ಹೆಣ್ಣು ಹೆಜ್ಜೆ/ ಮಾರ್ಗರೆಟ್ ಮತ್ತು ಸ್ಕಾರ್ಲೆಟ್‍- ಡಾ. ಕೆ.ಎಸ್. ಪವಿತ್ರ


ಬಹುಶಃ ಆ ಕಾದಂಬರಿಯನ್ನು ನಾನು ಓದಿದ್ದು ಹದಿನೆಂಟರ ಹರೆಯದಲ್ಲಿ. ಬರೋಬ್ಬರಿ ಸಾವಿರದ ಹತ್ತು ಪುಟಗಳ, ಸಣ್ಣ ಅಕ್ಷರದ, ಕಳಪೆ ಗುಣಮಟ್ಟದ ಪ್ರಿಂಟ್‍ನ ಪುಸ್ತಕ ಅದಾಗಿತ್ತು. ಅದು ರೊಮ್ಯಾಂಟಿಕ್' ಎಂಬ ಕಾರಣಕ್ಕೆ ಗೆಳತಿಯೊಬ್ಬಳು ಗ್ರಂಥಾಲಯದಿಂದ ಎರವಲು ತೆಗೆದುಕೊಂಡು, ಅದು ತುಂಬಾ ದಪ್ಪ ಬುಕ್’, ಪ್ರೀತಿಯ ಪ್ರಸಂಗಗಳನ್ನು ಮಧ್ಯೆ ಮಧ್ಯೆ ಹುಡುಕಿ ಓದಬೇಕು' ಎಂಬ ಕಾರಣಕ್ಕೆ ನನಗೆ ನೀಡಿದ್ದಳು! ಮೊದಲ ಬಾರಿಗೆ ಓದಿದಾಗ ನಾನು ಓದಿದ್ದು ನಾಯಕಿ ಸ್ಕಾರ್ಲೆಟ್ ಮತ್ತು ನಾಯಕ ರೆಟ್‍ಬಟ್ಲರ್‍ನ ಪ್ರೇಮದ ಬಗೆಗೆ ಕುತೂಹಲದಿಂದಲಾದರೂ, ಆಗಲೂ ಕೊನೆಯವರೆಗೂ ಬಿಡದೆ ಓದುವಂತ ಕಾದಂಬರಿಯೇ ಆಗಿತ್ತು. ಅದಾದ ಮೇಲೆ ಹಲವು ಬಾರಿ ಆ ಪುಸ್ತಕವನ್ನು ನಾನು ಓದಿದೆ. ಹಾಗೆ ಓದುವಾಗ ಕಾದಂಬರಿಯ ನಾಯಕಿ ಸ್ಕಾರ್ಲೆಟ್ ಳ ಪಾತ್ರದ ಬಗ್ಗೆ ನನಗೆ ಇದ್ದ ಧೋರಣೆ ನಾನು ಬೆಳೆದಂತೆ ಬದಲಾಗುತ್ತಾ ಸಾಗಿದ್ದೇ ಈ ಲೇಖನ ಬರೆಯಲು ಪ್ರೇರಣೆ.

`ಗಾನ್ ವಿತ್ ದ ವಿಂಡ್' ಎಂಬ ಹೆಸರಿನ ಮಾರ್ಗರೆಟ್ ಮಿಚೆಲ್ ಬರೆದ ಆ ಕಾದಂಬರಿ ಮೊದಲು ಪ್ರಕಟಗೊಂಡಿದ್ದು 1936ರಲ್ಲಿ. ಅಮೇರಿಕೆಯ ಸಿವಿಲ್ ಯುದ್ಧ, ಅದು ತರುವ ನೋವು-ಬದಲಾವಣೆಗಳು, ನೀಗ್ರೋಗಳ ಬದಲಾಗುವ ಸ್ಥಾನ-ಮಾನ, ಇವೆಲ್ಲದರ ಚಿತ್ರಣ. ಮಾರ್ಗರೆಟ್ ಮಿಚೆಲ್ ಬರೆದದ್ದು ಒಂದೇ ಕಾದಂಬರಿಯಾದರೂ ಅದು ಎಷ್ಟು ಜನಪ್ರಿಯವಾಯಿತೆಂದರೆ ಈವರೆಗೆ 30 ಮಿಲಿಯನ್ ಪ್ರತಿಗಳು ಜಗತ್ತಿನಾದ್ಯಂತ ಪ್ರಕಟಗೊಂಡಿವೆ. 2014ರ ವೇಳೆಗೆ ನಡೆದ ಒಂದು ಎಣಿಕೆಯ ಅಧ್ಯಯನದ ಪ್ರಕಾರ ಬೈಬಲ್‍ನ ನಂತರ ಅದು ಎರಡನೇ ಅತಿ ಹೆಚ್ಚು ಕೊಳ್ಳಲ್ಪಟ್ಟ ಪುಸ್ತಕ! ಹದಿನೆಂಟರ ಹರೆಯದಲ್ಲಿ ಈ ಕಾದಂಬರಿಯನ್ನು ಮೊದಲ ಬಾರಿ ಓದುವಾಗ ಅದು ಮಹಿಳೆಯರಿಂದ ಬರೆಯಲ್ಪಟ್ಟ ಕಾದಂಬರಿಯೆಂದಾಗಲೀ, ಅದರ ತುಂಬ ತುಂಬಿರುವ ಮಹಿಳೆಯರ ವೈವಿಧ್ಯಮಯ ಗುಣಗಳಾಗಲೀ ನನ್ನ ಗಮನಕ್ಕೆ ಬರಲಿಲ್ಲ ಎನ್ನುವುದು ಸತ್ಯ. ಆದರೆ ಅದನ್ನು ಮತ್ತೆ ಮತ್ತೆ ಓದಲಾರಂಭಿಸಿದಂತೆಸ್ತ್ರೀ ಸ್ವಭಾವ’ದ ವೈಚಿತ್ರ್ಯ -ವೈಪರೀತ್ಯಗಳು, ಜೀವನೋತ್ಸಾಹ-ಜೀವನ ಶ್ರದ್ಧೆಗಳು ನನ್ನನ್ನು ಸೆಳೆದವು.

ಗಾನ್ ವಿತ್ ದ ವಿಂಡ್' ಕಾದಂಬರಿಯ ಥೀಮ್' ಮುಖ್ಯ ವಸ್ತು ಏನು? ಯುದ್ಧ-ದಾಸ್ಯ-ಭೂಮಿ-ಪ್ರೇಮ ವೈಫಲ್ಯ ಇವೆಲ್ಲದರ ನಡುವೆ ಮುಖ್ಯ ವಸ್ತುವಾಗಿ ಯಾವುದನ್ನು ಗುರುತಿಸುವುದು?! ಮಾರ್ಗರೆಟ್ ಮಿಚೆಲ್ ಹೇಳಿರುವುದನ್ನು ಗಮನಿಸಬಹುದು. “ಈ ಕಾದಂಬರಿಗೆ ಮುಖ್ಯ ವಸ್ತು ಏನೆಂದು ಗುರುತಿಸಬೇಕೆಂದರೆ ಅದು 'Survival' - ಉಳಿಯುವಿಕೆ'. ಯಾವುದೇ ರೀತಿಯ ವಿಕೋಪದ ಪರಿಸ್ಥಿತಿಗಳಲ್ಲಿ ಕೆಲವರಷ್ಟೇ ಹೇಗೆ ಹೋರಾಡಿ ಉಳಿಯುತ್ತಾರೆ? ಅಳಿದು ಹೋಗುವ ಇತರರಲ್ಲಿಲ್ಲದ ಯಾವ ಗುಣಗಳು ಉಳಿಯುವವರಲ್ಲಿರುತ್ತವೆ? ನನಗೆ ಗೊತ್ತಿರುವುದಿಷ್ಟೆ. ಹಾಗೆ ಉಳಿದುಕೊಳ್ಳುವವರು ಈ ಗುಣವನ್ನು 'Gumption' - ಛಾತಿ-ದಿಟ್ಟತನ-ಕೆಚ್ಚು ಎಂದು ಕರೆಯುತ್ತಾರೆ. ಆದ್ದರಿಂದಲೇ ನಾನು ಅಂಥ ದಿಟ್ಟತನ ಇರುವವರ ಬಗ್ಗೆ - ಇರದಿರುವವರ ಬಗ್ಗೆ ಈ ಕಾದಂಬರಿ ಬರೆದೆ''. ಇಡೀ ಕಾದಂಬರಿಯ ಕೇಂದ್ರ ಸ್ಕಾರ್ಲೆಟ್ ಓ ಹಾರಾಳ ಜೀವನ ಮತ್ತು ಆಕೆಯ ಜೀವನಾನುಭವಗಳು. ಮೊದಲ ಪುಟದಲ್ಲಿ ಹದಿನಾರರ ಹೊಸ್ತಿಲಲ್ಲಿರುವ ಸ್ಕಾರ್ಲೆಟ್ ಕಾದಂಬರಿಯ ಕೊನೆಯ ಹೊತ್ತಿಗೆ 28ರ `ಪ್ರಬುದ್ಧ’ತೆ ಪಡೆಯುತ್ತಾಳೆ. ಈ ಅವಧಿಯಲ್ಲಿ ನಡೆಯುವ ನೈತಿಕ-ಮಾನಸಿಕ ಬೆಳವಣಿಗೆಯನ್ನು ಕಥೆ ಚಿತ್ತಿಸುತ್ತದೆ. ಈ ಬೆಳವಣಿಗೆ ಸಹಜವಾಗಿ ಸುತ್ತಮುತ್ತ ನಡೆಯುವ ಘಟನೆಗಳಿಂದ ಪ್ರಭಾವಿತ.

ಕಾದಂಬರಿಯ ಮೊದಲಿಗೆ ಬರುವ ಯುದ್ಧದ ಮುನ್ನ ನಡೆಯುವ ಐಷಾರಾಮೀ ಜೀವನ, ಕ್ರಮೇಣ ಯುದ್ಧ ಆರಂಭವಾದ ಮೇಲೆ ಬದಲಾಗುವ ದಿನಗಳು, ಮಹಿಳೆಯರ ಬಗೆಗಿನ ಹಲವು ನಿರೀಕ್ಷೆಗಳು, ವೈಧವ್ಯ-ಮರು ಮದುವೆ, ಉದ್ದಕ್ಕೂ ಬರುವ ಪ್ರೇಮ ವಿಫಲತೆಗಳು, ಮನಸ್ಸನ್ನು ಆದ್ರ್ರಗೊಳಿಸುತ್ತವೆ. ಸ್ಕಾರ್ಲೆಟ್‍ಳ ತಾಯಿ ಎಲ್ಲೆನ್ ಓ ಹಾರಾಳಿಂದಲೇ ಸ್ತ್ರೀ ಪಾತ್ರ ಚಿತ್ರಣದ ವಿಶಿಷ್ಟತೆ ಆರಂಭ. ಸ್ಕಾರ್ಲೆಟ್‍ಳ ತಾಯಿಯಾದರೂ ಸ್ಕಾರ್ಲೆಟ್‍ಳಿಗೆ ವಿರುದ್ಧವಾದ ಸ್ವಭಾವ ಎಲ್ಲೆನ್‍ಳದು. ಮೃದು ಹೃದಯಿ, ಏಕಕಾಲದಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸುವ ಎಲ್ಲೆನ್ ಓ ಹಾರಾ ಐರಿಷ್ ಮೂಲದ, ಗಿಡ್ಡ ಆಕೃತಿಯ ಜೆರಾಲ್ಡ್‍ನನ್ನು ಮದುವೆಯಾಗಲು ಕಾರಣವೇ ತಂದೆ, ಆಕೆ ಪ್ರೇಮಿಸಿದ ಇನ್ನೊಬ್ಬ ತರುಣನನ್ನು ಒಪ್ಪದೆ ತಿರಸ್ಕರಿಸಿದ್ದು. ಹೀಗಿದ್ದೂ ತನ್ನ ಮೂರು ಮಕ್ಕಳನ್ನು ಪ್ರೀತಿಯಿಂದ ಅಚ್ಚುಕಟ್ಟಾಗಿ ಬೆಳೆಸುವ ಎಲ್ಲೆನ್ ಸ್ಕಾರ್ಲೆಟ್ ತಾನು ಎಷ್ಟೇ ವಿರುದ್ಧ ಸ್ವಭಾವದವಳಾದರೂ ಅತಿಯಾಗಿ ಪ್ರೀತಿಸುವ ವ್ಯಕ್ತಿ. ತಾನು ಏನೇ ತಪ್ಪು ಮಾಡಿದಾಗಲೂ ಸ್ಕಾರ್ಲೆಟ್‍ಗೆ ದೇವರ ಭಯವಾಗಲೀ, ನರಕದ ಹೆದರಿಕೆಯಾಗಲೀ ಇಲ್ಲ! ಆದರೆ ತಾಯಿಯ ಭಯ'! ತಾಯಿ `ಎಲ್ಲೆನ್’ ಳನ್ನು ಬೇರೆಲ್ಲಾ ಮನುಷ್ಯರಿಗಿಂತ ಬೇರೆ ಎಂದು ಸ್ಕಾರ್ಲೆಟ್ ಭಾವಿಸುತ್ತಾಳೆ. ಅವಳೆಂದರೆ ಸ್ಕಾರ್ಲೆಟ್‍ಗೆ ಸತ್ಯ-ಕರುಣೆ-ನ್ಯಾಯ-ಜಾಣ್ಮೆ ಎಲ್ಲದರ ಮೂರ್ತ ರೂಪ. ಸ್ಕಾರ್ಲೆಟ್‍ಗೆ ತಾನೂ ಅಮ್ಮನ ಹಾಗಿರಬೇಕೆಂಬ ಮನಸ್ಸು. ಆದರೆ ಹಾಗಿರುವುದರಿಂದ ಜಗತ್ತಿನ ಸಂತೋಷಗಳನ್ನು ಸವಿಯಲು ಅಸಾಧ್ಯವಾಗಬಹುದು ಎಂಬ ಅನುಮಾನ. ಅಷ್ಟೇ ಅಲ್ಲ, ಅವಳ ಪ್ರಕಾರ ಅಂತಹ ಸಂತೋಷಗಳನ್ನು ಕಳೆದುಕೊಳ್ಳಲು ಜೀವನ ಬಹು ಚುಟುಕಾದದ್ದು!

ಮಧ್ಯೆ ಮಧ್ಯೆ ಕಾದಂಬರಿಯ ಉದ್ದಕ್ಕೂ ಬರುವ `ಗಟ್ಟಿ' ಮಹಿಳೆಯರು ಹಲವರು.ಮ್ಯಾಮ್ಮಿ’ ಎಂದು ಸ್ಕಾರ್ಲೆಟ್ ಕರೆಯುವ ನೀಗ್ರೋ ಮಹಿಳೆ ಎಲ್ಲೆನ್'ಳ ತೌರಿನಿಂದ ಮದುವೆಯಾದಾಗ ಅವಳೊಡನೆ ಬಂದವಳು. ಎಲ್ಲೆನ್‍ಳ ಮೂರೂ ಮಕ್ಕಳನ್ನೂ ಆಕೆ ಚಿಕ್ಕಂದಿನಿಂದ ಬೆಳೆಸಿದರೂ, ಸ್ಕಾರ್ಲೆಟ್‍ಳ ಬಗ್ಗೆ ಅವಳದ್ದು ವಿಶೇಷ ಪ್ರೀತಿ.ಮ್ಯಾಮ್ಮಿ’ ಯ ಕಪ್ಪು ದೊಡ್ಡ ಕೈಗಳು, ಮಕ್ಕಳನ್ನು ಬೆಚ್ಚಗೆ ಮಲಗಿಸಿಕೊಳ್ಳುವ ದೊಡ್ಡ ವಕ್ಷಸ್ಥಳದ ಬಗ್ಗೆ ಸ್ಕಾರ್ಲೆಟ್ ತಾನು ದೊಡ್ಡವಳಾದ ಮೇಲೂ, ತನ್ನ ಮಕ್ಕಳನ್ನು ಬೆಳೆಸುವಾಗಲೂ ಮತ್ತೆ ಮತ್ತೆ ಮಾತನಾಡುತ್ತಾಳೆ. ಕಾದಂಬರಿಯ ಮಧ್ಯೆ ಹಾದು ಹೋಗುವ, ಆದರೆ ತನ್ನ ವಸ್ತುನಿಷ್ಠ ಮಾತಿನಿಂದ ಕಷ್ಟಗಳನ್ನು ಎದುರಿಸುವುದು ಹೇಗೆ ಎಂದು ಮಾದರಿಯಾಗುವ ಮತ್ತೊಬ್ಬ ಮಹಿಳೆ ಗ್ರಾಂಡ್‍ಮಾ ಫಾಂಟೇನ್. ಸ್ಕಾರ್ಲೆಟ್ ತಾಯಿಯನ್ನು ಕಳೆದುಕೊಂಡಿರುತ್ತಾಳೆ. ಸದಾ ಅಳುವ ತಂದೆ ಜೆರಾಲ್ಡ್‍ನ್ನು ನಿಭಾಯಿಸಲು ಕಷ್ಟ ಪಡುತ್ತಿರುತ್ತಾಳೆ. ತನ್ನ ಪ್ಲಾಂಟೇಷನ್ ತಾರಾ'ಕ್ಕೆ ಯುದ್ಧದ ಸಮಯದಲ್ಲಿ ದುರ್ಲಭವಾದ ಆಹಾರ ಸಾಮಾಗ್ರಿಯನ್ನು ತರಲು ಪಕ್ಕದ ನೆರೆಹೊರೆಗೆ ಹೋಗಿರುತ್ತಾಳೆ. ಆಕೆಗೆ ತಾಯಿ ಸತ್ತ ಬಗೆಗಿನ ದುಃಖವನ್ನು ಯಾರ ಬಳಿ ಹೇಳಲೂ ಕಷ್ಟ. ಹೀಗಿರುವಾಗ ಗ್ರ್ಯಾಂಡ್‍ಮಾ ಫಾಂಟೇನ್ ಸ್ಕಾರ್ಲೆಟಳ ಕುದುರೆಯ ಬಳಿ ಬಂದು ನಿಂತು ಕೇಳುತ್ತಾಳೆ ``ಮಗೂ, ಏನು ತೊಂದರೆ, ಹೇಳು!''. ಸ್ಕಾರ್ಲೆಟ್, ``ಅಮ್ಮ ಸತ್ತು ಹೋದಳು'' ಎಂದಾಗ ನೇರವಾಗಿ ಕಾರಣ ಕೇಳಿ, ಸ್ಕಾರ್ಲೆಟ್ ಹೇಳುವ ಮಾತು ``ಜಗತ್ತಿನಲ್ಲಿ ಮನುಷ್ಯರು ಕೊಂಚ ಹೆದರಿಕೆ ಉಳಿಸಿಕೊಳ್ಳಬೇಕು ಎಲ್ಲದರ ಬಗೆಗೆ. ಈಗ ನೀನು ಮನೆಗೆ ಹೋಗು. ಆಹಾರದ ಸಾಮಗ್ರಿಯನ್ನು ತೆಗೆದುಕೊಂಡು ಹೋಗಲು ಗಾಡಿ ಕಳಿಸು''. ಸ್ಕಾರ್ಲೆಟ್‍ಗೆ ಎದೆಯ ಮೇಲಿನ ಭಾರ ಕಡಿಮೆಯೆನಿಸುತ್ತದೆ!

ಸ್ಕಾರ್ಲೆಟ್‍ಳಷ್ಟೇ ಮುಖ್ಯವಾಗಿ ಬರುವ ಮತ್ತೊಂದು ಪಾತ್ರವೆಂದರೆ `ಮೆಲನಿ’ಯದು. ಮೆಲನಿ ಮದುವೆಯಾಗುವುದು ಸ್ಕಾರ್ಲೆಟ್ ತನ್ನ ಹದಿ ಹರೆಯದ ದಿನಗಳಿಂದ ಒಂದು ಗೀಳಿನ ರೀತಿಯಲ್ಲಿ ಪ್ರೀತಿಸಿದ್ದ ಆ್ಯಶ್‍ಲೀ'ಯನ್ನು.ಆ್ಯಶ್‍ಲೀಯನ್ನು ಮದುವೆಯಾಗಲಾಗದೆಯೂ ಸ್ಕಾರ್ಲೆಟ್ ಅವನ ಮೇಲೆ ಇಟ್ಟುಕೊಳ್ಳುವ ಪ್ರೀತಿ ಮೆಲನಿ' ಗೆ ಸವಾಲಾಗುವುದೇ ಇಲ್ಲ ಎನ್ನುವುದು ಅಚ್ಚರಿಯ ಮಾತು. ಪ್ರತಿಯೊಂದರಲ್ಲಿಯೂ ಒಳ್ಳೆಯದನ್ನೇ ಕಾಣುವ, ಎಲ್ಲರೂ ಸ್ಕಾರ್ಲೆಟ್‍ಳ ಸ್ವಭಾವದ ವೈಚಿತ್ರ್ಯಗಳ ಬಗ್ಗೆ ಟೀಕೆ -ವ್ಯಂಗ್ಯಗಳನ್ನು ನುಡಿಯುವಾಗ ಸ್ಕಾರ್ಲೆಟ್‍ಳ ಪ್ರಬಲ ವ್ಯಕ್ತಿತ್ವದ ಪರವಾಗಿ ನಿಲ್ಲುವಮೆಲನಿ’ ಮೃದು ಹೃದಯಿಯಷ್ಟೇ ಅಲ್ಲ, ಗಟ್ಟಿ' ವ್ಯಕ್ತಿತ್ವದವಳೇ ಎನಿಸುತ್ತದೆ. ಇಡೀ ಕಾದಂಬರಿಯಲ್ಲಿ ಸ್ಕಾರ್ಲೆಟ್’ ಓದುಗರಲ್ಲಿ ವಿವಿಧ ಭಾವಗಳನ್ನು ಮೂಡಿಸುವುದರಲ್ಲಿ ಸಂಶಯವಿಲ್ಲ. ಕೆಂಪು' ಹೆಸರಿನ, ಹಸಿರು ಕಂಗಳ, ಹಸಿರು ಪ್ಲಾಂಟೇಷನ್‍ನ ಬಣ್ಣಗಳೇ ಸ್ಕಾರ್ಲೆಟ್’ ಳ ಸ್ವಭಾವವನ್ನು ಬಣ್ಣಿಸುತ್ತವೆ. ಹಸಿರು ಮತ್ತೆ ಮತ್ತೆ ಜನ್ಮ ಪಡೆಯುವುದನ್ನು, ಕೆಂಪು ಉತ್ಕಟ ಪ್ರೇಮ-ಕೋಪ-ಲೈಂಗಿಕತೆ-ಅಸ್ವಸ್ಥ – ಅತೃಪ್ತ ಮನಸ್ಥಿತಿಯನ್ನೂ ಇಲ್ಲಿ ಸಂಕೇತಿಸುತ್ತವೆ. ದುರಂತ ಪ್ರೇಮ-ಯುದ್ಧ- ಕಾಯಿಲೆ-ಸಂಕಷ್ಟಗಳ ನಡುವೆ ತನ್ನ ಪ್ಲಾಂಟೇಷನ್'ತಾರಾ’ ವನ್ನು ಮಣ್ಣಿನ ಮಗಳಾಗಿ ತಿರುಗಿ ಕಟ್ಟುವ ಕ್ರಿಯೆ ಸಾಂಕೇತಿಕವಾಗಿ ಸ್ಕಾರ್ಲೆಟ್ ತನ್ನ ಆತ್ಮವಿಶ್ವಾಸವನ್ನು (Self Esteem) ಕಟ್ಟುತ್ತಾಳೆ ಎಂಬುದನ್ನು ಸೂಚಿಸುತ್ತದೆ. ಗಂಭೀರವಾಗಿ ಅನಾರೋಗ್ಯದಿಂದ ಬಳಲುವಾಗಲೂ ಸ್ಕಾರ್ಲೆಟ್‍ಳನ್ನು ಆರೋಗ್ಯಕ್ಕೆ ಮರಳಿಸುವುದು ಭೂಮಿತಾಯಿಯ ಮಡಿಲಿನಲ್ಲಿ ಆಕೆ ಕೆಲಸ ಮಾಡುವುದೇ. ಕೊನೆಗೂ ಆಕೆಯನ್ನು ಅತಿಯಾಗಿ ಪ್ರೀತಿಸುವ ರೆಟ್‍ಬಟ್ಲರ್ ಬಿಟ್ಟು ಹೋದಾಗ ತತ್‍ಕ್ಷಣ ಯೋಚಿಸುವುದು `ನಾನು ನಾಳೆ ತಾರಾ’ ಕ್ಕೆ ಹೋಗಿಯೇ ಇದರ ಬಗ್ಗೆ ಯೋಚಿಸುತ್ತೇನೆ. After all tomorrow is another day – ಏನಾದರಾಗಲಿ ನಾಳೆಯೆಂದರೆ ಅದು ಬೇರೆಯೇ ದಿನವಷ್ಟೆ! ”.

ಗಾನ್ ವಿತ್ ದಿ ವಿಂಡ್' ನ್ನು ಅವಲಂಬಿಸಿ ಹಲವು ಅದರ ಮುಂದಿನ ಭಾಗ, ಅದರ `ರೆಕ್ಕೆ-ಪುಕ್ಕ’ ಗಳೆಲ್ಲವೂ ಬಂದಿದೆ. ಆದರೆ ಮೂಲ ಕಾದಂಬರಿಯನ್ನು ಓದುವ ಆನಂದ-ಅನುಭವ ಬೇರೆಯೇ. ಸ್ಕಾರ್ಲೆಟ್ ನಮ್ಮೆಲ್ಲರಲ್ಲಿ ಇರುವ ಸ್ವಭಾವದ ವೈಚಿತ್ರ್ಯ -ವೈರುಧ್ಯಗಳನ್ನೂ ಪ್ರತಿನಿಧಿಸುತ್ತಾಳೆ ಎಂಬುದೇ ಮನಸ್ಸಿಗೂ-ಸಾಹಿತ್ಯಕ್ಕೂ ಇರುವ ನಿಕಟ ಸಂಬಂಧವನ್ನು ಮತ್ತೆ ಮತ್ತೆ ಧ್ವನಿಸುತ್ತದೆ.

ಡಾ. ಕೆ.ಎಸ್. ಪವಿತ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *