ಹೆಣ್ಣು ಹೆಜ್ಜೆ/ ನರಳುವಂತೆ ಮಾಡುವ ಜಾಣೆಯರ ಜಾಣತನ!- ಡಾ.ಕೆ.ಎಸ್. ಪವಿತ್ರ

ಮಹಿಳೆಯ ಬುದ್ಧಿವಂತಿಕೆ, ಕೌಶಲ ಮುಂತಾದುವು ಅವಳನ್ನು ಪುರುಷನಿಗೆ ಸಮಾನವಾಗಿ ಒಪ್ಪಿಕೊಳ್ಳಲು ತಡೆಯುವ ಕಾರಣಗಳೇ ಆಗುತ್ತವೆ. ಅವಳ ಶಿಸ್ತು, ಕಟ್ಟುನಿಟ್ಟು ಅವಳ ಸ್ವಭಾವವನ್ನು ಅಳೆಯುವ ಸಾಧನಗಳಾಗುತ್ತವೆ. ಕುಟುಂಬ, ಉದ್ಯೋಗ, ರಾಜಕಾರಣ ಎಲ್ಲ ಕಡೆ ಈ ಮಾನದಂಡಗಳು ಬಳಕೆಯಾಗುತ್ತವೆ. ಮನ್ನಣೆ, ಮೆಚ್ಚುಗೆ ನೀಡುವಾಗ, ಅವೇ ಜರಡಿಯಾಗುವುದುಂಟು! ಆದರೆ ಮಹಿಳೆಯರು ಅಂಥ ಅಡೆತಡೆಗಳನ್ನು ಕೊಡವಿಕೊಂಡು ಮುನ್ನಡೆಯುವುದನ್ನು ರೂಢಿಸಿ ಕೊಳ್ಳಬೇಕು.

ಪುರುಷರು ಮಹಿಳೆಯರಿಗಿಂತ ಬುದ್ಧಿವಂತರು ಎನ್ನುವುದನ್ನು ಸಾಮಾನ್ಯವಾಗಿ ಮಹಿಳೆ-ಪುರುಷ-ಮಕ್ಕಳು ಎಲ್ಲರೂ ಒಪ್ಪಿಬಿಡುತ್ತಾರೆ. ಸುತ್ತಮುತ್ತಲಿರುವ ನಿಮ್ಮ ಆತ್ಮೀಯ ದಂಪತಿಗಳನ್ನೇ ಗಮನಿಸಿ ನೋಡಿ. ಯಾರೇ ಅವರೊಡನೆ ಏನನ್ನಾದರೂ ಕೇಳಬೇಕೆಂದಾಗ ಮೊದಲು ಪುರುಷನನ್ನೇ ಕೇಳುವುದು ಉತ್ತಮ ಎಂದುಕೊಳ್ಳುವ ಸಾಧ್ಯತೆ ಹೆಚ್ಚು! ಅದೂ ನಮಗೆ ಬೇಕಾದ ಕೆಲಸ ಆಗಬೇಕೆಂದರಂತೂ ಪುರುಷನೊಬ್ಬನನ್ನೇ ಕೇಳಿದರೆ ಅದು ಸುಲಭ. ಅದಕ್ಕೆ ನಮ್ಮೆಲ್ಲರ ಕಾರಣ ಏನು? “ಅಯ್ಯೋ ಅವರ ಹೆಂಡತಿ ತುಂಬಾ ಜೋರು!” ಅಂದರೆ ಅದರ ಹಿಂದಿರುವ ಉದ್ದೇಶವನ್ನು ಅರಿಯುವ ಬುದ್ಧಿವಂತಿಕೆ ಮಹಿಳೆಗಿದೆ. ಹಾಗಾಗಿ ಆಕೆ ಅದನ್ನು ತಡೆದುಬಿಡಬಹುದು ಎಂಬ ಬಗ್ಗೆ ನಮಗೆ ಅರಿವಿದೆ!

ಬಹುಶಃ ಮಹಿಳೆಯ ಈ ಕೌಶಲ-ಸಾಮಥ್ರ್ಯವೇ ಬೇರೆ ಬೇರೆ ಕ್ಷೇತ್ರಗಳಲ್ಲಿ ಆಕೆಯನ್ನು ಮೇಲೇರಿಸುವುದು, ಇತರರ ಆಗ್ರಹಕ್ಕೆ ಆಕೆ ಗುರಿಯಾಗುವಂತೆ ಮಾಡುವುದು, ಆಕೆಯ ಕೆಲಸಗಳಿಗೆ ನಿಜವಾಗಿ ದೊರೆಯಬೇಕಾದ ಮನ್ನಣೆ ಪುರುಷ-ಮಹಿಳೆ ಯಾರಿಂದಲೂ ದೊರೆಯದಿರುವಂತೆ ಮಾಡುವುದು ಎನಿಸುತ್ತದೆ.

ಇತಿಹಾಸದ ಪುಟಗಳನ್ನು ಸ್ವಲ್ಪ ತಿರುಗಿಸಿ ನೋಡೋಣ. 20ನೇ ಶತಮಾನಕ್ಕೆ ಮುನ್ನ ಪುರುಷರು ಮಹಿಳೆಯರಿಗಿಂತ ಬುದ್ಧಿವಂತರು ಎಂದು ನಂಬಲಾಗುತ್ತಿತ್ತು. 1801ರಲ್ಲಿ ಥಾಮಸ್ ಗಿಸ್‍ಬಾರ್ನ್ ಎಂಬ ಕವಿ -ಪೂಜಾರಿ ಮನೆಯ ಕೆಲಸಗಳಿಗೆ, ಮಹಿಳೆ ಸೂಕ್ತ ಎಂದಿದ್ದ. ಅದೇ ಆಕೆಯ ಬುದ್ಧಿವಂತಿಕೆ ರಾಜಕೀಯ, ವಿಜ್ಞಾನ ಮತ್ತು ವ್ಯಾಪಾರಗಳಿಗೆ ಸಾಲದು ಎಂದ. ಏಕೆ? ಅವನ ಪ್ರಕಾರ ಮಹಿಳೆಗೆ ಪುರುಷನಿಗೆ ಹೋಲಿಸಿದರೆ ತರ್ಕಬದ್ಧವಾಗಿ ಯೋಚಿಸುವ ಸಾಮಥ್ರ್ಯ ಕಡಿಮೆ ಎಂದಾಗಿತ್ತು. ಇಂದೂ ಗಿಸ್‍ಬಾರ್ನ್ ಯೋಚನೆಗಳನ್ನು ನಿಜವೆಂದೇ ಒಪ್ಪುವವರಿದ್ದಾರೆ. ಅವರಲ್ಲಿ ಮಹಿಳೆಯರೂ ಇದ್ದಾರೆ ಎನ್ನುವುದು ವಿಶೇಷ!!

1875ರಲ್ಲಿ ಹರ್ಬರ್ಟ್ ಸ್ಪೆನ್ಸರ್ “ಮಹಿಳೆಯರು ಆರೈಕೆಗೆ ಸಂಬಂಧಿಸಿದ ಕೆಲಸಗಳನ್ನು ಮಾತ್ರ ಅರ್ಥಮಾಡಿಕೊಂಡು, ಪರಿಣತಿ ಸಾಧಿಸಬಲ್ಲರು. ಅವರಿಗೆ ನ್ಯಾಯ ನಿರ್ಣಯ, ಅಮೂರ್ತ ಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳುವ ಸಾಮಥ್ರ್ಯ ಇಲ್ಲ” ಎಂದ. 1925ರಲ್ಲಿ ಸಿಗ್ಮಂಡ್ ಫ್ರಾಯ್ಡ್ ಮನೋವಿಜ್ಞಾನದ ದೃಷ್ಟಿಯಿಂದ ನೋಡಿಯೇ ಹೇಳಿದ್ದು “ಮಹಿಳೆಯರು ಭಾವನೆಗಳಿಂದ ಬಹು ಬೇಗ ಪ್ರಭಾವಕ್ಕೊಳಗಾಗುತ್ತಾರೆ. ಹಾಗಾಗಿ ನ್ಯಾಯ ನಿರ್ಣಯಕ್ಕೆ ಅವರಿಗೆ ನೈತಿಕತೆಗಿಂತ, ಭಾವನಾತ್ಮಕತೆ ಎನ್ನುವುದೇ ಮುಖ್ಯವಾಗಿ ಬಿಡುತ್ತದೆ”. ವೈಜ್ಞಾನಿಕವಾಗಿಯೂ ಮಹಿಳೆಯರ ಮಿದುಳಿನ ಗಾತ್ರ ಚಿಕ್ಕದಿರುವುದರಿಂದ ಅವರು ಬುದ್ಧಿಶಕ್ತಿ- ತರ್ಕಗಳಲ್ಲಿ ಕಡಿಮೆಯಿರುವುದಷ್ಟೇ ಅಲ್ಲ, ಉದ್ವೇಗ-ಅಳು-ಸೂಕ್ಷ್ಮ ಇವೆಲ್ಲವೂ ಸೇರಿ ರಾಜಕೀಯ ಕ್ಷೇತ್ರಕ್ಕಂತೂ ಅವರನ್ನು ಅನರ್ಹ ಎಂದೇ ಸಂಶೋಧನೆಗಳು ತೀರ್ಮಾನಿಸಿದ್ದು ಎದ್ದು ಕಾಣುತ್ತದೆ.

19ನೇ ಶತಮಾನದಲ್ಲಿ ಇದರ ವಿರುದ್ಧ ಎದ್ದ ಕೂಗೇ ಕ್ರಮೇಣ ಮಹಿಳೆಯರಿಗೆ ಮತದಾನದ ಹಕ್ಕು ದೊರೆಯುವಂತೆ ಮಾಡಿತು. 20ನೇ ಶತಮಾನದ ಆದಿ ಭಾಗದಲ್ಲಿ ವೈಜ್ಞಾನಿಕ ಸಂಶೋಧನೆಗಳು ತಮ್ಮ ನಿಲುವನ್ನು ಮರು ನಿರೂಪಿಸಿ `ಬುದ್ಧಿವಂತಿಕೆ’ಯಲ್ಲಿ ಲಿಂಗ ಯಾವ ಪಾತ್ರವನ್ನೂ ವಹಿಸುವುದಿಲ್ಲ ಎಂಬುದನ್ನು ದೃಢಪಡಿಸಿದವು. ಜಗತ್ತಿನ ಅತಿ ದೀರ್ಘ ಅಧ್ಯಯನ ಲೂಯಿ ಟರ್ಮನ್‍ನ ಐಕ್ಯೂ ಕುರಿತ ಅಧ್ಯಯನ. ಟರ್ಮನ್ ಸಂಶೋಧನೆ ನಡೆಸಿದ ನಂತರ 14 ವರ್ಷ ವಯಸ್ಸಿನವರೆಗೆ, ಹುಡುಗ-ಹುಡುಗಿಯರಿಬ್ಬರಿಗೂ `ಬುದ್ಧಿವಂತಿಕೆ’ ಯಲ್ಲಿ (IQ-ಬುದ್ಧಿಮತ್ತೆಯಲ್ಲಿ) ವ್ಯತ್ಯಾಸವಿರಲಿಲ್ಲ ಎಂಬುದು ಬಲವಾಗಿ ದೃಢವಾಯಿತು.

ಆದರೆ ಕೆಲವು ವಿಭಾಗಗಳಲ್ಲಿ ಹೆಚ್ಚು ಸಾಮಥ್ರ್ಯ ಪ್ರತ್ಯೇಕವಾಗಿ ಹುಡುಗ-ಹುಡುಗಿಯರಲ್ಲಿ ಕಂಡುಬಂದಿತು. ಅಂಕಗಣಿತದ ‘Reasoning’ – ಕಾರಣ ಹುಡುಕುವಿಕೆಯಲ್ಲಿ ಹುಡುಗರು ಹುಡುಗಿಯರಿಗಿಂತ ಚುರುಕಾದರೆ, ಅರ್ಥಮಾಡಿಕೊಂಡು ಬರೆಯುವ, ‘Comprehension’ ಪ್ರಬಂಧದಂತಹ ಪ್ರಶ್ನೆಗಳಲ್ಲಿ ಹುಡುಗಿಯರು ಮುಂದಿದ್ದರು. ಆಗಲೂ ಟರ್ಮನ್ ತಾರತಮ್ಯ, ಅವಕಾಶಗಳ ಕೊರತೆ, ತಾಯ್ತನದ ಜವಾಬ್ದಾರಿಗಳು, ಭಾವನಾತ್ಮಕ ಅಂಶಗಳು ಬೌದ್ಧಿಕ ವಲಯಗಳಲ್ಲಿ ಮಹಿಳೆಯರು ಮೇಲೇರುವುದಕ್ಕೆ ಅಡ್ಡಿಗಳು ಎಂಬುದನ್ನು ಗುರುತಿಸಿದ್ದ. ಈಗಲೂ ಇವೆಲ್ಲವೂ ಉಳಿದಿರುವ ಬಗ್ಗೆ ವಿಜ್ಞಾನ ವಲಯಕ್ಕೆ ಸಂಬಂದಿಸಿದಂತೆ, ನೊಬೆಲ್ ಪಾರಿತೋಷಕವನ್ನು ಉದಾಹರಣೆಯಾಗಿಟ್ಟುಕೊಂಡು ಇದೇ ಅಂಕಣದಲ್ಲಿ ಹಿಂದೊಮ್ಮೆ ನಾನು ಬರೆದಿದ್ದೆ.

ಆದರೆ ಈಗ ನಾನು ಹೇಳಲು ಹೊರಟಿರುವುದು ಕೇವಲ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಲು ಅಡ್ಡಿಯಾಗಿರುವ ಕಾರಣಗಳಲ್ಲ, ಬದಲಾಗಿ ಮಹಿಳೆಯರ ಬುದ್ಧಿವಂತಿಕೆಯ ಬಗೆಗಿನ ಪೂರ್ವಗ್ರಹಗಳು ಹೇಗೆ ದೈನಂದಿನ ಜೀವನದಲ್ಲಿ ಆಕೆಗೆ ವಿವಿಧ ರೀತಿಯ ಸವಾಲುಗಳನ್ನು ಉಂಟುಮಾಡುತ್ತವೆ ಎಂಬುದರ ಬಗ್ಗೆ.

ಮೊದಲು ಮನೆಯಿಂದ ಆರಂಭಿಸೋಣ. ಕುಟುಂಬದ ವಿವಿಧ ಜವಾಬ್ದಾರಿಗಳನ್ನು ಮಹಿಳೆಯರು ನಿರ್ವಹಿಸುತ್ತಾರಷ್ಟೆ. ಸಾದಾ ದೈನಂದಿನ ಕೆಲಸಗಳಲ್ಲಿಯೂ ಬಹಳಷ್ಟು ಮಹಿಳೆಯರು ತರಕಾರಿ ತರುವಲ್ಲಿ, ಒಳ್ಳೆಯ ತರಕಾರಿಯನ್ನೇ ಆರಿಸಿ ತರುವಲ್ಲಿ, ಮನೆಗೆ ಅವಶ್ಯವಿರುವಷ್ಟೇ ತರಕಾರಿ ತರುವಲ್ಲಿ, ಕಾಳಜಿ ವಹಿಸುತ್ತಾರೆ. ಬಾಲಕಿಯರು, ಯುವತಿಯರು ಈ ಕೌಶಲಗಳನ್ನು ಬಾಲ್ಯದಿಂದಲೇ ರೂಢಿಸಿಕೊಳ್ಳುತ್ತಾರೆಂದು ಹೇಳಲು ಬರದಿದ್ದರೂ, ಕ್ರಮೇಣ ತಮ್ಮದೇ ಕುಟುಂಬವನ್ನು ಆರಂಭಿಸಿದ ಮೇಲೆ ಕಲಿಯುವುದು ಸಾಮಾನ್ಯ. ಆದರೆ ಮಹಿಳೆಯರ ಈ ಕೌಶಲದ ಬಗೆಗೆ ಸ್ವತಃ ಮಹಿಳೆಯರಿಂದಲೂ ಒಳ್ಳೆಯ ಮಾತು ಬರುವುದು ಕಡಿಮೆ! ಬದಲಾಗಿ ಒಂದಷ್ಟು ಜೋಕ್‍ಗಳು ಗಂಡಂದಿರ ಈ ಬಗೆಗಿನ ಅಲಕ್ಷ್ಯದ ಬಗ್ಗೆ ಹರಿದಾಡುತ್ತದೆ ಅಷ್ಟೆ! ಇದು ಒಂದು ಉದಾಹರಣೆ. ಮನೆಯ ಎಷ್ಟೋ ವ್ಯವಹಾರಗಳ ಮಟ್ಟಿಗೂ ಸಾರ್ವತ್ರಿಕ ಎನಿಸುವಷ್ಟರ ಮಟ್ಟಿಗೆ ಇದು ನಿಜವೇ.

ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟಂತೆ ಮತ್ತೊಂದು ಬಹು ಮುಖ್ಯ ಪ್ರವೃತ್ತಿಯನ್ನು ಕಾಣಬಹುದು. ಇದು ಎಲ್ಲೆಡೆ ಕಂಡು ಬರುವಂಥದ್ದು. ಆದರೆ ಬಹುಜನ ಸ್ನೇಹಿತೆಯರು / ಹತ್ತಿರದ ಆತ್ಮೀಯರಲ್ಲಿ ದೂರಿ ಸುಮ್ಮನಿರುವಂಥದ್ದು! ಅದೇನು?? ಮಕ್ಕಳ ವಿದ್ಯಾಭ್ಯಾಸದ ಬಗೆಗೆ ಅಮ್ಮಂದಿರು ಮಾಡುವ ಪ್ರಯತ್ನಗಳ ಬಗೆಗೆ ಗೇಲಿ ಮಾಡುವುದು, ಅವರು ಮಕ್ಕಳಿಗೆ ಕಿರುಕುಳ ನೀಡುತ್ತಿದ್ದಾರೆ, ಅತಿ ಶಿಸ್ತು ಮಾಡುತ್ತಿದ್ದಾರೆ'' ಎಂಬಂತೆ ದೂಷಿಸುವುದು! ಅಷ್ಟಕ್ಕೇ ಸುಮ್ಮನಾಗದೆ, ಈ ಅಮ್ಮಂದಿರು ತಮ್ಮ ಮಕ್ಕಳಿಗಾಗಿ ಕಷ್ಟ ಪಟ್ಟು ಮಾಡುವ / ಹುಡುಕುವ ತಂತ್ರಗಳು (ಟೀಚರ್, ತರಗತಿ, ಆನ್‍ಲೈನ್ ಕೋರ್ಸು, ಪ್ರಶ್ನೆಪತ್ರಿಕೆ, ಪುಸ್ತಕ, ಹೊಸ ಟ್ಯೂಷನ್ ಯಾವುದಾದರೂ ಸರಿ) ಮಾಹಿತಿಯನ್ನು ಆಕೆಗೆ ಗೊತ್ತೇ ಇರದ ರೀತಿಯಲ್ಲಿ ಇತರರಿಗೆ ಕೊಟ್ಟು ಬಿಡುವುದು! ಇದು ಅಮ್ಮಂದಿರ ಬುದ್ಧಿವಂತಿಕೆಯನ್ನು ಗೇಲಿ ಮಾಡಿ, ತಾವು ಮಾತ್ರ ಅದರ ಲಾಭವನ್ನು ಇತರರಿಗೆ ಕೊಡುವ ಅತೀ ಬುದ್ಧಿವಂತಿಕೆ! ಇದರಲ್ಲಿ ಮನೆಯ ಪುರುಷ (ಬಹಳಷ್ಟು ಸಲ ಪತಿ/ಅಪ್ಪ), ಕೆಲವೊಮ್ಮೆ ಹಿರಿಯ ಮಹಿಳೆಯರೂ ಸೇರಿಬಿಡುತ್ತಾರೆ. ಆದರೆ ಇವರ್ಯಾರೂ ಮಹಿಳೆಯರ `ಮಕ್ಕಳನ್ನು ಬೆಳೆಸುವ' ಕೌಶಲವನ್ನು ಒಪ್ಪಿಕೊಳ್ಳುವುದಿಲ್ಲ ಎಂಬುದು ಗಮನಾರ್ಹ ಸಂಗತಿ.

ನಂತರದ ಮನೆ ಸಹಾಯಕರು, ಸುತ್ತಮುತ್ತಲಿನ ಇತರ ಕೆಲಸಗಳಿಗಾಗಿ ಬರುವವರ ಬಗ್ಗೆ ಒಂದೋ ಅತಿ ಸಹಾನುಭೂತಿ, ಅಥವಾ ಅವರಿಗೆ ಅತಿಯಾಗಿ ಬೈದು, ಪ್ರತಿಯೊಂದು ವಿಷಯದಲ್ಲಿಯೂ ತಪ್ಪು ಕಂಡು ಹಿಡಿಯುವುದು, ಮಹಿಳೆಯಾದವಳು `ಜಾಣತನ'ದ ಡಿಪ್ಲೋಮೆಸಿಯಿಂದ ಮನೆಯ ಸಹಾಯಕರನ್ನು -ಸುತ್ತಮುತ್ತಲ ಇತರ ಕೆಲಸ ಮಾಡಿಕೊಡುವವರನ್ನು ನಿಭಾಯಿಸುವ ರೀತಿಯನ್ನು ಇತರ ಮಹಿಳೆಯರಾಗಲಿ, ಪುರುಷರಾಗಲಿ ಗುರುತಿಸುವುದು ಕಡಿಮೆ.

ನಂತರ ಮನೆಯಿಂದ ಹೊರಗೆ ಬರೋಣ. ನಾನೊಬ್ಬ ವೈದ್ಯೆಯಾಗಿ ಹಲವು ವೈದ್ಯೆಯರೇ ಆಸ್ಪತ್ರೆಗಳನ್ನು ನಡೆಸುವುದನ್ನು ನೋಡಿದ್ದೇನೆ. ಅಥವಾ ಉದ್ಯಮಗಳನ್ನು ಮಹಿಳೆಯರೇ ನಡೆಸುತ್ತಿರುವುದನ್ನೂ ಬಲ್ಲೆ. ಇಂಥ ಆಡಳಿತ ವ್ಯವಸ್ಥೆಯನ್ನು ನೋಡಿಕೊಳ್ಳಬೇಕಾದಂಥ ಸ್ಥಳಗಳಲ್ಲಂತೂ ಮಹಿಳೆಯರ `ಜಾಣತನ' ವನ್ನು ಪುರುಷ-ಮಹಿಳೆಯರೆಲ್ಲರೂ ಇಷ್ಟಪಡದಿರುವುದೇ ಹೆಚ್ಚು. ಪುರುಷರು ಇಂತಹ ಜವಾಬ್ದಾರಿಗಳನ್ನು ನಿರ್ವಹಿಸುವಾಗ ಸಹಕಾರ ಸುಲಭಸಾಧ್ಯವಾಗಿರುವಷ್ಟು, ಅವರೊಂದಿಗೆ ಅವರ ಮಹಿಳಾ ಸಂಗಾತಿ (ವಿಶೇಷವಾಗಿ ಪತ್ನಿ, ಹಿರಿಯ ಉದ್ಯೋಗಿ ಸಹ)ಗಳ ಸಹಕಾರವಿದ್ದಷ್ಟು ಮಹಿಳೆಯರಿಗೆ ಸಿಕ್ಕುವುದಿಲ್ಲ ಎನ್ನುವುದು ಸತ್ಯದ ಮಾತು. ಮೇಲೇರಿದಂತೆ ಒಂಟಿತನ ಕಟ್ಟಿಟ್ಟ ಬುತ್ತಿ” ಎಂಬ ಮಾತು ಇಲ್ಲಿ ನೆನಪಾಗುತ್ತದೆ. ಇಲ್ಲೆಲ್ಲ ಮಹಿಳೆಯರನ್ನೂ ಒಳಗೊಂಡಂತೆ ಎಲ್ಲರ ಪೂರ್ವಗ್ರಹಿಕೆ “ಇವರು ಸದಾ ನಮ್ಮನ್ನು ಪೀಡಿಸಲೇ ಕಾಯುತ್ತಿರುತ್ತಾರೆ, ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಬಿಡುವುದಿಲ್ಲ, ತಡವಾಗಿ ಬರಲು ಬಿಡುವುದಿಲ್ಲ, ತಪ್ಪು ಮಾಡಿದರೆ ದಂಡ ಕಟ್ಟಿಸದೆ ಬಿಡುವುದಿಲ್ಲ”. ಒಟ್ಟಿನಲ್ಲಿ ಅಧಿಕಾರ ಹೊಂದಿರುವ ಮಹಿಳೆಗೆ ಮೇಡಂ ತುಂಬಾ ಜೋರು/ತುಂಬಾ ಜಿಪುಣರು/ಸ್ವಲ್ಪವೂ ಸಹಾನುಭೂತಿ ಇರದವರು'' ಎಂಬ ಮಾತು ಬರುವ ಸಾಧ್ಯತೆ ಹೆಚ್ಚು.

ಇವೆಲ್ಲವೂ ಕೇವಲ ಪುರುಷರಿಂದ ಎದುರಾಗುವ ಟೀಕೆ, ದೂಷಣೆ, ಗ್ರಹಿಕೆಗಳಲ್ಲ ಎಂಬುದು ಗಮನಿಸಬೇಕಾದ ಮಾತು. ಹಾಗೆಯೇ ಇವುಗಳಿಗೆ ಕಿವಿಗೊಡುವುದು, ಬಹು ಸೂಕ್ಷ್ಮತೆಯಿಂದ ಖಿನ್ನರಾಗುವುದು “ಜಾಣತನದಿಂದ ನರಳಬೇಕಾಗುವ ಜಾಣೆಯರು” ಎಂಬ ಹಣೆಪಟ್ಟಿಯನ್ನೇ ಹುಟ್ಟು ಹಾಕುತ್ತದೆ. ಹಾಗಿದ್ದರೆ ಜಾಣತನವನ್ನು ಬಿಡಬೇಕಿಲ್ಲ. `ನೀವು ಜೋರು’ ಎಂದು ಯಾರಾದರೂ ಹೇಳಿದಾಗ ಅದರ ಸಮಾನಾರ್ಥಕವಾಗಿ “ಜಾಣರು-ಶಿಸ್ತಿನವರು-ಇತರರ ಅಶಿಸ್ತು ಸಹಿಸದಿರುವವರು- ಕೆಟ್ಟ ಬುದ್ಧಿ ಜಾಣತನದಿಂದ ನರಳದೇ ಮುಂದುವರೆಯುವುದು ಸಾಧ್ಯವಿಲ್ಲವೇ? ಖಂಡಿತ ಸಾಧ್ಯವಿದೆ. ಬೇರೆಯವರ ಟೀಕೆ, ದೂಷಣೆ, ಇತರರು ನಮ್ಮಿಂದ ಲಾಭ ಪಡೆಯಬಹುದೆಂಬ ಕಾರಣಕ್ಕೆ ಹೆದರಿ ನಮ್ಮ ಸಹಿಸದಿರುವ ಒಳ್ಳೆಯವರು” ಎಂಬ ಅರ್ಥ ಎಂದು ತಿಳಿಯುವುದೇ ಸರಿ. ಅದನ್ನು ಒಪ್ಪಿಕೊಳ್ಳುವ ಜಾಣತನ-ಒಳ್ಳೆಯ ಬುದ್ಧಿ ಇತರರಿಗಿಲ್ಲ ಎಂದರೆ ಕಲಿಸಿಕೊಡಲು ಪ್ರಯತ್ನಿಸಿ. ಅವರು ಕಲಿಯಲು ಸಿದ್ಧರಿಲ್ಲ ಎಂದರೆ ಕೊಡವಿಬಿಡಿ! ನೀವು ಜಾಣರಾಗಿಯೇ, ನರಳದೆಯೇ ಆರಾಮವಾಗಿ ನಿಮ್ಮ ಕೆಲಸ ಮಾಡಿ.

  • ಡಾ.ಕೆ.ಎಸ್. ಪವಿತ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *