವಿಚ್ಛೇದನ ಪಡೆಯಲು ನ್ಯಾಯಾಲಯಕ್ಕೆ ಹೋಗಿ ಅದಕ್ಕೆ ಕಾರಣಗಳನ್ನು ನೀಡಿ ಸಾಬೀತುಪಡಿಸಬೇಕಾಗುತ್ತದೆ. ಹಾಗಾಗಿ ಮುಸ್ಲಿಂ ವೈಯಕ್ತಿಕ ಕಾನೂನು ಮಹಿಳೆಯರ ಪರ ಧೋರಣೆ ಹೊಂದಿಲ್ಲ ಎನ್ನುವ ವಾದವನ್ನು ಅವರು ಮಂಡಿಸಿದ್ದರು. ಆದರೆ, ನ್ಯಾಯಪೀಠ ಈ ಅಂಶದ ಬಗ್ಗೆ ತೀರ್ಪು ನೀಡಿಲ್ಲ.

ಅಲ್ಲದೇ ರಿಟ್ ಅರ್ಜಿಗಳಲ್ಲಿ ಮುಸ್ಲಿಂ ಮಹಿಳೆಯರು ‘ನಿಖಾ ಹಲಾಲ್’ ಅನ್ನು ಪ್ರಶ್ನಿಸಿದ್ದರು. ಬಹುಪತ್ನಿತ್ವವನ್ನು ಪ್ರಶ್ನಿಸಿದ್ದರು. ಆದರೆ, ಸುಪ್ರೀಂಕೋರ್ಟ್ ಈ ವಿಚಾರಗಳ ಕುರಿತ ವಾದ-ವಿವಾದವನ್ನು ಮುಂದೂಡಿತ್ತು. ಇದೇ ಜುಲೈ 3ರಂದು ಈ ವಿಷಯಗಳು ವಿಚಾರಣೆಗೆ ಬಂದಾಗ ಐವರು ನ್ಯಾಯಮೂರ್ತಿಗಳ ಪೀಠವೊಂದನ್ನು ರಚಿಸಿ ಶೀಘ್ರವಾಗಿ ವಿಚಾರಣೆ ನಡೆಸುವುದಾಗಿ ಮುಖ್ಯ ನ್ಯಾಯಮೂರ್ತಿಗಳ ಪೀಠ ತಿಳಿಸಿದೆ.

ತ್ರಿವಳಿ ತಲಾಖ್ ಪ್ರಕರಣದಲ್ಲಿ ನ್ಯಾಯಾಲಯ ಈಗಾಗಲೇ ಕೊಟ್ಟಿರುವ ತೀರ್ಪು ಹಾಗೂ ಅದರ ಕಾರಣಗಳು ಈ ಉಳಿದೆರಡು ಆಚರಣೆಗಳ ಕುರಿತ ವಿಚಾರಣೆಯಲ್ಲೂ ಪರಿಣಾಮ ಬೀರಲಿವೆ.

ಈ ತೀರ್ಪು ಕೊಡುವಾಗ ನ್ಯಾಯಾಲಯವು ಬೇರೆ-ಬೇರೆ ಮುಸ್ಲಿಂ ದೇಶಗಳಲ್ಲಿ ಮುಸ್ಲಿಂ ಕಾನೂನಿಗೆ ತಂದಿರುವ ತಿದ್ದುಪಡಿಗಳ ಬಗ್ಗೆ ವಿಸ್ತøತವಾದ ಚರ್ಚೆ ನಡೆಸಿದೆ. ಬದಲಾದ ಸಾಮಾಜಿಕ ವ್ಯವಸ್ಥೆಗೆ ತಕ್ಕಂತೆ ವೈಯಕ್ತಿಕ ಕಾನೂನಿನಲ್ಲಿ ಆಗಬೇಕಾದ ಬದಲಾವಣೆಗಳ ಬಗ್ಗೆ ಗಮನ ಹರಿಸಿದೆ.

ಈ ನಡುವೆ ಕೇಂದ್ರ ಸರ್ಕಾರವು ‘ಮುಸ್ಲಿಂ ಮಹಿಳೆಯರ (ವೈವಾಹಿಕ ಹಕ್ಕುಗಳ ರಕ್ಷಣೆ) ಮಸೂದೆ 2017’ ನ್ನು ಸಿದ್ಧಪಡಿಸಿ  ಹಿಂದಿನ ಅಧಿವೇಶನದಲ್ಲೇ ಲಫಖಸಭೆಯಲ್ಲಿ ಒಪ್ಪಿಗೆ ಪಡೆದಿತ್ತು. ರಾಜ್ಯಸಭೆಯಲ್ಲಿ ಈ ಮಸೂದೆಗೆ ಇನ್ನೂ ಒಪ್ಪಿಗೆ ದೊರೆತಿಲ್ಲ. ಪ್ರತಿಪಕ್ಷಗಳು ಆ ಮಸೂದೆಯಲ್ಲಿರುವ ಕೆಲ ಅಂಶಗಳ ಬಗ್ಗೆ ತರಕಾರು ಎತ್ತಿದ್ದವು. ಮುಂದಿನ ಅಧೀವೇಶನದಲ್ಲಿ ಈ ಮಸೂದೆ ಮತ್ತೊಮ್ಮೆ ಸಂಸತ್ತಿನ ಮುಂದೆ ಮಂಡನೆಯಾಗುವ ಸಾಧ್ಯತೆಯಿದೆ.

ಅಲ್ಲದೇ ನಿಕಾ ಹಲಾಲ್ ಹಾಗೂ ಬಹುಪತ್ನಿತ್ವದ ವಿರುದ್ಧವಾಗಿ ಸುಪ್ರೀಂಕೋರ್ಟ್‍ನಲ್ಲಿ ಮುಸ್ಲಿಂ ಮಹಿಳೆಯರನ್ನು ಬೆಂಬಲಿಸುವುದಾಗಿ ಸರ್ಕಾರ ತಿಳಿಸಿದೆ.

ಸರ್ಕಾರ ಈ ಮಸೂದೆಯಲ್ಲಿ ‘ತ್ರಿವಳಿ ತಲಾಖ್’ ಆಚರಣೆಯನ್ನು ಕೇವಲ ಕಾನೂನುಬಾಹಿರವೆಂದು ಘೋಷಿಸದೇ ಒಂದು ಅಪರಾಧವಾಗಿ ಮಾಡಿ ಅದಕ್ಕೆ ಶಿಕ್ಷೆ ವಿಧಿಸುತ್ತಿರುವುದು ಬಹುತೇಕರ ತಕರಾರಿಗೆ ಕಾರಣವಾಗಿದೆ. ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಖ್, ನಿಕಾ ಹಲಾಲ್ ಹಾಗೂ ಬಹುಪತ್ನಿತ್ವವನ್ನು ಅಪರಾಧವಾಗಿ ಘೋಷಿಸಬೇಕು ಎಂದು ಕೇಳಿಕೊಂಡಿದ್ದಾರೆ.

ಆದರೆ, ಸಾಮಾನ್ಯವಾಗಿ ವಿಚ್ಛೇದನ, ವಿವಾಹಕ್ಕೆ ಸಂಬಂಧಿಸಿದ ವಿಚಾರಗಳು ಸಿವಿಲ್ ವಿಷಯಗಳು, ಕ್ರಿಮಿನಲ್ ವಿಷಯಗಳಲ್ಲ. ಭಾರತೀಯ ದಂಡ ಸಹಿಂತೆಯಲ್ಲಿ ಬಹುವಿವಾಹ ಮಾತ್ರ ಅಪರಾಧವೆಂದು ಹೇಳಲಾಗಿದೆ (ಇದರಲ್ಲಿ ಮುಸ್ಲಿಂ ಧರ್ಮೀಯರಿಗೆ ಮಾತ್ರ ವಿನಾಯತಿ ಇದೆ). ಈ ವಿನಾಯತಿಯ್ನ ತೆಗೆದುಹಾಕಲು ಈಗ ಕಾರಣವಿದೆ. ‘ತ್ರಿವಳಿ ತಲಾಖ್’ ಅನೂರ್ಜಿತವಾದರೆ ‘ನಿಕಾ ಹಲಾಲ್’ ಕೂಡ ಅನೂರ್ಜಿತವಾಗುತ್ತದೆ. ವಿಚ್ಛೇದನವೇ ಅನೂರ್ಜಿತವಾಗುವುದರಿಂದ ದಂಪತಿ ಪುನಃ ಒಟ್ಟಾಗಿ ಬಾಳಲು ಅವಕಾಶವಾಗುತ್ತದೆ. ಹಾಗಾಗಿ ಅದನ್ನು ಅಪರಾಧವಾಗಿಸಿ ಶಿಕ್ಷೆ ವಿಧಿಸಲು ಸಕಾರಣವಿಲ್ಲ.

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *