ಹೆಣ್ಣು ಹೆಜ್ಜೆ / ಮಹಿಳೆಯರ ಆರೋಗ್ಯ ನುಂಗುವ ಕೋಪ – ಡಾ. ಕೆ.ಎಸ್. ಪವಿತ್ರ
ಭಾರತೀಯ ಸಾಂಪ್ರದಾಯಿಕ ಸಮಾಜವಷ್ಟೇ ಅಲ್ಲ, ಜಗತ್ತಿನಾದ್ಯಂತ ನಾಗರಿಕ ಸಮಾಜಗಳು ಮಹಿಳೆಯ ಕೋಪವನ್ನು
‘ಅರ್ಹ’ ಎಂದು ಭಾವಿಸುವುದಿಲ್ಲ! ಹಾಗಾಗಿ ಕೋಪ ಮಹಿಳೆಯರಲ್ಲಿ ನಿಶ್ಯಬ್ದವಾಗಿ, ಭಯವುಂಟು ಮಾಡುವ, ಪ್ರತ್ಯೇಕಿಸುವ ಭಾವನೆಯಾಗಿ ಮುಂದುವರಿಯುತ್ತದೆ. ಮಹಿಳೆಯರ ಮಾನಸಿಕ ಆರೋಗ್ಯ-ಅನಾರೋಗ್ಯಕ್ಕೂ ಕೋಪಕ್ಕೂ ಎಲ್ಲಿಲ್ಲದ ನಂಟು. ‘ಖಿನ್ನತೆ'ಯ ಭಾಗವಾಗಿ ಕೋಪವೂ ಒಂದು ಲಕ್ಷಣವಾಗಿರಲು ಸಾಧ್ಯವಿದೆ.
ಕೋಪವೆಂಬ ಮಾರ್ಜಾಲ ಕಂಡರೆ ನುಂಗುವುದು…. !
ಪುರಂದರದಾಸರ ದೇವರನಾಮವೊಂದು `ಹರಿ'ಎಂಬ ಅರಗಿಣಿಯನ್ನು ಕಂಡರೆ ನುಂಗುವ
ಕೋಪ’ ವೆಂಬ ಬೆಕ್ಕಿನ ಬಗ್ಗೆ ಹೇಳುತ್ತದೆ. ಮೋಕ್ಷ ಸಾಧನೆಯ ಬಗೆಗೆ ಮಾತನಾಡುವಾಗಲೆಲ್ಲ ಇಂದ್ರಿಯ ನಿಗ್ರಹಗಳ ಬಗೆಗೆ ಹೇಳಲಾಗುತ್ತದೆಯಷ್ಟೆ. ಆದರೆ ಆರೋಗ್ಯದ ಕುರಿತು ಮಾತನಾಡುವಾಗ?! ಅದರಲ್ಲಿಯೂ ಮಹಿಳೆಯರ ಮಾನಸಿಕ ಆರೋಗ್ಯ-ಅನಾರೋಗ್ಯಕ್ಕೂ ಕೋಪಕ್ಕೂ ಎಲ್ಲಿಲ್ಲದ ನಂಟು. ಮನೋವೈದ್ಯೆಯಾಗಿ ನನಗನ್ನಿಸುವುದು ಮಹಿಳೆಯರ ಕೋಪ'ವನ್ನು ಒಂದು ಭಾವನೆಯಾಗಿ ಸ್ವತಃ ಮಹಿಳೆಯರೂ ಒಳಗೊಂಡಂತೆ ಎಲ್ಲರೂ ನಿರ್ಲಕ್ಷಿಸುತ್ತಾರೆ. ಕೆಲವೊಮ್ಮೆ ನಾನು ಕೋಪಗೊಳ್ಳುತ್ತೇನೆ'' ಎಂದು ಹೇಳುವುದನ್ನು ಬಹಳಷ್ಟು ಮಹಿಳೆಯರು 'ಅಪಮಾನ'ವೆಂದೇ ಭಾವಿಸುತ್ತಾರೆ ಅಥವಾ ಅದನ್ನು ಹೇಳುವಾಗ ತಪ್ಪು ಮಾಡಿದ' ಭಾವ, ಸ್ವದೂಷಣೆಯ ಧ್ವನಿ ನಮ್ಮಲ್ಲಿ ಸಾಮಾನ್ಯ. ಮಹಿಳೆಯರ ಕೋಪದ ಹಿಂದಿನ ಹಲವು ಭಾವನೆಗಳ ಮಿಶ್ರಣವನ್ನು ಜನರು ಇವರಿಗೆ ತುಂಬಾ ಕೋಪ'' ಎಂಬ ಒಂದೇ ಮೇಲ್ಛಾವಣಿಯ ಅಡಿಯಲ್ಲಿ ಸೇರಿಸಿಬಿಡುತ್ತಾರೆ. ಹಾಗಿದ್ದರೆ ಮಹಿಳೆಯರು-ಹುಡುಗಿಯರಿಗೆ ಸಂಬಂಧಿಸಿದಂತೆ ನಿರ್ದಿಷ್ಟವಾಗಿ ಕೋಪವನ್ನು ನಾವು ತಿಳಿಯುವುದು ಉಪಯುಕ್ತವೇ? ಕೋಪವನ್ನು ಕಾಯಿಲೆಯಾಗಿ ಪರಿಭಾವಿಸಿ ಬಹಳಷ್ಟು ಜನ ತಮ್ಮ ಪತ್ನಿ/ಮಗಳು /ತಾಯಿ ಇವರನ್ನು ನನ್ನ ಬಳಿ ಕರೆತರುತ್ತಾರೆ.
‘ಖಿನ್ನತೆ'ಯ ಭಾಗವಾಗಿ ಕೋಪವೂ ಒಂದು ಲಕ್ಷಣವಾಗಿರಲು ಸಾಧ್ಯವಿದೆ. ಆದರೆ ಬಹಳಷ್ಟು ಮಹಿಳೆಯರಲ್ಲಿ, ವಿಶೇಷವಾಗಿ ವಿವಾಹಿತ - ಮಕ್ಕಳಿರುವ ಮಹಿಳೆಯರಲ್ಲಿ
‘ಕೋಪ’ಕ್ಕೆ ಸರಿಯಾದ ಕಾರಣಗಳಿರುವುದು ಗಮನಾರ್ಹ. ಸಮಾಜ ಕೇವಲ ಭಾರತೀಯ ಸಾಂಪ್ರದಾಯಿಕ ಸಮಾಜವಷ್ಟೇ ಅಲ್ಲ, ಜಗತ್ತಿನಾದ್ಯಂತ ನಾಗರಕ ಸಮಾಜಗಳು ಮಹಿಳೆಯ ಕೋಪವನ್ನು
ಅರ್ಹ’ ಎಂದು ಭಾವಿಸುವುದಿಲ್ಲ! ಹಾಗಾಗಿ ಕೋಪ ಮಹಿಳೆಯರಲ್ಲಿ ನಿಶ್ಯಬ್ದವಾಗಿ, ಭಯವುಂಟು ಮಾಡುವ, ಪ್ರತ್ಯೇಕಿಸುವ ಭಾವನೆಯಾಗಿ ಮುಂದುವರಿಯುತ್ತದೆ.
ಎಂತಹ ಕಾರಣಕ್ಕೇ ಆದರೂ, ಮಹಿಳೆಯರಲ್ಲಿ ಕೋಪ' ಎಂಬುದು ``ಉತ್ಪ್ರೇಕ್ಷಿತ ಭಾವನೆ'', ``ತಪ್ಪು ಕಲ್ಪನೆ'', ``ಮಾಡಬಾರದಾಗಿದ್ದ / ತೋರಿಸಬೇಕಿರದಿದ್ದ ಭಾವನೆಯಾಗಿಯೇ ಗ್ರಹಿಸಲ್ಪಡುತ್ತದೆ. ಏಕೆ?? ಕೋಪ ಎಂಬುದು ಒಂದು ಮಾನವ ಸಹಜ ಭಾವನೆ. ಅದು ಒಳ್ಳೆಯದು / ಕೆಟ್ಟದು ಎಂಬ ವರ್ಗೀಕರಣ ಮನೋವೈಜ್ಞಾನಿಕದಲ್ಲಿಲ್ಲ!
ಕೋಪ’ ಎಂಬ ಈ ಸಹಜ ಭಾವನೆ ಅಪಮಾನ, ಅವಮಾನ, ಬೆದರಿಕೆ ಅಸುರಕ್ಷಿತತೆಗಳ ಸಂಕೇತ. ಜಗತ್ತಿನ ನಾಗರೀಕತೆಗಳೆಲ್ಲವೂ ಕೋಪ'ವನ್ನು ಒಂದು ಧನಾತ್ಮಕ ಗುಣವಾಗಿ ಪುರುಷನಲ್ಲಿ ಅಂಗೀಕರಿಸುವುದು ಗಮನಾರ್ಹ. ವರ್ಣಭೇದ ನೀತಿಯಲ್ಲಿಯೂ ಅಷ್ಟೆ, ಅಮೇರಿಕೆಯಲ್ಲಿ ಕೋಪಗೊಂಡ ಬಿಳೀ ಮನುಷ್ಯನದು ``ಅರ್ಹ ಕೋಪ'' ಎನಿಸಿದರೆ, ಅದೇ ಕಪ್ಪು ಮನುಷ್ಯ ಕೋಪಗೊಂಡರೆ ಅದು ಬಹಳಷ್ಟು ಬಾರಿ
ಅಪರಾಧಿ’ ಯ ಗುಣವಾಗಿ ನೋಡಲ್ಪಡುತ್ತದೆ. ಕೋಪದಲ್ಲಿಯೂ, ಕೋಪವನ್ನು ವ್ಯಕ್ತಪಡಿಸುವುದರಲ್ಲಿಯೂ ಇರುವ ಲಿಂಗ ಅಸಮಾನತೆ ಎದ್ದು ಕಾಣುತ್ತದೆ. ಪುರುಷರು ಕೋಪವನ್ನು ಪ್ರದರ್ಶಿಸುವುದರಿಂದ ಆ್ಯಂಗ್ರಿ ಯಂಗ್‍ಮ್ಯಾನ್'' ಎಂಬ `ಹೀರೋ'ಗಳಂತೆ ಭಾವಿಸಲ್ಪಡುತ್ತಾರೆ. ಅದೇ `ಕೋಪ'ವನ್ನು ಪ್ರದರ್ಶಿಸುವ ಮಹಿಳೆಗೆ ಹಲವು ವಿಧದ ಪಟ್ಟಗಳು ದೊರಕುತ್ತವೆ. ಹುಡುಗಿಯರಲ್ಲಿ ಅದು ಹತ್ತಿಕ್ಕಬೇಕಾದ, `ಸಹನೆ' ಯಿಂದ ವರ್ತಿಸಬೇಕಾದ ಒಳ್ಳೆಯ ಗುಣಕ್ಕೆ ಒಂದು ಸವಾಲಾಗುತ್ತದೆ. ಗಂಡು ಮಕ್ಕಳು ಹೇಗೆ ಅಳು, ದುಃಖ, ಭಯವನ್ನು ಹೊರಗೆ ತೋರಿಸಬಾರದೆಂದು ಸಮಾಜ ನಿರೀಕ್ಷಿಸುತ್ತದೆಯೋ, ಹೆಣ್ಣು ಮಕ್ಕಳು ಕೋಪವನ್ನೂ ಅದೇ ರೀತಿ ಪ್ರಕಟ ಪಡಿಸಬಾರದ, ನುಂಗಿಕೊಳ್ಳಬೇಕಾದ ಕ್ರಿಯೆಯಾಗಿ ಅಪೇಕ್ಷಿಸುತ್ತದೆ.
ಅಂದರೆ `ಮಾನವ' ಭಾವನೆಗಳನ್ನು ಹೇಗೆ ವ್ಯಕ್ತಪಡಿಸಬೇಕು ಎಂಬ ವಿಷಯದಲ್ಲಿ ಸಂಸ್ಕøತಿ-ಸಾಮಾಜಿಕ ನಂಬಿಕೆಗಳು ಬೀರುವ ಪ್ರಭಾವ ಗಣನೀಯ ಪ್ರಮಾಣದ್ದು. ಮನೆ-ಶಾಲೆ-ಕೆಲಸ ಎಲ್ಲಾ ಕಡೆಗಳಲ್ಲಿಯೂ, ಕೋಪ `ಸ್ತ್ರೀತ್ವ'ದ ಋಣಾತ್ಮಕ ಅಂಶವಾಗಿಯೂ, ಪುರುಷತ್ವದ ಧನಾತ್ಮಕ ಅಂಶವಾಗಿಯೂ ಪರಿಗಣಿಸಲ್ಪಡುತ್ತದೆ. ಇದರಿಂದ ಸ್ತ್ರೀಯರಿಗೆ ಲಾಭವೇ ಇದೆಯೆಂದುಕೊಂಡರೆ ಅದು ನಿಜವಲ್ಲ. ಹೀಗೆ ಹತ್ತಿಕ್ಕಲ್ಪಟ್ಟ, ಬಲವಂತದಿಂದ ಹೇಗಾದರೂ ನಿಗ್ರಹಿಸಿಕೋ ಎನ್ನುವ `ಕೋಪ', ಅದರ ಹಿಂದಿನ ಭಾವನೆಗಳು ಎಲ್ಲೋ ಒಂದೆಡೆ ಹೊರಬರುತ್ತವೆ. ಸಾಮಾನ್ಯವಾಗಿ ಅವು ಸ್ವತಃ ಮಹಿಳೆಯ ಕುಟುಂಬ, ಅವಳ ಮೇಲೆ ತಮ್ಮ ಪ್ರತಾಪ ತೋರಲಾರಂಭಿಸುತ್ತವೆ. ಅದರಲ್ಲಿಯೂ ಬೆಳೆಯುವ ಹೆಣ್ಣುಮಕ್ಕಳು, ಯುವತಿಯರು ತಮ್ಮನ್ನು ರಕ್ಷಿಸಿಕೊಳ್ಳುವಲ್ಲಿ, ತಮಗಿಷ್ಟವಲ್ಲದ ಯಾವುದೋ ವಿಷಯವನ್ನು ವಿರೋಧಿಸುವಲ್ಲಿ ಈ ಹತ್ತಿಕ್ಕುವಿಕೆ ದೊಡ್ಡ ಅಡ್ಡಿಯಾಗುತ್ತದೆ. ಸಹೋದ್ಯೋಗಿ ಮಾಡುವ ಟೀಕೆ / ವ್ಯಂಗ್ಯ/ಗೇಲಿ ಮಾತಿಗೆ ನಮ್ಮ ಮಿದುಳು -ಮನಸ್ಸುಗಳು ಕಿರುಚಾಡುತ್ತಿದ್ದರೂ, `ಏನೂ ಆಗಿಲ್ಲ' ಎಂಬಂತೆ ವರ್ತಿಸುವ, ಕೆಲಸಕ್ಕೆ ಸಹಕರಿಸುವಂತಹ ಸಂದರ್ಭಗಳಿಗೆ ಕಾರಣವಾಗುತ್ತದೆ. ಹಾಗಿದ್ದರೆ ಬಂದ ಕೋಪವನ್ನು ಉಪಯೋಗಿಸಿಕೊಂಡು, ಮಾತನಾಡಿ ಎದುರಿನ ವ್ಯಕ್ತಿಯ ಬಾಯಿ ಮುಚ್ಚಿಸುವುದಷ್ಟೇ ನಮಗೆ ಸಾಧ್ಯವಾಗದ್ದು ಏಕೆ? ನಮಗೆ ಬರುವ ಕೋಪದ ಹಿಂದೆಯೇ ಆತಂಕ, ಭಯ, ಎದುರಿನವರು ಏನು ಮಾಡಬಹುದೆಂಬ ನಿರೀಕ್ಷೆ ಎಲ್ಲವೂ ಇಲ್ಲಿ ಸೇರಿರುತ್ತವೆ.
ಮಹಿಳೆಯರನ್ನು
ನಿಮ್ಮ ಕೋಪದಿಂದ ಬರುವ ಯಾವ ಪ್ರತಿಕ್ರಿಯೆ ನಿಮ್ಮನ್ನು ಹೆದರಿಸುತ್ತದೆ?” ಎಂದು ಅಧ್ಯಯನಗಳಲ್ಲಿ ಕೇಳಲಾಗುತ್ತದೆ. ಆಗ ನಮ್ಮ ನಿರೀಕ್ಷೆ ದೈಹಿಕ ಹಿಂಸೆ'' ಎಂಬ ಉತ್ತರ. ಆದರೆ ಹೆಚ್ಚನವರ ಉತ್ತರ
ಗೇಲಿಯ ಮಾತುಗಳು”! ಮಹಿಳೆಯರು ಬಹುವಾಗಿ ಕೋಪಗೊಳ್ಳುವ ಸಂದರ್ಭಗಳನ್ನು ನೋಡಿದರೆ ಗೇಲಿಯ ಮಾತು'ಗಳು ತರುವ ನೋವು ಸಂಕಟಗಳು ಸ್ಪಷ್ಟವಾಗುತ್ತವೆ. ನೀವು ಮಾಡಿರುವ ಕೆಲಸ -ಶ್ರಮ
ಮಾಡಿಯೇ ಇಲ್ಲ’ ಎಂಬ ನಿರ್ಲಕ್ಷ್ಯ, ಹಲವು ಸರಿ' ಗಳ ನಡುವೆ ಒಂದು ತಪ್ಪನ್ನು ಎತ್ತಿ ತೋರಿಸುವ ದಾಢ್ರ್ಯ ಇವೆಲ್ಲವೂ ಮಹಿಳೆಯರನ್ನು ಮತ್ತಷ್ಟು ‘ಕೋಪ-ಮೆಲುಕು ಹಾಕುವಿಕೆ’ಗಳ ಚಕ್ರಕ್ಕೆ ತಳ್ಳುತ್ತದೆ. ಹತ್ತಿಕ್ಕುವ ಕೋಪ - Suppressed anger, ಮತ್ತು ಮತ್ತೆ ಮತ್ತೆ ಕೋಪ ಮಾಡಿಕೊಳ್ಳುವುದು ಎರಡೂ ತರುವುದು ``ಮಹಿಳೆಯರ ಕಾಯಿಲೆ'' ಎಂದೇ ಹೆಸರಾಗಿರುವ ದೀರ್ಘಕಾಲಿಕ ನೋವು - Chroni
c pain, ತಿನ್ನುವ ಕಾಯಿಲೆಗಳು, ಆತಂಕ, ಖಿನ್ನತೆ, ಸ್ವಹಾನಿ- Self harm ನಂತಹ ಆರೋಗ್ಯ ಸಮಸ್ಯೆಗಳನ್ನು. ನಮ್ಮ ರೋಗನಿರೋಧಕ ಶಕ್ತಿಯನ್ನೂ ಕೋಪ ಇಳಿಸುತ್ತದೆ. ಬರಬಹುದಾದ ಕಾಯಿಲೆಗಳು ಹೆಚ್ಚುತ್ತವೆ.
ಮಹಿಳೆಯರು
‘ಕೋಪ’ವನ್ನು ನಿಭಾಯಿಸುವುದನ್ನು ಕಲಿತುಕೊಳ್ಳುವುದು ಆರೋಗ್ಯಕ್ಕೆ ಉಪಯುಕ್ತವೆಂಬುದು ದೃಢಪಟ್ಟಿದೆ. ಆದರೆ ಈ ನಿಭಾಯಿಸುವಿಕೆ, ನಿಯಂತ್ರಣ /ಹತ್ತಿಕ್ಕುವಿಕೆಯಲ್ಲ. ಮಹಿಳೆ ಕೋಪವನ್ನು ನಿಭಾಯಿಸುವಲ್ಲಿ ಆಕೆಯ ಸುತ್ತಮುತ್ತಲ ಇತರ ಮಹಿಳೆಯರು, ಬಾಲ್ಯದ ತರಬೇತಿ, ಇತರರ ಮಾದರಿ, ಪುರುಷ (ವಿಶೇಷವಾಗಿ ಪತಿಯ) ಸಹಕಾರ - ಇವು ಪ್ರಮುಖ ಪಾತ್ರ ವಹಿಸುತ್ತವೆ. ಅಂದರೆ ಮಹಿಳೆಯರು
‘ಕೋಪ’ ಎಂಬ ಸಮಸ್ಯೆಯಿಂದ ನನ್ನ ಬಳಿ ಬಂದಾಗ ಅವರ ಪತಿ ಹೇಳುವ ಟಿಪಿಕಲ್ ಮಾತುಗಳು ಇವು ``ಇವಳಿಗೆ ತುಂಬಾ ಕೋಪ. ಮಕ್ಕಳಿಗೆ ಓದು ಅಂದ್ರೆ ಹೊಡೆತ ಅಂತಲೇ ಅರ್ಥ. ನಾನು ನೋಡಿ ಹತ್ತು ಜನರನ್ನೂ ಬೇಕಾದರೆ ಕೋಪ ಮಾಡದೆ ನಿಭಾಯಿಸಬಲ್ಲೆ''. ಮಕ್ಕಳ ಆರೈಕೆ -ಕಾಳಜಿಯಲ್ಲಿ ತೊಡಗುವ ತಾಯಿಗೆ ಬೆಳಗಿನಿಂದ ರಾತ್ರಿಯವರೆಗೆ ಹತ್ತು -ಹಲವು ಸಂದರ್ಭಗಳು ಕೋಪ ಮಾಡಲು ಸಿಕ್ಕುತ್ತವೆ. ಅದರೊಂದಿಗೆ ತಾಯಿಗೆ ``ಮಕ್ಕಳೆಂದರೆ ನಾನು'' ಎಂಬ ಭಾವ ಬೇರೆ! ಅದೇ ತಂದೆಗೆ ಬೆಳಗಿನಿಂದ ರಾತ್ರಿಯವರೆಗೆ ಹೊರಗಿದ್ದು, ರಾತ್ರಿ ಒಂದು / ಅರ್ಧ ಗಂಟೆ ಮಕ್ಕಳೊಂದಿಗೆ ಸಮಯ ಕಳೆಯಬೇಕೆಂದರೆ, ಮಕ್ಕಳ ಮೇಲೆ ಕೋಪಮಾಡುವ ಸಂದರ್ಭಗಳೇ ಕಡಿಮೆ! ಅದರ ಮೇಲೆ ತಂದೆಗೆ ಮಕ್ಕಳ ಮೇಲೆ ಅಪಾರ ಪ್ರೀತಿಯೇ ಇರಬಹುದಾದರೂ, ಭಾವ ಮಾತ್ರ ``ನಾನು ನಾನು, ಇವರು ನನ್ನ ಮಕ್ಕಳು''! ಈ
ಡೈನಮಿಕ್ಸ್’ ಅರ್ಥವಾಗಿದ್ದರೆ, `ಅಮ್ಮನಿಗೆ ಯಾವಾಗ್ಲೂ ಕೋಪ, ಅಪ್ಪನಿಗೆ /ಅಜ್ಜ/ಅಜ್ಜಿಗೆ ನನ್ನನ್ನು ಕಂಡರೆ ಪ್ರೀತಿ'' ಎಂಬ ಭಾವನೆ ಮಕ್ಕಳಲ್ಲಿಯೂ ಬೆಳೆಯುತ್ತದೆ.
ಸ್ವತಃ ಮಹಿಳೆಯರು ತಮ್ಮ ಸುತ್ತಮುತ್ತಲಿನ ಮಹಿಳೆಯರನ್ನು ಬೆಂಬಲಿಸುವುದು, ವ್ಯಂಗ್ಯ - ಚುಚ್ಚು ಮಾತುಗಳನ್ನು ಬಿಟ್ಟು ಮಾತನಾಡಲು ತೊಡಗುವುದು ಮಹಿಳೆಯರಲ್ಲಿ ಕೋಪದ ಹಿಂದಿನ ಭಾವನೆಗಳನ್ನು ಇಲ್ಲವಾಗಿಸುವಲ್ಲಿ, ಇರುವ ವಿಷಯದ ಬಗೆಗಷ್ಟೇ ಕೇಂದ್ರೀಕರಿಸುವಲ್ಲಿ ಮುಖ್ಯ. ಒತ್ತಡಗಳನ್ನು ನಿರ್ವಹಿಸುವಲ್ಲಿಯೂ ತಮ್ಮ ಸುತ್ತಮುತ್ತಲಿರುವ ಮಹಿಳೆಯರು ಕೋಪವನ್ನು ನಿರ್ವಹಿಸುವ ಆರೋಗ್ಯಕರ ಮಾದರಿಗಳು ಸಿಕ್ಕಬಲ್ಲವು. ದಾಸರು ಹೇಳುವಂತೆ `ಕೋಪವೆಂಬ ಮಾರ್ಜಾಲ
ಹರಿನಾಮದರಗಿಣಿ’ ಯನ್ನು ನುಂಬಬಹುದೇನೋ. ಅದರೆ `ಕೋಪ’ ಮಹಿಳೆಯರ ಆರೋಗ್ಯವನ್ನು ನುಂಗುವುದು ಖಂಡಿತ! ಹಾಗಾಗಿ ನಮ್ಮ ನಮ್ಮ ಕೋಪವನ್ನು ಅದು ಯಾವುದರ ಬಗೆಗೆ ಎಂದು ಗುರುತಿಸುವುದು, ಅದನ್ನು ಸರಿಯಾದ ವ್ಯಕ್ತಿಯ ಬಳಿಯೇ ಹತ್ತಿಕ್ಕದೆ ವ್ಯಕ್ತಪಡಿಸುವುದು, ಆರೋಗ್ಯಕರವಾಗಿ ನಿಭಾಯಿಸುವುದು ನಮ್ಮ ಆರೋಗ್ಯವನ್ನು ಉಳಿಸಬಲ್ಲದು.
- ಡಾ|| ಕೆ.ಎಸ್. ಪವಿತ್ರ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.