Uncategorizedಅಂಕಣ

ಹೆಣ್ಣು ಹೆಜ್ಜೆ/ ಸಹಜ ಆಗಬೇಕಾದ ಮುಟ್ಟು – ಮನಸ್ಸು- ಡಾ. ಕೆ.ಎಸ್. ಪವಿತ್ರ

ಮುಟ್ಟಿನ ಸಮಯದ ಸ್ವಚ್ಛತೆ -ಆರೋಗ್ಯಕರ ಅಭ್ಯಾಸಗಳು ಮಹಿಳೆಯ ಮುಂದಿನ ಜೀವನದ ಆರೋಗ್ಯ- ಆತ್ಮವಿಶ್ವಾಸದ ಮಟ್ಟವನ್ನು ಹೆಚ್ಚಿಸುತ್ತವೆ ಎಂಬುದು ವೈಜ್ಞಾನಿಕ ಸತ್ಯ. ಮುಟ್ಟಿನ ಬಗ್ಗೆ ಮನಸ್ಸಿನ ಧೋರಣೆ ಕ್ರಮೇಣ ಬದಲಾಗಲು ಸಾಧ್ಯವಾದರೆ ಮಹಿಳೆಯ ದೈಹಿಕ-ಆರೋಗ್ಯಕ್ಕೆ -ಆತ್ಮವಿಶ್ವಾಸಕ್ಕೆ ಬಹು ದೊಡ್ಡ ಲಾಭ. ಒಳಗಿನಿಂದ ಸಬಲರಾಗಿಸುವ ಪ್ರಯತ್ನಗಳು ನಡೆದಾಗ ಬಾಲಕಿಯರು ದೈಹಿಕವಾಗಿಯೂ `ಸಬಲೆ'ಯರೇ ಆಗುತ್ತಾರೆ. ಇದು `ಒಳಗಿ’ನಿಂದ ಬದಲಾಗುವ ಮಾದರಿ.

ಸ್ಕಾಟ್‍ಲ್ಯಾಂಡ್‍ನಲ್ಲಿ ನ್ಯಾಪ್‍ಕಿನ್‍ಗಳನ್ನು ಸಾರ್ವತ್ರಿಕವಾಗಿ, ಉಚಿತವಾಗಿ ಹೆಣ್ಣು ಮಕ್ಕಳಿಗೆ ಲಭ್ಯವಾಗಿಸುವ ಕಾನೂನು ಬಂದಿರುವ ಬಗ್ಗೆ `ಹಿತೈಷಿಣಿ’ಯ ಲೇಖಕಿಯೊಬ್ಬರು ಸುಂದರವಾಗಿ ವಿವರಿಸಿದ್ದಾರೆ. ಈ ಲೇಖನ ಓದಿಯೇ ಮಹಿಳೆಯ ಬದುಕಿನ ಅಂಗವೇ ಆದ ಮುಟ್ಟು, ಅದರೊಂದಿಗೇ ಅದರ ದೈಹಿಕ -ಸಾಮಾಜಿಕ – ಭಾವನಾತ್ಮಕ -ಧಾರ್ಮಿಕ ಆಯಾಮಗಳು ಇವುಗಳಿಗೂ ಮನಸ್ಸಿಗೂ ಇರುವ ಸಂಬಂಧವನ್ನು ನನ್ನ ಮನಸ್ಸು ಶೋಧಿಸಿದ್ದು! ಅದರ ಫಲವೇ ಈ ಬರೆಹ.

ನಮ್ಮ ಮಿದುಳು – ಮನಸ್ಸುಗಳಿಗೆ ‘ಅನ್ಯೋನ್ಯ’ ಸಂಬಂಧವಿದೆ. ಮಿದುಳಿನಲ್ಲಿರುವ ನರವಾಹಕಗಳು ಮನಸ್ಸಿನ ಯೋಚನೆ-ಭಾವನೆಗಳ ಮೇಲೆ, ಹಾಗೆಯೇ ಮನಸ್ಸಿನ ಯೋಚನೆ-ನೋವು-ನಲಿವುಗಳು ನರವಾಹಕಗಳ ಮೇಲೆ ಪ್ರಭಾವ ಬೀರುತ್ತವೆ; ಬದಲಿಸುತ್ತವೆ. `ಹಾರ್ಮೋನು’ ಗಳೆಂದು ನಾವು ಕರೆಯುವ ರಸದೂತಗಳೂ ಸಹ ಇದೇ ರೀತಿ ಮನಸ್ಸಿನ ಚಿಂತೆ- ಸಂತಸ- ದುಃಖ ಮೊದಲಾದ ಭಾವನೆಗಳಿಂದ ಏರುಪೇರಾಗುತ್ತವೆ. ಹಾಗಾಗಿಯೇ ಹೆಣ್ಣು ಮಕ್ಕಳು ಅಪ್ಪ -ಅಮ್ಮಂದಿರಿಂದ ದೂರವಾಗಿ, ಮೊದಲ ಬಾರಿ ಹಾಸ್ಟೆಲ್‍ಗಳಿಗೆ ಹೋದಾಗ ತಿಂಗಳುಗಟ್ಟಲೇ `ಮುಟ್ಟು’ ಬಾರದಿರುವುದು ಅಥವಾ ತಿಂಗಳು ತಿಂಗಳು ಮುಟ್ಟಾಗುತ್ತಿದ್ದರೂ, ಬೇರೆ ಯಾವ ತೊಂದರೆಗಳು ದಂಪತಿಗಳಿಬ್ಬರಲ್ಲೂ ಇರದಿದ್ದರೂ, ಮಕ್ಕಳಾಗದಿದ್ದಾಗ, ಹಾರ್ಮೋನುಗಳ ಏರುಪೇರಿಗೆ ಆತಂಕ-ಖಿನ್ನತೆಗಳೇ ಕಾರಣವೇ ಎಂದು ಪರೀಕ್ಷಿಸಬೇಕಾಗುತ್ತದೆ. ಮುಟ್ಟಿನ ಸಮಯದ ಸ್ವಚ್ಛತೆ -ಆರೋಗ್ಯಕರ ಅಭ್ಯಾಸಗಳು ಮಹಿಳೆಯ ಮುಂದಿನ ಜೀವನದ ಆರೋಗ್ಯ- ಆತ್ಮವಿಶ್ವಾಸದ ಮಟ್ಟವನ್ನು ಹೆಚ್ಚಿಸುತ್ತವೆ ಎಂಬುದು ವೈಜ್ಞಾನಿಕ ಸತ್ಯ.
ದೈಹಿಕ ಆರೋಗ್ಯಕ್ಕೆ ಸಂಬಂಧಿಸಿದ ಈ ವಿಷಯಗಳನ್ನು ಬಿಟ್ಟರೆ, ಮುಟ್ಟಿಗೆ ಸಂಬಂಧಿಸಿದ ಅಜ್ಞಾನ- ಮುಜುಗರ- ತಪ್ಪಿತಸ್ಥ ಭಾವನೆ- ನಾಚಿಕೆ- ಪಾಪಪ್ರಜ್ಞೆ, ಅಸಹ್ಯ `ಬೇಡ’ದ ಕ್ರಿಯೆ, ಅಪವಿತ್ರ ಈ ರೀತಿಯ ಭಾವನೆಗಳು ನೇರವಾಗಿ ಮನಸ್ಸಿಗೆ ಸಂಬಂಧಿಸಿದವು. ಇವು ಆರೋಗ್ಯವಂತ ಮಹಿಳೆಯಾಗಿ ಒಬ್ಬಳು ಬಾಲಕಿ ಬೆಳೆಯುವಲ್ಲಿ, ಆತ್ಮವಿಶ್ವಾಸವನ್ನು ರೂಪಿಸಿಕೊಂಡ `ವ್ಯಕ್ತಿ’ಯಾಗಿ ಬೆಳೆಯುವಲ್ಲಿ ಅಡ್ಡಿಯುಂಟು ಮಾಡುವವು.

ಶಬರಿಮಲೆಗೆ ಮುಕ್ತ ಪ್ರವೇಶ ನೀಡಲು ಕಾನೂನಿನ ಮೊರೆ ಹೋಗುವುದಾಗಲೀ, ಅಥವಾ ಮಹಿಳೆಯರು ಮುಟ್ಟಾದಾಗ ದೇವಾಲಯದ ಒಳಗೆ ಹೋಗಬೇಕೆ-ಬೇಡವೆ ಎಂಬ ಚರ್ಚೆಯಾಗಲೀ, ಉಪ್ಪಿನಕಾಯಿ ಕೆಡುವ, ಹೂ ಬಾಡುವ, ಆ ಸಮಯದಲ್ಲಿ ಪವಿತ್ರ ಕಾರ್ಯಗಳನ್ನು ಮಾಡದ, ಇತರರನ್ನು ಮುಟ್ಟದ ಪದ್ಧತಿಗಳು ಬೆಳೆದು ಬಂದ ಬಗೆಯನ್ನು ಏಕೆ -ಹೇಗೆ ಎಂದು ಚರ್ಚಿಸುವುದು ವೈಜ್ಞಾನಿಕವಾಗಿ ನಮ್ಮ ಮನಸ್ಸನ್ನು ಸಿದ್ಧಗೊಳಿಸಿಕೊಳ್ಳದೆ ಸಾಧ್ಯವೇ ಇಲ್ಲ. ಹಿರಿಯ ಸ್ತ್ರೀರೋಗ ವೈದ್ಯರೊಬ್ಬರು ಮಹಿಳೆಯರಿಗೆ ಈ ಬಗ್ಗೆ ಸಲಹೆ ನೀಡುವಾಗ ಹೀಗೆ ಹೇಳುತ್ತಿದ್ದದ್ದನ್ನು ನಾನು ಬಲ್ಲೆ, “ಪೂಜೆ ಮಾಡುವ ದಿನವೇ ಮುಟ್ಟು ಬಂದೀತೆಂದು ಹೆದರಬೇಡಿ. ಬಂದೇ ಬಿಟ್ಟರೆ, ಬೇರೆಯವರಿಗೆ ನೀವು ಹೇಳದೆ ಹೇಗೆ ಗೊತ್ತಾಗುತ್ತದೆ? ಹೋಗಿ, ಪೂಜೆಯಲ್ಲಿ ಎಂದಿನಂತೆ ಪಾಲ್ಗೊಳ್ಳಿ. ಏನೂ ಆಗುವುದಿಲ್ಲ”. ಆದರೆ ಇಲ್ಲಿ ನಮ್ಮದೇ ಮನಸ್ಸನ್ನು ಸ್ಥಿರವಾಗಿರಿಸಿಕೊಳ್ಳುವುದು, ನಮ್ಮ `ಮನಸ್ಸೂ’ ವಾತಾವರಣ, ಸಂಪ್ರದಾಯ, ಪಾಪಭೀತಿ, ಧೋರಣೆಗಳಿಂದ ಮುಕ್ತವಾಗಿ, ಧೈರ್ಯವಾಗಿರುವುದೂ ಇತರರಿಗೆ ಹೇಳದಿರುವುದರಷ್ಟೇ ಅಗತ್ಯವಷ್ಟೆ.

ಜಾಣರಾದ ಗ್ರಾಮೀಣ ಪ್ರದೇಶದ ಮಹಿಳೆಯರು ಕೆಲವೊಮ್ಮೆ ಪೂಜೆ-ಹಬ್ಬದಂತಹ ಸಂದರ್ಭಗಳಲ್ಲಿ `ಮುಟ್ಟಿ’ನ `ಅಸ್ತ್ರ’ ಬಳಸಿ ಕೆಲಸದ ಹೊರೆಯಿಂದ, ತಮಗೆ ಇಷ್ಟವಿರದೆಡೆ ಹೋಗುವುದನ್ನು ತಪ್ಪಿಸಿಕೊಳ್ಳುತ್ತಾರೆ. ಬೇರೆ ನೆಪ ಒಡ್ಡಿದರೆ `ಬರುವುದಿಲ್ಲ’ ಎಂದರೆ ಎದುರಾಗುವ ದೂಷಣೆ, `ಒಳಗಿಲ್ಲ’ ಎಂದರೆ `ಪಾಪ ಭೀತಿ’ ಯಿಂದ ಅಲ್ಲೇ ಸುಮ್ಮನಾಗುತ್ತದೆ!

ರೂಢಿಸಿಕೊಳ್ಳಬೇಕು : ಇವೆಲ್ಲಾ ಅಂಶಗಳನ್ನು ವಿಶ್ಲೇಷಿಸಿ ನೋಡಿದಾಗ ಮುಟ್ಟು ಮತ್ತು ಧಾರ್ಮಿಕತೆಗೆ ಸಂಬಂಧಿಸಿದಂತೆ ಮನಸ್ಸಿನ ಆರೋಗ್ಯದ ದೃಷ್ಟಿಯಿಂದ ನಾವು ಕೆಲವು ವಿಷಯಗಳನ್ನು ಸ್ಪಷ್ಟಪಡಿಸಿಕೊಳ್ಳಬಹುದು. ನಾವು ಬೆಳೆದು ಬಂದ ಪರಿಸರ, ನಮ್ಮ ಮನಸ್ಸು-ವ್ಯಕ್ತಿತ್ವಗಳನ್ನು ರೂಪಿಸುತ್ತದೆ. ನಮ್ಮ ಕಲಿಕೆಯ ಮಟ್ಟ ಎಷ್ಟೇ ಹೆಚ್ಚಿರಬಹುದು, ವಿಜ್ಞಾನದಲ್ಲಿ ಪಿಹೆಚ್.ಡಿ. ಯನ್ನೇ ಮಾಡಿರಬಹುದು, ಆದರೆ ಮನಸ್ಸಿನ ಧೋರಣೆಗಳು ಬದಲಾಗಬೇಕೆಂದಿಲ್ಲ. ಅದು ಪ್ರಯತ್ನಪೂರ್ವಕವಾಗಿ, ಒಳಗಿನಿಂದ ಹೊಸತಾಗಿ `ರೂಢಿ’ ಸಿಕೊಳ್ಳಬೇಕಾದ್ದು. ಅದಕ್ಕೆ ಕಾಲಾವಕಾಶ, ನಿರಂತರವಾದ ಪ್ರಯತ್ನ ಎರಡೂ ಅವಶ್ಯಕ. ಸ್ವತಃ ನಮಗೆ ವೈಜ್ಞಾನಿಕ ಸತ್ಯ ಗೊತ್ತಿದ್ದ ಮಾತ್ರಕ್ಕೆ ಮನಸ್ಸಿನ ಭಯ ನಿವಾರಣೆಯಾಗಬೇಕೆಂದಿಲ್ಲ. ಒಂದೊಮ್ಮೆ ನಿಮಗೆ `ಮುಟ್ಟು’ ಬಂದಾಗ ದೇವಸ್ಥಾನಕ್ಕೆ ಹೋಗಲಿಷ್ಟವಿಲ್ಲ ಎಂದಾದರೆ, ಅದರಿಂದ `ಪಾಪ’ ಬರಲಾರದು ಎಂಬ ಅರಿವು ನಿಮಗಿದ್ದರೂ, ಒಂದು ರೀತಿಯ ಭಯವಿದ್ದೇ ಇದೆ ಎಂದಾದರೆ ನೀವು ಹೋಗಬೇಕಾಗಿಲ್ಲ.

ಆದರೆ ಇದೇ ರೀತಿಯಲ್ಲಿ ಈ ಭಯ ತಲೆಮಾರಿನಿಂದ ತಲೆಮಾರಿಗೆ ದಾಟಬೇಕಿಲ್ಲ! ನಿಧಾನವಾಗಿ ನಮ್ಮ ಮನೆಗಳಲ್ಲಿ ಬದಲಾವಣೆ ತರಲು ಸಾಧ್ಯವಿದೆ. ಸಾರ್ವಜನಿಕ ದೇವಸ್ಥಾನಗಳ ಬಗೆಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಮೊದಲು ನಮ್ಮ ದೇವರ ಮನೆಯಲ್ಲಿ ದೀಪ ಹಚ್ಚುವಾಗ',ಜ್ಞಾನ’ದ ಬೆಳಕಿಗೆ ಯಾವ ಮೈಲಿಗೆಯಿಲ್ಲ ಎಂಬುದನ್ನು ಅರಿತು, ಗಂಡು-ಹೆಣ್ಣು ಮಕ್ಕಳಿಬ್ಬರೂ, ದೇಹ-ಮನಸ್ಸುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದನ್ನು ಕಲಿತು, ಯಾರು ಯಾವಾಗ ಬೇಕಾದರೂ (ಮುಟ್ಟಾದಾಗಲೂ) ದೀಪ ಹಚ್ಚುವುದನ್ನು ನಾವು ರೂಢಿಗೆ ತರಬೇಕು. ಈ ಮೂಲಕ ನಾವು ಹೊರಗೆ ಏನೇ ಮಾತನಾಡಿದರೂ, ಒಳಗೊಳಗೇ ಹೆದರಿ ಮತ್ತೆ ಮತ್ತೆ ಶತಮಾನಗಳ ಹಿಂದೆ ಯಾವುದೋ ಕಾರಣಕ್ಕಾಗಿ ರೂಢಿಯಾಗಿರಬಹುದಾದ ಪದ್ಧತಿಗಳನ್ನು ಅನುಸರಿಸುವ ರೀತಿಯನ್ನು ಬದಲಿಸಿಕೊಳ್ಳಬೇಕು. ಅವುಗಳ ಜೊತೆಗೆ ಮನಸ್ಸನ್ನು ಸಮರಸವಾಗಿಸಿಕೊಳ್ಳಬೇಕು. ಆಗ ಭಯ' ಕ್ರಮೇಣ ಇಲ್ಲವಾಗುತ್ತದೆ.

ಹೀಗೆ ಮತ್ತೆ ಮತ್ತೆ ಮಾಡುವ ಅವಕಾಶ ದೊರಕಿದಂತೆ, ಪ್ರತಿ ದಿನ ನಮ್ಮ ಜೀವನದಲ್ಲಿ ನಡೆಯುವ ಒಳ್ಳೆಯ-ಕೆಟ್ಟ ಘಟನೆಗಳಿಗೂ, ಮುಟ್ಟಿನ ದಿನ ದೀಪ ಹಚ್ಚಿದ್ದಕ್ಕೂ- ಅಡಿಗೆ ಮಾಡಿದ್ದಕ್ಕೂ ಸಂಬಂಧವನ್ನು ಕಲ್ಪಿಸುವುದನ್ನು ಮನಸ್ಸು ಬಿಡುತ್ತದೆ. ನಮ್ಮ ಅಜ್ಜಿಯರು ತಿಂಗಳಿಗೆ ಮೂರು ದಿನ `ಹೊರಗೆ’ ಕುಳಿತುಕೊಳ್ಳುತ್ತಿದ್ದುದನ್ನು ನಾವು ಬಿಟ್ಟಿರುವಂತೆ, ನಮ್ಮ ಮೊಮ್ಮಕ್ಕಳು ಮುಟ್ಟಾದಾಗ ಪೂಜೆ ಮಾಡುವುದೋ ಬೇಡವೋ ಎಂಬುದರ ಬಗ್ಗೆ ಗಮನಿಸದಿರುವುದನ್ನು ಕಲಿಯುವ ಸಾಧ್ಯತೆ ಹೆಚ್ಚುತ್ತದೆ.

ಈ ವಿಷಯಗಳ್ಯಾವುವೂ ಎಲ್ಲರೆದುರು ಹೇಳಿ, ಘೋಷಿಸಿ, ಸುದ್ದಿ ಮಾಡಿಯೇ ನಡೆಯಬೇಕೆಂದಿಲ್ಲ. ಯಶಸ್ವಿಯಾಗಿ ತಾವೂ ಆರೋಗ್ಯಕರವಾಗಿ ಧಾರ್ಮಿಕತೆಯನ್ನೂ ಮೈಗೂಡಿಸಿಕೊಂಡು, ದೇವರನ್ನು ನಂಬಿಯೂ, ಈ ಹೊಸ' ರೂಢಿಗಳನ್ನು ತಮ್ಮದಾಗಿಸಿಕೊಂಡಿರುವಹಿರಿಯ’ ಮಹಿಳೆಯರನ್ನು ನಾನು ಬಲ್ಲೆ. ಅವರೆಲ್ಲರೂ ತಮ್ಮ' ದೇವರನ್ನೂ ತಮ್ಮಂತೆ ಬದಲಾಯಿಸಿದ್ದಾರೆ!! ತಮ್ಮ ಜೀವನದಲ್ಲಿ ಬರುವ ಸುಖ -ದುಃಖಗಳನ್ನು ಜೀವನದ ಭಾಗವಾಗಿ ಸ್ವೀಕರಿಸಿದ್ದಾರೆ! ಹಾಗಾಗಿ ಇದು ನಮಗೆಲ್ಲರಿಗೂ `ಒಳಗಿ’ನಿಂದ ಬದಲಾಗುವ ಮಾದರಿ.

ಹೀಗೆ ಮನಸ್ಸಿನ ಧೋರಣೆ ಕ್ರಮೇಣ ಬದಲಾಗಲು ಸಾಧ್ಯವಾದರೆ ಮಹಿಳೆಯ ದೈಹಿಕ-ಆರೋಗ್ಯಕ್ಕೆ -ಆತ್ಮವಿಶ್ವಾಸಕ್ಕೆ ಬಹು ದೊಡ್ಡ ಲಾಭ. ಪ್ರವಾಹ ಕೃತಿ' ಯಂತಹ ಚಳುವಳಿಗಳು ಆಗ ಯಶಸ್ಸನ್ನು ಕಾಣುತ್ತವೆ. ನೊಯಿಡಾದ ಅಮಿಟಿ ಅಂತರರಾಷ್ಟ್ರೀಯ ಶಾಲೆಯ ಮಕ್ಕಳು ರೂಪಿಸಿದ ಯೋಜನೆ' ಇದು. ಆರೋಗ್ಯ, ಸ್ವಚ್ಛತೆ, ಅರಿವು ಮತ್ತು ಸಕಾರಾತ್ಮಕ ಚಿಂತನೆಗಳೆಂಬ ನಾಲ್ಕು ಮೂಲಭೂತ ಸ್ತಂಭಗಳ ಮೇಲೆ ಈ ಯೋಜನೆ ನಿಂತಿದೆ. ಪಠ್ಯ ಪುಸ್ತಕದಿಂದ ಜೈವಿಕ ಪ್ರಕ್ರಿಯೆಯನ್ನಷ್ಟೇ ವಿವರಿಸುವ ಬದಲು, ಗಂಡು-ಹೆಣ್ಣು ಮಕ್ಕಳಿಬ್ಬರೂ ಒಟ್ಟಿಗೆ, ಋತುಚಕ್ರವನ್ನು ಸಂಕೇತಿಸುವ 28 ಮಣಿಗಳಂತೆ ಒಂದು ಸರಪಣಿ - ಬ್ರೇಸ್‍ಲೆಟ್‍ನ್ನು ಪೆÇೀಣಿಸುವ, ಆ ದಿನಗಳ ಬಗ್ಗೆ ಚರ್ಚಿಸುವ ಚಟುವಟಿಕೆ, ಮುಟ್ಟಿನ ಸಮಯದಲ್ಲಿ ಬರುವ ಹೊಟ್ಟೆ ನೋವಿಗೆ ಸುಲಭ ಮನೆ ಮದ್ದುಗಳು, ಮನಸ್ಸನ್ನು ನೋವಿನಿಂದ ಬೇರೆಡೆಗೆ ತಿರುಗಿಸುವ ಉಪಾಯ, ಗಂಡು ಮಕ್ಕಳಿಗೂ ಅರಿವು ಇವೆಲ್ಲ ಈ ಯೋಜನೆಯ ಅಂಶಗಳು. ಬಾಲಕಿಯರಿಗಾಗಿ ಪೀರಿಯಡ್ ಕಿಟ್‍ಗಳು, ಅದರಲ್ಲಿ ನ್ಯಾಪಕಿನ್ ಜೊತೆಗೆ ಪೇಪರ್ ಸೋಪ್, ಒಂದು ಚಾಕಲೇಟ್ (ಮೂಡ್ ಲಿಫ್ಟ್’ ಮಾಡಲು), ಶುಂಠಿಯ ಟೀ ಸ್ಯಾಚೆಟ್ ಇವೆಲ್ಲ ಮುಟ್ಟಿನ ಬಗ್ಗೆ ಮುಚ್ಚಿಡದೆ, ಮಾತನಾಡಲು, ಆರೋಗ್ಯ ಉಳಿಸಿಕೊಳ್ಳಲು, ಯಾರಿಗೂ ಕಾಣಬಾರದೆಂದು ಕಮೋಡ್ ಒಳಗೆ ಪ್ಯಾಡ್ `ಫ್ಲಷ್' ಮಾಡಿ, ಅದು ಅಡ್ಡಗಟ್ಟುವಂತೆ ಮಾಡುವುದನ್ನು ತಡೆಯಲು ಸಹಾಯಕವಾದವು ಎಂಬುದು ಗಮನಾರ್ಹ.

ಹೀಗೆ ಒಳಗಿನಿಂದ ಸಬಲರಾಗಿಸುವ ಪ್ರಯತ್ನಗಳು ನಡೆದಾಗ ಬಾಲಕಿಯರು ದೈಹಿಕವಾಗಿಯೂಸಬಲೆ’ಯರೇ ಆಗುತ್ತಾರೆ. ಶಾಲೆಗಳಲ್ಲಿ, ಆಫೀಸುಗಳಲ್ಲಿ ಮುಟ್ಟು - ಹೊಟ್ಟೆ ನೋವು' ಎಂದು ಶಾಲೆ-ಕೆಲಸ ತಪ್ಪಿಸುವುದು ಸಹಜವಾಗಿ ಕಡಿಮೆಯಾಗುತ್ತದೆ. ಮುಟ್ಟು `ಸಹಜ’ವಾಗುತ್ತದೆ!

  • ಡಾ. ಕೆ.ಎಸ್. ಪವಿತ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *