ಹೆಣ್ಣು ಹೆಜ್ಜೆ/ ಮದುವೆಯಾಗುವುದೆಂದರೆ … – ಡಾ.ಕೆ.ಎಸ್. ಪವಿತ್ರ

ಹಿಳೆಯ ಜೀವನವೇ ಮದುವೆಗಾಗಿ, ಮದುವೆಯಾಗುವುದು – ಮಕ್ಕಳನ್ನು ಪಡೆಯುವುದು ಇವುಗಳೇ ಆಕೆಯ ಜೀವನದ ಗುರಿ ಎಂಬ ಧೋರಣೆ ಈಗ ಬಹಳಷ್ಟು ಬದಲಾಗಿದೆ. ಆದರೂ ಮದುವೆ ಎಂಬ ಸಂಕೀರ್ಣ ವ್ಯವಸ್ಥೆ 21ನೇ ಶತಮಾನದಲ್ಲಿಯೂ ಗಂಡಿಗೆ `ಸರಳ’ ಎನಿಸುವಷ್ಟು, ಹೆಣ್ಣಿಗೆ ಸರಳವಾಗಿಲ್ಲ. ಮದುವೆ, ದಾಂಪತ್ಯ, ಸಂಸಾರಕ್ಕೆ ಎಲ್ಲರಿಗೂ ಅನ್ವಯಿಸುವ ಸಿದ್ಧ ಸೂತ್ರಗಳಿಲ್ಲ. ಆದರೆ, ಮಹಿಳೆಯರು ಬಾಯಿ ತೆರೆದು ತಮ್ಮ ಕೌಶಲಗಳನ್ನು, ಗಂಡ-ಮಕ್ಕಳು-ಕುಟುಂಬದ ಇತರರಿಗೆ ಕಲಿಸಬಹುದಾದ ಹೊಂದಾಣಿಕೆಯ ಸೂತ್ರಗಳನ್ನು ಕಲಿಸಿರುವುದನ್ನು ಹಂಚಿಕೊಳ್ಳಬೇಕು. ಗಂಡುಮಕ್ಕಳನ್ನು ಬೆಳೆಸುವ ತಾಯಂದಿರು “ಗಂಡು ಮಕ್ಕಳು ಹೇಗಿದ್ದರೂ ಪರವಾಗಿಲ್ಲ ಮದುವೆಯಾಗುತ್ತದೆ” ಎಂಬ ಭ್ರಮೆಯಿಂದ ಹೊರಬರಬೇಕು.

ಕುತೂಹಲಕಾರಿ ವಿಷಯ ಗೊತ್ತೆ?! ಮದುವೆಯಾಗುವುದು ಪುರುಷರಿಗೆ ಮತ್ತು ಮಹಿಳೆಯರಿಗೆ ಖಿನ್ನತೆಯ ವಿರುದ್ಧ ಎಷ್ಟು ರಕ್ಷಣೆ ನೀಡುತ್ತದೆ ಎನ್ನುವುದನ್ನು ಒಂದು ಅಧ್ಯಯನ ಕಂಡುಹಿಡಿಯಲು ಪ್ರಯತ್ನಿಸಿದೆ. ಅದರ ಪ್ರಕಾರ ಪುರುಷರಿಗೆ ಮದುವೆಯಿಂದ ಖಿನ್ನತೆ ಬರುವ ಸಾಧ್ಯತೆ ಕಡಿಮೆಯಾಗುತ್ತದೆ, ಅದೇ ಮಹಿಳೆಯರಿಗೆ ಖಿನ್ನತೆಯ ಸಾಧ್ಯತೆ ಹೆಚ್ಚುತ್ತದೆ! ಮದುವೆಯ ಬಗ್ಗೆ ಹೀಗೆ ನಾನು ಕೆದಕಲು, ಕೆಣಕಲು ಕಾರಣ ಇತ್ತೀಚೆಗೆ ಓದಿದ, ನೋಡಿದ, ಕೇಳಿದ ಸಂಗತಿಗಳು.

ವ್ಯಕ್ತಿತ್ವ ವಿಕಸನ ಶಿಬಿರವೊಂದರ ಅವಧಿಯಲ್ಲಿ ಕೋಪ ನಿರ್ವಹಣೆಯ ಬಗೆಗೆ ಯುವತಿಯೊಬ್ಬಳು ತನ್ನ ಕೋಪದ ಬಗ್ಗೆ ಹೇಳುತ್ತಾ “ನನಗೆ ನನ್ನ ಪತಿ ಬಟ್ಟೆಯನ್ನು ಅಲ್ಲಲ್ಲೇ ಹಾಕುವುದು, ಅದನ್ನು ತಾನು ಎತ್ತಿ ಒಗೆಯಬೇಕಾಗುವುದು, ಇವೆಲ್ಲದರ ಬಗ್ಗೆ ತುಂಬಾ ಕೋಪ ಬರುತ್ತದೆ. ಅದಕ್ಕೆ ಏನು ಮಾಡಬೇಕು?” ಎಂದು ಕೇಳಿದಳು. ಸಂವಾದ ನಡೆಸುತ್ತಿದ್ದ ಸಂಪನ್ಮೂಲ ವ್ಯಕ್ತಿ “ಮದುವೆ ಹೇಗೆ ಒಂದು ಹೊಂದಾಣಿಕೆ, ಅದು ಹೇಗೆ ಸ್ವಾರ್ಥರಹಿತವಾದ ಪ್ರೀತಿಯಿಂದಲೇ ಗಟ್ಟಿಯಾಗಿ ನಿಲ್ಲುತ್ತದೆ” ಎಂಬುದನ್ನು ವಿವರಿಸಿ, ಕೋಪವನ್ನು ಕಡಿಮೆ ಮಾಡಿಕೊಳ್ಳಲು ಆಳವಾದ ಉಸಿರಾಟ, ಮನಸ್ಸನ್ನು ಬೇರೆಡೆಗೆ ತಿರುಗಿಸುವುದು ಮೊದಲಾದ ಅಂಶಗಳನ್ನು ವಿವರಿಸಿದರು. ಅಕೆ ಸುಮ್ಮನೆ ಕುಳಿತಳು !

ಪತ್ರಿಕೆಗಳಲ್ಲಿ ವರದಿಯಾದ ಎರಡು ಮದುವೆಯ ಬಗೆಗಿನ ಸುದ್ದಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಜೋರಾಗಿ ಓಡಾಡಿ ತಣ್ಣಗಾದವು. ಒಂದು, ವಧುವೊಬ್ಬಳು ವರನಿಗೆ ಎರಡರ ಮಗ್ಗಿ ಬರುವುದಿಲ್ಲ ಎಂಬ ಕಾರಣಕ್ಕೆ ಮದುವೆಯನ್ನು ರದ್ದುಪಡಿಸಿದ್ದು. ಇನ್ನೊಂದು ಅಕ್ಕನಿಗೆ ಶ್ರವಣದೋಷ – ಮಾತು ಬರುವುದಿಲ್ಲ ಎಂಬ ಕಾರಣಕ್ಕೆ ಅಕ್ಕ ತಂಗಿ ಇಬ್ಬರನ್ನೂ ಒಂದೇ ವರನೊಂದಿಗೆ ಅಪ್ಪ-ಅಮ್ಮ ಮದುವೆ ಮಾಡಿದ್ದು.

ನಾನು ನೋಡಿದ ಸಿನಿಮಾ, ಬಹಳಷ್ಟು ಸುದ್ದಿ ಮಾಡಿರುವ ಮಲಯಾಳಂ ಭಾಷೆಯ “ದಿ ಗ್ರೇಟ್ ಇಂಡಿಯನ್ ಕಿಚನ್''. ಜಿಯೋ ಬೇಬಿ ನಿರ್ದೆಶನದ ಈ ಸಿನಿಮಾ ಕಥೆ ಹೇಳುವ ನೇರವಾದ ದಿಟ್ಟತನ, ಮಧ್ಯೆ ಬರುವ ಮೌನದ ಕ್ಷಣಗಳು, ನೋಡಲು ಕಷ್ಟವಾದರೂ ಸತ್ಯವೇ ಆದ ಅಡಿಗೆ ಮನೆಯ ಅವ್ಯವಸ್ಥೆ - ಅರೆಯುವಿಕೆ - ಕತ್ತರಿಸುವಿಕೆ - ಬೇಯಿಸುವಿಕೆ ಮೊದಲಾದ ಅವಿಭಾಜ್ಯ ಅಂಗಗಳಿಂದ ಮನಸ್ಸನ್ನು ಕದಡುತ್ತದೆ.

ಚಿಂತನೆಗೆ ಹಚ್ಚಿದ್ದ ಇನ್ನೊಂದು ಸಂಗತಿ, ನಾನು ಕೇಳಿದ್ದು. ಆತ್ಮೀಯರೊಬ್ಬರ ಮಗಳು ಎಂ.ಡಿ. ಸ್ನಾತಕೋತ್ತರ ಪದವಿಯ ಮೊದಲ ವರ್ಷದಲ್ಲಿದ್ದಾಳೆ. `ಸುಂದರ' ಎಂದೇ ಎನಿಸುವ ಹಾಗಿದ್ದಾಳೆ. ಆಕೆಗೆ ಅಪ್ಪ-ಅಮ್ಮ ಮದುವೆ ಮಾಡುವ ಗಡಿಬಿಡಿಯಲ್ಲಿದ್ದಾರೆ. ಅವಳು ಹೇಳಿದ್ದುನಾನು ಇಷ್ಟು ಬುದ್ಧಿವಂತೆ, ನನಗೆ ಇನ್ನೆರಡು ವರ್ಷ ಓದು ಮುಗಿದರೆ ಕೈತುಂಬ ದುಡಿಯುವ ಶಕ್ತಿ ಇದೆ. ಆದರೂ ಬರುವ ಗಂಡುಗಳ ಅಪ್ಪ-ಅಮ್ಮಂದಿರು ಅಹಂಕಾರವೋ /ಸಹಜ ಬುದ್ಧಿಯೋ ಗೊತ್ತಿಲ್ಲ. ಜಾತಕ ಕೇಳುತ್ತಾರೆ. ಆಮೇಲೆ ಹುಡುಗ ಬರದೆ ಅಪ್ಪ-ಅಮ್ಮ ಮಾತ್ರ ನೋಡಬೇಕೆನ್ನುತ್ತಾರೆ. ನನ್ನ ಅಪ್ಪ-ಅಮ್ಮ ಬಾಯಿ ಮುಚ್ಚಿಕೊಂಡು ಅವರು ಹೇಳಿದಂತೆಲ್ಲ ಕೇಳಿದರೂ ಜಾತಕ ಕೂಡಿ ಬರಲಿಲ್ಲ' ಎಂದುಬಿಡುತ್ತಾರೆ!''. ಇವೆಲ್ಲವೂ ಮದುವೆ ಎಂಬ ಸಂಕೀರ್ಣ ವ್ಯವಸ್ಥೆ 21ನೇ ಶತಮಾನದಲ್ಲಿಯೂ ಗಂಡಿಗೆಸರಳ’ ಎನಿಸುವಷ್ಟು, ಹೆಣ್ಣಿಗೆ ಸರಳವಾಗಿಲ್ಲ ಎಂಬುದನ್ನು ಎತ್ತಿ ತೋರಿಸುತ್ತವೆ. ಮದುವೆಯ ಪ್ರತಿ ಹಂತವನ್ನೂ, ಸ್ತ್ರೀದೃಷ್ಟಿಯಿಂದ ಕ್ರಮವಾಗಿ ನೋಡುವ ಪ್ರಯತ್ನ ಮಾಡೋಣ.

ಮಹಿಳೆಯ ಜೀವನವೇ ಮದುವೆಗಾಗಿ, ಮದುವೆಯಾಗುವುದು – ಮಕ್ಕಳನ್ನು ಪಡೆಯುವುದು ಇವುಗಳೇ ಆಕೆಯ ಜೀವನದ ಗುರಿ ಎಂಬ ಧೋರಣೆ ಈಗ ಬಹಳಷ್ಟು ಬದಲಾಗಿದೆ. ಆದರೆ ತುಂಬಾ ಮುಂದುವರಿದ ಮನೋಭಾವದವರು, ವಿದ್ಯಾವಂತರು ಎನಿಸಿಕೊಂಡವರೂ ಕೂಡ ಹೆಣ್ಣುಮಕ್ಕಳ ಮದುವೆಯ ವಿಷಯ ಬಂದಾಗ ಹೆಚ್ಚು ವಿದ್ಯಾರ್ಹತೆ, ಕೆಲಸ ಮಾಡುವುದು ಇವುಗಳ ಬಗ್ಗೆ ಮಾತನಾಡುವುದು ಕಡಿಮೆ. ಹೆಣ್ಣು ಮಕ್ಕಳ ಯಾವುದೇ ಅರ್ಹತೆಯೂ ಒಂದು ಋಣಾತ್ಮಕ ಅಂಶವಾಗಿ ಮದುವೆಗೆ ಗಂಡು ಹುಡುಕುವ ಅಂಶ ಆಗಿ ಬದಲಾಗಿಬಿಡುವುದು ಅಚ್ಚರಿಯ ಮಾತು. ಉದಾಹರಣೆಗೆ ‘ಎತ್ತರ'ವಾಗಿರುವುದನ್ನು ಸೌಂದರ್ಯದ ಒಂದಂಶವಾಗಿ ನಾವು ಭಾವಿಸುತ್ತೇವಷ್ಟೆ. ಅದನ್ನೇ ``ಹುಡುಗಿ ಕೋಲಿನ ಹಾಗಿದ್ದಾಳೆ, ತುಂಬಾ ಎತ್ತರ'' ಎಂದು ನಿರಾಕರಿಸಿಬಿಟ್ಟಿರುವುದನ್ನು ನಾನು ಬಲ್ಲೆ. ``ಹೆಚ್ಚು ಓದಿದ್ದಾಳೆ, ಹೊಂದಿಕೊಳ್ಳುವುದು ಕಷ್ಟ'' ಎಂಬ ಮಾತು, ``ನಮಗೆ ಕೆಲಸ ಮಾಡುವ ಹುಡುಗಿ ಬೇಡ, ಮನೆಯಲ್ಲಿಯೇ ಓಡಾಡಿಕೊಂಡು, ಗಂಡ-ಮಕ್ಕಳನ್ನು ನೋಡಿಕೊಂಡು ಆರಾಮವಾಗಿರಲಿ'' ಎಂಬ ಹೇಳಿಕೆ ಇಂದಿಗೂ ಸಾಮಾನ್ಯವೇ.

ಇಂತಹ ಆಗ್ರಹಗಳಿಂದ, ಸಾಂಪ್ರದಾಯಿಕ ಅಪ್ಪ-ಅಮ್ಮ ನೋಡಿ ಮಾಡುವ ‘ಅರೇಂಜ್ಡ್’ ಮದುವೆಗಳನ್ನು ಬದಿಗಿಟ್ಟು, ತಾವೇ ಪ್ರೇಮಿಸಿ ಮದುವೆ ಮಾಡಿಕೊಳ್ಳೋಣವೆಂದು ಹೆಣ್ಣುಮಕ್ಕಳು ಭಾವಿಸಿದರೆ ಅದು ಕೂಡ ಸುಲಭವಲ್ಲ! ನೋಡಿಕೊಂಡೇ ಪ್ರೀತಿ ಮಾಡಲು ಸಾಧ್ಯವಿಲ್ಲವಷ್ಟೆ! ಸಮಾನ ಮನಸ್ಕರು, ಬೌದ್ಧಿಕ ಸಾಹಚರ್ಯ – ಇವೆಲ್ಲವೂ ಪ್ರೀತಿಯಲ್ಲಿ ಸಾಧ್ಯವೇ. ಆದರೆ ಮದುವೆಯಾದ ಮೇಲೆ ಅದು ಮುಂದುವರಿಯುತ್ತದೆ ಎಂದು ಹೇಳಲು ಬರುವಂತಿಲ್ಲ. ಬರಬಹುದಾದ ಹೊಂದಾಣಿಕೆಯ ಸಮಸ್ಯೆಗಳನ್ನೆದುರಿಸಲು ಇಲ್ಲಿ ಮತ್ತಷ್ಟು ತೊಡಕುಗಳು, ಇರುವ ಬೆಂಬಲ ಕಡಿಮೆ. ಇಂಥ ಸಂದರ್ಭಗಳಲ್ಲಿ ಹೊಂದಾಣಿಕೆ ಸಾಧ್ಯವೇ ಇಲ್ಲ ಎನ್ನುವ ಹೆಣ್ಣು ಮಕ್ಕಳು ಮದುವೆಯಾಗದೇ ಉಳಿಯಬೇಕು. ಸಮಾಜದ ಕಣ್ಣಿಗೆ ಹೆದರುವ ಸಮಸ್ಯೆಗಿಂತ, ತಾವೇ ಒಳಗೊಳಗೇ ಕೊರಗುವ, ಏನಾದರಾಗಲಿ ಮದುವೆ ಆಗಿಯೇ ಬಿಡಬೇಕಾಗಿತ್ತೇನೋ!' ಎಂಬ ಅನುಮಾನಕ್ಕೆ ತುತ್ತಾಗುವ ಪರಿಸ್ಥಿತಿ.

ಇತ್ತೀಚೆಗೆ ಕಳೆದ ಹತ್ತು ವರ್ಷಗಳಲ್ಲಿ ಕೈತುಂಬಾ ಸಂಪಾದಿಸಿ, ಜೀವನವನ್ನು ಆನಂದಿಸುವ, ದೊಡ್ಡ ಪಟ್ಟಣಗಳಲ್ಲಿ ಬೇರೆಯವರ ಮಾತಿಗೆ ಗುರಿಯಾಗುವ ಅವಕಾಶವೇ ಇಲ್ಲದಂತೆ ಜೀವನ ನಡೆಸುವ ಯುವತಿಯರು ಬಹಳಷ್ಟು. ಅಂಥವರಲ್ಲಿ ಕೆಲವರನ್ನು ಅಪ್ಪ-ಅಮ್ಮ ಇವರಿಗೆ ಹೇಗಾದರೂ ಬುದ್ಧಿ ಹೇಳಿ ಸರಿಮಾಡಿ, ಮದುವೆ ಮಾಡಿಕೊಳ್ಳುವ ಹಾಗೆ ಮಾಡಿ ಡಾಕ್ಟ್ರೇ'' ಎಂದು ಕರೆತರುವುದೂ ಉಂಟು. ಆದರೆ ಸಮಾಜವನ್ನು ತಿದ್ದುವ ಬದಲು ಯಾವ ಕಾಯಿಲೆಯೂ ಇಲ್ಲದ ಅವರನ್ನು ಸರಿಪಡಿಸುವುದಾದರೂ ಹೇಗೆ?! ಇಂತಹ ಸಮಯದಲ್ಲಿ ಒಂದು ರೀತಿಯ ಸಂದಿಗ್ಧತೆ ನನ್ನನ್ನು ಕಾಡುತ್ತದೆ. ಆಗ ನಾನು ಅವರಿಗೆ ಹೇಳುವುದೇನು, ನಿಮಗೆ ಖಚಿತವಾಗಿ ಮದುವೆ ಬೇಡವೆಂದಿದ್ದರೆ ಅದು ನಿಮ್ಮ ನಿರ್ಧಾರ. ಅದರ ಬಗ್ಗೆ ನನಗೆ ಗೌರವವಿದೆ. ಆದರೆ ಒಂದು ಪ್ರಯೋಗದಂತೆ ಮದುವೆಯಲ್ಲಿಯೂ ಹಲವು ಸಾಧ್ಯತೆಗಳು ಸಾಧ್ಯವಿದೆ. ಅತ್ಯಂತ ಕಹಿ ಅನುಭವ ನಿಮ್ಮದೆನಿಸಿದರೆ, ಅದರಿಂದ ಹೊರಬರಲು ಆರ್ಥಿಕ-ಮಾನಸಿಕ ಬಲವನ್ನು ಉಪಯೋಗಿಸಿಕೊಳ್ಳಿ. ಸಮಾಜ ಕ್ರಮೇಣ ಬದಲಾಗಬೇಕು ಎಂದರೆ ನಾವೆಲ್ಲರೂ ಪ್ರಯತ್ನ ಮಾಡಬೇಕು''. ಮದುವೆಯನ್ನೇ ಮಾಡಿಕೊಳ್ಳದೆ ಈಗಿರುವ ಧೋರಣೆಯನ್ನೇ ನಾವೆಲ್ಲರೂ ಮತ್ತಷ್ಟು ಕಾಲ ಮುಂದುವರಿಸುವ ಬದಲು, ಮದುವೆಯಾಗಿ, ಗಂಡನನ್ನು ಹೊಂದಿಸಿಕೊಳ್ಳುವ, ಗಂಡನಿಗೂ ಹೊಂದಾಣಿಕೆ ಮಾಡಿಕೊಳ್ಳುವುದನ್ನು ಕಲಿಸುವ, ಹೆಣ್ಣು-ಗಂಡು ಮಕ್ಕಳನ್ನು ಸರಿಯಾಗಿ ಬೆಳೆಸುವ ಪ್ರಯತ್ನ ಮಾಡುವುದು ಸೂಕ್ತವಲ್ಲವೆ?

ಎಂದಿನ, ಗಟ್ಟಿಯಾಗಿ ರೂಪುಗೊಂಡಿರುವ ದಾರಿಯಲ್ಲಿ ನಡೆಯುವ ಬದಲು, ಹೀಗೆ ಕವಲುದಾರಿಗಳಲ್ಲಿ ನಡೆಯುವುದು ಸುಲಭವಿರಲಿಕ್ಕಿಲ್ಲ. ಆದರೆ ಅದು ಅಸಾಧ್ಯವಂತೂ ಅಲ್ಲ. ಹಾಗೆ ‘ತಮ್ಮತನ’ವನ್ನೂ ಉಳಿಸಿಕೊಂಡು ಸಂತೋಷವಾಗಿಯೇ ತಮ್ಮ ಕುಟುಂಬದೊಂದಿಗೆ ಜೀವಿಸುತ್ತಿರುವ ಬಹಳಷ್ಟು ಮಹಿಳೆಯರಿದ್ದಾರೆ. ಆದರೆ ಅವರು ತಮ್ಮ ಅನುಭವಗಳನ್ನು ಎಲ್ಲ ಮಗ್ಗುಲುಗಳಿಂದ ಹಂಚಿಕೊಂಡಿಲ್ಲ. ಹಾಗಾಗಿ ‘ಸುಖೀ ಕುಟುಂಬ' ಎಂದರೆ ಮಹಿಳೆ ತನ್ನ ಮಹತ್ವಾಕಾಂಕ್ಷೆಯನ್ನು ಹಿಡಿತದಲ್ಲಿಟ್ಟು/ಅದುಮಿ, ತ್ಯಾಗಮಯಿಯಾಗಿ, ಎಲ್ಲಕ್ಕೂ ಹೊಂದಿಕೊಂಡಿರುವವಳು, ಆಗಾಗ್ಗೆ ನೋವು-ವ್ಯಂಗ್ಯ-ತಮಾಷೆಗಳ ಮೂಲಕ ಹೊರಹಾಕುವವಳು ಎಂಬ ಚಿತ್ರಣ ನಮ್ಮ ಮನಸ್ಸಿನಲ್ಲಿ ಗಟ್ಟಿಯಾಗಿ ಬೇರೂರಿಬಿಟ್ಟಿದೆ. ಅದನ್ನು ಸ್ವಲ್ಪ ಕದಲಿಸಿ ನೋಡಿದಂತೆ ನೈಜ ಚಿತ್ರಣ ಕಾಣತೊಡಗುತ್ತದೆ. ಕೈತುಂಬ ದುಡಿಯುವ, ಹೆಣ್ಣು ಮಕ್ಕಳಿಗೂ "ಮದುವೆಯಾದರೂ ತಮ್ಮತನ ಉಳಿಸಿಕೊಳ್ಳುವುದು ಸಾಧ್ಯವಿದೆ, ತಮ್ಮ ಕೈಯಲ್ಲಿ ಏನನ್ನಾದರೂ ಬದಲಿಸುವುದು ಸಾಧ್ಯವಿದೆ" ಎಂಬುದು ಖಚಿತವಾಗುತ್ತದೆ.

ಇನ್ನು ಮದುವೆಯ ಅನಂತರದ ದಿನಗಳು. ಮದುವೆಯ ಅನಂತರದ ದಿನಗಳಲ್ಲಿ ಒಬ್ಬರಿಗೆ ಇನ್ನೊಬ್ಬರ ಅವಗುಣಗಳು, ಬೆಳೆದುಕೊಂಡು ಬಂದ ರೀತಿ, ಅವರವರ ವ್ಯಕ್ತಿತ್ವದಲ್ಲಿ ಇರುವ ಶಿಸ್ತಿನ ಪ್ರಮಾಣ ಇವು ಎಷ್ಟು ಹೊಂದಾಣಿಕೆ ಸಾಧ್ಯ ಎಂದು ನಿರ್ಧರಿಸುತ್ತವೆ. ಮಾಧ್ಯಮಗಳಲ್ಲಿ ತೋರಿಸುವಂತೆ, ಅಥವಾ ಹರಿದುಬರುವ ಜೋಕ್‍ಗಳಂತೆ, ಪರಿಸ್ಥಿತಿ ಇರಬೇಕಿಲ್ಲ. ಗಂಡ-ಮಕ್ಕಳ ಅಶಿಸ್ತು-ಅವಸರಗಳಿಗೆ ಹೊಂದಿಕೊಳ್ಳುವ ಅಪಾಯ ಎಲ್ಲ ಮಹಿಳೆಯರಿಗೂ ಇದೆ. ಆದರೆ ಪ್ರಯತ್ನಪೂರ್ವಕವಾಗಿ ಅದರಿಂದ ಹೊರಬರಬೇಕು. ವ್ಯವಸ್ಥೆಯೊಳಗೇ ಇದ್ದು, ಕ್ರಮೇಣ ಅದನ್ನು ಒಂದು ‘ಸಮಾನ’ ಪರಿಸರವಾಗಿ ಪರಿವರ್ತಿಸುವ ಕೆಲಸ ನಡೆಯಬೇಕು.

ಹೆಚ್ಚಿನ ಸಿನಿಮಾಗಳಲ್ಲಿ ತೋರಿಸುವ ಒಂದೋ ಸಂತೋಷದ ಮದುವೆ ಇಲ್ಲವೇ ಆಯ್ಕೆಯ ಬದುಕು ಎಂಬ ಸಂಗತಿ (ದಿ ಗ್ರೇಟ್ ಇಂಡಿಯನ್ ಕಿಚನ್ ಅನ್ನು ಒಳಗೊಂಡಂತೆ) ನಿಜಸಂಗತಿಯಲ್ಲ. ಎರಡನ್ನೂ ಹೊಂದಿರುವ ಹೆಣ್ಣು ಮಕ್ಕಳು ನಮ್ಮ ಮಧ್ಯೆ ಬಹಳಷ್ಟು ಜನರಿದ್ದಾರೆ. ಅವರು ಬಾಯಿ ತೆರೆದು ತಮ್ಮ ಕೌಶಲಗಳನ್ನು, ಗಂಡ-ಮಕ್ಕಳು-ಕುಟುಂಬದ ಇತರರಿಗೆ ಕಲಿಸಬಹುದಾದ ಹೊಂದಾಣಿಕೆಯ ಸೂತ್ರಗಳನ್ನು ಕಲಿಸಿರುವುದನ್ನು ಹಂಚಿಕೊಳ್ಳಬೇಕು. ಗಂಡುಮಕ್ಕಳನ್ನು ಬೆಳೆಸುವ ತಾಯಂದಿರೂ ಅಷ್ಟೆ. “ಗಂಡು ಮಕ್ಕಳು ಹೇಗಿದ್ದರೂ ಪರವಾಗಿಲ್ಲ ಮದುವೆಯಾಗುತ್ತದೆ” ಎಂಬ ಭ್ರಮೆಯಿಂದ ಹೊರಬಂದು, ವರದಿಯಾಗುತ್ತಿರುವ ಪ್ರಕರಣಗಳನ್ನು ಗಮನಿಸಬೇಕು, ಒಬ್ಬ ಹೆಂಡತಿಯನ್ನು ತಿರಸ್ಕರಿಸಿದರೆ ಎರಡನೆಯ ಮದುವೆ ಎನ್ನುವುದು ಸುಲಭವಲ್ಲ ಎಂದು ಎಚ್ಚರಗೊಳ್ಳಬೇಕು.

  • ಡಾ. ಕೆ.ಎಸ್. ಪವಿತ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಹೆಣ್ಣು ಹೆಜ್ಜೆ/ ಮದುವೆಯಾಗುವುದೆಂದರೆ … – ಡಾ.ಕೆ.ಎಸ್. ಪವಿತ್ರ

  • May 25, 2021 at 11:16 pm
    Permalink

    ಬಹಳ ಇಷ್ಟವಾಯ್ತು ಮದುವೆ ಕುರಿತಂತೆ ಸಮಾಜದ ನಿಲುವಿನ ಬಗೆಗಿನ ನಿಮ್ಮ ವಿಶ್ಲೇಷಣೆ. ನಿಜಕ್ಕೂ ಬಹಳಷ್ಟು ಸುಧಾರಣೆಗಳು ಆಗಬೇಕಿದೆ. ಹೀಗೆಯೇ ಒಳ್ಳೆಯ ಬರಹಗಳನ್ನು ಕೊಡುತ್ತಿರಿ.

    Reply

Leave a Reply

Your email address will not be published. Required fields are marked *