ಹೆಣ್ಣು ಹೆಜ್ಜೆ/ ಸ್ತ್ರೀ ದೃಷ್ಟಿಯಿಂದ ಶ್ರೀರಾಮಾಯಣ ದರ್ಶನಂ – ಡಾ. ಕೆ.ಎಸ್. ಪವಿತ್ರ

ರಾಷ್ಟ್ರಕವಿ ಕುವೆಂಪು ಅವರ `ಶ್ರೀರಾಮಾಯಣ ದರ್ಶನಂ'ನ ಸ್ತ್ರೀ ಪಾತ್ರಗಳು ರೂಪುಗೊಂಡ ಹಿನ್ನೆಲೆಯನ್ನು ಗಮನಿಸಿದರೆ ಪುರುಷ -ಸ್ತ್ರೀ ಯಾರಾದರೂ,ಸ್ತ್ರೀ `ಸಂವೇದನೆ’ ಯಿಂದ ಪ್ರಭಾವಿತರಾಗಬಲ್ಲರು ಎಂಬುದು ಸ್ಪಷ್ಟವಾಗುತ್ತದೆ. ಇದೊಂದು ಸ್ತ್ರೀ ಸಬಲೀಕರಣಕ್ಕೆ ಬಹು ಮುಖ್ಯವಾಗಿ ಬೇಕಾದ ಅಂಶ. ಪುರುಷ' ಸ್ತ್ರೀಯ ಮನಸ್ಸನ್ನು ಅರ್ಥ ಮಾಡಿಕೊಳ್ಳಬಲ್ಲ ಎಂಬ ಅಂಶವಾಗಲೀ, ಆಕೆಯ ನೋವು-ನಲಿವುಗಳನ್ನು ತಾದಾತ್ಮ್ಯ ಭಾವದಿಂದ ತಾನೂ ಅನುಭವಿಸಲು ಸಾಧ್ಯ ಎಂಬ ಅಂಶವಾಗಲಿ ಮನಸ್ಸಿಗೆ ಸಮಾಧಾನ ನೀಡುತ್ತವೆ. ಒಳಹೊಕ್ಕು ಓದುತ್ತಾ ಹೋದಂತೆ ಶ್ರೀರಾಮಾಯಣ ದರ್ಶನಂ’ ನಿಂದ ಸ್ತ್ರೀ ಮನಸ್ಸಿನ ದರ್ಶನವೂ ತೆರೆದುಕೊಳ್ಳುತ್ತಾ ಹೋಗುತ್ತದೆ.

ಮತ್ತೊಂದು ಅಂತರರಾಷ್ಟ್ರೀಯ ಮಹಿಳಾ ದಿನ ಬಂದಾಯಿತು. ಮಹಿಳಾ ದಿನಕ್ಕೆಂದು ಮನಸ್ಸು ನೃತ್ಯ ಸಂಯೋಜನೆಗೆ ತೊಡಗುವಾಗಲೆಲ್ಲ ಮಹಿಳಾ ಕಾವ್ಯವನ್ನೇ ಹುಡುಕತೊಡಗುತ್ತದೆ. ಕವಯಿತ್ರಿಯರ ಕಾವ್ಯ, ಆಧುನಿಕ ಮನೋಭಾವದ ಆದರೆ ಹನ್ನೆರಡನೇ ಶತಮಾನದ ಅಕ್ಕಮಹಾದೇವಿ, ಮಹಿಳಾ ಹರಿದಾಸರು ಹೀಗೆ ವಸ್ತುಗಳ ಶೇಖರಣೆಗೆ ಮನಸ್ಸು ಮುಂದಾಗುತ್ತದೆ. ಆದರೆ ಈ ಬಾರಿ ನನಗೆ ಹೊಳೆದದ್ದು ಸ್ತ್ರೀ ಮನೋಭಾವ ಎಂಬುದು ಪುರುಷನಲ್ಲಿರಲು ಸಾಧ್ಯವಿದೆಯಷ್ಟೆ, ಅಂದ ಮೇಲೆ ಕವಿಗಳು ಬರೆದ, ಪುರುಷ ವಿರಚಿತ ಸಾಹಿತ್ಯದಲ್ಲಿಯೂ ಸ್ತ್ರೀಪ್ರಗತಿಪರ ದೃಷ್ಟಿಯಿಂದಿರುವ, ಅಂದರೆ ಸಾಹಿತ್ಯವಿರಲು ಸಾಧ್ಯ ಎಂಬ ಸಂಗತಿ.

ಹಾಗೆ ನೋಡುವಾಗ ನನ್ನನ್ನು ಮನೋವೈಜ್ಞಾನಿಕ ದೃಷ್ಟಿಯಿಂದ, ಒಬ್ಬ ಮಹಿಳೆಯಾಗಿ ಮತ್ತು ಕಲಾವಿದೆಯಾಗಿ ರಾಷ್ಟ್ರಕವಿ ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ' ಸೆಳೆಯುತ್ತದೆ. ಸಾಹಿತ್ಯ ಕ್ಷೇತ್ರದಲ್ಲಿಅಕೆಡೆಮಿಕ್’ ವಲಯದಲ್ಲಿ ಕುವೆಂಪು ಅವರ ಕಾವ್ಯದಲ್ಲಿ ಸ್ತ್ರೀಪಾತ್ರಗಳು, ಸ್ತ್ರೀಚಿತ್ರಣದ ಬಗ್ಗೆ ಸಾಕಷ್ಟು ಚರ್ಚೆ ಗಂಭೀರವಾಗಿ ನಡೆದಿದೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯವಂತೂ ಕುವೆಂಪು: ಮಹಿಳಾ ಮಂಥನ'' ಎಂಬ 270 ಪುಟಗಳ ಕಿರುಹೊತ್ತಗೆಯನ್ನೇ ಕುಪ್ಪಳಿಯಲ್ಲಿ ನಡೆದ ವಿಚಾರ ಸಂಕಿರಣವನ್ನು ಆಧರಿಸಿ ತಂದಿದೆ. `ನಾಡಗೀತೆಯಲ್ಲಿ ಕುವೆಂಪು ಏಕೆ ಮಹಿಳೆಯರನ್ನು ಹೆಸರಿಸಿಲ್ಲ' ಎಂಬ ಪ್ರಶ್ನೆಯಿಂದ ಹಿಡಿದು, ಅವರ ಸಮಗ್ರ ಕಾವ್ಯದಲ್ಲಿ, ನಾಟಕಗಳಲ್ಲಿ ಸ್ತ್ರೀಯನ್ನು ಹೇಗೆ ಅವರು ಚಿತ್ರಿಸಿದ್ದಾರೆ, ಚಿತ್ರಿಸಬಹುದಾಗಿತ್ತು ಎಂಬ ಬಗ್ಗೆ ಹಲವು ಖ್ಯಾತನಾಮರು ತಮ್ಮ ವಿಶ್ಲೇಷಣೆ ನೀಡಿದ್ದಾರೆ. ಅಂತಹ ವಿಮರ್ಶೆ ಈ ಲೇಖನದ ಉದ್ದೇಶವಲ್ಲ. ಬದಲಾಗಿ ನಾವು, ಜನಸಾಮಾನ್ಯರು (ಪುರುಷ-ಮಹಿಳೆ ಯಾರೇ ಆಗಿರಲಿ) ಸಾಹಿತ್ಯ-ನೃತ್ಯ-ನಾಟಕಗಳಿಂದ ಮನರಂಜನೆಯಷ್ಟೇ ಅಲ್ಲದೆ ಜೀವನ ಶಿಕ್ಷಣ ಪಡೆಯಬಹುದಾದ ಕುತೂಹಲಕಾರಿ ದಾರಿಯೊಂದನ್ನು ನಿರೂಪಿಸುವುದು ಈ ಲೇಖನದ ಉದ್ದೇಶ. 2016ರಲ್ಲಿ ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಹೊರತಂದಿರುವ `ಶ್ರೀರಾಮಾಯಣ ದರ್ಶನಂ' ನ ಹೊಸ ಗ್ರಂಥದ ಕೊನೆಯಲ್ಲಿ ನೀಡಿರುವ ಕುವೆಂಪು ಅವರ ಟಿಪ್ಪಣಿಗಳು ಹಲವು ವಿಷಯಗಳ ಬಗ್ಗೆ ಅವರ ನಿಲುವನ್ನು ಸ್ಪಷ್ಟಪಡಿಸುತ್ತದೆ.

ರಾಮಾಯಣದ ಕಥೆಯಂತೂ ಭಾರತೀಯರಿಗೆ ಮನಸ್ಸಿಗೆ ಹತ್ತಿರವಾದ ಕೃತಿ. ಕುವೆಂಪು ರಾಮಾಯಣದ ಪಾತ್ರ ಪ್ರಪಂಚದಲ್ಲಿ ಬರುವ ಹೆಚ್ಚಿನ ಪುರುಷರು ವಾಲ್ಮೀಕಿಯಿಂದ ಮೊದಲುಗೊಂಡು `ಹೆಂಗರುಳು' ಎನ್ನಬಹುದಾದ ಸ್ವಭಾವದವರೇ. `ಕ್ರೌಂಚ ಮಿಥುನ' ದ ಸಂದರ್ಭದಲ್ಲಿ ಗಂಡು ಪಕ್ಷಿ ನೆಲಕ್ಕುರುಳಿದಾಗ ಹೆಣ್ಣು ಕ್ರೌಂಚದ ಶೋಕವನ್ನು ಕಂಡು ದುಃಖತಪ್ತನಾಗುತ್ತಾನೆ ವಾಲ್ಮೀಕಿ. ನಂತರ ತನ್ನದೇ ಕಥೆಯನ್ನು ಹೇಳಿ ವ್ಯಾಧನನ್ನು ಪರಿವರ್ತಿಸಿ, ಸಂಜೀವ ಜೀವನದಿಂದ ಹೆಣ್ಣು ಹಕ್ಕಿಯ ಒಡಲುರಿಯನ್ನು ತಣಿಸುತ್ತಾನೆ. ಇಲ್ಲಿಂದಲೇ `ಸ್ತ್ರೀ ಸಂವೇದನೆ'ಯ ಅಂಶ ನಮ್ಮನ್ನು ತಟ್ಟಲಾರಂಭಿಸುತ್ತದೆ. ಕೌಸಲ್ಯೆ, ಮಂಥರೆ, ಊರ್ಮಿಳಾ, ಅನಲೆ, ಮಂಡೋದರಿ, ಶಬರಿ, ಅಹಲ್ಯ ಇವು ಪುರುಷ ಪಾತ್ರಗಳಿಗಿಂತ ಹೆಚ್ಚು ಸಶಕ್ತವಾಗಿ ಮೂಡಿಬಂದಿವೆ ಎಂದು ನನಗನ್ನಿಸುತ್ತದೆ. ಹಾಗೆಯೇ ಕುವೆಂಪು ಚಿತ್ರಿಸಿರುವ ಪುರುಷ ಪಾತ್ರಗಳು ಕೇವಲ `ಪುರುಷ ಮೌಲ್ಯ'ಗಳೆಂದು ನಂಬಲಾಗುವ ವೀರತ್ವ-ಧೈರ್ಯ-ಹೆದರಿಕೆಯಿರದಂತಹ, ಅಳುವೇ ಬಾರದಂತಹ ಚಿತ್ರಣವನ್ನು ಹೊಂದಿಲ್ಲ ಎನ್ನುವುದು ಗಮನಾರ್ಹ. ಇಲ್ಲಿ ಮಹಿಳೆ-ಪುರುಷರಿಬ್ಬರೂ ತಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುತ್ತಾರೆ ಎನ್ನುವುದೇ ವಿಶೇಷ.

ಕುವೆಂಪು ಅವರ ಪ್ರಿಯ ಶಿಷ್ಯ ದೇಜಗೌ ಅವರು ಒಂದೆಡೆಯಲ್ಲಿ ಬರೆದಿರುವ ವಿವಾಹಾನಂತರ ಪೂರ್ಣಗೊಂಡ ಶ್ರೀರಾಮಾಯಣ ದರ್ಶನಂನ ನಾನಾ ಸ್ತ್ರೀ ಪಾತ್ರಗಳಲ್ಲಿ ತಮ್ಮ ಪ್ರೀತಿಯ ಸತಿಯ ಜೀವನ ವಿಕಾಸವನ್ನೂ, ಅವರ ಸಾಧನೆ ಸಿದ್ಧಿಗಳನ್ನೂ ಗುರುತಿಸುತ್ತಾರೆ. ಆ ಪಾತ್ರಗಳನ್ನು ಕಂಡರಿಸುವಲ್ಲಿ ಹೇಮಾವತಿಯವರ ಚಿತ್ರವೇ ಅವರ ಕಣ್ಣ ಮುಂದಿದೆ” ಎಂಬ ಮಾತುಗಳು ಸತ್ಯ ಎನಿಸುತ್ತವೆ. ಕುವೆಂಪು ಅವರು ತಮ್ಮೊಡನೆ ನುಡಿದ ಮಾತುಗಳನ್ನೂ ದೇಜಗೌ ಹೀಗೆ ಉಲ್ಲೇಖಿಸುತ್ತಾರೆ. ಶ್ರೀರಾಮಾಯಣದರ್ಶನದಲ್ಲಿ ಬರುವ `ಚಿಃ! ಕಡಲ್ಲಿದಿರ್, ಪನಿಗೇಂ ಪ್ರದರ್ಶನಂ! ತನ್ನ ತಾನ್ ಇಲ್ಲಗೈವುದೆ ಎಲ್ಲ ಸಾಧನೆಗೆ ಕೊನೆಯ ಗುರಿ' ಎಂಬ ಮಾತುಗಳಿಗೆ ಹೇಮಾವತಿಯೇ ಸ್ಫೂರ್ತಿ. ಅವರನ್ನು ನೋಡಿಯೇ ಆ ಪಂಕ್ತಿಗಳನ್ನು ರಚಿಸಿದ್ದು. ಊರ್ಮಿಳೆ, ಅನಲೆ, ಮಂಡೋದರಿ ಮೊದಲಾದ ಸ್ತ್ರೀ ಪಾತ್ರಗಳ ಬಾಯಲ್ಲಿ ಹೊರಸೂಸುವ ಅನೇಕ ಪಂಕ್ತಿಗಳಿಗೆ ಅವರೇ ಮೂಲ ಸೆಲೆ. ಅವರಿಲ್ಲದಿದ್ದರೆ ಶ್ರೀರಾಮಾಯಣದರ್ಶನಂ ಸಹ ಈಗಿರುವಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಿರಲ್ಲಿವೇನೋ.

`ಶ್ರೀರಾಮಾಯಣ ದರ್ಶನಂ'ನ ಸ್ತ್ರೀ ಪಾತ್ರಗಳು ರೂಪುಗೊಂಡ ಹಿನ್ನೆಲೆಯನ್ನು ಹೀಗೆ ಗಮನಿಸಿದರೆ ಪುರುಷ -ಸ್ತ್ರೀ ಯಾರಾದರೂ, `ಸ್ತ್ರೀಸಂವೇದನೆ' ಯಿಂದ ಪ್ರಭಾವಿತರಾಗಬಲ್ಲರು ಎಂಬುದು ಸ್ಪಷ್ಟವಾಗುತ್ತದೆ. ಇದೊಂದು ಸ್ತ್ರೀ ಸಬಲೀಕರಣಕ್ಕೆ ಬಹು ಮುಖ್ಯವಾಗಿ ಬೇಕಾದ ಅಂಶ. `ಪುರುಷ' ಸ್ತ್ರೀಯ ಮನಸ್ಸನ್ನು ಅರ್ಥ ಮಾಡಿಕೊಳ್ಳಬಲ್ಲ ಎಂಬ ಅಂಶವಾಗಲೀ, ಆಕೆಯ ನೋವು-ನಲಿವುಗಳನ್ನು ತಾದಾತ್ಮ್ಯ ಭಾವದಿಂದ ತಾನೂ ಅನುಭವಿಸಲು ಸಾಧ್ಯ ಎಂಬ ಅಂಶವಾಗಲಿ ಮನಸ್ಸಿಗೆ ಸಮಾಧಾನ ನೀಡುವಂತಹವೆ. ಶಾಲೆಗಳಲ್ಲಿತಾಯಂದಿರ ಸಭೆ” ಮದರ್ಸ್ ಮೀಟ್'ಮಾತೃ ಮಂಡಳಿ’ ಎಂದು ಕರೆಯುವಾಗ ಅಥವಾ ಮಹಿಳೆಯರ ಮಾನಸಿಕ ಆರೋಗ್ಯ'ದ ಬಗೆಗೆ ಮಹಿಳಾ ಸಂಘಗಳಲ್ಲಿ ಸಭೆ/ಉಪನ್ಯಾಸ ಏರ್ಪಡಿಸುವಾಗ, ನಾನು ಹೇಳುವುದಿದೆ. ``ಬರೀ ಮಹಿಳೆಯರನ್ನು ಮಾತ್ರ ಕರೆದು ಉಪನ್ಯಾಸಗಳನ್ನು ಏರ್ಪಡಿಸುವುದು, ನಮ್ಮ ನಮ್ಮ ಕಷ್ಟ-ಸುಖವನ್ನು ನಾವೇ ಮಾತಾಡಿಕೊಂಡ ಹಾಗೆ! ಅದರ ಬದಲು ಪುರುಷರನ್ನು -ಗಂಡು ಮಕ್ಕಳನ್ನು ಒಳಗೊಂಡು ಈ ಚರ್ಚೆ ನಡೆಯಬೇಕು''. ಇಂಥ ಪರಿಸ್ಥಿತಿಯಲ್ಲಿಶ್ರೀರಾಮಾಯಣ ದರ್ಶನಂ’ ಪುರುಷನೊಬ್ಬ ಮಹಿಳೆಯ ಭಾವನೆಗಳನ್ನು ಅರ್ಥಮಾಡಿಕೊಳ್ಳುವ, ಪ್ರಾಮಾಣಿಕವಾಗಿ ಬಿಂಬಿಸುವ ಪ್ರಯತ್ನದಂತೆ ಕಾಣಿಸುತ್ತದೆ.

ಪರಿಹಾರದ ಮಾದರಿ

ಸ್ತ್ರೀಯ ನೈತಿಕತೆ-ಸರಿ'-ತಪ್ಪು' ಗಳ ಬಗ್ಗೆ ವೇಷಭೂಷಣ-ಪ್ರೇಮ -ಕಾಮ-ನಡವಳಿಕೆ ಎಲ್ಲಕ್ಕೂ ಹಲವು ಬಾರಿ ಥಟ್ಟನೆ ಬೆರಳು ತೋರಿಸಿ ಮಾತನಾಡುವುದು ಸ್ತ್ರೀ-ಪುರುಷರಿಬ್ಬರಿಗೂ ಸಹಜ' ಎನಿಸುವಷ್ಟರ ಮಟ್ಟಿಗೆ ರೂಢಿಯೇ ಆಗಿಬಿಟ್ಟಿದೆ. ಅಂತಹ ಹಲವು ಸಮಸ್ಯೆಗಳಿಗೆ ಶ್ರೀರಾಮಾಯಣ ದರ್ಶನಂ' ಪರಿಹಾರದ ಮಾದರಿಯನ್ನು ನೀಡುತ್ತದೆ. ಕೆಲವು ಉದಾಹರಣೆಗಳನ್ನು ಇಲ್ಲಿ ನೋಡಬಹುದು. ಶಿಲಾತಪಸ್ವಿನಿ' ಎಂಬ ಭಾಗದಲ್ಲಿ ಅಹಲ್ಯೆಯ ಪ್ರಸಂಗದ ಚಿತ್ರಣವನ್ನು ಕುವೆಂಪು ಚಿತ್ರಿಸಿದ್ದಾರೆ. ಇಂದ್ರನ ಮೋಹಕ್ಕೆ ವಶಳಾಗಿ ವಿವಾಹದ ಹೊರಗೆ ಕಾಮವನ್ನು ಹುಡುಕಲು, ಗೌತಮ ಮುನಿಯ ನಿರಾಸಕ್ತಿ, ಅಹಲ್ಯೆಯ ಆ ಕ್ಷಣದ ಆಕರ್ಷಣೆ ಇವು ಕಾರಣವಾಗುತ್ತವೆ. ಅಹಲ್ಯೆಯನ್ನು ತ್ಯಜಿಸುವ ಗೌತಮ ಮುನಿಯ ನಿರ್ಧಾರದಿಂದ ಅಹಲ್ಯೆ ಜಡಚೇತನ'ಳಾಗುತ್ತಾಳೆ. ಆದರೆ ಈ ಪರಿಸ್ಥಿತಿ ಸೃಷ್ಟಿಸುವುದು ಕೇವಲ ಒಂದುಕಲ್ಲನ್ನಲ್ಲ'! ಇಡೀ ಪ್ರಕೃತಿಯೇ ಸ್ತಬ್ಧವಾಗುತ್ತದೆ. ಹುಲ್ಲಿನ ಎಸಳೂ ಅಲುಗಾಡದಂತಾಗುತ್ತದೆ. ಜಿಂಕೆ-ನವಿಲು-ಹಕ್ಕಿಗಳು ನಲಿದಾಡದಂತಾಗುತ್ತವೆ. ಈ ಸ್ತಬ್ಧ' ಪ್ರಕೃತಿಯನ್ನು ಮತ್ತೆ ನಲಿಯುವಂತೆ,ಅಹಲ್ಯೆ' ಎಂಬ ಕಲ್ಲನ್ನು ಬೆಣ್ಣೆಯಂತೆ ಕರಗಿಸುವುದು ಏನು? ಶ್ರೀರಾಮನ ನರ್ತನ! ಅಂದರೆ ಮನಸ್ಸನ್ನು ಕರಗಿಸುವ, ಮಧುಮತ್ತ ನರ್ತನ. ಇಡೀ ಪ್ರಕೃತಿಯೇ ತಾಯಿ ಕೌಸಲ್ಯೆ ಗೋಳಿಡುವಂತೆ, ರಾಮಾ' ಎಂದು ತನ್ನನ್ನು ಕರೆದಂತೆ ಭಾಸವಾಗುವುದೇರಾಮನರ್ತನ'ಕ್ಕೆ ಪ್ರೇರಣೆ. ರಾಮನ ಈ ಅನುಭವ, ವಿವಾಹದಲ್ಲಿ ತಲೆದೋರಬಹುದಾದ ಅನ್ಯಾಕರ್ಷಣೆ, ನಿರಾಸಕ್ತಿಗಳನ್ನು ಭಾವೀ ದಂಪತಿಗಳಿಗೆ ಶಿಕ್ಷಣದ ರೀತಿಯಲ್ಲಿ, `ಸೀತಾಸ್ವಯಂವರ'ಕ್ಕೆ ಕಿಂಚಿತ್ ಮೊದಲು ನಡೆಯುತ್ತದೆ ಎಂಬುದು ಗಮನಾರ್ಹ.

ನಂತರದ `ನೀರವಧ್ಯಾನ ವಧೂ ಊರ್ಮಿಳಾ’ ಎಂಬ ಅಧ್ಯಾಯ, ಊರ್ಮಿಳೆಯ ಬಗ್ಗೆ ಸಾಹಿತ್ಯ ಜಗತ್ತಿನ ಗಮನವನ್ನು ಸೆಳೆಯಿತು. ಕುವೆಂಪು ಅವರ “ಪೆಣ್ತನಂ ತಾನೆ ನೀನಲ್ಲದೂರ್ಮಿಳೆಯಲ್ತು; ಪೆಣ್ಣೆಂಬ ತಪಕೆ ನೀಂನಿರುಪಮ ಪ್ರತಿಮೆಯೌ! ... ದೇವ ಮಾನವ ಸಕಲ ಲೋಕ ಸಂಸ್ತುತಿಯ ಬೆಂಬಲದ ಸೀತೆಯ ತಪಕೆ ಮಿಗಿಲ್ ನಿನ್ನ ಅಖ್ಯಾತಮಾ ದೀರ್ಘಮೌನವ್ರತಂ! ಭ್ರಾತೃಭಕ್ತಿಯ ಸಂಭ್ರಮಾಧಿಕ್ಯದೊಳ್ ಪ್ರೀತಿಯಂ ಬೀಳ್ಕೊಳ್ವುದಂ ತಾಂ ಮರೆಯನಲ್ತೆ?'' ಎಂಬ ಪ್ರಶ್ನೆಗಳು ನಮ್ಮೆಲ್ಲರ ಮನದಲ್ಲಿದ್ದರೂ, ಅವುಗಳನ್ನು ಮುಕ್ತವಾಗಿ ಕೇಳುವ ಕವಿ ಕುವೆಂಪು ಒಬ್ಬ ಪುರುಷನಾಗಿಯೂ ಮಹಿಳೆಯರ ಮನಸ್ಸಿಗೆ ಹತ್ತಿರವಾಗುತ್ತಾರೆ!

ಸೀತಾ ಅಗ್ನಿ ಪ್ರವೇಶದ ಪ್ರಸಂಗದಲ್ಲಿಯಂತೂ ಕುವೆಂಪು ದಾಂಪತ್ಯದಲ್ಲಿ ಲಿಂಗ ಸಮಾನತೆಯ ಮಾದರಿಯನ್ನು ಚಿತ್ರಿಸಿದ್ದಾರೆ. ಕುವೆಂಪು ಅವರ ಮಾತುಗಳನ್ನೇ ಇಲ್ಲಿ ಉಲ್ಲೇಖಿಸುವುದು ಸೂಕ್ತ. ``ಜಾರಿ ಬೀಳುವುದು ಹೆಂಗಸೇ ಎಂಬ ಮನೋಭಾವ ಸಾರ್ವತ್ರಿಕವಾಗಿ ಹಬ್ಬಿರುವಂತೆ ನಮ್ಮ ಎಲ್ಲ ಕವಿಗಳ ಕೃತಿಯಲ್ಲಿ ಕಾಣುತ್ತದೆ. ರಾಮನಿಂದ ದೂರವಾದ ಸೀತೆಯ ಶೀಲದ ಬಗ್ಗೆ ಅನುಮಾನ ಮಾಡುವುದು ರಾಮನಿಗೆ ಸಹಜವೆಂತಾದರೆ, ಸೀತೆಯನ್ನಗಲಿದ ರಾಮನ ನಡತೆಯ ಬಗ್ಗೆ ಸಂಶಯ ಬರುವುದು ಸೀತೆಗೂ ಸಹಜವಾಗಿರಲೇಬೇಕು''.

ಕುವೆಂಪು ಮುಂದುವರೆದು ``ಸೀತೆ -ರಾಮರು ಅಗ್ನಿಪ್ರವೇಶ ಮಾಡಿದರೆಂದರೆ ಅದೊಂದು ಭೌತಿಕ ಘಟನೆಯೆಂದು ಭಾವಿಸಬೇಕಾಗಿಲ್ಲ” ಎಂದು ಸ್ಪಷ್ಟಪಡಿಸುತ್ತಾರೆ. ನೈತಿಕತೆ ಎಂಬುದು ಹೆಣ್ಣಿನಷ್ಟೇ, ಗಂಡಿಗೂ ಅನ್ವಯಿಸುತ್ತದೆ ಎಂಬ ಸಂದೇಶವನ್ನು ನಾವು ಈ ಘಟನೆಯಿಂದ ಗ್ರಹಿಸಬೇಕಾಗುತ್ತದೆ. ಒಟ್ಟಿನಲ್ಲಿ ಒಳಹೊಕ್ಕು ಓದುತ್ತಾ ಹೋದಂತೆ ಶ್ರೀರಾಮಾಯಣ ದರ್ಶನಂ’ ನಿಂದ ಸ್ತ್ರೀ ಮನಸ್ಸಿನ ದರ್ಶನವೂ ತೆರೆದುಕೊಳ್ಳುತ್ತಾ ಹೋಗುತ್ತದೆ. ಮನೋವಿಜ್ಞಾನಿ ಯೂಂಗ್ ಹೇಳುವ ಪ್ರತಿ ಮನುಷ್ಯನಲ್ಲಿರುವ ಅನಿಮಾ'ಅನಿಮಸ್’ ಹೆಣ್ಣು-ಗಂಡು ತತ್ತ್ವಗಳ ನೆನಪು ಹೀಗೆ ಓದುವಾಗ ನನಗಾಗುತ್ತದೆ. ಮಹಿಳೆಯರು `ಅನುಭವಿಸಿ’ ರಚಿಸಿದ ನೋವು ನಲಿವುಗಳಿಂದ ಕೂಡಿದ ಸಾಹಿತ್ಯವನ್ನು ಅಂಥದ್ದೇ ಸಂವೇದನೆಗಳನ್ನು, ಸ್ತ್ರೀಪರ ಕಾಳಜಿಯ, ಮಾನವತಾ ದೃಷ್ಟಿ ಹೊಂದಿದ ಪುರುಷನೂ ಅನುಭವಿಸಿ ಸಾಹಿತ್ಯ ರಚಿಸಬಲ್ಲ ಸಾಮಥ್ರ್ಯದ ಸಾಧ್ಯತೆಯೂ ಇದು, ಅಲ್ಲವೆ?

  • ಡಾ. ಕೆ.ಎಸ್. ಪವಿತ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *