Uncategorizedಅಂಕಣ

ಹೆಣ್ಣು ಹೆಜ್ಜೆ/ `ವಯಸ್ಸಿ’ಗೊಂದು ಹೊಸ ನೋಟ! – ಡಾ. ಕೆ.ಎಸ್. ಪವಿತ್ರ

ವಯಸ್ಸು ಏರುತ್ತ ಮಹಿಳೆಯರು ಎರಡೆರಡು ಅಸಮಾನತೆಗಳನ್ನು ಎದುರಿಸಬೇಕು! `ಮಹಿಳೆ’ ಎನ್ನುವುದು ಒಂದಾದರೆ, ಇನ್ನೊಂದು `ವಯಸ್ಸು’ ಎನ್ನುವುದು. `ಅರವತ್ತಕ್ಕೆ ಅರಳುಮರಳು’ ಎನ್ನುವುದನ್ನು ಮಹಿಳೆಯರಿಗೆ ಹೆಚ್ಚು ಅನ್ವಯಿಸಿ ಹೇಳಲಾಗುತ್ತದೆ. `ಅರವತ್ತು ಮರಳಿ ಅರಳುವ ವಯಸ್ಸು’ ಎನ್ನುವುದನ್ನು ಹಲವು ಮಹಿಳೆಯರು ತೋರಿಸುತ್ತಾರೆ. ಆದರೆ ಸ್ವತಃ ಮಹಿಳೆಯರು `ವಯಸ್ಸಿ’ನ ಬಗ್ಗೆ ತಮ್ಮ ದೃಷ್ಟಿಕೋನವನ್ನು ಬದಲಿಸಬೇಕಾದ ಅಗತ್ಯವಿದೆ.

ಕಳೆದ ಒಂದು ಶತಮಾನದಲ್ಲಿ ಹಲವು ಕ್ರಾಂತಿಗಳಾಗಿವೆ. ಅವುಗಳಲ್ಲಿ ಗಮನಾರ್ಹ ಎನ್ನಿಸುವಂಥದ್ದು, ಆದರೆ ನಾವು ಗಮನಿಸದೇ ಇರುವಂಥದ್ದು ಎಂದರೆ ಹೆಚ್ಚಿರುವ ನಮ್ಮ ಆಯುಷ್ಯ! ನಮ್ಮ ಮುತ್ತಜ್ಜ- ಮುತ್ತಜ್ಜಿ- ಅಜ್ಜ-ಅಜ್ಜಿಯರಿಗಿಂತ ಸರಾಸರಿ 34 ವರ್ಷಗಳಷ್ಟು ಹೆಚ್ಚುಕಾಲ ನಾವು ಜೀವಿಸುತ್ತಿದ್ದೇವೆ! ಆದರೆ `ವಯಸ್ಸಾಗುವಿಕೆ' ಎಂಬುದರ ಬಗೆಗೆ ನಮ್ಮ ಧೋರಣೆ ಹೆಚ್ಚು ಬದಲಾದಂತಿಲ್ಲ. ಹುಟ್ಟು, ಯೌವ್ವನದಲ್ಲಿ ವಿeೃಂಭಿಸು, ಮಧ್ಯ ವಯಸ್ಸಿನಲ್ಲಿ ನಿಧಾನವಾಗು, ವೃದ್ಧಾಪ್ಯದಲ್ಲಿವಿರಮಿಸು’ ಎಂಬ ಪರಿಕಲ್ಪನೆಯಲ್ಲೇ ನಾವು ಇನ್ನೂ ಬದುಕುತ್ತಿದ್ದೇವೆ.

ಜಗತ್ತಿನಾದ್ಯಂತ ವಿಜ್ಞಾನಿಗಳು, ವೈದ್ಯರು, ಕಲಾವಿದರು, ತತ್ತ್ವಶಾಸ್ತ್ರಜ್ಞರು ವಯಸ್ಸಾಗುವಿಕೆಯತ್ತ ಹೊಸ ದೃಷ್ಟಿಯಿಂದ ನೋಡುವ ಪ್ರಯತ್ನ ಮಾಡುತ್ತಿದ್ದಾರೆ. “Third Act” – ಮೂರನೇ ಅಂಕ' ಎಂದು ಕರೆಯಬಹುದಾದ ಜೀವನದ ಕೊನೆಯ ಮೂರು ದಶಕಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಅವರ ಪ್ರಕಾರ ಈ ಮೂರನೆಯ ಮೂವತ್ತು ವರ್ಷಗಳ ಅವಧಿ ತನ್ನದೇ ಆದ ಬೆಳವಣಿಗೆಯ ಹಂತವನ್ನು ಹೊಂದಿದೆ. ಬಾಲ್ಯ -ಹದಿಹರೆಯ-ಮಧ್ಯ ವಯಸ್ಸಿನಂತೆ ಅದಕ್ಕೆ ಅದರದ್ದೇ ಆದ ಮೈಲಿಗಲ್ಲುಗಳೂ ಇವೆ. ಅವರ ಪ್ರಕಾರ "Ageing" -ವಯಸ್ಸಾಗುವಿಕೆ’ ಗೆ ಸರಿಯಾದ ರೂಪಕ ಮೆಟ್ಟಿಲೇರುವುದು' - Staircase. ಜಾಣ್ಮೆ- ಪರಿಪೂರ್ಣತೆ- ಅಧಿಕಾರ ಎಲ್ಲವೂ ಏರುವುದು. ಅಂದರೆ ಈ ಪರಿಕಲ್ಪನೆಯಂತೆ ವಯಸ್ಸು ಎಂದರೆ ಸಮಸ್ಯೆ' ಕಾಯಿಲೆ' ಎಂಬುದಕ್ಕಿಂತ, ವಯಸ್ಸು ಎಂಬುದು ಒಂದು ಸಾಮಥ್ರ್ಯ' ಶಕ್ತಿ'. ಅದೂ ಕೆಲವೇ ಅದೃಷ್ಟವಂತರಿಗಲ್ಲ! ಹೆಚ್ಚಿನವರಿಗೆ ಇದು ಸತ್ಯ. 50ರ ವಯಸ್ಸಿನ ನಂತರದ ವ್ಯಕ್ತಿಗಳಲ್ಲಿ ಒತ್ತಡ-ದ್ವೇಷ-ಆತಂಕಗಳು ಕಡಿಮೆ ಎಂಬುದನ್ನು ಅಧ್ಯಯನಗಳು ತೋರಿಸುತ್ತವೆ. ಅಂದರೆ ಪಿಕಾಸೋ ಒಂದೆಡೆ ಹೇಳಿದ ``ಯುವಕ/ಯುವತಿಯಾಗಲು ಅಥವಾ ಎಳೆ ವಯಸ್ಸಿನವರಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ - "It takes a long time to become younger" ಎಂಬ ಮಾತು ಸತ್ಯ.

ಆದರೆ ಇದ್ಯಾವುದೂ ಹೇಳಿದಷ್ಟು ಸುಲಭವಲ್ಲ. ನಮ್ಮಲ್ಲಿ ಪ್ರತಿಯೊಬ್ಬರೂ ವಯಸ್ಸಾಗುವುದರ ಬಗ್ಗೆ ಹೆದರುತ್ತೇವೆ. ನಮ್ಮ ದೇಹ ವಯಸ್ಸಿಗೆ ತಕ್ಕಂತೆ ಬದಲಾಗುವುದನ್ನೂ ನಾವುನಮ್ಮ ದೇಹ ನಮಗೆ ಮೋಸ ಮಾಡುತ್ತಿದೆ’ ಎಂಬ ಭಾವನೆಯಿಂದಲೇ ನೋಡುತ್ತೇವೆ. ನಾವು ಯಂಗ್' ಆಗಿ ಕಾಣಬೇಕೆಂದು ಹಂಬಲಿಸುತ್ತೇವೆ. ಲಿಂಗ-ವರ್ಗ ಅಸಮಾನತೆಗಳಂತೆಯೇ 'Ageism' ಎಂಬ ವಯಸ್ಸಾಗುವಿಕೆಯ ವಿರುದ್ಧದ ಅಸಮಾನತೆಯೂ ನಮ್ಮಲ್ಲಿದೆ. "ಇಂಥ ಕೆಲಸ ಮಾಡಲು ವಯಸ್ಸು ಮೀರಿದೆ'' ಎಂಬುದು ಬಹು ಚಟುವಟಿಕೆಗಳಲ್ಲಿ ಕಂಡು ಬರಬಹುದು. ನೆರಿಗೆಗಳೆಂದರೆ ಕೆಟ್ಟದು-ಕುರೂಪ, ವೃದ್ಧಾಪ್ಯ ಎಂದರೆ ಅಸಮರ್ಥತೆ, ಇಳಿ ವಯಸ್ಸು ಎಂದರೆ ದುಃಖ, ಎಂಬ ಭಾವನೆಯನ್ನು ಮಾಧ್ಯಮಗಳೂ ಪ್ರಚೋದಿಸುತ್ತಲೇ ಇವೆ.

ಇದು ಉಳಿದೆಲ್ಲಾ ಜೀವನದ ಧೋರಣೆಗಳಂತೆ ನಮ್ಮ ಬಾಲ್ಯದಲ್ಲೇ ರೂಪುಗೊಳ್ಳುತ್ತದೆ. ಮತ್ತು ಬಹುಕಾಲ ಬೆಳೆಯುತ್ತಾ ವೃದ್ಧಾಪ್ಯದಲ್ಲಿ ದೃಢವಾಗಿ ನಿಂತುಬಿಡುತ್ತದೆ. ಉದಾಹರಣೆಗೆ ಕೀ' ಮರೆಯುವ ಸಾಮಾನ್ಯ ಕ್ರಿಯೆಯನ್ನೇ ತೆಗೆದುಕೊಳ್ಳಿ. 60ರ ಮಹಿಳೆ ಬೀಗದಕೈ ಮರೆತರೆ ತತ್‍ಕ್ಷಣ ತಲೆಗೆ ಬರುವ ವಯಸ್ಸಾಯಿತಲ್ಲ, ಮರೆವು' ಎಂಬ ಭಾವ, 20ರ ಹುಡುಗಿ ಅದೇ ಕೀ' ಮರೆತರೆ ಬಂದೀತೆ? `ಸೀನಿಯರ್ ಮೊಮೆಂಟ್' ಇದ್ದಂತೆ `ಜೂನಿಯರ್ ಮೊಮೆಂಟ್’ ಮನಸ್ಸಿಗೆ ಹೊಳೆಯಲಾರದು!

ವಯಸ್ಸು ಏರುತ್ತ ಮಹಿಳೆಯರು ಎರಡೆರಡು ಅಸಮಾನತೆಗಳನ್ನು ಎದುರಿಸಬೇಕು! ಮಹಿಳೆ' ಎನ್ನುವುದು ಒಂದಾದರೆ, ಇನ್ನೊಂದು ವಯಸ್ಸು' ಎನ್ನುವುದು. ವಾಟ್ಸ್ ಆ್ಯಪ್‍ನಲ್ಲಿ ಹರಿದಾಡುವ ಜೋಕೊಂದು ನೆನಪಿಗೆ ಬರುತ್ತದೆ. ಒಬ್ಬ ವ್ಯಕ್ತಿಯನ್ನು ಆತನ ಸಹಪಾಠಿ ಮಾತನಾಡಿಸಿದಳಂತೆ. `ನೀನು ಇಂಥ ವರ್ಷದ, ಇಷ್ಟನೇ ತರಗತಿಯಲ್ಲಿ, ಇಂತಹ ಶಾಲೆಯಲ್ಲಿ ಓದುತ್ತಿದ್ದೆಯಲ್ಲ!" ಅಂತ. ಆತ ಅಚ್ಚರಿಯಿಂದ ತಲೆ ಕೆರೆದುಕೊಂಡು, "ನೀವು ಯಾವ ವಿಷಯ ಕಲಿಸುತ್ತಿದ್ದಿರಿ? ಇಂಗ್ಲಿಷಾ!" ಎಂದನಂತೆ! ಇದು ಮಹಿಳೆಯ ವಯಸ್ಸು ಹೆಚ್ಚಾಗುವುದರ ಬಗೆಗೆ ರೂಪ-ಯೌವ್ವನಗಳ ಕಳೆದುಕೊಳ್ಳುವಿಕೆಗಳ ಬಗೆಗೆ ನಮ್ಮ ಧೋರಣೆಯ ಒಂದು ಚಿಕ್ಕ ಸ್ಯಾಂಪಲ್. ಆದರೆ ವಾಸ್ತವ ಬೇರೆಯೇ! ಯಾವುದೇ ವಯಸ್ಸಿನ ಗುಂಪಿನಲ್ಲಿಯೂ ಇಂದು ಮಹಿಳೆಯರು ಹೆಚ್ಚು ಆರೋಗ್ಯವಂತರು, ಬಸಿರು-ಮುಟ್ಟು-ಋತುಬಂಧಗಳ ಮಧ್ಯೆಯೂ ತಮ್ಮ ತೂಕ ಕಾಯ್ದುಕೊಳ್ಳುವ, ಪ್ರಯತ್ನ ಮಾಡುವವರು!

ಹೀಗಿದ್ದೂ, ಯೌವ್ವನಕ್ಕೆ ಆಕರ್ಷಣೆ, ವಯಸ್ಸಿಗೆ ವಯಸ್ಸು ಹೆಚ್ಚಾದವರಿಂದಲೂ ಗೌರವ! 25 ವರ್ಷ ದಾಟಿತೆಂದರೆ ಆಂಟಿ' ಗ್ಯಾರಂಟಿ. ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆ ತನಗಿಂತ ವಯಸ್ಸಾದವಳು ಎಂಬುದನ್ನು ನಿರೂಪಿಸಲು ಪ್ರಯತ್ನಿಸುವುದೂ ಸರ್ವೇಸಾಮಾನ್ಯ. ಮಹಿಳೆಯರ ಸಾಮಥ್ರ್ಯವನ್ನು ವಯಸ್ಸನ್ನು ಆಧರಿಸಿಯೇ ನಿರ್ಧರಿಸಿಬಿಡುವವರಿದ್ದಾರೆ. ಇವರು ಇಂತಿಂಥದ್ದು ಮಾಡಿದ್ದಾರೆಂದರೆ "ಅವರಿಗೆ ವಯಸ್ಸಾಗಿರಲೇಬೇಕು". ಯಾವುದೇ ವಯಸ್ಸಿನಲ್ಲಿ ಸೌಂದರ್ಯ -ಸಾಮಥ್ರ್ಯ ಇವು ಸಂಬಂಧಿಸಿರುವುದು ಆಯಾ ವ್ಯಕ್ತಿಯ ಮನೋಬಲ ಮತ್ತು ವ್ಯಕ್ತಿತ್ವಗಳಿಗೆ ಎಂಬುದನ್ನು ನಾವು ಬಡಪೆಟ್ಟಿಗೆ ಒಪ್ಪಲಾರೆವು. ಮುಖ ನೋಡಿದಾಕ್ಷಣ ತಮ್ಮ ಜಾಣ್ಮೆಯಿಂದ ಇವರಿಗೆ ಇಂತಿಷ್ಟೇ ವಯಸ್ಸು' ಎಂದು ಹೇಳುವವರೂ ಇದ್ದಾರೆ. ಮಹಿಳೆಯರನ್ನು ಒಳಗೊಂಡಂತೆ ನಮ್ಮ ಇಡೀ ಸಮಾಜ ಇತರರನ್ನು ನೋಯಿಸದಿರುವ ಕಲೆಯನ್ನು ವಯಸ್ಸಿನ ವಿಚಾರ’ದಲ್ಲಂತೂ ಕಲಿಯಲೇಬೇಕಿದೆ. ನಿಮಗೆ ಇಷ್ಟು ವಯಸ್ಸಿರಲೇಬೇಕು/ ನೀವು ನಮ್ಮ ಕ್ಲಾಸ್‍ಮೇಟ್ ಇರಲೇ ಬೇಕು/ ನಿಮಗೆ ಅಷ್ಟೇ ವಯಸ್ಸಾ! / ನೀವು ಅವರ ಅಮ್ಮ /ಅಜ್ಜಿ/ ಅಕ್ಕ ಅಂದುಕೊಂಡೆ / ಬಿಡದೆ ಆಂಟಿ' ಎಂದೆ ಸಂಬೋಧಿಸುವುದು'' ಇಂತಹ ಪ್ರವೃತ್ತಿಯನ್ನು ನಾವು ತಿದ್ದುಕೊಳ್ಳಲೇಬೇಕಾಗಿದೆ. ಒಂದೊಮ್ಮೆ ವಯಸ್ಸಿನ ಬಗ್ಗೆ ಒಬ್ಬರು ಒಂದಿಷ್ಟು ವರ್ಷಗಳನ್ನು ಕಡಿಮೆ ಮಾಡಿಯೇ ಹೇಳುತ್ತಿದ್ದಾರೆ ಎಂದು ನಮಗೆ ಖಾತರಿಯಿದೆ ಎನ್ನಿ, ಆಗಲೂ, ನಿಮಗೆ ನಷ್ಟವೇನು? ಒಂದೊಮ್ಮೆ ನಿಮಗೆ `ನನ್ನ ವಯಸ್ಸು ಇಂತಿಷ್ಟು’ ಎಂದು ಹೇಳುವ ಪ್ರಾಮಾಣಿಕತೆಯಿದ್ದರೆ ಅದು ನಿಮ್ಮ ಸಾಮಥ್ರ್ಯವಷ್ಟೆ ಇತರರ ವಯಸ್ಸಿನ ಗೊಡವೆಗೆ ನಾವು ಹೋಗುವ ಅವಶ್ಯಕತೆಯಿಲ್ಲ!

ಸ್ವತಃ ಮಹಿಳೆಯರು ವಯಸ್ಸಿ'ನ ಬಗ್ಗೆ ತಮ್ಮ ದೃಷ್ಟಿಕೋನವನ್ನು ಬದಲಿಸಬೇಕಾದ ಅಗತ್ಯವಿದೆ. ಆರೋಗ್ಯ- ಆರೈಕೆ- ಆರ್ಥಿಕತೆಯ ಮೂರುಆ'ಗಳು ವಯಸ್ಸು ಹೆಚ್ಚುತ್ತಿದ್ದಂತೆ ಎಲ್ಲರನ್ನೂ ಕಾಡಬಹುದು. ಆದರೆ ಇವುಗಳಿಗಿಂತ ಸಾರ್ವತ್ರಿಕವಾಗಿ ಎಲ್ಲ ಮಹಿಳೆಯರನ್ನೂ ಕಾಡುವುದು ವಯಸ್ಸಾಗುತ್ತಿದೆ ಎಂಬುದನ್ನು ಒಪ್ಪಿಕೊಳ್ಳಲಾಗದ ನಿರಾಕರಣೆ' - Denial. ಈ ನಿರಾಕರಣೆಯನ್ನು ಬದಿಗಿಟ್ಟು, ವೈಜ್ಞಾನಿಕವಾಗಿ `ವಯಸ್ಸ'ನ್ನು ಒಂದು ಸಹಜ ಪ್ರಕ್ರಿಯೆ ಎಂದು ಒಪ್ಪಿಕೊಳ್ಳುವುದು ಏಕೆ ಅವಶ್ಯಕ? ಅಧ್ಯಯನಗಳ ಪ್ರಕಾರ ಸಕಾರಾತ್ಮಕ ಧೋರಣೆಯನ್ನು ವಯಸ್ಸಾಗುವುದರ ಬಗ್ಗೆ ಹೊಂದಿರುವವರು, ರಭಸವಾಗಿ ನಡೆಯುತ್ತಾರೆ, ನೆನಪಿನ ಶಕ್ತಿಯ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸುತ್ತಾರೆ, ಆಘಾತಗಳಿಂದ ಬೇಗ ಚೇತರಿಸಿಕೊಳ್ಳುತ್ತಾರೆ, ಹೆಚ್ಚು ದಿನ ಬದುಕುತ್ತಾರೆ. ಇವರೆಲ್ಲರಲ್ಲಿ ಇರುವ ಸಮಾನ ಅಂಶಜೀವನಕ್ಕೊಂದು ಉದ್ದೇಶವಿದೆ'' ಎಂಬ ಭಾವ - Sense of purpose. ಆದ್ದರಿಂದಲೇ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕವಾಗಿ Anti ageism - ವೃದ್ಧಾಪ್ಯದ ವಿರುದ್ಧ ಅಭಿಯಾನವನ್ನು ಬೆಳೆಸುತ್ತಿದೆ. ಇದು ಕೇವಲ ಆಯುಷ್ಯದ ದೀರ್ಘತೆಗಿಂತ `ಆರೋಗ್ಯ'ದ, ಜೀವನದ ಗುಣಮಟ್ಟದ ದೀರ್ಘತೆಗಾಗಿ. ಜಗತ್ತಿನಾದ್ಯಂತ 2050ರ ವೇಳೆಗೆ ಪ್ರತಿ 5 ಜನರಲ್ಲಿ ಒಬ್ಬರು, 60ನ್ನು ದಾಟಿರುತ್ತಾರೆ ಎಂಬುದನ್ನು ಗಮನಿಸಿದರೆ ಇದರ ಪ್ರಾಮುಖ್ಯ ಅರಿವಾಗುತ್ತದೆ.

ಮನೋವಿಜ್ಞಾನ "Doing a life review" - ಜೀವನವನ್ನು ಪುನರ್ ದೃಷ್ಟಿಸುವ ಪ್ರಕ್ರಿಯೆಯನ್ನು ವಿವರಿಸುತ್ತದೆ. ``ನಮ್ಮ ತಪ್ಪು ಎಂದುಕೊಂಡ ಹಲವು ಹಿಂದಿನ ಅನುಭವಗಳು ನಿಜವಾಗಿ ನಿಮಗೆ ಸಂಬಂಧಿಸಿರಲಿಲ್ಲ, ನೀವು ಇದ್ದ ಹಾಗೆ ಇರುವುದು ಪರವಾಗಿಲ್ಲ, ನಿಮ್ಮ ಭೂತದಿಂದ ನೀವು ಬಿಡುಗಡೆ ಹೊಂದಲು ಸಾಧ್ಯ'' ಎಂಬ ಅರಿವು ಬದುಕಿಗೆ ಹೊಸ ಅರ್ಥವನ್ನು ಕೊಡಲು ಸಾಧ್ಯವಿದೆ. ನಿಮ್ಮ ಹಿಂದಿನ ಸಂಬಂಧಗಳ ಸ್ವರೂಪದಲ್ಲಿಯೂ ಬದಲಾವಣೆ ತರಲೂ ಇದರಿಂದ ಸಾಧ್ಯ. ಜರ್ಮನಿಯ ಮನೋವೈದ್ಯ ವಿಕ್ಟರ್ ಫ್ರಾಂಕೆಲ್, ಐದು ವರ್ಷಗಳನ್ನು ನಾಜೀ ಕಾನ್ಸನ್‍ಟ್ರೇಷನ್ ಕ್ಯಾಂಪ್‍ಗಳಲ್ಲಿ ಕಳೆದವನು. ಅವನು ಬರೆದ ಒಂದು ಪುಸ್ತಕ "Man's Search for Meaning". ಅದರಲ್ಲಿ ಬರೆದ ಸಾಲುಗಳು ``ನಮ್ಮ ಜೀವನದ ಎಲ್ಲವೂ ಬೇರೆಯವರು ಕಿತ್ತುಕೊಳ್ಳಬಹುದಾದಂತಹವು, ಆದರೆ ನಾವು ಪ್ರತಿ ಪರಿಸ್ಥಿತಿಗೆ ಪ್ರತಿಕ್ರಿಯಿಸುವ ರೀತಿ ಮಾತ್ರ ಇದಕ್ಕೆ ಹೊರತು. ಇದರಿಂದಲೇ ನಮ್ಮ ಜೀವನದ ಗುಣಮಟ್ಟ ನಿರ್ಧರಿತ / ಬಡತನ, ಮನ್ನಣೆ ಇರದಿರುವುದು, ಅನಾರೋಗ್ಯ ಇವ್ಯಾವುವೂ ಎಷ್ಟು ಭೀಕರ/ಕ್ಷುಲ್ಲಕ ಎನ್ನುವುದನ್ನು ನಿರ್ಧರಿಸುವುದೂ ಈ ಧೋರಣೆಯೇ!''.

ಹಿಂದೆ ಹೋಗಿ ನಮ್ಮ ಸಂಬಂಧಗಳು- ಅನುಭವಗಳನ್ನು ಪುನರ್ ವಿಮರ್ಶಿಸುವುದು ನಮ್ಮ ಮಿದುಳಿನಲ್ಲಿ ನರಕೊಂಡಿಗಳನ್ನು ಬದಲಿಸಬಲ್ಲದು, ಜೈವಿಕವಾಗಿ ದೇಹಕ್ಕೆ ಹಲವು ರಾಸಾಯನಿಕ ಬದಲಾವಣೆಗಳನ್ನು ತರಬಲ್ಲದು. ಹದಿಹರೆಯದಲ್ಲಿ ``ಹೊಂದಿಕೊಳ್ಳಲು'', ``ಗುಂಪಿನಲ್ಲಿ ಸೇರಲು'', ``ಜನಪ್ರಿಯ''ರಾಗಲು ಹಾತೊರೆಯುತ್ತೇವಷ್ಟೆ. ಆದರೆ "Third Act" ನಲ್ಲಿ ಅವೆಲ್ಲವನ್ನೂ ಪುನರ್‍ಪರಿಶೀಲಿಸಿ ನಗಲು ಸಾಧ್ಯವಿದೆ. ಹಿರಿಯ’ ಮಹಿಳೆಯರು ಜಗತ್ತಿನ ಅತಿ ದೊಡ್ಡ ಗುಂಪು ಎಂಬುದನ್ನು ಮರೆಯುವಂತಿಲ್ಲ. ಅವರು ಹಿಂದೆ ಹೋಗಿ, ‘Life Review’ ಮಾಡುವುದು, ಪೂರ್ಣ' ವಾಗುವುದು ಇಡೀ ಜಗತ್ತಿನಲ್ಲಿ ಒಂದು ಸಾಂಸ್ಕøತಿಕ ಬದಲಾವಣೆಯನ್ನೇ ತರಲು ಸಾಧ್ಯವಿದೆ.ಯುವ’ ಮಹಿಳೆಯರಿಗೆ, ಹುಡುಗಿಯರಿಗೆ ಇದೊಂದು ಮಾದರಿಯೂ ಆಗಬಲ್ಲದು.


ಡಾ. ಕೆ.ಎಸ್. ಪವಿತ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *