ಹೆಣ್ಣು ಹೆಜ್ಜೆ / ಸರಳುಗಳ ಹಿಂದೆ ಗೋಡೆಗಳ ನಡುವೆ – ಡಾ. ಕೆ.ಎಸ್. ಪವಿತ್ರ

ಮಹಿಳಾ ಅಪರಾಧಿಗಳ ಜೀವನ ಕಥೆಗಳನ್ನು ಅವಲೋಕಿಸಿದರೆ ಅವುಗಳಲ್ಲಿ ಕಾಣುವ ಕಾರಣಗಳು – ಅಪರಾಧಗಳು ಹೆಚ್ಚಿನ ಬಾರಿ ನಮ್ಮಲ್ಲಿ ಗೊಂದಲವನ್ನೇ ಉಂಟು ಮಾಡುತ್ತವೆ. ಜಗತ್ತಿನ ಎಲ್ಲ ರಾಷ್ಟ್ರಗಳ ಸೆರೆಮನೆಗಳಲ್ಲಿ ಮಹಿಳಾ ಕೈದಿಗಳ ಸಂಖ್ಯೆ ಹೆಚ್ಚಿದೆ. ಈಗಾಗಲೇ ಜಗತ್ತಿನ ಹನ್ನೊಂದು ರಾಷ್ಟ್ರಗಳಲ್ಲಿ ಪ್ರತಿ ಹತ್ತು ಕೈದಿಗಳಲ್ಲಿ ಒಬ್ಬರು ಮಹಿಳೆ. ಮಹಿಳಾ ಅಪರಾಧಿಗಳು ಸಾಧಾರಣವಾಗಿ ಸಮಾಜದ ಕೆಳಸ್ತರಗಳಿಂದ ಬಂದಿರುವುದು ಹೆಚ್ಚು. ನಿರುದ್ಯೋಗ, ಶಿಕ್ಷಣದ ಕೊರತೆ, ಅವಲಂಬಿತ ಮಕ್ಕಳನ್ನು ಹೊಂದಿರುವುದು ಈ ಮಹಿಳೆಯರಲ್ಲಿ ಕಂಡುಬರುತ್ತದೆ. ಸೆರೆಮನೆಯ ಒಳಗೂ ಮಹಿಳೆ ಬೇರೆ ಸ್ಥಳಗಳಂತೆಯೇ ಸುರಕ್ಷಿತಳಲ್ಲ ಎಂಬುದನ್ನು ಅಧ್ಯಯನಗಳು ಸ್ಪಷ್ಟವಾಗಿ ತೋರಿಸಿವೆ. ಕಾನೂನು ನೆರವು, ಆಪ್ತ ಸಲಹೆ ಎಲ್ಲವೂ ಸೆರೆಮನೆಯ ಮಹಿಳೆಯರಿಗೆ ಅವರ ಹಕ್ಕಾಗಿ ದೊರೆಯಬೇಕು.

ಸಾಂಪ್ರದಾಯಿಕವಾಗಿ ಮಹಿಳೆಯರ ಬಗೆಗೆ ನಮ್ಮ ಮನಸ್ಸುಗಳಲ್ಲಿ ನಿಂತಿರುವ ಕಲ್ಪನೆ ಏನು? ಕುಟುಂಬ-ಸಮಾಜಗಳ ಆಧಾರ, ಕರುಣಾಮಯಿ, ಅಬಲೆ ಇತ್ಯಾದಿ ಇತ್ಯಾದಿ. ಈ ಕಲ್ಪನೆಗಳಿಗೆ ಗೊಂದಲ ಕಾಡಲಾರಂಭಿಸುವುದು ಮಹಿಳೆಯರು ಅಪರಾಧಗಳಲ್ಲಿ ಭಾಗಿಯಾಗಿ, ಸೆರೆಮನೆಗಳನ್ನು ಸೇರಿದಾಗ. ಕಳೆದ ಹತ್ತು ವರ್ಷಗಳಲ್ಲಿ ಬಹುತೇಕ ಜಗತ್ತಿನ ಎಲ್ಲ ರಾಷ್ಟ್ರಗಳ ಸೆರೆಮನೆಗಳಲ್ಲಿ ಮಹಿಳಾ ಕೈದಿಗಳ ಸಂಖ್ಯೆ ಹೆಚ್ಚಿದೆ. ಈಗಾಗಲೇ ಜಗತ್ತಿನ ಹನ್ನೊಂದು ರಾಷ್ಟ್ರಗಳಲ್ಲಿ ಪ್ರತಿ ಹತ್ತು ಕೈದಿಗಳಲ್ಲಿ ಒಬ್ಬರು ಮಹಿಳೆ.

ಆರ್ಥಿಕತೆಗೆ ಸಂಬಂಧಿಸಿದಂತೆ ಮಹಿಳೆಯರು ಹಿಂದುಳಿದವರಷ್ಟೆ. ಮಹಿಳೆಯರಲ್ಲಿ ಅಪರಾಧದ ಹೆಚ್ಚುವಿಕೆಗೂ, ಸೆರೆಮನೆ ಸೇರುವುದಕ್ಕೂ, ಬಡತನಕ್ಕೂ ಬಹಳ ಹತ್ತಿರವಾದ ನಂಟಿದೆ. ಚಿಕ್ಕ ಅಪರಾಧಗಳಿಗೆ ದಂಡ ತೆರುವುದಕ್ಕಾಗಲೀ, ದೊಡ್ಡ ಅಪರಾಧಗಳಿಗೆ ಜಾಮೀನು ಪಡೆಯುವುದಕ್ಕಾಗಲೀ, ಮಹಿಳೆಯರ ಬಳಿ ಹಣವಿರುವ ಸಾಧ್ಯತೆ ಕಡಿಮೆ. ಮಹಿಳಾ ಅಪರಾಧಿಗಳು ಸಾಧಾರಣವಾಗಿ ಸಮಾಜದ ಕೆಳಸ್ತರಗಳಿಂದ ಬಂದಿರುವುದು ಹೆಚ್ಚು. ನಿರುದ್ಯೋಗ, ಶಿಕ್ಷಣದ ಕೊರತೆ, ಅವಲಂಬಿತ ಮಕ್ಕಳನ್ನು ಹೊಂದಿರುವುದು ಈ ಮಹಿಳೆಯರಲ್ಲಿ ಕಂಡುಬರುತ್ತದೆ.

ಒಬ್ಬ ಪುರುಷ ಅಪರಾಧಿಯಾಗಿ ಜೈಲು ಸೇರುವುದಕ್ಕೂ, ಒಬ್ಬ ಮಹಿಳೆ ಅಪರಾಧ ಮಾಡಿ ಜೈಲು ಸೇರುವುದಕ್ಕೂ ವ್ಯತ್ಯಾಸವಿದೆ. ಎರಡು ಮುಖ್ಯ ಸಮಸ್ಯೆಗಳು ಇಲ್ಲಿ ಎದುರಾಗುತ್ತವೆ. ಮಹಿಳಾ ಕೈದಿಗಳ ಪ್ರತ್ಯೇಕ ವಸತಿ, ಅವರ ಆರೋಗ್ಯದ ಸಮಸ್ಯೆಗಳು, ಕುಟುಂಬದೊಂದಿಗೆ ಸಂಪರ್ಕ ತಪ್ಪುವುದು ಇವು ಮೊದಲನೆಯದು. ಎರಡನೆಯದೆಂದರೆ ಅಪರಾಧಿಯಾಗಿ ಕೈದಿಯಾದ ತಾಯಿಯನ್ನು ಅವಲಂಬಿಸಿರುವ ಆಕೆಯ ಮಕ್ಕಳ ಬೆಳವಣಿಗೆ. ತಾಯಿಯೊಂದಿಗೆ ಆರು ವರ್ಷ ವಯಸ್ಸಿನವರೆಗೆ ಮಕ್ಕಳು ಇರಬಹುದೆಂಬ ಅವಕಾಶವನ್ನು ನ್ಯಾಯಾಂಗ ನೀಡಿರಬಹುದಾದರೂ, ಅಂತಹ ಮಕ್ಕಳ ವಿದ್ಯಾಭ್ಯಾಸ ಮುಂತಾದ ಅಗತ್ಯಗಳಿಗೆ ಸೌಲಭ್ಯಗಳು ಹೆಚ್ಚಿನ ಸೆರೆಮನೆಗಳಲ್ಲಿ ಇಲ್ಲ. ಸೆರೆಮನೆಯ ಹೊರಗೆ ಅಂತಹ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯುತ ಹಿರಿಯರು ಇರಬಹುದಾದರೂ, ಪ್ರಾಯೋಗಿಕವಾಗಿ ತಾಯಿಯನ್ನು ಮಗು ಆಗಾಗ್ಗೆ ಭೇಟಿ ಮಾಡುವ ಪ್ರಕ್ರಿಯೆಯೇ ಸರಳವಲ್ಲ. ಸಾಮಾಜಿಕ ಕಳಂಕ, ಬೆಂಬಲದ ಕೊರತೆಗಳ ನಡುವೆ ಬೆಳೆಯುವ ಈ ಮಕ್ಕಳು ಸಹಜವಾಗಿ ಹಿಂಸೆ -ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗುವ ಸಾಧ್ಯತೆ ಮತ್ತಷ್ಟು ಹೆಚ್ಚುತ್ತದೆ.

ಒಳಗಿನ ಜಗತ್ತು

ಜಗತ್ತಿನಾದ್ಯಂತ, ಸೆರೆಮನೆಯ ಒಳಗೆ ಮಹಿಳೆ ಬೇರೆ ಸ್ಥಳಗಳಂತೆಯೇ ಸುರಕ್ಷಿತಳಲ್ಲ ಎಂಬುದನ್ನು ಅಧ್ಯಯನಗಳು ಸ್ಪಷ್ಟವಾಗಿ ತೋರಿಸಿವೆ. ಪುರುಷ ಅಧಿಕಾರಿಗಳಿಂದ ಲೈಂಗಿಕ ದೌರ್ಜನ್ಯಗಳು, ಮಹಿಳಾ ಅಧಿಕಾರಿಗಳಿಂದ ತಾತ್ಸಾರದ ವರ್ತನೆ ಇವು ಸಾಮಾನ್ಯ. ದಕ್ಷತೆ, ಮಾನವೀಯತೆಯಿಂದ ಕೈದಿಗಳನ್ನು, ವಿಶೇಷವಾಗಿ ಮಹಿಳಾ ಕೈದಿಗಳನ್ನು ನೋಡುವ ಅಧಿಕಾರಿಗಳಿದ್ದಾರೆ, ಆದರೆ ಅವರ ಸಂಖ್ಯೆ ಕಡಿಮೆ.

ಮಹಿಳಾ ಅಪರಾಧಿಗಳ ಜೀವನ ಕಥೆಗಳನ್ನು ಅವಲೋಕಿಸಿದರೆ ಅವುಗಳಲ್ಲಿ ಕಾಣುವ ಕಾರಣಗಳು – ಅಪರಾಧಗಳು ಹೆಚ್ಚಿನ ಬಾರಿ ನಮ್ಮಲ್ಲಿ ಗೊಂದಲವನ್ನೇ ಉಂಟು ಮಾಡುತ್ತವೆ. ಮಗ-ಸೊಸೆಯರ ನಡುವಣ ಜಗಳದಲ್ಲಿ, ನೇಣು ಹಾಕಿಕೊಂಡ ಸೊಸೆ, ಅದು ವರದಕ್ಷಿಣೆ ಸಾವು' ಎಂಬ ಕಾರಣದಿಂದ ಸೆರೆಮನೆ ಸೇರಿದ `ಅತ್ತೆ’, ‘ನಾದಿನಿ’, ಹೆಣ್ಣು ಮಗು' ಎಂಬ ಕಾರಣಕ್ಕೆ ಮಗುವನ್ನು ಕೊಂದ ತಾಯಿ,ಕೊಲೆ’ಯ ಅಪರಾಧಕ್ಕಾಗಿ ಜೈಲು ಸೇರಿದ ಮಹಿಳೆ, ಆರ್ಥಿಕ ಕೊರತೆಯಿಂದ ಅಸ್ಸಾಂನಿಂದ ಬಂದ ದೆಹಲಿಯ ರೈಲು ನಿಲ್ದಾಣದಲ್ಲಿ ದುಡ್ಡು ದುಡಿದು ಜೀವನ ಸಾಗಿಸಲು ಗಂಡನೊಂದಿಗೆ ಮಾದಕ ವಸ್ತು' ಮಾರುತ್ತಾ ಸಿಕ್ಕಿ ಬಿದ್ದು ಕಾರಾಗೃಹ ಸೇರಿದ ಯುವತಿ, ಹೀಗೆ ಇವ್ಯಾವುವೂ ``ಇವರು ಕೆಟ್ಟವರು, ಇವರದ್ದು ಅಪರಾಧ, ಇದಕ್ಕೆ ಜೈಲುಶಿಕ್ಷೆಯೇ ಸರಿ'' ಎನ್ನುವ ನೇರ ಸಂಗತಿಗಳಲ್ಲ. ಇಂತಹ ಸಂದರ್ಭದಲ್ಲಿಯೇ ನೆಲ್ಸನ್ ಮಂಡೇಲಾ ಒಂದೆಡೆ ಹೇಳಿರುವ ಮಾತುಗಳು ನೆನಪಾಗುತ್ತವೆ- ``ಒಂದು ರಾಷ್ಟ್ರದ ಸ್ಥಿತಿಗತಿಯ ಬಗ್ಗೆ ನಿಜವಾಗಿ ತಿಳಿಯಬೇಕೆಂದರೆ ಅದರ ಸೆರೆಮನೆಗಳಿಗೆ ನಾವು ಹೋಗಬೇಕು. ತನ್ನ ಮೇಲುಸ್ತರದ ನಾಗರಿಕರನ್ನು ದೇಶ ಹೇಗೆ ನೋಡಿಕೊಳ್ಳುತ್ತದೆ ಎಂಬುದರ ಬದಲು ತನ್ನ ಅತ್ಯಂತ ಕೆಳಸ್ತರದ ನಾಗರಿಕರನ್ನು ದೇಶ ಹೇಗೆ ನೋಡಿಕೊಳ್ಳುತ್ತದೆ ಎಂಬ ಅಂಶದ ಮೇಲೆ ಆ ರಾಷ್ಟ್ರದ ಪ್ರಗತಿ ನಿರ್ಣಯಿಸಲ್ಪಡಬೇಕು''.

ಸೆರೆಮನೆಯ ಒಳಗಿರುವ ಬಹಳಷ್ಟು ಮಹಿಳಾ ಕೈದಿಗಳನ್ನು ಕಾಡುವುದು ಅವರ ಕುಟುಂಬದ, ವಿಶೇಷವಾಗಿಮಕ್ಕಳ’ ಚಿಂತೆ ಎಂಬ ಮಾತು ನಮಗೆ ಅಚ್ಚರಿ ತರಬಹುದು. ಆದರೆ ಇದು ಅಕ್ಷರಶಃ ಸತ್ಯ. ಬಹಳಷ್ಟು ಮಹಿಳಾ ಕೈದಿಗಳಿಗೆ ಮಹಿಳಾ ಆಪ್ತಸಹಾಯಕರ ಅವಶ್ಯಕತೆಯಿರುತ್ತದೆ. ಸಮಾಜದಲ್ಲಿ ಸ್ವತಂತ್ರ'ವಾಗಿರುವ ಮಹಿಳೆಯರಿಗೇ ಇದು ದುರ್ಲಭವಾಗಿರುವಾಗ ಇನ್ನು ಮಹಿಳಾ ಕೈದಿಗಳಿಗೆಆಪ್ತ ಸಲಹೆ’ ಸಿಕ್ಕೀತೆಂದು ನಾವು ನಿರೀಕ್ಷಿಸುವುದಾದರೂ ಹೇಗೆ? ಮಹಿಳೆಯರು ಯಾವಾಗಲಾದರೊಮ್ಮೆ ಇಂತಹ ಆಪ್ತಸಲಹೆ ಸಿಕ್ಕಾಗ ಮೊತ್ತ ಮೊದಲು ಕೇಳುವ ಪ್ರಶ್ನೆ `ನನ್ನ ಮಕ್ಕಳ ಕಥೆ ಏನು? ನನ್ನ ಜೀವನದ ಅತಿದೊಡ್ಡ ಚಿಂತೆ ಅದೇ!'' ಎಷ್ಟೋ ತಾಯಂದಿರ ಆರು ವರ್ಷಗಳ ವಯಸ್ಸಿನ ನಂತರ, ಮಗುವನ್ನು ತಮ್ಮಿಂದ ಅಗಲಿಸಿ ಸೆರೆಮನೆಯ ಹೊರಗೆ ಕಳಿಸುವಾಗ ಅವರನ್ನು ಸೆರೆಮನೆಯ ಹೊರಗೆ ಮಗುವಿನ ಆರೈಕೆಯ ಅನಿಶ್ಚಿತತೆ ಅವರನ್ನು ಬಲವಾಗಿ ಕಾಡುತ್ತದೆ.

ಉದಾಹರಣೆಗೆ 37 ವರ್ಷ ವಯಸ್ಸಿನ ಮಹಿಳೆಯೊಬ್ಬಳು ಐದು ವರ್ಷಗಳಿಂದ ಜೈಲಿನಲ್ಲಿ ತನ್ನ ಪತಿಯ ಸಾವಿಗೆ ಸೋದರಳಿಯನೊಂದಿಗೆ ಜೊತೆಗೂಡಿದಳೆಂಬ ಕಾರಣಕ್ಕೆ ಸೇರಿದ್ದಳು. ಅವಳ ವಿರುದ್ಧ ಯಾವ ಸಾಕ್ಷ್ಯವೂ ಸಿಕ್ಕಿರಲಿಲ್ಲ. ಸಾಕಷ್ಟು ದೈಹಿಕ ಹಿಂಸೆಯ ನಂತರ ಆಕೆ ತಪೆÇ್ಪಪ್ಪಿಗೆಗೆ ಸಹಿ ಮಾಡಿದ್ದೇ ಆಕೆ ಜೈಲು ಸೇರಲು ಮುಖ್ಯ ಕಾರಣ. ಇಂಡಿಯಾ ವಿಷನ್ ಫೌಂಡೇಷನ್ (Iಗಿಈ) ಎಂಬ ನಿವೃತ್ತ ಐ.ಪಿ.ಎಸ್. ಅಧಿಕಾರಿ ಕಿರಣ್ ಬೇಡಿ ಅವರ ಸ್ವಯಂಸೇವಾ ಸಂಸ್ಥೆ ಈ ಮಹಿಳೆಗೆ ಕಾನೂನಿನ ನೆರವನ್ನು ಒದಗಿಸಿಕೊಡುವವರೆಗೆ ಆಕೆಗೆ ತನಗೆ ಕಾನೂನಿನ ನೆರವು ಪಡೆದುಕೊಳ್ಳುವ ಹಕ್ಕು ಇದೆ ಎಂಬ ಸಂಗತಿಯ ಅರಿವೇ ಇರಲಿಲ್ಲ. ಇಂಥ ಸಂದರ್ಭದಲ್ಲಿಯೂ ಆ ಮಹಿಳೆ ಇದ್ದ ಚಿಂತೆ ತಾನು ಜೈಲಿನಲ್ಲಿರುವುದಾಗಲೀ, ತನ್ನ ಮೇಲೆ ಸುಳ್ಳು ಆರೋಪ ಹೊರಿಸಿರುವುದು ಅಪಮಾನ, ಅನ್ಯಾಯವೆಂದಾಗಲೀ ಅಲ್ಲ ಎಂಬುದು ಗಮನಾರ್ಹ. ಅವಳ ಚಿಂತೆ, ಬಿಡುಗಡೆಯಾಗುವ ಪ್ರಮುಖ ಉದ್ದೇಶ ವಯಸ್ಸಿಗೆ ಬಂದ ಆಕೆಯ ಹೆಣ್ಣು ಮಕ್ಕಳು ಅವರ ಸೋದರಮಾವನೊಂದಿಗೆ ಸುರಕ್ಷಿತವಾಗಿರುವುದಿಲ್ಲ ಎಂಬ ಅಂಶ!

ರಾಜಸ್ಥಾನದಲ್ಲಿ ಕಳೆದ ಎರಡು ದಶಕಗಳಿಂದ ಈ ಬಗ್ಗೆ ಅಧ್ಯಯನ -ಕೆಲಸ ಮಾಡುತ್ತಿರುವ ವಕೀಲೆ ರಂಜನಾ ಮರ್ತಿಯಾರ ಪ್ರಕಾರ ಅವರಲ್ಲಿ ಬರುವ ಮಹಿಳಾ ಕಕ್ಷಿದಾರರಲ್ಲಿ 99% ರಷ್ಟು ಜನ ಆರ್ಥಿಕವಾಗಿ ದುರ್ಬಲರು, ತಮ್ಮ ಮೇಲೆ ಇರುವ ಆರೋಪಗಳ ಬಗ್ಗೆ ವಿವರ -ಹಿಂದು-ಮುಂದು ತಿಳಿಯದೆ, ಗಾಬರಿಯಲ್ಲಿ ಓಡಿ ಬಂದಿರುವವರು. ಸರ್ಕಾರವೇ ಅವರ ಪರವಾಗಿ ನೇಮಿಸಿರುವ ಕಾನೂನು ಸಲಹೆಗಾರರು / ವಕೀಲರು ಹೆಚ್ಚಿನ ಬಾರಿ ಈ ಮಹಿಳೆಯರ ಪರವಾಗಿ ಬಲವಾದ ವಾದ ಮಂಡಿಸಲು ಶ್ರಮ ಪಡುವುದಾಗಲಿ, ಉತ್ಸಾಹ ತೋರಿಸುವುದಾಗಲಿ ಮಾಡುವುದಿಲ್ಲ. ಪರಿಣಾಮ, ತಮ್ಮ ತಪ್ಪಿರದಿದ್ದರೂ ವರುಷಗಟ್ಟಲೆ ಸೆರೆಮನೆಗಳಲ್ಲಿ ಈ ಮಹಿಳೆಯರು ಸೇರಿಬಿಡುವ ಸಾಧ್ಯತೆ ಹೆಚ್ಚು. ಕುಟುಂಬಗಳೂ ಈ ಮಹಿಳೆಯರೊಡನೆ ತನ್ನ ಕೊಂಡಿಗಳನ್ನು ಕಳಚಿಕೊಂಡು ಬಿಡುತ್ತದೆ. ಭೇಟಿ ಮಾಡುವುದಾಗಲೀ,ಕರೆ ಮಾಡುವುದಾಗಲೀ ಇಲ್ಲವೇ ಇಲ್ಲ!

ಸುಧಾರಣೆಯ ದಾರಿ

`ಸೆರೆಮನೆ’ಯ ಉದ್ದೇಶ ಕೇವಲ ಶಿಕ್ಷೆ ನೀಡುವುದಷ್ಟೆ ಅಲ್ಲವಷ್ಟೆ. ಕೈದಿಯಾದವರ ಮನಃ ಪರಿವರ್ತನೆಯೂ, ಉದ್ಯೋಗ ತರಬೇತಿಯ ಯೋಜನೆಗಳೂ ಇಲ್ಲಿ ನಡೆಯಬೇಕು. ಭಾರತದ 1,401 ಸೆರೆಮನೆಗಳಲ್ಲಿ ಲಭ್ಯವಿರುವ ಪುನರ್ವಸತಿ' ಯ ಸಿಬ್ಬಂದಿ (ಸೆರೆಮನೆಯಲ್ಲಿ ಕಾರ್ಯನಿರ್ವಹಿಸುವ ಮನೋವಿಜ್ಞಾನಿಗಳು, ಮನೋರೋಗ ತಜ್ಞರು, ಸಾಮಾಜಿಕ ಕಾರ್ಯಕರ್ತರು, ಕ್ಷೇಮ ಅಧಿಕಾರಿಗಳು ಎಲ್ಲರನ್ನೂ ಸೇರಿಸಿ ಕರೆಯುವ ಪದ ಅoಡಿಡಿeಛಿಣioಟಿಚಿಟ Sಣಚಿಜಿಜಿ) ಯ ಒಟ್ಟು ಸಂಖ್ಯೆ ಇಡೀ ದೇಶಕ್ಕೆ ಕೇವಲ 597!! ಅಂದರೆ ಒಂದು ಜೈಲಿಗೆ ಒಬ್ಬರೂ ಅಲ್ಲ!! ಲಭ್ಯವಿರುವ ಸಿಬ್ಬಂದಿ ಸಹಜವಾಗಿ ಸೆರೆಮನೆಗಳಿಂದ ಹೊರಬರುವ ಮಹಿಳಾ ಕೈದಿಗಳು ಜೀವನ ಕೌಶಲಗಳನ್ನಾಗಲೀ, ಉದ್ಯೋಗ ಕೌಶಲಗಳನ್ನಾಗಲೀ ಕಲಿತಿರುವ ಸಾಧ್ಯತೆ ಕಡಿಮೆ.

ಸಾಮಾಜಿಕ ಅಧ್ಯಯನಗಳಲ್ಲಿ ಅನುಭವಾತ್ಮಕ ಹೇಳಿಕೆಗಳು ತಮ್ಮ ಬಿಡುಗಡೆಯ ಹಿಂದಿನ ದಿನ ಬಹಳಷ್ಟು ಮಹಿಳೆಯರು ಭವಿಷ್ಯದಲ್ಲಿ ತಾವೇನು ಮಾಡುತ್ತೇವೆಂಬ ಚಿಂತೆಯಿಂದ ಬಿಕ್ಕಿ ಬಿಕ್ಕಿ ಅಳುವುದನ್ನು ದಾಖಲಿಸಿವೆ. ಸಾಮಾಜಿಕ ಸಂಶೋಧನೆಗಳು ತೋರಿಸಿರುವ ಮತ್ತೊಂದು ಮುಖ್ಯ ಸಂಗತಿಯೆಂದರೆ, ಪುರುಷನೊಬ್ಬ ಸೆರೆಮನೆಯಲ್ಲಿದ್ದಾಗ, ಆತನ ಹೆಂಡತಿ / ತಾಯಂದಿರು ಹೇಗಾದರೂ ಮಾಡಿ ಜಾಮೀನಿಗಾಗಿ ಹಣ ಒಟ್ಟುಗೂಡಿಸುತ್ತಾರೆ. ಅದೇ ಮಹಿಳೆಯೊಬ್ಬಳ ವಿಷಯದಲ್ಲಿ ಮತ್ತೊಬ್ಬ ಪತ್ನಿ' ಯನ್ನು ಮಕ್ಕಳಿಗೆ ಮತ್ತೊಬ್ಬ `ತಾಯಿ' ಯನ್ನು ತರುವುದೇ ಆದ್ಯತೆ !

ಸುಧಾರಣೆಯ ದಾರಿ ಉದ್ದವಿದ್ದರೂ ಕ್ರಮಿಸಲು ಅಸಾಧ್ಯವಾದದ್ದೇನೂ ಅಲ್ಲ. ಸಮಾಜ- ನಮ್ಮ ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಳ್ಳಬೇಕು. ಬೇರೆ ಎಲ್ಲೆಡೆಮಾನವ ಹಕ್ಕು’ ಗಳ ಬಗೆಗೆ ಮಾತನಾಡುವ ನಾವು, ಮಹಿಳಾ ಕೈದಿಗಳ ವಿಷಯದಲ್ಲಿಯೂ ಅದೇ ಮಾನವೀಯತೆ ತೋರಿಸಬೇಕು. ಪುರುಷ ಕೈದಿಗಳ ಮಧ್ಯೆ ಒಂದು ಚಿಕ್ಕ ಸೆಲ್‍ನಲ್ಲಿ, ಸೌಲಭ್ಯಗಳ ಕೊರತೆಯಿಂದ ಕೊಳೆಯುವಂತೆ ಮಾಡುವ ಬದಲು, ಪ್ರತ್ಯೇಕ ಮಹಿಳಾ ಸೆರೆಮನೆಗಳನ್ನು ನಿರ್ಮಿಸಬೇಕು. ಕಾನೂನು ನೆರವು, ಆಪ್ತ ಸಲಹೆ, ಮಕ್ಕಳ ಪಾಲನೆಯ ಬಗ್ಗೆ ಸಂವಹನ, ಮನಸ್ಸು ಸ್ವಚ್ಛವಾಗುವ ವಾತಾವರಣ ಎಲ್ಲ ಮಹಿಳೆಯರಿಗೆ ಹೇಗೆ ಅವರ ಹಕ್ಕಾಗಿ ದೊರೆಯಬೇಕು, ಹಾಗೆಯೇ `ಮಾನವ ಹಕ್ಕಾ’ಗಿ ದೊರೆಯಬೇಕು.

ಡಾ. ಕೆ.ಎಸ್. ಪವಿತ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *