Uncategorizedಅಂಕಣ

ಹೆಣ್ಣು ಹೆಜ್ಜೆ/ ಅತ್ಯಾಚಾರಿಯ ಜಾಡು ಹಿಡಿದು… -ಡಾ. ಕೆ.ಎಸ್. ಪವಿತ್ರ

ಅತ್ಯಾಚಾರ ಎನ್ನುವುದು ವಿಶ್ವಕ್ಕೇ ಅಂಟಿದ ಹೀನ ವ್ಯಾಧಿ. ಭಾರತದಲ್ಲಿ ಮಾತ್ರವಲ್ಲ, ಹಲವಾರು ದೇಶಗಳಲ್ಲಿ ಅತ್ಯಾಚಾರಿಯ ಜಾಡು ಹಿಡಿದು, ಬಂಧಿಸಿ ವಿಚಾರಣೆಗೆ ಒಳಪಡಿಸಿ, ಶಿಕ್ಷೆಗೆ ಗುರಿಪಡಿಸುವುದು ಅತ್ಯಂತ ಕ್ಲಿಷ್ಟಕರ ಕೆಲಸ. ಅಮೆರಿಕದ ಡೆಟ್ರಾಯಿಟ್ ನಗರದಲ್ಲಿ 40 ವರ್ಷಗಳಿಂದ ಕೊಳೆಯುತ್ತಿದ್ದ `ರೇಪ್ ಕಿಟ್' ಗಳನ್ನು ಪರಶೀಲಿಸಲು ಪೊಲೀಸ್ ಅಧಿಕಾರಿಣಿ ಕಿಮ್ ಕಂಡುಹಿಡಿದ `ಟ್ರಾಕಿಂಗ್’ ತಂತ್ರ ಎಲ್ಲ ದೇಶಗಳಿಗೂ ಮಾದರಿಯಾಗಬಲ್ಲುದು.

ಅತ್ಯಾಚಾರಗಳು ಪ್ರತಿನಿತ್ಯ ನಡೆಯುತ್ತಲೇ ಇವೆ. ನಾವು ಬರೆಯುತ್ತಲೇ ಇದ್ದೇವೆ! ಕಳೆದ ಒಂದೆರಡು ವಾರದಲ್ಲಿ ಅತ್ಯಾಚಾರಗಳ ಬಗ್ಗೆ ಎಲ್ಲಾ ಪತ್ರಿಕೆಗಳಲ್ಲೂ, ಮಾಧ್ಯಮಗಳಲ್ಲಿಯೂ ಆದ್ಯತೆಗೆ ಅನುಸಾರವಾಗಿ ಮೊದಲ ಪುಟದಿಂದ, ಅಲ್ಲಲ್ಲಿ ವರದಿಯಾಗಿದೆ. `ಹಿತೈಷಿಣಿ’ ಪತ್ರಿಕೆಯಲ್ಲಿಯೂ ಮೊನ್ನೆಯಷ್ಟೆ `ದೇಶಕಾಲ’ ವಿಭಾಗದಲ್ಲಿ ಅರುಣ್ ಜೋಳದಕೂಡ್ಲಿಗಿ ಅವರು `ನಮ್ಮ ಮನೆಯಲ್ಲೂ ಅತ್ಯಾಚಾರಿ ಇರಬಹುದೇ?’ ಎಂಬ ಪ್ರಶ್ನೆ ಕೇಳಿ ನಮ್ಮೆಲ್ಲರನ್ನೂ ಕ್ಷಣಕಾಲ ಎಚ್ಚರಿಸಿದ್ದಾರೆ. ಭಾರತದಲ್ಲಿ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಇಲ್ಲವೆಂದೂ, ಹಾಗಾಗಿ ಇಲ್ಲಿ ಅತ್ಯಾಚಾರ ಅವ್ಯಾಹತವಾಗಿ ನಡೆಯುತ್ತದೆಂದೂ ನಾವು ಸಾಮಾನ್ಯವಾಗಿ ಭಾವಿಸುತ್ತೇವೆ. ಮೊನ್ನೆಯಷ್ಟೇ ಅತ್ಯಾಚಾರ ಮಾಡುವವರ `ಎಲ್ಲವನ್ನೂ’ ಕತ್ತರಿಸಬೇಕು ಎಂಬ ಹೇಳಿಕೆಯನ್ನು ರಾಜಕಾರಣಿಗಳೊಬ್ಬರು ನೀಡಿ, ಹೊರಗಿನ ಗಲ್ಫ್ ರಾಷ್ಟ್ರಗಳ ಉದಾಹರಣೆ ನೀಡಿದ್ದಾರೆ. ಆದರೆ ಮಹಿಳೆಯರು ಜಗತ್ತಿನ ಎಲ್ಲೆಡೆಯು ಅತ್ಯಾಚಾರಗಳನ್ನು ಎದುರಿಸುತ್ತಾರೆ ಎನ್ನುವುದು, ಅದು ಒಂದು ನಿಜವಾದ ಸಮಸ್ಯೆ ಎಂಬುದು ಒಂದಿಷ್ಟು ಹುಡುಕಿದರೆ ಸುಲಭವಾಗಿ ನಮ್ಮ ಅರಿವಿಗೆ ಬರುತ್ತದೆ. ಅದರಿಂದ ಪಾಠಗಳನ್ನು ಪೊಲೀಸ್ ಇಲಾಖೆ, ಸಮಾಜ, ಆಡಳಿತ ವ್ಯವಸ್ಥೆ, ಗಂಡು-ಹೆಣ್ಣು ಮಕ್ಕಳಿಬ್ಬರೂ ಕಲಿಯಬೇಕಾಗುತ್ತದೆ.

ಕಿಮ್ ವರ್ಥಿ ಎಂಬ ಅಮೆರಿಕೆಯ ಡೆಟ್ರಾಯಿಟ್‍ನ ಕ್ರೈಂ ಬ್ರಾಂಚ್ ಅಧಿಕಾರಿ ತನ್ನ ಅನುಭವಗಳ ಬಗ್ಗೆ ಹೀಗೆ ಮಾತನಾಡುತ್ತಾರೆ. “2009ರ ಆಗ ಸ್ಟ್ ನಲ್ಲಿ ನನ್ನ ಆಫೀಸ್‍ನಲ್ಲಿ ಎರಡು ಮೇಜರ್ ಸ್ಕ್ಯಾಂಡಲ್‍ಗಳು ನಡೆದವು. ಮೊದಲನೆಯದು ಡೆಟ್ರಾಯಿಟ್‍ನ ಜನಪ್ರಿಯ ಮೇಯರ್ ಅನ್ನು ಅರೆಸ್ಟ್ ಮಾಡಿ, ಶಿಕ್ಷೆಗೆ ಗುರಿಪಡಿಸಿದ್ದು, ಎರಡನೆಯದು ಹಗರಣಗಳಿಂದ ಡೆಟ್ರಾಯಿಟ್ ಪೊಲೀಸ್ ಇಲಾಖೆಯ ಕ್ರೈಂ ಲ್ಯಾಬ್ ಮುಚ್ಚಬೇಕಾಗಿ ಬಂದದ್ದು. ನನಗೆ ಆಗ ಅನ್ನಿಸಿದ್ದು ಇದಕ್ಕಿಂತ ಇನ್ನೇನೂ ಕೆಟ್ಟದ್ದಾಗಲು ಸಾಧ್ಯವೇ ಇಲ್ಲ ಅಂತ! ಆದರೆ ನಾನು ಹೀಗೆ ಯೋಚಿಸುತ್ತಿರುವಾಗಲೇ ಪೊಲೀಸ್ ಮತ್ತೆ ಗುಣಗುಟ್ಟಿತು! ಏದುಸಿರು ಬಿಡುತ್ತಿದ್ದ ನನ್ನ ಕೆಳಗಿನ ಅಧಿಕಾರಿ “ನಾನೇನು ನೋಡಿದೆನೆಂದು ನಂಬಲೇ ಸಾಧ್ಯವಿಲ್ಲ”. ನನಗೆ ಆ ಕ್ಷಣ ಇನ್ನೊಂದು ಸ್ಕ್ಯಾಂಡಲ್ ನಡೆಯುವ ಬಗ್ಗೆ ಖಾತರಿಯಾಯಿತು!” ಆತ ಕಂಡದ್ದಾದರೂ ಏನು? ಡೆಟ್ರಾಯಿಟ್ ಪೊಲೀಸ್ ಇಲಾಖೆ ಸಾಕ್ಷ್ಯಗಳನ್ನು ಕೂಡಿಡುತ್ತಿದ್ದ, ಈಗ ಪಾಳು ಬಿದ್ದಿದ್ದ ಗೋದಾಮನ್ನು ಆತ ನೋಡಿದ್ದ. ಆ ಗೋದಾಮಿನಲ್ಲಿ ಆತನಿಗೆ ಸಿಕ್ಕಿದ್ದು 11,341 ಪರೀಕ್ಷೆಯನ್ನೇ ಕಾಣದ “ರೇಪ್‍ಕಿಟ್”ಗಳು. ಅವುಗಳಲ್ಲಿ ಕೆಲವು 40 ವರ್ಷಗಳಷ್ಟು ಹಿಂದಿನದು. ಕಪ್ಪು ದೊಡ್ಡ ಗಾರ್ಬೇಜ್ ಬ್ಯಾಗ್‍ಗಳಲ್ಲಿ, ಖಾಲಿಯಾದ ಡ್ರಂಗಳನ್ನು ತುಂಬಿ ಇವು ಹೊರಗೆ ತುಳುಕುತ್ತಿದ್ದವು.

ಈ 11,341 ರೇಪ್‍ಕಿಟ್‍ಗಳಲ್ಲಿ ಪ್ರತಿ `ಕಿಟ್’ ಕೂಡ ಒಂದು ಸಂತ್ರಸ್ತ ವ್ಯಕ್ತಿ (99 ಭಾಗ ಒಬ್ಬ ಮಹಿಳೆ) ಯನ್ನು ಪ್ರತಿನಿಧಿಸುತ್ತಿತ್ತು. ಗಂಟೆಗಟ್ಟಲೆ ನಡೆಯುವ `ರೇಪ್‍ಕಿಟ್’ನ ಪ್ರಕ್ರಿಯೆಯನ್ನು ಸ್ವಯಂಪ್ರೇರಿತರಾಗಿ ಈ ಮಹಿಳೆಯರು ಸಹಿಸಿಕೊಂಡಿದ್ದರು. ತನಗಾದ ಅನ್ಯಾಯಕ್ಕೆ ನ್ಯಾಯ ಒದಗಿಸಿಕೊಳ್ಳುವ ನಂಬಿಕೆಯನ್ನು ದೃಢವಾಗಿರಿಸಿಕೊಂಡಿದ್ದರು. ಆದರೆ ಈ ರೇಪ್‍ಕಿಟ್‍ಗಳು ಪರೀಕ್ಷೆಗೇ ಒಳಪಟ್ಟಿರಲೇ ಇಲ್ಲ! ಅಪರಾಧಿಗಳು ಆರಾಮವಾಗಿ ಓಡಾಡಿಕೊಂಡು, ಮತ್ತಷ್ಟು ಜನರನ್ನು ನೋವಿಗೀಡುಮಾಡುವ ಕೆಟ್ಟ ಕೆಲಸದಲ್ಲಿ ತೊಡಗಿಕೊಂಡೇ ಇದ್ದರು.

ಸ್ವತಃ ತಾನೂ ಮಹಿಳೆಯಾಗಿ, ತಾನೂ ಲೈಂಗಿಕ ಹಿಂಸೆಯನ್ನು ಅನುಭವಿಸಿ ನೋವನ್ನು ಸಹಿಸಿ-ಗೆದ್ದಿರುವ ಮಹಿಳೆಯಾಗಿರುವ ಕಿಮ್ ಹೇಳುವಂತೆ ಅಮೆರಿಕೆಯಲ್ಲಿ `ರೇಪ್’ಗಳು ತತ್‍ಕ್ಷಣ `report’ ಆಗುತ್ತವೆ. ಆದರೆ ವಿವಿಧ ಅಡ್ಡಿಗಳು ಅವುಗಳ ತನಿಖೆ ನಡೆಯುವಲ್ಲಿ ತಲೆದೋರುತ್ತವೆ. ರೇಪ್ ಮಾಡಿದ ವ್ಯಕ್ತಿ ಸಾಮಾನ್ಯವಾಗಿ ತನ್ನ ಡಿ.ಎನ್.ಎ. ಯನ್ನು `ಕ್ರೈಂ ಸೀನ್’ನಲ್ಲಿ ಬಿಡುತ್ತಾನೆ. ಆದರೆ ಅತ್ಯಾಚಾರಕ್ಕೊಳಗಾದ ವ್ಯಕ್ತಿ ದೇಹವೇ ಒಂದು `ಕ್ರೈಂ ಸೀನ್’ ಆಗಿರುವ ಸಾಧ್ಯತೆ ಹೆಚ್ಚು. ಹಾಗಾಗಿ ಅಮೆರಿಕೆಯಲ್ಲಿ ಅತ್ಯಾಚಾರ ಸಂತ್ರಸ್ತರು ಹೆಚ್ಚಿನ ಬಾರಿ `ರೇಪ್‍ಕಿಟ್’ ಮಾಡುವ ಪ್ರಕ್ರಿಯೆಗೆ `ಅಪರಾಧಿ’ ಯನ್ನು ಕಂಡು ಹಿಡಿಯಲು ಅದು ಸಹಾಯಕ ಎನ್ನುವ ಕಾರಣದಿಂದ ಒಪ್ಪಿಯೇ ಒಪ್ಪುತ್ತಾರೆ. ಸಂತ್ರಸ್ತರ ದೇಹದ ಪ್ರತಿಯೊಂದು ಭಾಗ, ಗಾಯ, ಗುರುತು ಎಲ್ಲವನ್ನೂ ಸ್ವ್ಯಾಬ್ ಪರೀಕ್ಷೆ, ಫೋಟೋ ತೆಗೆದುಕೊಳ್ಳಲಾಗುತ್ತದೆ, ಮಾದರಿ ಸಂಗ್ರಹಿಸಲಾಗುತ್ತದೆ. ಈ ಮಾದರಿಗಳಿಂದ `Genetic Profile’ ತಯಾರಿಸಿ, ಅದನ್ನು Combined DNA Index System CODIS ಎಂಬ ವ್ಯವಸ್ಥೆಗೆ ಹಾಕಿ ನೋಡಲಾಗುತ್ತದೆ. ನಿಮಿಷಗಳಲ್ಲಿ ಅಪರಾಧಿಯನ್ನು ಕಂಡುಹಿಡಿಯುವುದು ಇದರಿಂದ ಸಾಧ್ಯ.

ಆದರೆ ಪ್ರತಿ `ರೇಪ್‍ಕಿಟ್’ನ್ನು ವಿಶ್ಲೇಷಿಸಲು ಅಂದಾಜು 1,500 ಡಾಲರ್ ಬೇಕು. ಆದರೆ ದುಡ್ಡಿನ ಅಡ್ಡಿಯೊಂದೇ ಅಲ್ಲದೇ ಡೆಟ್ರಾಯಿಟ್‍ನಲ್ಲಿ ಕಿಮ್ ಕಂಡ ತಡೆಗೋಡೆಗಳು ಹಲವು. ದಶಕಗಳವರೆಗೆ ರೇಪ್‍ಕಿಟ್‍ಗಳು ಗೋದಾಮಿನಲ್ಲಿ ಕುಳಿತಿದ್ದ ಕಾಲದಲ್ಲಿ ನಾಯಕತ್ವ ಬದಲಾಗಿತ್ತು. ಬೇರೆ ಬೇರೆ ಆದ್ಯತೆಗಳು-ಅಜೆಂಡಾಗಳು. ತರಬೇತಿಯಲ್ಲಿ ನ್ಯೂನತೆಗಳು, ಮಾನವ ಸಂಪನ್ಮೂಲದ ಕೊರತೆ, ಆಗಾಗ್ಗೆ ಏಳುವ ರಾಜಕೀಯ ಲೇಪನದ ಸುಳ್ಳು /ಪರಸ್ಪರ ಒಪ್ಪಂದದಲ್ಲಿ ನಡೆದು, ನಂತರ ವೈಯಕ್ತಿಕ ಲಾಭ/ದ್ವೇಷಗಳಿಗೆ ನಡೆಯುವ ಲೈಂಗಿಕ ಹಗರಣಗಳು ಪೆÇಲೀಸ್ ಅಧಿಕಾರಿಗಳ ಶ್ರಮವನ್ನು ಹೆಚ್ಚು ದುಡಿಸಿಕೊಳ್ಳುವುದು, ಎಲ್ಲ ಅತ್ಯಾಚಾರ ಸಂತ್ರಸ್ತೆಯರ ಬಗೆಗೂ ಅಂತದ್ದೇ ಅನೈತಿಕತೆಯ ಅನುಮಾನ ಏಳುವ ಮನೋಧರ್ಮ ಬೆಳೆಸುವುದು ಇವೆಲ್ಲವೂ ದೊಡ್ಡ ಅಡ್ಡಿಗಳೇ.

ಆದರೆ `ಕಿಮ್' ರಂತಹ ಅಧಿಕಾರಿಗಳು ಏನು ಮಾಡಬಹುದು ಎಂಬುದು ನಮ್ಮೆಲ್ಲರಿಗೆ ಮಾದರಿಯಾಗಬೇಕು. ಪ್ರತಿಯೊಬ್ಬರೂ ಉತ್ತರ ನೀಡಬೇಕಾಗುವ, ಪ್ರಾಮಾಣಿಕ ವ್ಯವಸ್ಥೆಯನ್ನು ಸೃಷ್ಟಿಸುವ ಪ್ರಯೋಗ ಡೆಟ್ರಾಯಿಟ್‍ನಲ್ಲಿ ನಡೆಯಿತು. ಕೊರಿಯರ್ ಕಂಪೆನಿಗಳು ಎಲ್ಲೆಡೆ ಕೆಲಸ ಮಾಡುತ್ತವೆಯಷ್ಟೆ. ಪ್ರತಿ ಕೊರಿಯರ್ ಮಾಡುವಾಗ ಟ್ರ್ಯಾಕ್ ಮಾಡಲು ಸಾಧ್ಯವಷ್ಟೆ. ತೆಗೆದುಕೊಂಡ ವಸ್ತು ಕೊಳ್ಳುವವನ ಮನೆ ಬಾಗಿಲಿಗೆ ಬಂದು ಸೇರುವವರೆಗೆ ಪ್ರತಿ ಹಂತದಲ್ಲೂ ಎಲ್ಲಿದೆ ಎಂಬುದನ್ನು ತಿಳಿಯಬಹುದು. 2015ರಿಂದ 2016ರವರೆಗೆ ಡೆಟ್ರಾಯಿಟ್ ಪೆÇಲೀಸ್ ವ್ಯವಸ್ಥೆಯುಪಿಎಸ್’ ಎಂಬ ಕಂಪೆನಿಯೊಂದಿಗೆ ಸೇರಿ ಹೊಸತಾಗಿ ಬರುತ್ತಿದ್ದ ಪ್ರತಿ ರೇಪ್ ಕಿಟ್‍ನ್ನೂ ಹೀಗೆ ಎಲ್ಲಿದೆ, ಪರೀಕ್ಷೆ ಯಾವ ಹಂತದಲ್ಲಿದೆ ಎನ್ನುವುದನ್ನು ತಿಳಿಯಲು ಸಾಧ್ಯವಾಯಿತು.

ಕಳೆದ 11 ವರ್ಷಗಳಲ್ಲಿ ಯುಪಿಎಸ್' ಎಂಬ ಸರ್ಕಾರೇತರ ವ್ಯವಸ್ಥೆಯೊಂದಿಗೆ ಕಿಮ್ ಮಾಡಿದ ಕೆಲಸದಿಂದ 11,341 ರೇಪ್‍ಕಿಟ್‍ಗಳು ಒಂದೊಂದಾಗಿ ವಿಶ್ಲೇಷಣೆಗೊಳಗಾದವು. 2600 ಜನ ಶಂಕಿತರನ್ನು ಗುರುತಿಸಲಾಯಿತು. 861 ಸರಣಿ ರೇಪಿಸ್ಟ್‍ಗಳನ್ನು ಕಂಡು ಹಿಡಿದರು, ಬಂಧಿಸಿ, ಜೈಲಿಗೆ ಸೇರಿಸಲಾಯಿತು. ಇದು ಒಂದು ಊರಿನ ಕಥೆ! ನಮ್ಮ ಬದುಕಿನ ಪ್ರತಿಯೊಂದು ಅಂಶವೂಟ್ರ್ಯಾಕ್’ ಆಗುವ ಕಾಲವಿದು. ಪ್ರತಿಯೊಂದು ಇಷ್ಟ -ಪ್ರತಿ ಮನಃಸ್ಥಿತಿ, ಶಾಪ್ಪಿಂಗ್-ಬ್ರೌಸಿಂಗ್ ಹಿಸ್ಟರಿ, ಓದಿದ ಹಿಸ್ಟರಿ, ನಮ್ಮ ಪೂರ್ಣ ವೆಬ್ ಹಿಸ್ಟರಿ ಈಗ ಟ್ರ್ಯಾಕ್ ಆಗುತ್ತಿದೆ. ಕಂಪನಿಗಳು ನಮ್ಮ ಜೀವನವನ್ನು ಟ್ರ್ಯಾಕ್' ಮಾಡಿದ ಹಾಗೆ ಅಪರಾಧಿಗಳ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು ತಂತ್ರಜ್ಞಾನದಿಂದ ಸಾಧ್ಯವಿದೆ. 2015ರಲ್ಲಿ ಅಮೆರಿಕಾದಂತಹ ಬಲವಾದ ಪೆÇಲಿಸ್ ವ್ಯವಸ್ಥೆ, ಭ್ರಷ್ಟಾಚಾರ ಕಡಿಮೆಯಿರುವ ಆಡಳಿತ ವ್ಯವಸ್ಥೆ ಘೋಷಿಸಿರುವ ಪರೀಕ್ಷೆಗೆ ಒಳಪಡದರೇಪ್‍ಕಿಟ್’ಗಳ ಸಂಖ್ಯೆ 4 ಲಕ್ಷ! ಇವು ಪರೀಕ್ಷೆಗೆ ಒಳಪಟ್ಟು ಅಪರಾಧಿ ಶಿಕ್ಷೆಗೆ ಗುರಿಯಾಗಿದ್ದರೆ, ಅದರಿಂದ ಸಂತ್ರಸ್ತೆಗೆ ನ್ಯಾಯ ದೊರಕುವುದಷ್ಟೇ ಅಲ್ಲ, ಮತ್ತಷ್ಟು ಅತ್ಯಾಚಾರಗಳನ್ನು ಅದು ತಡೆಯಬಲ್ಲದು ಎನ್ನುವುದು ಗಮನಾರ್ಹ.

ಡಾ. ಕೆ.ಎಸ್. ಪವಿತ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *