Latestಅಂಕಣ

ಹೆಣ್ಣು ಹೆಜ್ಜೆ/ ‘ಆರೈಕೆ’ ಎನ್ನುವ ಸಂಕೀರ್ಣ ವಿಷಯ – ಡಾ. ಕೆ.ಎಸ್. ಪವಿತ್ರ

`ಆರೈಕೆ' ಎಂಬ ಈ ಪದಕ್ಕೂಹೆಣ್ಣಿ’ಗೂ ಅನ್ಯೋನ್ಯ ನಂಟು. ಆರೈಕೆಯ ಹೊಣೆ ಹೆಚ್ಚಾಗಿ ಬೀಳುವುದು ಅಮ್ಮ, ಮಗಳು, ಸೊಸೆ – ಒಟ್ಟಿನಲ್ಲಿ ಮಹಿಳೆಯ ಮೇಲೆ. ವೈದ್ಯಕೀಯ -ಮನೋವೈಜ್ಞಾನಿಕ ಕಾರಣಗಳಿಂದ, ಸಾಮಾಜಿಕ ಸಮಸ್ಯೆಗಳಿಂದ ವೃದ್ಧಾಪ್ಯದಲ್ಲಿ `ಆರೈಕೆ’ ಎಂಬ ವಿಷಯ ಒಂದು ಸಂಕೀರ್ಣ ಸಂಗತಿ. ಆರೈಕೆ ಮಾಡುವ ಮಹಿಳೆ ಸ್ವತಃ ತನ್ನ ಅಗತ್ಯಗಳನ್ನು ನಿರ್ಲಕ್ಷಿಸುವುದು, ಹಠದಿಂದಲೇ ಎಲ್ಲವನ್ನೂ ಮಾಡುವುದು ಇವುಗಳಿಂದ ನರಳುತ್ತಾಳೆ. ಸಹಜವಾಗಿ ಈ ನರಳುವಿಕೆ ಅಳು, ಕೋಪ, ಕಿರಿಕಿರಿ, ಅಸಹನೆಗೆ ದಾರಿಯಾಗುತ್ತದೆ.

ಇಂದು ಜಗತ್ತಿನಾದ್ಯಂತ ಪ್ರತಿ ದೇಶದಲ್ಲಿಯೂ ಹಿಂದೆಂದಿಗಿಂತ ಜನರ ಆಯುಷ್ಯ ಹೆಚ್ಚಿದೆ. ಸಹಜವಾಗಿ ಕಾಯಿಲೆಗಳಿಂದ ಮರಣಿಸುವವರ ಸಂಖ್ಯೆ ಕಡಿಮೆಯಾಗಿದೆ. ವಿಪರ್ಯಾಸವೆಂದರೆ ಇದು ಕಾಯಿಲೆಗಳಿಂದ ನರಳುವವರ ಸಂಖ್ಯೆಯನ್ನು ಹೆಚ್ಚಿಸಿದೆ. ನಾನು ನನ್ನಲ್ಲಿ ಬರುವ ರೋಗಿಗಳಿಗೆ ಹೇಳುವುದಿದೆ ``ನಮ್ಮ ವೈದ್ಯಕೀಯ ವಿಜ್ಞಾನ ಎಷ್ಟು ಮುಂದುವರಿದಿದೆಯೆಂದರೆ, ಒಂದು ಗುಟುಕು ಜೀವ ಉಳಿದಿದೆ ಎಂದಾದರೆ, ನಿಮ್ಮನ್ನು ನಾವು ಬದಕಿಸಿಕೊಡಬಲ್ಲೆವು. ಆದರೆ ನೀವು ಓಡಾಡಿ- ಕೆಲಸ ಮಾಡಿ, ನಿಮ್ಮನ್ನು ನೀವು ನೋಡಿಕೊಳ್ಳುವಂತಾಗುತ್ತೀರಿ ಎಂಬ ಭರವಸೆ ಮಾತ್ರ ಸಾಧ್ಯವಿಲ್ಲ. ಅಂದರೆ ಜೀವ ಉಳಿಸಬಹುದು, ಜೀವನ? ಗೊತ್ತಿಲ್ಲ. ಹಾಗಾಗಿ ಸರಿಯಾದ ಜೀವನಶೈಲಿ ಪಾಲಿಸಿ, ಆರೋಗ್ಯದ ಬಗ್ಗೆ ಎಚ್ಚರವಿಡಿ''.

ಹಲವು ರೋಗಗಳು, ಜೀವನ ವಿವಿಧ ಹಂತಗಳಲ್ಲಿ ತಲೆದೋರಬಹುದು. ಆದರೆ ವೃದ್ಧಾಪ್ಯ- ಅಂದರೆ ವೈದ್ಯಕೀಯ ಪರಿಭಾಷೆಯಲ್ಲಿ 60ರ ವಯಸ್ಸಿನ ನಂತರದಲ್ಲಿ ಬರುವ ಕಾಯಿಲೆಗಳು ಹಲವು ಬಾರಿ ಅಪ್ಪ-ಅಮ್ಮ, ಕೆಲವೊಮ್ಮೆ ಅಜ್ಜ-ಅಜ್ಜಿಯರನ್ನು ಹಾಸಿಗೆ ಹಿಡಿಯುವಂತೆ ಮಾಡಬಹುದು. ನಮ್ಮ ಪುರಾಣಗಳು ಹೇಳುವ ``ವಿನಾ ದೈನ್ಯೇನ ಜೀವನಂ, ಅನಾಯಾಸೇನ ಮರಣಂ'' ಎಲ್ಲರಿಗೂ ಸಾಧ್ಯವಾಗುವಂತಹದ್ದಲ್ಲ. ಅದರ ಮೇಲೆ ದೂರ ನಿಂತವರಿಗೆ ``ಇವರಿಗೇನು 85 ವರ್ಷಗಳಾಗಿದೆ, ಇನ್ನೂ `ಹೋದರೆ' ಏನು?'' ಎಂದೆನ್ನಿಸಬಹುದಾದರೂ, ಸ್ವತಃ ಆ ವ್ಯಕ್ತಿಗೆ, ಅವರ ಮಕ್ಕಳು /ಗಂಡ/ಹೆಂಡತಿಗೆ ಹಾಗನ್ನಿಸಬೇಕೆಂದಿಲ್ಲ! ನಮಗೆ ವಯಸ್ಸಾದ ಹಾಗೆ ಆ `ವಯಸ್ಸನ್ನು' ಮನಸ್ಸು ಒಪ್ಪಿಕೊಳ್ಳುವುದು ಕಷ್ಟವಷ್ಟೆ!  ಒಟ್ಟಿನಲ್ಲಿ ವೈದ್ಯಕೀಯ -ಮನೋವೈಜ್ಞಾನಿಕ ಕಾರಣಗಳಿಂದ, ಸಾಮಾಜಿಕ  ಸಮಸ್ಯೆಗಳಿಂದ ವೃದ್ಧಾಪ್ಯದಲ್ಲಿ `ಆರೈಕೆ' ಎಂಬ ವಿಷಯ ಒಂದು ಸಂಕೀರ್ಣ ಸಂಗತಿ.

`ಆರೈಕೆ' ಎಂಬ ಈ ಪದಕ್ಕೂ `ಹೆಣ್ಣಿ'ಗೂ ಅನ್ಯೋನ್ಯ ನಂಟು. ಮಗುವನ್ನು `ಅಮ್ಮ' ಆರೈಕೆ ಮಾಡುವುದೂ, ರೋಗಿಯನ್ನು ವೈದ್ಯನಿಗಿಂತ `ನರ್ಸ್' (ಶುಶ್ರೂಷಕಿ) ಆರೈಕೆ ಮಾಡುತ್ತಾಳೆ ಎಂದು ಕಲ್ಪಿಸಿಕೊಳ್ಳುವುದೂ, ಅತ್ತೆ-ಮಾವಂದಿರನ್ನು `ಸೊಸೆ' ಆರೈಕೆ ಮಾಡುವುದೂ ನಾವು ಬಹಳ ಕಾಲದಿಂದ ಒಪ್ಪಿಕೊಂಡಂತಹ ವಿಷಯಗಳು. ನನ್ನ ಆತ್ಮೀಯರೊಬ್ಬರ `ತಂದೆ' ತೀರಿಕೊಂಡಾಗ ಅವರು ಹೇಳಿದ ಮಾತುಗಳು ನನಗೆ ಈಗಲೂ ನೆನಪಾಗುತ್ತವೆ. ``ಅಪ್ಪ-ಅಮ್ಮ ಮೊದಲೇ ಮಾತನಾಡಿಕೊಂಡಿದ್ದರು ಎನಿಸುತ್ತದೆ. ‘ಗಂಡ ಮೊದಲು ಸತ್ತರೆ ಹೇಗೆ ಜೀವನ ಪರವಾಗಿಲ್ಲ, ಆದರೆ ಹೆಂಡತಿ ಮೊದಲು ಸತ್ತರೆ, ಜೀವನವೆಷ್ಟು ಕಷ್ಟ ‘ ಎಂಬ ಬಗ್ಗೆ. ಹಾಗಾಗಿ ಅಮ್ಮ ಈಗ ಹೇಗೋ ಹೊಂದಿಕೊಂಡು ನಮ್ಮ ಬಳಿಯೇ ಇದ್ದಾರೆ''.  ಇದಕ್ಕೆ ಅಪವಾದಗಳು ಇರಬಹುದು. ಆದರೆ ಹೆಚ್ಚಿನವರ ಪಾಲಿಗೆ ಇದು ಸತ್ಯ. ಹೀಗೆ `ಆರೈಕೆ' ಎನ್ನುವ ವಿಷಯಕ್ಕೂ `ಹೆಣ್ಣಿ'ಗೂ ಇರುವ ನಂಟು ಬಲವಾದದ್ದು ಎನ್ನುವುದು ಗಟ್ಟಿ ಮಾತೇ.

ಮನೋವೈದ್ಯಕೀಯ ವಿಜ್ಞಾನ  "Caregiver burden", "Caregiver burnout" ಕುರಿತು ವಿಶೇಷವಾಗಿ ನಮ್ಮ ಗಮನ ಸೆಳೆಯುತ್ತದೆ. ಆರೈಕೆ ನೀಡುವವರ ಹೊರೆ, ಆರೈಕೆ ನೀಡುವವರ ದಣಿವು ಇವೆಲ್ಲ ವೈಜ್ಞಾನಿಕವಾಗಿ ದೃಢಪಟ್ಟಿರುವ ವಿಷಯಗಳು. ಅಪ್ಪ-ಅಮ್ಮ/ ಅತ್ತೆ-ಮಾವಂದಿರ ಆರೈಕೆಯ ಹೊಣೆ ಹೆಚ್ಚಾಗಿ ಬೀಳುವುದು ಮಗಳು / ಸೊಸೆ -ಒಟ್ಟಿನಲ್ಲಿ ಮಹಿಳೆಯ ಮೇಲೆ. ಮಗ/ಅಳಿಯ ಸಹಾಯ ಮಾಡುವುದಿಲ್ಲ ಎಂದಲ್ಲ. ಆದರೆ ಮಗ/ಅಳಿಯ ಸಹಾಯ/ ಆರೈಕೆ ಮಾಡಬೇಕಾದ್ದರ ಬಗ್ಗೆ ಸಮಾಜದ, ಮಹಿಳೆಯ, ಸ್ವತಃ ಆರೈಕೆ ಮಾಡಿಸಿಕೊಳ್ಳಬೇಕಾದ ವೃದ್ಧರ ಧೋರಣೆ ಬದಲಾಗಬೇಕಾದ ಅಗತ್ಯ ಇಂದೂ ಇದೆ.

ಭಾವನಾತ್ಮಕ ಸಮಸ್ಯೆ : ವೃದ್ಧರ ಆರೈಕೆ ಮಾಡುವ ಸಂದರ್ಭದಲ್ಲಿ ಹತ್ತು -ಹಲವು ಸಾಮಾಜಿಕ ಸಮಸ್ಯೆಗಳು ಎದುರಾಗುತ್ತವೆ. ಇವೆಲ್ಲವೂ ವೈಜ್ಞಾನಿಕವಾಗಿ "Caregiver burden" ಎಂಬ ಶೀರ್ಷಿಕೆಯ ಅಡಿಯಲ್ಲಿ ಅಧ್ಯಯನ ಮಾಡಿದಂತಹವೇ ಆಗಬೇಕೆಂದಿಲ್ಲ. ಆದರೆ ಇವು ಹಲವು ಭಾವನಾತ್ಮಕ ಸಮಸ್ಯೆಗಳನ್ನು ಉಂಟು ಮಾಡುತ್ತವೆ. ಹಾಗಾಗಿ "Caregiver burnout" ಬೇಗ ಬರುವ ಸಾಧ್ಯತೆ ಹೆಚ್ಚಿಸುತ್ತವೆ. ಕಾಯಿಲೆಯ ಸ್ಥಿತಿಯನ್ನು ಮೂರು ಹಂತಗಳಾಗಿಸಿ ನಾವು ಇದನ್ನು ವಿಶ್ಲೇಷಿಸಬಹುದು.

ಮೊದಲನೆಯ ಹಂತ ಕಾಯಿಲೆ ಇದೆ ಎಂದು ಗೊತ್ತಾಗುವುದು / ಅಪಘಾತದಂತಹ ಸಂದರ್ಭ /ಬಿದ್ದು ಕಾಲು ಮುರಿದಂತಹ ಸಂದರ್ಭ ಇತ್ಯಾದಿ. ಇಲ್ಲೆಲ್ಲ ರೋಗಿಗೆ ಸ್ವತಃ ಪ್ರಾಣಭಯ/ಮಕ್ಕಳಿಗೆ `ಇವರುಳಿದರೆ ಸಾಕು' ಎಂಬ ನಿರೀಕ್ಷೆ. ಆರೈಕೆ ಮಾಡುವ ಮಹಿಳೆ ಎದುರಿಸುವ ಸವಾಲುಗಳು ಈ ಸಂದರ್ಭದಲ್ಲಿಯೂ ನಮ್ಮೆಲ್ಲರ ಗಮನಕ್ಕೆ ಬರಲಾರವು. ``ಇಂಥವರಿಗೆ ಹೀಗಾಗುತ್ತದೆ'' ಎಂಬ ಸುದ್ದಿ ಕೇಳಿದಾಕ್ಷಣ, ನಮ್ಮ ಸಂತಾಪ/ಬೆಂಬಲ/ಸಹಾಯ ಸೂಚಿಸಲು ನಾವು ಓಡುತ್ತೇವಷ್ಟೆ. ಹಾಗೆ ಹೋಗುವಾಗ ಅಲ್ಲಿ ಯಾವಾಗ ಹೋಗುತ್ತೇವೆ, ಏನು ಮಾತನಾಡುತ್ತೇವೆ, ``ಹೇಗೆ ಆ ರೀತಿ ಕಳಿಸದಿದ್ದರೆ/ ಹೋಗದಿದ್ದರೆ/ ಬೇರೆ ಏನು ಔಷಧಿ ಮಾಡಿದ್ದರೆ ಈ ರೀತಿ ಆಗುತ್ತಿರಲಿಲ್ಲ/ ಈಗಲೂ ಹೀಗೆ ಮಾಡಿಬಿಡಿ/ ಹಾಗೆ ಮಾಡಿ ನೋಡಿ'' ಎಂಬಂತಹ ಪುಕ್ಕಟೆ ಕಮೆಂಟ್ಸ್/ ಸಲಹೆಗಳನ್ನು ನೀಡುತ್ತೇವೆ ಎಂಬುದರ ಬಗ್ಗೆ ನಾವ್ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಅದರ ಮೇಲೆ ಆರೈಕೆ ಮಾಡುವ ಮಹಿಳೆಯ ಶ್ರಮವನ್ನು ಗುರುತಿಸುವ ಕಿಂಚಿತ್ ಒಳ್ಳೆ ಬುದ್ಧಿ ನಮ್ಮಲ್ಲಿ ಹೆಚ್ಚಿನವರಿಗಿರುವುದಿಲ್ಲ! ಈ ಹಂತದಲ್ಲಿ ಮಹಿಳೆ ಸ್ವತಃ  ಎರಡೆರಡು ಕಡೆ ಓಡಾಡಬೇಕು, ಆಸ್ಪತ್ರೆ -ಮನೆಗಳ ಮಧ್ಯೆ ಆಕೆಯೆ ನಿದ್ರೆ - ಹಸಿವು, ಇತರ ಮನೆ ಕೆಲಸಗಳು ಎಲ್ಲವೂ ಪಕ್ಕಕ್ಕಿಡಲೇಬೇಕಾದಂತಹದ್ದು. ಹಾಗಾಗಿ ಆಸ್ಪತ್ರೆಯಿಂದ ಡಿಸ್‍ಚಾರ್ಜ್ ಆಗುವುದು ಬೇರೆ ಎಲ್ಲರಿಗಿಂತ, ಮಹಿಳೆಗೆ ನಿರಾಳತೆಯನ್ನೇ ತರುತ್ತದೆ.

ಎರಡನೆಯ ಹಂತ ರೋಗಿಯನ್ನು ಮನೆಯಲ್ಲಿಯೇ ನೋಡಿಕೊಳ್ಳುವ ಹಂತ. ಈಗ ಮಹಿಳೆಯ ಮೇಲೆ ಹೊಸ ಸವಾಲುಗಳು. ರೋಗಿಯ ಗಂಡ/ಮಗ/ಅಳಿಯ ಹೊರಗೆ ಕಷ್ಟಪಟ್ಟು ದುಡಿಯುವವರು. ಅದರ ಅರ್ಥ ಆಸ್ಪತ್ರೆಯ ಸಲುವಾಗಿ ಈಗಾಗಲೇ ಅವರಿಗೆ ದುಡ್ಡು /ರಜೆ ಎರಡೂ ಖರ್ಚಾಗಿದೆ. ಈಗ ಆರೈಕೆ ಮುಂದುವರಿಯಬೇಕೆಂದರೆ, ಮಹಿಳೆಯೇ ಅದನ್ನು ಕೈಗೆತ್ತಿಕೊಳ್ಳಬೇಕು. ಮಹಿಳೆಯರನ್ನೂ ಒಳಗೊಂಡಂತೆ  ಇಡೀ ಸಮಾಜವಾದರೂ ನಿರೀಕ್ಷಿಸುವುದೂ ಅದನ್ನೇ. ಒಂದೊಮ್ಮೆ ಪರಿಸ್ಥಿತಿ ಅದಲು-ಬದಲಾಗಿ ಮಗ/ಅಳಿಯ/ಗಂಡ ರೋಗಿಯ ಸೇವೆಗೇ ನಿಂತೇ ಬಿಟ್ಟರೆನ್ನಿ, ರೋಗಿಯನ್ನೂ ಒಳಗೊಂಡು ಇಡೀ ಸಮಾಜ ಅದನ್ನು `ಮಹತ್ಕಾರ್ಯ'ವೆಂದೇ ಭಾವಿಸುತ್ತದೆ. ಮತ್ತೆ ಮತ್ತೆ ಅದನ್ನು ಒತ್ತಿ ಹೇಳುತ್ತದೆ. ಎಷ್ಟೋ ಬಾರಿ ಸೊಸೆ/ಮಗಳ ಕೈಯ್ಯಲ್ಲಿ ಎಲ್ಲವನ್ನೂ `ಅವರ ಕರ್ತವ್ಯ' ವೆಂಬಂತೆ ಮಾಡಿಸಿಕೊಳ್ಳುವ ವೃದ್ಧರು ಮಗ/ಅಳಿಯ/ಗಂಡ ಒಂದು ದಿನ ಅದನ್ನು ಮಾಡಲು ನಿಂತರೆ, ಆ ದಿನ ತಾವು ಎಲ್ಲಿಲ್ಲದ ಸಹಕಾರ, ತತ್‍ಕ್ಷಣವೇ ಅಷ್ಟು ದಿನ ಇರದ ಸ್ವಾವಲಂಬಿತನ ತೋರಿಸುವ ಸಾಧ್ಯತೆಯಿದೆ. ಅದರ ಮೇಲೆ ಕೃತಜ್ಞತೆ -ಧನ್ಯತೆಗಳಿಂದ ``ಎಷ್ಟು ಒಳ್ಳೆಯ -ಬಂಗಾರದ ಮನುಷ್ಯ'' ಎಂಬ ಪ್ರಶಂಸೆಯೂ ಸಿಕ್ಕುತ್ತದೆ!  ಇವೆಲ್ಲದರ ನಡುವೆ ಆರೈಕೆ ಮಾಡುವ ಮಹಿಳೆ ಸ್ವತಃ ತನ್ನ ಅಗತ್ಯಗಳನ್ನು ನಿರ್ಲಕ್ಷಿಸುವುದು, ತನ್ನತ್ತ ಯಾರೂ ಬೆರಳು ತೋರಿಸಬಾರದೆಂಬ ಭಾವದಿಂದ ಹಠದಿಂದಲೇ ಎಲ್ಲವನ್ನೂ ಮಾಡುವುದು, ಮತ್ತೆ ಮತ್ತೆ ರೋಗಿಯನ್ನು ನೋಡಲು ಬರುವ ಸಂಬಂಧಿಕರ ಆರೈಕೆ, ಇವುಗಳಿಂದ ನರಳುತ್ತಾಳೆ. ಸಹಜವಾಗಿ ಈ ನರಳುವಿಕೆ ಕೋಪ, ಕಿರಿಕಿರಿ, ಅಸಹನೆ, ಅಳುಗಳಿಗೆ ದಾರಿಯಾಗುತ್ತದೆ.

ಮೂರನೆಯ ಹಂತ, ರೋಗಿಯ ರೋಗದ ಮುಂದುವರಿದ ಸ್ಥಿತಿ. ಇದು ಸಾವು/ದೀರ್ಘಕಾಲಿಕ ನರಳುವಿಕೆ/ಗುಣಮುಖವಾಗುವಿಕೆ ಈ ಮೂರರಲ್ಲಿ ಒಂದಾಗಿ ಬದಲಾಗಬಹುದು. ಸಾವು ಗುಣಮುಖವಾಗುವಿಕೆ-ಆರೈಕೆ ನೀಡುವ ಜವಾಬ್ದಾರಿಗಳನ್ನು ಇಲ್ಲದಂತೆ ಮಾಡಬಹುದು. ಆದರೆ ಆರೈಕೆ ನೀಡುವ ಅವಧಿಯಲ್ಲಿ ಭಾವನೆಗಳ ತಾಕಲಾಟದಿಂದ ಮಹಿಳೆ ತೋರಿಸಿರಬಹುದಾದ ಸಿಟ್ಟು /ಕಿರಿಕಿರಿಗಳು ಆಕೆಯಲ್ಲಿ ತಪ್ಪಿತಸ್ಥ ಭಾವನೆಯನ್ನು ಮೂಡಿಸಬಹುದು. ಇತರರೂ ಮಹಿಳೆ ನೀಡಿದ ಆರೈಕೆಯೆಲ್ಲವನ್ನೂ ಬದಿಗಿಟ್ಟು ಕೆಲವೊಮ್ಮೆ ಮಾಡಿದ `ಸಿಟ್ಟು-ಕಿರಿಕಿರಿ' ಗಳನ್ನೇ ಎತ್ತಿ ಮಾತನಾಡಿ ಈ ತಪ್ಪಿತಸ್ಥ ಭಾವನೆಯನ್ನು ಹೆಚ್ಚಿಸಬಹುದು. ದೀರ್ಘಕಾಲಿಕ ಕಾಯಿಲೆ ಮುಂದುವರಿದ ಸ್ಥಿತಿಯಲ್ಲಿ ಮಹಿಳೆ ಅನುಭವಿಸುವುದು, "Compassion fatigue" `ಕರುಣೆಯ ದಣಿವು' ಎಂಬ ಸಮಸ್ಯೆ. ಇದು `ಡಿಮೆನ್ಷಿಯಾ' - ಮುಪ್ಪು ಕಾಯಿಲೆಯಂತಹ ಕಾಯಿಲೆಗಳಲ್ಲಿ ಹೆಚ್ಚು. ಕ್ರಮೇಣ ಖಿನ್ನತೆಗೆ ಇದು ಕಾರಣವೂ ಇರಬಹುದು. 

ಸಾವಿರಾರು ಮಹಿಳೆಯರು ಇಂದು ಈ ಮೇಲಿನ ಮೂರು ಹಂತಗಳಲ್ಲಿ ಯಾವುದಾದರೊಂದರಲ್ಲಿ ನರಳುತ್ತಿರುತ್ತಾರೆ. ತಮ್ಮ ಪತಿ /ತಂದೆ -ತಾಯಿ /ಅತ್ತೆ -ಮಾವ ಯಾರಾದರೊಬ್ಬರ ಈ ನರಳುವಿಕೆಯ ಮಧ್ಯೆಯೂ ಆರೈಕೆ ಮಾಡುವುದನ್ನು ಮುಂದುವರಿಸುತ್ತಿರುತ್ತಾರೆ. ಭಾರತದಲ್ಲಂತೂ ಹೀಗೆ ಆರೈಕೆ ಮಾಡುವವರೇ ನಮ್ಮ ಅತ್ಯಂತ ಸುಭದ್ರ, ನಾವು ನಂಬಬಹುದಾದ, `ಸಪೆÇೀರ್ಟ್ ಸಿಸ್ಟಮ್''. ಅವರ ಕೈ ಬಲಪಡಿಸಬೇಕು ಎಂದರೆ ಅದು ಸುಲಭ ಸಾಧ್ಯವಲ್ಲ. ಆದರೆ ಅವರ ಮನಸ್ಸನ್ನು ಕೆಲವು ಒಳ್ಳೆಯ ಮಾತುಗಳಿಂದ ಬಲಪಡಿಸಲು ಸಾಧ್ಯವಿದೆ. ಮಹಿಳೆಯ ಯಾವುದೇ ಕೆಲಸಕ್ಕೆ ಮನ್ನಣೆ ನೀಡುವ ಸಮಾಜದ ರೀತಿ ಬದಲಾದರೆ, `ಆರೈಕೆ' ಎನ್ನುವುದು  ಸಂಕೀರ್ಣ, ಕಗ್ಗಂಟಾದ ವಿಷಯವಾಗದೆ, ಸರಳವಾದ-ಧನ್ಯತೆಯ ವಿಷಯವೂ ಆಗಬಹುದು. 

  • ಡಾ. ಕೆ.ಎಸ್. ಪವಿತ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *