Uncategorizedಅಂಕಣ

ಹೆಣ್ಣು ಹೆಜ್ಜೆ/ ಎಲ್ಲಿರುವೆ ಹೇಳೆ ಸಿನಿ-ಮಾನಿನಿ! – ಡಾ. ಕೆ.ಎಸ್. ಪವಿತ್ರ

ಸಿನಿಮಾ ನಿರ್ಮಾಣ ಮತ್ತು ಸಿನಿಮಾ ಚಿತ್ರಣ – ಇವೆರಡರಲ್ಲಿ ಮಹಿಳೆಯ ಪಾತ್ರ ಏನು ಮತ್ತು ಎಂಥದು? ಅಪಾರ ಲಿಂಗ ತಾರತಮ್ಯ ಇರುವ ಸಿನಿಮಾ ಕ್ಷೇತ್ರದಲ್ಲಿ, ಬೆಳ್ಳಿತೆರೆಯಲ್ಲಿ ಹೊಳೆಯುವ ಮಹಿಳೆಯರು ತೆರೆಮರೆಯಲ್ಲಿ ಅನುಭವಿಸುವ ಕಷ್ಟ ಹಾಲಿವುಡ್ ನಿಂದ ಬಾಲಿವುಡ್ ವರೆಗೆ ಒಂದೇ ಬಗೆಯಲ್ಲಿ ಇರುತ್ತದೆ. ಅವರು ನಿರ್ವಹಿಸುವ ಪಾತ್ರಗಳು ಹಾಡುವ ಹಾಡುಗಳ ಹಿಂದೆ ಇರುವ ಅಪಸ್ವರಗಳ ಪಾಡು ಯಾವ ಭಾಷೆಯ ಚಿತ್ರರಂಗಕ್ಕೂ ಹೊಸದಲ್ಲ. ಸಿನಿಮಾ ಮತ್ತು ಮಹಿಳೆ ಕುರಿತ ಹಲವು ಅಧ್ಯಯನಗಳ ತೆರೆದಿಡುವ ಸಂಗತಿಗಳು, ಅಸಮಾನತೆಯ ರೂಪಕಗಳೇ ಆಗಿರುತ್ತವೆ ಎನ್ನುವುದು ಕಟುಸತ್ಯ.

ಸಿನಿಮಾ ನೋಡ್ತೀರಲ್ಲ?! ಮಹಿಳೆಯರಾಗಿ ಸಿನಿಮಾ ನೋಡುವ ಪ್ರಯತ್ನ ಎಂದಾದರೂ ಮಾಡಿದ್ದೀರಾ? ಹಾಗೆ ಮಾಡಿದ್ದರೆ ನಿಮಗೆ ಕಂಡದ್ದೇನು? ಅವು ಮಹಿಳೆಯರ ಬಗ್ಗೆ ಹಲವು ಧೋರಣೆಗಳನ್ನು ಜ್ವಲಂತವಾಗಿ ಎತ್ತಿ ತೋರಿಸುತ್ತವೆ. `ಸಿನಿಮಾನಾ’ ಎಂದು ತಾತ್ಸಾರ ಮಾಡುವಂತಿಲ್ಲ. ಏಕೆಂದರೆ ಸಿನಿಮಾ ಎನ್ನುವುದು ಬಹು ಮುಖ್ಯ. ಮನರಂಜನೆಗಷ್ಟೇ ಅಲ್ಲ, ಕಥೆಗಳ ಮೂಲಕ ಅದು ನಮ್ಮನ್ನು ಬದಲಿಸಬಹುದು. ಸಿನಿಮಾ ತೋರಿಸುವ ಕಥೆಗಳು ಸಮಾಜ ಯಾವುದಕ್ಕೆ ಬೆಲೆ ನೀಡುತ್ತದೆ, ಏನನ್ನು ನಮ್ಮಿಂದ ನಿರೀಕ್ಷಿಸುತ್ತದೆ ಎಂಬುದನ್ನು ನಮಗೆ ತಿಳಿಸುತ್ತವೆ.

ಮಹಿಳೆಯರು ಸಿನಿಮಾದಲ್ಲಿ ಎರಡು ರೀತಿಯಲ್ಲಿ ಮುಖ್ಯವಾಗುತ್ತಾರೆ. ಮೊದಲನೆಯದು ಸಿನಿಮಾ ನಿರ್ಮಾಣದ ಪ್ರಕ್ರಿಯೆಯಲ್ಲಿ ವಿವಿಧ ಹಂತಗಳಲ್ಲಿ ಮಹಿಳೆಯರ ಪಾತ್ರಗಳು. ಎರಡನೆಯದು ಮಹಿಳೆಯರನ್ನು ಸಿನಿಮಾಗಳಲ್ಲಿ ಚಿತ್ರಿಸುವ ರೀತಿಗಳು ಹೇಗೆ ಸ್ವತಃ ಮಹಿಳೆಯರನ್ನು, ಮಕ್ಕಳು-ಪುರುಷರು ಇಡೀ ಸಮಾಜದ ಧೋರಣೆಗಳನ್ನು ಹೇಗೆ ಮುಂದುವರಿಯುವಂತೆ/ಬದಲಿಸುವಂತೆ ಮಾಡಬಹುದು ಎನ್ನುವುದು.

ಸಂಶೋಧಕಿ ಸ್ಟಾಸಿ ಸ್ಮಿತ್

ಬೇರೆಲ್ಲಾ ಕ್ಷೇತ್ರಗಳಂತೆ ಸಿನಿಮಾ ಕ್ಷೇತ್ರವೂ ಲಿಂಗ ತಾರತಮ್ಯಕ್ಕೆ ಹೊರತಾಗಿಲ್ಲ. ಜಗತ್ತಿನ ಮುಂದುವರಿದ ರಾಷ್ಟ್ರಗಳಲ್ಲಿಯೂ ಇದು ಸಾಮಾನ್ಯವೇ. ಅಮೆರಿಕೆಯ ಹಾಲಿವುಡ್‍ನಲ್ಲಿ ಈ ಸಮಸ್ಯೆಯ ಬಗ್ಗೆ ಸ್ಟಾಸಿ ಸ್ಮಿತ್ ಎಂಬ ಸಂಶೋಧಕಿ ಸುಮಾರು 30 ದೀರ್ಘ ಅಧ್ಯಯನಗಳನ್ನೇ ಮಾಡಿ ಸುಸ್ತಾಗಿ ಬಿಟ್ಟಿದ್ದಾಳೆ! ಆಕೆಯ ಸಂಶೋಧನಾ ತಂಡ ಪ್ರತಿ ವರ್ಷ ಹಾಲಿವುಡ್‍ನ ಜನಪ್ರಿಯ 100 ಸಿನಿಮಾಗಳನ್ನು ವಿಶ್ಲೇಷಿಸುತ್ತದೆ. ತೆರೆಯ ಮೇಲೆ ಒಂದು ಪದ ಮಾತನಾಡುವ ಪ್ರತಿ ಪಾತ್ರವನ್ನೂ ಆಕೆ ಅಧ್ಯಯನಕ್ಕಾಗಿ ಆರಿಸಿಕೊಳ್ಳುತ್ತಾಳೆ. ಹೀಗೆ 2007ರಿಂದ ಆಕೆ ವಿಶ್ಲೇಷಿಸುತ್ತಾ ಕೆಲವು ಆತಂಕಕಾರಿ `ಟ್ರೆಂಡ್’ಗಳನ್ನು ಗುರುತಿಸಿದ್ದಾಳೆ. ಅವಳು ವಿಶ್ಲೇಷಿಸಿದ 800 ಸಿನಿಮಾಗಳಲ್ಲಿ ಸುಮಾರು 35,205 ಪಾತ್ರಗಳಿದ್ದರೆ, ಅವುಗಳಲ್ಲಿ ಸ್ತ್ರೀಪಾತ್ರಗಳು ಮೂರನೇ ಒಂದು ಭಾಗವನ್ನೂ ತಲುಪುವುದಿಲ್ಲ. 1946-1955ರ ಅವಧಿಗೆ ಹೋಲಿಸಿದರೆ ಅರ್ಧ ಶತಮಾನಕ್ಕೂ ಹೆಚ್ಚು ಸಮಯದಲ್ಲಿ ಇವುಗಳಲ್ಲಿ ಯಾವ ಬದಲಾವಣೆಯೂ ಆಗಿಲ್ಲ! ಇದು ಮಹಿಳೆಯರ ಕಥೆಯಾದರೆ ಕಪ್ಪು ವರ್ಣದ, ಏಷಿಯನ್ ಮಹಿಳೆಯರ ಪಾತ್ರಗಳಂತೂ `ಇಲ್ಲವೇ ಇಲ್ಲ’ ಎನ್ನುವಷ್ಟು ಕಡಿಮೆ. ಮಹಿಳೆಯರ ಮಟ್ಟಿಗೆ ಇದನ್ನು ಸ್ಟಾಸಿ ಸ್ಮಿತ್ ಕರೆಯುವುದು “Epidemic of Invisibility”-`ಕಣ್ಮರೆಯಾಗುವ ಸಾಂಕ್ರಾಮಿಕ’ ಎಂದು!

ಮಹಿಳೆಯರೇ ಮುಖ್ಯ ಪಾತ್ರ ಎನಿಸುವ ಪಾತ್ರಗಳು 100ರಲ್ಲಿ 32 ಆದರೆ, ನೂರರಲ್ಲಿ ಮೂರು ಮಾತ್ರ ಮಹಿಳೆಯೇ ಇಡೀ ಕಥೆಯ ಕೇಂದ್ರವಾದ `ಆ್ಯಕ್ಷನ್’ ಕಥೆಗಳು. 45 ವರ್ಷ ವಯಸ್ಸು ಮೀರಿದ ಮಹಿಳೆಯ ಕಥೆಯಿದ್ದದ್ದು ಕೇವಲ ಒಂದೇ ಒಂದು ಸಿನಿಮಾದಲ್ಲಿ! ಸಿನಿಮಾ ಚಿತ್ರಣದ ರೀತಿಗಳ ಬಗ್ಗೆ ನೋಡೋಣ. ಲೈಂಗಿಕ ಪ್ರಚೋದನೆಯ ಉಡುಗೆ – ಭಾಗಶಃ ನಗ್ನತೆಯಿಂದ ಮಹಿಳೆಯರನ್ನು ತೋರಿಸುವ ಸಾಧ್ಯತೆ ಪುರುಷರಿಗೆ ಹೋಲಿಸಿದರೆ ಮೂರು ಪಟ್ಟು ಹೆಚ್ಚು. ಮಹಿಳೆಯರು `ತೆಳ್ಳಗಿರುವುದು’ ಬಹು ಮುಖ್ಯವಾದ ಅರ್ಹತೆ. ಯುವತಿಯರಲ್ಲಿ, ಹದಿಹರೆಯದ ಹುಡುಗಿಯರಲ್ಲಿ ತಮ್ಮ ದೇಹದ ಬಗೆಗೆ ಅತೃಪ್ತಿ, “ತೆಳ್ಳಗಿನ ದೇಹದ ಅದರ್ಶ’ ಗಳ ಬಗೆಗೆ ಪರಿಕಲ್ಪನೆಗಳು ಬೆಳೆಯಲು ಸಿನಿಮಾಗಳ ಕೊಡುಗೆ ಬಹಳಷ್ಟು ಎಂಬುದನ್ನೂ ಸಂಶೋಧನೆ ಗುರುತಿಸಿದೆ. ಇವೆಲ್ಲವೂ ನಮ್ಮ ಭಾರತೀಯ ಸಿನಿಮಾಗಳಲ್ಲಿಯೂ ಇನ್ನಷ್ಟು ದೃಢವಾಗಿಯೇ ಇರುವುದು ಸಂಶೋಧನೆ ನಡೆಸದೆಯೂ ಕಾಣಲು ಸಾಧ್ಯ.

ಇತ್ತೀಚೆಗೆ ಬಂದ ಇನ್ನೊಂದು ಸ್ವಾರಸ್ಯಕರ ಸಂಶೋಧನೆ “ಓ ವುಮನಿಯ (O Womeniya) 2019-20ರಲ್ಲಿ ಬಂದ 129 ಸಿನಿಮಾಗಳಲ್ಲಿ (ಹಿಂದಿ ಮತ್ತು ನಾಲ್ಕು ದಕ್ಷಿಣ ಭಾರತೀಯ ಭಾಷೆಗಳಲ್ಲಿ) ಮಹಿಳೆಯರ ದುಡಿಮೆಯನ್ನು ಕುರಿತು ನಡೆದಿದೆ. ಬರೀ ನಟನೆಯ ಬಗೆಗಲ್ಲದೆ, ನಿರ್ದೇಶನ, ಚಿತ್ರಕಥೆ, ಸಿನೆಮಾಟೋಗ್ರಫಿ, ಸಂಕಲನ ಮತ್ತು ನಿರ್ಮಾಣ ವಿನ್ಯಾಸಗಳ ಬಗ್ಗೆ ಈ ವರದಿ ಬಂದಿದೆ. ಕೇವಲ 6% ರಷ್ಟು ಸಿನಿಮಾಗಳಿಗೆ ಮಾತ್ರ ಮಹಿಳಾ ನಿರ್ದೇಶಕರು! ನಿರ್ಮಾಣದ ವಿನ್ಯಾಸಕ್ಕೆ ಅತಿ ಹೆಚ್ಚು! ಎಷ್ಟು? 15 %!! ಸಿನಿಮಾಟೋಗ್ರಫಿಯಲ್ಲಿ? ಕೇವಲ 2%!! ಈ ಅಂಶಗಳು ಇಡೀ ಸಿನಿಮಾ ರಂಗಕ್ಕೆ ಗೊತ್ತಿಲ್ಲವೆಂದೇನೂ ಇಲ್ಲ. ಆದರೆ ಅವು ಅಂಕಿ-ಅಂಶಗಳಾಗಿ, ಕಣ್ಣೆದುರು ನಿಲ್ಲುವಂತೆ ಹೊರ ಬಂದದ್ದು ಈಗಷ್ಟೆ! 92% ರಷ್ಟು ಎಲ್ಲಾ ಸಿನಿಮಾಕ್ಕೆ ಸಂಬಂಧಿಸಿದ ಶಾಖೆಗಳೂ ಪುರುಷರಿಂದಲೇ ನಿಯಂತ್ರಿಸಲ್ಪಡುತ್ತವೆ. ಹಿಂದಿ ಸಿನಿಮಾದ ಬಾಲಿವುಡ್ ದಕ್ಷಿಣ ಭಾರತೀಯ ಚಿತ್ರರಂಗಕ್ಕಿಂತ ಸ್ವಲ್ಪ ಮೇಲು. ಮಹಿಳಾ ಮುಖ್ಯಸ್ಥರು ಪ್ರತಿ ಶಾಖೆಯ ನೇತೃತ್ವ ವಹಿಸುವ ಅನುಪಾತ ಬಾಲಿವುಡ್‍ಗೆ 16% ಆದರೆ ನಮ್ಮ ದಕ್ಷಿಣದ ಚಿತ್ರರಂಗಕ್ಕೆ ಅದು ಕೇವಲ 1%.

ಮಹಿಳೆಯರೇ ಮುಖ್ಯ ಪಾತ್ರ ಎನಿಸುವ ಪಾತ್ರಗಳು 100ರಲ್ಲಿ 32 ಆದರೆ, ನೂರರಲ್ಲಿ ಮೂರು ಮಾತ್ರ ಮಹಿಳೆಯೇ ಇಡೀ ಕಥೆಯ ಕೇಂದ್ರವಾದ `ಆ್ಯಕ್ಷನ್’ ಕಥೆಗಳು. 45 ವರ್ಷ ವಯಸ್ಸು ಮೀರಿದ ಮಹಿಳೆಯ ಕಥೆಯಿದ್ದದ್ದು ಕೇವಲ ಒಂದೇ ಒಂದು ಸಿನಿಮಾದಲ್ಲಿ! ಸಿನಿಮಾ ಚಿತ್ರಣದ ರೀತಿಗಳ ಬಗ್ಗೆ ನೋಡೋಣ. ಲೈಂಗಿಕ ಪ್ರಚೋದನೆಯ ಉಡುಗೆ – ಭಾಗಶಃ ನಗ್ನತೆಯಿಂದ ಮಹಿಳೆಯರನ್ನು ತೋರಿಸುವ ಸಾಧ್ಯತೆ ಪುರುಷರಿಗೆ ಹೋಲಿಸಿದರೆ ಮೂರು ಪಟ್ಟು ಹೆಚ್ಚು. ಮಹಿಳೆಯರು `ತೆಳ್ಳಗಿರುವುದು’ ಬಹು ಮುಖ್ಯವಾದ ಅರ್ಹತೆ. ಯುವತಿಯರಲ್ಲಿ, ಹದಿಹರೆಯದ ಹುಡುಗಿಯರಲ್ಲಿ ತಮ್ಮ ದೇಹದ ಬಗೆಗೆ ಅತೃಪ್ತಿ, “ತೆಳ್ಳಗಿನ ದೇಹದ ಅದರ್ಶ’ ಗಳ ಬಗೆಗೆ ಪರಿಕಲ್ಪನೆಗಳು ಬೆಳೆಯಲು ಸಿನಿಮಾಗಳ ಕೊಡುಗೆ ಬಹಳಷ್ಟು ಎಂಬುದನ್ನೂ ಸಂಶೋಧನೆ ಗುರುತಿಸಿದೆ. ಇವೆಲ್ಲವೂ ನಮ್ಮ ಭಾರತೀಯ ಸಿನಿಮಾಗಳಲ್ಲಿಯೂ ಇನ್ನಷ್ಟು ದೃಢವಾಗಿಯೇ ಇರುವುದು ಸಂಶೋಧನೆ ನಡೆಸದೆಯೂ ಕಾಣಲು ಸಾಧ್ಯ.

ಮಹಿಳಾ ಪ್ರಾತಿನಿಧ್ಯ

ಇನ್ನೊಂದು ನಮ್ಮಂಥ ಸಾಮಾನ್ಯ ಜನರಿಗೆ ಗೊತ್ತಿರದೇ ಇರುವ ಸಂಗತಿಯೊಂದಿದೆ. ಅದು ಒಂದು `ಬೆಚ್‍ಡೆಲ್ ಟೆಸ್ಟ್’ ಎಂಬ ಪರೀಕ್ಷೆ. ಸಿನಿಮಾದಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಅಳೆಯುವ ಅಂತರರಾಷ್ಟ್ರೀಯ ಮಾಪನವಿದು. ಬೆಚ್‍ಡೆಲ್ ಟೆಸ್ಟ್‍ನಲ್ಲಿ ಪಾಸಾಗಲು ಸಿನಿಮಾದಲ್ಲಿ ಹೆಸರಿರುವ ಎರಡು ಮಹಿಳಾ ಪತ್ರಗಳು ಕನಿಷ್ಠ ಒಂದು ದೃಶ್ಯದಲ್ಲಿ ಒಬ್ಬರಿನ್ನೊಬ್ಬರ ಜೊತೆ ಮಾತನಾಡಬೇಕು. ಹಾಗೆ ಮಾತನಾಡುವುದು ಪುರುಷರ ಬಗೆಗಾಗಿರಬಾರದು! ಅಂತರರಾಷ್ಟ್ರೀಯವಾಗಿ `ಇದು ತುಂಬಾ ಬೇಸಿಕ್, ಕನಿಷ್ಟ ಅರ್ಹತೆ’ ಎಂದು ವಿಮರ್ಶಿಸಲ್ಪಟ್ಟು, ಹೆಚ್ಚಿನ ಹಾಲಿವುಡ್ ಸಿನಿಮಾಗಳು ಪಾಸಾಗಿಯೇ ಬಿಡುತ್ತವೆ. ಆದರೆ ಭಾರತದ 59% ರಷ್ಟು ಸಿನಿಮಾಗಳು ಆ `ಬೇಸಿಕ್’ ಮಟ್ಟವನ್ನೂ ತಲುಪಲು ವಿಫಲವಾಗಿವೆ ಎಂಬುದು ಅಚ್ಚರಿಯ ಮಾತು.

`ಸಿನಿಮಾ ಮಾರ್ಕೆಟಿಂಗ್’ ನಲ್ಲಿಯೂ ನಟರಿಗೆ ಸಿಕ್ಕಷ್ಟು ಮಹತ್ವ ಮಹಿಳಾ ಪಾತ್ರಗಳಿಗೆ ಸಿಕ್ಕಿಲ್ಲ. ಟ್ರೇಲರ್‍ಗಳನ್ನು ನೋಡಿದರೆ 19 % ರಷ್ಟು `ಟಾಕ್‍ಟೈಂ’ 129 ಸಿನಿಮಾಗಳಲ್ಲಿ ಕೇವಲ 10 ಮಾತ್ರ 50 % ಮಹಿಳಾ ಟಾಕ್ ಟೈಂ ಹೊಂದಿದ್ದು ಕಂಡು ಬಂತು.

ತೆರೆಯ ಮೇಲೆ ಕಾಣುವ ಮಹಿಳೆಯರ ವಿಷಯಕ್ಕೆ ಬಂದರೆ, ವಿವರವಾದ ಮನೋವೈಜ್ಞಾನಿಕ ಅಧ್ಯಯನಗಳು ಇನ್ನೂ ನಡೆಯಬೇಕಿದೆ. ಸಾರ್ವಜನಿಕವಾಗಿ, ಪ್ರಬಲ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ, `ಆದರ್ಶ’ವಾಗಿ ಜನರು ನಂಬುವ, `ಸೆಲೆಬ್ರಿಟಿ’ ಗಳಾಗಿರುವ ನಟ-ನಟಿಯರಿಬ್ಬರಲ್ಲಿಯೂ ಹಲವು ಒತ್ತಡಗಳು, ಕೌಟುಂಬಿಕ ಸಮಸ್ಯೆಗಳು ಇರಲು ಸಾಧ್ಯವಿದೆ. ಖಿನ್ನತೆ-ಮಾದಕ ದ್ರವ್ಯ ವ್ಯಸನಗಳು-ಆತ್ಮಹತ್ಯೆಗಳು ಗಣನೀಯವಾಗಿ ಈ ವರ್ಗದಲ್ಲಿ ಹೆಚ್ಚು. ಅದರರ್ಥ ಯುವಜನರು ಚಿತ್ರರಂಗ ಪ್ರವೇಶಿಸಲೇ ಹೆದರಬೇಕೆಂದಿಲ್ಲ, ಆದರೆ ಈ ಸಮಸ್ಯೆಗಳ ಬಗೆಗೆ ಅರಿವು ಬೇಕು. ಈ ಎಲ್ಲ ಸಮಸ್ಯೆಗಳೂ ಮಹಿಳಾ ಕಲಾವಿದರಲ್ಲಿ ಮತ್ತಷ್ಟು ಹೆಚ್ಚು. ಜೊತೆಗೆ ಇತರ ಕ್ಷೇತ್ರಗಳಂತೆ ಅವರಿಗೆ ಸಹಾಯ ಸಿಗುವ, ಅವರೂ ಸಹಾಯಕ್ಕೆ ಮುಂದಾಗುವ ಸಾಧ್ಯತೆ ಕಡಿಮೆ.

ಹಾಗಿದ್ದರೆ ಇಂತಹ ಆತಂಕಕಾರಿ ಪರಿಸ್ಥಿತಿಯಿಂದ ಚಿತ್ರರಂಗ ಹೊರಬರುವ ದಾರಿಯಿಲ್ಲವೆ? ಮಹಿಳಾ ಚಿತ್ರ ನಿರ್ಮಾಣ- ಚಿತ್ರ ನಿರ್ದೇಶಕರು ನಮ್ಮ ನಡುವೆ ಇದ್ದಾರೆ. ಫಿಲಂ ಇನ್ಸ್‍ಟಿಟ್ಯೂಟ್‍ನಿಂದ ಪಾಸಾಗಿ ಹೊರಬರುವವರಲ್ಲಿ ಅರ್ಧದಷ್ಟು ಹುಡುಗಿಯರೇ! ಹಾಗಾಗಿ ಪ್ರತಿಭೆಯಲ್ಲಿ ಹುಡುಗಿಯರದೂ ಸಮಪಾಲೇ! ಆದರೆ ವ್ಯವಸ್ಥೆಯನ್ನು ಒಳಹೊಕ್ಕು, ಅಲ್ಲಿಯೇ ಸ್ಥಿರವಾಗಿ ನಿಲ್ಲುವುದರಲ್ಲಿ ಹುಡುಗಿಯರು ಸೋಲುತ್ತಾರೆ. ವ್ಯವಸ್ಥೆ ಅವರಿಗೊಡ್ಡುವ ಸವಾಲುಗಳು ಬಹಳಷ್ಟು. ಮೈಕ್ರೋ ಬಜೆಟ್ ಸಿನಿಮಾಗಳಲ್ಲಿ 18 %, ಇನ್ನೂ ಸ್ವಲ್ಪ ದೊಡ್ಡ ಬಜೆಟ್ ಸಿನಿಮಾಗಳಲ್ಲಿ 12 %, ಪೂರ್ಣ ಪ್ರಮಾಣದ ಸಿನಿಮಾಗಳಲ್ಲಿ ಕೇವಲ 5 % ಗೆ ಮಹಿಳೆಯರ ಪಾತ್ರ ಇಳಿದುಬಿಡುತ್ತದೆ. ಅಚ್ಚರಿಯ ಸತ್ಯ ಏನೆಂದರೆ ಶೇಕಡ 51 %ರಷ್ಟು ಸಿನಿಮಾ ಟಿಕೆಟ್ಟುಗಳನ್ನು ಮಹಿಳೆಯರೂ ತೆಗೆದುಕೊಳ್ಳುತ್ತಾರೆ. ಹಾಗಾಗಿ ಮಹಿಳೆಯರಿಂದ, ಮಹಿಳೆಯರ ಬಗ್ಗೆ ಸಿನಿಮಾಗಳು ಹೆಚ್ಚು ದುಡ್ಡು ಮಾಡುವುದು ಸಾಧ್ಯವಿದೆ.

ಸಿನಿಮಾ ನೋಡಬೇಕು!

ಮಹಿಳೆಯರ ಪ್ರಾತಿನಿಧ್ಯ ಸಿನಿಮಾದ ಎಲ್ಲ ಶಾಖೆಗಳಲ್ಲಿ ಹೆಚ್ಚಲೇಬೇಕು. ಅದಕ್ಕಾಗಿ ನಾವು ಮಾಡಬಹುದಾದದ್ದು ಕೆಲವು. ಮೊದಲನೆಯದು ನಾವೆಲ್ಲರೂ ಸಿನಿಮಾ ನೋಡಬೇಕು! ಸಿನಿಮಾಗಳಲ್ಲಿ ಮಹಿಳೆಯರನ್ನು ನೋಡಬೇಕು. ಮಹಿಳಾ ನಿರ್ದೇಶಕರ ಸಿನಿಮಾವನ್ನು ತಿಂಗಳಿಗೆ ಒಂದಾದರೂ ನೋಡುತ್ತೇವೆ ಎಂಬಂತೆ ನಿಯಮ ಮಾಡಿಕೊಳ್ಳಬೇಕು. ಸಿನಿಮಾಗಳನ್ನು ನೋಡುವಾಗಲೂ ಎಷ್ಟು ಮಹಿಳಾ ಪಾತ್ರಗಳಿವೆ, ಅವರು ಏನು ಹಾಕಿಕೊಂಡಿದ್ದಾರೆ, ಅವರಿಗೆ ನಟನೆಗೆ ಅವಕಾಶವಿದೆಯೇ ಇಲ್ಲವೇ, ಬರೀ ಪುರುಷನ ಬೆಂಬಲಕ್ಕಾಗಿಯಷ್ಟೆ ಅವರಿದ್ದಾರೆಯೆ? ಇವುಗಳನ್ನು ಗಮನಿಸಬೇಕು.

ನಂತರದ ಅಂಶ ಸಿನಿಮಾಗಳನ್ನು ಮಹಿಳೆಯರು ಮಾಡಬೇಕು. ನಿಮ್ಮ ಕಥೆಗಳು ಬೇಡ ಎಂದು ಇಡೀ ಸಿನಿಮಾ ಕ್ಷೇತ್ರ ನಿಮಗೆ ಹೇಳಬಹುದು. ಆದರೆ ನಿಮ್ಮ ಪ್ರತಿಭೆಯ ಮೇಲೆ ನಂಬಿಕೆಯಿಟ್ಟು ಮಾಡಬೇಕು. ಮಹಿಳಾ ನಿರ್ದೇಶಕರು-ನಿರ್ಮಾಪಕರು ಒಬ್ಬರಿಗೊಬ್ಬರು ಬೆಂಬಲ ನೀಡಬೇಕು. `ಪರಿಪೂರ್ಣ’ ರಲ್ಲದ ಮಹಿಳೆಯರು ತೆರೆಯ ಮೇಲೆ ಕಾಣುವಂತೆ ಬದಲಾವಣೆ ಮಾಡಬೇಕು. ಮಹಿಳೆಯರ ಪಾತ್ರ ಹೆಚ್ಚಿದರೆ ಎಲ್ಲವೂ ಕಾಣತೊಡಗುತ್ತದೆ. ಆರ್ಥಿಕವಾಗಿ ಮಹಿಳೆಯರನ್ನು ಚಿತ್ರರಂಗದ ಎಲ್ಲ ಶಾಖೆಗಳಲ್ಲಿ ಬೆಂಬಲಿಸುವ ಹೂಡಿಕೆದಾರರು, ಹಂಚಿಕೆದಾರರು, ಆಡಳಿತ ವ್ಯವಸ್ಥೆ ಹೆಚ್ಚಬೇಕು. ಚಲನಚಿತ್ರದ ಕಪ್ಪು – ಬಿಳುಪು ಅಲ್ಲಿಂದ ವರ್ಣಕ್ಕೆ, ಅನಿಮೇಷನ್‍ಗಳಿಗೆ ಸಬ್‍ಟೈಟಲ್ಸ್‍ಗಳಿಗೆ, ಮುಂದುವರಿದಿರುವಂತೆ ಮಹಿಳೆಯರನ್ನು ಸಮಾನವಾಗಿ ಕಾಣುವಲ್ಲಿಯೂ ಚಿತ್ರರಂಗ ಪ್ರಗತಿಯ ಹಾದಿ ತುಳಿಯಬೇಕು.

  • ಡಾ. ಕೆ.ಎಸ್. ಪವಿತ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *