ಹೆಣ್ಣು ಹೆಜ್ಜೆ / ಗೇಷ್ಯಾಗಳ ಆಯ್ಕೆಯಿಲ್ಲದ ಬದುಕು – ಡಾ. ಕೆ.ಎಸ್. ಪವಿತ್ರ

ಲೈಂಗಿಕ ಕಾರ್ಯಕರ್ತೆಯರ ವೃತ್ತಿ ಜಗತ್ತಿನ ಎಲ್ಲ ನಾಗರಿಕತೆಗಳಲ್ಲಿ ಎದ್ದು ಕಾಣುವ ಸಂಗತಿ ಆಗಿರುವಾಗ, ಅದು ಅವುಗಳ ಅಕ್ಷರ, ಚಿತ್ರ, ಶಿಲ್ಪ ಸಂಸ್ಕøತಿಗಳ ಭಾಗವಾಗಿಯೂ ಸೇರಿ ಹೋಗಿರುತ್ತದೆ. ಭಾರತೀಯ ಮಹಾಕಾವ್ಯಗಳ ಹದಿನೆಂಟು ವರ್ಣನೆಗಳಲ್ಲಿ ವೇಶ್ಯವಾಟಿಕೆಯ ವರ್ಣನೆಗೆ ನಮ್ಮ ಕವಿಗಳು ಬಹಳ ಆದ್ಯತೆ ಕೊಟ್ಟಿದ್ದಾರೆ. ಜಪಾನ್ ದೇಶದ `ಗೇಷ್ಯಾ’ ಗಳ ನೋವಿಗೆ ದೇಶಕಾಲಗಳ ಹಂಗಿಲ್ಲ.

`ಗೇಷ್ಯಾ'ರನ್ನು ಮೊತ್ತ ಮೊದಲ ಬಾರಿ ನಾನು ನೋಡಿದ್ದು ಜಪಾನ್‍ನ ಕೋಬೆಗೆ ಫೆಲೋಷಿಪ್‍ಗಾಗಿ ಹೋದಾಗ. `ಕ್ಯೋಟೋ' ಎಂಬ  ಪುರಾತನ ನಗರಿಗೆ ಬುಲೆಟ್ ರೈಲಿನಲ್ಲಿ ಭೇಟಿಯಿತ್ತಿದ್ದೆ. ಅಲ್ಲಿಯ ದೇವಾಲಯದಲ್ಲಿ ಸಾಂಪ್ರದಾಯಿಕ ಕಿಮೋನೋ ತೊಟ್ಟ, `ಆಧುನಿಕ'ರು ಎಂಬಂತೆ ಇಂಗ್ಲಿಷ್‍ನಲ್ಲಿ ಮಾತನಾಡುತ್ತಿದ್ದ ಐವರು `ಗೇಷ್ಯಾ'ರು ಬಂದದ್ದು ನೋಡಿದ್ದೆ. ಅವರ ಜೊತೆ ಚಿತ್ರ ತೆಗೆಸಿಕೊಂಡಿದ್ದೆ. ಇವರನ್ನು ನೋಡಿದ, ಜಪಾನೀ ಸಂಸ್ಕøತಿಯ ನೆನಪಿಗೆಂದು ಕುತೂಹಲದಿಂದ "Memoirs of a Geisha" ಎಂಬ ಕಾದಂಬರಿಯನ್ನು airportನಲ್ಲಿ ಖರೀದಿಸಿದ್ದೆ. ಈ ಕಾದಂಬರಿಯನ್ನು ಆ ಮೇಲಿಂದ ಹಲವು ಬಾರಿ ಓದಿದ್ದೇನೆ. ಆಗೆಲ್ಲಾ ಹಲವು ಚಿಂತನೆಗಳು ಕಲೆಗೂ, ಹೆಣ್ಣಿಗೂ, ಜೊತೆಗೇ ಲೈಂಗಿಕತೆಗೂ ಇರುವ ಸೂಕ್ಷ್ಮ ಸಂಬಂಧಗಳ ಬಗ್ಗೆ ನನ್ನಲ್ಲಿ ಹುಟ್ಟಿವೆ. ಅವುಗಳನ್ನು ಈ ಕಾದಂಬರಿಯ ಹಿನ್ನೆಲೆಯಲ್ಲಿ, ಮನೋವೈಜ್ಞಾನಿಕವಾಗಿ ಬರೆಹ ರೂಪಕ್ಕೆ ಇಳಿಸುವ ಪ್ರಯತ್ನವೇ ಈ ಲೇಖನ.

Sex workers - ಲೈಂಗಿಕತೆಯ ಕಾರ್ಯಕರ್ತೆಯರನ್ನು ಕುರಿತು ಹಲವು ಕಾದಂಬರಿಗಳು ಕನ್ನಡದಲ್ಲಿಯೂ ಬಂದಿವೆ. ತ್ರಿವೇಣಿಯವರ ಹೂವು-ಹಣ್ಣು, ಶಿವರಾಮ ಕಾರಂತರ `ಮೈಮನಗಳ ಸುಳಿಯಲ್ಲಿ', ಅ.ನ.ಕೃ. ಅವರ `ಶನಿಸಂತಾನ', ತ.ರಾ.ಸು ಅವರು `ಹಂಸಗೀತೆ' ಯಲ್ಲಿ ಬರುವ ಚಂದ್ರಾಸಾನಿಯ ಚಿತ್ರಣ, ಭೈರಪ್ಪನವರ `ಕವಲು',ಅನ್ವೇಷಣೆ','ಭೀಮಕಾಯ' ಕಾದಂಬರಿಗಳಲ್ಲಿ ಬರುವ ವೇಶ್ಯಾವೃತ್ತಿಯ ವಿವರಗಳು, ಇತ್ತೀಚಿನ ಸಹನಾ ವಿಜಯಕುಮಾರ್ ಅವರ `ಅವಸಾನ' ಕಾದಂಬರಿಯಲ್ಲಿ ಕಾಣುವ ಲೈಂಗಿಕ ಕಾರ್ಯಕರ್ತೆಯರ ಬದುಕಿನ ಹಲವು ಆಯಾಮಗಳು ಇವೆಲ್ಲವೂ ಇಲ್ಲಿ ನನಗೆ ನೆನಪಾಗುತ್ತವೆ. ಡಿ.ವಿ.ಜಿ. ಯವರ `ಕಲೋಪಾಸಕರು', `ಜ್ಞಾಪಕ ಚಿತ್ರಶಾಲೆ'ಯ ಸಂಪುಟಗಳಲ್ಲಿ ಪ್ರಸಿದ್ಧ  `ದೇವದಾಸಿ'ಯರ ಚಿತ್ರಣಗಳಲ್ಲಿ ಕಲೆಯ ಕುರಿತ ಹಲವು ಮಹತ್ವದ ಅಂಶಗಳನ್ನು ನಾನು ಅರಿತಿದ್ದೇನೆ. ಬಿ.ಎನ್. ಸುಮಿತ್ರಾಬಾಯಿಯವರ `ಸ್ತ್ರೀದರ್ಪಣದಲ್ಲಿ ನಾಟ್ಯಶಾಸ್ತ್ರ' ಎಂಬ ಅಧ್ಯಯನಶೀಲ ಹೊತ್ತಗೆಯಲ್ಲಿ ಕೊನೆಯಲ್ಲಿ ಬರುವ ಕೆಲವು ಅಧ್ಯಾಯಗಳಲ್ಲಿ ಕಲೆಗೂ-ಲೈಂಗಿಕತೆಗೂ -ಹೆಣ್ಣಿಗೂ ಇರುವ ಸಂಬಂಧದ ಬಗೆಯೂ ಚರ್ಚಿಸಲಾಗಿದೆ. 

ಇವೆಲ್ಲದರ ಹಿನ್ನೆಲೆಯನ್ನು ಮನದಲ್ಲಿಟ್ಟು, 'Memoirs of a Geisha'  ಎಂಬ ಕಾದಂಬರಿಯನ್ನು ಓದಿದಾಗ ಮನಸ್ಸಿನಲ್ಲಿ ಒಂದು ರೀತಿಯ ಬೆರಗು, ಮರುಕ, ದುಃಖ, ಶೃಂಗಾರಗಳ ನವರಸಗಳು ಒಮ್ಮೆಲೇ, ತರಂಗಗಳಂತೆ ಏಳುವುದು ಸಾಧ್ಯವಿದೆ! ಅರ್ಥರ್ ಗೋಲ್ಡನ್ ಎಂಬ ಲೇಖಕನ ಕೃತಿ 'Memoirs of a Geisha' . ಇದೊಂದು ಐತಿಹಾಸಿಕ-ಕಾಲ್ಪನಿಕ ಕಥೆ ಎಂದು ಹೇಳಲಾದರೂ, ಕಲ್ಪನೆಯನ್ನು ವಾಸ್ತವದ ಹಿನ್ನೆಲೆಯಲ್ಲಿಯೇ ಬರೆಯಲಾಗಿದೆ ಎನಿಸುತ್ತದೆ. ನಿತ್ತಾ ಸಯೂರಿ ಎಂಬ ಗೇಷ್ಯಾ ತನ್ನ ಕಥೆಯನ್ನು ಹೇಳುತ್ತಾ ಹೋದಂತೆ ಇಡೀ ಕಾದಂಬರಿ ಚಿತ್ರಿತ `ಕ್ಯೋಟೋ' ನಗರಿಯ, ಜಪಾನಿನ ಚಿತ್ರಣ ಎರಡನೇ ಮಹಾಯುದ್ಧಕ್ಕೆ ಮೊದಲು, ಯುದ್ಧದ ಸಮಯದಲ್ಲಿ, ಯುದ್ಧಾನಂತರ ಹೇಗಿತ್ತು ಎಂಬುದನ್ನು ಇಲ್ಲಿ ನಾವು ಕಣ್ಣ ಮುಂದೆ ತಂದುಕೊಳ್ಳಬಹುದು.

ಬಹುತೇಕ `ಮನರಂಜನೆ-ಲೈಂಗಿಕತೆ' ಎರಡೂ ಒಟ್ಟುಗೂಡಿದ ಕ್ಷೇತ್ರಗಳನ್ನು ವೃತ್ತಿಪರವಾಗಿ ಮಹಿಳೆಯರು ಪ್ರವೇಶಿಸುವುದು ಉದ್ದೇಶಪೂರ್ವಕವಾಗಿಯಲ್ಲ. ಆಕಸ್ಮಿಕವಾಗಿ, ಅನಿವಾರ್ಯತೆಯಿಂದ, ಇಂಥ ವೃತ್ತಿಗೆ ಅವರು ಕಾಲಿಡಬೇಕಾಗುತ್ತದೆ. ಕೆಲವೊಮ್ಮೆ ಪರಂಪರೆಯಿಂದ, ಕುಟುಂಬದ ವೃತ್ತಿಯಾಗಿಯೂ ಪ್ರವೇಶಿಸಬಹುದು. ಆದರೆ ಅದು ಅವರ `ಆಯ್ಕೆ' ಯಾಗಿರುವುದಿಲ್ಲ ಎಂದೇ ನನಗನ್ನಿಸುತ್ತದೆ. ಪ್ರಸಿದ್ಧ ಗೇಷ್ಯಾ ಆಗಿದ್ದ `ನಿತ್ತಾ ಸಯೂರಿ' ಯ ವಿಷಯದಲ್ಲಿಯೂ ಇದು ನಿಜವೇ. ಕಾದಂಬರಿಯ ಮೊದಲ ಪುಟದಲ್ಲಿಯೇ ಬರುವ ಒಂದು ವಾಕ್ಯ ``ಟನಾಕಾ ಇಚಿರೋನನ್ನು ಭೇಟಿಯಾದ ಆ ಮಧ್ಯಾಹ್ನ ನಿಜವಾಗಿ ನನ್ನ ಜೀವನದ ತುಂಬಾ ಒಳ್ಳೆಯ ಮತ್ತು ತುಂಬಾ ಕೆಟ್ಟ ಕ್ಷಣವಾಗಿತ್ತು'' ಬದುಕು ಪರಿವರ್ತನೆಯಾಗುವ ಆ ಕ್ಷಣದ ಮೇಲೆ ಸಯೂರಿಗೆ ಯಾವ ಹಿಡಿತವೂ ಇರಲಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. 1929ರಲ್ಲಿ 9 ವರ್ಷದ  ಬಾಲಕಿ, ತನ್ನ 15ವರ್ಷ ವಯಸ್ಸಿನ ಸತ್ಸು ಎಂಬ ಅಕ್ಕನೊಡನೆ ಯೋರೈಡೋ ಎಂಬ ಪುಟ್ಟ ಹಳ್ಳಿಯಿಂದ ಕ್ಯೋಟೋ ನಗರಿಗೆ ಪಯಣಿಸಬೇಕಾಗುತ್ತದೆ. ಅಪ್ಪ-ಅಮ್ಮಂದಿರ ರಕ್ಷಣೆಯಿರದ, ಬಡತನದಿಂದ ಪಾರು ಮಾಡಲು ಇಚಿರೋ ಅವರನ್ನು ಕರೆದೊಯ್ಯುವುದು, `ಓಕಿಯೋ' ಎಂಬ ಗೇಷ್ಯಾರನ್ನು ರೂಪಿಸುವ `ಗೃಹ'ಕ್ಕೆ ಹಿರಿಯವಳಾದ `ಸತ್ಸು', ಹತ್ತಿರದ ವೇಶ್ಯಾಗೃಹಕ್ಕೆ ಮಾರಲ್ಪಟ್ಟರೆ, ಸುಂದರ ಸಯೂರಿ `ಓಕಿಯೋ' ದಲ್ಲಿ `ಗೇಷ್ಯಾ' ಆಗಲು ಆರಿಸಲ್ಪಡುತ್ತಾಳೆ.

ನಮ್ಮ ದೇವದಾಸಿಯರು ಮತ್ತು ಸಾಮಾನ್ಯ ವೇಶ್ಯೆ -ಲೈಂಗಿಕ ಕಾರ್ಯಕರ್ತೆಯರ ನಡುವೆ ಇರುವ ವ್ಯತ್ಯಾಸ ಗೇಷ್ಯಾ ಮತ್ತು ವೇಶ್ಯೆಯರ ನಡುವೆಯೂ ಇರುವುದು ಕಾದಂಬರಿಯಲ್ಲಿ ಸಯೂರಿ ನೇರವಾಗಿ ಹೇಳುವ ಮಾತುಗಳಿಂದ, ವಿವರವಾಗಿ ಬರುವ ಗೇಷ್ಯಾಗಳ ತರಬೇತಿಯ ವರ್ಣನೆಯಿಂದ ಸ್ಪಷ್ಟವಾಗುತ್ತದೆ. ಕಲೆಯ ಸಾಂಗತ್ಯ-ಆಸ್ವಾದನೆ-ಪಾಂಡಿತ್ಯ ದೇವದಾಸಿಯರಂತೆ ಗೇಷ್ಯಾರಲ್ಲಿಯೂ ಉನ್ನತ ಮಟ್ಟದ್ದು. ಕಠಿಣ ಪರಿಶ್ರಮ-ತರಬೇತಿಗಳಿಂದ ಅದರ ಗುಣಮಟ್ಟ ಏರುತ್ತದೆ.

ಕಲ್ಪನೆಗಳ ಹೆಣೆಯುವಿಕೆ ವಾಸ್ತವದ ವಿವರಗಳನ್ನು ಹೊಂದಿಸಿರುವ ರೀತಿ ಯಶಸ್ವಿಯಾಗಿರುವುದು ಸಯೂರಿಯ `ಚೇರ್‍ಮನ್' ಎಂಬ ವ್ಯಕ್ತಿಯ ಮೇಲಿನ `ಪ್ರೇಮ' ಬೆಳೆಯುವ ಬಗೆಯಿಂದ. ತನ್ನ ಜೀವನದ ಅತಿ ಕಷ್ಟದ ಕ್ಷಣಗಳಲ್ಲಿ ಹತ್ತು ವರ್ಷದ ಬಾಲೆಗೆ,  `ಚೇರ್‍ಮನ್' ನೀಡುವ ಒಂದು ನಾಣ್ಯ ಮತ್ತು ಕಣ್ಣೀರು ಒರೆಸಲು ಒಂದು ಬಿಳೀ ಕರವಸ್ತ್ರ ನೀಡುವ ಸಮಾಧಾನ-ಭರವಸೆ-ಬದುಕು ಮುಂದುವರೆಸುವ ಸ್ಥೈರ್ಯ ಅಪಾರ. ಇದು ಹೆಣ್ಣು ಮನಸ್ಸು ಚೇತರಿಸಿಕೊಳ್ಳುವ, ಸಂಬಂಧಗಳನ್ನು ಬೆಳೆಸಿಕೊಳ್ಳುವ-ಸಾಧಿಸುವ ಪರಿಯನ್ನು ತೆರೆದಿಡುತ್ತದೆ.

`ಗೇಷ್ಯಾ'ಗಳ ಮೂಢನಂಬಿಕೆಗಳು-ನಂಬಿಕೆಗಳ ಮಧ್ಯೆಯೇ ಬೆಳೆಯುವ ಸಯೂರಿಯ ಗೇಷ್ಯಾ ವೃತ್ತಿ ಜೀವನದಲ್ಲಿ ಬರುವ ಎರಡು ಮುಖ್ಯ ಮಹಿಳೆಯರೆಂದರೆ ಮಮೀಹಾ ಮತ್ತು ಹಟ್ಸುಮೋಮೋ. ಮಮೀಹಾ ಮಾರ್ಗದರ್ಶಕಿಯಾಗಿ ಸಯೂರಿಯನ್ನ ಮುನ್ನಡೆಸುವ ಶಕ್ತಿ. ಅದೇ ಹಟ್ಸುಮೋಮೋ ಅಸೂಯೆ, ದ್ವೇಷಗಳೇ ಮೂರ್ತಿವೆತ್ತ, ಸಯೂರಿಯನ್ನು ಸದಾ ಕೆಳಕ್ಕೆ ತಳ್ಳುವ, ಬಾಹ್ಯ ಸೌಂದರ್ಯವಿರುವ, ಆಂತರಿಕವಾಗಿ ಕುರೂಪಿಯಾದ ಹೆಣ್ಣು. ಜಗತ್ತು ಸಿದ್ಧಾಂತದಲ್ಲಿ `ಆಂತರಿಕ ಸೌಂದರ್ಯ'ದ ಬಗ್ಗೆ ಬಹುವಾಗಿ ನಮ್ಮೆಲ್ಲರಿಗೂ ಬೋಧಿಸಿದರೂ, ಸಮಾಜ ಬಾಹ್ಯ ಸೌಂದರ್ಯಕ್ಕೆ ನೀಡುವ ಮಹತ್ವವೆಷ್ಟು ಎಂಬುದನ್ನು `ಹಟ್ಸುಮೋಮೋ' ವಿನ ಪ್ರಸಂಗಗಳು ತೋರಿಸುತ್ತವೆ. ಅಂಥದ್ದೇ ಇನ್ನೊಂದು ಸಂದರ್ಭ `ನೋಬು' ಎಂಬ ನೋಡಲು ವಿಕಾರವಾಗಿರುವ ವ್ಯಕ್ತಿ ತನ್ನ ಬಗ್ಗೆ ಪ್ರೀತ್ಯಾದರಗಳಿಂದ -ಗೌರವದಿಂದ ನೋಡಿದರೂ ಯುದ್ಧದ ಸಮಯದಲ್ಲಿ ಆಶ್ರಯ ಸಿಗುವಂತೆ ಮಾಡಿದರೂ `ಸಯೂರಿ'ಗೆ ಆತನನ್ನು ತನ್ನ `ಆಶ್ರಯದಾತ' `ದಾನ್ನಾ' (ಸಂಗಾತಿ) ಯಾಗಿ ನೋಡಲು ಕಷ್ಟವೆನಿಸುತ್ತದೆ. ಒಬ್ಬ ಕಾಲೇಜು ಯುವತಿ ಕಾರ್ಯಾಗಾರವೊಂದರಲ್ಲಿ ಕೇಳಿದ ಪ್ರಶ್ನೆಯೊಂದು ನೆನಪಾಗುತ್ತದೆ.  ``ಮೇಡಂ, ಕೆಲವು ಸಲ ಕೆಲವು ಹುಡುಗರು ತುಂಬಾ ಒಳ್ಳೆಯವರು ಎನಿಸುತ್ತದೆ, ನಮ್ಮ ಮೇಲೆ ಅವರಿಗೆ ಗೌರವವೂ ಇರುತ್ತದೆ. ಆದರೆ ಅವರ ಈ ಒಳ್ಳೆಯತನ ಮಾತ್ರ ನಮಗೆ ಅವರ ಮೇಲೆ `ಪ್ರೇಮ' ಹುಟ್ಟಲು ಸಾಕಾಗುವುದಿಲ್ಲ ಏಕೆ?'' 

ಬೇರೆ ಮಹಿಳೆಯರಿಗೆ ಇದು ಜೀವನದ ಯಾವುದೋ ಒಂದು ಹಂತದಲ್ಲಿ  ಮಾತ್ರ ಆಗಿರಬಹುದಾದ ಅನುಭವವಾಗಿರಬಹುದು. ಆದರೆ ಲೈಂಗಿಕತೆಯಂಹ ಸೂಕ್ಷ್ಮ ವಿಷಯವೇ ವೃತ್ತಿಯಾಗಿರಬಹುದಾದ ಮಹಿಳೆಯರಿಗೆ ಇದೊಂದು ಮತ್ತೆ ಮತ್ತೆ ಎದುರಾಗುವ ಸವಾಲಾಗುತ್ತದೆ. ಇಷ್ಟವಿರದ `ದಾನಿ'ಯನ್ನು ಕೂಡಬೇಕಾದ ನೋವು, ಇಷ್ಟವಿರುವ ಪ್ರೇಮಿಯನ್ನ ಕೂಡಲಾಗದ ಸಂಕಟ ಎರಡನ್ನೂ ಇಲ್ಲಿ ಕಾಣಬಹುದು. ಬಹುಶಃ ಲಿಂಗ ಅಸಮಾನತೆಯನ್ನು ಸ್ಪಷ್ಟವಾಗಿ ಗುರುತಿಸಲಾಗುವುದು ಇಂತಹ ವೃತ್ತಿಗಳಲ್ಲಿಯೇ ಎನಿಸುತ್ತದೆ. ಸಮಾಜದಲ್ಲಿ ಗೌರವ ಗಳಿಸಿಯೇ, ಪತ್ನಿಯ ಜೊತೆಗೇ, ಇತರ ಮಹಿಳೆಯರ ವಿವಾಹೇತರ ಲೈಂಗಿಕ `ಚಟುವಟಿಕೆ' ಗಳಲ್ಲಿ ಎಲ್ಲರೆದುರಿಗೇ ತೊಡಗಬಲ್ಲ ಸ್ವಾತಂತ್ರ್ಯ ಪುರುಷರಿಗೆ ಸಾಧ್ಯವಿದೆ. ಆದರೆ ಅಂತಹ `ಸೇವೆ' ಯನ್ನು ನೀಡುವ ಮಹಿಳೆ ಗೌರವಕ್ಕೆ ಅರ್ಹಳಾಗಿಲ್ಲ. ಹಾಗೆಯೇ ಪುರುಷನ ಪತ್ನಿಗೆ `ಲೈಂಗಿಕ' ಕಟ್ಟುಪಾಡುಗಳಿವೆ. ಅಷ್ಟೇ ಅಲ್ಲ, ಲೈಂಗಿಕ ಕಾರ್ಯಕರ್ತೆಯರಿಗೆ ಹುಟ್ಟುವ  ಮಕ್ಕಳಾದರೂ ಅಷ್ಟೆ, ಗಂಡುಮಕ್ಕಳಾದರೆ, ಅವರು ಪರಿಸ್ಥಿತಿಯಿಂದ ಹೊರಬರುವ, ಜೀವನದಲ್ಲಿ ತಮ್ಮ ನೆಲೆಯನ್ನು ಬೇರೆ ರೀತಿಯಲ್ಲಿ ಕಂಡುಕೊಳ್ಳುವ ಸಾಧ್ಯತೆಗಳಿವೆ. ಹೆಣ್ಣು ಮಕ್ಕಳಾದರೆ, ಮತ್ತೆ ಅದೇ ವೃತ್ತಿಯಲ್ಲಿ ಮುಂದುವರಿಯುವ ಸಾಧ್ಯತೆಯೇ ಹೆಚ್ಚು.

`ಗೇಷ್ಯಾ'ರ ನೋವು-ನಲಿವುಗಳನ್ನು ಓದುತ್ತಾ ನನ್ನ ಮನಸ್ಸು ಆನಂದ -ವಿಷಾದಗಳಲ್ಲಿ ಮುಳುಗಿದ್ದು ನಿಜ. ಈ ಕಾದಂಬರಿ ಇಷ್ಟು ಕಾಡಿದ್ದು ಏಕೆ? ಕಲಾವಿದೆಯಾಗಿ ಭಾರತೀಯ ಕಲೆ ಭರತನಾಟ್ಯದ ಇತಿಹಾಸವನ್ನು ಅಧ್ಯಯನ ಮಾಡಿರುವ ನನಗೆ `ಗೇಷ್ಯಾ'ರ ಬದುಕು  `ದೇವದಾಸಿ'ಯರನ್ನು ನೆನಪಿಸುತ್ತದೆ. ರಂಗಿನ ಜೀವನ-ಗೃಹಿಣಿಯರಿಗಿರದ `ಸಂತಸ'ಗಳೂ ಅವರಿಗಿರುತ್ತಿದ್ದವು ಎಂಬುದೂ ನನ್ನ ಗಮನಕ್ಕೆ ಬರುತ್ತದೆ. ವೈಯಕ್ತಿಕ ಇಷ್ಟಾನಿಷ್ಟಗಳ ನಡುವೆಯೂ ಅವರು ಬೆಳೆಸಿದ `ಕಲೆ'ಯ ಬಗೆಗೆ ಗೌರವ ಮೂಡುತ್ತದೆ.

`ಹೆಣ್ಣು ಹೆಜ್ಜೆ'ಯ ಜಾಡು ಹಿಡಿಯುತ್ತಾ, ಹಿಂದಿನ ಲೇಖನದಲ್ಲಿ ನಾನು ಬರೆದ `ಮನೋರೋಗಿಯ ಆತ್ಮಕತೆ' ಪುಸ್ತಕದ ವಿವರವನ್ನು ನೆನಪಿಸಿಕೊಳ್ಳಿ.ಅದು  ಮಹಿಳೆಯೊಬ್ಬಳು ಮನಸ್ಸಿನ ಬಗೆಗೆ ಬರೆದ ಕಥಾನಕದ ಬಗೆಗಿತ್ತು. ಅದು ನೇರವಾಗಿ ಮನಸ್ಸಿನ ಬಗ್ಗೆ ಅರ್ಥಮಾಡಿಕೊಳ್ಳಲು ಓದಬೇಕಾದ ಪುಸ್ತಕವಾದರೆ, 'Memoirs of a Geisha' ಪರೋಕ್ಷವಾಗಿ `ಹೆಣ್ಣು ಮನಸ್ಸ'ನ್ನು ಪ್ರವೇಶಿಸುವ, ತಿಳಿಯುವ ಅವಕಾಶ ನೀಡುತ್ತದೆ.

ಡಾ. ಕೆ.ಎಸ್. ಪವಿತ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *