ಹೆಣ್ಣು ಹೆಜ್ಜೆ/ ಮಹಿಳೆಯೂ, ಮದ್ಯವೂ…!- ಡಾ. ಕೆ.ಎಸ್. ಪವಿತ್ರ

ಮದ್ಯ ವ್ಯಸನಕ್ಕೆ ಒಳಗಾದ ಮಹಿಳೆ ಎದುರಿಸುವ ದೈಹಿಕ- ಮಾನಸಿಕ ಆರೋಗ್ಯದ ಸಮಸ್ಯೆಗಳು ಪುರುಷರಿಗಿಂತ ಅನೇಕ ವಿಚಾರಗಳಲ್ಲಿ ಭಿನ್ನವಾಗಿರುತ್ತದೆ. ಕುಟುಂಬದಲ್ಲಿರುವ ಮದ್ಯ ವ್ಯಸನಿ ಪುರುಷರಿಂದ ಮಹಿಳೆ ಅನುಭವಿಸುವ ನೋವು, ದೌರ್ಜನ್ಯ ಹೇಳತೀರದಷ್ಟು ಅಗಾಧವಾಗಿರುತ್ತದೆ. ಇನ್ನು ಆಧುನಿಕ ಮಹಿಳೆಯರಾಗಿ `ಕುಡಿಯುವ ಸಮಾನತೆ’ ಬೇಕೆ ಎಂಬುದು ಅವರವರ ಆತ್ಮಸಾಕ್ಷಿಗೆ ಸಂಬಂಧಿಸಿದ, ಆರೋಗ್ಯಕ್ಕೆ ಸಂಬಂಧಿಸಿದ ಬೇರೆ ವಿಚಾರ.

ಈಗ್ಗೆ ಕೆಲವು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಕ್ಲಬ್ಬುಗಳಿಗೆ-ಬಾರ್ ಗಳಿಗೆ ಸಂಘಟನೆಯೊಂದರ ಸ್ವಯಂಸೇವಕರು ಹೋಗಿ ಅಲ್ಲಿ `ಕುಡಿಯುವ’ ಹುಡುಗಿಯರನ್ನು ಥಳಿಸಿದ್ದು ದೊಡ್ಡ ಸುದ್ದಿಯಾಗಿತ್ತು. ನಂತರ ಹುಡುಗಿಯರು ಕುಡಿಯಬೇಕೆ, ಬೇಡವೆ ಎಂಬುದರ ಬಗ್ಗೆ ಎಲ್ಲ ಮಾಧ್ಯಮಗಳಲ್ಲಿಯೂ ಬಿಸಿಬಿಸಿ ಚರ್ಚೆಯೂ ನಡೆದಿತ್ತು. ಒಂದೆಡೆ “ಹುಡುಗಿಯರು-ಸ್ತ್ರೀಯರು `ಇಂಥಿಂಥ’ ಕಾರಣಗಳಿಂದ ಕುಡಿಯಬಾರದು” ಎಂಬ ವಾದ, ಇನ್ನೊಂದೆಡೆ “ಸಮಾನತೆಯ ಗುರುತಾಗಿ ಕುಡಿಯುವ ಸ್ವಾತಂತ್ರ್ಯ ಮಹಿಳೆಯರಿಗೂ ಬೇಕು” ಎಂಬ ಮತ. ಅದೊಂದು ರಾಜಕೀಯ, ಬಲಪಂಥ-ಎಡಪಂಥ, ಆಧುನಿಕತೆ-ಸಂಪ್ರದಾಯಗಳ ಚರ್ಚೆಯಾಗಿ ಮುಗಿಯಿತೇ ಹೊರತು, ಆರೋಗ್ಯದ ಚರ್ಚೆಯಾಗದಿದ್ದದ್ದು ಒಂದು ಸಾಮಾಜಿಕ ದುರಂತವೆಂದೇ ಒಬ್ಬ ಮನೋವೈದ್ಯೆಯಾಗಿ ನಾನು ಗುರುತಿಸುತ್ತೇನೆ.

ಮಹಿಳೆಗೂ ಮಾದಕ ದ್ರವ್ಯಗಳಿಗೂ ವಿಶೇಷವಾಗಿ ಮದ್ಯಕ್ಕೂ ಇರುವ ಸಂಬಂಧದ ಹಲವು ಮುಖಗಳನ್ನು ಇಂತಹ ಚರ್ಚೆಯ ಸಂದರ್ಭದಲ್ಲಿ ನಾವು ಗಮನಿಸುವುದಿಲ್ಲ. ಮಹಿಳೆ ಸ್ವತಃ ತಾನು ಮದ್ಯವ್ಯಸನಕ್ಕೆ ಒಳಗಾಗುವುದು, ಅದರಿಂದ ದೈಹಿಕ -ಮಾನಸಿಕ ಸಮಸ್ಯೆಗಳನ್ನೆದುರಿಸುವುದು – ಈ ಸಂಬಂಧದ ಒಂದು ಮುಖ್ಯ ಆಯಾಮ. ಇದಲ್ಲದೆ ಪತ್ನಿಯಾಗಿ, ತಾಯಿಯಾಗಿ, ಪತಿ/ಮಗನಲ್ಲಿ ಮದ್ಯವ್ಯಸನದ ಹೊರೆಯನ್ನು ಸಹಿಸುವುದು, ನರಳುವುದು, ಹಿಂಸೆಗೆ ಒಳಗಾಗುವುದು, ಅವುಡುಗಚ್ಚಿ “ಬಿಟ್ಟರೆ ಸಮಾಜ ಏನೆನ್ನುತ್ತದೋ” ಎಂಬ ಕಾರಣವೊಂದನ್ನು ಇಟ್ಟುಕೊಂಡು ಹೊಡೆಸಿಕೊಳ್ಳುತ್ತಾ ಬದುಕುವುದು, ಲೈಂಗಿಕ ಹಿಂಸೆ-ಲೈಂಗಿಕ ರೋಗಗಳಿಗೆ ತುತ್ತಾಗುವುದು, ಇಂಥ ಕೌಟುಂಬಿಕ ವಾತಾವರಣದಲ್ಲಿ ನಿರಂತರವಾಗಿ ಭಯ-ಆತಂಕಗಳ ಮಧ್ಯೆ ಮಕ್ಕಳನ್ನು ರೆಯುವ ಜವಾಬ್ದಾರಿ ಹೀಗೆ ಹಲವು ಮುಖಗಳು ಮಹಿಳೆ-ಮದ್ಯಗಳ ನಡುವಿನ ಸಂಬಂಧಕ್ಕಿದೆ.

ಮದ್ಯ – ಮಾನಿನಿ…

ಮೊದಲು ಮಹಿಳೆಯರು ಮದ್ಯ ಸೇವಿಸುವ ಬಗ್ಗೆ ನೋಡೋಣ. ಮದ್ಯ ಸೇವನೆ, ವ್ಯಸನಗಳೆರಡರ ಪ್ರಮಾಣವೂ ಜಗತ್ತಿನಾದ್ಯಂತ ಮಹಿಳೆಯರಲ್ಲಿ ಹೆಚ್ಚುತ್ತಿದೆ. ವಿದೇಶಗಳ ವೈನ್ ಉದ್ಯಮ ಮಹಿಳೆಯರನ್ನು ಉದ್ಯೋಗದಲ್ಲಿ ತೊಡಗಿಸಿಕೊಂಡು, ತನ್ನ ಮಹಿಳಾ ಗ್ರಾಹಕರನ್ನು ಸೆಳೆದದ್ದು, ಪುರುಷ ಸೇಲ್ಸ್‍ಮನ್‍ನ ಬಳಿ ವ್ಯವಹರಿಸುವಾಗ ಮಹಿಳೆಗಾಗುವ ಮದ್ಯದ' ಮುಜುಗರವನ್ನು ನಿವಾರಿಸಿದ್ದು ಇಂದು ಇತಿಹಾಸ. ಆರೋಗ್ಯದ ದೃಷ್ಟಿಯಿಂದ ನೋಡೋಣ - ಮದ್ಯ ದೇಹದ ಮೇಲೆ ಪರಿಣಾಮ ಬೀರುವಾಗ ಮಹಿಳೆಯರ ದೇಹವನ್ನು, ಪುರುಷರ ದೇಹಕ್ಕಿಂತ ಭಿನ್ನವಾಗಿ,ಲಿಂಗ ಅಸಮಾನತೆ’ ಯಿಂದಲೇ ಕಾಡುತ್ತದೆ!!

ಮದ್ಯಕ್ಕೆ ಸಂಬಂಧಿಸಿದ ದುಷ್ಪರಿಣಾಮಗಳು, ಆರೋಗ್ಯದ ಸಮಸ್ಯೆಗಳು ಮಹಿಳೆಯರನ್ನು ಪುರುಷರಿಗಿಂತ ತೀವ್ರವಾಗಿ, ಶೀಘ್ರವಾಗಿ, ಕಡಿಮೆ ಪ್ರಮಾಣದ ಮದ್ಯ ಸೇವನೆಯಿಂದಲೇ ಕಾಡುತ್ತವೆ. ಪ್ರಾಕೃತಿಕವಾಗಿ ಮಹಿಳೆಯರ ದೇಹದ ತೂಕ ಕಡಿಮೆಯಷ್ಟೆ. ಹಾಗೆಯೇ ದೇಹದ ಇತರ ಜೈವಿಕ ಕಾರಣಗಳಿಂದ ಮಹಿಳೆಯರ ದೇಹದಲ್ಲಿ ಪುರುಷರಿಗೆ ಹೋಲಿಸಿದರೆ ಮದ್ಯ ಶೇಖರಣೆ ಹೆಚ್ಚು. ಹಾಗಾಗಿ ಲಿವರ್ -ಹೃದಯ-ನೆನಪಿನ ಶಕ್ತಿ ತೊಂದರೆಗಳು, ಹಲವು ವಿಧದ ಕ್ಯಾನ್ಸರ್‍ಗಳು ಇವೆಲ್ಲದರ ಅಪಾಯಕ್ಕೆ ಮದ್ಯ ಸೇವಿಸುವ ಮಹಿಳೆಯರು ತುತ್ತಾಗುವ ಸಾಧ್ಯತೆ ಹೆಚ್ಚು. ಇನ್ನು ಮಹಿಳೆಗೆ ಹುಟ್ಟುವ ಮಗುವಿನ ಬಗ್ಗೆ ನಮ್ಮೆಲ್ಲರಿಗೆ ಅತಿ ಕಾಳಜಿ ತಾನೆ?! ಗರ್ಭಿಣಿಯರು ಮದ್ಯ ಸೇವಿಸಿದರೆ ಮಗುವಿನ ಮೇಲಾಗುವ ದುಷ್ಪರಿಣಾಮಗಳು ಅನೇಕ.

ಇವಿಷ್ಟೂ ಮದ್ಯದಿಂದ ಆಗುವ ದೈಹಿಕ ದುಷ್ಪರಿಣಾಮಗಳು. ಮನೋವೈದ್ಯಕೀಯ ದೃಷ್ಟಿಯಿಂದ ನೋಡಿದರೆ, ಮದ್ಯ ವ್ಯಸನವಿರುವ ಮಹಿಳೆಯರು ಬಹಳಷ್ಟು ಬಾರಿ ಬೆಳಕಿಗೇ ಬರುವುದಿಲ್ಲ. ಪುರುಷರಂತೆ ಬಾರ್'ಗೆವೈನ್‍ಷಾಪ್’ ಗಳಿಗೆ ಹೋಗಿ ಕುಡಿಯುವುದು ನಮ್ಮ ಭಾರತದಲ್ಲಿಯಂತೂ ಸುಲಭವಲ್ಲ. ಕುಡಿಯುವುದು ಪೌರುಷ'ದ ಲಕ್ಷಣವೆಂದು ಪರಿಭಾವಿಸುವ ಸಮಾಜ, ಅದೇ ಮಹಿಳೆಯರಲ್ಲಿಶೀಲರಹಿತ’ ನಡವಳಿಕೆಯಾಗಿಯೇ ನೋಡುತ್ತದೆ. ಹಾಗಾಗಿ ಬಾಣಂತಿತನದಲ್ಲಿ ಬ್ರ್ಯಾಂಡಿ, ಅಸ್ತಮಾಕ್ಕೊಂದು ಸಿಪ್' ಔಷಧಿಯಾಗಿ, ಖಿನ್ನತೆಯನ್ನು ಮೀರಲು ಸಾಮಾನ್ಯವಾಗಿ ಆರಂಭವಾಗುವಮದ್ಯಸೇವನೆ’ ಕ್ರಮೇಣ ಮದ್ಯ ವ್ಯಸನವಾಗಿ ಪರಿವರ್ತನೆಯಾಗುವುದು ಮಹಿಳೆಯರಲ್ಲಿ ಸಾಮಾನ್ಯ. ಮುಂದೊಮ್ಮೆ ಮಕ್ಕಳು ದೊಡ್ಡವರಾದ ಮೇಲೆ ಅವರನ್ನು ವೈದ್ಯರ ಬಳಿ ವ್ಯಸನಮುಕ್ತತೆಗೆಂದು ಕರೆತಂದರೂ, ಅವರು ಕರೆತರುವುದು ಅನುಕಂಪ-ಸಹಾನುಭೂತಿಗಳಿಂದಲ್ಲ. ಅಸಹ್ಯ-ಮುಜುಗರ-ಅಪಮಾನ-ದೂಷಣೆ-ದೂರುಗಳಿಂದ! ಹಾಗಾಗಿ ಈ ಮಹಿಳೆಯರ ಚಿಕಿತ್ಸೆ ನೇರ-ಸರಳ ಎನ್ನುವಂತಿಲ್ಲ.

ಸೋಶಿಯಲ್ ಡ್ರಿಂಕ್ಸ್ ಸಮಾನತೆ

ಬಹಳಷ್ಟು ವಿದ್ಯಾವಂತ, ಮುಂದುವರಿದ ಹೆಣ್ಣು ಮಕ್ಕಳು ಕೇಳುವ ಪ್ರಶ್ನೆಯೊಂದಿದೆ. ಡಾಕ್ಟ್ರೇ, ಯಾವಾಗಲಾದರೂ ಒಮ್ಮೆ, ನ್ಯೂ ಇಯರ್ ಪಾರ್ಟಿಗೆ, ಅಥವಾ ತಿಂಗಳಿಗೊಮ್ಮೆ ನಾನು ಒಂದು ಗ್ಲಾಸ್ ಕುಡಿದರೆ ತಪ್ಪೇ? ನನ್ನ ಸ್ನೇಹಿತರು/ಗಂಡ ಕುಡಿದಂತೆ, ನಾನೂ ಏಕೆ ಕುಡಿದು ಆನಂದಿಸಬಾರದು?'' ಅವರವರ ಆತ್ಮಸಾಕ್ಷಿಯನ್ನು ಕೆದಕಿ ಪ್ರಶ್ನೆ ಕೇಳಿಕೊಳ್ಳುವುದು ಮುಖ್ಯ. ಆರೋಗ್ಯದ ದೃಷ್ಟಿಯಿಂದ ಮಹಿಳೆಯೇ ಆಗಲಿ, ಪುರುಷನೇ ಆಗಲಿ ಮದ್ಯ ಅಪಾಯಕಾರಿಯೇ. ಕುಡಿದು, ಮರುದಿನ ಗ್ಯಾಸ್ಟ್ರಿಕ್, ತಲೆನೋವು, ವಾಂತಿ, ಹ್ಯಾಂಗೋವರ್‍ಗಳಿಂದ ನರಳುವವರು ಬಹು ಜನ. ಹಾಗೆಯೇನಾವೇಕೆ ಕುಡಿಯಬೇಕು ಎಂದು ಆಸೆ ಪಡುತ್ತೇವೆ?” ಎಂಬ ಪ್ರಶ್ನೆಯನ್ನು ಉತ್ತರಿಸುವುದೂ ಮುಖ್ಯವೇ.

ಕುಡಿಯುವುದು' ಎಂದರೆ ಅದೊಂದು ಪ್ರಯೋಗಶೀಲತೆ' ಆಧುನಿಕತೆ', ಅರಿಯದ್ದನ್ನು ಆನಂದಿಸುವ ಅನುಭವ', ರಿಲ್ಯಾಕ್ಸ್ ಮಾಡಲು', `ಹೈ’ ಪಡೆಯಲು, ಅಥವಾ ‘ನನ್ನ ಪತಿ ಕುಡಿಯುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ಹಾಗಾಗಿ ನಾನೂ ಕುಡಿಯುತ್ತೇನೆ’ ಇತ್ಯಾದಿ ಇತ್ಯಾದಿ ಕಾರಣಗಳು. ಎಷ್ಟೋ ಪುರುಷರಿಗೆ ಪತ್ನಿಯಾದವಳನ್ನು ಕುಡಿಯಲು ಉತ್ತೇಜಿಸುವುದೂ, ತಾನು ಕುಡಿಯಲು ಅನುಮತಿ ಪಡೆದುಕೊಳ್ಳುವ ಮಾರ್ಗವೂ ಆಗಲು ಸಾಧ್ಯವಿದೆ. ಸಮಾನ ವಿದ್ಯೆ- ಆರ್ಥಿಕತೆ ಹೊಂದಿದ ಪತಿ-ಪತ್ನಿಯರಲ್ಲಿ ಇದೂ ಒಂದು ಮುಖ್ಯ ಕಾರಣ. ಆದರೆ ಮಹಿಳೆಯಾಗಲಿ ಪುರುಷನಾಗಲಿ, ನಿಯಂತ್ರಣದ ಪ್ರಯೋಗಶೀಲತೆಯಲ್ಲಿ ಒಂದೆರಡು ಬಾರಿ ತೊಡಗಬಹುದು. ಅದಾದ ನಂತರ ಈ ಎಲ್ಲಕ್ಕೂ ಆರೋಗ್ಯಕರವಾದ ಹಲವು ದಾರಿಗಳಿವೆ ಎಂಬುದನ್ನು ಅರಿಯಬೇಕು. ಪುರುಷತ್ವ'ಆಧುನಿಕತೆ’ ಸ್ವನಿಯಂತ್ರಣ'ದ ಬಗ್ಗೆ ಮದ್ಯವಿಲ್ಲದಿದ್ದರೂ ಅವು ನಮ್ಮಲ್ಲಿವೆ ಎಂಬ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಕುಟುಂಬದ ಬೆಳೆಯುವ ಮಕ್ಕಳಿಗೆ ನಮ್ಮ (ಪುರುಷ-ಸ್ತ್ರೀಯರಿಬ್ಬರ) ನಡವಳಿಕೆ ನೀಡುವ ಮಾದರಿಯ ಬಗ್ಗೆ ಯೋಚಿಸಬೇಕು.

ಮದ್ಯವ್ಯಸನಿಗಳ ನಡುವೆ ಮಹಿಳೆ.... ಸ್ವತಃ ಒಂದು ಹನಿ ಮದ್ಯವನ್ನೂ ಸೇವಿಸದೆ, ಮದ್ಯದಿಂದ ನಶೆಯ ಆನಂದದ ಬದಲು, ಮದ್ಯವ್ಯಸನಿಯಿಂದ ದುಃಖದ ಸರಪಣಿಯನ್ನೇ ತನ್ನ ಸುತ್ತ ಸುತ್ತಿಕೊಂಡಿರುವ ಮಹಿಳೆಯರು ಮಹಿಳಾ ಮದ್ಯವ್ಯಸನಿಗಳಿಗಿಂತ ಬಹಳ ಹೆಚ್ಚು. ಬೆಳೆದ ಮಗನನ್ನು ವ್ಯಸನಮುಕ್ತತೆಗಾಗಿ ಕರೆತರುವ ತಾಯಿ ಅಥವಾ ಗಂಡನನ್ನು ಚಿಕಿತ್ಸೆಗಾಗಿ ಕರೆತರುವ ಹೆಂಡತಿ ಇವು ನಾನು ಪ್ರತಿನಿತ್ಯ ನೋಡುವ ಪ್ರಕರಣಗಳು. ಮದ್ಯವ್ಯಸನ ಕೇವಲ ಮದ್ಯಸೇವನೆಯನ್ನಷ್ಟೇ ಹೊಂದಿರುವುದಿಲ್ಲ. ಲೈಂಗಿಕ ಹಿಂಸೆ, ದೈಹಿಕವಾಗಿ ಹೊಡೆಯುವುದು, ಅವಾಚ್ಯ ಬೈಗುಳ, ಮನೆಯ ಜವಾಬ್ದಾರಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವುದು, ವೈವಾಹಿಕ ಜೀವನದಲ್ಲಿ ಸಾಂಗತ್ಯದ ಕೊರತೆ, ಆರೋಗ್ಯದ ಸಮಸ್ಯೆಗಳಿಗಾಗಿ ವಿವಿಧ ಚಿಕಿತ್ಸೆಗಳು ಹೀಗೆ ತಾಯಿ ಅಥವಾ ಹೆಂಡತಿ ಒದ್ದಾಡುವಂತೆ ಮಾಡುತ್ತದೆ.

ಹೆಂಡತಿಯಾದವಳು “ಮದುವೆಯಾಗುವವರೆಗೆ ಸರಿಯಾಗಿಯೇ ಇದ್ದ ಡಾಕ್ಟ್ರೇ, ಮದುವೆಯಾದ ಮೇಲೆ ಇವನು ಕುಡಿಯಲು ಕಲಿತ'' ಎಂಬ ಆರೋಪವನ್ನೋ ಅಥವಾ “ಮದುವೆಯಾದರೆ ಸರಿ ಹೋಗ್ತಾನೆ ಅಂಥ ಮದುವೆ ಮಾಡಿದ್ವಿ. ಇವಳಿಗೆ ಇವನನ್ನು ಹೇಗೆ ಇಟ್ಕೋಬೇಕು ಅಂತಲೇ ಗೊತ್ತಿಲ್ಲ” ಎಂಬ ದೂಷಣೆಯನ್ನೋ ಎದುರಿಸುವುದು ಸಾಮಾನ್ಯ. ಹಾಗೆಯೇ ತಾಯಿಯಾದವಳು ತನ್ನ ಆರೋಗ್ಯದ ಸಮಸ್ಯೆಗಳನ್ನು ನಿರ್ಲಕ್ಷಿಸಿ ಮಗನ ಆರೋಗ್ಯಕ್ಕಾಗಿ ಸೆಣಸುವುದು, ಕಾಡಿ-ಬೇಡಿ- ಸಾಲ ಮಾಡಿ ದುಡ್ಡು ಹೊಂದಿಸುವುದು ಆಗಾಗ್ಗೆ ಕಾಣುವಂತಹದ್ದೇ. ತಾಯಿಯೊಬ್ಬಳು ಹೇಳಿದ ಹಾಗೆ “ಹೆಂಡತಿಯಾದರೆ ಮನೆ ಬಿಟ್ಟು ಹೋಗಬಹುದು, ಡೈವೋರ್ಸ್ ಕೊಡಬಹುದು, ತಾಯಿ ನಾನು, ಏನು ಮಾಡಲಿ ಡಾಕ್ಟ್ರೇ?"

ಹೀಗೆ ನರಳುವ ಮಹಿಳೆಯರನ್ನು ನೋಡಿದಾಗ ಸಹಜವಾಗಿ ಏಳುವ ಪ್ರಶ್ನೆಇವರೇಕೆ ಗಂಡ/ಮಗನನ್ನು ಒದ್ದು ಹೊರಗೆ ಹಾಕುವುದಿಲ್ಲ ಅಥವಾ ಗಟ್ಟಿ ಮನಸ್ಸು ಮಾಡಿ ಅವರಿಂದ ದೂರವಾಗುವುದಿಲ್ಲ?” ಇದಕ್ಕೆ ಎರಡು ಮುಖ್ಯ ಅಂಶಗಳು ಕಾರಣ. ಮೊದಲನೆಯದು ಆರ್ಥಿಕ ಬೆಂಬಲದ ಕೊರತೆ. ಗಂಡನನ್ನು ಹೊರ ಹಾಕಿದರೆ ಕುಡಿದರೂ ಒಂದಷ್ಟು ದುಡ್ಡು/ಆಸ್ತಿ ಇರುವಾಗ ಮಕ್ಕಳನ್ನು ಬೆಳೆಸಲು ಕುಟುಂಬವನ್ನು ನಡೆಸಲು ಅದು ಬೇಕು'' ಎಂಬ ಭಾವ. ಎರಡನೆಯದು ಒಂದೊಮ್ಮೆ ಮಹಿಳೆಯೇ ದುಡಿಯುತ್ತಿರುವಾಗ ಹೀಗೆ ಮಾಡಲು ಅಡ್ಡಿಮಾನಸಿಕವಾಗಿ ಧೈರ್ಯವಿರದಿರುವುದು”. ಸಮಾಜದ ದೃಷ್ಟಿ, ಕುಟುಂಬದವರ ಬೆಂಬಲದ ಕೊರತೆ `ಏನೇ ಮಾಡಿದ್ರೂ, ಎಷ್ಟಾದರೂಗಂಡ’ ತಾನೆ? ಮಕ್ಕಳಿಗೆ ನಾಳೆ ತಂದೆ ಬೇಡವೆ?” ಎಂಬ ಮಾತಿನ ಮೇಲೆ ಎಲ್ಲರಿಗಿರುವ ಅಚಲ ನಂಬಿಕೆ. ಕಾನೂನಿನ ನೆರವೂ ಸುಲಭವಲ್ಲ. ನ್ಯಾಯ ಒದಗಿಸಬೇಕಾದ, ಚಿಕಿತ್ಸೆ ಕೊಡಿಸಬೇಕಾದ/ಇಲ್ಲವೇ ದೂರವಾಗು ಎನ್ನಬೇಕಾದ ಯಾರೂ ಮಹಿಳೆಗೇ ಹೇಗಿರಬೇಕೆನ್ನುವ' ಬುದ್ಧಿ ಹೇಳುವುದೇ ಹೆಚ್ಚು!. ಮದ್ಯವ್ಯಸನಿ ತಂದೆಯ ಮಾದರಿಯನ್ನಿಟ್ಟುಕೊಂಡು, ಹಿಂಸೆಯ ವಾತಾವರಣದಲ್ಲಿ ಬೆಳೆಯುವ ಮಕ್ಕಳ ಮನಃಸ್ಥಿತಿ, ಮಹಿಳೆಯರ ಮೂಲಭೂತ ಹಕ್ಕುಗಳ ಬಗ್ಗೆ ತಲೆಕೆಡಿಸಿಕೊಳ್ಳುವವರು ಕಡಿಮೆ!

ಆಧುನಿಕ ಮಹಿಳೆಯರಾಗಿ `ಕುಡಿಯುವ ಸಮಾನತೆ’ ಬೇಕೆ ಎಂಬುದು ಈಗಾಗಲೇ ಹೇಳಿದಂತೆ ಅವರವರ ಆತ್ಮಸಾಕ್ಷಿಗೆ ಸಂಬಂಧಿಸಿದ, ಆರೋಗ್ಯಕ್ಕೆ ಸಂಬಂಧಿಸಿದ ವಿಚಾರ. ಮದ್ಯವ್ಯಸನದಿಂದ ಮುಕ್ತರಾಗುವಲ್ಲಿ, ಚಿಕಿತ್ಸೆ ಪಡೆಯುವಲ್ಲಿ, ಪತಿ/ಪುತ್ರರ ಕುಡಿತ ಬಿಡಿಸುವಲ್ಲಿ, ಒಂದೊಮ್ಮೆ ಬಿಡಿಸಲಾಗದಿದ್ದಲ್ಲಿ, ಅವರಿಂದ ದೂರವಾಗುವಲ್ಲಿ ಸಬಲತೆ-ಸಮಾನತೆ ಎಲ್ಲ ಮಹಿಳೆಯರ ಹಕ್ಕು!

ಡಾ. ಕೆ.ಎಸ್. ಪವಿತ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *