ಹೆಣ್ಣು ಹೆಜ್ಜೆ / ಲಾಕ್ ಡೌನ್ ತೆರೆದಿಟ್ಟ ಹಿಂಸೆಯ ಹೊಸ ಮುಖಗಳು – ಡಾ. ಕೆ.ಎಸ್. ಪವಿತ್ರ

ಉದ್ಯೋಗ ಸ್ಥಳದಲ್ಲಿ ವಿವಿಧ ರೀತಿಯ ಕಿರುಕುಳಗಳಿಗೆ ಒಳಗಾಗುತ್ತಿದ್ದ ಮಹಿಳೆಯರು ಈಗ ಮನೆಯ ಸುರಕ್ಷತೆಯಲ್ಲಿ, ಆರಾಮವಾಗಿ ಕೆಲಸ ಮಾಡುತ್ತಿರಬಹುದು ಎಂದು ನಮಗನ್ನಿಸುತ್ತದೆಯಲ್ಲವೇ? ಆದರೆ ಇದು ನಿಜವಾಗಿಲ್ಲ. ಕೆಲಸದ ಸ್ಥಳ ಬದಲಾಗಿದೆ, ಕಿರುಕುಳದ ರೂಪ ಹೊಸತಾಗಿದೆ. ನಾವು ಊಹಿಸದಷ್ಟು ವೈವಿಧ್ಯಮಯವಾಗಿದೆ. ಸಮಸ್ಯೆಗಳಿಗೆ ಒಳಗಾಗಿರುವ ಮಹಿಳೆಯರಿಗೆ ಕಿರುಕುಳದ ವಿಚಾರಕ್ಕೆ ಯಾರ ಬೆಂಬಲವೂ ಇರದಂತಾಗಿದೆ. ಅದನ್ನು ಸಹಿಸಲಾರದೆ, ಆರ್ಥಿಕ ಸ್ವಾವಲಂಬನೆ ಕಳೆದುಕೊಳ್ಳಲಾರದೆ ಸಂದಿಗ್ಧ ಪರಿಸ್ಥಿತಿಯಲ್ಲಿ ಮನಸ್ಸೇ ಲಾಕ್‍ಡೌನ್ ಆಗಿಬಿಟ್ಟಿದೆ!


ಸೋಂಕು ಹರಡುತ್ತದೆಂಬ ಭಯ -ಆತಂಕಗಳ ನಡುವೆ ಬಹು ಜನ ಮೊರೆ ಹೋಗಿರುವುದು ಆನ್‍ಲೈನ್ ಉದ್ಯೋಗ-ವ್ಯವಹಾರಗಳಿಗೆ.ಆನ್‍ಲೈನ್ ಮುಖಾಂತರ ಉದ್ಯೋಗ-ಕಾರ್ಯಗಳು ಮುಂದುವರೆದಂತೆ ಮಹಿಳೆಯರ ಮೇಲಿನ ಹಿಂಸೆಯ ವಿಧಗಳೂ ಹಲವು ಆಯಾಮಗಳನ್ನು ಪಡೆದುಕೊಂಡಿದೆ. ಸೋಂಕು ತಗುಲೀತೆಂಬ ಭಯವನ್ನೂ ಮೀರಿ ಖಿನ್ನತೆಯ ಚಿಕಿತ್ಸೆಗೆಂದು ಬಂದ ಮಹಿಳೆ ತನ್ನ ಅಳಲು ತೋಡಿಕೊಂಡ ಬಗೆ ಹೀಗೆ – “ಡಾಕ್ಟ್ರೇ, ಇಷ್ಟು ದಿನ ನನ್ನ ಪತಿಯ ಬೈಗುಳ, ಚುಚ್ಚು ಮಾತುಗಳನ್ನು ಯಾರ ಬಳಿಯಾದರೂ ಹೇಳಿಕೊಳ್ಳಲು ಅವಕಾಶವಿರುತ್ತಿತ್ತು. ಮತ್ತೊಬ್ಬರ ಬಳಿ ಹೇಳಿಕೊಂಡರೆ ಸ್ವಲ್ಪವಾದರೂ ಸಮಾಧಾನ, ಹೇಗೋ ಸಹಿಸಿಕೊಳ್ಳುವ ಸಾಮಥ್ರ್ಯ ಇರುತ್ತಿತ್ತು. ಈಗ ಇವರೂ ಮನೆಯಲ್ಲೇ ಇರುವ, ನಾನೂ ಹೊರಗೆ ಹೋಗಲಾಗದ ಪರಿಸ್ಥಿತಿ. ನನ್ನ ಅಳಲನ್ನು ಇವರೆದುರು ಬೇರೆಯವರಿಗೆ ಹೇಳುವುದು ಹೇಗೆ? ಬೈಗುಳ, ಕೆಟ್ಟ ಮಾತುಗಳಂತೂ ಹತ್ತು ಪಟ್ಟು ಹೆಚ್ಚಿದೆ. ಕೊರೋನಾ ಸೋಂಕಿನಿಂದ ಸಾಯುತ್ತೇನೋ ಇಲ್ಲವೋ, ಈ ಹಿಂಸೆ ತಾಳಲಾರದೆ ನಾನೇ ನೇಣುಬಿಗಿದುಕೊಂಡು ಬಿಡೋಣ ಅನ್ನಿಸುತ್ತೆ."

ಉದ್ಯೋಗ ಸ್ಥಳದಲ್ಲಿ ವಿವಿಧ ರೀತಿಯ ಕಿರುಕುಳಗಳಿಗೆ ಒಳಗಾಗುತ್ತಿದ್ದ ಮಹಿಳೆಯರು ಈಗ ಮನೆಯ ಸುರಕ್ಷತೆಯಲ್ಲಿ, ಆರಾಮವಾಗಿ ಕೆಲಸ ಮಾಡುತ್ತಿರಬಹುದು ಎಂದು ನಮಗನ್ನಿಸುತ್ತದೆಯಲ್ಲವೇ? ಆದರೆ ಇದೂ ನಿಜವಾಗಿಲ್ಲ. ಕೆಲಸದ ಸ್ಥಳ ಬದಲಾಗಿದೆ, ಕಿರುಕುಳದ ರೂಪ ಹೊಸತಾಗಿದೆ. ನಾವು ಊಹಿಸದಷ್ಟು ವೈವಿಧ್ಯಮಯವಾಗಿದೆ. ಸೋಂಕಿನ ಸಮಯದಲ್ಲಿ ಮನೆಯಿಂದಲೇ ಕಛೇರಿ ಕೆಲಸ ನಿರ್ವಹಿಸುವ ಮಹಿಳೆಯರು `ಆನ್‍ಲೈನ್' ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಒಬ್ಬ ಮಹಿಳಾ ಉದ್ಯೋಗಿ ಹೇಳಿದ ಅನುಭವ ಇದು “ನೀನು ವೀಡಿಯೋ ಕಾಲ್‍ಗೆ ಬರಲೇಬೇಕು ಎಂದು ಆದೇಶಿಸುತ್ತಾರೆ. ನಿನ್ನ ಮುಖ ನೋಡಿದ್ರೆ ಮಾತ್ರ ನನ್ನ ದಿನ ಚೆನ್ನಾಗಿರುತ್ತೆ ಈ ರೀತಿಯ ಮಾತುಗಳನ್ನು ಹೇಳ್ತಾರೆ. ಇದು ಹೊಗಳಿಕೆ ಅಂತ ಬೇರೆಯವ್ರಿಗೆ ಅನಿಸಬಹುದು. ಆದರೆ ನನಗೆ ಮಾತ್ರ ತುಂಬಾ ಇರಿಸು ಮುರಿಸಾಗುತ್ತೆ”. ಮತ್ತೊಬ್ಬ ಯುವತಿಯ ಅನುಭವ ಹೀಗಿದೆ. “ಕಛೇರಿಯ ಅರ್ಜೆಂಟ್ ಕೆಲಸ ಇದೆ. ಈಗಲೇ ವೀಡಿಯೋ ಕಾಲ್ ಮಾಡಿ" ಎಂಬ ಕರೆ ಬರುತ್ತದೆ. ವೀಡಿಯೋ ಕಾಲ್ ಮಾಡಿದರೆ ಅರೆಬರೆ ಬಟ್ಟೆ ಹಾಕೊಂಡ ಬಾಸ್. ಬಾತ್‍ರೂಂನಲ್ಲಿ ಮೊಬೈಲ್ ಇಟ್ಟುಕೊಂಡು ಮಾತನಾಡುವ ಮ್ಯಾನೇಜರ್. `ಏನು ನೀವು ಮನೆಯಲ್ಲೂ ಆಫೀಸಿನ ತರವೇ ಡ್ರೆಸ್ ಹಾಕಿಕೊಂಡಿರುತ್ತೀರಾ?' ಎಂಬ ಪ್ರಶ್ನೆ ಬೇರೆ. ಸಂಭಾಷಣೆಯಲ್ಲಿಯೂ ಅಷ್ಟೆ. ಕೆಲಸದ ಬಗೆಗೆ ಬೇಗ ಹೇಳಿ ಮುಗಿಸುವ ಬದಲು, ಅನವಶ್ಯಕ ಮಾತುಗಳು, ಮೀಟಿಂಗ್‍ನ್ನು ಸುಮ್ಮನೆ ಎಳೆಯುವುದು''.

ಸೋಂಕಿನ ಪರಿಸ್ಥಿತಿಯಲ್ಲಿ ಉದ್ಯೋಗ ನೀಡುವ ಕಂಪೆನಿ - ಫರ್ಮ್‍ಗಳೂ ಉದ್ಯೋಗಿಗಳನ್ನು ತೆಗೆದುಹಾಕಲೂ ತುದಿಗಾಲಲ್ಲಿ ನಿಂತಿವೆ. ಇದು ಇಂಥ ಕಿರುಕುಳಗಳನ್ನು ಮಹಿಳೆಯರು ಸಹಿಸಿಕೊಳ್ಳುವಲ್ಲಿ ಒಂದು ಪ್ರಮುಖ ಕಾರಣವೂ ಆಗಿದೆ. ಮನೆಯ ಜನರಿಗೆ ಈ ಬಗ್ಗೆ ಹೇಳಿದರೆ ಬಹುಬಾರಿ ಅವರ ಪ್ರತಿಕ್ರಿಯೆ “ನೀನೇ ಅವರಿಗೆ ಸಲಿಗೆ ನೀಡಿದ್ದೀಯಾ, ನಗುನಗುತ್ತಾ ಮಾತನಾಡಿದ್ದೀಯಾ. ಇಲ್ಲದಿದ್ದರೆ ಅವರಿಗೆ ಎಲ್ಲಿಂದ ಧೈರ್ಯ ಬರಬೇಕು? ಈಗಲೂ ಕೆಲಸವನ್ನೇ ಬಿಡು, ಆರಾಮಾಗಿರು!”. ಹಾಗಾಗಿ ಇಂಥ ಸಮಸ್ಯೆಗಳಿಗೆ ಒಳಗಾಗಿರುವ ಮಹಿಳೆಯರಿಗೆ ಕಿರುಕುಳದ ವಿಚಾರಕ್ಕೆ ಯಾರ ಬೆಂಬಲವೂ ಇರದಂತಾಗಿದೆ. ಅದನ್ನು ಸಹಿಸಲಾರದೆ, ಆರ್ಥಿಕ ಸ್ವಾವಲಂಬನೆ ಕಳೆದುಕೊಳ್ಳಲಾರದೆ ಸಂದಿಗ್ಧ ಪರಿಸ್ಥಿತಿಯಲ್ಲಿ ಮನಸ್ಸೇ ಲಾಕ್‍ಡೌನ್ ಆಗಿಬಿಟ್ಟಿದೆ!

ಕೋವಿಡ್ ತರಹದ ವ್ಯಾಪಕ, ದೀರ್ಘ ಹಾಗೂ ತೀವ್ರ ಸೋಂಕು ರೋಗಗಳು ಪ್ಲೇಗ್‍ನಂತೆ, ಜಗತ್ತನ್ನು ಹಲವು ವಿಧಗಳಲ್ಲಿ ಬದಲಿಸುತ್ತವೆ. ಮಹಿಳೆಯರ ಮತ್ತು ಮಕ್ಕಳ ಸಮಸ್ಯೆಗಳಿಗಂತೂ ಹೊಸ ಆಯಾಮಗಳೇ ಹುಟ್ಟಿಕೊಳ್ಳುತ್ತವೆ. ನಮ್ಮ ಕಾನೂನು-ಸಾಮಾಜಿಕ ವ್ಯವಸ್ಥೆಗಳು ಹಠಾತ್ತಾಗಿ ಬದಲಾಗದ ಸ್ಥಿತಿಯಲ್ಲಿ ನಾವಿದ್ದೇವೆ. ಹೀಗಿರುವಾಗ ರಕ್ಷಣೆಯ ಮಾರ್ಗಸೂಚಿ-ಕಾನೂನು-ಉದ್ಯೋಗ ನಿಯಮಗಳು ಬದಲಾಗುವವರೆಗೆ ಕಾಯದೆ ಸಮಸ್ಯೆಗಳಿಗೆ ತುರ್ತು ಪರಿಹಾರ ಕಂಡುಕೊಳ್ಳುವುದು, ದೈಹಿಕ-ಮಾನಸಿಕ ಸುರಕ್ಷತೆಯನ್ನು ಕಾಯ್ದುಕೊಳ್ಳುವುದು ಮುಖ್ಯವಾಗುತ್ತದೆ. ಇದು ಮಹಿಳೆಯರ ಮೇಲಿನ ಹಿಂಸೆಯನ್ನೂ ಒಳಗೊಂಡಂತೆ ಹಲವು ಸಮಸ್ಯೆಗಳಿಗೆ ಅನಿವಾರ್ಯ.

ಮೊದಲು ಉದ್ಯೋಗಸ್ಥ ಮಹಿಳೆಯರ ವಿಷಯಕ್ಕೆ ಬರೋಣ. ಜಗತ್ತಿನ ಶೇಕಡ 70 ರಷ್ಟು ಮಹಿಳೆಯರು`ಕೆಲಸ’ ಎಂದು ಗುರುತಿಸಲ್ಪಡದ ಉದ್ಯೋಗದಲ್ಲಿ ದುಡಿಯುತ್ತಾರೆ. ಇವು ಅನೌಪಚಾರಿಕ ಆರ್ಥಿಕತೆ- Informal Economy ಗೆ ಸಂಬಂಧಿಸಿದವು. ಅಂದರೆ ಅವರ ಉದ್ಯೋಗ ನಿಶ್ಚಿತವಲ್ಲ, ಯಾವಾಗ ಬೇಕಾದರೂ ಅವರನ್ನು ಕೆಲಸದಿಂದ ತೆಗೆಯಬಹುದು. ಸಿಗುವ ಸಂಬಳ ಕಡಿಮೆ. ಸಹಜವಾಗಿ ಉಳಿತಾಯವೂ ಕಡಿಮೆ, ಇದರ ಜೊತೆಗೆ ಶಾಲೆಗಳೂ ಮುಚ್ಚಲ್ಪಟ್ಟಿವೆ. ಮಕ್ಕಳನ್ನು ಶಾಲೆಗೆ ಕಳಿಸಿ, ತಾನು ಆಫೀಸಿಗೆ ಓಡುತ್ತಿದ್ದ ಅಮ್ಮನಿಗೆ ಈಗ ಮಕ್ಕಳನ್ನು ಮನೆಯಲ್ಲಿ ಹೇಗೆ ಬಿಟ್ಟು ಹೋಗುವುದು ಎಂಬ ಚಿಂತೆ. ಇವೆಲ್ಲವೂ ದಾರಿಯಾಗುವುದು ಆರ್ಥಿಕತೆಯನ್ನು ಕಳೆದುಕೊಳ್ಳುವುದರತ್ತ. ಉದ್ಯೋಗಿಗಳನ್ನು ತೆಗೆದುಹಾಕಲೆಂದೇ ಕಾಯುತ್ತಿರುವ, ತಾವೇ ನಷ್ಟದಲ್ಲಿ ನರಳುತ್ತಿರುವ ಕಂಪೆನಿಗಳು ಇಂಥ ಸಂದರ್ಭದಿಂದ ಮೊದಲು ಮಹಿಳಾ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಸಾಧ್ಯತೆ ಹೆಚ್ಚು. ಅಥವಾ ಗಂಡ-ಹೆಂಡತಿಯರಲ್ಲಿ ಯಾರ ಕೆಲಸ ಹೆಚ್ಚು ಮುಖ್ಯ ಎಂಬ ಪ್ರಶ್ನೆ ಬಂದಾಗ ಎಲ್ಲರೂ ಒಮ್ಮೆಲೇ ಹೇಳುವ ಮಾತು “ಅವನು ಕೆಲಸ ಬಿಟ್ಟು ಮನೆಯಲ್ಲಿ ಕುಳಿತಿರಲು ಸಾಧ್ಯವೇ. ಉದ್ಯೋಗಂ ಪುರುಷ ಲಕ್ಷಣಂ! ನೀನೇ ಈಗ ಬಿಡು. ಆ ಮೇಲೆ ಎಲ್ಲ ಸರಿ ಹೋದ ಮೇಲೆ ಮತ್ತೆ ಸೇರಿದಂತಾಯಿತು''. ಮಹಿಳೆಯರು ಇಂಥ ಸಂದರ್ಭದಲ್ಲಿ ಮಾಡಿಕೊಳ್ಳುವ ಹೊಂದಾಣಿಕೆಯೆಂದರೆ ಕೆಲಸ ಬಿಡುವುದು.

ಆರ್ಥಿಕ ಸ್ವಾವಲಂಬನೆಯ ನಷ್ಟ ಕೇವಲ ದುಡ್ಡು ಇರದಿರುವುದಿಲ್ಲ, ನಿರ್ಧಾರಗಳನ್ನು ತೆಗೆದುಕೊಳ್ಳುವ-ತನಗೇನು ಬೇಕು-ಬೇಡ ಎಂಬುದನ್ನು ಹೇಳುವ, ಮನ್ನಣೆಯನ್ನು ಗಳಿಸಿಕೊಳ್ಳುವ- ಈ ಎಲ್ಲಕ್ಕೂ ಸಂಬಂಧಿಸಿರುವುದೇ. ಇದು ಮಹಿಯರ ಮೇಲೆ, ಅವರ ಮೂಲಕ ಮಕ್ಕಳ ಮೇಲೆ ಬೀರುವ ಒತ್ತಡ ಅಪಾರ. ಹಿಂಸೆಯನ್ನು ನಾವು ಸಾಮಾನ್ಯವಾಗಿ ಕಲ್ಪಿಸಿಕೊಳ್ಳುವ ರೀತಿ `ದೈಹಿಕ', ಅಂದರೆ ನಮ್ಮ ಮಟ್ಟಿಗೆ ಹಿಂಸೆಯೆಂದರೆ ಹೊಡೆಯುವುದು, ಬಡಿಯುವುದು, ಲೈಂಗಿಕವಾಗಿ ಅದೂ ದೈಹಿಕವಾಗಿ ಎಂದೇ ನಾವು ಅರ್ಥೈಸಿಕೊಂಡು ಬಿಡುವಂತೆ) ತಲೆ ಚಚ್ಚುವುದು, ಗುದ್ದುವುದು ಇತ್ಯಾದಿ. ಆದರೆ ದೈಹಿಕ -ಲೈಂಗಿಕ ಹಿಂಸೆಗಳಲ್ಲಿ `ಮಾನಸಿಕ' ವಾದ ಹಿಂಸೆ, `ಮೌಖಿಕ' (Verbal) ವಾದ ಹಿಂಸೆ ಯಾವುದೇ ಸಮಯದಲ್ಲಿಯೂ ಅವುಗಳ ಹಿಂದೆ ಇದ್ದೇ ಇರುತ್ತದೆ ಎಂಬುದನ್ನು ನಾವು ಗಮನಿಸುವುದಿಲ್ಲ. ಅಷ್ಟೇ ಅಲ್ಲ, ದೈಹಿಕವಲ್ಲದ ಹಿಂಸೆಗಳನ್ನು ಅಳೆಯುವುದು ಕಾನೂನಿಗೆ ಕಷ್ಟ. ರೂಢಿಗತ ಸಾಮಾಜಿಕ ಧೋರಣೆಗಳನ್ನು ಅದು ಅವಲಂಬಿಸಿರುತ್ತದೆ. `ಏನೋ ತಮಾಷೆಗೆ ಮಾತಾಡ್ತಾರೆ', `ಇವಳೇ ತುಂಬಾ ಸೂಕ್ಷ್ಮ' ಎಂಬಂತಹ ಮಾತುಗಳಿಂದ ಅವುಗಳನ್ನು ತಳ್ಳಿ ಹಾಕುವ ಪ್ರಯತ್ನಗಳೇ ಅಧಿಕ. ಅದರರ್ಥ ತತ್‍ಕ್ಷಣ ವಿಚ್ಛೇದಕ್ಕೆ ಅರ್ಜಿ ಹಾಕಬೇಕೆಂದಲ್ಲ. ಆದರೆ ಸಮಸ್ಯೆಯನ್ನು ಅವಲೋಕಿಸುವ, ಎದುರಿಸುವ ಪ್ರಯತ್ನದಲ್ಲಿ ಮಹಿಳೆಯೊಬ್ಬಳನ್ನೇ ಬಿಟ್ಟುಬಿಟ್ಟರೆ? ಇವೆಲ್ಲ ಸವಾಲುಗಳೂ ಮಹಿಳಾ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಇದ್ದೇ ಇವೆ.

ಹೊಸ ಸವಾಲು: ಆದರೆ, ಲಾಕ್‍ಡೌನ್ ಸಂದರ್ಭ ಹೊಸ ಸವಾಲುಗಳನ್ನು ಹುಟ್ಟು ಹಾಕಿದೆ. ಸಾಮಾಜಿಕ ಸಂಬಂಧಗಳಿಗೆ ನಾವೀಗ ಆಶ್ರಯಿಸಬೇಕಾದ್ದು ಅಂತ ಮಾತ್ರ. ಕೈಯ್ಯಲ್ಲಿ ದುಡ್ಡಿಲ್ಲ. ತಾತ್ಕಾಲಿಕವಾಗಿಯಾದರೂ ಲಭ್ಯವಿರುತ್ತಿದ್ದ `ಖಾಸಗೀ' ಸಮಯಗಳು ಈಗಿಲ್ಲ. ಬೇರೆಯವರು ಸಹಾಯ ಮಾಡಬೇಕೆಂದರೂ ಅದನ್ನು ನೀಡುವ ಬಗೆ ಹೇಗೆ? ಲಾಕ್‍ಡೌನ್ ಸಂದರ್ಭದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಅಂಕಿ ಅಂಶಗಳು ಆತಂಕಕಾರಿಯಾಗಿವೆ. ಮಾರ್ಚ್ 25, 2020ರಿಂದ ಮೇ 31, 2020ರವರೆಗೆ 1,477 ಕೌಟುಂಬಿಕ ಹಿಂಸೆಯ ದೂರುಗಳು ದಾಖಲಾಗಿವೆ. ಈ 68 ದಿನಗಳ ಅವಧಿಯಲ್ಲಿ ಕಳೆದ 10 ವರ್ಷಗಳಲ್ಲಿ ಇದು ಅತಿ ಹೆಚ್ಚು. ದೇಶದ ರಾಜಧಾನಿ ದೆಹಲಿಯೇ ಈ ವಿಷಯದಲ್ಲಿ ಮುಂದು! ಮನೆಯನ್ನು `ಸುರಕ್ಷತೆ' ಯೊಂದಿಗೆ ನಾವು ಸಮೀಕರಿಸಿಕೊಳ್ಳುತ್ತೇವೆ. ಆದರೆ, `ಆಪ್ಯಾಯಮಾನ ಭಯೋತ್ಪಾದಕತೆ'ಯ (Iಟಿಣimಚಿಣe ಣeಡಿಡಿoಡಿism) ಅನುಭವವನ್ನೂ ಅದು ನೀಡಲು ಸಾಧ್ಯವಿದೆ ಎಂಬುದು ಇಂಥ ಮಹಿಳೆಯರ ವಿಷಯದಲ್ಲಿ ಸತ್ಯ ಎನಿಸುತ್ತದೆ. "ಸೋಂಕು ಕಥೆ ಮುಗಿಯಲಿ, ಆ ಮೇಲೆ ಈ ಎಲ್ಲಾ ವಿಷಯಗಳ ಬಗ್ಗೆ ತಲೆ ಕೆಡೆಸಿಕೊಳ್ಳೋಣ" ಎನ್ನುವಂತಿಲ್ಲ. ಏಕೆಂದರೆ, ಮಹಿಳೆಯರ ಮೇಲಿನ ದೌರ್ಜನ್ಯ ಭಾರತಕ್ಕೆ ಸೀಮಿತವಾಗಿಲ್ಲ. ಮುಂದುವರೆದ ದೇಶಗಳಾದ ಆಸ್ಟ್ರೇಲಿಯಾ, ಫ್ರಾನ್ಸ್‍ಗಳಲ್ಲೂ 300% ಏರಿಕೆ ದೌರ್ಜನ್ಯದಲ್ಲಿ ಈ ಸಮಯದಲ್ಲಿ ಕಂಡುಬಂದಿದೆ. ವಿಶ್ವಸಂಸ್ಥೆಯ ಮುಖ್ಯಸ್ಥ ಆ್ಯಂಟೋನಿಯೋ ಗೆಟೆರೆಸ್ ನೀಡಿರುವ ಕರೆ ಇಲ್ಲಿ ಉಲ್ಲೇಖನಾರ್ಹ.“ಶಾಂತಿ ಎನ್ನುವುದು ಯುದ್ಧದ ಗೈರು ಹಾಜರಿಯಲ್ಲ, ಮನೆಗಳಲ್ಲಿನ ಶಾಂತಿಗಾಗಿ ನಾನು ಮನವಿ ಮಾಡುತ್ತೇನೆ. ಎಲ್ಲಾ ಸರ್ಕಾರಗಳೂ ಮಹಿಳೆಯರ ಸುರಕ್ಷತೆಗಾಗಿ ಸೋಂಕು ನಿಭಾಯಿಸುವುದರ ಜೊತೆ ಜೊತೆಯಲ್ಲಿಯೇ ಕ್ರಮ ತೆಗೆದುಕೊಳ್ಳಬೇಕು”.

ಆರೋಗ್ಯ ವ್ಯವಸ್ಥೆಯೂ ಸೋಂಕನ್ನು ನಿಭಾಯಿಸುವ ಗಡಿಬಿಡಿಯಲ್ಲಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಬಗ್ಗೆ ಚಿಕಿತ್ಸೆ ನೀಡಲು ಹೊಸ ಸವಾಲು ಎದುರಿಸುತ್ತಿದೆ. ಸುಟ್ಟ ಗಾಯಗಳಿಗೆ ಆ್ಯಂಬುಲೆನ್ಸ್ ದೊರೆಯದೆ ಮಹಿಳೆ ನರಳುವ, ಕಾಲು ಮುರಿದರೆ ಚಿಕಿತ್ಸೆ ದೊರೆಯದ ಇಂಥ ಪ್ರಕರಣಗಳನ್ನು ಉದಾಹರಿಸಬಹುದು. ಆನ್‍ಲೈನ್ಲ್ಲಿ ಮಹಿಳೆಯರು ಹೇಗೆ ತಮ್ಮ ಸಮಸ್ಯೆಗಳನ್ನು ಸಂಗಾತಿಯ ಎದುರಲ್ಲಿ ಹೇಳಿಕೊಳ್ಳಬಹುದು ಎಂಬ ಬಗ್ಗೆಯೂ ಹೊಸ ಪರಿಭಾಷೆಯನ್ನೇ ಹುಟ್ಟು ಹಾಕಬೇಕಾಗಿದೆ. ಸೃಜನಶೀಲವಾಗಿ ಪರಿಹಾರ ಕ್ರಮಗಳನ್ನು ನಾವು ಹುಡುಕಬೇಕಾದ ಸಮಯವಿದು. ಮೊಟ್ಟ ಮೊದಲು ಆಂತರಿಕವಾಗಿ ಗಟ್ಟಿಯಾಗುವುದು ಅತಿಮುಖ್ಯ. ಹಾಗೆಯೇ ಯಾವುದೇ ರೀತಿಯ ಹಿಂಸೆಗೆ “ಹಾಗೆ ಮಾಡುವಂತಿಲ್ಲ” ಎಂಬುದನ್ನು ದೃಢವಾಗಿ ಸ್ವತಃ ಹಿಂಸೆಗೆ ಒಳಗಾಗುತ್ತಿರುವ ಮಹಿಳೆ ಹೇಳುವುದೇ ಯಾವುದೇ ಹಿಂಸೆಯನ್ನು ತಡೆಯುವ ಪ್ರಥಮ ಹಂತ. ಆರ್ಥಿಕವಾಗಿ ಸಬಲರಾಗುವುದಕ್ಕೆ ಮನೆಯಲ್ಲಿಯೇ ಅಂತರ್ಜಾಲದ ಮೂಲಕ ಹೇರಳ ಅವಕಾಶಗಳಿವೆ. ಇ-ಬ್ಯಾಂಕಿಂಗ್ ಮಾಡುವ ಕ್ರಮಗಳನ್ನು ಎಲ್ಲ ಮಹಿಳೆಯರೂ ಕಲಿಯುವುದು ಅತ್ಯವಶ್ಯ. ಸರ್ಕಾರವೂ, ಸ್ವಯಂ ಸೇವಾ ಸಂಸ್ಥೆಗಳು ದೌರ್ಜನ್ಯವನ್ನು ಮಹಿಳೆ ಸುಲಭವಾಗಿ ವರದಿ ಮಾಡಲು ಕೆಲವು ನಿರ್ದಿಷ್ಟ ಸ್ಥಳಗಳನ್ನು (ಸೂಪರ್ ಮಾರ್ಕೆಟ್‍ಗಳು, ದಿನಸಿ ಅಂಗಡಿಗಳ, ಮೆಡಿಕಲ್ ಷಾಪ್‍ಗಳು) ಸೂಚಿಸಿ, ಅಲ್ಲಿ ಗೌಪ್ಯತೆಯನ್ನು ಕಾಯ್ದುಕೊಳ್ಳುವ ಭರವಸೆ ನೀಡಿ, ಮಾಹಿತಿ ನೀಡುವ ವ್ಯವಸ್ಥೆ ಮಾಡಬಹುದು. ಆನ್‍ಲೈನ್ ಕೆಲಸಗಳಿಗೆ ಪುರುಷ -ಸ್ತ್ರೀ ಇಬ್ಬರಿಗೂ ಅನ್ವಯವಾಗುವಂತಹ ಡ್ರೆಸ್‍ಕೋಡ್ ವಸ್ತ್ರಸಂಹಿತೆ ಮತ್ತು ನಡವಳಿಕೆ ಸಂಹಿತೆಗಳ ಬಗೆಗೆ ಸರ್ಕಾರ ಸೋಂಕಿನ ಈ ದಿನಗಳಿಂದಲೇ ಕ್ರಮ ಕೈಗೊಳ್ಳಬೇಕು. ಕಾನೂನುಗಳಿಗೆ ಸೂಕ್ತ ತಿದ್ದುಪಡಿಯ ಬಗೆಗೆ ಅನುಮೋದನೆಗೆ ಕಾಯದೆ ಸುಗ್ರೀವಾಜ್ಞೆಯ ಮೂಲಕ ಆದೇಶ ಹೊರಡಿಸಬಹುದು.

ದೌರ್ಜನ್ಯದ ವಿಧಗಳು ಹಲವು. ಆಯಾಮಗಳೂ ವಿಸ್ತರಿಸುತ್ತಿವೆ. ಆದರೆ ನೇರ ಹಿಂಸೆಯಿಂದಾಗಲೀ, ಆನ್‍ಲೈನ್ ಹಿಂಸೆಯಿಂದಾಗಲೀ ನರಳುವಿಕೆ ನಿಶ್ಚಿತ. ಹಾಗೆಯೇ ಮಾನಸಿಕವಾಗಿ ಸಬಲರಾಗಿ, ಹಿಂಸೆಗೆ `ಇಲ್ಲ’ ಎಂದು ಹೇಳುವುದು ಯಾರಿಗೂ ಕಾಯದೆ, ವೈಯಕ್ತಿಕವಾಗಿ ಪ್ರತಿ ಮಹಿಳೆಯೂ ತತ್‍ಕ್ಷಣ ಮಾಡಬಹುದಾದ ಒಂದು ತಂತ್ರ.

  • ಡಾ| ಕೆ.ಎಸ್. ಪವಿತ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಹೆಣ್ಣು ಹೆಜ್ಜೆ / ಲಾಕ್ ಡೌನ್ ತೆರೆದಿಟ್ಟ ಹಿಂಸೆಯ ಹೊಸ ಮುಖಗಳು – ಡಾ. ಕೆ.ಎಸ್. ಪವಿತ್ರ

  • July 26, 2020 at 3:33 pm
    Permalink

    ಲೇಖನ ಮಹಿಳೆಯರ ಇಂದಿನ ಸ್ಥಿತಿಯನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದೆ.ಎಂದಿನಂತೆ ಡಾ.ಪವಿತ್ರಾರವರದ್ದು ಸುಂದರ ನಿರೂಪಣೆ.

    Reply

Leave a Reply to Geethanjali Prasanna Cancel reply

Your email address will not be published. Required fields are marked *