ಹೆಣ್ಣು ಹೆಜ್ಜೆ / ವಿಜ್ಞಾನವೂ, ಮಹಿಳೆಯೂ!- ಡಾ. ಕೆ.ಎಸ್. ಪವಿತ್ರ

ಇಬ್ಬರು ಮಹಿಳಾ ವಿಜ್ಞಾನಿಗಳಿಗೆ ನೊಬೆಲ್ ಬಂದಿರುವುದು, ಮಹಿಳೆಯರ ಕೆಲಸ ಪುರುಷರ ಕೆಲಸದಷ್ಟೇ ಮನ್ನಣೆ ಗಳಿಸಲು ಸಾಧ್ಯವಿದೆ ಎಂಬುದನ್ನು ಸೂಚಿಸುತ್ತದೆ. ಮಹಿಳಾ ವಿಜ್ಞಾನಿಗಳ ಈ ಗೆಲುವು, ಮನ್ನಣೆ, ಸುದ್ದಿಯಾಗುವಷ್ಟು ವಿಜ್ಞಾನದಲ್ಲಿ ಮಹಿಳೆಯರನ್ನು ಅಲಕ್ಷಿಸಲಾಗಿದೆಯೇ? `ಹೌದು’ ಎನ್ನುತ್ತವೆ ಅಧ್ಯಯನಗಳು. ಜಗತ್ತಿನ `ಮುಂದುವರಿದ’ ರಾಷ್ಟ್ರಗಳಲ್ಲಿಯೂ ಈ ಅಂತರ ಗಮನಾರ್ಹವಾಗಿದೆ. ವಿಜ್ಞಾನಕ್ಕಾಗಿ ಈವರೆಗೆ ಕೊಟ್ಟಿರುವ 600 ನೊಬೆಲ್ ಪಾರಿತೋಷಕಗಳಲ್ಲಿ ಕೇವಲ 23 ಮಹಿಳೆಯರ ಪಾಲು! ಹಿಂದಿನ ಪೂರ್ವಗ್ರಹಗಳನ್ನು, ನಿಷ್ಕ್ರಿಯತೆಯನ್ನು ಓಡಿಸಿ, ಹೊಸ ಚಿಂತನೆ-ಪರಿಹಾರಗಳನ್ನು ನಾವು ನಮ್ಮದಾಗಿಸಿಕೊಳ್ಳಬೇಕಾಗಿದೆ. ಬಾಲಕಿಯರು-ಮಹಿಳೆಯರಿಗೆ ಸಬಲತೆ-ವಿದ್ಯಾಭ್ಯಾಸಗಳ ಲಭ್ಯತೆ, ಅವರ ಪ್ರತಿಭೆ -ಮುಂದಾಳತ್ವದ ಗುಣಗಳನ್ನು ದುಡಿಸಿಕೊಳ್ಳುವತ್ತ ನಾವು ಹೊಸ ಮಾದರಿಗಳನ್ನು ರೂಪಿಸಬೇಕಾಗಿದೆ.

ಇಬ್ಬರು ಮಹಿಳಾ ವಿಜ್ಞಾನಿಗಳು ರಾಸಾಯನಿಕ ಶಾಸ್ತ್ರದಲ್ಲಿ ನೊಬೆಲ್ ಬಹುಮಾನ ಪಡೆಯುವ ಸಾಧನೆ ಮಾಡಿ ಇತಿಹಾಸ ನಿರ್ಮಿಸಿದ್ದಾರೆ. ಈ ಪ್ರಶಸ್ತಿ ಕಡಿಮೆ ಸಾಧನೆಯಲ್ಲ! ಪ್ರಶಸ್ತಿ ಪಡೆದ ಇಬ್ಬರು ಮಹಿಳೆಯರಲ್ಲಿ ಇಮ್ಮಾನುಯಲ್ ಚಾರ್ಪೆಂಟಿಯರ್ ಹೇಳಿರುವ ಮಾತುಗಳು ಗಮನಾರ್ಹವಾಗಿವೆ. ``ನಾನು ಮೊದಲು ಒಬ್ಬ ವಿಜ್ಞಾನಿ. ನನಗೆ ಸಂತೋಷವಾಗಿದೆ ಮತ್ತು ಸ್ವಲ್ಪ ಆಘಾತವಾಗಿದೆ! ಇಬ್ಬರು ಮಹಿಳೆಯರಿಗೆ ನೊಬೆಲ್ ಬಂದಿದೆ!! ಮಹಿಳೆಯರು ಒಂದು ಸ್ಪಷ್ಟ ದಾರಿಯನ್ನು ನೋಡುವುದು ಇದರಿಂದ ಸಾಧ್ಯವಾಗಬೇಕು. ಇಂದು ನನಗೆ ಮತ್ತು ಜೆನ್ನಿಫರ್ ಡೌಡ್ನಾಗೆ ಈ ಬಹುಮಾನ ಬಂದಿರುವುದು, ಯುವತಿಯರಿಗೆ ಮತ್ತು ಬಾಲಕಿಯರಿಗೆ ನೀಡಬೇಕಾದ ಸಂದೇಶ ಮಹತ್ವದ್ದು''. ಇನ್ನೊಬ್ಬರು ಜೆನ್ನಿಫರ್ ಡೌಡ್ನಾ ಹೇಳಿದ ಮಾತು-``ನಾನು `ಮಹಿಳೆ' ಎಂಬುದು ನನಗೆ ಹೆಮ್ಮೆ! ನೊಬೆಲ್ ಬಂದಿರುವುದು ಮಹಿಳೆಯರ ಕೆಲಸ, ಪುರುಷರ ಕೆಲಸದಷ್ಟೇ ಮನ್ನಣೆ ಗಳಿಸಲು ಸಾಧ್ಯವಿದೆ ಎಂಬುದನ್ನು ಯುವತಿಯರಿಗೆ, ಬಾಲಕಿಯರಿಗೆ ಭರವಸೆ ಮೂಡಿಸಬೇಕು''.

ಮಹಿಳಾ ವಿಜ್ಞಾನಿಗಳ ಈ ಗೆಲುವು, ಮನ್ನಣೆ, ಸುದ್ದಿಯಾಗುವಷ್ಟು ವಿಜ್ಞಾನದಲ್ಲಿ ಮಹಿಳೆಯರನ್ನು ಅಲಕ್ಷಿಸಲಾಗಿದೆಯೇ? `ಹೌದು' ಎನ್ನುತ್ತವೆ ಅಧ್ಯಯನಗಳು. ಸಂಶೋಧನೆಗಳು ಬಾಲಕಿಯರು ತಮ್ಮ ಹತ್ತನೆಯ ತರಗತಿಯವರೆಗಿನ ಓದಿನಲ್ಲಿ ಬಾಲಕರಷ್ಟೇ, ಎಷ್ಟೋ ಬಾರಿ ಅವರಿಗಿಂತ ಮುಂದಿರುತ್ತಾರೆ ಎನ್ನುವುದನ್ನು ದೃಢಪಡಿಸುತ್ತವೆ. ಆದರೆ ಕ್ರಮೇಣ ಮುಂದುವರಿದಂತೆ ಬಾಲಕಿಯರ ಓದನ್ನು, ಅವರ ಕ್ಷೇತ್ರಗಳ ಆಯ್ಕೆಯನ್ನು ಸಾಮಾನ್ಯವಾಗಿ ವಿವಿಧ ಅಂಶಗಳು ನಿರ್ಧರಿಸುತ್ತವೆ. 2011ರ ಜಾಗತಿಕ ಲಿಂಗಾಧಾರಿತ ಅಂತರ ವರದಿ - Global Gender Gap Report ನ ಆರಂಭದ ಪ್ಯಾರಾ ಉಲ್ಲೇಖಿಸಿದ ಮಾತುಗಳು ಇವು ಇಂದಿನ ಸಂಕೀರ್ಣ ಜಗತ್ತಿನಲ್ಲಿ ನಮ್ಮ ಮನಸ್ಸಿನ ಧೋರಣೆಗಳು ಬದಲಾಗಬೇಕಿದೆ. ಹಿಂದಿನ ಪೂರ್ವಗ್ರಹಗಳನ್ನು, ನಿಷ್ಕ್ರಿಯತೆಯನ್ನು ಓಡಿಸಿ, ಹೊಸ ಚಿಂತನೆ-ಪರಿಹಾರಗಳನ್ನು ನಾವು ನಮ್ಮದಾಗಿಸಿಕೊಳ್ಳಬೇಕಾಗಿದೆ. ಬಾಲಕಿಯರು-ಮಹಿಳೆಯರಿಗೆ ಸಬಲತೆ-ವಿದ್ಯಾಭ್ಯಾಸಗಳ ಲಭ್ಯತೆ, ಅವರ ಪ್ರತಿಭೆ -ಮುಂದಾಳತ್ವದ ಗುಣಗಳನ್ನು ಸಂಪೂರ್ಣವಾಗಿ ದುಡಿಸಿಕೊಳ್ಳುವತ್ತ ನಾವು ಹೊಸ ಮಾದರಿಗಳನ್ನು ರೂಪಿಸಬೇಕಾಗಿದೆ. 

ಹೊಸ ಆಯಾಮ : ಕೋವಿಡ್‍ನಿಂದ ಉಂಟಾದ ಸಂಕಷ್ಟದ ಪರಿಸ್ಥಿತಿಯಲ್ಲಿ, ಒಂದು ತಿಂಗಳ ಹಿಂದಷ್ಟೆ ಅಂತರರಾಷ್ಟ್ರೀಯ ಸಾಕ್ಷರತಾ ದಿನದ ಅಂಗವಾಗಿ, ಬಾಲಕಿಯರ ಶಾಲೆಗಳಿಗೆ ಮರಳದಿರುವ ಪರಿಸ್ಥಿತಿಯ ಬಗೆಗಿನ ಚರ್ಚೆಗೆ, `ಮಹಿಳಾ ವಿಜ್ಞಾನಿಗಳಿಗೆ ನೋಬೆಲ್ ಸಂತಸ' ಸುದ್ದಿ ಹೊಸ ಆಯಾಮಗಳನ್ನು ಒದಗಿಸಿದೆ.

ಜಗತ್ತಿನ `ಮುಂದುವರಿದ' ರಾಷ್ಟ್ರಗಳಲ್ಲಿಯೂ ಈ ಅಂತರ ಗಮನಾರ್ಹವಾಗಿದೆ. ಯೂರೋಪಿನ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನಾ ವಿದ್ಯಾರ್ಥಿಗಳ ಲಿಂಗ ಅಂತರವನ್ನು ಕಡಿಮೆ ಮಾಡುವಲ್ಲಿ, ಬರುವ ದಶಕದಲ್ಲಿ ಒಂದು ಮಿಲಿಯನ್ ಮಹಿಳಾ ಸಂಶೋಧಕರಾದರೂ ಸಿದ್ಧವಾಗಬೇಕು! ಇದಕ್ಕಾಗಿ ``ವಿಜ್ಞಾನ; ಅದೊಂದು ಹುಡುಗಿಯರ ಕ್ಷೇತ್ರ'' ಎಂಬ ಚಳುವಳಿಯನ್ನೇ ಪ್ರಾರಂಭಿಸಲಾಯಿತು. ಆಯೋಗದ ಸಂದೇಶ ಸ್ಪಷ್ಟವಾಗಿತ್ತು. ``ವಿಜ್ಞಾನ ಎಂಬುದು ಮಹಿಳೆಯರ ಕ್ಷೇತ್ರವಾಗಲು ಸಾಧ್ಯವಿದೆ!'', ಆದರೆ ಈ ಚಳುವಳಿ ಸಫಲವಾಗಲಿಲ್ಲ! ಹಾಗಿದ್ದರೆ ವಿಜ್ಞಾನ ಸಂಶೋಧನಾ ಕ್ಷೇತ್ರದಲ್ಲಿ ಮುಂದುವರಿಯಲು ತಮ್ಮ `ಆಡುಂಬೊಲ'ವಾಗಿಸಿಕೊಳ್ಳಲು ಹುಡುಗಿಯರೇಕೆ ಹಿಂಜರಿಯುತ್ತಾರೆ? ಅವರನ್ನು ಹಿಂದೆಳೆಯುವ ಅಂಶಗಳು ಯಾವುವು?

ಸುರಕ್ಷತೆ, ಲಭ್ಯತೆ, ಕೌಟುಂಬಿಕವಾಗಿ ನೆಲೆಗೊಳ್ಳುವ ಅವಶ್ಯಕತೆ ಇವೆಲ್ಲವೂ ಅಂಶಗಳೇ. ಆದರೆ ಮಹಿಳೆಯರು ವಿಜ್ಞಾನ ಕ್ಷೇತ್ರದಲ್ಲಿ ಮುನ್ನಡೆಯಲು ನಮ್ಮನ್ನು ಹಿಂದೆಳೆಯುವುದು ಸ್ವತಃ ನಾವು ರೂಪಿಸಿಕೊಂಡ ಧೋರಣೆಗಳೂ ಇಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತವೆ. ವಿಜ್ಞಾನದ ಬಗೆಗಿನ ``ಧನಾತ್ಮಕ ಮಾಹಿತಿ'', ``ಆದರ್ಶ ಮಾದರಿಗಳು''- (Positive Information and Role Models) ಹುಡುಗಿಯರಿಗೆ ದೊರಕುವ ಸಾಧ್ಯತೆಯೇ ಇಂದು ಕಡಿಮೆ. ಈ ವಿಷಯದ ಬಗೆಗೆ ನಡೆದ ಯೋಜನೆ IFAC - Information for a choice- empowering young women through learning for scientific and technological career path ತೋರಿಸಿದ ಮುಖ್ಯ ಅಂಶವೆಂದರೆ ವಿಜ್ಞಾನದ ಮೂಲ ಮತ್ತು ಕ್ಲಿಷ್ಟ ವಿಷಯಗಳನ್ನು 'hard science' ವಿಷಯಗಳನ್ನು ಯುವತಿಯರು ಆರಿಸಿಕೊಳ್ಳುವುದಿಲ್ಲ. ಇದಕ್ಕೆ ಕಾರಣ ಅವರಿಗೆ ಅಂಥ ಆಯ್ಕೆಯ ಬಗೆಗೆ ಸರಿಯಾದ ಮಾಹಿತಿಯಿಲ್ಲ. ಅಂಥ ಮಾಹಿತಿ ಅವರಿಗೆ ದೊರಕುವುದು ಋಣಾತ್ಮಕವಾಗಿ, ಪೂರ್ವಗ್ರಹ ಪೀಡಿತವಾಗಿ, ರೂಢಿಗತ ಧೋರಣೆಗಳನ್ನು ಮುರಿದು, `ಗಾಜಿನ ಛಾವಣಿ'ಯನ್ನು ಒಡೆದು, ವಿಜ್ಞಾನವನ್ನು ಪ್ರೀತಿಸಿ, ಯಶಸ್ಸು ಗಳಿಸುವ ಮಹಿಳೆಯರ ಮಾದರಿಗಳು ಅವರ ಮುಂದಿಲ್ಲ.

ಮಹಿಳೆಯರು ವಿಜ್ಞಾನದಲ್ಲಿ ಮುಂದುವರಿಯದಿರುವುದು, ಸಂಶೋಧನೆಗಳನ್ನು ಮಾಡದಿರುವುದು, ಅವರ ಹೆಣ್ಣು ಮಕ್ಕಳನ್ನೂ ಅದರಿಂದ ದೂರವಿಡುವಂತೆ ಮಾಡುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ! ತಾವು ವಿಜ್ಞಾನ ಕ್ಷೇತ್ರಗಳಲ್ಲಿ, ಕಠಿಣ ಪರಿಶ್ರಮ ನಿರೀಕ್ಷಿಸುವ ಸಂಶೊಧನಾ ಕ್ಷೇತ್ರಗಳಲ್ಲಿ ಮುಂದುವರಿಯುವ ಮಹಿಳೆಯರು ಉತ್ತಮ ಕೌಟುಂಬಿಕ ಜೀವನ ಹೊಂದಿರಲು ಸಾಧ್ಯವಿದೆ. ಅಂತಹ ತಾಯಂದಿರು ತಮ್ಮ ಮಕ್ಕಳನ್ನು ಪ್ರೇರೇಪಿಸಲೂ ಸಾಧ್ಯವಿದೆ. ಆದರೆ ಈ `ಸಾಧ್ಯತೆ'ಯನ್ನು ಸಮಾಜ ಕಣ್ತೆರೆದು ಗಮನಿಸಬೇಕಾಗಿದೆ. ಮಹಿಳೆಗೆ ಆರ್ಥಿಕ -ಭಾವನಾತ್ಮಕ-ಸಾಮಾಜಿಕ ಬೆಂಬಲ ದೊರಕಿದಾಗ ಆಕೆ ತನ್ನ ಕ್ಷೇತ್ರವನ್ನು ಆರಿಸಿಕೊಳ್ಳುವುದು ತನಗಿರುವ ಸಾಮಥ್ರ್ಯ, ಕೌಶಲ ಮತ್ತು ಆಸಕ್ತಿಗಳನ್ನು ಅವಲಂಬಿಸಿ. ಈ ಹಿಂದೆ ಜಗತ್ತು ನಂಬಿದ್ದ ``ಮಹಿಳೆಗೆ ಪ್ರಕೃತಿ ಸಹಜವಾಗಿ ಅoಡಿe Sಛಿieಟಿಛಿe - ಮೂಲಭೂತ ವಿಜ್ಞಾನದ ವಿಷಯಗಳಲ್ಲಿ ಸಾಮಥ್ರ್ಯ ಪುರುಷನಿಗಿಂತ ಕಡಿಮೆ'' ಎಂಬ ನಂಬಿಕೆಯನ್ನು ಅಧ್ಯಯನಗಳು `ಸುಳ್ಳು' ಎಂಬುದನ್ನು ದೃಢಪಡಿಸಿವೆ. `ವೈದ್ಯಕೀಯ' ಕ್ಷೇತ್ರವೊಂದನ್ನು ಹೊರತುಪಡಿಸಿ ಮಹಿಳೆಯರು ಹೆಚ್ಚು ಕಾಣುವ ಶಿಕ್ಷಕ /ನರ್ಸ್/ಸಾಮಾಜಿಕ ಕಾರ್ಯಕರ್ತೆ/ಮಾನವಿಕಗಳು /ಸೆಕ್ರೆಟೆರಿಯಲ್ ಇವೆಲ್ಲವೂ ಕಲೆ ಇಲ್ಲವೇ 'Soಜಿಣ sಛಿieಟಿಛಿes' ಗೆ ಸಂಬಂಧಿಸಿದಂತಹವು. ವೈದ್ಯಕೀಯ ಕ್ಷೇತ್ರದಲ್ಲಿಯೂ ಮಹಿಳೆಯರು ಸಾಮಾನ್ಯವಾಗಿ `ಕ್ಲಿಷ್ಟ' ಎಂದು ಭಾವಿಸುವ ಯಾವ ವಿಷಯವನ್ನೂ (ಶಸ್ತ್ರಚಿಕಿತ್ಸೆ/ಸೂಪರ್‍ಸ್ಪೆಷಾಲಿಟಿಗಳು) ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಅದು `ಬುದ್ಧಿ' ಯ ಕೊರತೆ ಎಂಬುದಕ್ಕಿಂತ `ಆತ್ಮ ವಿಶ್ವಾಸ'ದ ಕೊರತೆ ಎದುರಿಸಬೇಕಾದ `ಸವಾಲು'ಗಳ ಭಯದಿಂದ! 

   STEM - 'Science, Technology, Engineering and Mathmatics ವಿಜ್ಞಾನ-ತಂತ್ರಜ್ಞಾನ-ತಾಂತ್ರಿಕತೆ -ಗಣಿತ ಕ್ಷೇತ್ರಗಳಲ್ಲಿ ಮಹಿಳೆಯರನ್ನು ತೊಡಗಿಸುವುದು ಈ ಹೊತ್ತಿನ ತುರ್ತುಗಳಲ್ಲಿ ಒಂದು. ಅಮೇರಿಕೆಯ ಅಂಕಿ ಅಂಶಗಳ ಪ್ರಕಾರ 'STEM' ಕ್ಷೇತ್ರಗಳಲ್ಲಿದ್ದ ಒಟ್ಟು ಜನರಲ್ಲಿ 1970ರ ವೇಳೆಗೆ ಶೇಕಡ 7 ರಷ್ಟು ಮಹಿಳೆಯರಿದ್ದರೆ, 1990ರ ವೇಳೆಗೆ ಇದು ಶೇ.23ಕ್ಕೆ ಏರಿತು. ಆದರೆ ನಂತರದ 20 ವರ್ಷಗಳಲ್ಲಿ, ಅಂದರೆ 2011ರ ಕಾಲಕ್ಕೆ ಅದಾಗಿದ್ದು ಕೇವಲ 26%! 'STEM' ಕ್ಷೇತ್ರಗಳಲ್ಲಿ ಮಹಿಳೆಯರನ್ನು ಹೆಚ್ಚು ತೊಡಗಿಸಬೇಕಿರುವುದು ಮಹಿಳಾ ಆರೋಗ್ಯದ ಗುಣಮಟ್ಟ ಹೆಚ್ಚಿಸಲು' ಅಂದರೆ ಅಚ್ಚರಿ ಮೂಡಬಹುದು. ಉದಾಹರಣೆಯೊಂದನ್ನು ಗಮನಿಸಿದರೆ ಇದರ ಸತ್ಯ ನಮ್ಮ ಅರಿವಿಗೆ ಬರುತ್ತದೆ. ಎಮೆರ್ಜೆನ್ಸಿ ವಿಭಾಗಗಳಲ್ಲಿ, ಮಹಿಳೆಯರಲ್ಲಿರುವ ಹೃದಯ ಸಮಸ್ಯೆಗಳನ್ನು ಗುರುತಿಸದೆ, ದಶಕಗಳವರೆಗೆ ಸಾವಿರಾರು ಮಹಿಳೆಯರು ಸಾವನ್ನಪ್ಪುತ್ತಿದ್ದರು. ಕಾರಣ, ನಮ್ಮ ಬಳಿ `ಹೃದಯ'ದ ಬಗ್ಗೆ ಇದ್ದ ಮಾಹಿತಿಯೆಲ್ಲವೂ `ಪುರುಷ ಹೃದಯ' ದ ಬಗೆಗಾಗಿತ್ತು! ಮಹಿಳೆಯರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಬಹದಾದ ವಿಭಿನ್ನ ರೀತಿಗಳನ್ನು ನಾವು ಅಧ್ಯಯನ ಮಾಡಿರಲೇ ಇಲ್ಲ. ಔಷಧಿಗಳೂ ಅಷ್ಟೆ. ಸಂಶೋಧನೆಗಳೆಲ್ಲವೂ ಅಧ್ಯಯನ ಮಾಡುತ್ತಿದ್ದದ್ದು ಸುಧಾರಣಾ ಪುರುಷನ ದೇಹಗಾತ್ರ-ರಚನೆ-ಜೈವಿಕತೆಗಳ ಮೇಲೆ ಔಷಧಿಗಳ ಅಡ್ಡಪರಿಣಾಮ -ಪರಿಣಾಮಗಳನ್ನು, ಮಾತ್ರ! ಹಾರ್ಮೋನುಗಳ ವ್ಯತ್ಯಾಸದಿಂದ ಪರೀಕ್ಷೆಯ ಫಲಿತಾಂಶಗಳು ಬದಲಾಗಬಹುದೆಂಬ ಭಯದಿಂದ ಸಂಶೋಧನೆಗೆಂದು ಉಪಯೋಗಿಸುತ್ತಿದ್ದ ಇಲಿಗಳೂ `ಪುರುಷ' ಇಲಿಗಳೇ!! ಮಹಿಳೆ ಸಂಶೋಧಕಿಯಾದರೆ ಈ ವ್ಯತ್ಯಾಸಗಳು ಇಲ್ಲವಾಗುವ, ಹೊಸ ಹೊಸ ಆವಿಷ್ಕಾರಗಳು ಹೆಚ್ಚುವ ಸಾಧ್ಯತೆ ಮಹಿಳೆಯರ ಭಾವನಾತ್ಮಕ ಕೌಶಲಗಳು 'STEM' ಕ್ಷೇತ್ರಗಳಿಗೆ ನೀಡುವ ಬಲ ಬಹಳ. ಹಾಗಾಗಿಯೇ ಈಗಾಗಲೇ ಮಹಿಳೆಯರು ಹೆಚ್ಚಾಗಿರುವ ವಿಜ್ಞಾನ ಕ್ಷೇತ್ರಗಳೆಂದರೆ ಜೈವಿಕ ವಿಜ್ಞಾನ (Biology), ಮನಃಶಾಸ್ತ್ರ ಮತ್ತು ವೈದ್ಯಕೀಯ (ಅದರಲ್ಲಿಯೂ ಮೂರು 'P' ಪ್ರಾಥಮಿಕ ಆರೋಗ್ಯ ಸೇವೆ, ಮನೋವೈದ್ಯಕೀಯ ಮತ್ತು ಮಕ್ಕಳ ರೋಗ ಶಾಸ್ತ್ರ). ಇವೆಲ್ಲವೂ ಕಡಿಮೆ ದುಡ್ಡು ಕೊಡುವ, ಆದರೆ ರೋಗಿಗಳೊಂದಿಗೆ ಹೆಚ್ಚು ಸಂಪರ್ಕವಿರುವ ಕ್ಷೇತ್ರಗಳು! ವಿಜ್ಞಾನ-ಗಣಿತ - ತಂತ್ರಜ್ಞಾನದ ಇತರ ಕ್ಷೇತ್ರಗಳಿಗೂ ಇಂಥ `ಭಾವನಾತ್ಮಕ' ಸ್ಪರ್ಶ ನೀಡುವ ಅಗತ್ಯ ಈ ಹೊತ್ತಿನ ಪರಿಸ್ಥಿತಿಗಿದೆ.

1901ರಲ್ಲಿ ಆರಂಭವಾದ ನೊಬೆಲ್ ಪಾರಿತೋಷಕದ ವಿಜ್ಞಾನ ಪ್ರಶಸ್ತಿಗಳಲ್ಲಿ 6 ಮತ್ತು 7ನೇ ಮಹಿಳೆಯರಾಗಿ ಚಾರ್ಪೆಂಟಿಯರ್ ಮತ್ತು ಡೌಡ್ನಾ ನಮ್ಮೆದುರು ಇಂದು ನಿಂತಿದ್ದಾರೆ. ವಿಜ್ಞಾನಕ್ಕಾಗಿ ಈವರೆಗೆ ಕೊಟ್ಟಿರುವ 600 ನೊಬೆಲ್ ಪಾರಿತೋಷಕಗಳಲ್ಲಿ ಕೇವಲ 20 ಮಹಿಳೆಯರ ಪಾಲು. ಇಂತಹ ಸಂದರ್ಭದಲ್ಲಿ ಚಾರ್ಪೆಂಟಿಯರ್ ಮತ್ತು ಡೌಡ್ನಾ ಎಲ್ಲ ಎಲ್ಲೆಗಳನ್ನು ದಾಟಿದ, ಲಿಂಗ-ವರ್ಣ- ಜಾತಿ-ದೇಶ ಭೇದಗಳನ್ನು ಮೀರಿದ ಸೃಜನಶೀಲತೆಯನ್ನು ನಮ್ಮ ಮುಂದಿಡುತ್ತವೆ. 'Sಖಿಇಒ' ಎಂಬ ವಿವಿಧ ಕ್ಷೇತ್ರಗಳನ್ನು ಬಿಂಬಿಸುವ ಪದವೇ ಅಂತರ್ ಸಂಬಂಧವನ್ನು ಸೂಚಿಸುತ್ತದೆ ಎಂಬುದು ಗಮನಾರ್ಹ. ವಿಜ್ಞಾನದ ಭಾಗಗಳಾದ ಭೌತಶಾಸ್ತ್ರ, ರಾಸಾಯನಿಕ ಶಾಸ್ತ್ರಗಳು ಗಣಿತವಿಲ್ಲದೆ ಇಲ್ಲ. ತಂತ್ರಜ್ಞಾನಕ್ಕೆ ಮಾತ್ರ ಇವೆಲ್ಲವೂ ಅಗತ್ಯ. ಇವೆಲ್ಲವೂ ಸೇರಿ ಇಂದು ವೈದ್ಯಕೀಯದಂತಹ ಜೈವಿಕ ವಿಜ್ಞಾನವನ್ನು ಬೆಳೆಸಿರುವ ಪರಿ ಅದ್ಭುತ. ಹೀಗಿರುವಾಗ ಇಂದಿನ ಪ್ರತಿಭಾವಂತ ಹೆಣ್ಣು ಮಕ್ಕಳು ಐತಿಹಾಸಿಕವಾಗಿ ತಮ್ಮ ಲಿಂಗಕ್ಕೆ ತಕ್ಕುದಲ್ಲ ಎಂದು ಭಾವಿಸಲ್ಪಟ್ಟ 
ಕ್ಷೇತ್ರಗಳಲ್ಲಿ ಅದು ತಮಗಿಷ್ಟವೆಂದು, ಸಮಾಜಕ್ಕೆ ಅಗತ್ಯವೆಂದು ದುಡಿದು ಹೆಸರು ಮಾಡುವುದು ಸಾಧ್ಯವಿದೆ!

ಡಾ. ಕೆ.ಎಸ್. ಪವಿತ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಹೆಣ್ಣು ಹೆಜ್ಜೆ / ವಿಜ್ಞಾನವೂ, ಮಹಿಳೆಯೂ!- ಡಾ. ಕೆ.ಎಸ್. ಪವಿತ್ರ

 • October 19, 2020 at 4:26 am
  Permalink

  ಡಾ . ಪವಿತ್ರಾ ಅವರ ಲಿಂಗ ತಾರತಮ್ಯದ ವಿಶ್ಲೇಷಣೆ ಅರ್ಥಪೂರ್ಣವಾಗಿದೆ .ಪುರುಷ ಇಲಿಗಳು -ಓದಿ ನಗು- ಕೋಪ ಒಟ್ಟಿಗೇ ಬಂದವು .ಕನ್ನಡದಲ್ಲಿ ಈ ಸಂದರ್ಭ ಕ್ಕೆ ಯಾವುದಾದರು ಪದವಿದೆಯೇ ?✍🏻

  Reply

Leave a Reply

Your email address will not be published. Required fields are marked *