ಹೆಣ್ಣು ಹೆಜ್ಜೆ / ದೇಹ – ಮನಸ್ಸುಗಳ ನಡುವೆ ಕಾಮ – ಪ್ರೇಮ!- ಡಾ. ಕೆ.ಎಸ್. ಪವಿತ್ರ

ಹೆಣ್ಣು ಮಕ್ಕಳು ಎಷ್ಟೇ ವಿದ್ಯಾವಂತರಾದರೂ, ಅಥವಾ `ಆಧುನಿಕರು’ ಎಂಬಂತೆ ವೇಷಭೂಷಣ ಧರಿಸಿದರೂ ವೈಜ್ಞಾನಿಕವಾಗಿ ಇರಬೇಕೆಂದಿಲ್ಲ ಎಂಬುದು ಗೊತ್ತು. ಮಹಿಳಾ ಲೈಂಗಿಕತೆಯನ್ನು ಒಂದು ವಸ್ತುನಿಷ್ಠ-ವೈಜ್ಞಾನಿಕ ವಿಷಯವಾಗಿ ಜನರ ಬಳಿ, ಕೊನೆಗೆ ವೈದ್ಯಕೀಯ ಕ್ಷೇತ್ರದಲ್ಲಿಯೂ ಚರ್ಚಿಸುವುದು ಸುಲಭದ ವಿಷಯವಲ್ಲ. ಲೈಂಗಿಕ ಸಂಬಂಧಗಳಲ್ಲಿ ಮಹಿಳಾ ಭಾವನಾತ್ಮಕತೆಯನ್ನು ಮಹಿಳೆ ಪುರುಷರಿಬ್ಬರೂ ಕಡೆಗಣಿಸುವುದೇ ಹಲವು ಸಮಸ್ಯೆಗಳಿಗೆ ಕಾರಣ. ನಮ್ಮ ಒಟ್ಟೂ ಆರೋಗ್ಯ ಮತ್ತು ಜೀವನದ ಗುಣಮಟ್ಟದ ಭಾಗವಾಗಿ ಲೈಂಗಿಕ ಆರೋಗ್ಯವನ್ನು ನಾವು ಒಪ್ಪುವುದಾದರೆ ಮಹಿಳೆಯರ ಲೈಂಗಿಕತೆಯ ಬಗೆಗಿನ ಆರೋಗ್ಯಕರ ಮನೋಭಾವ ಬೆಳೆಸಿಕೊಳ್ಳುವುದೂ ಮುಖ್ಯ.

ಸುಮಾರು 2009ರಲ್ಲಿ ಪತ್ರಿಕೆಯೊಂದರ ಮಹಿಳಾ ಪುರವಣಿಗೆ `ಮೆಲ್ಲುಸಿರೇ ಸವಿಗಾನ - ಮಹಿಳೆ ಮತ್ತು ಲೈಂಗಿಕತೆ' ಎಂಬ ಲೇಖನವೊಂದನ್ನು ನಾನು ಬರೆದಿದ್ದೆ. ಅದನ್ನು ಓದಿ ಪ್ರತಿಕ್ರಿಯಿಸಿದವರು ಹಲವರು. ಅವರಲ್ಲಿ ಇಬ್ಬರು ಪ್ರಸಿದ್ಧರೂ ಇದ್ದರು. ಮೊದಲನೆಯವರು ಓರ್ವ ಲೇಖಕಿ. ಅವರೆಂದದ್ದು ``ನಿನ್ನ ಲೇಖನ ಓದಿದರೆ, `ಲೈಂಗಿಕತೆಯಲ್ಲಿ ಇಷ್ಟೆಲ್ಲಾ ಆಯಾಮಗಳಿವೆ ಎಂಬ ಅರಿವೇ ಮಹಿಳೆಯರಲ್ಲಿ ಸಮಸ್ಯೆಗಳನ್ನು ಹೆಚ್ಚಿಸಿದರೆ' ಎನಿಸಿತು''. ಇನ್ನೊಬ್ಬರು ಪತ್ರಿಕೆಯ ಓದುಗರ ಪ್ರತಿಕ್ರಿಯೆ ವಿಭಾಗಕ್ಕೇ ಹೀಗೆ ಬರೆದರು, ``ಲೇಖನ ಬಹು ಉಪಯುಕ್ತವೆನಿಸೀತಾದರೂ ಮಡಿವಂತರಿಗೆ `ಅಪವಿತ್ರ' ವೆನಿಸಲೂಬಹುದು!''.

ಈ ಪ್ರತಿಕ್ರಿಯೆಗಳನ್ನು ನಾನು ನಿರೀಕ್ಷಿಸಿಯೇ ಇದ್ದೆ. ಮನೋವೈದ್ಯೆಯಾಗಿ ಆಗಲೇ ಸುಮಾರು ಐದಾರು ವರ್ಷಗಳಾಗಿ ಕಳೆದಿದ್ದ ನನಗೆ, ಮಹಿಳೆಯರಿಗೆ ಸಂಬಂಧಿಸಿದಂತೆ ಲೈಂಗಿಕ ಜ್ಞಾನ ಹೆಣ್ಣು ಮಕ್ಕಳು ಎಷ್ಟೇ ವಿದ್ಯಾವಂತರಾದರೂ, ಅಥವಾ `ಆಧುನಿಕರು' ಎಂಬಂತೆ ವೇಷಭೂಷಣ ಧರಿಸಿದರೂ ವೈಜ್ಞಾನಿಕವಾಗಿ ಇರಬೇಕೆಂದಿಲ್ಲ ಎಂಬುದು ಗೊತ್ತಿತ್ತು. ಜೊತೆಗೇ ಮಹಿಳಾ ಲೈಂಗಿಕತೆಯನ್ನು ಒಂದು ವಸ್ತುನಿಷ್ಠ-ವೈಜ್ಞಾನಿಕ ವಿಷಯವಾಗಿ ಜನರ ಬಳಿ, ಕೊನೆಗೆ ವೈದ್ಯಕೀಯ ಕ್ಷೇತ್ರದಲ್ಲಿಯೂ ಚರ್ಚಿಸುವುದು ಸುಲಭದ ವಿಷಯವಲ್ಲ ಎಂಬ ಅರಿವೂ ನನಗಿತ್ತು. ಆದರೂ ಆ ಲೇಖನ ಬರೆದ ಹನ್ನೊಂದು ವರ್ಷಗಳ ನಂತರ ನಾನು ನೋಡಿರುವ, ಸಂಪರ್ಕಕ್ಕೆ ಬಂದಿರುವ ಮಹಿಳೆಯರ ಸಮಸ್ಯೆಗಳನ್ನು ನೆನೆಸಿಕೊಳ್ಳುತ್ತಾ, ಮತ್ತೊಮ್ಮೆ ಮಹಿಳಾ ಲೈಂಗಿಕತೆಯ ಬಗ್ಗೆ ವಿವರಿಸುವ ಸಾಹಸಕ್ಕೆ ಕೈ ಹಾಕಿದ್ದೇನೆ.

ಹಸಿವು-ನೀರಡಿಕೆಗಳಂತೆ ಮೈಥುನ ಮನುಷ್ಯನ ಮೂಲಭೂತ ಕಾಮನೆಗಳಲ್ಲಿ ಒಂದು. ಪ್ರತಿ ವ್ಯಕ್ತಿಯ ಲೈಂಗಿಕತೆ, ಆತ/ಆಕೆಯ ದೇಹ ರಚನೆ, ಮಾನಸಿಕ ಸ್ಥಿರತೆ, ಭಾವನಾತ್ಮಕ ಬೆಳವಣಿಗೆ, ಅವರ ಸಾಂಸ್ಕøತಿಕ ಹಿನ್ನೆಲೆ, ಬಾಲ್ಯ ಬೇರೆಯವರ ಜೊತೆಗೆ ಸಂಬಂಧಗಳು, ಜೀವನಾನುಭವ ಇವೆಲ್ಲದರ ಮೇಲೆ ಅವಲಂಬಿಸಿರುತ್ತದೆ.

ಲಿಂಗ, ಲೈಂಗಿಕತೆ, ಸೆಕ್ಸ್ ಎಂಬ ಪದಗಳು ನಮ್ಮಲ್ಲಿ ನಮ್ಮ ನಮ್ಮ ಅನುಭವಕ್ಕೆ ಅನುಸಾರವಾಗಿ, ನಮ್ಮ ವಯಸ್ಸಿಗನುಗುಣವಾಗಿ ಕುತೂಹಲ, ಆಕರ್ಷಣೆ, ಮುಜುಗರ, ಅಸಹ್ಯ, ಸಂತೋಷ ಮೊದಲಾದ ಭಾವನೆಗಳನ್ನು ಮೂಡಿಸಬಹುದು. ಆದರೂ ಪುರುಷ-ಮಹಿಳೆ ಇಬ್ಬರೂ `ಲೈಂಗಿಕತೆ' ಎಂದಾಕ್ಷಣ ಅದನ್ನು `ದೈಹಿಕ' ಎಂದೇ ಭಾವಿಸಿಬಿಡುತ್ತಾರೆ. ಪ್ರೇಮ-ಕಾಮಗಳನ್ನು ಪ್ರತ್ಯೇಕಿಸಿಯೇ ನೋಡಲಾಗುತ್ತದೆ. ಕಾಮವನ್ನು ಪ್ರೇಮದ ಒಂದು ಭಾಗ ಎಂಬುದನ್ನು ನಾವು ಒಪ್ಪುತ್ತೇವೆಯೇ ವಿನಃ `ಪ್ರೇಮ' ಎನ್ನುವುದು ಕಾಮದ ಭಾಗವಾಗಬೇಕು ಎಂಬ ಬಗ್ಗೆ ಕೇವಲ `ಸಾಂಪ್ರದಾಯಿಕ' ವಾಗಿ ನಾವು ಒಪ್ಪಬಹುದೇ ಹೊರತು, ಅದರ ಪ್ರಾಮುಖ್ಯವನ್ನು ಮನಗಂಡಲ್ಲ.

ಲೈಂಗಿಕ ಸಂಬಂಧಗಳಲ್ಲಿ ಮಹಿಳಾ ಭಾವನಾತ್ಮಕತೆಯನ್ನು ಮಹಿಳೆ ಪುರುಷರಿಬ್ಬರೂ ಕಡೆಗಣಿಸುವುದೇ ಹಲವು ಸಮಸ್ಯೆಗಳಿಗೆ ಕಾರಣ ಎಂದು ನನಗೆ ಅನ್ನಿಸುತ್ತದೆ. ಕೆಲವೊಮ್ಮೆ ಅಂಥ ಸಮಸ್ಯೆಗಳಿಗೆ ಪರಿಹಾರವಾಗುವ ಒಂದು `ಆದರ್ಶ ನಡವಳಿಕೆ' ಅಥವಾ `ಇದಮಿತ್ಥಂ' ಎಂಬ ಚಿಕಿತ್ಸೆ ಸಾಧ್ಯವಾಗದಿರಬಹುದು. ಆದರೆ ಕನಿಷ್ಠ, ಸಮಸ್ಯೆಯ ಅರಿವು, ಅದರ ಬಗೆಗೆ ಮುಕ್ತ ಚರ್ಚೆ, ಸಂಗಾತಿಯ ಆ ಬಗೆಗೆ ಪ್ರಯತ್ನ ಮಾಡುವ ಪ್ರಾಮಾಣಿಕತೆ ಬದುಕನ್ನು `ಸುಂದರ' ಎನಿಸುವಂತೆ ಮಾಡಬಹುದು. ಮತ್ತೆ, ಇಲ್ಲಿ ನಾನು ಚರ್ಚಿಸಿರುವ ಎಲ್ಲವೂ ಆರೋಗ್ಯದ ಪರವಾಗಿ, ಈ ಚರ್ಚೆಗೆ ಯಾವ ಹಣೆಪಟ್ಟಿ (ಅವರವರ ಮನೋಭಾವಕ್ಕೆ ತಕ್ಕಂತೆ ಸಾಂಪ್ರದಾಯಿಕ/ಆಧುನಿಕ) ಇಲ್ಲದೆಯೂ ಅಥವಾ ಹಾಕಿಯೂ, ವೈಜ್ಞಾನಿಕವಾಗಿ ನೋಡುವುದು, ಉಪಯುಕ್ತವೂ, ಆರೋಗ್ಯಕರವೂ ಎಂಬುದನ್ನು ಓದುಗರು ಗಮನಿಸಬೇಕು.  

ಭಾವನಾತ್ಮಕತೆ ಎಂಬುದು ಮಹಿಳೆಯರಿಗೆ ಹೆಚ್ಚು ಮುಖ್ಯ ಎನಿಸಬಹುದು. ಆದರೆ ಮಹಿಳೆ-ಪುರುಷರಿಬ್ಬರಿಗೂ ಅದು ಲೈಂಗಿಕ ತೃಪ್ತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಗಮನಿಸಲೇಬೇಕು. ಹಾಗೆಯೇ ನಾವು ಮಹಿಳೆಯರಲ್ಲಿ ಎಲ್ಲವೂ ಭಾವನೆಗಳಿಗೆ ಸಂಬಂಧಿಸಿದ್ದು ಎನ್ನುತ್ತಾ, ಲೈಂಗಿಕತೆಯ ದೈಹಿಕ ಆಯಾಮವನ್ನೂ ಕಡೆಗಣಿಸುವ ಅಪಾಯವೂ ಬಹಳಷ್ಟು. ಇವೆರಡನ್ನೂ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡೋಣ.

ಸಂಕೀರ್ಣ ವಿಷಯ: ಮಹಿಳಾ ದೇಹದ ಬಗೆಗಿನ ಅಜ್ಞಾನವೇನೂ ಹೊಸತಲ್ಲ! ಶತಮಾನಗಳಷ್ಟು ಹಿಂದಿನ ಚರಿತ್ರೆ ಈ ಅಜ್ಞಾನಕ್ಕಿದೆ. 16ನೇ ಶತಮಾನದಲ್ಲಿ ವಿಜ್ಞಾನದಲ್ಲಿ ಕ್ರಾಂತಿಕಾರಕ ಆವಿಷ್ಕಾರಗಳು ನಡೆಯುತ್ತಿದ್ದವಷ್ಟೆ. ಅಂತಹ ಸಮಯದಲ್ಲಿ ಮಾನವ ದೇಹದ ಅಂಗರಚನೆಯ ಬಗೆಗೆ ಸಂಶೋಧನೆಗಳು ನಡೆಯುತ್ತಿದ್ದವಷ್ಟೆ. ಆದರೆ ಈ ಸಂಶೋಧನೆಗಳನ್ನು ಮಾಡುತ್ತಿದ್ದವರೆಲ್ಲರೂ ಪುರುಷರೇ ಸಹಜವಾಗಿ ಹೆಣ್ಣು ದೇಹದ ಜನನಾಂಗದ ರಚನೆಯಾಗಲಿ, ಅವುಗಳ ಸಂವೇದನೆಗಳಾಗಲಿ ಅವರಿಗೆ ಅರ್ಥವಾಗುವುದೇ ಕಷ್ಟವಿತ್ತು. ಗರ್ಭಕೋಶ ಮಕ್ಕಳನ್ನು ಹೊರುವ ಚೀಲ ಎಂಬ ಪ್ರಾಮುಖ್ಯವೇನೋ ಸಿಕ್ಕಿತು. ಆದರೆ ಯೋನಿಯ ಸುತ್ತಮುತ್ತಲ ನರಗಳು, `ಕ್ಲಿಟೋರಿಸ್' ಎಂಬ ಪುರುಷನ ಶಿಶ್ನಕ್ಕೆ ಸಂವಾದಿಯಾದ, ಮಹಿಳೆಯ ಲೈಂಗಿಕ ಸಂತಸ-ತೃಪ್ತಿಗೆ ಕಾರಣವಾದ ಭಾಗ, ಇವುಗಳು ಮಹಿಳೆಗೆ ಏಕೆ ಬೇಕು ಎಂಬುದು ವಿಜ್ಞಾನಿಗಳಿಗೆ ಅರ್ಥವಾಗಲೇ ಬಹುಕಾಲ ಹಿಡಿಯಿತು. ಕೊನೆಗೆ ಅರ್ಥವಾದರೂ ಅವರು ಸ್ವತಃ ಮಹಿಳೆಯರಲ್ಲದ್ದರಿಂದ ಅವರಿಗೆ ಅದು ಅನುಭವಾತ್ಮಕವಂತೂ ಆಗಿರಲಿಲ್ಲ. ವಿಜ್ಞಾನಿಗಳು ಹೀಗೆ ತಿಳಿಯಲು ಮಾಡಬಹುದಾದ ಒಂದು ಸರಳ ಪ್ರಯೋಗವನ್ನು ಮಾಡಲೇ ಇಲ್ಲ. ಅದೇನು?! ಸ್ವತಃ ಮಹಿಳೆಯರನ್ನು ಕೇಳುವುದು! ``ಓ ಇದೆಲ್ಲಾ ಇತಿಹಾಸ! ಈಗ ಇದೆಲ್ಲಾ ಬದಲಾಗಿದೆ'' ಎನ್ನುವ ಹಾಗೇನೂ ಇಲ್ಲ. ಇಂದಿಗೂ ಬಹಳಷ್ಟು ಜನರಿಗೆ ಗೊತ್ತಿರದ ಸಂಗತಿಗಳು, ಮಹಿಳೆಯರಿಗೂ ತಮ್ಮ ದೇಹದ ಬಗ್ಗೆ ಗೊತ್ತಿರದ ವಿಷಯಗಳು ಮಹಿಳಾ ಅಂಗ ರಚನೆಯಲ್ಲಿವೆ. ತಮ್ಮ `ಜನನಾಂಗ' ಗಳು ಮುಟ್ಟಬಾರದ ಜಾಗಗಳಾಗಿಯೇ ಮಹಿಳೆಯರಲ್ಲಿ, ಹುಡುಗಿಯರಲ್ಲಿ ಉಳಿದಿವೆ. ಕಲಾವಿದರು-ಸ್ತ್ರೀವಾದಿಗಳು ಈ ಬಗೆಗೆ ಗಲಾಟೆ ಮಾಡಿದ್ದಾರೆ. ಸೋಫಿಯಾ ವ್ಯಾಲೇಸ್ ಎಂಬ ಕಲಾವಿದೆ `ಕ್ಲಿಟೆರೆಸಿ' ‘ಕ್ಲಿಟೋರಿಸ್ ಬಗೆಗಿನ ಅಕ್ಷರತೆ' ಎಂಬ ಶಿಲ್ಪಕಲೆಯ ಪ್ರಾಜೆಕ್ಟ್ ಮೂಲಕ ಅರಿವು ಮೂಡಿಸಲು ನೋಡಿದ್ದಾರೆ. ಆದರೆ `ಲೈಂಗಿಕತೆ' ಎನ್ನುವುದು ಸಂಕೀರ್ಣ ವಿಷಯವಾದ್ದರಿಂದ ಇಂಥ ಪ್ರಯತ್ನಗಳು ಹಲವರ ಕೆಂಗಣ್ಣಿಗೆ, ಟೀಕೆಗೆ ಕಾರಣವಾಗಿದೆ.

ಮಹಿಳೆಯರನ್ನೂ ಒಳಗೊಂಡಂತೆ ನಮ್ಮ ಸಮಾಜ ಅತ್ತ ದೈಹಿಕ ಅಂಶಗಳನ್ನು ನಿರ್ಲಕ್ಷಿಸುವಂತೆ, ಇತ್ತ ಮಹಿಳೆಯ ಭಾವನೆಗಳನ್ನು ವಿಶೇಷವಾಗಿ ಲೈಂಗಿಕ ವಿಷಯಗಳಿಗೆ ಸಂಬಂಧಿಸಿದಂತೆ ಗಮನಿಸುವುದಿಲ್ಲ. ಗಂಡು ಮಕ್ಕಳಿಗೆ ವಿವಿಧ ಮೂಲಗಳಿಂದ ದೊರಕುವ ಹಸ್ತಮೈಥುನ, ಉದ್ರೇಕ, ವೀರ್ಯ ಸ್ಖಲನಗಳು ಬಗೆಗಿನ ಜ್ಞಾನ, ಹೆಣ್ಣುಮಕ್ಕಳಿಗೆ ದೊರಕಲಾರದು. ಹೆಣ್ಣು ಮಕ್ಕಳ ಲೈಂಗಿಕ ಜ್ಞಾನ ಮುಟ್ಟು, ಬಸಿರುಗಳಿಗೆ ಸೀಮಿತವಾಗುತ್ತದೆ. ಇದರ ಪರಿಣಾಮ ಹೆಣ್ಣು ಮಕ್ಕಳಲ್ಲಿ ಅಜ್ಞಾನ -ತಪ್ಪು ನಂಬಿಕೆಗಳ ಜೊತೆಗೆ, ಅವರು ಕುತೂಹಲದಿಂದ ಅಪ್ರಬುದ್ಧ ಸಂಬಂಧಗಳಲ್ಲಿ ತೊಡಗುವುದಕ್ಕೆ ದಾರಿಯಾಗಬಹುದು. ಲೈಂಗಿಕ ಸಂತಸದ ಬಗೆಗಿನ ಅತಿ ನಿರೀಕ್ಷೆ, ಲೈಂಗಿಕ ಆಸಕ್ತಿಯೆಂದರೆ ‘ಕೆಟ್ಟ ಹೆಸರು ತರುವ ನಡವಳಿಕೆ’ ಎಂಬ ಭಾವ, ಸೋಂಕುಂಟಾದರೂ ಯಾರೊಡನೆಯೂ ಹೇಳಿಕೊಳ್ಳದ ಸಮಸ್ಯೆಗಳಿಗೆ ಕಾರಣವಾಗಬಹುದು.

`ಲೈಂಗಿಕತೆ ಎಂದರೆ ಏನು?' ಎಂಬುದಕ್ಕೆ ನಮ್ಮ ಸಾಮಾನ್ಯ ಪರಿಕಲ್ಪನೆ ಅದೊಂದು ನೇರ, ಗುರಿ ಮುಟ್ಟುವ ಪ್ರಕ್ರಿಯೆ. ಅಂದರೆ ಆಸೆಯಿಂದ ಆರಂಭವಾಗಿ, ಇಬ್ಬರೂ ಸಮರಸದಿಂದ ಕೂಡಿ, ಸಂತೋಷದಲ್ಲಿ ಮುಕ್ತಾಯವಾಗುವುದು. ಡಾ| ರೋಸ್‍ಮೇರಿ ಬಾಸನ್ ಎಂಬ ತಜ್ಞೆ ಹೊಸ ಮಾದರಿಯೊಂದನ್ನು ನಮ್ಮ ಮುಂದಿಡುತ್ತಾರೆ. ಅದರ ಪ್ರಕಾರ ಮಹಿಳೆಯರು ಪುರುಷರಿಗಿಂತ ಬಹು ಭಿನ್ನವಾದ ಕಾರಣಗಳಿಗಾಗಿ ಲೈಂಗಿಕತೆಯಲ್ಲಿ ತೊಡಗಲು ಸಾಧ್ಯವಿದೆ. ಆಸೆಯೇ ಇರಬೇಕೆಂದಿಲ್ಲ. ಕುತೂಹಲ, ಕೃತಜ್ಞತೆ, ಭಯ, ಯಾವುದೂ ಅವರನ್ನು ಪ್ರೇರೇಪಿಸಬಹುದು. ಅವರಿಗೆ ಆನಂದದ ಚರಮತೆ -Orgasm ಹಲವು ಬಾರಿ ಬರಬಹುದು, ಅಥವಾ ಬರದೇ ಇರಬಹುದು. ಎರಡೂ `ನಾರ್ಮಲ್' - ಸಹಜವೂ ಹೌದು! 

ನನ್ನ ಬಳಿ ಬರುವ ಹಲವು ಮಹಿಳೆಯರಲ್ಲಿ ಲೈಂಗಿಕತೆಯ ಬಗೆಗಿನ ಪ್ರಶ್ನೆಗಳು ಬಂದಾಗ ಒಂದು ವಾಕ್ಯ ಹೇಳಿದ್ದಿದೆ "I am not whole" -ನಾನು `ಪೂರ್ಣ' ಅಂತ ಅನ್ನಿಸಲ್ಲ. ಅದು ಅವರು ತಮ್ಮ ದೇಹದ ಬಗೆಗೆ ಮೊದಲು ತಾವು ಬೆಳೆಸಿಕೊಳ್ಳಬೇಕಾದ `ಸಹ್ಯತೆ', `ಸುಂದರ' ಎಂಬ ಭಾವನೆಯ ಕೊರತೆಯನ್ನು ತೋರಿಸುತ್ತದೆ ಎಂದು ನನಗನ್ನಿಸುತ್ತದೆ. ತನ್ನ ದೇಹವನ್ನು ತಾನು ಪ್ರೀತಿಸದ, ಅರಿಯದ, ಅದನ್ನು ಗೌರವಿಸದ ಮಹಿಳೆಗೆ ಕೀಳರಿಮೆ ಕಾಡುವುದರಲ್ಲಿ ಅಚ್ಚರಿಯಿಲ್ಲ. ಅದು ಆರೋಗ್ಯಕರ, ಗುಣಮಟ್ಟದ ಲೈಂಗಿಕ ಕ್ರಿಯೆಗೆ ಇರಬಹುದಾದ ಅತಿ ದೊಡ್ಡ ಅಡ್ಡಿ. ಇದು ಕೇವಲ ಸಂತೋಷ ಪಡಲಷ್ಟೇ ಅಲ್ಲ, ಆರೋಗ್ಯ ಕಾದುಕೊಳ್ಳಲು, ಲೈಂಗಿಕ ಕ್ರಿಯೆಗೆ ಒಪ್ಪಿಗೆ ನೀಡಲೂ ಅಗತ್ಯವೇ. ಯಾವ ಸ್ಪರ್ಶ ಕೆಟ್ಟದ್ದು, ಒಪ್ಪಿಕೊಳ್ಳಲಾರದಂಥದ್ದು ಎಂಬುದನ್ನು ನಿರ್ಧರಿಸಲೂ ಮುಖ್ಯ.

ಅಂತಿಮವಾಗಿ ಇವ್ಯಾವುವೂ ಮಹಿಳೆಯರು ಹೆಚ್ಚು ಹೆಚ್ಚು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲಾಗಲೀ, ಮಹಿಳೆಯರು ಹೆಚ್ಚು ಹೆಚ್ಚು ಆನಂದದ ತುದಿ - Orgasm ಗಳನ್ನು ಹೊಂದಲೆಂದಾಗಲೀ ಅಲ್ಲ. ಮಹಿಳೆಯರು ತಮ್ಮನ್ನು ತಾವು ಇರುವ ಹಾಗೇ ಒಪ್ಪಿಕೊಳ್ಳುವ, ತಮ್ಮ ಅನುಭವಗಳನ್ನು `ವಿಶಿಷ್ಟ' ವೆಂದು ಪರಿಗಣಿಸುವಂತೆ ಮಾಡುವ ಪ್ರಯತ್ನಗಳು. ಸಂತಸ-ತೃಪ್ತಿಗಳನ್ನು ಅವರವರ ಅಳತೆಗೋಲಲ್ಲಿ ಅಳೆಯುವ ಸಾಮಥ್ರ್ಯ, ತನ್ನ ದೇಹದ ಬಗೆಗಿನ ಪರಿಣತಿ, ಇವು ಮಹಿಳೆಯರು ಸಾಧಿಸಬೇಕಾದ ವಿಷಯಗಳು. ಒಂದೊಮ್ಮೆ ಒಬ್ಬ ಮಹಿಳೆಯ ಪ್ರಕಾರ ಲೈಂಗಿಕ ಕ್ರಿಯೆ ಇಲ್ಲದೆಯೇ, ಅವಳು ಸಂತೋಷವಾಗಿದ್ದಾಳೆ ಎಂದರೆ ಅದೂ ಸಹಜವೇ ಎನ್ನುವಂತೆ! ನಮ್ಮ ಒಟ್ಟೂ ಆರೋಗ್ಯ ಮತ್ತು ಜೀವನದ ಗುಣಮಟ್ಟದ ಭಾಗವಾಗಿ ಲೈಂಗಿಕ ಆರೋಗ್ಯವನ್ನು ನಾವು ಒಪ್ಪುವುದಾದರೆ ಮಹಿಳೆಯರ ಲೈಂಗಿಕತೆಯ ಬಗೆಗಿನ ಆರೋಗ್ಯಕರ ಮನೋಭಾವ ಬೆಳೆಸಿಕೊಳ್ಳುವುದೂ ಆರೋಗ್ಯದೆಡೆಗೆ ಒಂದು ಮುಖ್ಯ `ಹೆಜ್ಜೆ'ಯೇ. ಆ ಹೆಜ್ಜೆಯಿಂದ ಲಾಭ ಮಹಿಳೆಗೆ ಮಾತ್ರವಲ್ಲ, ಎಲ್ಲರಿಗೆ ! 

ಡಾ|ಕೆ.ಎಸ್. ಪವಿತ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಹೆಣ್ಣು ಹೆಜ್ಜೆ / ದೇಹ – ಮನಸ್ಸುಗಳ ನಡುವೆ ಕಾಮ – ಪ್ರೇಮ!- ಡಾ. ಕೆ.ಎಸ್. ಪವಿತ್ರ

 • August 12, 2020 at 5:02 am
  Permalink

  Very well written. Best wishes.

  Reply

Leave a Reply

Your email address will not be published. Required fields are marked *