ಹೆಣ್ಣು ಹೆಜ್ಜೆ / ನಾವು `ಮಾತಿನ ಮಲ್ಲಿ’ಯರು ಎಂಬುದು ನಿಜವೇ? – ಡಾ.ಕೆ.ಎಸ್. ಪವಿತ್ರ

ಮಾನವ ಸಮಾಜ ಸುಮ್ಮನೆ ನಂಬಿಕೊಂಡಿರುವ ಸಂಗತಿಗಳಲ್ಲಿ `ಮಹಿಳೆ ಹೆಚ್ಚು ಮಾತನಾಡುತ್ತಾಳೆ’ ಎನ್ನುವುದೂ ಒಂದು! ಇದಕ್ಕೆ ವೈಜ್ಞಾನಿಕ ಆಧಾರಗಳು ಇಲ್ಲ. ಕುಟುಂಬ, ಉದ್ಯೋಗ, ಸಮಾಜ ಎಲ್ಲದರಲ್ಲಿ ಮಹಿಳೆಯ ಮಾತಿಗೆ ಕಿಮ್ಮತ್ತು ಸಿಗುವುದು ಎಷ್ಟರ ಮಟ್ಟಿಗೆ ಎನ್ನುವುದು ಎಲ್ಲರಿಗೂ ಗೊತ್ತು! ಸಂವಹನದ ಸಮಸ್ಯೆ, ತನ್ನ ಮಾತಿಗೆ ಗೌರವ ಪಡೆಯುವ ಸಮಸ್ಯೆ ಎಲ್ಲ ವರ್ಗಗಳ ಮಹಿಳೆಯರಿಗೂ ಇರುತ್ತದೆ. ಎಷ್ಟೋ ವೇಳೆ ಗಂಟಲು ಹರಿದುಕೊಂಡರೂ ಅವರಿಗೆ ಸಿಗಬೇಕಾದ ಗಮನ ಸಿಗುವುದೇ ಇಲ್ಲ. ತಾವು `ವಾಚಾಳಿ’ ಎನಿಸಬಹುದು ಎಂಬ ಸಂದೇಹದಿಂದ ಮಹಿಳೆಯರೂ ಸಾರ್ವಜನಿಕವಾಗಿ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಹಿಂಜರಿಯುತ್ತಾರೆ.

ಮಹಿಳೆಗೂ ಮಾತಿಗೂ ಹತ್ತಿರದ ನಂಟು. ಮಾತಿನ ಮಲ್ಲಿ' ಎಂಬ ಪದವಾಗಲೀ,ವಾಚಾಳಿ’ ಎಂಬ ಶಬ್ದವಾಗಲಿ ನಮ್ಮ ಕಣ್ಣ ಮುಂದೆ ತರುವುದು ಮಹಿಳೆಯರನ್ನೇ. ಮಹಿಳೆಯರು ಮಾತನಾಡುವುದರ ಬಗ್ಗೆ ಜೋಕ್‍ಗಳೂ, ವ್ಯಂಗ್ಯಪೂರಿತ ನಗೆಹನಿಗಳೂ ಬೇಕಷ್ಟು ಹುಟ್ಟಿಕೊಂಡಿವೆ. ಇದನ್ನು ನಾವು ಎಷ್ಟು ನಂಬಿಕೊಂಡಿದ್ದೇವೆಂದರೆ ಮಕ್ಕಳನ್ನು ಬೆಳೆಸುವಾಗಲೂ ಹೆಣ್ಣು ಮಕ್ಕಳು ಸರಿಯಾಗಿ ಮಾತನಾಡುವುದು, ಬಂದವರನ್ನು ವಿಚಾರಿಸುವುದು ಮೊದಲಾದ ಶಿಷ್ಟಾಚಾರಗಳನ್ನು ಕಲಿತುಕೊಳ್ಳುವುದು ಸಹಜ ಎಂಬಂತೆ ಭಾವಿಸಿಬಿಡುತ್ತೇವೆ. ಮಹಿಳೆಯರು ನಾಲಿಗೆಯನ್ನು ಹರಿತವಾಗಿ ಬಿಡುತ್ತಾರೆ, ಮಾತಿನಿಂದಲೇ ಎದುರಿನವರನ್ನು ಘಾಸಿಗೊಳಿಸಿಬಿಡುತ್ತಾರೆ ಎಂಬುದೂ ಒಂದು ನಂಬಿಕೆಯೇ. ಗಾಸಿಪ್'ವದಂತಿ’ ಅಂದರಂತೂ ಮಹಿಳೆಯ ಇನ್ನೊಂದು ಹೆಸರು ಎಂದೇ ಭಾವಿಸಲಾಗುತ್ತದೆ. ಯಾರಾದರೂ ಪುರುಷರು ಗಾಸಿಪ್ ಮಾಡಿದಾಗ `ಒಳ್ಳೇ ಹೆಂಗಸಿನ ಹಾಗೆ ಆಡ್ತಾನೆ’ ಎನ್ನುವುದೂ ಕೇಳಿಬರುತ್ತದೆ.

ಪುರುಷ-ಮಹಿಳೆ, ಹುಡುಗ-ಹುಡುಗಿಯರ ನಡುವೆ ಮಾತಿನ ಈ ಅಂತರಗಳು ನಿಜವೇ? ಇದನ್ನು ಅವರ `ಜೈವಿಕ ಗುಣ' ಎನ್ನುವಷ್ಟರ ಮಟ್ಟಿಗೆ ವೈಜ್ಞಾನಿಕ ಆಧಾರವಿದೆಯೇ? ಇದು ನಮ್ಮ ರೂಢಿಗತ ಧೋರಣೆಗಳಿಂದ ಬಂದಿರುವಂಥದ್ದೇ? ವೈಜ್ಞಾನಿಕವಾಗಿ ಸಂಶೋಧನೆಗಳು ಮೊದಲು ಗಂಡು-ಹೆಣ್ಣು ಮಕ್ಕಳ ಬೆಳವಣಿಗೆಯಲ್ಲಿ ಮಾತು ಆರಂಭವಾಗುವ ಹಂತದ ಬಗ್ಗೆ ಕುತೂಹಲದಿಂದ ಗಮನ ಹರಿಸಿವೆ. ಹುಟ್ಟಿದ ಮೊದಲ ವರ್ಷದಲ್ಲಿ ಹೆಣ್ಣು ಮಕ್ಕಳು ಭಾಷೆಯನ್ನೂ, ಶಬ್ದ ಭಂಡಾರವನ್ನೂ ಬಹುಬೇಗ ಕಲಿಯುತ್ತಾರೆ. ಇದು ಗಂಡು ಮಕ್ಕಳಿಗೆ ಹೋಲಿಸಿದರೆ ಗಣನೀಯ. ಅಂದರೆ ಸುಮಾರು 16 ತಿಂಗಳುಗಳ ವಯಸ್ಸಿನ ವೇಳೆಗೆ, ಹುಡುಗಿಯರು ಅಂದಾಜು 95 ಶಬ್ದಗಳನ್ನು ಮಾತನಾಡಬಲ್ಲವರಾದರೆ, ಅದೇ ವಯಸ್ಸಿನ ಹುಡುಗರು ಮಾತನಾಡಬಲ್ಲ ಪದಗಳ ಸಂಖ್ಯೆ 25 ಮಾತ್ರ! ಇದು ಮಾತಿಗಷ್ಟೇ ಅಲ್ಲ, ಮಾತಿನ ಜೊತೆಗೆ ಸಹಜವಾಗಿ ಬಳಕೆಯಾಗುವ ಕಣ್ಣಿನ ಸಂಪರ್ಕ, ಹಸ್ತ ಮುದ್ರೆ, ಇತರ ಹಸ್ತಗಳ ಅನುಕರಣ, ಒಟ್ಟಿಗೇ ಇಬ್ಬರು ಮಾತನಾಡುತ್ತಿರುವುದಕ್ಕೆ ಗಮನ ನೀಡುವುದು, ಸಾಮಾಜಿಕ ರೀತಿ ನೀತಿಗಳ ಬಗೆಗೆ ಗಮನ ಕೊಡುವುದು ಇವೆಲ್ಲದರಲ್ಲೂ ಹೆಣ್ಣು ಮಕ್ಕಳು ಮುಂದಿದ್ದರು ಎನ್ನುವುದು ಈ ಅಧ್ಯಯನಗಳಲ್ಲಿ ಕಂಡು ಬಂತು. ಮಾತಿಗೆ-ಸಂವಹನಕ್ಕೆ ಸಂಬಂಧಿಸಿದ ಹಲವು ಕಾಯಿಲೆಗಳಿವೆಯಷ್ಟೆ. ತಡವಾಗಿ ಮಾತು ಬರುವುದು, ತೊದಲು ಮಾತು, ಆಟಿಸಂ ಇವೆಲ್ಲಕ್ಕೂ ಮಗುವಿನ ಲಿಂಗ ಹೆಣ್ಣಾಗಿದ್ದರೆ ಅದು ರಕ್ಷಣಾತ್ಮಕ! ಆದರೆ ಇಲ್ಲಿರುವ ಅಂತರ ಹೆಚ್ಚಿನ ಮಕ್ಕಳಲ್ಲಿ ಕೆಲವು ತಿಂಗಳುಗಳದ್ದು ಮಾತ್ರ.

ಬಹುಜನ ತಮ್ಮ ಗಂಡು ಮಕ್ಕಳನ್ನು `ಮಾತನಾಡುತ್ತಿಲ್ಲ’ ಎಂದು ಐದನೇ ವಯಸ್ಸಿಗೆ ಕರೆತಂದಾಗ ನಾನು ಪ್ರಶ್ನಿಸುತ್ತೇನೆ “ಇಷ್ಟು ದಿನದವರೆಗೆ ಏಕೆ ಕಾದಿರಿ?". ಆಗ ಸಾಮಾನ್ಯವಾಗಿ ಬರುವ ಉತ್ತರ “ಗಂಡು ಮಗು ತಡವಾಗಿ ಮಾತನಾಡುವುದು ಸಹಜ ಎಂದು ಕಾಯುತ್ತಿದ್ದೆವು!”. ಆದರೆ ಹಾಗೆ ಕಾಯಬಹುದಾಗಿದ್ದು ಅಂದಾಜು ಒಂದು ವರ್ಷ ಮೂರು ತಿಂಗಳವರೆಗೆ!

ಹೀಗೆ ಬಾಲ್ಯದಲ್ಲಿ ಕಾಣುವ ಅಂತರಗಳು ಮಾತು ಕಲಿಯುವಿಕೆಯ ವಿಷಯದಲ್ಲಿ ದೊಡ್ಡವರಾದಂತೆ ಮಾಯವಾಗುತ್ತವೆ. ಸುಮಾರು ಐದು ವರ್ಷ ವಯಸ್ಸಿನ ನಂತರ `ಮಾತು -ಭಾಷೆ' ಕೌಶಲಗಳು ಇಬ್ಬರಲ್ಲೂ ಒಂದೇ ಆಗುತ್ತವೆ ಎಂಬುದು ಗಮನಾರ್ಹ. ಆದರೆ ಬಾಲ್ಯದ ಮೊದಲ ವರ್ಷಗಳ ಬಗೆಗೆ ನಾವೆಷ್ಟು ಗಮನ ಕೊಡುತ್ತೇವೆ ಎಂದರೆ ಮಾತು-ಮಾತಿನ ಕೌಶಲಗಳ ಬೆಳವಣಿಗೆಯಲ್ಲಿ `ಜೈವಿಕ' bioಟogiಛಿಚಿಟ ಅಂಶವನ್ನೊಂದೇ ವೈಭವೀಕರಿಸಿ, ವಾತಾವರಣ-ಪ್ರಚೋದನೆ-ರೂಪಿಸುವಿಕೆ-ಮಾದರಿ ಇವುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿಬಿಡುತ್ತೇವೆ.ಇವನು ಹುಡುಗ, ಮಾತನಾಡುವುದಿಲ್ಲ”, ಇವಳು ಹುಡುಗಿ, ಮಾತನಾಡುತ್ತಾಳೆ'' ಎಂದು ಸಹಜವಾಗಿ ವಿಂಗಡಿಸಿ, ಒಪ್ಪಿಕೊಂಡು ಬಿಡುತ್ತೇವೆ! ಆದರೆ ಇದು ನಿಜವಲ್ಲ ಎನ್ನುತ್ತದೆ ವಿಜ್ಞಾನ.

ಡೆಬೋರಾ ಜೇಮ್ಸ್ ಎಂಬ ಭಾಷಾ ತಜ್ಞೆ ಮತ್ತು ಜೆನಿಸ್ ಡ್ರಾಕಿಚ್ ಎಂಬ ಸಾಮಾಜಿಕ ಮನೋವಿಜ್ಞಾನಿ 56 ಅಧ್ಯಯನಗಳನ್ನು ಈ ಬಗ್ಗೆ ಪರಿಶೀಲಿಸಿ ನೋಡಿದ್ದಾರೆ. ಅವುಗಳಲ್ಲಿ 16 ಅಧ್ಯಯನಗಳು ಇಬ್ಬರು ಮಾತಿನ ಪ್ರಮಾಣ ಒಂದೇ ಎಂದು ತೋರಿಸಿದರೆ, 4 ಅಧ್ಯಯನಗಳು ಯಾವ ಸ್ಪಷ್ಟ ಚಿತ್ರಣವನ್ನೂ ನೀಡಲಿಲ್ಲ. 34 ಅಧ್ಯಯನಗಳು ಪುರುಷರೇ ಮಹಿಳೆಯರಿಗಿಂತ ಹೆಚ್ಚು ಮಾತನಾಡುತ್ತಾರೆ ಎಂದು ನಿರೂಪಿಸಿದವು. ಕೇವಲ ಎರಡು ಅಧ್ಯಯನಗಳು ಮಾತ್ರ ಮಹಿಳೆಯರು ಪುರುಷರನ್ನು ಮಾತಿನಲ್ಲಿ ಮೀರಿಸುತ್ತಾರೆ ಎಂದು ತೋರಿಸಿತು. ಇಷ್ಟೆಲ್ಲಾ ವೈಜ್ಞಾನಿಕ ಆಧಾರಗಳನ್ನು ನೀಡಿದರೂ, ಅವೆಲ್ಲವನ್ನೂ ತಳ್ಳಿ ಹಾಕಿ, ಸುತ್ತಮುತ್ತಲಿನವರನ್ನೇ ಉದಾಹರಣೆಗೆ ತೋರಿಸಿ “ಮಹಿಳೆಯರು ಪುರುಷರಿಗಿಂತ ಹೆಚ್ಚು ಮಾತನಾಡುತ್ತಾರೆ”, “ಸಂವಹನ - Communication ಮಹಿಳೆಯರಿಗೆ ಹೆಚ್ಚು ಮುಖ್ಯ“, “ಪುರುಷರು ವಿಷಯ-ವಸ್ತುಗಳ ಬಗೆಗೆ ಮಾತನಾಡುತ್ತಾರೆ, ಅದೇ ಮಹಿಳೆಯರು ಜನರು, ಸಂಬಂಧಗಳು, ಭಾವನೆಗಳ ಬಗೆಗೆ ಮಾತಾಡುತ್ತಾರೆ”, ಮಹಿಳೆಯರು ಬಾಂಧವ್ಯಕ್ಕಾಗಿ ಮಾತನಾಡಿದರೆ, ಕೆಲಸಗಳನ್ನು ಪೂರೈಸಲು ಪುರುಷರು ಮಾತಾಡುತ್ತಾರೆ", ಇವೆಲ್ಲವನ್ನೂ ನಂಬುವ, ಎಲ್ಲರೂ ನಂಬುವಂತೆ ಮಾಡುವ ಜನರಿದ್ದಾರೆ, ಪುಸ್ತಕಗಳೂ ಇವೆ. ಜಾನ್‍ಗ್ರೇ ಬರೆದಿರುವ "Men are from Mars, Women are from Venus", ಡೆಬೋರಾ ಟ್ಯಾನ್ನೆನ್‍ಳ "You Just Don't Understand" ಅಂಥ ಕೆಲವು ಪುಸ್ತಕಗಳ ಉದಾಹರಣೆಗಳು. ಆದರೆ ಇವ್ಯಾವುವೂ ವೈಜ್ಞಾನಿಕವಾಗಿ ನಿಜವೋ ಅಲ್ಲವೋ ಎಂಬುದಕ್ಕಿಂತ, ದೈನಂದಿನ ಜೀವನಕ್ಕೆ ಅವು ಉಪಯುಕ್ತ ಎನಿಸುವಂತೆ ಪಾಲಿಸುವ ನಮ್ಮನ್ನು ಪ್ರೇರೇಪಿಸಿಯೇ ಇಲ್ಲ ಎನ್ನುವುದು ಗಮನಿಸಬೇಕಾದ ವಿಷಯ.

`ಮಹಿಳೆಯರು ಮಾತನಾಡುವುದು' ಮುಖ್ಯವಾಗಿ ಗಮನಿಸಲ್ಪಡಬೇಕಿರುವುದು ಎರಡು ಮುಖ್ಯ ನೆಲೆಗಳಿಂದ. ಮೊದಲನೆಯದು ಕುಟುಂಬದಲ್ಲಿ ಸಂವಹನದಲ್ಲಿ ಬರುವ ಸಮಸ್ಯೆಗಳು. ಎರಡನೆಯದು ಮನೆಯ ಹೊರಗಡೆ ಪ್ರತಿ ಕ್ಷೇತ್ರದಲ್ಲಿ ಮಹಿಳೆಯರಾಡುವ ಮಾತಿಗೆ ಯಾವುದೇ ಗಮನ ದೊರಕದಿರುವುದು. ಮನೆಯಲ್ಲಿ ಪತಿ-ಗಂಡು ಮಕ್ಕಳು ಟಿ.ವಿ. / Phoneಗಳಲ್ಲಿ ಮಗ್ನರಾದಾಗ ಹಲವು ಬಾರಿ ಕರೆದಾಗಲೂ `ಆ ಊ' ಎನ್ನದೆ, ಕಿವುಡರೋ ಎನ್ನುವಂತೆ ವರ್ತಿಸುವುದು ಸಾಮಾನ್ಯವಷ್ಟೆ. ಅದೇ ಹೆಣ್ಣು ಮಕ್ಕಳಲ್ಲಿ ಈ ಪ್ರವೃತ್ತಿ ಆಕ್ರೋಶವನ್ನು ಉಕ್ಕಿಸುತ್ತದೆ. ಅಥವಾ ಮದುವೆಯಾದ ಹೊಸತರಲ್ಲಿ, ಪತ್ನಿ, ಪತಿಯ ಮನೆಯವರೊಡನೆ ಚೆನ್ನಾಗಿ ಬೆರೆತು, ಮಾತನಾಡಬೇಕು ಎಂಬ ನಿರೀಕ್ಷೆ ಎಲ್ಲರಲ್ಲಿ! ಹಾಗೆಯೇ ಹುಡುಗರು ಮಾತನಾಡಬಲ್ಲವರಾದರೂ, ಅವರನ್ನು ಮಾತನಾಡಿರೆಂದು ಪೆÇ್ರೀತ್ಸಾಹಿಸುವವರೇ ಕಡಿಮೆ! ಹೀಗೆ ಹುಡುಗರ `ಮೌನ ಸಂವಹನ', ಹುಡುಗಿ ಮಾತಿನ ಸಂವಹನವನ್ನು ಸಮಾಜವೇ ಮತ್ತಷ್ಟು ಪ್ರಚೋದಿಸುತ್ತದೆ. ಹಲವು ಕೌಟುಂಬಿಕ ಕಲಹಗಳಿಗೆ ಇದು ಕಾರಣವಾಗುತ್ತದೆ.

ಕುಟುಂಬದ ಹೊರಗೆ, ಹಲವು ಕ್ಷೇತ್ರಗಳಲ್ಲಿ ಮಹಿಳೆಯರು `ಮಾತು ತುಂಬಾ' ಎಂಬ ಗೇಲಿಗೇನೋ ಒಳಗಾಗುತ್ತಾರೆ. ಆದರೆ ಅವರ ಮಾತು ನಡೆಯುವ ಸಂಭವನೀಯತೆ ಕಡಿಮೆ. ತಮ್ಮ ಮಾತು ಗೇಲಿಗೊಳಗಾಗಬಹುದು, ತಾವು `ವಾಚಾಳಿ' ಎನಿಸಬಹುದು ಎಂಬ ಸಂದೇಹದಿಂದ ಮಹಿಳೆಯರೂ ಸಾರ್ವಜನಿಕವಾಗಿ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಹಿಂಜರಿಯುತ್ತಾರೆ. ಪರಿಣಾಮ ಹೆಚ್ಚಿನ ಕ್ಷೇತ್ರಗಳ ಉನ್ನತ ಸ್ಥಾನಗಳಿಂದ ಮಹಿಳೆಯರು ವಂಚಿತರಾಗುತ್ತಾರೆ, ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ.

ಪೆÇೀಷಕರಾಗಿ, ಸಂಗಾತಿಯಾಗಿ, ಉದ್ಯೋಗ ಕ್ಷೇತ್ರಗಳಲ್ಲಿ ಮಹಿಳೆಯ ಮಾತಿಗೆ ಬೆಲೆ ದೊರಕಿಸಬೇಕಾಗಿದೆ, ಅಷ್ಟೇ ಅಲ್ಲ ಪುರುಷನನ್ನು ಕುಟುಂಬದಲ್ಲಿ ಮಾತನಾಡುವಂತೆ ಮಾಡುವುದೂ ಅಗತ್ಯವೇ. ಮಹಿಳೆಯ `ಮಾತಿನ ಕೌಶಲ' ಒಂದು ಉಪಯುಕ್ತ ಸಾಧನ ಎಂದು ಸಮಾಜ ಕಲಿಯಬೇಕಾಗಿದೆ. ವರ್ಷಗಳಿಂದ ನಮ್ಮೆಲ್ಲರ ಮನಸ್ಸಿನಲ್ಲಿ ಗಟ್ಟಿಯಾಗಿ ಕುಳಿತಿರುವ ಉಪಯೋಗವಿಲ್ಲದ “ಮಾತಾಡುತ್ತಲೇ ಇರುವ” ಮಹಿಳೆಯ ಚಿತ್ರಣದ ಬದಲು, ಮಾತಿನ ಮೂಲಕ ಭಾವನೆಗಳನ್ನು ಹೊರಹಾಕುವ, ಸಂವಹನವನ್ನು ಸರಿಯಾಗಿ ಮಾಡುವ, ಮಹಿಳೆಯ ಚಿತ್ರ ನೆಲೆಯೂರಬೇಕಿದೆ. `ಗಾಸಿಪ್ ಮಾಡುವ ಲೇಡಿ’, ಕೆಲಸವಿಲ್ಲದೆ ಗಂಟೆಗಟ್ಟಲೆ ಮಾತನಾಡುವ ಮಹಿಳೆಯ ಬಗೆಗೆ ವೈಜ್ಞಾನಿಕ ಆಧಾರವಿಲ್ಲದಿರುವುದಷ್ಟೇ ಅಲ್ಲ, ಮಹಿಳೆಯ ಮಾತನ್ನು ನಿರ್ಲಕ್ಷಿಸುವುದರಿಂದ ಬಹಳಷ್ಟನ್ನು ಇಡೀ ಸಮಾಜ ಕಳೆದುಕೊಳ್ಳುತ್ತದೆ ಎಂಬುದನ್ನು ನಾವಿಂದು ಮನಗಾಣಬೇಕಾಗಿದೆ.

  • ಡಾ. ಕೆ.ಎಸ್. ಪವಿತ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *