ಹೆಣ್ಣು ಹೆಜ್ಜೆ / ಮನೋವೈದ್ಯೆಯಾಗಿ ಹಿಡಿವ ಹೆಜ್ಜೆ ಜಾಡು – ಡಾ. ಕೆ.ಎಸ್. ಪವಿತ್ರ

“ಮೀನಿನ ಹೆಜ್ಜೆ ಬೇಕಾದರೂ ಗುರುತಿಸಬಹುದು. ಆದರೆ ಹೆಣ್ಣಿನ ಮನಸ್ಸನಲ್ಲಿ ಏನಿದೆ ಎಂಬುದನ್ನು ಗುರುತಿಸಲು ಅಸಾಧ್ಯ” ಎಂಬ ಮಾತಿದೆ. ಹೆಣ್ಣು ಮನಸ್ಸನ್ನು ಗುರುತಿಸುವುದು ಅಸಾಧ್ಯ ಎಂದು ಅನ್ನಿಸುವುದಿಲ್ಲ. ಅವಳ ಭಾವನೆಗಳನ್ನು ಗುರುತಿಸಿದರೂ, ಅದನ್ನು ಒಪ್ಪಲು ಹಿಂದೆ-ಮುಂದೆ ನೋಡುವುದಕ್ಕೆ ಮುಂದೊಡ್ಡುವ ಒಂದು ನೆಪವೇ “ಇವಳ ಮನಸ್ಸೇ ಅರ್ಥವಾಗುವುದಿಲ್ಲ” ಎಂಬ ಮಾತು. ಹಾಗಾಗಿ ಒಬ್ಬ ಮನೋವೈದ್ಯೆಯಾಗಿ, ಮಹಿಳೆಯಾಗಿ, ಮಹಿಳೆಯ ಮನಸ್ಸನ್ನು ಶೋಧಿಸುವ, ಅರ್ಥಮಾಡಿಕೊಂಡು, ಇತರರಿಗೂ ಅರ್ಥ ಮಾಡಿಸಲು ಪ್ರಯತ್ನಿಸುವ ಆಶಯವೇ “ಹೆಣ್ಣು ಹೆಜ್ಜೆ’.

ಹದಿನಾರು ವರ್ಷಗಳ ಹಿಂದೆ ಮನೋವೈದ್ಯಕೀಯ ಎಂ.ಡಿ. ಪದವಿ ಪಡೆಯಲು ನಿಮ್ಹಾನ್ಸ್ (NIMHANS) ಪ್ರವೇಶಿಸಿದಾಗ ಹೆಣ್ಣು -ಗಂಡು ಮನಸ್ಸುಗಳಲ್ಲಿ ಇರುವ ವ್ಯತ್ಯಾಸದ ಬಗೆಗಿನ ಅರಿವು ನನ್ನೊಳಗೆ ಜಾಗೃತವಾಗಿರಲಿಲ್ಲ ಎನಿಸುತ್ತದೆ. ಎಷ್ಟೋ ಬಾರಿ ನನ್ನಲ್ಲಿ ಬರುವ ಮಹಿಳಾ ರೋಗಿಗಳನ್ನು ಅವರ ಸಂಕೀರ್ಣ ಸಮಸ್ಯೆಗಳನ್ನು ಅವಲೋಕಿಸುವಾಗ ನಾನು ಪ್ರಶ್ನಿಸಿಕೊಂಡಿದ್ದಿದೆ. ಒಬ್ಬ ಪುರುಷ ಈ ಮಹಿಳೆಯರಿಗೆ ಚಿಕಿತ್ಸೆ ನೀಡುವುದಕ್ಕೂ, ಒಬ್ಬ ಮಹಿಳೆ ಚಿಕಿತ್ಸೆ ನೀಡುವುದಕ್ಕೂ ವ್ಯತ್ಯಾಸವಿದೆಯೇ?'

ವೈದ್ಯೆಯಾಗಿ ಕಲಿಯುವಾಗ ಪುರುಷ-ಮಹಿಳೆಯರಿಬ್ಬರನ್ನೂ ವಸ್ತುನಿಷ್ಠವಾಗಿ, ಸಹಾನುಭೂತಿ-ಕರುಣೆಗಳಿಂದ ನೋಡುವ ವಿಶಿಷ್ಟ ಸಂಬಂಧದ ಬಗ್ಗೆ ಎಲ್ಲ ವೈದ್ಯರಂತೆ ನಾನೂ ಕಲಿತಿದ್ದೆ. ವೈದ್ಯನ ಕುರ್ಚಿಯಲ್ಲಿ ಕುಳಿತಾಗ, ಅಲ್ಲಿ ಕುಳಿತುಕೊಳ್ಳುವ ವ್ಯಕ್ತಿ ಲಿಂಗಾತೀತ, ಅಥವಾ ಗಂಡು-ಹೆಣ್ಣು ಇಬ್ಬರಂತೆಯೂ ಯೋಚಿಸುವ ಸಾಮಥ್ರ್ಯವಿರುವ ವ್ಯಕ್ತಿಯಾಗಬೇಕು ಎಂಬ ಅರಿವು ಎಂ.ಬಿ.ಬಿ.ಎಸ್. ಮುಗಿಸುವಷ್ಟರಲ್ಲಿ ಮೂಡಿತ್ತು. ಆದರೆ ಸ್ನಾತಕೋತ್ತರ ಪದವಿಗೆ ನಾನು ಆರಿಸಿಕೊಂಡ ಮನೋವೈದ್ಯಕೀಯ ಅಷ್ಟು ನೇರ-ಸರಳ ಎರಡೂ ಆಗಿರಲಿಲ್ಲ. ಕಲೆ-ವಿಜ್ಞಾನ, ಬುದ್ಧಿ-ಮನಸ್ಸು, ಮಾತು-ಮೌನ, ಎಲ್ಲಕ್ಕೂ ಸಂಬಂಧಿಸಿದ ವಿಷಯವದು. ಮಹಿಳೆಯರ ಸಮಸ್ಯೆಗಳಿಗಂತೂ ಯಾವ ಒಂದು ಚಿಕಿತ್ಸೆಯೂ ಸಾಕಾಗುತ್ತಿರಲಿಲ್ಲ! ಮಾತು, ಮೌನದಿಂದ ಕೇಳುವಿಕೆ, ಅವರ ಅಳು-ವ್ಯಂಗ್ಯ-ನಗು-ಪ್ರಶಂಸೆ-ಟೀಕೆ ಎಲ್ಲವನ್ನೂ ಅರ್ಥ ಮಾಡಿಕೊಂಡು ಸ್ಪಂದಿಸುವ ಸಾಮಥ್ರ್ಯ, ಜೊತೆಗೆ ಮಾತ್ರೆ ತೆಗೆದುಕೊಳ್ಳುವಂತೆ ಅವರನ್ನು ಒಪ್ಪಿಸುವುದು, ಚಿಕಿತ್ಸೆಗೆ ಬರುವಂತೆ ಅವರಿಗೆ ಮನವರಿಕೆ ಮಾಡುವುದು ಇವು ಯಾವುವೂ ಸುಲಭವಾಗಿರಲಿಲ್ಲ. ಆಗಲೇ ನನ್ನೊಳಗೆ ಹೆಣ್ಣು-ಗಂಡು ಮನಸ್ಸುಗಳಲ್ಲಿ ಇರುವ ವ್ಯತ್ಯಾಸದ ಬಗ್ಗೆ ಕುತೂಹಲ ಮೂಡಿದ್ದು. ವೈಜ್ಞಾನಿಕವಾಗಿ ಮಾನವ ಮನಸ್ಸಿನಲ್ಲಿ ಹೆಣ್ಣು-ಗಂಡು ಗುಣಗಳನ್ನು ಗುರುತಿಸಲಾಗುತ್ತದೆ. ಅದಕ್ಕೆ ಜೈವಿಕ ಕಾರಣಗಳೂ ಇವೆ. ಈ ಎರಡೂ ಗುಣಗಳು ಇಬ್ಬರಲ್ಲೂ ಕಾಣಬಹುದು ಎನ್ನುವುದೇ ವಿಶೇಷ. ನಾವು ನಮ್ಮ ಸುತ್ತಮುತ್ತಲ ಜನರಲ್ಲಿಯೂ ಇದನ್ನು ನಾವೂ ನೋಡಿರುತ್ತೇವೆ. ಆದರೆ ಅದನ್ನು ಸೂಕ್ಷ್ಮವಾಗಿ ನಾವು ಗಮನಿಸಿರುವುದಿಲ್ಲ.

ಮನೋವೈದ್ಯೆಯಾಗಿ ಕೆಲಸ ಮಾಡುವಾಗ ಇದು ಸ್ಪಷ್ಟವಾಗಿ ಕಾಣುವ ಹಲವು ಅವಕಾಶಗಳು ದೊರೆಯುತ್ತವೆ. ಮಹಿಳೆಯರ ಸಮಸ್ಯೆಗಳ ಬಗೆಗೆ ಲೇಖನ ಬರೆಯುವುದು, ಭಾಷಣ ಮಾಡುವುದು, ಮಹಿಳಾ ಸಂಘಗಳಿಗೆ ಹೋಗಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದರ ಬಗೆಗೆ ಸಲಹೆ ನೀಡುವುದು ನನಗೆ ಪ್ರಿಯವಾದ ಚಟುವಟಿಕೆಗಳೇ. ಆದರೆ ವಿವಿಧ ಮಾನಸಿಕ ಸಮಸ್ಯೆಗಳಲ್ಲಿ ನರಳುವ ಮಹಿಳೆಯರಿಗೆ ಚಿಕಿತ್ಸೆ ನೀಡುವುದು ಈ ಚಟುವಟಿಕೆಗಳಿಗಿಂತ ಬಹು ಭಿನ್ನವಾದದ್ದು ಎಂದು ನನಗನ್ನಿಸುತ್ತದೆ. ಸ್ತ್ರೀಪರ’ ವಾಗಿ ಯೋಚನೆ ಮಾಡುವ ನನ್ನನ್ನು ಹೆದರಿಸುವ, ಮಾತಿಲ್ಲದಂತೆ ಸುಮ್ಮನಾಗಿಸುವ ಎಷ್ಟೋ ಪ್ರಶ್ನೆಗಳು , ಮನೋವೈದ್ಯೆಯಾಗಿ ಮಹಿಳೆಯರಿಗೆ ಚಿಕಿತ್ಸೆ ನೀಡುವಾಗ ಧುತ್ತೆಂದು' ಎದುರು ನಿಲ್ಲುತ್ತವೆ. ಸ್ತ್ರೀ-ಪುರುಷರಲ್ಲಿ ಸಮಾನತೆಯ ಬಗ್ಗೆ ಮಾತನಾಡುವ ಮೊದಲು ಸ್ತ್ರೀಯರಲ್ಲಿ `ಸಮಾನ ಮನಸ್ಕತೆ’ ಯನ್ನು ನಾವು ಪ್ರಚೋದಿಸುವುದು ಮುಖ್ಯ ಎನಿಸುತ್ತದೆ.

ಮನೋವೈದ್ಯೆಯಾಗಿ ನನ್ನನ್ನು ಕಾಡುವ ಮತ್ತೊಂದು ಅಂಶವಿದೆ. ಅದೆಂದರೆ ಮಹಿಳೆಯರ ಆರೋಗ್ಯಕ್ಕೂ, ಅವರಿಗಿರುವ ಕೌಟುಂಬಿಕ ಹಿನ್ನೆಲೆ-ವಿದ್ಯಾಭ್ಯಾಸಗಳಿಗೂ ಎಷ್ಟೋ ಬಾರಿ ತಾಳೆಯಾಗದಿರುವ ಅಂಶ ಅಂದರೆ, ಪಿಹೆಚ್.ಡಿ. ಮಾಡಿರುತ್ತಾರೆ, ಆದರೆ ಮನೆಯಲ್ಲಿ ಎದುರಿಸುವ ಹಿಂಸೆಯನ್ನು ಅವರು ಯಾರಲ್ಲಿಯೂ ಹೇಳಿಕೊಂಡಿರುವುದಿಲ್ಲ! ಕ್ರೌರ್ಯವೇ ನಡೆಯುತ್ತಿದ್ದರೂ ಸಂಗಾತಿಯಿಂದ ದೂರವಾಗಲು ಹೆದರುತ್ತಾರೆ. ತಮ್ಮ ಗಂಡು ಮಕ್ಕಳಿಂದ ಕಿರುಕುಳವನ್ನು ಕೊಡುಗೆಯಾಗಿ ಸ್ವೀಕರಿಸಿದರೂ, ಮಗಳಿಗೆ ಮಾತ್ರ `ಗಂಡು ಮಗು'ವಾಗಲಿ ಎಂದೇ ಬಯಸುತ್ತಾರೆ. ಇಂತಹ ನೂರಾರು ಸಮಸ್ಯೆಗಳಿಗೆ ಮಾತು-ಮಾತ್ರೆಯ ಚಿಕಿತ್ಸೆಗಳು ಪರಿಹಾರ ನೀಡುವುದು ಹೇಗೆ?

ಹಾಗಾಗಿಯೇ ನನ್ನ ಬರೆಹ-ಭಾಷಣಗಳನ್ನು ಚಿಕಿತ್ಸೆಯ ಒಂದು ಅಂಗವಾಗಿ, ನೃತ್ಯ ಪ್ರಸ್ತುತಿಗಳನ್ನು ಮಹಿಳೆಯ ಮನಸ್ಸಿಗೆ ವಿಶೇಷ ಒತ್ತು ನೀಡಿ ರೂಪಿಸುವಾಗ ಮಾತು-ಮಾತ್ರೆಯ ಚಿಕಿತ್ಸೆ ಮೀರಿ, ನಿಧಾನವಾಗಿಯಾದರೂ ಸಮಾಜದ ಧೋರಣೆಯನ್ನು ಪರಿವರ್ತಿಸುವ ಆಶಯ ಅವುಗಳ ಹಿಂದಿರುತ್ತದೆ. ಮನೋವೈದ್ಯಕೀಯ ವಿಜ್ಞಾನ ಮಹಿಳೆಯ ಮಾನಸಿಕ ಆರೋಗ್ಯವನ್ನು ಮೂರು ವರ್ತುಲಗಳಾಗಿ ಕಲ್ಪಿಸುತ್ತದೆ. ಮೊದಲನೆಯದು ಮಹಿಳೆಯ ಜೈವಿಕ ಚಕ್ರ. ಋತುಚಕ್ರ, ಬಸಿರು, ಬಾಣಂತನ, ಋತುಬಂಧಗಳಿಂದ ಕೂಡಿದ್ದು. ಇವುಗಳಲ್ಲಿ ಬರುವ ಹಾರ್ಮೋನುಗಳಿಗೂ, ಮಿದುಳು-ಮನಸ್ಸುಗಳಿಗೂ ಇರುವ ಸಂಬಂಧ, ಸಾಮಾಜಿಕ ಕಾರಣಗಳೊಂದಿಗೆ ಸೇರಿ ಮತ್ತಷ್ಟು ಸಂಕೀರ್ಣವಾಗುತ್ತದೆ. ಎರಡನೆಯದು ಆಕೆಯ ಕೌಟುಂಬಿಕ ಜೀವನ. ಕುಟುಂಬದ ಸಂಬಂಧಗಳು, ಭಾವನಾತ್ಮಕವಾಗಿ ಈ ಸಂಬಂಧಗಳೊಡನೆ ಮಹಿಳೆ ಹೆಣೆದುಕೊಳ್ಳುವ ರೀತಿ. ಮೂರನೆಯದು ಮಹಿಳೆಗೆ ಸ್ವತಃ ತನ್ನ ಬಗ್ಗೆ ಇರುವ ಆಶೋತ್ತರಗಳು, ಆಕೆಯ ವೃತ್ತಿ ಜೀವನ-ಸಾಧನೆಗಳು. ಈ ಮೂರೂ ವರ್ತುಲಗಳು ಪರಸ್ಪರ ಒಂದನ್ನೊಂದು ಅಡ್ಡಿಪಡಿಸುತ್ತಾ, ಕೆಲವೊಮ್ಮೆ ವರ್ಧಿಸುತ್ತಾ ನಿರಂತರವಾಗಿ ಸಂಪರ್ಕದಲ್ಲಿರುತ್ತವೆ. ನಮ್ಮ ಸುತ್ತಮುತ್ತಲ ಯಾವ ಮಹಿಳೆಯನ್ನು ನೋಡಿದರೂ, ಅಥವಾ ಸ್ವತಃ ನಮ್ಮನ್ನೇ ನಾವು ನೋಡಿಕೊಂಡರೂ ಈ ಅಂಶ ಸ್ಪಷ್ಟವಾಗುತ್ತದೆ. ಮಹಿಳೆಗೆ ಸಂಬಂಧಿಸಿದ ಯಾವುದೇ ಮಾನಸಿಕ ಸಮಸ್ಯೆಯನ್ನು ನೋಡುವಾಗ ಈ ಅಂಶವನ್ನು ನಾವು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾಗುತ್ತದೆ.

ಮಾನಸಿಕ ಸಮಸ್ಯೆಯನ್ನು`ಕಾಯಿಲೆ’ಯಾಗಿಯಷ್ಟೇ ನೋಡಿ ಚಿಕಿತ್ಸೆ ನೀಡುವಾಗ ಮೂರು ವರ್ತುಲಗಳಲ್ಲಿ ಯಾವುದಾದರೊಂದು ನರಳುವಿಕೆಯನ್ನು ಹೆಚ್ಚಿಸಬಹುದು ಎಂಬುದು ಗಮನಾರ್ಹ. ಈ ಅರಿವೇ ಕಳೆದ ಹದಿನಾರು ವರ್ಷಗಳಲ್ಲಿ ಒಬ್ಬ ಮನೋವೈದ್ಯೆ'ಯಾಗಿ ಪುರುಷನಾದ ಮನೋವೈದ್ಯನಿಗಿಂತ ನಾನು-ಒಬ್ಬ ಮಹಿಳೆ. ಮಹಿಳಾ ಮಾನಸಿಕ ಸಮಸ್ಯೆಗಳನ್ನು ಹೆಚ್ಚು ಸಹಾನುಭೂತಿಯಿಂದ ಅರ್ಥ ಮಾಡಿಕೊಳ್ಳಬಲ್ಲೆ ಎಂದು ನನಗನ್ನಿಸುತ್ತದೆ. ಇಲ್ಲಿ ನಮ್ಮೆಲ್ಲರನ್ನೂ ನಮ್ಮ ದೇಶ-ಕಾಲ-ಜಾತಿ-ವಿದ್ಯಾಭೇದಗಳನ್ನು ಮೀರಿಹೆಣ್ಣು’ ಎಂಬ ಸಮಾನ ಕೊಂಡಿಯೊಂದು ಬೆಸೆಯುತ್ತದೆ. ಆರೋಗ್ಯದ ವಿಷಯದಲ್ಲಿ ಹೀಗೆ ಭಾವಿಸಿಕೊಳ್ಳುವುದು' ಬಹು ಉಪಯುಕ್ತವೂ ಹೌದು. ಅದು ಭಾವನಾತ್ಮಕ ಕೊಂಡಿಯೊಂದನ್ನು ವೈದ್ಯೆ-ರೋಗಿಯ ಮಧ್ಯೆ ಬೆಸೆಯಬಲ್ಲದು. ವೈದ್ಯೆಯ ಬೆಂಬಲದಿಂದ ರೋಗಿ ತನ್ನ ಸಮಸ್ಯೆಗಳನ್ನು ಎದುರಿಸುವಂತೆ ಮಾಡಬಲ್ಲದು. ಬೇರೆ ಮಹಿಳೆಯರು ಹೇಳಿದರೂ ಒಪ್ಪದ ಕುಟುಂಬ-ಸಮಾಜಮನೋವೈದ್ಯೆ’ ಯ ಮಾತನ್ನು ಕೇಳುವಂತೆ ಮಾಡಬಲ್ಲದು. ಇಂಥ ಎಲ್ಲ ಅನುಭವಗಳೂ ನನಗೆ ಆಗಿವೆ. ಹಾಗೆಯೇ ಇದಕ್ಕೆ ವಿರುದ್ಧವಾದ ಅನುಭವಗಳೂ ಇಲ್ಲದಿಲ್ಲ.

ಇಂಥ ಅನುಭವಗಳನ್ನು `ಹಿತೈಷಿಣಿ'ಯಲ್ಲಿ ಗೆಳತಿಯರೊಂದಿಗೆ ಹಂಚಿಕೊಳ್ಳುವ ಆಶಯ `ಹೆಣ್ಣು ಹೆಜ್ಜೆ’ ಯದು. ಅಂಕಣಕ್ಕೆ `ಹೆಣ್ಣು ಹೆಜ್ಜೆ' ಎಂಬ ಹೆಸರು ಏಕೆ?ಮೀನಿನ ಹೆಜ್ಜೆ ಬೇಕಾದರೂ ಗುರುತಿಸಬಹುದು. ಆದರೆ ಹೆಣ್ಣಿನ ಮನಸ್ಸನಲ್ಲಿ ಏನಿದೆ ಎಂಬುದನ್ನು ಗುರುತಿಸಲು ಅಸಾಧ್ಯ’ ಎಂಬ ಮಾತಿದೆ. ಹೆಣ್ಣು ಮನಸ್ಸನ್ನು ಗುರುತಿಸುವುದು ಅಸಾಧ್ಯ ಎಂದು ನನಗನ್ನಿಸುವುದಿಲ್ಲ. ಅವಳ ಭಾವನೆಗಳನ್ನು ಗುರುತಿಸಿದರೂ, ಅದನ್ನು ಒಪ್ಪಲು ನಾವು ಹಿಂದೆ-ಮುಂದೆ ನೋಡುವುದಕ್ಕೆ , ನಾವು ಮುಂದೊಡ್ಡುವ ಒಂದು ನೆಪವೇ ಇವಳ ಮನಸ್ಸೇ ಅರ್ಥವಾಗುವುದಿಲ್ಲ' ಎಂಬ ಮಾತು. ಹಾಗಾಗಿ ಒಬ್ಬ ಮನೋವೈದ್ಯೆಯಾಗಿ, ಮಹಿಳೆಯಾಗಿ, ಮಹಿಳೆಯ ಮನಸ್ಸನ್ನು ಶೋಧಿಸುವ, ಅರ್ಥಮಾಡಿಕೊಂಡು, ಇತರರಿಗೂ ಅರ್ಥ ಮಾಡಿಸಲು ಪ್ರಯತ್ನಿಸುವ ಕೆಲಸವನ್ನುಹೆಣ್ಣು ಹೆಜ್ಜೆ’ಯ ಮೂಲಕ ಮಾಡುವ ಸಾಹಸ ನನ್ನದು. ಹೆಜ್ಜೆಯೂ ಅಷ್ಟೆ, ನೃತ್ಯಗಾತಿಯಾದ ನನಗೆ ಬಹು ಪ್ರಿಯವೇ. ಹಾಗಾಗಿ ಕುಣಿಯುವ ಮನಸ್ಸನ್ನು ಅಕ್ಷರಗಳ ಮೂಲಕ ಅನುಭವಗಳ ಹಿನ್ನೆಲೆಯಲ್ಲಿ ಮುಂದಿನ ಸಂಚಿಕೆಗಳಲ್ಲಿ ಮಾಡುವ ಹಂಬಲ ನನ್ನದು. ಸ್ತ್ರೀಪರ ಕಾಳಜಿಯಿಂದ ಕೆಲಸ ಮಾಡುವ ಯಾರಿಗೂ ಹೆಜ್ಜೆ' ಮೂಡಿಸುವುದು, ಸ್ತ್ರೀ ತನ್ನ ಕಾಲ ಮೇಲೆ ನಿಂತು, ಪ್ರೀತಿಯಿಂದ ಮುಂದಿಡಬೇಕಾದ ದೃಢ ಹೆಜ್ಜೆಗಳ ನೆನಪನ್ನು. ಹಾಗಾಗಿಯೇ ಇದು “ಹೆಣ್ಣು ಹೆಜ್ಜೆ “!


ಡಾ. ಕೆ.ಎಸ್. ಪವಿತ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *