ಹೆಣ್ಣು ಹೆಜ್ಜೆ/ ನೃತ್ಯದ ಅಂತರಂಗದಲ್ಲಿ- ಡಾ.ಕೆ.ಎಸ್. ಪವಿತ್ರ
ನೃತ್ಯಕ್ಕೆ ಅಧಿದೇವತೆಯಾದ ನಟರಾಜ ತನ್ನ ಕಾಲು ಮೇಲೆತ್ತುವ ಮೂಲಕ ನೃತ್ಯಸ್ಪರ್ಧೆಯಲ್ಲಿ ಪಾರ್ವತಿಯನ್ನು ಹೇಗೆ ಸೋಲಿಸಿದ ಎನ್ನುವ ಕಥೆ ಬಹಳಷ್ಟನ್ನು ಹೇಳುತ್ತದೆ. ವೇದಿಕೆಯ ಮೇಲೆ ನರ್ತಿಸುವ ಕಲಾವಿದೆಯ ಬದುಕಿನಲ್ಲಿ ಹಲವಾರು ಸಾಮಾಜಿಕ, ಸಾಂಸ್ಕøತಿಕ ಮತ್ತು ಸಾಂಸಾರಿಕ ಸಂಘರ್ಷಗಳು ಅಡಗಿರುತ್ತವೆ. ನೃತ್ಯದಲ್ಲಿ ನಾಟ್ಯ, ಸಂಗೀತ, ಅಭಿನಯ, ನಟುವಾಂಗ, ವೇದಿಕೆ, ಪ್ರೇಕ್ಷಕಗಣ ಮುಂತಾದ ಅನೇಕ ಅಂಶಗಳನ್ನು ಸಮೀಕರಿಸುವ ಕಲಾವಿದೆಯ ಕೌಶಲವೇ ಅವಳ ಬದುಕನ್ನೂ ಮುನ್ನಡೆಸುವ ಶಕ್ತಿಯಾಗಿರುತ್ತದೆ ಎನ್ನುವುದು ಬಹಳ ಮುಖ್ಯ.
`ವಿಶ್ವ ನೃತ್ಯ ದಿನ’ ವನ್ನು ಏಪ್ರಿಲ್ 29 ರಂದು ಆಚರಿಸಲಾಗುತ್ತದೆ. `ಹೆಣ್ಣು ಮಕ್ಕಳು ನೃತ್ಯ ಮಾಡಬಾರದು’ ಎಂಬ ಸಮಾಜದ ಧೋರಣೆಯಿಂದ `ವಿಶ್ವ ನೃತ್ಯ ದಿನ’ ಎಂದು ಆಚರಿಸುವಷ್ಟು ನಾವು ಮುಂದೆ ಬಂದಿದ್ದೇವೆ, ಬದಲಾಗಿದ್ದೇವೆ ಎಂಬುದನ್ನು ನಾವು ಗಮನಿಸದಿರಲು ಸಾಧ್ಯವೇ ಇಲ್ಲ! ನೃತ್ಯರಂಗದ ಬಗ್ಗೆ ಕೆಲವು ವಿಶೇಷಗಳಿವೆ. ಉಳಿದೆಲ್ಲಾ ಕ್ಷೇತ್ರಗಳಿಗಿಂತ ಮಹಿಳಾ ಪ್ರಾಬಲ್ಯ, ವೈಪುಲ್ಯ ಇಲ್ಲಿ ಹೆಚ್ಚಷ್ಟೆ. ನೃತ್ಯ ಕಲೆಯ ಬಗ್ಗೆ ಮಾತನಾಡುವಾಗ ಕಲಾವಿದನಿಗಿಂತ, ಕಲಾವಿದೆಯರ ಬಗೆಗೆ ಮಾತನಾಡುವುದೇ ಹೆಚ್ಚು. ಆದರೆ ಇಂಥ ನೃತ್ಯಕಲೆಯ ಅಧಿದೇವತೆ ಮಾತ್ರ ಪುರುಷ ದೇವ ನಟರಾಜ! ಹಿಂದೆ ನೃತ್ಯ ಕಲಿಸುವ ಗುರುಗಳೆಲ್ಲ ಪುರುಷರಾಗಿರುತ್ತಿದ್ದದ್ದು, ತಾವು ಸ್ವತಃ ನರ್ತಿಸದೆ, ನೃತ್ಯವನ್ನು ತಮ್ಮ ಶಿಷ್ಯೆಯರಿಂದ ಮಾಡಿಸುತ್ತಿದ್ದದ್ದು, ಪುರುಷ ಕಲೆಯೆಂದೇ ಭರತನಾಟ್ಯದ ನಟ್ಟುವಾಂಗ ಕಲೆ ಗುರುತಿಸಲ್ಪಟ್ಟದ್ದೂ ಈಗ ಇತಿಹಾಸ.
ವೇದಿಕೆಯ ಮೇಲೆ ನರ್ತಿಸುವ `ನೃತ್ಯಾಂಗನೆ’ಯರನ್ನು ನೋಡಿದಾಗಲೆಲ್ಲ, ನನಗೆ ಕಲಾವಿದೆಯರ ಹಿಂದೆ ಇರುವ ಪರಿಶ್ರಮದ ಹಲವು ಆಯಾಮಗಳು ತೆರೆದುಕೊಳ್ಳುತ್ತವೆ. ಹುಡುಗಿಯೊಬ್ಬಳು `ನೃತ್ಯ ಮಾಡುತ್ತಾಳೆ’ ಎಂದಾಕ್ಷಣ `ಮದುವೆಯಾಗುವುದು ಕಷ್ಟ’ ಎಂಬ ಭಾವನೆ ಹಿಂದಿನ ದಿನಗಳಲ್ಲಿ ದಟ್ಟವಾಗಿತ್ತು. `ಮಕ್ಕಳಾದ ಮೇಲೆ ಹೇಗೆ ಮುಂದುವರೆಸುತ್ತಾರೆ?’ `ಒಂದು ವಯಸ್ಸಿನ ನಂತರ ಡಾನ್ಸ್ ಏನು ಚೆನ್ನಾಗಿರುತ್ತೆ?’, ‘ತಮ್ಮ ನೃತ್ಯಕ್ಕಾಗಿ ಮಕ್ಕಳು ಮಾಡಿಕೊಳ್ಳದಿದ್ದರೆ? ಕುಟುಂಬವನ್ನು ಅಲಕ್ಷಿಸಿದರೆ?’ ಇಂಥ ಟೀಕೆ-ಹೇಳಿಕೆಗಳು ಸಾಮಾನ್ಯವಾಗಿತ್ತು. `ನೃತ್ಯಕ್ಕೆ ಹೋಲಿಸಿದರೆ ಸಂಗೀತ ಹಾಡೋದು ಎಷ್ಟೋ ಪರವಾಗಿಲ್ಲ’ ಎಂದು ಹಿರಿಯ ಮಹಿಳೆಯರು ಹೇಳುವುದನ್ನು ನಾನು ಕೇಳಿ ಬಲ್ಲೆ. ಹೇಗೋ ಸಂಗೀತಕ್ಕೆ ಅಧ್ಯಾತ್ಮವನ್ನು ಸುಲಭವಾಗಿ, ಬಲವಾಗಿ ಜೋಡಿಸಿದಷ್ಟು ನೃತ್ಯ ಕಲಾವಿದರು `ತಾವೂ ದೇವರಿಗೆ ಮಾಡುತ್ತೇವೆ’ ಅಂತ ಬಡಿದುಕೊಂಡರೂ, ಅದನ್ನು `ಪ್ರದರ್ಶನ ಕಲೆ’ಯಾಗಿಯೇ ಕಾಣುವವರು ಹೆಚ್ಚು. ಏಕೆ ಹೀಗೆ? ಎಂದು ಯೋಚಿಸಿದಾಗ ಅದಕ್ಕೆ ಹಲವು ಕಾರಣಗಳು ಹೊಳೆಯುತ್ತವೆ.
ನೃತ್ಯ ದೇಹವನ್ನು ಮಾಧ್ಯಮವಾಗಿ ಉಳ್ಳ ಕಲೆ. ಸಹಜವಾಗಿ ಅಂಗ ಸೌಷ್ಟವ, ಮುಖದಲ್ಲಿ ಕಣ್ಣುಗಳು, ಸೌಂದರ್ಯ ಇವೆಲ್ಲ ನೃತ್ಯಕ್ಕೆ ಪೂರಕವಾಗುವ ಮುಖ್ಯ ಅಂಶಗಳು. `ಸುಂದರ’ ಎಂಬ ನಮ್ಮೆಲ್ಲರ ಅಳತೆಗೋಲಿಗೆ ಸರಿ ಹೋಗದೆಯೂ ಒಬ್ಬ ಕಲಾವಿದೆ `ಉತ್ತಮ’ ಕಲಾವಿದೆಯಾಗಲು ಸಾಧ್ಯವಿದೆ. ಆದರೆ ಅದು ಅಪರೂಪ. ಕಲೆಯ ಅತ್ಯುನ್ನತ ಹಂತದಲ್ಲಿ ಸಾಧ್ಯ. “ನೋಡಿದ್ರೇ ಗೊತ್ತಾಗುತ್ತೆ, `ಡಾನ್ಸರ್’ ಅಂಥ” ಎನ್ನುವಲ್ಲಿ ನಡಿಗೆ-ನೋಡುವ ರೀತಿ ಎಲ್ಲವೂ ಸೇರಿದ್ದರೂ, ಆ ಕ್ಷಣಕ್ಕೆ ನಾವು ಗಮನಿಸುವುದು ದೈಹಿಕ ಸೌಂದರ್ಯ-ವೇಷ ಭೂಷಣಗಳನ್ನು. ಈ ದೈಹಿಕ ಆಯಾಮವೇ ಜನರಲ್ಲಿ ಆಕರ್ಷಣೆಯನ್ನೂ, ಕುಟುಂಬದವರಲ್ಲಿ (ವಿಶೇಷವಾಗಿ ಮದುವೆಯಾದ ಪತಿಯಲ್ಲಿ) ಅಸುರಕ್ಷಿತೆಯನ್ನೂ ಮೂಡಿಸುತ್ತದೆ ಎಂದು ನಮಗನ್ನಿಸಿಬಿಡಬಹುದು. ಆದರೆ ಇದು ನಿಜವಲ್ಲ! ದೇವದಾಸಿಯರ ಕಾಲದಿಂದ ನೋಡಿದರೂ ಆಕರ್ಷಣೆ-ಪ್ರಸಿದ್ಧಿ ಇವೆಲ್ಲವೂ `ಕಲೆ’ಯ ಪ್ರಭಾವ ಎಂಬುದು ಸ್ಪಷ್ಟವಾಗಿಯೇ ಕಾಣುತ್ತದೆ.
ಈಗ ಬಹು ಜನ `ಹುಡುಗಿ ನೃತ್ಯ ಮಾಡುತ್ತಿದ್ದಾಳೆ’ ಎಂದರೆ ಬೇಡವೆನ್ನುವುದಿಲ್ಲ. ಅದೊಂದು `ವಿಶೇಷ ಅರ್ಹತೆ’ ಎಂದೇ ಭಾವಿಸಿ ಸ್ವಾಗತಿಸುವವರೂ ಇರಬಹುದು. ನೃತ್ಯ ಕಲಾವಿದೆಯರೂ ಅಷ್ಟೆ, `ಅಂಗಸೌಷ್ಟವ’ ಕಾಪಾಡಿಕೊಳ್ಳಲು `ಮದುವೆ-ಮಕ್ಕಳು’ ಬೇಡವೆನ್ನುವ ಬದಲು, ವ್ಯಾಯಾಮ – ಜೀವನಶೈಲಿಗಳ ನಿಯಂತ್ರಣಗಳನ್ನು ಅನುಸರಿಸುವ ಸ್ವಾಗತಾರ್ಹ ಪ್ರವೃತ್ತಿ ಹೆಚ್ಚಿದೆ. ಆದರೆ ಒಂದು ಕಾರ್ಯಕ್ರಮದಲ್ಲಿ ನರ್ತಿಸುವ ಆನಂದ, ಅದರ ನಂತರದಲ್ಲಿರುವ ಒಂದು `ಉತ್ಕಟ ಮನಃಸ್ಥಿತಿ’, ನೃತ್ಯದ ನಿರಂತರತೆಗೆ ಬೇಕಾಗುವ ಪರಿಶ್ರಮ ಇವುಗಳನ್ನು ಅರ್ಥ ಮಾಡಿಕೊಳ್ಳುವವರು ಕಡಿಮೆಯೇ. ಕುಟುಂಬದವರಿಗೆ ಈ ಪರಿಶ್ರಮ ಕೆಲವೊಮ್ಮೆ ಅಸಹನೆಯನ್ನೂ ಮೂಡಿಸುವುದು ಸರ್ವೇಸಾಮಾನ್ಯ.
ಇಂತಹ ಅಸಹನೆಗಳನ್ನು, ಸವಾಲುಗಳನ್ನು ಎಲ್ಲ ಕಲಾವಿದೆಯರೂ ಒಂದಲ್ಲ ಒಂದು ಸನ್ನಿವೇಶದಲ್ಲಿ ಎದುರಿಸುತ್ತಾರೆ. ಆಗ ಪ್ರಾಮಾಣಿಕವಾಗಿ ಸಮಸ್ಯೆಯನ್ನ ನೋಡುವ, ಮುಕ್ತವಾಗಿ ಚರ್ಚಿಸುವ, ಬೆಂಬಲಕ್ಕಾಗಿ ಆಗ್ರಹಿಸುವ ಸಾಮಥ್ರ್ಯವನ್ನು ಪ್ರಯತ್ನಪೂರ್ವಕವಾಗಿ ಕಲಾವಿದೆಯರು ತನ್ನದಾಗಿಸಿಕೊಳ್ಳಬೇಕಾಗುತ್ತದೆ. ನನ್ನದೇ ವೈಯಕ್ತಿಕ ಅನುಭವವನ್ನು ಇಲ್ಲಿ ನೆನಪಿಸಿಕೊಳ್ಳುತ್ತಿದ್ದೇನೆ.
ತೀರ್ಥಹಳ್ಳಿಯಲ್ಲಿ ಒಂದು ಒಳ್ಳೆಯ ಕಾರ್ಯಕ್ರಮವಿತ್ತು. ನಾನು, ನನ್ನ 8 ವರ್ಷದ ಮಗಳು ಇಬ್ಬರೂ ನರ್ತಿಸಿದ್ದೆವು. ಕಾರ್ಯಕ್ರಮ ನೋಡಲು ನನ್ನ ಪತಿ, 3 ವರ್ಷದ ಪುಟ್ಟ ಮಗ ಇಬ್ಬರೂ ಬಂದಿದ್ದರು. ಕಾರ್ಯಕ್ರಮ ಮುಗಿದ ಕೂಡಲೆ ಆಯೋಜಕರು ಊಟ ಏರ್ಪಡಿಸಿದ್ದರೂ, ಅಪ್ಪ -ಮಕ್ಕಳಿಗೆ `ಭಾನುವಾರ’ ವಾದ್ದರಿಂದ ಅಲ್ಲಿ ಊಟ ಮಾಡುವ ಮನಸ್ಸಿಲ್ಲ! ಸರಿ ರಾತ್ರಿ 9 ಗಂಟೆಗೆ ತೀರ್ಥಹಳ್ಳಿಯಿಂದ ಹೊರಟು, ಸುಮಾರು 10.30ರ ರಾತ್ರಿಗೆ ಮನೆಗೆ ಮರಳಿದೆವು. ಶಿವಮೊಗ್ಗಕ್ಕೆ ಬರುವ ಹೊತ್ತಿಗೆ ಹೋಟೆಲ್‍ಗಳು ಅಷ್ಟು ರಾತ್ರಿ ತೆರೆದಿರುವುದಾದರೂ ಹೇಗೆ? ನೃತ್ಯ ಹೆಚ್ಚು ಮಾಡಿದ್ದ ನನಗೆ ಬಾಯಾರಿಕೆಯಷ್ಟೆ, (`ನೃತ್ಯದ ಆನಂದ’ ಹೊಟ್ಟೆ ತುಂಬಿಸಿಬಿಡುತ್ತದೆ, ಸಾಮಾನ್ಯವಾಗಿ ಆ ದಿನ ಕಲಾವಿದೆ ಊಟ ಮಾಡುವುದು ಸ್ವಲ್ಪವೇ ಎಂಬ ಸತ್ಯ ಬಹುಜನರಿಗೆ ಗೊತ್ತಿಲ್ಲ). ಆದರೆ ಮಕ್ಕಳಿಗೆ-ಪತಿಗೆ ಜೋರು ಹಸಿವು. ಮಕ್ಕಳ ಬೇಡಿಕೆಗಾಗಿ `ಮ್ಯಾಗ್ಗಿ’ ಮಾಡಬೇಕಾಯ್ತು! ಸ್ವಲ್ಪ ಬೇಸರ, ಅಪಾರ ದಣಿವು, ಅಲ್ಪ ವಿಷಾದ ನನ್ನನ್ನು ಕಾಡಿದ್ದು ಸತ್ಯ. ಒಂಥರಾ ಸಮಾಧಾನ! ನೃತ್ಯ-ನಾಟಕಗಳ ರಸಾವೇಶದಲ್ಲಿ ಕಳೆದುಹೋಗಿ ವಾಸ್ತವಕ್ಕೆ ಮರಳುವುದೇ ಸಾಧ್ಯವಾಗುವುದಿಲ್ಲ ಎಂದು ಕಲಾವಿದರ ಬಗ್ಗೆ ಹೆದರುತ್ತಾರಲ್ಲ, ಅವರಿಗೆಲ್ಲ `ಹಾಗಾಗುವುದು ಸಾಧ್ಯವೇ ಇಲ್ಲ’ ಎಂಬ ಸತ್ಯವನ್ನು ಇದು ತೋರಿಸುತ್ತದೆ. ಆದರೆ ಹಾಗೆಂದು ನಾನು ನನ್ನ ಬೇಸರ ಮುಚ್ಚಿಡಲಿಲ್ಲ! ಮಗಳು -ಪತಿಯ ಬಳಿ (ಮಗ ಇನ್ನೂ ಮೂರು ವರ್ಷದವನಾಗಿದ್ದ), ನನ್ನ ಬೇಸರ-ಕೋಪಗಳನ್ನು ವ್ಯಕ್ತಪಡಿಸಿದೆ, ಸ್ವಲ್ಪ ಅತ್ತೆ.
ಸರಿ, ಒಂದು ಪರಿಹಾರ ಕಂಡುಕೊಂಡೆವು. ಕಾರ್ಯಕ್ರಮದ ನಂತರ ಆಯೋಜಕರು ಊಟ ಸಿದ್ಧಪಡಿಸಿದ್ದರೆ, ನಾನು ಅಲ್ಲಿ ಸೇರಿದಷ್ಟು ಊಟ ಮಾಡಿಯೇ ಹೊರಡಬೇಕು. ಒಂದೊಮ್ಮೆ ಕುಟುಂಬದವರು ಕಾರ್ಯಕ್ರಮಕ್ಕೆಂದು ಬಂದಿದ್ದರೆ, ಕಾರ್ಯಕ್ರಮದ ನಂತರ ನನಗೆ ಒಂದಷ್ಟು ಸಮಯ `ನನ್ನದಾಗಿ’ ಬಿಟ್ಟು, ತಾವು ತಮ್ಮ ಊಟದ ಜವಾಬ್ದಾರಿ ತೆಗೆದುಕೊಳ್ಳಬೇಕು (ಇದಾದ ಮೇಲೆ ಮಧ್ಯಾಹ್ನವೋ, ಬೆಳಿಗ್ಗೆಯದೋ ಒಂದಿಷ್ಟು ಉಳಿಸಿಯೇ ಹೋಗುವ ಪರಿಪಾಠವನ್ನು ನಾನೂ ಬೆಳೆಸಿಕೊಂಡೆ!) ಕ್ರಮೇಣ `ಮಗಳು’ ತನ್ನ ತಮ್ಮನಿಗೆ ಈ ಶಿಕ್ಷಣ ನೀಡಿದಳು! ನೃತ್ಯದ ಬಗ್ಗೆ `ಚೆನ್ನಾಗಿತ್ತು ಮಮ್ಮಿ’ ಎಂದು ಹೇಳುವ, ಆ ಕ್ಷಣಕ್ಕೆ ಬೇರೆಯವರೆದುರು ತಾಯಿಯ ಸಂತಸ ಹೆಚ್ಚಿಸುವ ಪ್ರವೃತ್ತಿಯನ್ನೂ ಬೆಳೆಸಿಕೊಂಡರು. ಇಂಥ ಅನುಭವಗಳು ಬಹುತೇಕ ಎಲ್ಲಾ ಕಲಾವಿದೆಯರಿಗೂ ಆಗಿರುತ್ತವೆ. ಆದರೆ ಅವುಗಳನ್ನು ಹಂಚಿಕೊಳ್ಳುವುದು ಸುಲಭವಲ್ಲ. ಎಲ್ಲಿ ನೋವು-ಜಗಳಗಳನ್ನು ಮತ್ತಷ್ಟು ಹೆಚ್ಚಿಸುತ್ತದೋ ಎಂದು ಕಳವಳ ಪಡುತ್ತಾರೆ. ಹಾಗೆ ಹೇಳುವುದರಿಂದ ಎಲ್ಲಿ ತಮಗೆ ಕುಟುಂಬದ ಬೆಂಬಲವಿಲ್ಲವೆಂದು ಜನ ನಿರ್ಧರಿಸಿಬಿಡುತ್ತಾರೆಯೋ ಎಂದು ಹೆದರುತ್ತಾರೆ. ಆದರೆ ಹಂಚಿಕೊಳ್ಳದಿದ್ದರೂ, ಯಾವುದಾದರೊಂದು ರೀತಿಯಲ್ಲಿ ಜಾಣ್ಮೆಯಿಂದ ಕಲಾಕ್ಷೇತ್ರದಲ್ಲಿ `ನಿಲ್ಲುವ’ ಕಲಾವಿದೆಯರು ಇಂಥ ಸಂದರ್ಭಗಳನ್ನು ನಿಭಾಯಿಸಿರುತ್ತಾರೆ ಎನ್ನುವುದು ಖಂಡಿತ.ಮತ್ತು ಹಾಗೆ ಗಟ್ಟಿಯಾಗಿ ನೃತ್ಯದಲ್ಲಿ ಬೇರೂರುವ ಕಲಾವಿದೆಯರ ಕುಟುಂಬದ ಬೆಂಬಲ ಅವರಿಗಿದೆ ಎಂದು ಅಸೂಯೆ ಪಡುವುದಕ್ಕಿಂತ ಇಂತಹ ಸಂದರ್ಭಗಳನ್ನು ಎದುರಿಸಿ , ಅವುಗಳನ್ನು ಮಾರ್ಪಡಿಸಿಕೊಳ್ಳುವ ಅವರ ಕೌಶಲವನ್ನು ಸೂಕ್ಷ್ಮವಾಗಿ ಗಮನಿಸುವುದೇ ಹೆಚ್ಚು ಉಪಯುಕ್ತ!
ಕುಟುಂಬದ ಅಸಹಕಾರ ಎದುರಾಗಬಹುದು ಎಂಬ ಕಾರಣಕ್ಕೆ ಮದುವೆಯೇ ಆಗದಿರುವ, ತಮ್ಮ ಕಲೆಯನ್ನೇ ಮದುವೆಯಾಗುವ ಕಲಾವಿದೆಯರೂ ಇದ್ದಾರೆ. ಅಥವಾ ಕುಟುಂಬದ ಅಸಹಕಾರಕ್ಕೆ ಹೆದರಿ, ಕಲೆಯನ್ನು ಬಿಟ್ಟು ಬಿಡುವ ಕಲಾವಿದೆಯರಿದ್ದಾರೆ. ಹಾಗಾಗಬೇಕಿಲ್ಲ. “ನಮಗೆ ಇವರು ಮುಂದುವರಿಸಲು ಬಿಡಲೇ ಇಲ್ಲ, ಅದಕ್ಕೆ ನಮಗೆ ನಿಮ್ಮ ಹಾಗಾಗಲು ಆಗಲೇ ಇಲ್ಲ” ಎನ್ನುವ ಮಹಿಳೆಯರು ಪ್ರತಿ ವೇದಿಕೆಯ ಕಾರ್ಯಕ್ರಮದ ನಂತರ ಹಲವು ಕಲಾವಿದೆಯರಿಗೆ ಸಿಕ್ಕಬಹುದು. ಆಗೆಲ್ಲ ನಾವು ನೆನಪಿಸಿಕೊಳ್ಳಬೇಕಾದ್ದು, ಕಲೆ ಎನ್ನುವುದು, ಅದರಲ್ಲಿಯೂ ನೃತ್ಯಕಲೆ ಎನ್ನುವುದು ಕೇವಲ ನೃತ್ಯ ಮಾಡುವುದನ್ನಷ್ಟೇ ಕಲಿಸುವುದಿಲ್ಲ! ಹಿಮ್ಮೇಳದ ಕಲಾವಿದರನ್ನು ಗೊತ್ತು ಮಾಡುವುದು, ಅವರೊಡನೆ ಜಾಣತನದಿಂದ ವ್ಯವಹರಿಸುವುದು, ಆಯೋಜಕರೊಡನೆ ಚರ್ಚೆ ಮಾಡುವುದು, ತನ್ನ ಪ್ರತಿಭೆಯನ್ನು ಬಿಂಬಿಸಿಕೊಳ್ಳುವ ಹೊಸ ಹೊಸ ರೀತಿಗಳನ್ನು ಕಲಿಯುವುದು, ಕ್ಷಣಗಳಲ್ಲಿ ವೇಷ-ಭೂಷಣ ಬದಲಿಸುವುದು ಇವೆಲ್ಲ ಹಾಗೆಯೂ ಜೀವನದಲ್ಲಿ ಉಪಯುಕ್ತವಾಗಬಲ್ಲ ಕೌಶಲಗಳೇ. ಇವುಗಳನ್ನು ಸರಿಯಾಗಿ ಉಪಯೋಗಿಸಿದರೆ ಕುಟುಂಬದ ಸಹಕಾರವೂ ಸಾಧ್ಯವಿದೆ. ಗಂಡ -ಮಕ್ಕಳಷ್ಟು ಕಟು/ನಿರ್ದಾಕ್ಷಿಣ್ಯದ ವಿಮರ್ಶಕರಂತೂ ಸಿಗುವುದೇ ಸಾಧ್ಯವಿಲ್ಲ! ಯಾವ ಮುಲಾಜೂ ಅವರಿಗಿಲ್ಲ! ಅವರ ವಿಮರ್ಶೆಯನ್ನು ಸ್ವೀಕರಿಸಲು, ಅದರಲ್ಲಿರುವ ನಿಜಾಂಶ ಒಪ್ಪಿಕೊಳ್ಳುವ ಕಲೆ ಕಲಿತರೆ ನಾವು ಹೊರಜಗತ್ತನ್ನು ಎದುರಿಸುವುದು ಸುಲಭ, ನಮ್ಮ ನೃತ್ಯದ ಗುಣಮಟ್ಟ ಹೆಚ್ಚುತ್ತದೆ!
ಕಲಾವಿದೆಯರ ಬದುಕಿನ ಹೊಸ ಆಯಾಮವೊಂದಿದೆ. ಕುಟುಂಬದವರು ನೃತ್ಯ ಕ್ಷೇತ್ರದಿಂದ, ಅದರಲ್ಲಿ ಬರುವ ಪ್ರಸಿದ್ಧಿ-ಲಾಭಗಳಿಂದ, ಅದನ್ನು ಬೆಳೆಸಲು ತಾವೂ ಅದರಲ್ಲಿ ತೊಡಗುವುದು. `ಇದು ಆರ್ಥಿಕ ಲಾಭಕ್ಕೆ’ ಎಂದು ಕೆಲವರು ಹೀಗಳೆಯಬಹುದು. ಆದರೆ ನನಗೆ ಇದೊಂದು ಸ್ವಾಗತಾರ್ಹ ಬೆಳವಣಿಗೆ ಎನಿಸುತ್ತದೆ. ಕಲಾವಿದೆಗೆ ಸಹಕಾರ ನೀಡುವ, ಆಕೆಯ ಬೆನ್ನ ಹಿಂದೆ ಬೆಂಬಲವಾಗಿ ನಿಂತು, ಆಕೆಗೆ `ಕಲೆಯ ಬಗ್ಗೆ ಮಾತ್ರ ತಲೆ ಕೆಡಿಸಿಕೊಳ್ಳಲು ಬಿಡುವ’ ಕೆಲಸವೂ ಇದಾಗಲು ಸಾಧ್ಯವಿದೆ. ಹಾಗೆಯೇ ನೃತ್ಯ ಕಲಾವಿದೆಯರು ತಮ್ಮ ಮಕ್ಕಳನ್ನು ವಿಶೇಷವಾಗಿ ಹೆಣ್ಣು ಮಕ್ಕಳನ್ನು ನೃತ್ಯ ಕ್ಷೇತ್ರಕ್ಕೆ ಕರೆತರುವುದೂ ಒಂದು ಒಳ್ಳೆಯ ಬೆಳವಣಿಗೆಯೇ. ಮಕ್ಕಳು ತಾಯಿಗೆ ವಿವಿಧ ರೀತಿಗಳಲ್ಲಿ ಬೆಂಬಲ ನೀಡಲು ಸಾಧ್ಯ. ತಾಯಿ-ಮಕ್ಕಳು ಇಬ್ಬರ ಕಲೆಯೂ ಬೆಳೆಯಲೂ ಸಾಧ್ಯ.
ಒಟ್ಟಿನಲ್ಲಿ ನೃತ್ಯದ-ನೃತ್ಯಾಂಗನೆಯ ಅಂತರಂಗದ ವಿಶ್ಲೇಷಣೆ ಸಂಕೀರ್ಣವಾದದ್ದು. ಮೇಲ್ನೋಟಕ್ಕೆ ಸರಳ, `ಹೀಗೆಯೇ’ ಎಂದು ಕಾಣುವ ಯಾವುದೂ ಇಲ್ಲಿ ಹಲವು ಮುಖಗಳನ್ನು ಹೊಂದಿರಲು ಸಾಧ್ಯ!
-ಡಾ. ಕೆ.ಎಸ್. ಪವಿತ್ರ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.