ಹೆಣ್ಣು ಹೆಜ್ಜೆ / ಸಾವಿನ ಯೋಚನೆಯೂ ಮಹಿಳೆಯೂ… ಡಾ. ಕೆ.ಎಸ್. ಪವಿತ್ರ

ಮಾನಸಿಕವಾದ, ಭಾವನಾತ್ಮಕವಾದ ಒಂಟಿತನ, ಮಹಿಳೆಯರನ್ನು ಜಾತಿ-ವರ್ಗ-ದೇಶ ಭೇದವಿಲ್ಲದೆ ಪುರುಷನಿಗಿಂತ ಹೆಚ್ಚು ಕಾಡುತ್ತದೆ ಎಂಬುದು ಅಧ್ಯಯನಗಳು ಸ್ಪಷ್ಟವಾಗಿ ತೋರಿಸಿರುವ ಅಂಶ. ಆದರೆ ಬಹುಜನ ಮಹಿಳೆಯರೂ, ಪುರುಷರೂ ಇದನ್ನು ಬಡಪೆಟ್ಟಿಗೆ ಒಪ್ಪುವುದಿಲ್ಲ. ಇದು ದೈಹಿಕ ಒಂಟಿತನವಲ್ಲ. ನಮ್ಮ ಮನಸ್ಸಿನ ಭಾವನೆಗಳನ್ನು ಪ್ರಾಮಾಣಿಕವಾಗಿ ಹಂಚಿಕೊಳ್ಳುವ ಅವಕಾಶವಿರುವ ಭಾವನಾತ್ಮಕ ಒಂಟಿತನ. ಗಂಟೆಗಟ್ಟಲೆ ಸ್ನೇಹಿತರೊಡನೆ ಚ್ಯಾಟ್ ಮಾಡುವ ಮಹಿಳೆಯರೂ ತಮ್ಮ ಒಳಮನಸ್ಸಿನ ಭಾವನೆಗಳನ್ನು ಯಾರೊಡನೆಯೂ ಹಂಚಿಕೊಳ್ಳದಿರುವುದೂ ಸಾಮಾನ್ಯವೇ. ಈ ಭಾವನಾತ್ಮಕ ಒಂಟಿತನದ ಅಪಾಯವೆಂದರೆ ಆತ್ಮಹತ್ಯೆಯಂಥ ಸಾವಿನ ಯೋಚನೆಗಳಿಗೆ ಅದರೊಂದಿಗಿರುವ ನಂಟು.

ಸೃಜನಶೀಲತೆ ಮತ್ತು ಮಾನಸಿಕ ಆರೋಗ್ಯದ ಬಗೆಗೆ ನಾನು ಸಂಶೋಧನೆ ನಡೆಸುತ್ತಾ ಇದ್ದ ಸಮಯ. ನಾನಿನ್ನೂ ಮನೋವೈದ್ಯಕೀಯ ಸ್ನಾತಕೋತ್ತರ ಪದವಿಗಾಗಿ ವ್ಯಾಸಂಗ ಮಾಡುತ್ತಿದ್ದೆ. ನನ್ನ ಅಧ್ಯಯನಕ್ಕಾಗಿ ನಾನು ಸಾಹಿತಿಗಳನ್ನು ಸಂದರ್ಶಿಸುತ್ತಿದ್ದೆ. ಆಗ ಇಬ್ಬರು ಪ್ರಸಿದ್ಧ ಲೇಖಕಿಯರು ತಮಗೆ ಬರುವ ಸಾವಿನ ಬಗೆಗಿನ ವಿವಿಧ ಯೋಚನೆಗಳು, ಅವುಗಳ ಕವನಗಳು ಬರೆಯಲು ಹೇಗೆ ಪ್ರೇರಕ ಶಕ್ತಿಗಳಾಗುತ್ತವೆ ಎಂಬುದನ್ನು ಹಂಚಿಕೊಂಡಿದ್ದರು. ಸಾವಿನ ಬಗ್ಗೆ ವಿಭಿನ್ನ ಜನರು ವಿಭಿನ್ನವಾಗಿ ಯೋಚಿಸುವ ರೀತಿ ಆ ಸಮಯದಲ್ಲಿ ನನ್ನಲ್ಲಿ ಕುತೂಹಲ ಮೂಡಿಸಿತ್ತು. ಅದಾದ ನಂತರದ ದಿನಗಳಲ್ಲಿ ವೈದ್ಯೆಯಾಗಿ ಸಾವನ್ನು ಹತ್ತಿರದಿಂದ ನಾನು ನೋಡಿದ್ದೇನೆ. ಆತ್ಮಹತ್ಯೆಗಳ ಯೋಚನೆಗಳ ಬಗ್ಗೆ, ಸಾವಿನ ಬಗೆಗಿನ ಹೆದರಿಕೆಯನ್ನು ಕುರಿತು ಬಹುಜನರಿಗೆ ಚಿಕಿತ್ಸೆ ನೀಡಿದ ಅನುಭವವೂ ಈಗ ನನಗಿದೆ. ಈ ಅನುಭವಗಳಿಂದ ಮಹಿಳೆಯರಲ್ಲಿ ಸಾವಿನ ಯೋಚನೆಗಳ ಹಲವು ಅಯಾಮಗಳನ್ನು ತೆರೆದಿಡುವ ಪ್ರಯತ್ನ ಇಲ್ಲಿದೆ.

ಈ ಲೇಖನವನ್ನು ಓದುತ್ತಿರುವ ಮಹಿಳೆಯರೆಲ್ಲರೂ ಎರಡು ನಿಮಿಷ ಸುಮ್ಮನೇ ಕುಳಿತು, ಕಣ್ಣು ಮುಚ್ಚಿ ಒಮ್ಮೆ ಯೋಚಿಸಬೇಕು. ಮಕ್ಕಳಿಗೆ ಬೈಯ್ಯುವಾಗ, ಪತಿಯ ಜೊತೆಗೆ ಜಗಳವಾಡುವಾಗ, ಕುಟುಂಬದ ವಿವಿಧ ಸನ್ನಿವೇಶಗಳಲ್ಲಿ ಎಷ್ಟು ಬಾರಿ `ನಾನು ಸತ್ತರೇ ನಿಮಗೆ ಬುದ್ಧಿ ಬರುವುದು', `ನಾನು ಇರಬಾರದು ಅಷ್ಟೇ'- ಈ ರೀತಿಯ ಮಾತುಗಳನ್ನು ಹೇಳಿರುತ್ತೇವೆ? ಅಥವಾ ಕುಟುಂಬ ಕಲಹಗಳಲ್ಲಿ ಯಾರಾದರೂ `ಈ ರೀತಿ ವರ್ತಿಸುವ ಬದಲು ನೀನಿರದಿದ್ದರೇ ಒಳ್ಳೆಯದಿತ್ತು/ಗೆಟ್ ಲಾಸ್ಟ್/`ಗೋಟು ಹೆಲ್', ‘ಸಾಯಿ’ ಈ ರೀತಿಯ ಮಾತುಗಳನ್ನು ಆ ಹೊತ್ತಿಗೆ, ನಿಜವಾದ ಉದ್ದೇಶವಿರದ್ದಾಗ್ಯೂ ಬಳಸಿದಾಗ ಅದು ನಿಮಗೆ ನೋವನ್ನುಂಟು ಮಾಡಿತ್ತೇ? ಹೆಚ್ಚಿನ ಮಹಿಳೆಯರ ಉತ್ತರ ಎರಡೂ ಪ್ರಶ್ನೆಗಳಿಗೆ `ಹೌದು'!

ಉತ್ತರ `ಹೌದು' ಎಂದು ಸಂಕೋಚವಿಲ್ಲದೆ ಒಪ್ಪುವ ಮಹಿಳೆಯರೂ ತಕ್ಷಣವೇ ಅದರ ಜೊತೆಗೇ ಇನ್ನೊಂದು ಮಾತನ್ನೂ ಸೇರಿಸುತ್ತಾರೆ, ``ಅದು ಆ ತಕ್ಷಣದ ಕೋಪ/ದುಃಖದಲ್ಲಿ ಹೇಳಿದ್ದು, ನಿಜವಾಗಿ ಹಾಗೆ ಮಾಡಬೇಕೆದು ನನಗಿರಲಿಲ್ಲ. ಅಥವಾ ಮಕ್ಕಳು /ಗಂಡ ಹೇಳಿದ ಮಾತುಗಳೂ ಉದ್ದೇಶಪೂರ್ವಕವಲ್ಲ ಎಂಬುದು ನಮಗೆ ಗೊತ್ತಿತ್ತು''. ಹಾಗಿದ್ದರೆ ಈ ಅಂಶಗಳು ಗೊತ್ತಿದ್ದು ಆ ತಕ್ಷಣಕ್ಕೆ ಅಂತ ಮಾತುಗಳು ಬಂದದ್ದು, ನೋವನ್ನುಂಟು ಮಾಡಿದ್ದು ಏಕೆ?

`ಸಾಯುವ ಮಾತು' ಎನ್ನುವುದು ನಿಜವಾಗಿ ನೋಡಿದರೆ ``ಸಾಯುವಷ್ಟು ಕಷ್ಟ ನನಗಾಗುತ್ತಿದೆ, ಹಾಗಾಗಿಯಾದರೂ ನೀವು ನನಗೆ ಬೇಕಾದ್ದನ್ನು ಮಾಡಿ ಎಂಬ ಪರಿಹಾರ ಬೇಡುವ ಕೂಗು. ಹಾಗೆಯೇ ಇತರರು `ಸಾಯಿ' ಎಂದು ಬೈದಾಗ ಮನಸ್ಸಿನಲ್ಲಿ ಮೂಡುವ ಭಾವನೆ ``ನನ್ನ ನೋವಿಗೆ ಇವರು ಕಾಳಜಿ ಮಾಡುವುದಿಲ್ಲ'.

ಅಗಾಧ ವ್ಯತ್ಯಾಸ : ಕುಟುಂಬದ ಕಲಹಗಳಲ್ಲಿ ಬರುವ ಮಾತುಗಳಲ್ಲಿ ಹಲವು ಬಾರಿ ಒಬ್ಬರು, ಇನ್ನೊಬ್ಬರ ಮಾತುಗಳನ್ನು ಅರ್ಥ ಮಾಡಿಕೊಳ್ಳದಿರುವುದು, ತಪ್ಪಾಗಿ ಗ್ರಹಿಸುವುದು ಸಾಮಾನ್ಯವಾಗಿ ನಡೆಯುತ್ತವೆ. ಅದರಲ್ಲಿಯೂ ಮಹಿಳೆ-ಪುರುಷರಿಗೆ ಒಂದು ವಿಷಯವನ್ನು ಗ್ರಹಿಸುವಲ್ಲಿ ಅಗಾಧ ವ್ಯತ್ಯಾಸವಿದೆ. ಅಂತಹ ವ್ಯತ್ಯಾಸವನ್ನು ಕವಯಿತ್ರಿ ವೈದೇಹಿಯವರ ಒಂದು ಕವಿತೆ `ಆಕೆ ಆತ ಭಾಷೆ' ಹೀಗೆ ಗುರುತಿಸುತ್ತದೆ. 

ಅವಳೆಂದದ್ದು - ಹಸಿವೆ ಮತ್ತು ಬಾಯಾರಿಕೆ
ಆತನೆಂದ - ಚೆನ್ನಾಗಿ ಉಣ್ಣು, ಕುಡಿ
ಆಕೆ ಅತ್ತಳು ಆಗ
ಆತ ನಕ್ಕ
ಗಾಳಿ ಇರಲಿಲ್ಲವೆ ಅವರ ನಡುವೆ
ಹಾಗಾಗಿ ಅಲೆಗಳೂ?
ಅಲ್ಲೇ ಎದ್ದದ್ದು ಆತ್ಮ
ಹತ್ಯೆಯ ಮಾತು
ಏನಂದ ಆತ?
ತಮಾಷೆ! ಎಂದೆ?

ಇದು ಪುರುಷ-ಸ್ತ್ರೀಯರಲ್ಲಿರುವ ಯೋಚನಾ ವಿಧಾನದ ಭಿನ್ನತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಮಾನಸಿಕವಾದ, ಭಾವನಾತ್ಮಕವಾದ ಒಂಟಿತನ, ಮಹಿಳೆಯರನ್ನು ಜಾತಿ-ವರ್ಗ-ದೇಶ ಭೇದವಿಲ್ಲದೆ ಪುರುಷನಿಗಿಂತ ಹೆಚ್ಚು ಕಾಡುತ್ತದೆ ಎಂಬುದು ಅಧ್ಯಯನಗಳು ಸ್ಪಷ್ಟವಾಗಿ ತೋರಿಸಿರುವ ಅಂಶ. ಆದರೆ ಬಹುಜನ ಮಹಿಳೆಯರೂ, ಪುರುಷರೂ ಇದನ್ನು ಬಡಪೆಟ್ಟಿಗೆ ಒಪ್ಪುವುದಿಲ್ಲ. ಅವರ ಪ್ರಶ್ನೆ ``ನಮಗೆ ಬೇಕಷ್ಟು ಕುಟುಂಬದ ಬೆಂಬಲವಿದೆ, ಸಾಮಾಜಿಕವಾಗಿ ಬೆರೆಯುತ್ತೇವೆ. ಸ್ನೇಹಿತೆಯರೊಡನೆ `ಚ್ಯಾಟ್' ಮಾಡುತ್ತೇವೆ. ಇಷ್ಟೆಲ್ಲಾ ಇದ್ದ ಮೇಲೆ ನಮ್ಮನ್ನು ಒಂಟಿತನ ಕಾಡುವುದೆಂದರೇನು?'' `ಒಂಟಿತನ' ವೆಂದರೆ ಒಬ್ಬರೇ ಮನೆಯಲ್ಲಿ ಇರುವ `ದೈಹಿಕ' ಒಂಟಿತನವಲ್ಲ. ನಮ್ಮ ಮನಸ್ಸಿನ ಭಾವನೆಗಳನ್ನು ಪ್ರಾಮಾಣಿಕವಾಗಿ ಹಂಚಿಕೊಳ್ಳುವ ಅವಕಾಶವಿರದ  ಭಾವನಾತ್ಮಕ ಒಂಟಿತನ. ಗಂಟೆಗಟ್ಟಲೆ ಸ್ನೇಹಿತರೊಡನೆ ಚ್ಯಾಟ್ ಮಾಡುವ ಮಹಿಳೆಯರೂ ತಮ್ಮ ಒಳಮನಸ್ಸಿನ ಭಾವನೆಗಳನ್ನು ಯಾರೊಡನೆಯೂ ಹಂಚಿಕೊಳ್ಳದಿರುವುದೂ ಸಾಮಾನ್ಯವೇ. ``ನಾನು ಹಾಗೆ ಯೋಚಿಸುತ್ತೇನೆ ಎಂದು ಗೊತ್ತಾದರೆ, ಅವರೇನೆಂದುಕೊಳ್ಳುತ್ತಾರೋ, ಮತ್ತ್ಯಾರಿಗೆ ಹೇಳುತ್ತಾರೋ, ಬೆನ್ನ ಹಿಂದೆ ಮಾತನಾಡುತ್ತಾರೋ'' ಎಂಬ ಅನುಮಾನ ಬಹಳಷ್ಟು  ಮಹಿಳೆಯರನ್ನು ಕಾಡುತ್ತದೆ. ಇದರಿಂದ ಸುತ್ತಮುತ್ತಲೂ, ಮನೆಯ ತುಂಬ ಜನರಿರುವ ಮಹಿಳೆಯೂ `ಒಂಟಿ' ಯಾಗಿರಲು ಸಾಧ್ಯವಿದೆ. 

ಈ ಭಾವನಾತ್ಮಕ ಒಂಟಿತನದ ಅಪಾಯವೆಂದರೆ ಆತ್ಮಹತ್ಯೆಯಂಥ ಸಾವಿನ ಯೋಚನೆಗಳಿಗೆ ಅದರೊಂದಿಗಿರುವ ನಂಟು. ಭಾರತೀಯ ಮಹಿಳೆಯರಲ್ಲಿ ಆತ್ಮಹತ್ಯೆಯ ಪ್ರಮಾಣವನ್ನು ಅವಲೋಕಿಸಿದರೆ, ಭಾವನಾತ್ಮಕ ಒಂಟಿತನವನ್ನು ಮಹಿಳೆಯರು ಕಳೆಯಲು ಮಾಡಬೇಕಾದ ತಂತ್ರಗಳ ಮಹತ್ವ ಅರಿವಾಗುತ್ತದೆ. ಜಾಗತಿಕವಾಗಿ ಆತ್ಮಹತ್ಯೆಗಳ ಪ್ರಮಾಣದ ಶೇಖಡಾ 36 ರಷ್ಟು ಭಾಗ ಭಾರತದ ಮಹಿಳೆಯರದ್ದು. ಅದರಲ್ಲಿ ಹದಿಹರೆಯದ ಹೆಣ್ಣು ಮಕ್ಕಳು ಮತ್ತು ಯುವತಿಯರದ್ದೇ ಮೇಲುಗೈ!ಕಾರಣಗಳ ಬಗೆಗೆ ಅಧ್ಯಯನಗಳೂ ನಡೆದಿವೆ. ಏರುತ್ತಿರುವ ವಿದ್ಯಾಭ್ಯಾಸ ಮಟ್ಟ, ಸಬಲತೆ, ಅದಕ್ಕೆ ಸರಿಯಾಗಿ ನಮ್ಮ ರೂಢಿಗತ, ಆಳವಾಗಿ ಬೇರೂರಿದ ಧೋರಣೆಗಳು ಬದಲಾಗದಿರುವುದು, ಅವುಗಳ ನಡುವೆ ಸಂಘರ್ಷ ಇವು ಮುಖ್ಯ ಕಾರಣಗಳು ಎಂಬುದನ್ನು ಈ ಅಧ್ಯಯನಗಳು ತೋರಿಸಿವೆ.

ಹೆಣ್ಣು ಮಕ್ಕಳು ಆತ್ಮಹತ್ಯೆಗೆ ಪ್ರಯತ್ನಿಸಿ ಬದುಕುಳಿದು ಬಂದಾಗ ಬಹಳಷ್ಟು ಜನ ಅವರಿಗೆ ಸಾಮಾನ್ಯವಾಗಿ ತಿಳಿ ಹೇಳುವುದು ಹೀಗೆ ``ಮಕ್ಕಳ ಮುಖ ನೋಡಿಯಾದ್ರೂ ಬದುಕಬಾರದೆ? ನೀನು ಹೀಗೆ ಮಾಡಿದರೆ ಅವರ ಗತಿ ಏನು?'' ಸ್ವತಃ ಮಹಿಳೆಯರೂ `ಬದುಕಲು ತಮಗೆ ಬಲವಾದ ಒಂದು ಕಾರಣವೆಂದರೆ ಮಕ್ಕಳು ``ಎಂದು ಹೇಳುವುದೂ ಅಷ್ಟೇ ಸಾಮಾನ್ಯ. ``ನಾನು ನನಗಾಗಿ ಬದುಕಬೇಕು'' ಎಂದು ಹೇಳುವ ಮಹಿಳೆಯರು ಕಡಿಮೆಯೇ! ಇದು ಬಹುಶಃ ಮಹಿಳೆ ತನ್ನನ್ನು ತಾನು ಭಾವನಾತ್ಮಕವಾಗಿ ಇತರರೊಡನೆ, ವಿಶೇಷವಾಗಿ ತನ್ನ ಮಕ್ಕಳೊಡನೆ ಗುರುತಿಸಿಕೊಳ್ಳುವುದನ್ನು ಸೂಚಿಸುತ್ತದೆ ಎಂದು ನನಗನ್ನಿಸುತ್ತದೆ.

ಇವೆಲ್ಲವೂ ಹೌದೇ ಆದರೂ, ಒಬ್ಬ ಮನೋವೈದ್ಯೆಯಾಗಿ ಪ್ರತಿ ಮಹಿಳೆಯೂ ಒಬ್ಬ ವ್ಯಕ್ತಿಯಾಗಿ ``ನನಗೆ ಇಷ್ಟವಾದ್ದರಿಂದ, ನನ್ನ ಜೀವನವನ್ನು ಅನುಭವಿಸಬೇಕು ಎಂಬ ಆಶಯದಿಂದ ನಾನು `ನನಗಾಗಿ' ಬದುಕುತ್ತೇನೆ'' ಎಂಬಂತೆ ಬದುಕಬೇಕು ಎಂದು ನಾನು ಆಶಿಸುತ್ತೇನೆ, ಹಾಗೆಯೇ ಮಹಿಳೆಯ, ಮನಸ್ಸಿನ ಭಾವನೆಗಳನ್ನು ಇತರರು `ಹೇಳದೆಯೇ ಆರ್ಥ ಮಾಡಿಕೊಳ್ಳಬೇಕು' ಎಂದು ನಾವು ನಿರೀಕ್ಷಿಸುವ ಬದಲು, ಮಹಿಳೆಯರೇ ಮುಕ್ತವಾಗಿ ಹಂಚಿಕೊಂಡರೆ ಮಹಿಳೆಯರು ಮಾನಸಿಕವಾಗಿ ಮತ್ತಷ್ಟು ಸಬಲರಾಗಲು ಸಾಧ್ಯವಿದೆ. ಅದೇ ರೀತಿ ಮಹಿಳೆಯರ ಭಾವನಾತ್ಮಕತೆಯ ಕೆಲವಂಶವನ್ನು ಮಕ್ಕಳು, ಪುರುಷರು ರೂಢಿಸಿಕೊಳ್ಳುವ ಪ್ರಯತ್ನ ಮಾಡಿದರೆ, ಕೌಟುಂಬಿಕ ಕಲಹಗಳು ಕಡಿಮೆಯಾಗಿ, ಮಹಿಳೆಯರಲ್ಲಿ ಆತ್ಮಹತ್ಯೆಗಳ ಪ್ರಮಾಣದಲ್ಲಿ ಇಳಿಕೆ, ಕೌಟುಂಬಿಕ ನೆಮ್ಮದಿಯ ಏರಿಕೆ ಎರಡೂ ಸಾಧ್ಯವಾಗುತ್ತವೆ.

ಜಾಗತಿಕ ಆತ್ಮಹತ್ಯೆ ತಡೆ ದಿನ ಸೆಪ್ಟೆಂಬರ್ 10 ರಂದು ಜಗತ್ತಿನ ಎಲ್ಲೆಡೆ  ನಡೆಯುತ್ತಿದೆ. ಇದರ ರೂವಾರಿ ಚೆನ್ನೈನ ಸ್ನೇಹಾ ಫೌಂಡೇಷನ್‍ನ ಡಾ|| ಲಕ್ಷ್ಮೀ ವಿಜಯಕುಮಾರ್ ಎಂಬ ಮನೋವೈದ್ಯೆ ಎಂಬುದು ಭಾರತೀಯರಿಗಷ್ಟೇ ಅಲ್ಲ, ಜಗತ್ತಿನ ಮಹಿಳೆಯರಿಗೇ ಹೆಮ್ಮೆಯ ವಿಷಯ. 2004ರ ಸೆಪ್ಟೆಂಬರ್ 10 ರಂದು, ಅಂದರೆ 16 ವರ್ಷಗಳ ಹಿಂದೆ ಆರಂಭವಾದ ವಿಶ್ವ ಸಂಸ್ಥೆಯ ಈ ಮಹತ್ವದ ದಿನ ಮಹಿಳೆಯರಲ್ಲಿ `ಜೀವಿಸುವ ಆಸೆ'ಯನ್ನು ವಿವಿಧ ರೀತಿಗಳಲ್ಲಿ ಹುಟ್ಟಿಸಬೇಕು!'ಸಮಾಜದ ಸಾರ್ಥಕ್ಯ'ವನ್ನು  ಹೆಚ್ಚಿಸಬೇಕು!

ಡಾ|| ಕೆ.ಎಸ್. ಪವಿತ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *