ಹೆಣ್ಣು ಹೆಜ್ಜೆ/ ಗರ್ಭಧಾರಣೆ ಹೆಣ್ಣಿನ ಹೊಣೆ ಮಾತ್ರವೆ?- ಡಾ.ಕೆ.ಎಸ್. ಪವಿತ್ರ

ಕುಟುಂಬಗಳಲ್ಲಿ ಹೆಣ್ಣುಮಕ್ಕಳ ಶಿಕ್ಷಣ, ಮದುವೆ, ಗರ್ಭಧಾರಣೆ, ಗರ್ಭ ನಿರೋಧಕಗಳ ಬಳಕೆ, ಮಕ್ಕಳ ನಡುವೆ ಅಂತರ, ಎಷ್ಟು ಮಕ್ಕಳೆಂಬ ನಿರ್ಧಾರ – ಯಾವುವೂ ಹೆಣ್ಣುಮಕ್ಕಳ ಕೈಯಲ್ಲಿ ಇಲ್ಲದಿರುವ ಪರಿಸ್ಥಿತಿ ನಮ್ಮ ಸಮಾಜದಲ್ಲಿ ಸರ್ವೇಸಾಮಾನ್ಯ. ಬಹುತೇಕ ಹೆಣ್ಣುಮಕ್ಕಳಿಗೆ ಆ ವಿಚಾರಗಳಿಗೂ ತಮ್ಮ ಆರೋಗ್ಯಕ್ಕೂ ಇರುವ ನಂಟಿನ ವಿವರಗಳೂ ಗೊತ್ತಿರುವುದಿಲ್ಲ. ಕೇವಲ ಜನಸಂಖ್ಯೆ ನಿಯಂತ್ರಿಸುವ ಮಾತುಗಳಿಗಿಂತ, ಮಹಿಳೆಯರನ್ನು ಈ ಹಲವು ರೀತಿಗಳಲ್ಲಿ `ಸಬಲೆ’ಯರನ್ನಾ ಮಾಡುವುದು ‘ತಾಯಿ ಭಾರತಿ’ಯನ್ನು ಬಲಿಷ್ಠೆಯಾಗಿಸಬಲ್ಲದು.

ವೈದ್ಯ ವೃತ್ತಿಯಲ್ಲಿ ನನ್ನ ಸುತ್ತಮುತ್ತಲೂ ಗರ್ಭಧಾರಣೆಯ ಹಲವು ಮುಖಗಳು ಕಾಣುತ್ತವೆ. ಅವುಗಳಲ್ಲಿ ಕೆಲವು –
ನನಗೆ 16ಕ್ಕೆ ಮದುವೆ, ಮದುವೆಯ ಒಂದು ವರ್ಷದ ಸಂಭ್ರಮ ಮುಗಿಯುವಷ್ಟರಲ್ಲಿ ಕೈಯ್ಯಲ್ಲಿ ಕೂಸು. ಆ ಕೂಸಿಗೆ ಹಾಲೂಡುತ್ತಿರುವಾಗಲೇ ಹೊಟ್ಟೆಯಲ್ಲಿ ಇನ್ನೊಂದು ಮಗು. ಹೀಗೆ 18ರ ಹೊತ್ತಿಗೆ ನಾನು ಎರಡು ಮಕ್ಕಳ ತಾಯಿ. ನನ್ನ ಅತ್ತೆ-ಅಮ್ಮ ಇಬ್ಬರೂ ಹೇಳುವ ಹಾಗೆ ಬೇಗ ಬೇಗ ಎರಡು ಮಕ್ಕಳಾಗಬೇಕು. ಆದರೆ ಮೊದಲ ಮಗುವಿಗೂ ಪೂರ್ತಿ ಗಮನ ನೀಡಲಾಗದ, ನನ್ನ ಆರೋಗ್ಯವೂ ಹದಗೆಟ್ಟ, ಪರಿಸ್ಥಿತಿ ಅದಾಗಿತ್ತು. ಒಂದು ವರ್ಷ ಅಂತರದ ಎರಡು ಮಕ್ಕಳ ಜಗಳ-ಆರೈಕೆ- ಆರೋಗ್ಯದ ಕಷ್ಟ ನೆನಪಾದಾಗ ನನಗೆ ಈಗಲೂ ಕಣ್ಣೀರು!"

“ಮದುವೆಯಾದ ಮೂರು ವರ್ಷ ಓದುತ್ತಿದ್ದ ನಾನು – ನನ್ನ ಪತಿ ಗರ್ಭನಿರೋಧಕಗಳ ಬಳಕೆಯಿಂದ ಮಗುವಾಗುವುದನ್ನು ಮುಂದೂಡಿದೆವು. ಆಗಲೂ ಅಷ್ಟೆ, ಅದರ ಹೊಣೆ ನನ್ನದು! ಏಕೆಂದರೆ ನನಗೆ ಓದಬೇಕಿತ್ತು! ಮಗುವಾಗುವುದು ನಮಗೆ' ಎಂದಾದರೂಗರ್ಭಿಣಿ’ ಯಾಗುವುದು ನಾನು ತಾನೆ? ಆಮೇಲಾದರೂ ಅಷ್ಟೇ, ಒಂದು ಮಗುವಾದ ತಕ್ಷಣ ಯಾರ ಮಾತನ್ನೂ ಕೇಳದೆ ಇನ್ನೊಂದು ಮಗು ಮೂರು ವರ್ಷಗಳ ನಂತರ ಎಂದರೆ ಮನೆಯಲ್ಲಿ ಎಲ್ಲರಿಗೂ ಅಸಮಾಧಾನ ! ಕಾಪರ್‍ಟಿ ಬೇಕಿದ್ದರೆ ನನಗೆ, ಇಂಜೆಕ್ಷನ್ನೋ-ಪಿಲ್ಸೋ ಎಲ್ಲಾ ನನ್ನ ಹೊಣೆ! ಕೊನೆಗೆ ಕಾಂಡೋಮ್ ' ಬಗ್ಗೆಯೂ ನಾನೇ ನೆನಪಿಸಬೇಕು! ಆಗೆಲ್ಲಾ ನನಗೆ ಅನ್ನಿಸುವುದು ಕ್ಷಣಗಳ ಉದ್ರೇಕದಲ್ಲಿ ಸಂತೋಷಪಟ್ಟು ಸುಮ್ಮನಾಗುವ ಪುರುಷನೂ ಗರ್ಭಿಣಿ (? ಗರ್ಭಸ್ಥ) ನಾಗುವಂತಿದ್ದರೆ ಜನಸಂಖ್ಯಾ ಸ್ಫೋಟವೇ ಆಗುತ್ತಿರಲಿಲ್ಲವೇನೋ?! ಬದಲಾಗಿ ಹೆಂಗಸಿನ ಬಸಿರಿನ ಹೊರೆ, ಹೆರಿಗೆಯ ನೋವು, ಮಾತೃಮರಣ- ರಕ್ತಹೀನತೆ, ಮಕ್ಕಳನ್ನು ಸಾಕುವ ಕಷ್ಟ ಗಂಡಸಿಗೆ ಅರ್ಥವಾಗುತ್ತಿತ್ತೇನೋ?''. ಇದು ಎಷ್ಟೋ ಭಾರತೀಯಮಾತೆ’ಯರ ಮನಸ್ಸಿನ ಮಾತಾಗಿರಬಹುದೆ?

ಜನಸಂಖ್ಯೆ ಬೆಳವಣಿಗೆÉಗೂ, ಮಹಿಳಾ ಸಾಕ್ಷರತೆ, ಯುವತಿಯರ ಮದುವೆಯ ವಯಸ್ಸು, ಗರ್ಭನಿರೋಧಕ – ಸಂತಾನ ನಿಯಂತ್ರಣ ಶಸ್ರ್ತಚಿಕಿತ್ಸೆಗಳು, ಮಾತೃಮರಣ, ಲಿಂಗಾನುಪಾತ ಇವೆಲ್ಲಕ್ಕೂ ಮಹಿಳೆಗೂ ನೇರವಾಗಿ ಸಂಬಂಧವಿದೆ! ಜೈವಿಕವಾಗಿ ಮಹಿಳೆಯ ದೇಹಕ್ಕೆ ಈ ಎಲ್ಲಕ್ಕೂ ಸಂಬಂಧವಿರುವಂತೆ ಆಕೆಯ ಮನಸ್ಸಿಗೂ ಸಂಬಂಧವಿದೆ. ಇದರ ಬಗೆಗಿನ ಸರಿಯಾದ ಲೈಂಗಿಕ- ಕೌಟುಂಬಿಕ ಜೀವನ ಶಿಕ್ಷಣ ಯಾವುದೇ ಸ್ತರದಲ್ಲಿ ಮನೆಯಲ್ಲೇ ಆಗಲೀ, ಶಾಲೆಯಲ್ಲಿಯೇ ಆಗಲಿ ದೊರಕುವ ಸಾಧ್ಯತೆಗಳು ಕಡಿಮೆಯೇ. ಒಂದೋ ಇವುಗಳ ಬಗ್ಗೆ ಗೊತ್ತಿರದ ಅನಕ್ಷರಸ್ಥ ತಾಯಿ, ಅಥವಾ ಗೊತ್ತಿದ್ದರೂ ಹೇಳಲು ಮುಜುಗರ ಪಡುವ ಅಕ್ಷರಸ್ಥ ತಾಯಿ! ಶಾಲೆಯಲ್ಲಿ ಜೀವಶಾಸ್ತ್ರ – ಸಾಮಾಜಿಕ ಶಾಸ್ತ್ರದಲ್ಲಿ ಕಲಿತರೂ ಇವುಗಳ ಮಾಹಿತಿ ಮುಂದಿನ ಜೀವನದ ದೃಷ್ಟಿಯಿಂದ ಕಡಿಮೆಯೇ. ಪರಿಣಾಮ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳಲ್ಲಿಯೂ “ಕಾಂಡೋಮ್” ಬಗ್ಗೆ ನಾಲ್ಕು ವಾಕ್ಯ ಹೇಳಿ ಎಂದಾಗ ಯಾವ ವಿದ್ಯಾರ್ಥಿಯೂ ವೈಜ್ಞಾನಿಕವಾಗಿ, ನಾಚಿಕೆ ಪಡದೆ ಹೇಳಲು ಮುಂದಾಗದಿರುವುದು!

ಭಾರತದಲ್ಲಿ ಜನಸಂಖ್ಯಾ ಅನಿಯಂತ್ರಣಕ್ಕೆ ಮುಖ್ಯ ಕಾರಣಗಳು –

ಶಿಕ್ಷಣವಿಲ್ಲದ ಹೆಣ್ಣುಮಕ್ಕಳು, ಗರ್ಭನಿರೋಧಕಗಳ ಬಗ್ಗೆ ತಿಳಿಯದಿರುವುದು.

ಜ್ಞಾನವಿದ್ದಾಗ್ಯೂ `ಗಂಡು ಮಗು’ ವಿನ ಸಲುವಾಗಿ ಮಕ್ಕಳನ್ನು ಹೆರುತ್ತಾ ಹೋಗುವುದು.

ಹೆಣ್ಣಿನ ಮೇಲೆ ಬೇರೆ ಬೇರೆ ವಿಧದ ಸಾಮಾಜಿಕ -ಕೌಟುಂಬಿಕ ಒತ್ತಡಗಳು.

ಎರಡು ಮಕ್ಕಳ ನಡುವಣ ಅಂತರವಿರದೇ ತಾಯಿಯ ಆರೋಗ್ಯ ಹದಗೆಡುವಿಕೆ.

ಗರ್ಭನಿರೋಧಕ ವಿಧಾನಗಳ ಬಗ್ಗೆ ಮಹಿಳೆಗೆ ಇರುವ ಸೀಮಿತ ಸ್ವಾತಂತ್ರ್ಯ / ಸ್ವಾತಂತ್ರ್ಯ ಇಲ್ಲದಿರುವುದು.

ಗರ್ಭನಿರೋಧಕ ವಿಧಾನಗಳ ಬಗ್ಗೆ ಪುರುಷನ ಅಲಕ್ಷ್ಯ, ಇಲ್ಲವೇ ತಪ್ಪು ನಂಬಿಕೆಗಳು (`ಕಾಂಡೋಮ್’ ನಿಂದ ಲೈಂಗಿಕ ತೃಪ್ತಿ ಸಿಗಲಾರದು, ಪುರುಷ ಸಂತಾನಹರಣ ಶಸ್ತ್ರಚಿಕಿತ್ಸೆಯಿಂದ ಲೈಂಗಿಕತೆಯೇ ನಾಶವಾಗುತ್ತದೆ ಇತ್ಯಾದಿ ಇತ್ಯಾದಿ)

ಸ್ತ್ರೀಯರಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆಯ ನಂತರದ ತಪ್ಪು ನಂಬಿಕೆಗಳು (ಈ ಶಸ್ತ್ರಚಿಕಿತ್ಸೆ ನಂತರವೇ ನನಗೆ ಕಾಲು ನೋವು ಆರಂಭವಾದದ್ದು, ನಾನು ದಪ್ಪ ಆಗಿದ್ದು ಇತ್ಯಾದಿ ಇತ್ಯಾದಿ)

ಇವುಗಳಿಂದ ಹರಡುವ ತಪ್ಪು ನಂಬಿಕೆಗಳು.

ಆಸಕ್ತಿಯಿದ್ದಾಗ್ಯೂ ಇವುಗಳ ಬಗ್ಗೆ ಕೇಳುವ ಬಗ್ಗೆ ಸಂಕೋಚ, ಹಲವೊಮ್ಮೆ ಸರಿಯಾದ ಮಾಹಿತಿ ದೊರಕದಿರುವುದು


ಕೌಟುಂಬಿಕ – ಲೈಂಗಿಕ ಶಿಕ್ಷಣದ ಅಗತ್ಯದ ಬಗ್ಗೆ ಪರವಿರೋಧದ ಚರ್ಚೆಗಳೇನೇ ಇದ್ದರೂ, ಮಾಧ್ಯಮಗಳಲ್ಲಿ, ಅಂತರಜಾಲ, ಪತ್ರಿಕೆಗಳಲ್ಲಿ ನಿಯಂತ್ರಣವಿಲ್ಲದಷ್ಟು ಲೈಂಗಿಕ ಮಾಹಿತಿ, ಅಸಂಬದ್ಧ ಕೌಟುಂಬಿಕ ಪರಿಕಲ್ಪನೆಗಳು ಹರಿದು ಬರುತ್ತವೆ. ಇವುಗಳ ಬಗ್ಗೆ ತತ್‍ಕ್ಷಣದ ಕಾನೂನು ನಿಯಂತ್ರಣ ಸಾಧ್ಯವಿರದಂಥ ಪರಿಸ್ಥಿತಿ ನಮ್ಮದು. ಪರಿಣಾಮ ಆತುರದ ಮದುವೆಗಳು, ಅಪ್ರಬುದ್ಧ ಲೈಂಗಿಕ ಸಂಬಂಧಗಳು, ಹದಿಹರೆಯದ ಅಸುರಕ್ಷಿತ ಗರ್ಭಪಾತಗಳು, ಮಾತೃಮರಣ ಇವೆಲ್ಲ ಆಗುತ್ತಿವೆ. 18 ಕ್ಕೆ ಮದುವೆಯಾಗುವ ಹುಡುಗಿ 20ಕ್ಕೆ ಎರಡು ಮಕ್ಕಳ ತಾಯಿ, ಮೊದಲ ಮಗುವಿಗೆ ಹಾಲೂಡಿಸುವಾಗ, ಮುಟ್ಟು ಬಾರದಿದ್ದರೂ ಗರ್ಭಿಣಿಯಾಗುವ ಸಾಧ್ಯತೆಯಿದೆ ಎಂಬ ಜ್ಞ್ಞಾನ ಆಕೆಗಿಲ್ಲ. ಇದ್ದರೂ ಆಕೆ ಗರ್ಭನಿರೋಧಕ ಗುಳಿಗೆ ಉಪಯೋಗಿಸುವಂತಿಲ್ಲ. ಗಂಡ ಆಕೆಗಾಗಿ “’ನಿರೋಧ್’ ಬಳಸುವ ಸಾಧ್ಯತೆ ತೀರಾ ಕಡಿಮೆ. ಇನ್ನು “ಕಾಪರ್‍ಟಿ”ಯಿಂದ ದೇಹಕ್ಕೆ ಏನಾದರೂ ಅಪಾಯವಾದರೆ ಎಂಬ ಶಂಕೆ. ಇವೆಲ್ಲದರ ಮಧ್ಯ ಒಂದೋ ಮತ್ತೆ ಗರ್ಭಿಣಿಯಾದ ತಕ್ಷಣ ಗರ್ಭಪಾತ, ಇಲ್ಲವೇ ಮನಸ್ಸಿಗೆ ಬೇಡವೆಂದಿದ್ದರೂ “ಇರಲಿ ಇಬ್ಬರು/ಮೂವರು” ಎಂಬ ಹಿರಿಯರ/ ಗಂಡನ ಮಾತು ಕೇಳಿ ಎರಡು ವರ್ಷದ ಒಳಗೇ ಮತ್ತೊಂದು ಮಗುವಿನ ತಾಯಿಯಾಗುವ ಸಾಧ್ಯತೆ ಹೆಚ್ಚಿನ ಮಹಿಳೆಯರ ಪಾಲಿಗಿದೆ.

ಕೇವಲ ಜನಸಂಖ್ಯೆ ನಿಯಂತ್ರಿಸುವ ಮಾತುಗಳಿಗಿಂತ, ಮಹಿಳೆಯರನ್ನು ಹಲವು ರೀತಿಯಲ್ಲಿ `ಸಬಲೆ’ಯರನ್ನಾಗಿಸುವುದು ‘ತಾಯಿ ಭಾರತಿ’ಯನ್ನು ಬಲಿಷ್ಠೆಯಾಗಿಸಬಲ್ಲದು. 18ರ ನಂತರವೇ ಮದುವೆ, ಮದುವೆಯ ವಯಸ್ಸನ್ನು ಏರಿಸುವುದು, ಮೊದಲ ಗರ್ಭಧಾರಣೆಯನ್ನು 24-25ರವರೆಗೆ ಮುಂದೂಡುವುದು, ಎರಡು ಮಕ್ಕಳ ನಡುವಣ ಅಂತರವನ್ನು ಕನಿಷ್ಠ ಮೂರು ವರ್ಷಗಳವರೆಗೆ ಇರಿಸುವುದು, ಮಹಿಳಾ ಸಾಕ್ಷರತೆಯನ್ನು ಏರಿಸುವುದು ಇವು ಜನಸಂಖ್ಯಾ ನಿಯಂತ್ರಣದಲ್ಲಿ ಸಹಕಾರಿ. ಮಹಿಳಾ ಸಬಲೀಕರಣದ ಇನ್ನೊಂದು ಮುಖ್ಯ ಆಯಾಮ, ಕುಟುಂಬಯೋಜನೆ ಅನ್ನುವುದು ಕೇವಲ “ಮಹಿಳಾ ಯೋಜನೆ” ಆಗದೆ ಪುರುಷ ಸಂಗಾತಿ ಸಕ್ರಿಯವಾಗಿ ಪಾಲ್ಗೊಳ್ಳುವುದು. ಇದೀಗ ಲಭ್ಯವಿರುವ ಎಲ್ಲಾ ರೀತಿಯ ಗರ್ಭನಿರೋಧಕಗಳ ಬಗೆಗೆ ಮಾಹಿತಿ, ಅವುಗಳ ಉಪಯೋಗಿಸುವಿಕೆಗೂ, ಲೈಂಗಿಕ ಕ್ರಿಯೆಗೂ ಇರುವ ಸಂಬಂಧ, ತಪ್ಪು ನಂಬಿಕೆಗಳ ಬಗ್ಗೆ ಮುಕ್ತ ಚರ್ಚೆ ಅತ್ಯಗತ್ಯ. ಮಹಿಳೆಯೊಬ್ಬಳಿಗೆ ಈ ಶಿಕ್ಷಣ ಎರಡು ಕಾರಣಗಳಿಂದ ಮುಖ್ಯ. ಒಂದು ಸ್ವತಃ ಆಕೆಯ ಅರಿವು ಹೆಚ್ಚಿಸುವಲ್ಲಿ, ಎರಡನೆಯದು ಆಕೆಯ ಮಕ್ಕಳ (ಗಂಡುಮಕ್ಕಳು – ಹೆಣ್ಣುಮಕ್ಕಳು ಇಬ್ಬರದೂ) ಅರಿವು ಹೆಚ್ಚಿಸಲೂ ಇದು ಸಹಾಯಕ.

ಗರ್ಭನಿರೋಧಕಗಳ/ ಶಸ್ತ್ರಚಿಕಿತ್ಸೆಯ ಆಯ್ಕೆ ಇಬ್ಬರೂ ಸಂಗಾತಿಗಳ ಒಪ್ಪಂದದ ಮೇರೆಗೆ ನಡೆಯಬೇಕು. ಇದರ ಬಗೆಗಿನ ಮುಕ್ತ ಚರ್ಚೆ ದಂಪತಿಗಳಲ್ಲಿ ಅತ್ಯಗತ್ಯ. ಮಹಿಳಾ ಸಬಲೀಕರಣ ಸ್ವಾವಲಂಬಿ, ಸುಖೀ ಮಹಿಳೆಯರನ್ನು, ತಮ್ಮ ಆರೋಗ್ಯದ ಬಗ್ಗೆ ಆಯ್ಕೆಯಿರುವ ಮಹಿಳೆಯರನ್ನು ರೂಪಿಸುತ್ತದೆ. ಪರಿಣಾಮ “ಮಹಿಳೆ”ಯಾಗಿರುವುದೇ ನಮ್ಮ “ಹಿಂದಿನ ಜನ್ಮದ ಪಾಪ” ಎಂಬ ಪರಿಸ್ಥಿತಿ ಇಲ್ಲವಾಗುತ್ತದೆ. ಆಗ ಪ್ರತಿಯೊಬ್ಬ ಗರ್ಭಿಣಿ ತನ್ನ ಮಗು “ಹೆಣ್ಣೋ ಗಂಡೋ” ಎಂಬ ಬಗ್ಗೆ ಯೋಚಿಸುವುದಿಲ್ಲ. ಪರಿಣಾಮ ಲಿಂಗಾನುಪಾತದ ಪರಿಸ್ಥಿತಿ ಸುಧಾರಿಸುತ್ತದೆ! ಅಂದರೆ, ಕನ್ನಡಮ್ಮನ ಮಕ್ಕಳಲ್ಲಿ ಕನ್ನಡತಿಯರೂ ಭಾರತಮಾತೆಯ ಮಕ್ಕಳಲ್ಲಿ ಭಾರತೀಯರೂ ಜಗತ್ತಿನ ಜನಸಂಖ್ಯೆಯಲ್ಲಿ ಮಹಿಳೆಯರೂ ಹೆಚ್ಚುತ್ತಾರೆ!

ಡಾ.ಕೆ.ಎಸ್. ಪವಿತ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *