ಹೆಣ್ಣು ಹೆಜ್ಜೆ/ ಮನಸ್ಸಿಗೂ ಬೇಕು ಒಂದಷ್ಟು ಸಮಯ- ಡಾ. ಕೆ.ಎಸ್. ಪವಿತ್ರ

ಮನಸ್ಸನ್ನು ರಿಲಾಕ್ಸ್ ಮಾಡಿಕೊಳ್ಳುವುದು, ರೀಚಾರ್ಜ್ ಮಾಡಿಕೊಳ್ಳುವುದು ಮಹಿಳೆಯರಿಗೆ ಅಂದುಕೊಂಡಷ್ಟು ಸುಲಭವಲ್ಲ. ಜಂಜಾಟಗಳು, ಜಂಜಡಗಳ ನಡುವೆ ಯಾವುದನ್ನೂ ಚಿಂತಿಸದೆ ಹಾಗೆ ಸುಮ್ಮನೆ ಕುಳಿತುಕೊಳ್ಳುವುದು ಹೇಳಿದಷ್ಟು ಸುಲಭವಲ್ಲ. ಎಷ್ಟೊಂದು ಕೆಲಸ' ಎಂಬುದಕ್ಕೆ ಉತ್ತರವಿಲ್ಲ! ಒತ್ತಡ ಕಡಿಮೆ ಮಾಡಿಕೊಳ್ಳಲು ಕೆಲಸದ ಬದಲಾವಣೆ, ಕೆಲಸದ ಕಾಲಾವಧಿ ಬದಲಾಗಬೇಕಿಲ್ಲ. ಬದಲಾಗಬೇಕಾದ್ದು ನಾವು ನೀವು ಯೋಚಿಸುವ ಬಗೆ!ಮನಸ್ಸಿ’ಗೆ ಸ್ವಲ್ಪ ಸಮಯ ನೀಡದಿದ್ದರೆ, ಮನಸ್ಸಿಗೆ ಸದಾ ಕೆಲಸ ನೀಡುತ್ತಲೇ ಇದ್ದರೆ ಧ್ಯಾನ' ಎನ್ನುವುದು 'ಮನಸ್ಸಿಗೆ ಮೋಸ’ ಮಾಡುವ ಪ್ರಕ್ರಿಯೆಯಷ್ಟೇ ಆಗಿಬಿಡಬಹುದು!

ನಾವಿರುವ ಜಗತ್ತು ಇಂದು ಬಿಡುವಿಲ್ಲದ್ದು. ಬಸ್‍ ನಿಲ್ದಾಣ – ರೈಲು ನಿಲ್ದಾಣ ಎಲ್ಲೆಡೆಯಲ್ಲಿ ನಾವು ನೋಡುವ “ಜನ ತಮ್ಮ ಗುರಿ ತಲುಪಲು ಓಡುವ” ದೃಶ್ಯದಂಥ ಸನ್ನಿವೇಶದಲ್ಲಿ ನಾವೆಲ್ಲರೂ ಸಿಲುಕಿಕೊಂಡಿದ್ದೇವೆ ಅನಿಸುತ್ತದೆ. ಜೀವನದ ವೇಗ ಎಷ್ಟು ತೀವ್ರವೆಂದರೆ, ಕ್ಷಣ ನಿಂತು, ನಾವು ಏಕೆ ಹೀಗೆ ಓಡುತ್ತಿದ್ದೇವೆ ಎಂಬುದನ್ನು ನೋಡಲೂ ನಮಗೆ ಪುರುಸೊತ್ತಿಲ್ಲ. ನಮ್ಮ ಮಿದುಳು-ಮನಸ್ಸುಗಳಿಗೆ ಯಾವಾಗಲೂ ಕೆಲಸ. ತಮ್ಮ ಗಡಿಬಿಡಿಯಲ್ಲಿ ಅವು ನಮ್ಮ ಕೈಕಾಲುಗಳಿಗೆ ಕೆಲಸ ನೀಡದೆ ಬಿಡುವುದಿಲ್ಲ.

ಹೀಗಿರುವಾಗ, ಒಂದೇ ನಿಮಿಷ ಯೋಚಿಸಿ ನೋಡಿ. ಕೊನೆಯ ಬಾರಿ ಯಾವಾಗ ನೀವು ಏನೂ ಮಾಡದೆ ಸುಮ್ಮನೆ ಕುಳಿತುಕೊಂಡದ್ದು?! ಹತ್ತು ನಿಮಿಷಗಳ ಕಾಲ ಯಾವ-ಯಾರ ಗೊಡವೆಯೂ ಇಲ್ಲದೆ ಕಳೆಯಲು ನಿಮಗೆ ಸಾಧ್ಯವಿದೆಯೇ? ಏನೂ ಇಲ್ಲವೆಂದರೆ ಸುತ್ತಮುತ್ತಲೂ ಟಿ.ವಿ. ಇಂಟರ್‍ನೆಟ್ ಇರದೆ, ಚ್ಯಾಟ್ ಮಾಡದೆ, ತಿನ್ನದೆ, ಓದದೆ, ಹಿಂದಿನ ಬಗ್ಗೆ ಯೋಚಿಸದೆ, ಮುಂದಿನ ಬಗೆ `ಪ್ಲ್ಯಾನ್’ ಮಾಡದೆ, ಸುಮ್ಮನೇ ಸ್ಪೈಪ್ ಮಾಡದೆ ಇತ್ಯಾದಿ. ಹಾಗೇ ಸುಮ್ಮನೆ, ಏನೆಂದರೆ ಏನೂ ಮಾಡದೆ ಉತ್ತರ ನೀಡಲು ಕಷ್ಟವಾಗುತ್ತಿದೆ ತಾನೆ?

ಇದು ನಾವು ಊಹಿಸುವುದಕ್ಕಿಂತ ಸಾಕಷ್ಟು ಕಷ್ಟವಾದ ಸಂಗತಿ,`ಹತ್ತು ನಿಮಿಷ’ಗಳ ಈ ಸಮಯ ನೇರವಾಗಿ ಸಂಬಂಧಿಸಿರುವುದು ನಮ್ಮ ಮನಸ್ಸಿಗೆ -ನಮ್ಮ ಜೀವನದ ಪ್ರತಿ ಕ್ಷಣವನ್ನೂ ನಾವು ಅನುಭವಿಸುವಂತೆ ಮಾಡುವುದೇ ಮನಸ್ಸು. ನಾವು ಸಂತೋಷವಾಗಿ, ಸ್ಥಿರವಾಗಿ ಇರುವಂತೆ, ಇತರರೊಂದಿಗೆ ಹೊಂದಿಕೊಳ್ಳುವ ಸಂಬಂಧಗಳನ್ನು ಬೆಳೆಸಿಕೊಳ್ಳುವಂತೆ ಮಾಡುವುದೂ ಇದೇ ಮನಸ್ಸು. ಸೃಜನಶೀಲವಾಗಿ, ಸ್ಪೂರ್ತಿಯುತವಾಗಿ, ನಮ್ಮನ್ನು ನಾವು ಬೆಳೆಸಿಕೊಳ್ಳುವಲ್ಲಿ ಕಾರಣವಾಗುವುದೂ ಈ ಮನಸ್ಸೇ. `ಮನಸ್ಸು’ ಇವೆಲ್ಲಕ್ಕೂ ಕಾರಣ ಎಂಬುದು ನಮಗೆಲ್ಲರಿಗೂ ಗೊತ್ತಿಲ್ಲದಿಲ್ಲ. ಆದರೂ ಅದರೆಡೆಗೆ ನೋಡಲೂ ನಮಗೆ ಸಮಯವೇ ಇಲ್ಲ. ಅದರ ಬದಲು ನಮ್ಮ ಕಾರು, ಬಟ್ಟೆಗಳು, ಕೂದಲು, ಮುಖ ಇವುಗಳ ಬಗ್ಗೆ ನಾವು ನೀಡುವ ಗಮನವೇ ಹೆಚ್ಚು ಇದರ ಪರಿಣಾಮವೇ ನಮಗೆ ಎದುರಾಗುವ ಒತ್ತಡ. ಬಟ್ಟೆ ಹಾಕಿ, ಗರಗರ ತಿರುಗಿಸಿದಂತೆ ನಮ್ಮ ಮನಸ್ಸೂ ಒಂದು ನಿಮಿಷವೂ ಬಿಡುವಿಲ್ಲದಂತೆ ತಿರುಗುತ್ತಿರುತ್ತದೆ. ಕಷ್ಟವಾದ, ಗೊಂದಲ ಮಯವಾದ ಭಾವನೆಗಳು ನಮ್ಮ ಮನಸ್ಸನ್ನು ದಿನನಿತ್ಯ ಕಾಡುತ್ತದೆ. ಅವುಗಳನ್ನು ಹೇಗೆ ನಿಭಾಯಿಸಬೇಕು ಎನ್ನುವ ಬಗ್ಗೆ ನಮಗೆ ಗೊತ್ತಿಲ್ಲ. ಈ ಜಂಜಾಟದಲ್ಲಿ ನಾವೆಷ್ಟು ಮುಳುಗಿದ್ದೇವೆಂದರೆ, ನಾವಿರುವ `ಇಂದಿ’ನಲ್ಲಿ ನಾವು ಜೀವಿಸದಿರುವಷ್ಟು! `ಅಯ್ಯೋ ಜೀವನವೆಂದರೆ ಹಾಗೇ! ಅದಕ್ಕೆ ಇಷ್ಟೆಲ್ಲಾ ತಲೆಕೆಡಿಸಿಕೊಳ್ಳಬೇಕು ಏಕೆ?’ ಎಂದು ತಳ್ಳಿ ಹಾಕಿ ಹೇಗೋ ಮುಂದುವರಿಯುವ ಪ್ರಯತ್ನ ಮಾಡುತ್ತೇವೆ. ಆದರೆ ಅದು “ಹಾಗಲ್ಲ” ಎನ್ನುವುದೇ ಸ್ವಾರಸ್ಯ.

ಧ್ಯಾನ’ ಮಾಡಿ, `ರಿಲ್ಯಾಕ್ಸ್ ಮಾಡಿ’ ಎಂದೆಲ್ಲಾ ಮನೋವೈದ್ಯರು ಹೇಳುತ್ತಾರೆ. ಅಥವ ಯೋಗಿಗಳು, ಅಧ್ಯಾತ್ಮ ಗುರುಗಳು ಅದರ ಮಾರ್ಗವನ್ನು ಬೋಧಿಸುತ್ತಾರೆ. ನಮ್ಮಲ್ಲಿ ಕೆಲವರು ನಿಯಮಿತವಾಗಿ ಹಾಗೆ ಮಾಡುವ ಪ್ರಯತ್ನವನ್ನೂ ಮಾಡುತ್ತೇವೆ. ಆದರೆ ಅದರಂದ ನಾವು ಇತರರಿಗಿಂತ ಚೆನ್ನಾಗಿ ಒತ್ತಡವನ್ನು ನಿಭಾಯಿಸುತ್ತೇವೆ ಎಂದೆನಿಸುವುದಿಲ್ಲ. ಇದು ಏಕೆ? !

ಒತ್ತಡದ ಮೂಲ : `ರಿಲ್ಯಾಕ್ಸೇಷನ್’ ಅಥವಾ `ಧ್ಯಾನ’ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವುದು ವಜ್ರಾಸನ / ಪದ್ಮಾಸನ, ಪರಿಮಳ /ಹರ್ಬಲ್ ಟೀ/ ಸಸ್ಯಾಹಾರ ಇತ್ಯಾದಿ ಇತ್ಯಾದಿ. `ಮನಸ್ಸಿಗೊಂದು ಮಾತ್ರೆ’ ಎನ್ನುವ ರೀತಿಯಲ್ಲಿ ಧ್ಯಾನವನ್ನು ನಾವು ಪರಿಭಾವಿಸಿ ಬಿಡುತ್ತೇವೆ. “ತಲೆನೋವು ಬಂತು ಮಾತ್ರೆ ತೆಗೆದುಕೋ” ಎನ್ನುವಂತೆ, “ಒತ್ತಡವಾಯಿತು, ಧ್ಯಾನ ಮಾಡು” ಎನ್ನುತ್ತೇವೆ. ಆದರೆ ಹಾಗೆ ಮಾಡುವಾಗಲೂ ಒತ್ತಡವಿರುವುದು ಕೆಲಸ/ಕುಟುಂಬ/ಸಮಾಜಗಳಲ್ಲಿ ಎನ್ನುವುದಕ್ಕಿಂತ ಒತ್ತಡದ ಮೂಲ ನಮ್ಮ ಮನಸ್ಸು ಎಂಬುದನ್ನು ನಾವು ಗಮನಿಸುವುದಿಲ್ಲ.

ಆಫೀಸಿನಲ್ಲಿ ಕೆಲಸ ಮಾಡುತ್ತೇವೆ ಎನ್ನಿ. ಸುಮಾರು 8 -10 ಗಂಟೆಗಳ ಕಾಲ ಕೆಲಸ ಮಾಡಿದ ಮೇಲೆ ಮನೆಗೆ ಹಿಂದಿರುಗುವಾಗ ಬಾಗಿಲು ಮುಚ್ಚಿ ಬರುತ್ತೇವಷ್ಟೆ. ಆಫೀಸಿನ ಬಾಗಿಲು ಮುಚ್ಚಿದ ಹಾಗೇ, ತಲೆಯೊಳಗಿನ ಕೆಲಸಗಳ ಹೊರೆಯ ಬಾಗಿಲು ಮುಚ್ಚಿದ್ದೇವೆಯೋ ಇಲ್ಲವೋ? ! ಪುಟ್ಟದೊಂದು ಝೆನ್ ಕಥೆ ನನಗೆ ನೆನಪಾಗುತ್ತದೆ. ರೈತನೊಬ್ಬ ಊರಿನ ಹೊರಗೆ ಗುಡಿಸಲಿನಲ್ಲಿದ್ದ. ಬಡವನಾದರೂ ಆತ ತುಂಬ ಸುಖಿ. ಪ್ರತಿನಿತ್ಯ ಮನೆಗೆ ಹಿಂದಿರುಗುವಾಗ ಆತ ತನ್ನ ಮನೆಯ ಹೊರಗಿದ್ದ. ಮರದ ಬಳಿ ಒಂದು ಗಂಟನ್ನು ತೂಗಿ ಹಾಕಿ ಬರುತ್ತಿದ್ದ. ಹುಡುಗನೊಬ್ಬ ಕೆಲದಿನಗಳ ಕಾಲ ಕುತೂಹಲದಿಂದ ಇದನ್ನು ನೋಡಿ ನಂತರ ರೈತನನ್ನು ಕೇಳಿದ “ನೀನು ಇಷ್ಟು ಸಂತಸವಾಗಿರುವುದಕ್ಕೂ, ಈ ದಿನಚರಿಗೂ ಸಂಬಂಧವಿದೆಯೇ?” ಆಗ ರೈತ ಹೇಳಿದ “ಸಂಬಂಧವಿದೆಯೇ ಇಲ್ಲವೆ ನನಗೆ ಗೊತ್ತಿಲ್ಲ. ನಾನು ಪ್ರತಿನಿತ್ಯ ಹೊಲದಿಂದ ಹಿಂದಿರುಗಿದಾಗ ನನ್ನ ತಲೆಯಲ್ಲಿರುವ ಚಿಂತೆಗಳನ್ನೆಲ್ಲಾ ಒಂದು ಗಂಟಾಗಿ ಕಟ್ಟಿ, ಮರದ ಬಳಿ ಇಟ್ಟು ಮನೆಯ ಒಳ ಬರುತ್ತೇನೆ. ಇದು ನನ್ನನ್ನು ಹಗುರವಾಗಿಸುತ್ತದೆ”. ಇದು ತಲೆಯ ಬಾಗಿಲನ್ನೂ ಆಫೀಸಿನ ಬಾಗಿಲಿನಂತೆ ಮುಚ್ಚುವ ಬಗೆ!

ಮೆಲುಕು ಹಾಕುವುದು : ಕೆಲಸದ ಒತ್ತಡದ ಬಗ್ಗೆ ಕುತೂಹಲಕಾರಿಯಾದ ಸತ್ಯವೊಂದಿದೆ. ಕೆಲಸ ಮಾಡುತ್ತಿರುವಾಗ ನಾವು ಆ ಒತ್ತಡದ ಬಗ್ಗೆ ಗಮನಿಸಲಾಗುವುದಿಲ್ಲ. ನಾವು ಆಗ ತುಂಬಾ `ಬ್ಯುಸಿ’, ಕೆಲಸದ ಹೊರಗೆ, ನಾವು ಓಡಾಡುವಾಗ-ಮನೆಯಲ್ಲಿರುವಾಗ -ನಾವು `ರಿಲ್ಯಾಕ್ಸ್’ ಮಾಡಬೇಕೆಂದಾಗ ಈ ಒತ್ತಡವನ್ನು ನಾವು ಅನುಭವಿಸುತ್ತೇವೆ. ಹಾಗಾಗಿಯೇ ತಲೆನೋವು/ಮೈಕೈ ನೋವು/ವಿವಿಧ ದೈಹಿಕವಾದ ಕೈಕಾಲು ಜುಂಜು -ಇತ್ಯಾದಿ ಇತ್ಯಾದಿ ನಮಗೆ ಗೊತ್ತಾಗುವುದು ಬಿಡುವಿನ ಸಮಯದಲ್ಲಿ. ಬಿಡುವಿನ ಸಮಯದಲ್ಲಿ ಸಂತೋಷ ಪಡಲು ಒತ್ತಡವಿಲ್ಲದೇ `ರಿಲ್ಯಾಕ್ಸ್’ ಆಗಲು ಇರುವ ಬಹು ದೊಡ್ಡ ಅಡ್ಡಿ `ಮೆಲುಕು ಹಾಕುವುದು’ – Rumination!

ಮೆಲುಕು ಹಾಕುವುದು ಎಂದರೆ ಮೂರನೇ ತರಗತಿಯಲ್ಲಿ ಕಲಿತ ವಿಜ್ಞಾನದ ಪಾಠ ನೆನಪಿದೆ ತಾನೆ? ದನಗಳು ತಾವು ತಿಂದ ಆಹಾರವನ್ನು ಜೀರ್ಣ ಮಾಡಿಕೊಳ್ಳುವುದು ಹೀಗೆ ಅಗಿಯುವ ಮೂಲಕ. ದನಗಳು ಆಹಾರವನ್ನು ತಿಂದು, ನುಂಗಿ, ಮತ್ತೆ ಮರಳಿ ಬಾಯಿಗೆ ತಂದು ಮತ್ತೆ ಅಗಿಯುತ್ತವೆ. ಇದು ದನಗಳಿಗೆ ಸಹಜವಾದದ್ದು. ಆದರೆ ಮನುಷ್ಯರಿಗೆ?! ನಾವು ಆಹಾರವನ್ನಂತೂ ಹಾಗೆ ಅಗಿಯುವುದಿಲ್ಲವಷ್ಟೆ. ಹೊಟ್ಟೆಯಲ್ಲಿ ಅರೆ ಜೀರ್ಣವಾದ ಆಹಾರವನ್ನು ಮತ್ತೆ ವಾಪಸ್ ತರಲು ಸಾಧ್ಯವಿಲ್ಲ. ವಾಪಸ್ ಬಾಯಿಗೆ ತಂದು ಮತ್ತೆ ಅಗಿಯಬೇಕು ಎಂಬುದನ್ನು ನೆನಪಿಸಿಕೊಂಡರೇ `ಅಸಹ್ಯ’ ಎನಿಸುತ್ತದೆ! ಆಹಾರವನ್ನು ಹಾಗೆ ಅಗಿಯದ ನಾವು, ಯೋಚನೆಗಳ ವಿಷಯದಲ್ಲಿ ಮಾತ್ರ `ಮೆಲುಕು’ ಹಾಕುವುದನ್ನು ಅವ್ಯಾಹತವಾಗಿ ಮುಂದುವರಿಸುತ್ತೇವೆ. ಗಂಟೆಗಟ್ಟಲೆ ನಾವು ಪೂರ್ಣಗೊಳಿಸಲಾಗದ ಕೆಲಸಗಳು, ಸಹೋದ್ಯೋಗಿಗಳೊಂದಿಗೆ ಜಗಳ, ಭವಿಷ್ಯದ ಬಗ್ಗೆ ಚಿಂತೆ, ಈಗಾಗಲೇ ನಾವು ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಮತ್ತೆ ಮತ್ತೆ `ಸರಿಯೋ/ತಪ್ಪೋ ಎಂದು ಯೋಚಿಸುವುದು ಇವೆಲ್ಲದರ ಬಗ್ಗೆ ಮೆಲುಕು ಹಾಕಿಯೇ ಹಾಕುತ್ತೇವೆ.

ಹೀಗೆ ಮೆಲುಕು ಹಾಕುವುದರ ಬಗ್ಗೆ ಹಲವು ಅಧ್ಯಯನಗಳು ನಡೆದಿವೆ. ಕೆಲಸದ ಬಗ್ಗೆ ಮತ್ತೆ ಮತ್ತೆ ಮೆಲುಕು ಹಾಕುವುದು, ಚಿಂತೆಯ ಯೋಚನೆಗಳನ್ನು ಮತ್ತೆ ಮತ್ತೆ `ರಿಪ್ಲೇ’ ಮಾಡುವುದು, ನಾವು ಪುನಶ್ಚೇತನ – `ರಿಚಾರ್ಜ್’ ಗೊಳ್ಳುವ ಸಾಮಥ್ರ್ಯವನ್ನು ಕ್ಷೀಣಿಸುವಂತೆ ಮಾಡುತ್ತದೆ. ಮೆಲುಕು ಹಾಕುವುದು ಹೆಚ್ಚಾದಷ್ಟೂ, ನಿದ್ರಾಹೀನತೆ, `ಜಂಕ್ ಆಹಾರ’ ತಿನ್ನುವ ಅಭ್ಯಾಸ, ಕೆಟ್ಟ `ಮೂಡ್’ – ಇವು ಹೆಚ್ಚುತ್ತವೆ. ಹೃದಯ ಸಂಬಂಧೀ ಕಾಯಿಲೆಗಳ ಸಾಧ್ಯತೆ ಏರುತ್ತದೆ. ನಮ್ಮ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ಅಂದರೆ ನಾವು ಕೆಲಸ ಮಾಡಲು ಬೇಕಾಗುವ ಸಾಮಥ್ರ್ಯವೇ ಕುಂದುತ್ತದೆ. ನಮ್ಮ ಸಂಬಂಧಗಳು -ಕುಟುಂಬದವರ ಮೇಲೂ ಇದರ ಪರಿಣಾಮ ಬಹಳ. ನಾವು ಮನೆಗೆ ಬಂದರೂ ಮನಸ್ಸು ಮಾತ್ರ `ಇನ್ನೂ ಎಲ್ಲೋ ಇದೆ’ ಎಂಬುದನ್ನು ನಮ್ಮ ಸುತ್ತಮುತ್ತಲಿರುವವರು ಸುಲಭವಾಗಿ ಅರಿಯುತ್ತಾರಷ್ಟೆ!.

ಕುತೂಹಲಕ್ಕಾಗಿ ಪ್ರತಿಯೊಬ್ಬರೂ ಸುಲಭವಾದ ಪ್ರಯೋಗವೊಂದನ್ನು ಮಾಡಿ ನೋಡಲು ಸಾಧ್ಯವಿದೆ. ಪ್ರತಿನಿತ್ಯ ಎಷ್ಟು ಸಮಯ ಹೀಗೆ `ಮೆಲುಕು ಹಾಕಿದ್ದೀರಿ’ ಎಂಬ ಬಗ್ಗೆ ಒಂದು ದಿನಚರಿ ಬರೆದರೆ, ಸಾಮಾನ್ಯವಾಗಿ ನಮ್ಮಲ್ಲಿ ಪ್ರತಿಯೊಬ್ಬರೂ ಒಂದು ವಾರಕ್ಕೆ ಸುಮಾರು 14 ಗಂಟೆಗಳ ಕಾಲ ಹೀಗೆ ಮೆಲುಕು ಹಾಕುವುದರಲ್ಲಿ, ನಮ್ಮ ಒತ್ತಡ ಹೆಚ್ಚಿಸಿಕೊಳ್ಳುವುದರಲ್ಲಿ ಮಗ್ನರಾಗುತ್ತೇವೆ ಎಂಬುದು ನಮ್ಮ ಗಮನಕ್ಕೆ ಬರುತ್ತದೆ.

ಇದನ್ನು ನಿಯಂತ್ರಿಸುವುದು ಹೇಗೆ? ! ಅದಕ್ಕೆ ಬೇಕಾದದ್ದು ಒಂದಿಷ್ಟು ಶಿಸ್ತು, ಇನ್ನೊಂದಿಷ್ಟು ಹಠ. ಇಮೇಲ್ /ವಾಟ್ಸ್ ಆ್ಯಪ್ ಸಂದೇಶಗಳು ಎಲ್ಲೂ ಬರಬಹುದಾದ ಈ `ಸ್ಮಾರ್ಟ್’ ಯುಗದಲ್ಲಿ, ಕೆಲಸ -ಮನೆಯ ನಡುವಣ ಗಡಿರೇಖೆಯೇ ಮಾಯವಾಗಿರುವ ಈ ಹೊತ್ತಿನಲ್ಲಿ ಇದು ಸುಲಭವಲ್ಲ. ದೈಹಿಕವಾದ ಗಡಿರೇಖೆ (Physical Boundary) ಮಾಯವಾಗಿರಬಹುದು. ಆದರೆ ಮಾನಸಿಕ ಗಡಿರೇಖೆ ಸಾಧ್ಯವಿದೆ.

ಮಕ್ಕಳೊಡನೆ ಆಟವಾಡುವಾಗ, ಪತಿಯೊಡನೆ ಊಟ ಮಾಡುವಾಗ “ಎಷ್ಟೊಂದು ಕೆಲಸವಿದೆ!” ಎಂಬುದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವವರು ಬಹಳಷ್ಟು ಜನ. ಅವರೆಲ್ಲಾ ಮಾಡಿಕೊಳ್ಳಬೇಕಾದ್ದು ಚಿಂತೆಯ ಬದಲು “ಇರುವ ಕೆಲಸವನ್ನು ಎಲ್ಲಿ ಹೊಂದಿಸಿಕೊಳ್ಳಬಹುದು/ಆದ್ಯತೆ ಯಾವುದಕ್ಕೆ?” ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ. ಈ ಪ್ರಶ್ನೆಗಳಿಗೆ ಉತ್ತರ ಸಾಧ್ಯ. `ಎಷ್ಟೊಂದು ಕೆಲಸ’ ಎಂಬುದಕ್ಕೆ ಉತ್ತರವಿಲ್ಲ! ಒತ್ತಡ ಕಡಿಮೆ ಮಾಡಿಕೊಳ್ಳಲು ಕೆಲಸದ ಬದಲಾವಣೆ, ಕೆಲಸದ ಕಾಲಾವಧಿ ಬದಲಾಗಬೇಕಿಲ್ಲ. ಬದಲಾಗಬೇಕಾದ್ದು ನೀವು ಯೋಚಿಸುವ ಬಗೆ.

ಧ್ಯಾನ/ ರಿಲ್ಯಾಕ್ಸೇಷನ್ ಯಾವುದಕ್ಕೂ ಮೆಲುಕು ಹಾಕುವುದರಿಂದ ದೂರವಿರುವುದು ಮುಖ್ಯ. ವಜ್ರಾಸನ / ಪದ್ಮಾಸನ / ಶಾಂತ ಪರಿಸರ ಎಲ್ಲವೂ ಇದ್ದೂ, `ಮನಸ್ಸಿ’ಗೆ ಸಮಯ ನೀಡದಿದ್ದರೆ, ಮನಸ್ಸಿಗೆ ಕೆಲಸ ನೀಡುತ್ತಲೇ ಇದ್ದರೆ `ಧ್ಯಾನ’ ಎನ್ನುವುದು ಮನಸ್ಸಿಗೆ `ಮೋಸ’ ಮಾಡುವ ಪ್ರಕ್ರಿಯೆಯಷ್ಟೇ ಆಗಿಬಿಡಬಹುದು!

ಡಾ. ಕೆ.ಎಸ್. ಪವಿತ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *