Latestಅಂಕಣ

ಹೆಣ್ಣು ಹೆಜ್ಜೆ/ ಮನೋವೈದ್ಯಕೀಯದಲ್ಲಿ ಮಹಿಳೆ – ಡಾ. ಕೆ.ಎಸ್. ಪವಿತ್ರ

ಸಮಾನವಲ್ಲದ ಜಗತ್ತಿನಲ್ಲಿ ವೈದ್ಯಕೀಯ ರಂಗದಲ್ಲೂ ಪುರುಷ ಮತ್ತು ಸ್ತ್ರೀ ನಡುವೆ ಅಸಮಾನತೆ ಇದ್ದೇ ಇರುತ್ತದೆ. ಬೇರೆಲ್ಲಾ ಕಡೆ ಇರುವಂತೆ ಕ್ಷೇತ್ರಗಳಂತೆ ಮನೋವೈದ್ಯಕೀಯ ಕ್ಷೇತ್ರದಲ್ಲೂ ಇದು ಕಾಣುತ್ತದೆ. ಈ ಅಸಮಾನತೆ ಶಿಕ್ಷಣ, ತರಬೇತಿ ಹಂತದಲ್ಲೇ ಇರುತ್ತದೆ. ಆದರೆ ಮನೋವೈದ್ಯಕೀಯದಲ್ಲಿ ಸ್ತ್ರೀಯರ ಸಾಧನೆ ಭಿನ್ನ ರೀತಿಯದು. ಅದು ಚಿಕಿತ್ಸೆ ಪಡೆದವರಲ್ಲಿ ವ್ಯಕ್ತವಾಗುವ ಸಮಾಧಾನ, ನೆಮ್ಮದಿಗಳಲ್ಲೇ ಕಾಣಸಿಗುತ್ತದೆ.

ಮಾನಸಿಕ ಆರೋಗ್ಯ ಸಪ್ತಾಹ ಮತ್ತೆ ಪ್ರತಿವರ್ಷದಂತೆ ಬರುತ್ತಿದೆ. ಅಕ್ಟೋಬರ್ 4ರಿಂದ 10ರವರೆಗೆ ನಡೆಯುವ ಈ ಸಪ್ತಾಹ ಕೊನೆಗೊಳ್ಳುವುದು ಅಕ್ಟೋಬರ್ 10ರ ವಿಶ್ವಮಾನಸಿಕ ಆರೋಗ್ಯ ದಿನಾಚರಣೆಯೊಂದಿಗೆ. ಆರೋಗ್ಯಕ್ಕೆ ಸಂಬಂಧಿಸಿದ ದಿನಾಚರಣೆಗಳು ಕೇವಲ ಕಾಯಿಲೆಗಳ ಬಗ್ಗೆ ಅರಿವು ಮೂಡಿಸುವುದಷ್ಟೇ ಅಲ್ಲ, ಆರೋಗ್ಯದ ಹಲವು ಆಯಾಮಗಳ ಬಗ್ಗೆ ನಮ್ಮ ಗಮನ ಸೆಳೆಯಬೇಕು. ಈ ಬಾರಿಯ ಧ್ಯೇಯ ವಾಕ್ಯ “Mental Health in an unequal world” – ಸಮಾನವಲ್ಲದ ಜಗತ್ತಿನಲ್ಲಿ ಮಾನಸಿಕ ಆರೋಗ್ಯ. ಆರೈಕೆ ನೀಡುವ ಮನೋವೈದ್ಯಕೀಯ ಸಿಬ್ಬಂದಿಗೂ ಇದು ಅನ್ವಯವಾಗುತ್ತದೆ ಎನ್ನುವುದೇ ವಿಶೇಷ! ಬೇರೆಲ್ಲಾ ಕ್ಷೇತ್ರಗಳಂತೆ ಮನೋವೈದ್ಯಕೀಯ ಮತ್ತು ಅದಕ್ಕೆ ಪೂರಕವಾಗಿ ನಾವು ಭಾವಿಸುವ ಮನೋವಿಜ್ಞಾನ- ಮನೋಸಾಮಾಜಿಕ ಕಾರ್ಯಕ್ಷೇತ್ರಗಳಲ್ಲಿ ಮಹಿಳೆಯರು ಒಂದೇ ಸಮನಾಗಿ ಕಾಣುವುದಿಲ್ಲ.

ನಾನು ಸುಮಾರು ಹದಿನೈದು ವರ್ಷಗಳ ಹಿಂದೆ ಸ್ನಾತಕೋತ್ತರ ಪದವಿಗಾಗಿ ನಿಮ್ಹಾನ್ಸ್ ಪ್ರವೇಶಿಸಿದಾಗ ಆ ಬಾರಿಯ 14 ಎಂ.ಡಿ. ಸೀಟುಗಳಲ್ಲಿ ಇದ್ದದ್ದು ಕೇವಲ ಇಬ್ಬರು ಹುಡುಗಿಯರು. ಅದೇ ಎಂ.ಫಿಲ್ ಕ್ಲಿನಿಕಲ್ ಸೈಕಾಲಜಿಯ 12 ಸೀಟುಗಳಲ್ಲಿ ಇದ್ದದ್ದು ಒಬ್ಬನೇ ಹುಡುಗ / ಮನೋಸಾಮಾಜಿಕ (ಸೈಕಿಯಾಟ್ರಿಕ್ ಸೋಷಿಯಲ್ ವರ್ಕ್) ನಲ್ಲೂ ಇದ್ದದ್ದು 12ರಲ್ಲಿ ಒಬ್ಬನೇ ಹುಡುಗ. ಏಕೆ ಈ ಭಿನ್ನತೆ? ಏಕೆಂದರೆ ಎಂ.ಡಿ. ಮಾಡಲು ಎಂ.ಬಿ.ಬಿ.ಎಸ್. ಮುಗಿಸಿ ಬರಬೇಕೆಂದರೆ ಅದಕ್ಕೆ ಹುಡುಗಿಯರು ಹಲವು ಅಡ್ಡಿಗಳನ್ನು ದಾಟಿ ಬರಬೇಕು. ನಿಮ್ಹಾನ್ಸ್ ನಂತಹ ಸಂಸ್ಥೆಗಳಲ್ಲಿ ರೆಸಿಡೆನ್ಸಿ ಭಾಗವಾಗಿ 24 ಗಂಟೆ ಕೆಲಸ ಮಾಡಲು ಸಿದ್ಧರಿರಬೇಕು. ಕೌಟುಂಬಿಕ ಬದುಕಿನ ಹೊಂದಾಣಿಕೆಗೆ ತಯಾರಾಗಿರಬೇಕು. ಇವೆಲ್ಲದರಿಂದ ಉನ್ನತ ಹುದ್ದೆಗಳಲ್ಲಿ ಉಳಿಯುವ ಮಹಿಳೆಯರು ಕಡಿಮೆಯಿರುವಂತೆ ಮನೋವೈದ್ಯಕೀಯ ಕ್ಷೇತ್ರದಲ್ಲಿಯೂ ಕಡಿಮೆಯೇ. ಆದರೂ ಇತರ ಸ್ನಾತಕೋತ್ತರ ವೈದ್ಯಕೀಯ ಕ್ಷೇತ್ರಗಳಿಗೆ ಹೋಲಿಸಿದರೆ ಮಹಿಳೆಯರು ಮನೋವೈದ್ಯಕೀಯವನ್ನು ನಿಗದಿತ ಕೆಲಸದ ವೇಳೆ, ಕಡಿಮೆ ತುರ್ತುಪರಿಸ್ಥಿತಿಗಳು, ರೋಗಿಗಳೊಡನೆ ಸಂವಹನ ನಡೆಸಲು ಅಧಿಕ ಅವಕಾಶಗಳು ಎಂಬ ಕಾರಣಗಳಿಂದ ಇಂದು ಜಗತ್ತಿನಾದ್ಯಂತ ಆರಿಸಿಕೊಳ್ಳುವುದು ಹೆಚ್ಚಾಗಿದೆ. ಜಗತ್ತಿನ ಮುಂದುವರೆದ ರಾಷ್ಟ್ರಗಳಲ್ಲಿ ಮಹಿಳಾ ಮನೋವೈದ್ಯರ ಸಂಖ್ಯೆಯಷ್ಟೇ ಅಲ್ಲದೆ, ಅವರ ಅವಶ್ಯಕತೆಗಳು, ಸಂಶೋಧನೆಗಳಲ್ಲಿ ಅವರ ಭಾಗವಹಿಸುವಿಕೆ, ಪುರುಷರಿಗಿಂತ ಅವರು ಹಿಂದೆ ಬೀಳುವುದು ಇವೆಲ್ಲದರ ಬಗ್ಗೆ ಚರ್ಚೆ ನಡೆದಿದೆ, ಸಂಶೋಧನೆ ನಡೆಸಲಾಗಿದೆ. ಭಾರತದಲ್ಲಿ ಮಾತ್ರ ಈ ಬಗ್ಗೆ ಮಾಹಿತಿ ಕಡಿಮೆ.

ತಮ್ಮ ಪುರುಷ ಸಹೋದ್ಯೋಗಿಗಳಿಗಿಂತ ಮಹಿಳಾ ಮನೋವೈದ್ಯರು ಭಿನ್ನವೇ? ಹೌದು ಎನ್ನುತ್ತವೆ ಅಧ್ಯಯನಗಳು. ಹೆಚ್ಚು ಸಹಾನುಭೂತಿಯಿಂದ ಅವರು ತಮ್ಮ ರೋಗಿಗಳ ಬಳಿ ವ್ಯವಹರಿಸುತ್ತಾರೆ. ಅವರ ರೋಗಿಗಳು ವೈದ್ಯಕೀಯ ಸಲಹೆಯಿಂದ ಹೆಚ್ಚು ತೃಪ್ತಿಕರ ಭಾವನೆಯನ್ನು ವ್ಯಕ್ತಪಡಿಸುತ್ತಾರೆ ಎಂದು ಕಂಡು ಬಂದಿದೆ. ರಕ್ಷಣಾತ್ಮಕ ಸೇವೆಗಳು -Preventive Services. ಆಪ್ತಸಲಹೆಗಳಲ್ಲಿ ಮನೋವೈದ್ಯೆಯರು ಹೆಚ್ಚು ಸಮಯವನ್ನು ತಮ್ಮ ರೋಗಿಗಳಿಗಾಗಿ ಕಳೆಯುತ್ತಾರೆ. ಒಂದು ಸಮೂಹವಾಗಿ ಮನೋವೈದ್ಯೆಯರು ಜಗತ್ತಿನಾದ್ಯಂತ ಅಧಿಕಾರಕ್ಕೆ ಸಂಬಂಧಪಟ್ಟ ಆಡಳಿತಾತ್ಮಕ ಸ್ಥಾನಗಳು, ಮೆಡಿಕಲ್ ಕಾಲೇಜುಗಳು, ವೃತ್ತಿಪರ ಸಂಸ್ಥೆಗಳಲ್ಲಿ ಗಣನೀಯವಾಗಿ ಮನೋವೈದ್ಯರಿಗಿಂತ ಹಿಂದೆ ಬೀಳುತ್ತಾರೆ. `ಮುಂದುವರಿದಿದೆ’ ಎನ್ನಲಾದ ಇಂಗ್ಲೆಂಡ್ -ಅಮೇರಿಕೆಗಳಲ್ಲಿಯೂ ಅಸೋಸಿಯೇಟ್ ಪ್ರೊಫೆಸರ್ ಸಂಖ್ಯೆ 29%, ಪೂರ್ಣ ಪ್ರಮಾಣದ ಪ್ರೊಫೆಸರ್ ಗಳು 15% ಮತ್ತು ಕೇವಲ 6% ಮಾತ್ರ ಇಲಾಖಾ ಮುಖ್ಯಸ್ಥರು ಮೆಡಿಕಲ್ ಕಾಲೇಜುಗಳಲ್ಲಿ ಮನೋವೈದ್ಯೆಯರಾಗಿದ್ದರು. ಭಾರತೀಯ ಮನೋವೈದ್ಯಕೀಯ ಸಂಘವೆಂಬ ವೃತ್ತಿಪರ ಸಂಸ್ಥೆಯಲ್ಲಿಯೂ 14.6% ರಷ್ಟು ಮಾತ್ರ ಒಟ್ಟು ಸದಸ್ಯತ್ವದ ಮಹಿಳಾ ಪಾಲು. ಈ ಸಂಸ್ಥೆಯ ನಿಯತಕಾಲಿಕೆಯಲ್ಲಿಯೂ 1980ಕ್ಕೆ ಮುನ್ನ ಪ್ರಕಟವಾದ ಸಂಶೋಧನಾ ಲೇಖನಗಳಲ್ಲಿ ಕೇವಲ 45 ಮಾತ್ರ ಮಹಿಳೆಯರವು. 1980ರಿಂದ ಕಳೆದ 30 ವರ್ಷಗಳಲ್ಲಿ ಈ ಸಂಖ್ಯೆ ಹೆಚ್ಚಾಗಿದೆ ಎನ್ನುವುದು ಪರಿಸ್ಥಿತಿ ನಿಧಾನವಾಗಿ ಬದಲಾಗುತ್ತಿದೆ ಎಂಬ ಸಮಾಧಾನ ನೀಡುತ್ತದೆ.

ಪ್ರಥಮ ಮನೋವೈದ್ಯೆ

ಶಾರದಾ ಮೆನನ್


ಭಾರತದ ಪ್ರಥಮ ಮನೋವೈದ್ಯೆ ಯಾರು ಗೊತ್ತೆ? ಮಾಂಬಾಲಿಕಾಲತಿಲ್ ಶಾರದಾ ಮೆನನ್. ಮಂಗಳೂರಿನಲ್ಲಿ ಹುಟ್ಟಿ ನಂತರ ಚೆನ್ನೈನಲ್ಲಿ ನೆಲೆಸಿದವರು. ತಮ್ಮ 98ರ ವಯಸ್ಸಿನಲ್ಲಿಯೂ ರೋಗಿಗಳನ್ನು ನೋಡುವ ಹಿರಿಯ ಮನೋವೈದ್ಯೆ. ಸ್ಕಿಜೋಫ್ರಿನಿಯಾ ರಿಸರ್ಚ್ ಫೌಂಡೇಷನ್ – SCARF ಎಂಬ ಮನೋವೈದ್ಯಕೀಯ ಸಂಸ್ಥೆಯನ್ನು ಕಟ್ಟಿ ಬೆಳೆಸಿದವರು. ಶಾರದಾ ಮೆನನ್‍ರಂತೆ ಇಂದು ಹಲವು ಮಹಿಳೆಯರು ಮನೋವೈದ್ಯಕೀಯವನ್ನು ತಮ್ಮ ಮನಸ್ಸು ಬಯಸಿದ ವೃತ್ತಿಯಾಗಿಸಿಕೊಂಡಿದ್ದಾರೆ.

ಬೇರೆಲ್ಲಾ ವೈದ್ಯಕೀಯ ಶಾಖೆಗಳಲ್ಲಿ ಮಹಿಳೆಯರಿಗೆ ಎದುರಾಗುವ ಸವಾಲುಗಳು ಮನೋವೈದ್ಯಕೀಯದಲ್ಲಿ ಸಹಜವಾಗಿ ಉಂಟಾಗುತ್ತವೆ. ಸ್ನಾತಕೋತ್ತರ ಪದವಿ ಮಾಡುವಾಗಲೇ ಮದುವೆಯಾಗುವುದು, ಗರ್ಭಿಣಿಯಾಗುವುದು, ಒಂದೋ ಪರೀಕ್ಷೆಯನ್ನು ಒಂದು ವರ್ಷ ಬಿಟ್ಟು ಕಟ್ಟಬೇಕಾಗುವುದು ಇಲ್ಲವೇ ಇತ್ತ ಮಗುವನ್ನೂ ಪೂರ್ತಿಯಾಗಿ ನೋಡಲಾಗದೇ, ಅತ್ತ ಪರೀಕ್ಷೆಯನ್ನೂ ಕೈಬಿಡಲಾಗದೆ ಇಬ್ಬಗೆಯ ಸಂಕಟ ಅನುಭವಿಸಬೇಕಾಗುವುದು. ಸ್ನಾತಕೋತ್ತರ ಪದವಿ ಮುಗಿಸಿದ ತಕ್ಷಣ ಮಕ್ಕಳು-ಕುಟುಂಬ ಕಟ್ಟುವ ಕೆಲಸಗಳಲ್ಲಿ ತನ್ನ ವೃತ್ತಿಯನ್ನು ಕೆಲಕಾಲ ಬಿಡುವುದು, ಮತ್ತೆ ಮೊದಲಿನಿಂದ ಆರಂಭಿಸುವುದು, ವೃತ್ತಿ-ಸಂಶೋಧನೆ-ಬೋಧನೆಗಳನ್ನು ಹೊಸತಾಗಿ ರೂಢಿಸಿಕೊಳ್ಳುವುದು ಇವೆಲ್ಲ ಸುಲಭವಲ್ಲ. ಯಶಸ್ಸಿನ ಮಾತು ಬದಿಗಿರಿಸಿ, ತಾವು ಆ ಕ್ಷೇತ್ರದಲ್ಲಿ ಉಳಿದಿದ್ದೇವೆ ಎಂದಾದರೆ ಸಾಕು ಎನ್ನುವ ಭಾವ ಸಹಜವಾಗಿ ಮೂಡುತ್ತದೆ.

ಮಹಿಳೆಯರು ಮನೋವೈದ್ಯೆಯರಾಗಿ ಎದುರಿಸುವ ವೃತ್ತಿಪರ ಸವಾಲುಗಳು ಪುರುಷರಿಗಿಂತ ಬೇರೆಯೇ? ಈ ಉತ್ತರ ಸ್ಪಷ್ಟವಾಗಿ ಹೌದು. ಮೊದಲನೆಯದಾಗಿ ವೈದ್ಯಕೀಯ ವೃತ್ತಿಯಲ್ಲಿಯೇ ಮನೋವೈದ್ಯ ಕ್ಷೇತ್ರವನ್ನು ವಿಚಿತ್ರ'ವಿಶಿಷ್ಟ’ ಅವೈಜ್ಞಾನಿಕ' ಎಂದು ನೋಡುವ ಪ್ರವೃತ್ತಿಯಿದೆ. ಅದರ ಮೇಲೆ ಮಹಿಳೆಯರು ಮನೋವೈದ್ಯರಾದರೆ, ಅವರ ವೃತ್ತಿಯನ್ನು ಒಂದೋಆರಾಮವಾಗಿ ಕಾಲ ಹರಣ ಮಾಡುವ ವೃತ್ತಿ’ ಎಂದೋ ಅಥವಾ ಮಾತಿನಿಂದಲೇ ಎಲ್ಲವನ್ನೂ ಪರಿಹರಿಸುವ' ಕೆಲಸ ಎಂದೋ ಭಾವಿಸುವುದು ಹೆಚ್ಚು. ಮನೋವೈದ್ಯೆಯರೂ ವೈದ್ಯಕೀಯ ತರಬೇತಿ ಹೊಂದಿರುತ್ತಾರೆ. ಅವರಿಗೆ ಮಾತು-ಔಷಧ ಚಿಕಿತ್ಸೆಗಳ ಕೌಶಲ-ಪರಿಣತಿಗಳೂ ಇರುತ್ತವೆ ಎಂಬುದನ್ನು ಸುಲಭವಾಗಿ ಜನರು ಒಪ್ಪುವುದಿಲ್ಲ. ಇಷ್ಟೆಲ್ಲಾ ಅಡ್ಡಿ-ಆತಂಕಗಳ ನಡುವೆಯೂ ಮಹಿಳೆಯರು ಮನೋವೈದ್ಯಕೀಯವನ್ನು ಹೆಚ್ಚು ಹೆಚ್ಚು ಆರಿಸಿಕೊಳ್ಳಬೇಕು ಎಂದು ನನಗನ್ನಿಸುತ್ತದೆ. ಅಷ್ಟೇ ಅಲ್ಲ ಅಧಿಕಾರಕ್ಕೆ ಸಂಬಂಧಪಟ್ಟ, ಆಡಳಿತಾತ್ಮಕ ಹುದ್ದೆಗಳಲ್ಲಿ ಮನೋವೈದ್ಯೆಯರು ಮುನ್ನುಗ್ಗಬೇಕು. ತಮ್ಮನ್ನು ಇತರರು ಉತ್ತೇಜನ ನೀಡಲಿ, ಇತರರು ತಮ್ಮ ಹೆಸರು ಸೂಚಿಸಲಿ ಎಂದು ಕಾಯುವಂತಿಲ್ಲ.

ಏಕೆ?! ಮಹಿಳೆಯರ ಮಾನಸಿಕ ಆರೋಗ್ಯ, ಮಕ್ಕಳ ಮಾನಸಿಕ ಆರೋಗ್ಯ ಇಂಥ ಮುಖ್ಯ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಂಶೋಧನೆ, ಸೇವೆಗಳಿಗೆ ಮಹಿಳೆಯರ `ಮಿದುಳು’ ಹೊಸ ಹೊಸ ರೀತಿಗಳಲ್ಲಿ ಯೋಚಿಸಬಲ್ಲುದು. ಪರಿಹಾರಗಳನ್ನು ಕಂಡುಹಿಡಿಯಬಲ್ಲದು. ಕೌಟುಂಬಿಕ ದೌರ್ಜನ್ಯ-ಕೆಲಸದ ಒತ್ತಡ- ಪತಿಯಲ್ಲಿ ಮದ್ಯವ್ಯಸನ-ಮಕ್ಕಳ ಓದಿನ ಸಮಸ್ಯೆಗಳು-ಮಕ್ಕಳ ಶಿಸ್ತು ಮೊದಲಾದ ಮಹಿಳೆಯರಿಗೆ ಸವಾಲುಗಳು ಎನಿಸುವ ಸಮಸ್ಯೆಗಳನ್ನು ಸಹಾನುಭೂತಿಯಿಂದ ಮಹಿಳೆಯ ಸ್ಥಾನದಲ್ಲಿ ನಿಂತು ಅರ್ಥಮಾಡಿಕೊಂಡು ಸಲಹೆ ನೀಡುವ ಸಾಮಥ್ರ್ಯ ಮನೋವೈದ್ಯೆಗೆ ಮನೋವೈದ್ಯನಿಗಿಂತ ಹೆಚ್ಚು ಎನಿಸುತ್ತದೆ.

ಮನೋವೈಜ್ಞಾನಿಕವಾಗಿ ಹೆಣ್ಣು-ಗಂಡು ಗುಣಗಳೆರಡೂ ಪ್ರತಿ ವ್ಯಕ್ತಿಯಲ್ಲಿರುತ್ತವೆ. ಆದರೆ ಅದನ್ನು ಗುರುತಿಸಿಕೊಂಡು ಪ್ರಾಯೋಗಿಕ-ಭಾವನಾತ್ಮಕ ಗುಣಗಳೆರಡನ್ನೂ ಆಯಾ ಸಂದರ್ಭಕ್ಕನುಗುಣವಾಗಿ ಬಳಸಿ ಯಶಸ್ವಿಯಾಗುವವರು ಕಡಿಮೆಯೇ. ತನ್ನ ಅಧ್ಯಯನದ ಬಲದಿಂದ, ಜೀವನಾನುಭವಗಳನ್ನು ಅಧ್ಯಯನದ ಹಿನ್ನೆಲೆಯಲ್ಲಿ ನೋಡುವುದರಿಂದ ಇದು ಮನೋವೈದ್ಯೆಗೆ ಸಾಧ್ಯವಾಗಬೇಕು. ಅಂತಹ ಮನೋವೈದ್ಯೆಯರು ಸ್ವತಃ ಸುಖೀ ಜೀವನ ನಡೆಸುವುದಷ್ಟೇ ಅಲ್ಲ, ತಮ್ಮ ನಡುವೆ ಸ್ವಸ್ಥ ಮನಸ್ಸುಗಳನ್ನೂ ಬೆಳೆಸಬಲ್ಲರು.

ಡಾ. ಕೆ.ಎಸ್. ಪವಿತ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *