Uncategorizedಅಂಕಣ

ಹೆಣ್ಣು ಹೆಜ್ಜೆ/ ಹಾಸ್ಯದಲ್ಲಿ ಹೆಣ್ಣಿನ ಅಪಹಾಸ್ಯ ಬೇಡ – ಡಾ. ಕೆ.ಎಸ್. ಪವಿತ್ರ

ಜಗತ್ತಿನಾದ್ಯಂತ ಎಲ್ಲ ಸಮಾಜಗಳಲ್ಲಿ ಹಾಸ್ಯಕ್ಕೆ ಹೆಣ್ಣೂ ಪ್ರಧಾನ ವಸ್ತು. ಹೆಂಡತಿ, ಅಮ್ಮ, ಅತ್ತೆ, ಅಕ್ಕ, ತಂಗಿ, ಟೀಚರ್, ಆಂಟಿ, ಲೇಡಿ ಬಾಸ್, ಗರ್ಲ್ ಫ್ರೆಂಡ್ ಎಲ್ಲರೂ ಈ ಅಪಹಾಸ್ಯಕ್ಕೆ ಪಾತ್ರರಾಗುವ ನೆಚ್ಚಿನ ಜೀವಗಳು. ಈ ಹವ್ಯಾಸ ಎಲ್ಲ ಆರ್ಥಿಕ ವ್ಯವಸ್ಥೆಗಳಲ್ಲಿ ಹೆಣ್ಣಿಗೆ ಇರುವ ಸ್ಥಾನಮಾನ ಮತ್ತು ಅವಳನ್ನು ಕುರಿತು ಇರುವ ಸಾಮಾಜಿಕ ಮನೋಭಾವದ ಪ್ರತಿಬಿಂಬವಷ್ಟೆ. ಈ ಅವಹೇಳನವನ್ನು `ಕೇವಲ ಹಾಸ್ಯ' ವಾಗಿ ಪರಿಗಣಿಸಬೇಕು ಎಂಬ ಆಗ್ರಹ, ಇಲ್ಲದಿದ್ದರೆ ನಿಮಗೆ ಹಾಸ್ಯ ಪ್ರಜ್ಞೆಯೇ ಇಲ್ಲ’ ಎನ್ನುವ ಟೀಕೆಯೂ ಸಾಮಾನ್ಯವಾಗಿ ಇರುತ್ತದೆ. ಆಧುನಿಕ ತಾಂತ್ರಿಕತೆಯ ಸಾಮಾಜಿಕ ಮಾಧ್ಯಮದಿಂದ ಈ ಅವಹೇಳನ ಇನ್ನಷ್ಟು ಕ್ಷಿಪ್ರಗತಿಯಲ್ಲಿ ಪ್ರಸಾರವಾಗಿ ಹದಿಹರೆಯದವರಿಗೂ ಮೋಜಿನ ಸಂಗತಿಯಾಗಿದೆ. ಹಾಸ್ಯದ ಹೆಸರಿನಲ್ಲಿ ಹೆಣ್ಣಿನ ಇಂಥ ಸಾರ್ವಜನಿಕ ನಿಂದನೆ ಸಲ್ಲದು ಎಂಬ ಬಗ್ಗೆ ಮಕ್ಕಳಲ್ಲೂ ಸೂಕ್ಷ್ಮ ಸಂವೇದನೆ ಬೆಳೆಸುವ ಅಗತ್ಯವಿದೆ.

ಸುಮಾರು ಹತ್ತು-ಹನ್ನೆರಡು ವರ್ಷಗಳ ಹಿಂದೆ ಹೆಣ್ಣಿಗೇಕೆ ಬಜಾರಿ ಪಟ್ಟ?' ಎಂಬ ಲೇಖನವೊಂದನ್ನು ಬರೆದಿದ್ದೆ. ಆ ಲೇಖನದ ಹಿಂದಿನ ಸ್ಫೂರ್ತಿ ನಮ್ಮ ಸುತ್ತಮುತ್ತಲಿನ ದಂಪತಿಗಳೆಲ್ಲರನ್ನೂ ಗಮನಿಸಿದರೆ, ಸಾಮಾನ್ಯವಾಗಿ ಹೆಂಡತಿಯನ್ನು `ಜೋರು’ ಎಂದು ನಾವೆಲ್ಲರೂ ಗುರುತಿಸುವುದು ಮಾಮೂಲು ಎಂಬುವುದು. ಗಂಡನನ್ನು `ಪಾಪದ ಆಸಾಮಿ' ಯಾಗಿ, `ಜೋರೂ ಕಾ ಗುಲಾಮ್’ ಆಗಿ ಗ್ರಹಿಸುವುದು ಎಲ್ಲೆಡೆ ಸಾಮಾನ್ಯ. ಆದರೆ ಈಗ ನಾನು ಚರ್ಚಿಸಲು ಹೊರಟಿರುವುದು, ಇದಕ್ಕೇ ಸಂಬಂಧಿಸಿದ ಇನ್ನೊಂದು ಮುಖ್ಯ ಎನಿಸುವ ಸಂಗತಿ. ಹೆಣ್ಣನ್ನು ಹಾಸ್ಯದ ವಸ್ತುವಾಗಿಸುವುದು ಸಾಮಾನ್ಯ. ಅದು “ತಮಾಷೆಗಪ್ಪಾ” ಎನ್ನುವಷ್ಟು ಮುಗ್ಧವೇ, ಹೆಣ್ಣಿನಲ್ಲಿ ಹಾಸ್ಯ ಪ್ರಜ್ಞೆಯೇ ಕಡಿಮೆಯೇ, ಯಾವುದನ್ನೂ ಹಗುರವಾಗಿ ತೆಗೆದುಕೊಳ್ಳುವುದು ಮಹಿಳೆಗೆ ಪುರುಷನಂತೆ ಸಾಧ್ಯವಿಲ್ಲವೆ, ಲಿಂಗ ಅಸಮಾನತೆ-ಭೇದವೆಣಿಸುವಿಕೆಯಲ್ಲಿ ಇಂಥ ಹಾಸ್ಯ ಯಾವ ಧೋರಣೆಯನ್ನು ರೂಪಿಸುತ್ತದೆ ಮೊದಲಾದ ಪ್ರಶ್ನೆಗಳನ್ನು ಉತ್ತರಿಸುವ ಪ್ರಯತ್ನ ಇಲ್ಲಿದೆ.

ಮತ್ತೆ ಹೇಳುತ್ತೇನೆ! ಇದು ನಗುವ ಮಾತಲ್ಲ!! ಹಾಸ್ಯವನ್ನು ಗ್ರಹಿಸುವುದರಲ್ಲಿ, ಅದನ್ನು ನಕ್ಕು ತಳ್ಳಿಹಾಕುವುದರಲ್ಲಿ ಮಹಿಳೆ ಮತ್ತು ಪುರುಷರಲ್ಲಿ ಜೈವಿಕವಾಗಿಯೂ ವ್ಯತ್ಯಾಸಗಳಿವೆ. ಭಾವನಾತ್ಮಕವಾಗಿ ಪ್ರತಿಯೊಂದನ್ನೂ ನೋಡುವ ಮಹಿಳೆಯರಲ್ಲಿ ಸಹಜವಾಗಿ ಹಾಸ್ಯವನ್ನು ಹಗುರವಾಗಿ ಅಥವಾಹಾಸ್ಯ’ವನ್ನು `ಹಾಸ್ಯ’ವಾಗಿಯಷ್ಟೇ ತೆಗೆದುಕೊಳ್ಳುವ ಪ್ರವೃತ್ತಿ ಮಿದುಳಿನಿಂದಲೇ ಕಡಿಮೆಯೇ. ಆಯಾ ವ್ಯಕ್ತಿಯ ವ್ಯಕ್ತಿತ್ವವೂ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೆಲವು ವ್ಯಕ್ತಿಗಳು ಹಾಸ್ಯವನ್ನು ತಡೆದುಕೊಳ್ಳುವುದಿಲ್ಲವಷ್ಟೆ. ಅದು ಪುರುಷ/ಮಹಿಳೆ ಯಾರೂ ಆಗಿರಬಹುದಾದರೂ, ಮಹಿಳೆಯರಲ್ಲಿ ಅಂಥವರ ಸಂಖ್ಯೆ ಹೆಚ್ಚು. ಇದು ವ್ಯಕ್ತಿಗತವಾದತಮಾಷೆ ಮಾಡುವುದಕ್ಕೆ’ ಸಂಬಂಧಿಸಿದ್ದು. ಹಾಸ್ಯದ ಮನೋಭಾವವನ್ನು ರೂಢಿಸಿಕೊಳ್ಳುವುದು, ಮುಕ್ತವಾಗಿ ನಗುವುದು, ನಮ್ಮ ಬಗೆಗಿನ ಹಾಸ್ಯವನ್ನು ನಕ್ಕು ಎದುರಿಸುವುದು ಇವು ಜೀವನಕ್ಕೆ ಉಪಯುಕ್ತವಾಗುವ ಆರೋಗ್ಯಕರವಾದ ಕೌಶಲಗಳು.

ಆದರೆ ಈಗ ನಾವು ಚರ್ಚಿಸಬೇಕಾದ ಮತ್ತೊಂದು ಆಯಾಮ ಮಹಿಳೆಯರನ್ನೇ ಗುರಿಯಾಗಿಸಿ, ಅವಹೇಳನ /ಅಶ್ಲೀಲತೆಗಳನ್ನು ಬೆರೆಸಿ ನಗೆಹನಿಗಳನ್ನು ಹರಿಯಬಿಡುವ ಹಾಸ್ಯ. ಮಹಿಳೆಯರು ಮಾಡುವ ಕೆಲಸಗಳು (ಅಡಿಗೆ, ಮನೆಯ ಸ್ವಚ್ಛತೆ), ಅವರ ವೇಷಭೂಷಣ, ಅವರ ದೇಹದ ತೂಕ, ಅವರು ಮಾಡುವ ಶಾಪ್ಪಿಂಗ್ ಇಂತಹ ಪ್ರತಿಯೊಂದನ್ನು ಸಾಮಾನ್ಯೀಕರಣಗೊಳಿಸಿ ಜೋಕ್'ಗಳು ಎಲ್ಲೆಡೆ ಹರಿದಾಡುತ್ತವೆ. ಒಂದೆರಡು ಉದಾಹರಣೆಗಳನ್ನು ಸ್ಪಷ್ಟತೆಗಾಗಿ ಇಲ್ಲಿ ನೋಡಬಹುದು. `ನಾಸಾ ಏಕೆ ಮಹಿಳೆಯನ್ನು ಚಂದ್ರನ ಮೇಲೆ ಕಳಿಸಲಿಲ್ಲ?' ಅಂತ ಒಬ್ಬ ಇನ್ನೊಬ್ಬನನ್ನು ಕೇಳಿದನಂತೆ. ಅಲ್ಲಿ ಕ್ಲೀನ್ ಮಾಡೋಕೆ ಏನೂ ಇಲ್ಲ, ಅದಕ್ಕೆ' ಅಂದನಂತೆ ಇನ್ನೊಬ್ಬ. ಮತ್ತೊಂದು; ಮೂರು ಜನ ಗಂಡಂದಿರು ತಮ್ಮ ಹೆಂಡತಿಯರು ಎಷ್ಟು ದಪ್ಪ ಅಂತ ಚರ್ಚಿಸುತ್ತಿದ್ದರಂತೆ. ಮೊದಲನೆಯವನು ಹೇಳಿದನಂತೆ, ನನ್ನ ಹೆಂಡತೀನ ಆಟೋಕ್ಕೆ ಕರೆದುಕೊಂಡು ಹೋದರೆ ಡಬ್ಬಲ್ ಛಾರ್ಜು ಅಂತ ಕೇಳ್ತಾರೆ'. ಮತ್ತೊಬ್ಬ ಅಂದನಂತೆ ನನ್ನ ಹೆಂಡತಿ ಎಲ್ಲೂ ಕುಳಿತ್ಕೋಬೇಕಾದ್ರೂ ಒಂದರ ಮೇಲೊಂದು ಕುರ್ಚಿ ಪೇರಿಸಿಯೇ ಕೂತ್ಕೋತಾಳೆ', ಕೊನೆಯವನು ಹೇಳಿದ `ನನ್ನ ಹೆಂಡತಿ ಸೀರೇನಾ ಮೊನ್ನೆ ನಾನು ಲಾಂಡ್ರಿಗೆ ತೊಗೊಂಡು ಹೋಗಿದ್ದೆ. ಅವರು ನಾವು ಷಾಮಿಯಾನ ಒಗೆದುಕೊಡಲ್ಲ ಅಂತ ಹಿಂದೆ ಕಳಿಸಿಬಿಟ್ರು!'. ಇವು `ಸ್ಯಾಂಪಲ್' ಗಾಗಿ ಅಷ್ಟೆ. ಇಂಥ ನೂರಾರು `ನಗೆಹನಿ’ಗಳು ಬಾಯಿಂದ ಬಾಯಿಗೆ, ಈಗ ಮೊಬೈಲ್ನಿಂದ ಮೊಬೈಲ್ಗೆ ಹರಿದಾಡುತ್ತಲೇ ಇರುತ್ತವೆ. “ಇವೇನು ಮಾಡುತ್ತವೆ, ಅವುಗಳನ್ನು ಅಷ್ಟುಸೀರಿಯಸ್ಸಾ’ಗಿ ಯಾಕೆ ತೆಗೆದುಕೊಳ್ತೀರಾ?” ಅಂತ ಬಹು ಜನರೆನ್ನಬಹುದು. ಆದರೆ ಅವುಗಳನ್ನು ಗಂಭೀರವಾಗಿ ಪರಿಗಣಿಸಲೇಬೇಕಾದ ಅಗತ್ಯವಿದೆ, ಏಕೆ?

ಮನಃಸ್ಥಿತಿ

ಹಾಸ್ಯದ ಉದ್ದೇಶಗಳು ಎರಡು. ಒಂದು ಮನರಂಜನೆ-ನಕ್ಕು ಮನಸ್ಸು ಹಗುರಾಗುವುದು, ಇನ್ನೊಂದು ತಿದ್ದುವಿಕೆ. ಅಂದರೆ ನೇರವಾಗಿ -ಹರಿತವಾಗಿ ಹೇಳುವುದರ ಬದಲು ಪರೋಕ್ಷವಾಗಿ ಅದನ್ನು ನಗುಬರಿಸುವ ರೀತಿಯಲ್ಲಿ ತಿಳಿಯಪಡಿಸಿ, ಅದರ ಮೂಲಕ ತಿದ್ದುವುದು. ಈ ಎರಡು ಉದ್ದೇಶಗಳೂ ಇಲ್ಲಿ ಸಾಧ್ಯವಾಗದಂತಹವು. ಅಷ್ಟೇ ಅಲ್ಲ, ಒಂದು ದೀರ್ಘಕಾಲಿಕ ಧೋರಣೆಯನ್ನು ರೂಪಿಸುವ ಶಕ್ತಿಯೂ ಮತ್ತೆ ಮತ್ತೆ ತೇಲಿಬರುವ ಈ ನಗೆಹನಿಗಳಿಗಿದೆ. ಮಹಿಳೆಯರ ಸಾಮಥ್ರ್ಯ-ಜವಾಬ್ದಾರಿ-ರೂಪ-ಗುಣಗಳನ್ನು ಹಾಸ್ಯದ ವಸ್ತುವಾಗಿ ಮಾಡುವಂತಹ ಇಂತಹ ಹಾಸ್ಯದ ಹಿಂದಿರುವ ಮನಃಸ್ಥಿತಿ ಏನು? ಸಮುದಾಯದಲ್ಲಿ ಮಹಿಳೆಯರ ಬಗೆಗೆ ಇಂಥ ಸಂಗತಿಗಳನ್ನು ನೇರವಾಗಿ ವ್ಯಕ್ತಪಡಿಸಲು `ದೂಷಣೆ’ ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಶಿಕ್ಷೆಯೇ ಕಾದಿರಬಹುದು! ಹಾಸ್ಯ ಎಂಬ ಶೀರ್ಷಿಕೆಯಡಿಯಲ್ಲಿ ಇವುಗಳನ್ನು ವ್ಯಕ್ತಪಡಿಸುವುದು ಸ್ವೀಕಾರಾರ್ಹವಾಗಿ ಬಿಡುತ್ತದೆ. ಆದರೆ ಇದು ಭಾವನಾತ್ಮಕವಾಗಿ ಸ್ಪಂದಿಸದಿರುವಿಕೆಯನ್ನು ಜನರಲ್ಲಿ ಹೆಚ್ಚಿಸುತ್ತದೆ. ಗಂಭೀರ ವಿಷಯಗಳನ್ನು ಹಗುರವಾಗಿಸಿಬಿಡುತ್ತದೆ, ಅವುಗಳ ಬಗ್ಗೆ ನಿಜವಾದ ಪರಿಹಾರಗಳನ್ನು ಹುಡುಕದಿರುವಂತೆ ಮಾಡುತ್ತದೆ.

ಹಾಸ್ಯದಿಂದ ಜನರ ಧೋರಣೆ ಹೇಗೆ ಬದಲಾಗುತ್ತದೆ ಎಂಬ ಬಗೆಗೆ ಅಧ್ಯಯನಗಳೂ ನಡೆದಿವೆ. 1990ಕ್ಕಿಂತ ಮೊದಲಿನ ಅಧ್ಯಯನಗಳು ಹಾಸ್ಯವನ್ನು ಪ್ರಶಂಸಿಸುವುದನ್ನು ಕುರಿತು ಗಮನ ಹರಿಸಿದವು. ಅಂದರೆ ಜೋಕುಗಳನ್ನು ಓದುವುದು, ಹೇಳುವುದು, ಜನರ ಪ್ರತಿಕ್ರಿಯೆ ಗಮನಿಸುವುದು. ಕ್ರಮೇಣ ಇಂಥ ಅಧ್ಯಯನಗಳಲ್ಲಿ ಪುರುಷರು-ಮಹಿಳೆಯರಲ್ಲಿ ಅಂತರಗಳು ಸ್ಪಷ್ಟವಾಗತೊಡಗಿದವು. ಮಹಿಳೆಯರು ನಗುವುದರಲ್ಲಿ ಮುಂದು, ಅದೇ ಪುರುಷರು ನಗಿಸುವುದರಲ್ಲಿ ಮುಂದು ಎಂಬುದು ಈ ಅಧ್ಯಯನಗಳಲ್ಲಿ ಕಂಡುಬಂದ ಕುತೂಹಲಕಾರಿ ಅಂಶ. ಮಹಿಳೆಯರಲ್ಲಿನ `ಸೌಂದರ್ಯ’ದ ಅಂಶಕ್ಕೆ ಪುರುಷರ ‘ತಮಾಷೆ’ ಎಂಬ ಅಂಶ ಸಂವಾದಿಯಾಗಿ ಕಂಡುಬಂದಿದ್ದು ಗಮನಾರ್ಹ.

ದಾಂಪತ್ಯ ಜೀವನದಲ್ಲಿಯೂ ಹಾಸ್ಯ ತುಂಬ ಮುಖ್ಯ ಎನ್ನುವುದನ್ನು ಅಧ್ಯಯನಗಳು ದೃಢಪಡಿಸಿವೆ. ದಾಂಪತ್ಯದಲ್ಲಿ ಹಾಸ್ಯ ರಂಜನೆಗೂ, ಕಷ್ಟಗಳನ್ನು ಸಹಿಸಲೂ, ವಾತಾವರಣವನ್ನು ತಿಳಿಯಾಗಿಸಲೂ ಸಹಾಯಕ. ಸಾರ್ವಜನಿಕವಾಗಿ ಮಹಿಳೆಯರು ಹಾಸ್ಯವನ್ನೊಪ್ಪುವುದು, ಅಥವಾ ಹಾಸ್ಯವನ್ನು ಮಾಡುವುದು ಕಡಿಮೆಯಿರಬಹುದು. ಆದರೆ ಕೌಟುಂಬಿಕವಾಗಿ, ಪತಿಯೊಡನೆ ಹಾಸ್ಯ ಮಾಡುವ ಪ್ರವೃತ್ತಿ ಮಹಿಳೆಯರಲ್ಲಿ ಧಾರಾಳವಾಗಿಯೇ ಇದೆ ಎನ್ನಬಹುದು. ಹೆಣ್ಣು ಮಕ್ಕಳನ್ನು ಅವಹೇಳನ ಮಾಡುವ, ಲೈಂಗಿಕವಾದ, ಅಶ್ಲೀಲವಾದ ಜೋಕುಗಳ ಹಿಂದೆ ಇರುವ ಮನೋವೈಜ್ಞಾನಿಕ ವಿಶ್ಲೇಷಣೆಯನ್ನು ನಾವು ಇಲ್ಲಿ ಗಮನಿಸುವುದು ಮುಖ್ಯ. ಜಗತ್ತಿನಾದ್ಯಂತ ಇವು ಕಂಡುಬರುತ್ತವೆ. ಚಾಲಕಿಯರ ಬಗ್ಗೆ, ಬಂಗಾರದ ಬಣ್ಣದ ಕೂದಲಿರುವ ಮಹಿಳೆಯರ ಬಗ್ಗೆ, ಸುಂದರ ನಟಿಯರನ್ನು ಕುರಿತು ಇರುವ ನಗೆಹನಿಗಳು ಇದಕ್ಕೆ ನಿದರ್ಶನಗಳು. ಇದು ಬರೀ `ತಮಾಷೆ’ಯಲ್ಲ. ಪುರುಷರ ಸುತ್ತಮುತ್ತಲ ವಾತಾವರಣದ ಗ್ರಹಿಕೆಯನ್ನೇ ಇದು ಮಾರ್ಪಡಿಸಬಹುದು. ಮಹಿಳೆಯರ ಬಗೆಗೆ ಏನನ್ನೇ ಮಾತನಾಡುವುದಕ್ಕೂ ಸಂಕೋಚ-ಹಿಂಜರಿಕೆಗಳನ್ನೇ ತೆಗೆದುಹಾಕಬಹುದು.

ಅಧ್ಯಯನವೊಂದರಲ್ಲಿ ಎರಡು ಗುಂಪುಗಳಲ್ಲಿ ವಿಂಗಡಿಸಿ, `ಸೆಕ್ಸಿಸ್ಟ್' ಜೋಕುಗಳನ್ನೂ, ಒಂದು ಗುಂಪಿಗೆ, ಇನ್ನೊಂದಕ್ಕೆ ನ್ಯೂಟ್ರಲ್' ಜೋಕುಗಳನ್ನೂ ಕೇಳಿಸಲಾಯಿತು. ಅದಾದ ನಂತರ ಮಹಿಳಾ ಸಂಘಟನೆಗಳಿಗೆ ಅವರು ನೀಡಲಾಗುವ ಧನಸಹಾಯದ ಬಗೆಗೆ ಪ್ರಶ್ನೆಗಳನ್ನು ಕೇಳಲಾಯಿತು. `ಸೆಕ್ಸಿಸ್ಟ್’ ಜೋಕುಗಳನ್ನು ಕೇಳಿದ್ದ ಗುಂಪು ಧನಸಹಾಯ ನೀಡಲು ಸಿದ್ಧವಿರಲಿಲ್ಲ! ಕೊಡಬೇಕೆಂದು ನಿರ್ಧರಿಸಿದ್ದ ಧನಸಹಾಯವನ್ನು ಮತ್ತಷ್ಟು ಕಡಿತಗೊಳಿಸಿದ್ದೂ ಕಂಡುಬಂತು. ಉದ್ಯೋಗದ ಸ್ಥಳಗಳಲ್ಲಿ ಮಹಿಳಾ ಉದ್ಯೋಗಿಗಳು ಇಂತಹ `ಸೆಕ್ಸಿಸ್ಟ್’ ಹಾಸ್ಯವನ್ನು ಬಹಳಷ್ಟು ಎದುರಿಸಬೇಕಾಗುತ್ತದೆ. ಇಂತಹ ಕೀಳು ಅಭಿರುಚಿಯ ಹಾಸ್ಯಕ್ಕೆ ಹೆದರಿ ಉದ್ಯೋಗವನ್ನೇ ಬಿಡಬೇಕಾಗಿಲ್ಲ. ಅದನ್ನು ನಿಭಾಯಿಸುವುದನ್ನು ಕಲಿಯಬೇಕಾಗುತ್ತದೆ. ಕೆಲವು ಸರಳ ಸೂತ್ರಗಳನ್ನು ಉಪಯೋಗಿಸಬಹುದು. ಇಂಥ ನಗೆಹನಿಗಳು ಬಂದಾಗ ನಗಬೇಡಿ. ನೀವು ಪುರುಷರಾಗಲಿ, ಮಹಿಳೆಯರಾಗಲಿ ನೀವು ಆ ಜೋಕನ್ನು ಒಪ್ಪದೆಯೂ, ಆ ಕ್ಷಣಕ್ಕೆ ನಗುವುದು, ನಿಮ್ಮನ್ನೂ ತಪ್ಪಿನಲ್ಲಿ ಪಾಲುದಾರರನ್ನಾಗಿಸುತ್ತದೆ. ನೀವು ನಗದಿರುವುದು, ಇತರರನ್ನೂ ನಗದಿರುವಂತೆ ಪ್ರಚೋದಿಸಬಹುದು. ಅದರ ಅರ್ಥ ನೇರವಾಗಿಲ್ಲ ಎಂಬುದನ್ನು ನೀವು ನಗದಿರುವುದು ಸೂಚಿಸಬಹುದು. ನಂತರದ ಹಂತಗಳು ಆ ಜೋಕನ್ನು ವಿವರಿಸಲು ಹೇಳುವುದು. ಜೋಕನ್ನು ಗಂಭೀರವಾದ ಚರ್ಚೆಯಾಗಿಸಿಬಿಡುವುದು! ಯಾರಾದರೂ ಆ ಕ್ಷಣಕ್ಕೆ after all ಒಂದು ಜೋಕ್ ಇಷ್ಟೆಲ್ಲ ಸೀರಿಯಸ್ಸಾಗಿ ತೆಗೆದುಕೊಳ್ತೀಯಾ’ ಅಂದರೆ ಏನೂ ಬೇಸರಿಸುವ ಅಗತ್ಯವಿಲ್ಲ. ನಿಮ್ಮ ನಗದಿರುವುದು, ಚರ್ಚೆ ಮುಂದಿನ ಬಾರಿ ಇಂತಹ ಜೋಕ್’ಗಳನ್ನು ಹೇಳುವುದರ ಮೊದಲು ಕೊಂಚ ಯೋಚಿಸುವಂತೆ ಮಾಡಬಲ್ಲದು ಎಂದು ನೆನಪಿಡಿ.

ಹಾಸ್ಯ ಅರೋಗ್ಯಕರವಾಗಿ, ಮುಕ್ತವಾಗಿ, ಮನಸ್ಸನ್ನು ಅರಳಿಸುವಂತಿರಬೇಕು. ಅದು ನರಳಿಸುವಂತಿದ್ದರೆ ಅದು ಅಪಹಾಸ್ಯ-ಅವಹೇಳನಗಳೇ ಆಗಿಬಿಡುತ್ತದೆ. ಹಾಗಾಗಿ ಹಾಸ್ಯ ಮಾಡುವಾಗ, ಇತರರ ಹಾಸ್ಯಕ್ಕೆ ನಗುವಾಗ ಎಚ್ಚರ! ಅದು ಹಗುರದ ಮಾತಲ್ಲ!

ಡಾ. ಕೆ.ಎಸ್. ಪವಿತ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

2 thoughts on “ಹೆಣ್ಣು ಹೆಜ್ಜೆ/ ಹಾಸ್ಯದಲ್ಲಿ ಹೆಣ್ಣಿನ ಅಪಹಾಸ್ಯ ಬೇಡ – ಡಾ. ಕೆ.ಎಸ್. ಪವಿತ್ರ

  • Suneetha G Ramesh

    ನನ್ನ ಅನಿಸಿಕೆ ಅಲೋಚನೆಗಳು ನಿಮ್ಮ ಪದಗಳಲ್ಲಿ ಹೆಪ್ಪು ಕಟ್ಟಿವೆ.
    ಈ ಪ್ರವೃತ್ತಿ ಬದಲಾಗುವುದೆ ಇಲ್ಲವೇನೋ.
    ಒಂದು ನಾವು ಇಂಥಹ ಮಾತುಗಳು ಬಂದಾಗ ನಯವಾಗಿ ಆದರೆ ಗಟ್ಟಿಯಾಗಿ ತೀರಸ್ಕರಿಸಿ ಮಾತಾನಾಡಿದಾಗಲೇ ನಾಲ್ಕರಲ್ಲಿ ಒಬ್ಬರಿಗಾದರೂ ತಿಳುವಳಿಕೆ ಬರಬಹುದೆನೋ.

    Reply
  • km vasundhara

    ಈ ಲೇಖನ ಬಹಳ ಚೆನ್ನಾಗಿದೆ. ಸ್ತ್ರೀಯರನ್ನು ಅಪಹಾಸ್ಯದ ಸರಕಾಗಿಸುವುದು ನನಗೂ ಇಷ್ಟವಿಲ್ಲ.

    Reply

Leave a Reply

Your email address will not be published. Required fields are marked *