Latestದೇಶಕಾಲ

ಹೆಣ್ಮಕ್ಳು ಹೋಗಬಹುದು ಶಬರಿಮಲೆಗೆ…

 

ಮಹಿಳೆಯರಿಗೆ ಪೂಜಿಸುವ ಹಕ್ಕು ಸಾಂವಿಧಾನಿಕ. ಇದು ಯಾವುದೇ ಕಾಯ್ದೆ, ಕಾನೂನಿನ ಮೇಲೆ ಅವಲಂಬಿತವಾಗಿಲ್ಲ ಎಂದು ಸುಪ್ರೀಂಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯ ಐತಿಹಾಸಿಕವಾದದ್ದು

ಕೇರಳದ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ 10 ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕೆ ಹೇರಲಾಗಿದ್ದ ನಿರ್ಬಂಧದ ವಿರುದ್ಧ ಸುಪ್ರೀಂ ಕೋರ್ಟ್ ಬುಧವಾರ ಅಭಿಪ್ರಾಯ ವ್ಯಕ್ತಪಡಿಸಿರುವುದು ಲಿಂಗ ಸಮಾನತೆಯನ್ನು ಎತ್ತಿಹಿಡಿದಿದೆ. ಯಾವುದೇ ದೇವಾಲಯದಲ್ಲಿ ಲಿಂಗಾಧರಿತ ತಾರತಮ್ಯಕ್ಕೆ ಅವಕಾಶ ಇಲ್ಲ, ಪುರುಷರ ಹಾಗೆಯೇ ಮಹಿಳೆಯರಿಗೂ ಪೂಜಿಸಲು ಅವಕಾಶವಿದೆ ಎಂದು ಕೋರ್ಟ್ ಹೇಳಿರುವುದು ದೇಶದ ಅಸಂಖ್ಯಾತ ಹೆಣ್ಣು ಮಕ್ಕಳು, ಮಹಿಳಾ ಹೋರಾಟಗಾರ್ತಿಯರು ಹಾಗೂ ಸಮಾನತೆಯ ಪ್ರತಿಪಾದಕರಲ್ಲಿ ಸಂತಸಕ್ಕೆ ಕಾರಣವಾಗಿದೆ.
ಖಾಸಗಿ ಸ್ಥಳಗಳಿಗೂ ಸಾರ್ವಜನಿಕ ಸ್ಥಳಗಳಿಗೂ ವ್ಯತ್ಯಾಸವಿದೆ. ಆದರೆ, ದೇವಾಲಯ ಸಾರ್ವಜನಿಕವಾದದ್ದು. ಖಾಸಗಿ ದೇವಾಲಯ ಎಂಬ ಪರಿಕಲ್ಪನೆಯೇ ಇಲ್ಲ. ದೇವಸ್ಥಾನಕ್ಕೆ ಎಲ್ಲರೂ ಹೋಗಬಹುದು ಎಂದೂ ಕೋರ್ಟ್ ಹೇಳಿದೆ.

ಈ ಪ್ರಕರಣದ ವಿಚಾರಣೆ ವೇಳೆ ‘ರೈಟ್ ಟು ಬ್ಲೀಡ್’ ಸಂಸ್ಥೆಯ ಪರವಾಗಿ ವಾದ ಮಂಡಿಸಿದ್ದ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಹೇಳಿಕೆಯೂ ಮಹತ್ವದ್ದು. ‘ಆರೋಗ್ಯಕರವಾದ ಜೈವಿಕ ಕ್ರಿಯೆಯಾದ ಋತುಸ್ರಾವವನ್ನು ಧರ್ಮದ ಹೆಸರಿನಲ್ಲಿ ತಾರತಮ್ಯ ಮಾಡಲು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಋತುಸ್ರಾವದ ಅವಧಿಯಲ್ಲಿನ ಮಹಿಳೆಯರು ಮಲೀನ ಎಂದು ಅಸ್ಪøಶ್ಯರಂತೆ ನಡೆಸಿಕೊಳ್ಳುವುದು ಸರಿಯಲ್ಲ’ ಎಂದು ಅವರು ಹೇಳಿರುವುದು ಗಮನಾರ್ಹ.
ಶಬರಿಮಲೆಯ ಅಯ್ಯಪ್ಪ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶಕ್ಕೆ ಅವಕಾಶ ನಿಷೇಧಿಸಿರುವುದನ್ನು ಖಂಡಿಸಿ ಯಂಗ್ ಲಾಯರ್ಸ್ ಅಸೋಸಿಯೇಷನ್ ಸುಪ್ರೀಂಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿತ್ತು.

ಹಿನ್ನೆಲೆ: ಶಬರಿಮಲೆ ದೇವಸ್ಥಾನದಲ್ಲಿ ಶತಮಾನಗಳಿಂದ ಮಹಿಳೆಯರಿಗೆ ಪ್ರವೇಶ ನಿರಾಕರಿಸಲಾಗಿದೆ. 2006 ರಲ್ಲಿ ದೇವಸ್ಥಾನದ ಶುದ್ಧೀಕರಣ ಪ್ರಕ್ರಿಯೆ ನಡೆಸುವಾಗ ಜ್ಯೋತಿಷಿಯೊಬ್ಬರು ಮಹಿಳೆಯೊಬ್ಬಳು ದೇವಸ್ಥಾನ ಪ್ರವೇಶಿಸಿದ್ದಾಳೆ ಎಂದು ಹೇಳಿದ್ದರು. ಅದೇ ವೇಳೆ ಕನ್ನಡದ ನಟಿ ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿರುವ ಜಯಮಾಲಾ 1986 ರಲ್ಲಿ ತನಗೆ 27 ವರ್ಷವಾದಾಗ ಅಯ್ಯಪ್ಪ ದೇವಸ್ಥಾನ ಪ್ರವೇಶಿಸಿದ್ದಾಗಿ ಹೇಳಿಕೆ ನೀಡಿದ್ದರು. ಅದು ವಿವಾದಕ್ಕೆ ಕಾರಣವಾಗಿತ್ತು. ಅಯ್ಯಪ್ಪ ದೇವಸ್ಥಾನದ ಆಡಳಿತದ ಹೊಣೆ ಹೊತ್ತಿರುವ ತಿರುವಾಂಕೂರ್ ದೇವಸ್ಥಾನ ಮಂಡಳಿ ಜಯಮಾಲಾ ವಿರುದ್ಧ ದೂರು ದಾಖಲಿಸಿತ್ತು. ಆದರೆ, ಕೇರಳ ಹೈಕೋರ್ಟ್ ಈ ದೂರು ವಜಾಗೊಳಿಸಿತ್ತು. ಮಹಿಳೆಯರು ದೇವಸ್ಥಾನ ಪ್ರವೇಶಿಸುವ ಪರವಾಗಿರುವುದಾಗಿ ಕೇರಳ ಸರ್ಕಾರ ಪ್ರಮಾಣ ಪತ್ರವನ್ನೂ ಸಲ್ಲಿಸಿತ್ತು. ಆದರೆ, ದೇವಸ್ಥಾನ ಮಂಡಳಿ ಮತ್ತು ಕೆಲ ಸಂಪ್ರದಾಯಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಎರಡು ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿ ಭೂಮಾತಾ ಬ್ರಿಗೇಡ್‍ನ ತೃಪ್ತಿ ದೇಸಾಯಿ ನೇತೃತ್ವದಲ್ಲಿ ಕೆಲ ಮಹಿಳೆಯರು ಶಿರಡಿ ಬಳಿಯ ಶನಿ ಶಿಂಗ್ಣಾಪುರ ಗದ್ದುಗೆ ಹತ್ತಿ ಪೂಜೆ ಸಲ್ಲಿಸಲು ಅವಕಾಶ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಬಾಂಬೆ ಹೈಕೋರ್ಟ್ ಆದೇಶದಂತೆ 2016 ರ ಸೆಪ್ಟೆಂಬರ್ ನಲ್ಲಿ ಮಹಿಳೆಯರು 400 ವರ್ಷಗಳ ಸಂಪ್ರದಾಯ ಮುರಿದು ಶನಿ ಶಿಂಗ್ಣಾಪುರದಲ್ಲಿ ಪೂಜೆ ಸಲ್ಲಿಸಿದರು.

2016ರ ಅಕ್ಟೋಬರ್ ನಲ್ಲಿ ಮತ್ತೊಂದು ಐತಿಹಾಸಿಕ ಆದೇಶದ ಮೂಲಕ ಮುಂಬೈನ ಹಾಜಿ ಅಲಿ ದರ್ಗಾದಲ್ಲಿ ಮಹಿಳೆಯರಿಗೆ ಪ್ರಾರ್ಥನೆ ಸಲ್ಲಿಸಲು ಸುಪ್ರೀಂಕೋರ್ಟ್ ಅವಕಾಶ ಕಲ್ಪಿಸಿತ್ತು. ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ ದರ್ಗಾ ಪ್ರವೇಶಕ್ಕೆ ಅವಕಾಶ ಕೋರಿ ಅರ್ಜಿ ಸಲ್ಲಿಸಿತ್ತು.

ಮೇಲಿನ ಎರಡೂ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಹಿಳೆಯರಿಗೆ ಪ್ರವೇಶ ನಿರಾಕರಿಸಿರುವ ವಿಚಾರ ಚರ್ಚೆಗೆ ಬಂದಿತ್ತು.

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *