Uncategorizedಅಂಕಣ

ಹೆಣ್ಣು ಹೆಜ್ಜೆ / ತಲ್ಲಣವ ತಡೆಯುವ ಆರ್ರ್ದ ಗರ್ವದ ಹುಡುಗಿ!- ಡಾ. ಕೆ.ಎಸ್. ಪವಿತ್ರ


ನಮ್ಮ ಪುರಾಣದ ಮಹಿಳೆಯರು ಸಂಕೇತಿಸುವ ಮನೋಬಲ, ಮಕ್ಕಳನ್ನು ಸಾಕಿ ರೂಪಿಸುವಾಗ ತೋರುವ ಗಟ್ಟಿತನ ಮತ್ತು ಪ್ರತಿಕೂಲ ಸನ್ನಿವೇಶಗಳಲ್ಲಿ ಅವರು ತಳೆಯುವ ನಿಲುವು ಇಂದಿನ ಹಲವು ಹೆಣ್ಣುಮಕ್ಕಳಿಗೆ ಅವರ ಬದುಕಿನ ತಳಮಳಗಳನ್ನು ನಿರ್ವಹಿಸಲು ಧೈರ್ಯ ಕೊಡುತ್ತದೆ ಎಂಬುದನ್ನು ಮರೆಯಬಾರದು.


ಗೌರಿ ಹಬ್ಬ ಮತ್ತೊಮ್ಮೆ ಬಂದಿದೆ. ಗೌರಿಯ ಜೊತೆಗೆ ಅವಳ ಮಗ ಗಣೇಶನೂ ಒಟ್ಟಿಗೇ ಬಂದು ಹಬ್ಬ ಆಚರಿಸುವಂತೆ ಮಾಡುವುದೇ ವಿಶೇಷ. ಗೌರಿಯ ಬಗ್ಗೆ, ಗಣೇಶನ ಬಗ್ಗೆ ಯೋಚಿಸಿದಾಗ ಹಲವು ಅಂಶಗಳು ನಮಗೆ ಆಕರ್ಷಕವೆನಿಸುತ್ತವೆ. ಗೌರಿ- ಗಣೇಶರ ಪ್ರತಿಮೆ ಧಾರ್ಮಿಕತೆ- ಮನೋವೈಜ್ಞಾನಿಕತೆ- ಮಾತೃತ್ವ- ದಾಂಪತ್ಯ ಜೀವನ ಈ ಎಲ್ಲದರ ಬಗೆಗೂ ಏಕಕಾಲದಲ್ಲಿ ಹಲವು ಚಿಂತನೆಗಳನ್ನು ಹುಟ್ಟಿಸುತ್ತವೆ. ವಿವಿಧ ರೀತಿಯ ಸಮಸ್ಯೆಗಳಿಂದ ಬಳಲುವ ಮಹಿಳೆಯರನ್ನು ನೋಡಿದಾಗ, ಅವರನ್ನು ಸಮೀಕರಿಸಿಕೊಳ್ಳಲು ಸಾಧ್ಯವಾಗುವುದು ಗೌರಿ'ಯೊಡನೆಯೇ. ಸರಸ್ವತಿ- ಲಕ್ಷ್ಮಿಯರನ್ನು ನೆನೆಸಿಕೊಳ್ಳಬಹುದಾದರೂ ಅವರಿಬ್ಬರಿಗೂ ಸಾಮಾನ್ಯ ಮಹಿಳೆಯರಂತೆ ಸಂಸಾರ-ಸಂಕಟಗಳು ಕಡಿಮೆಯೇ. ಆದರೆ ಗೌರಿಯದು ಮಾತ್ರ ಇಬ್ಬರು ಮಕ್ಕಳು - ಗಂಡನೊಂದಿಗೆ ಇರುವ ಸಂಸಾರ. ಸಾಲದ್ದಕ್ಕೆ ಕಥೆ ಹೇಳುವಂತೆ ಹಿಂದಿನ ಜನ್ಮದಲ್ಲಿ ಅವಳು ಗಂಡ - ತಂದೆ ಇಬ್ಬರ ನಡುವೆ ಇದ್ದ ಜಗಳವನ್ನೂ ಪರಿಹರಿಸಲಾಗದೆ, ತಾನೇ ಯಜ್ಞಕುಂಡಕ್ಕೆ ಹಾರಿದವಳು. ಇವುಗಳಿಂದಲೇ ಇರಬೇಕು, ನಮ್ಮ ಹೆಣ್ಣುಮಕ್ಕಳಿಗೆ ಮತ್ತೆ ಮತ್ತೆ ಅವಳು ಆತ್ಮೀಯಳಾಗಿಯೇ ಉಳಿದಿದ್ದಾಳೆ.

ಮಹಿಳೆಯರ ಆರೋಗ್ಯಕ್ಕೂ, ಗೌರಿಹಬ್ಬಕ್ಕೂ,ಗೌರಿ’ ಎಂಬ ನಮ್ಮ ಮನಸ್ಸುಗಳಲ್ಲಿ ಮೂಡಿ ಬಂದಿರುವ ಪ್ರತಿಮೆ'ಗೂ ಸಂಬಂಧವಿದೆಯೇ? ಮನೋವೈದ್ಯೆಯಾಗಿ ನನ್ನ ಮಹಿಳಾ ರೋಗಿಗಳನ್ನು, ನನ್ನ ಸುತ್ತಮುತ್ತಲಿನ ಮಹಿಳೆಯರನ್ನು ನೋಡುವಾಗ ನನಗೆಹೌದು’ ಎಂದೇ ಎನಿಸುತ್ತದೆ. ತಂದೆ-ತಾಯಿಗಳು ಮತ್ತು ಪತಿಯ ನಡುವಣ ಕಾದಾಟದಲ್ಲಿ ನರಳುವ ಮಹಿಳೆಯರು ಬಹಳಷ್ಟು. ಹಾಗೆಯೇ ವಿವಿಧ ರೀತಿಗಳಲ್ಲಿ, ಬೇರೆ ಬೇರೆ ಪ್ರಮಾಣಗಳಲ್ಲಿ ಎಲ್ಲ ಮಹಿಳೆಯರೂ ಈ ಸಮಸ್ಯೆಯನ್ನು ಎದುರಿಸುತ್ತಾರೆ. ಪತಿಗೆ ಇಷ್ಟವಾಗುವುದಿಲ್ಲವೆಂದು ಅಪ್ಪ-ಅಮ್ಮಂದಿರನ್ನು ದೂರವಿಡುವುದಕ್ಕೂ ಮಹಿಳೆಯರು ಮುಂದಾಗಿ, ಹೇಗೋ ಕುಟುಂಬದ ನೆಮ್ಮದಿ ಕಾಪಾಡಿಕೊಳ್ಳುವುದನ್ನು ಹಲವರಲ್ಲಿ ನೋಡಿದ್ದೇನೆ. ನಮ್ಮ ದೇವ ದೇವಿಯರಲ್ಲಿ ಮಾನವ ಗುಣಗಳನ್ನೇ ಆರೋಪಿಸಿ ಪುರಾಣ ಕಥೆಗಳನ್ನು ಹೆಣೆದಿರುವುದಕ್ಕೂ, ನಮ್ಮ ಬದುಕಿನ ಸಮಸ್ಯೆಗಳಿಗೂ ಸಂಬಂಧವಿದೆ ಎನ್ನುವುದನ್ನು ಹೇಳಲೇಬೇಕಿಲ್ಲ. ಹಾಗೆಯೇ ಹಬ್ಬ ಮಾಡುವುದು ಇರಲಿ, ಅವುಗಳ ಹಿಂದಿನ ಕಥೆಗಳ ಮನೋವೈಜ್ಞಾನಿಕ ಒಳಾರ್ಥವನ್ನು ತಿಳಿಯುವುದು, ನಮ್ಮ ಸಮಸ್ಯೆಗಳಿಗೆ ಅನ್ವಯಿಸಿಕೊಳ್ಳುವುದು, ಅನೇಕರ ಮನಸ್ಸಿಗೆ ಸಾಂತ್ವನವನ್ನು, ಸಮಸ್ಯೆ ಎದುರಿಸುವ ಧೈರ್ಯವನ್ನು ನೀಡಬಲ್ಲದು.

ನಮ್ಮ ಸುತ್ತಮುತ್ತಲ ಸ್ತ್ರೀಯರಂತೆ, ಸಾಮಾನ್ಯಳಾಗಿ ಕಾಣಿಸಿಬಿಡುವ ದಾP್ಷÁಯಣಿ' ಮರುಜನ್ಮದಲ್ಲಿ ಮಾತ್ರಗೌರಿ’ಯಾಗಿ ಹಠದ ಹುಡುಗಿಯಾಗುತ್ತಾಳೆ. ಹಠ ಹಿಡಿದು, ತಾನು ಬಯಸಿದವನನ್ನು ಮದುವೆಯಾಗುತ್ತಾಳೆ. ಕಥೆಯ ಪ್ರಕಾರ ಅದಾದ ಮೇಲೆ ಆಕೆ ಮಾಡುವುದು ವಿಶಿಷ್ಟ ಕೆಲಸ. ತನ್ನ ಮೈಯ್ಯ ಮಣ್ಣಿನಿಂದ ತನ್ನ ಮಗನನ್ನು ಸೃಷ್ಟಿಸುತ್ತಾಳಂತೆ. ಜೈವಿಕವಿಜ್ಞಾನದಲ್ಲಿ ” ಪಾರ್ಥಿನೋಜೆನೆಸಿಸ್’- ಎಂಬ ವಂಶಾಭಿವೃದ್ಧಿಯ ಪ್ರಕ್ರಿಯೆಯಿದೆ. ಕೆಳಹಂತದ ಅಕಶೇರುಕಗಳಲ್ಲಿ ಮತ್ತು ಕೆಲ ಸಸ್ಯಗಳಲ್ಲಿ ಗಂಡು ಪಾಲ್ಗೊಳ್ಳದೆ, ವೀರ್ಯಾಣು/ ಪುರುಷಕೋಶದ ಅವಶ್ಯಕತೆಯಿಲ್ಲದೆ ಸ್ತ್ರೀಜೀವಕೋಶವಾದ ಅಂಡಾಣುವಷ್ಟೇ ವೃದ್ಧಿಯಾಗಿ ಪ್ರತ್ಯೇಕ ಜೀವದ ಸೃಷ್ಟಿಯಾಗುತ್ತದೆ. ಉಮೆ ಗಣೇಶನನ್ನು ತನ್ನ ಮೈಯಿಂದ ಸೃಷ್ಟಿಸಿದಳು ಎಂಬ ಕಥೆ ಈ ಪಾರ್ಥಿನೋಜೆನೆಸಿಸ್ ಅನ್ನು ನೆನಪಿಗೆ ತಂದರೂ ಅದು ಅಷ್ಟಕ್ಕೆ ನಿಲ್ಲಬೇಕು, ಇನ್ನೂ ದೂರಕ್ಕೆ ತೆಗೆದುಕೊಂಡು ಹೋಗಬೇಕಿಲ್ಲ. ಮನೆಗೆ ಹಿಂದಿರುಗಿದ ಮನೆಯೊಡೆಯ ಶಿವ, ಗೌರಿಯ ಈ ಮಗನನ್ನು ತಿಳಿಯದೆ ಕೊಂದ ನಂತರ, ತಾಯಿಯ ದುಃಖ ಪರಿಹರಿಸಲು ಆನೆಯ ಮೊಗವನ್ನು ಜೋಡಿಸಿಕೊಡುತ್ತಾನಂತೆ. ಆಮೇಲೆ ಆನೆಯ ಮುಖದ, ಡೊಳ್ಳು ಹೊಟ್ಟೆಯ ಗಣಪ'ನಿಗೆ ಗೌರಿ ಗೌರವ ದೊರಕಿಸಿಕೊಟ್ಟ ಬಗೆ ಬಹು ಗಮನಾರ್ಹ. ಇಡೀ ಜಗತ್ತು ಮೊದಲಿಗೆ ಗೌರವಿಸುವಂತೆ ಗಣಪತಿಯನ್ನು ಅವನ ಅಮ್ಮ ರೂಪಿಸುತ್ತಾಳೆ. ಮುದ್ದು ಗಣಪ, ಬಾಲ ಗಣಪ ಎಂದೇ ಕರೆದು ಪೂಜೆ ಮಾಡುವಷ್ಟು, ಅವನ ವಿಚಿತ್ರರೂಪ - ಗಿಡ್ಡ ದೇಹ - ಡೊಳ್ಳು ಹೊಟ್ಟೆಗಳನ್ನು ಇಂದೂ ಹಾಸ್ಯ ಮಾಡಲು ಹೆದರುವಷ್ಟು!

ಈ ಕಲ್ಪನೆಯನ್ನು ನೋಡುವಾಗ ವಿಶೇಷ ಚೇತನರಾದ, ವಿಶೇಷ ಅಗತ್ಯಗಳಿರುವ ಮಕ್ಕಳ ತಾಯಂದಿರ ನೆನಪಾಗುತ್ತದೆ. ದೈಹಿಕ ವಿಶೇಷ ಚೇತನರಾಗಲಿ, ಬುದ್ಧಿಮಾಂದ್ಯ ಮಕ್ಕಳ ಅಮ್ಮಂದಿರಾಗಲಿ, ಗೌರಿಯಂತೆ ತಲೆಯೆತ್ತಿ ಬದುಕುವುದನ್ನು, ಗೌರಿ-ಗಣೇಶರನ್ನು ಪೂಜಿಸುವ ನಾವು ಸಾಧ್ಯವಾಗಿಸಿಲ್ಲ ಏಕೆ? ಅಂಥ ಮಕ್ಕಳನ್ನು ಹೊಂದಿರುವ ಅಮ್ಮಂದಿರು ಸಾಮಾಜಿಕವಾಗಿ ಬೆರೆಯಲು ಹೆದರುತ್ತಾರೆ. ಜೀವನವಿಡೀ ಖಿನ್ನತೆಯಿಂದ ನರಳುತ್ತಾರೆ.ನನ್ನ ಮಗು’ ಎಂಬ ಭಾವ, ಮಗುವಿನ ಮೇಲಿನ ಪ್ರೀತಿ' ಇತರರ ತಿರಸ್ಕಾರದ ನಡುವೆಯೂ ಕಿಂಚಿತ್ತೂ ಅವರಲ್ಲಿ ಕಡಿಮೆಯಾಗುವುದಿಲ್ಲ. ಆದರೆ ಇದನ್ನು ಅರ್ಥಮಾಡಿಕೊಳ್ಳುವುದು ಗೌರಿ-ಗಣೇಶರನ್ನು ಪ್ರತಿ ವರ್ಷ ಸಂಭ್ರಮದಿಂದ ಪೂಜಿಸುವ ನಮಗೆ ಕಷ್ಟ! ಶಿವ-ಶಿವೆಯರ ಸಂಬಂಧದ ಇನ್ನೊಂದು ಆಯಾಮವಾದ ಅರ್ಧನಾರೀಶ್ವರ ಕಲ್ಪನೆ ಲಿಂಗಸಮಾನತೆಯನ್ನು ನಮ್ಮ ಮುಂದೆ ಎತ್ತಿ ಹಿಡಿಯುತ್ತದೆ. ಸ್ತ್ರೀ ಇಲ್ಲದೆ ಪುರುಷನಿಗೆ ಅಸ್ತಿತ್ವವೇ ಇಲ್ಲ ಎನ್ನುತ್ತದೆ. ಹಾಗೆಯೇ ಪುರುಷ ತತ್ತ್ವವಿಲ್ಲದೆ ಸ್ತ್ರೀಯೂ ಅಪೂರ್ಣ ಎಂದು ಪ್ರತಿಪಾದಿಸುತ್ತದೆ.

ನಾನು ಬೇರೆ ಬೇರೆ ವರ್ಗಗಳ ಪ್ರೇಕ್ಷಕರಿಗಾಗಿ ಮಹಿಳಾ ಮಾನಸಿಕ ಆರೋಗ್ಯ, ನೃತ್ಯ ಮತ್ತು ಕನ್ನಡ ಕಾವ್ಯವನ್ನು ಒಟ್ಟುಗೂಡಿಸಿ ಮಾಡಿರುವ ಪ್ರಸ್ತುತಿಯೊಂದಿದೆ.ಕಾವ್ಯಕನ್ನಿಕಾ’ ಎಂಬ ಹೆಸರಿನ ಈ ಪ್ರಸ್ತುತಿಯಲ್ಲಿ ಉಮೆ'ಯನ್ನು ಕುರಿತು ಎರಡು ಕವನಗಳನ್ನು ಸಾಮಾನ್ಯವಾಗಿ ನಾನು ನರ್ತಿಸುತ್ತೇನೆ. ಒಂದು ಕವಯಿತ್ರಿಯದಾದರೆ, ಇನ್ನೊಂದು ಕವಿಯದು! ಮೊದಲನೆಯ ಕವನ ವೈದೇಹಿಯವರಶಿವನ ಮೀಸುವ ಹಾಡು’. ಈ ಕವನ ಶಿವನ ವೈವಾಹೇತರ ಸಂಬಂಧಗಳನ್ನು ಗೌರಿ ತಡೆದುಕೊಳ್ಳುವ ಬಗೆಯನ್ನು ಚಿತ್ರಿಸುತ್ತದೆ. ಮನೋವೈದ್ಯೆಯಾಗಿ ನನಗೆ ವೈದೇಹಿಯವರ ಮಿಸುಕಾಡದೇ ಕುಳಿತು ತಲ್ಲಣವ ತಡೆಯುವ ಆದ್ರ್ರ ಗರ್ವದ ಹುಡುಗಿ ಗೌರಿ' ಅಂಥದ್ದೇ ಸಮಸ್ಯೆಗಳಲ್ಲಿ ಸಿಲುಕಿ ಮೌನವಾಗಿ ತಡೆಯುವ ನನ್ನ ಮಹಿಳಾ ರೋಗಿಗಳನ್ನು ನೆನಪಿಸುತ್ತಾಳೆ. ಕವಿತೆಗಳು ನೇರವಾಗಿಪರಿಹಾರ’ ಕೊಡಲೆಂದು ರಚಿಸಲ್ಪಟ್ಟವಲ್ಲ. ಆದರೆ ನಮ್ಮ ನಮ್ಮ ಮನಃಸ್ಥಿತಿ, ಧೋರಣೆಗೆ ಅನುಗುಣವಾಗಿ ಚಿತ್ರವೊಂದರಂತೆ, ಕವಿತೆಯೂ ಆ ಕ್ಷಣಕ್ಕೆ ಸಮಾಧಾನ/ ದುಃಖ/ ಹೊಸ ಉಪಾಯ/ ತಾದಾತ್ಮ್ಯ ಮೂಡಿಸಲು ಸಾಧ್ಯವಿದೆ. ಹಾಗಾಗಿ ಈ ಕವಿತೆಯನ್ನು ನರ್ತಿಸುವಾಗ ನನಗೆ ನನ್ನ ಪ್ರೇಕ್ಷಕರಲ್ಲಿ ಅಂಥ ಸಮಸ್ಯೆಯಿರುವ ಯಾರಾದರೊಬ್ಬರಿಗಾದರೂ ಒಂದಿಷ್ಟು ಚಿಂತನೆಗೆ ಪ್ರೇರೇಪಿಸಬಹುದು ಎನಿಸುತ್ತದೆ.

ಇನ್ನೊಂದು ಕವಿತೆ ಡಾ. ಜಿ.ಎಸ್. ಶಿವರುದ್ರಪ್ಪನವರು, ತೀರ್ಥವಾಣಿ' ಎಂಬ ಬಂಗಾಲಿ ಭಕ್ತಿಗೀತೆಗಳ ಅನುವಾದದ ಕವಿತಾ ಸಂಕಲನದಲ್ಲಿ ಬರೆದಿರುವ ಹೌದೇನೇ ಉಮಾ!' ಎಂಬ ಕವನ. ಇದು ಬಂಗಾಲಿಯ ಅನುವಾದ ಆಗಿರಬಹುದಾದರೂ, ಕನ್ನಡದಲ್ಲಿಯೇ ಹುಟ್ಟಿರುವಂತೆ ಭಾವ-ಭಾಷೆ ಎರಡೂ ಸಶಕ್ತವಾಗಿವೆ. ಉಮೆಯ ತಾಯಿ ತನ್ನ ಅಳಿಯ ಶಿವನನ್ನು ಕುರಿತು ಜನರು ಮಾತನಾಡುವ ರೀತಿಯನ್ನು ತೋಡಿಕೊಳ್ಳುತ್ತಾ ಮತ್ತೆ ನಿನ್ನ ಶಿವ ಕರೆಯಲು ಬರಲಿ, ಮನೆಯಲ್ಲಿಲ್ಲ ಉಮೆ, ಎನ್ನುವೆನು!' ಎನ್ನುವ ಸಾಲುಗಳು ನನಗೆಅಬ್ಬಾ ಇವಳು ಬೇಕಾದರೆ ಹೌದೇಹೌದು, ಜಗದಂಬೆಯ ಅಮ್ಮನೇ ಸರಿ' ಎನಿಸುವಂತೆ ಮಾಡುತ್ತವೆ. ಜೊತೆಗೆ ಮತ್ತೊಂದೆಡೆಯಲ್ಲಿ `ಯಾರಾದರೇನು? ತಾಯಿ ತಾಯಿಯೇ ಅಲ್ಲವೆ!' ಎಂಬ ಯೋಚನೆಯೂ ಮೊದಲಾಗುತ್ತದೆ.

ಗೌರಿ ಹಬ್ಬದ ಸಂದರ್ಭದಲ್ಲಿ ಈ ಚಿಂತನೆಗಳೆಲ್ಲವನ್ನೂ ಬರಹಕ್ಕೆ ಇಳಿಸಬೇಕಾದರೆಹೆಣ್ಣು ಹೆಜ್ಜೆ’ಯ ಹಿಂದಿನ ಲೇಖನಗಳನ್ನು ಓದಿದ ಸ್ನೇಹಿತ ಕೇಳಿದ ಪ್ರಶ್ನೆ ನೆನಪಾಗುತ್ತಿದೆ. ಲೇಖನಗಳು ಚೆನ್ನಾಗಿವೆ. ಆದರೆ ಇದರ ಟಾರ್ಗೆಟ್ ಓದುಗರು’ ಯಾರು? ಮಹಿಳಾ ಪತ್ರಿಕೆಗಳನ್ನು ಓದುವ ಮಹಿಳಾ ವರ್ಗ ಇವುಗಳನ್ನು ಅರ್ಥೈಸಿಕೊಂಡು, ಅಳವಡಿಸಿಕೊಳ್ಳುವುದು ಸಾಧ್ಯವೇ?’ ಇದಕ್ಕೇನು ಉತ್ತರ?! ಮಹಿಳಾ ಪರ ಕಾಳಜಿ ಎನ್ನುವುದು ಸಮಾಜಕ್ಕೆ ಸಂಬಂಧಿಸಿದ್ದು, ಮಹಿಳೆಗೆ ಮಾತ್ರ ಸಂಬಂಧಿಸಿದ್ದಲ್ಲ! ಮಹಿಳಾ ಪತ್ರಿಕೆಗಳನ್ನು ಓದುವ ಮಹಿಳೆಯರು ಎಲ್ಲವನ್ನೂ ಓದುವುದು ಸಾಧ್ಯ. ಸಬಲೀಕರಣ' ಎನ್ನುವುದು ಅನಕ್ಷರಸ್ಥ / ಸಾಂಪ್ರದಾಯಿಕ / ಅವಿದ್ಯಾವಂತ ಮಹಿಳೆಯರಲ್ಲೂ ಇರಬಹುದು, ಅಕ್ಷರಸ್ಥ/ ಆಧುನಿಕ/ ವಿದ್ಯಾವಂತ ಮಹಿಳೆಯಲ್ಲಿ ಇರದಿರಲೂ ಬಹುದು. ಹಾಗೆಯೇ ಸ್ತ್ರೀಪರ ಕಾಳಜಿಯೂ ಅಷ್ಟೆ. ಎರಡೂ ರೀತಿಯ ಪುರುಷರಲ್ಲಿಯೂ ಇರಬಹುದು. ಮನೋವೈದ್ಯೆಯಾಗಿ ನನ್ನ ಕೆಲಸ ಯಾವುದೇ ಮಾಧ್ಯಮವನ್ನು ಬಳಸಿಯಾದರೂ ಆರೋಗ್ಯದ ಬಗೆಗೆ ಚರ್ಚೆ-ಚಿಂತನೆಯನ್ನು ಪ್ರೇರೇಪಿಸುವುದು, ನೋವನ್ನು ಶಮನಗೊಳಿಸುವುದು, ಅರಿವು ಮೂಡಿಸುವುದು. ಹಾಗಾಗಿಯೇಗೌರಿ-ಗಣೇಶ’ ಹಬ್ಬದಂತಹ ಸಂದರ್ಭಗಳು ಮನಸ್ಸನ್ನು ಮತ್ತಷ್ಟು ವಿಶೇಷವಾಗಿ ಗಮನಿಸುವ, `ಗಂಡಸಿಗೂ ಬೇಕು ಗೌರಿಯ ದುಃಖ’ ಎಂಬುದನ್ನು ತಿಳಿಸುವ ಸಂದರ್ಭ ಆಗಿಸಬಾರದೇಕೆ?!

  • ಡಾ. ಕೆ.ಎಸ್. ಪವಿತ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *