ಹೆಣ್ಣು ಹೆಜ್ಜೆ/ ಅಂಕಿ-ಅಂಶ ಹೇಳದ ಅಂತರಂಗದ ವಿಷಯಗಳು – ಡಾ. ಕೆ.ಎಸ್. ಪವಿತ್ರ

ಪ್ರಗತಿಪರ ಧೋರಣೆ-ವಿದ್ಯೆ-ಆಧುನಿಕತೆ ಇವೆಲ್ಲಕ್ಕೂ, ನಮ್ಮ ಒಳಗಿನಿಂದ ಗಟ್ಟಿಯಾಗಿ ಬೇರೂರಿರುವ ಹಲವು ಅಂಶಗಳಿಗೂ ಸಂಬಂಧವಿರಲಾರದು ಎಂದೇ ಅನ್ನಿಸುತ್ತದೆ. ಮೊದಲಿನಿಂದ ಬೆಳೆದು ಬಂದಿರುವ ನಂಬಿಕೆಗಳು, ನಮ್ಮ ಸುತ್ತಮುತ್ತಲಿನ ದೈನಂದಿನ ಅನುಭವಗಳಿಂದ ಮತ್ತಷ್ಟು ಗಟ್ಟಿಯಾಗುತ್ತವೆ. ಮಹಿಳೆಯ ಕೆಲಸಕ್ಕೆ ಮನ್ನಣೆ- ದುಡಿಮೆಗೆ ಹಣ, ಪುರುಷನಂತೆಯೇ ಒಬ್ಬ ವ್ಯಕ್ತಿಯಾಗಿ ಏನನ್ನಾದರೂ ಸಾಧಿಸುವ ಮಾನಸಿಕ ಅವಶ್ಯಕತೆ ಇವೆ ಎನ್ನುವುದನ್ನು ಸಮಾಜ ಗುರುತಿಸುವುದು ನಮಗಿನ್ನೂ ಸಾಧ್ಯವಾಗಿಲ್ಲ. ಅದು ನಮಗೆ ಇನ್ನೂ `ಸಹಜ’ ಎಂಬಂತೆ ರೂಢಿಯಾಗಿಲ್ಲ.

ಮೊನ್ನೆ ಮೊನ್ನೆಯಷ್ಟೇ ರಾಷ್ಟ್ರೀಯ ಹೆಣ್ಣುಮಕ್ಕಳ ದಿನವನ್ನು ಆಚರಿಸಿದ್ದಾಗಿದೆ. ಜೊತೆಗೇ 2019-20ನೇ ಸಾಲಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿ ಕೂಡ ಬಿಡುಗಡೆಯಾಗಿದೆ. ಅದರ ಪ್ರಕಾರ ಕಳೆದ 5 ವರ್ಷಗಳಲ್ಲಿ ನಮ್ಮ ರಾಜ್ಯದ ಲಿಂಗಾನುಪಾತ ಸುಧಾರಿಸಿದೆ. ಹೆಣ್ಣು ಮಕ್ಕಳ ಜನನ ಪ್ರಮಾಣದಲ್ಲಿ ಗಣನೀಯವಾಗಿ ಏರಿಕೆಯಾಗಿದೆ. 2015-16ರ ಸಮೀಕ್ಷೆಯ ಪ್ರಕಾರ ನಗರ ಪ್ರದೇಶದಲ್ಲಿ ಪ್ರತಿ 1,000 ಗಂಡು ಮಕ್ಕಳಿಗೆ, 978 ಹೆಣ್ಣು ಮಕ್ಕಳು, ಗ್ರಾಮೀಣ ಪ್ರದೇಶದಲ್ಲಿ ಪ್ರತಿ 1,000 ಗಂಡು ಮಕ್ಕಳಿಗೆ 910 ಹೆಣ್ಣು ಮಕ್ಕಳು ಇದ್ದರು. ಇತ್ತೀಚಿನ ಸಮೀಕ್ಷೆಯ ಪ್ರಕಾರ ಪ್ರತಿ ಸಾವಿರ ಗಂಡು ಮಕ್ಕಳಿಗೆ ನಗರದ ಪ್ರದೇಶದಲ್ಲಿ 1,063 ಮತ್ತು ಗ್ರಾಮೀಣ ಪ್ರದೇಶದಲ್ಲಿ 931ಕ್ಕೆ ಹೆಣ್ಣು ಮಕ್ಕಳ ಸಂಖ್ಯೆ ಏರಿದೆ. ನಮ್ಮ ರಾಜ್ಯದಲ್ಲಿ ಪುರುಷ-ಮಹಿಳೆಯರ ಅನುಪಾತದಲ್ಲಿಯೂ 1000 : 979 ರಿಂದ 1000:1035ಕ್ಕೆ ಸುಧಾರಣೆ ಕಂಡುಬಂದಿದೆ.

ಮೇಲುನೋಟಕ್ಕೆ ಇದು ಬಹು ಸಂತಸ ತರುವ ಸಂಗತಿಯೆನಿಸಬಹುದು. ಆದರೆ ಲಿಂಗಾನುಪಾತ ಸುಧಾರಿಸಿದರೆ ನಮ್ಮ ಕೆಲಸ ಮುಗಿಯಿತು ಎಂದು ಭಾವಿಸಿದರೆ ಅದು ತಪ್ಪು. “ಗಂಡು ಹೆತ್ತವರು ಗುಂಡಾದರು, ಹೆಣ್ಣು ಹೆತ್ತವರು ಹುಣ್ಣಾದರು” ಎಂಬ ಗಾದೆ ಇಂದಿಗೂ ನಿಜವೇ ಎನ್ನಿಸುವಷ್ಟರ ಮಟ್ಟಿಗೆ ಹೆಣ್ಣು ಮಕ್ಕಳು, ಅವರನ್ನು ಹೆತ್ತವರು ಕಷ್ಟಪಡುವ ಪರಿಸ್ಥಿತಿಯನ್ನು ಇಂದೂ ಒಬ್ಬ ಮನೋವೈದ್ಯೆಯಾಗಿ ನಾನು ಪ್ರತಿದಿನ ನೋಡುತ್ತೇನೆ. ಇಂತಹ ಪರಿಸ್ಥಿತಿಯಲ್ಲಿ ಲಿಂಗಾನುಪಾತ ಯಾವುದೇ ರೀತಿಯಲ್ಲಿ ಹೆಚ್ಚಾದರೂ ಅದು ಮಹಿಳೆಯರಿಗೆ ಮತ್ತಷ್ಟು ಹೊಸ ಸವಾಲುಗಳನ್ನೇ ತರಬಹುದು ಎನಿಸುತ್ತದೆ.

ನಮ್ಮ ಸಮಾಜದ ಒಟ್ಟು ಮಾನಸಿಕ ನೆಲೆಗಟ್ಟನ್ನು ಸ್ವಲ್ಪ ವಿವರವಾಗಿ ವಿಶ್ಲೇಷಿಸಿ ನೋಡೋಣ. ಪ್ರಗತಿಪರ ಧೋರಣೆ-ವಿದ್ಯೆ-ಆಧುನಿಕತೆ ಇವೆಲ್ಲಕ್ಕೂ, ನಮ್ಮ ಒಳಗಿನಿಂದ ಗಟ್ಟಿಯಾಗಿ ಬೇರೂರಿರುವ ಹಲವು ಅಂಶಗಳಿಗೂ ಸಂಬಂಧವಿರಲಾರದು ಎಂದೇ ನನಗನ್ನಿಸುತ್ತದೆ. ಮೊದಲಿನಿಂದ ಬೆಳೆದು ಬಂದಿರುವ ನಂಬಿಕೆಗಳು, ನಮ್ಮ ಸುತ್ತಮುತ್ತಲಿನ ದೈನಂದಿನ ಅನುಭವಗಳಿಂದ ಮತ್ತಷ್ಟು ಗಟ್ಟಿಯಾಗುತ್ತವೆ. ಸಾಮಾಜಿಕವಾಗಿ ಬಹು ಜನರು `ಸರಿ’, `ಸೂಕ್ತ’ ಎಂದು ನಂಬಿರುವ ಭಾವನೆಗಳೊಡನೆ ನಾವು ಹೊಂದಿಕೊಳ್ಳುವುದು ಸುಲಭ ಎನಿಸುತ್ತದೆ. ಉದಾಹರಣೆಗೆ ನನ್ನ ವೈಯಕ್ತಿಕ ಅನುಭವಗಳೆರಡನ್ನು ಇಲ್ಲಿ ಹಂಚಿಕೊಳ್ಳಬಯಸುತ್ತೇನೆ. ನನ್ನ ಮೊದಲ ಮಗು ಚಿಕ್ಕವಳಿರುವಾಗ, ಸುಮಾರು ಒಂದು ವರ್ಷದವಳಿರಬೇಕು, ನನಗೆ ಒಂದು ಸಭೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಅದಕ್ಕೆ ಕಾರಣ ನನ್ನ ಮಗು ಬಿಡದಿದ್ದಾಗಲೀ, ನಾನು ಅವಳನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆಯಾಗಲೀ ಅಲ್ಲ. ಅಂದು ನಾನು `ಆನ್‍ಕಾಲ್’ ಇರಬೇಕಾಗಿತ್ತು. ಹಾಗೆ ಸಭೆಗೆ ಹೋದ ನನ್ನ ಪತಿಯ ಜೊತೆ ಹೇಳಿ ಕಳಿಸಿಯೂ ಇದ್ದೆ. ಆದರೆ ಮುಂದಿನ ಬಾರಿ ನಾನು ಅದೇ ರೀತಿಯ ಸಭೆಗೆ ಹೋದಾಗ ಅಲ್ಲಿದ್ದವರೆಲ್ಲರೂ ಮತ್ತೆ ಮತ್ತೆ ನೆನಪಿಸಿಕೊಂಡು ಹೇಳಿದ್ದೆಂದರೆ “ಓ! ನೀವು ಮಗು ನೋಡಿಕೊಳ್ಳುವುದರಲ್ಲಿ `ಬ್ಯುಸಿ’ ಯಾಗಿರಬೇಕು ಅಂತ ಮಾತಾಡಿಕೊಂಡೆವು”!

ಹೀಗೆ ಮಹಿಳೆಯೊಬ್ಬಳು ಅತ್ತೆ/ಮಾವ/ಅಪ್ಪ/ ಅಮ್ಮಂದಿರಿಗೆ ಆರೋಗ್ಯ ಸರಿಯಿಲ್ಲ/ಮನೆಗೆ ನೆಂಟರು ಬರುತ್ತಾರೆ/ಒಳಗಿಲ್ಲ’/ `ಮಕ್ಕಳನ್ನು ನೋಡಿಕೊಳ್ಳಬೇಕು’ ಎಂಬ ಕಾರಣಗಳನ್ನು ನೀಡಿ ಯಾವುದಾದರೂ ಸಮಾರಂಭ/ಸಭೆಗೆ ಬರದಿದ್ದರೆ, ಅದೊಂದು ಎಲ್ಲರೂ ಒಪ್ಪಬಹುದಾದ, ಕಾರಣ ಎಂಬ ಅನುಭವ ಹಲವು ಬಾರಿ ನನಗಾಗಿದೆ. ಅದೇ ನಮಗೆ ನಿಜವಾಗಿಯೂ ಇರಬಹುದಾದ ಇತರ ಕೆಲಸ -ಕಾರ್ಯಗಳು, ನಮ್ಮದೇ ಖಾಸಗಿ ಸಮಯ ಇವುಗಳ ಕಾರಣದಿಂದ ಹೋಗದೆ, ನಿಜ ನುಡಿದರೆ ಆಗ ಬರಬಹುದಾದ ಟೀಕೆ “ಸ್ವಲ್ಪ ಹೊತ್ತು ಬಂದು ಹೋಗಿದ್ದರೆ ಏನಾಗ್ತಿತ್ತು!”. ಇದೇ ರೀತಿಯ ಯಾವ ಟೀಕೆ-ನಿರೀಕ್ಷೆಗಳೂ ಪುರುಷರಿಗೆ ಅನ್ವಯಿಸುವುದಿಲ್ಲವೆಂಬುದು ಗಮನಾರ್ಹ.

ಇನ್ನೊಮ್ಮೆ ನಾನು ಕಾರು ಚಲಾಯಿಸುತ್ತಿದ್ದೆ. ನನ್ನ ಪತಿ ಪಕ್ಕ ಕುಳಿತಿದ್ದರು. ಹೋಟೆಲಿಗೆ ಹೋಗಿದ್ದೆವು. ತಿಂಡಿ ತಿಂದು, ವಾಪಾಸ್ ಬಂದು ಕಾರನ್ನು ಹಿಂದೆ ಚಲಾಯಿಸಿದೆ. ಪಾರ್ಕಿಂಗ್‍ನಲ್ಲಿ ಇರುತ್ತಿದ್ದ `ಸೆಕ್ಯೂರಿಟಿ’ ಯವ ಬಂದು ನಾನು ತಪ್ಪುಮಾಡಬಹುದೆಂಬ ಚಡಪಡಿಕೆಯಿಂದಲೇ ತುಂಬಾ ಸಹಾಯ ಮಾಡಿದ. ನನ್ನ ಕಾರಿಗೇನೋ `ರಿವರ್ಸ್ ಅಸಿಸ್ಟೆನ್ಸ್’ ಇತ್ತು. ಆದರೂ ಆತನ ಉತ್ಸಾಹಕ್ಕೇಕೆ ಭಂಗ ಮಾಡಬೇಕೆಂಬ ಭಾವನೆಯಿಂದ ಆತನ ನನಗೆ `ಗೈಡ್’ ಮಾಡಲು ಬಿಟ್ಟೆ. ಆತ ಮಾಡಿದ ಸಹಾಯಕ್ಕೆ ಕೃತಜ್ಞತೆಯಿದ `ಟಿಪ್’ ಕೊಡೋಣ ಎನಿಸಿತು. ಆತನ ಮುಂದೆಯೇ ಪರ್ಸ್ ತೆಗೆದು, ನಾನೇ ಸ್ವತಃ ದುಡಿದ ದುಡ್ಡಿನಿಂದ ದುಡ್ಡು ತೆಗೆದು ಕೊಟ್ಟೆ. ಆತ ಸಂತಸ-ಕೃತಜ್ಞತೆಗಳಿಂದ ತೆಗೆದುಕೊಂಡ. ಆಮೇಲೆ ಪಕ್ಕಕ್ಕೆ ತಿರುಗಿ ನನ್ನ ಪತಿಯ ಬಳಿ “ಥ್ಯಾಂಕ್ಯೂ ಸರ್” ಎಂದ! ಅಂದರೆ ದುಡ್ಡು ನಾನು ಕೊಟ್ಟರೂ, ಅದು ಬಂದಿದ್ದು ಒಬ್ಬ ಪುರುಷನಿಂದಲೇ ಎಂಬ ಭಾವನೆ ಅಲ್ಲಿದ್ದಂತೆ ನನ್ನಗನ್ನಿಸಿತು. ಈ ನಡವಳಿಕೆಗೆ ಇತರ ವಿವರಣೆಗಳೂ ಇರಬಹುದಾದರೂ, ಮಹಿಳೆಯ ಕೆಲಸಕ್ಕೆ ಮನ್ನಣೆ- ದುಡಿಮೆಗೆ ಹಣ, ಪುರುಷನಂತೆಯೇ ಒಬ್ಬ ವ್ಯಕ್ತಿಯಾಗಿ ಏನನ್ನಾದರೂ ಸಾಧಿಸುವ ಮಾನಸಿಕ ಅವಶ್ಯಕತೆ ಇವೆ ಎನ್ನುವುದನ್ನು ಸಮಾಜ (ಸ್ವತಃ ಮಹಿಳೆಯರನ್ನು ಒಳಗೊಂಡಂತೆ) ಗುರುತಿಸುವುದು ನಮಗಿನ್ನೂ ಸಾಧ್ಯವಾಗಿಲ್ಲ. ಅದು ಪ್ರಯತ್ನಪೂರ್ವಕವಾಗಿ ಕೆಲವರಲ್ಲಿ ಬರಬಹುದೇ ಹೊರತು, ಅದು ನಮಗೆ ಇನ್ನೂ `ಸಹಜ’ ಎಂಬಂತೆ ರೂಢಿಯಾಗಿಲ್ಲ.

ಇಂತಹ ಅನುಭವಗಳಿಗೂ ಮಹಿಳೆಯರಲ್ಲಿ ಗಂಡು ಮಗುವನ್ನು ಪಡೆಯುವ ಹಂಬಲಕ್ಕೂ ಇರುವ ಸಂಬಂಧವೇನು? ಸಹಜವಾಗಿ ಗಂಡು ಮಗುವನ್ನು ಪಡೆಯುವುದು ತಾಯಿಯ ಸ್ಥಾನಮಾನವನ್ನು ಏರಿಸುತ್ತದೆ. ಮಗ ನಿಜವಾಗಿ ಮುಂದೆ ತಂದೆ-ತಾಯಿಗಳನ್ನು ನೋಡಿಕೊಳ್ಳುತ್ತಾನೋ ಇಲ್ಲವೋ, ಮಾನಸಿಕವಾಗಿ ತನ್ನನ್ನು ಭವಿಷ್ಯದಲ್ಲಿ ನೋಡಿಕೊಳ್ಳಲು `ಮಗ’ನಿದ್ದಾನೆ ಎಂಬ ಧೈರ್ಯ ಮೂಡಿಬಿಡುತ್ತದೆ. ಗಂಡು ಮಕ್ಕಳನ್ನು ಹೆತ್ತ ತಾಯಂದಿರು ತಾವೂ ಗಂಡಸರಂತೆ ಪ್ರಾಯೋಗಿಕವಾಗಿ ಯೋಚಿಸುವುದನ್ನು, ಹೆಣ್ಣು ಮಕ್ಕಳಿಗೆ `ಹೇಗಿರಬೇಕು’ ಎಂಬ ಬುದ್ಧಿ ಹೇಳುವುದನ್ನು, ಎಂಬುದನ್ನು ಸಾಮಾನ್ಯವಾಗಿ ಸುತ್ತಮುತ್ತಲಲ್ಲಿ ನೋಡಿಯೇ ಇರುತ್ತೇವೆ. ಇವು ಸಹಜ. ಏಕೆಂದರೆ ತಾಯಿ ಯಾವಾಗಲೂ ತನ್ನನ್ನು ತಾನು ಗುರುತಿಸಿಕೊಳ್ಳುವುದು ತನ್ನ ಮಕ್ಕಳೊಂದಿಗೆ. ಹಾಗಾಗಿ ಈ ಪರಿಸ್ಥಿತಿಯನ್ನು ನಾವು ಬದಲಿಸದ ಹೊರತು ಅನುಪಾತ- ಅಂಕಿ ಅಂಶಗಳು ಅರ್ಥಹೀನ ಎನಿಸುತ್ತವೆ.

ಮಿಶ್ರ ಭಾವನೆ: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಅಚ್ಚರಿ ಮೂಡಿಸುವ ಇನ್ನೂ ಕೆಲ ಅಂಶಗಳನ್ನು ಗುರುತಿಸಿದೆ. ಅದೆಂದರೆ ಮಹಿಳೆಯರ ಮೇಲಿನ ದೌರ್ಜನ್ಯ ಕಳೆದ 5 ವರ್ಷಗಳಲ್ಲಿ ಹೆಚ್ಚಾಗಿದೆ. ಇದಕ್ಕೆ ವಿರುದ್ಧವಾಗಿ ಬ್ಯಾಂಕ್ ಖಾತೆಗಳನ್ನು ಹೊಂದಿರುವ ಸಂಖ್ಯೆ ಮೂಗಿನ ಮೇಲೆ ಬೆರಳಿಡುವಷ್ಟು ಹೆಚ್ಚಾಗಿದೆ.. ಹಾಗೆಯೇ ಶೇಕಡಾ 92%ರಷ್ಟು ಮಹಿಳೆಯರು ಋತುಚಕ್ರ-ಋತುಸ್ರಾವದ ಸಂದರ್ಭದಲ್ಲಿ ಸ್ವಚ್ಚತಾ ಕ್ರಮ-ಆರೋಗ್ಯಕರವಾದ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದಾರೆ ಎಂಬುದು ಕಂಡು ಬಂದಿದೆ. ಇವೆಲ್ಲವೂ ಮನೋವೈದ್ಯೆಯಾಗಿ ನನ್ನಲ್ಲಿ ಮಿಶ್ರ ಭಾವನೆಗಳನ್ನು ತರುತ್ತದೆ.

ಇಂದು ಜಗತ್ತಿನಾದ್ಯಂತ ದೌರ್ಜನ್ಯದ ವಿರುದ್ಧ, ಸ್ತ್ರೀಭ್ರೂಣ ಹತ್ಯೆಯ ವಿರುದ್ಧ ಹಲವು ಕಾನೂನುಗಳಿವೆ. ಮಹಿಳೆಯರು ಆರ್ಥಿಕವಾಗಿ ಸಬಲರಾಗಿದ್ದಾರೆ. ನನ್ನ ಅಜ್ಜಿಯ ಕಾಲಕ್ಕೆ ಹೋಲಿಸಿದರೆ ನಮ್ಮ ಕಾಲವಿಂದು ಗಮನಾರ್ಹವಾಗಿ ಬದಲಾಗಿದೆ. ಇವೆಲ್ಲವೂ ಮಹತ್ವದ ಬದಲಾವಣೆಗಳು. ಆದರೆ ಮಕ್ಕಳನ್ನು ಲಿಂಗಾಧಾರಿತವಾಗಿ ಬೆಳೆಸುವುದನ್ನು ಬಿಟ್ಟು, ನಾವು ಆಸಕ್ತಿಯಿಂದ, ಕುತೂಹಲದಿಂದ, `ಎಲ್ಲ’ವನ್ನೂ ಗಂಡು-ಹೆಣ್ಣು ಮಕ್ಕಳಿಬ್ಬರಿಗೂ ಕಲಿಸುವುದನ್ನು ಆರಂಭಿಸುವುದು, ನಾವು ಮೊದಲಿನಿಂದ ಕಲಿತಿರುವ ಅಭ್ಯಾಸಗಳನ್ನು ಇಂದಿನ ಜಗತ್ತಿಗೆ ಮಾರ್ಪಡಿಸಿಕೊಳ್ಳುವತ್ತ ಗಮನ ಹರಿಸುವುದು ಆಗಲೇಬೇಕಾದ ಬದಲಾವಣೆ.

ಗಂಡು ಮಕ್ಕಳು-ಹೆಣ್ಣು ಮಕ್ಕಳಿಬ್ಬರನ್ನೂ ಬೆಳೆಸುವ ರೀತಿಗಳಲ್ಲಿ ಬದಲಾವಣೆಗಳು ಆರಂಭವಾಗದ ಹೊರತು, ಅವರು ಮತ್ತೊಬ್ಬರನ್ನು ಗೌರವಿಸುವ, ಅರ್ಥ ಮಾಡಿಕೊಳ್ಳುವ ಸಾಮಥ್ರ್ಯ ಪಡೆಯಲಾರರು. ಜೈವಿಕವಾಗಿ ಹೆಣ್ಣು-ಗಂಡು ಬೇರೆಯಿರಬಹುದು. ವಿಭಿನ್ನ ಯೋಚನಾ ರೀತಿ -ಸಾಮಥ್ರ್ಯಗಳು ಇರಬಹುದು. ಆದರೆ ತಂದೆ-ತಾಯಿಗಳನ್ನು ನೋಡಿಕೊಳ್ಳುವ, ಆರ್ಥಿಕವಾಗಿ ಸಬಲರಾಗುವ ಸಾಮಥ್ರ್ಯಕ್ಕೆ ಅದು ಅಡ್ಡಿಯಾಗಬೇಕಿಲ್ಲ. ಇಡೀ ಸಮಾಜದ ಮಾನಸಿಕ ನೆಲೆಗಟ್ಟು ಈ ಅಂಶದಲ್ಲಿ ಬದಲಾವಣೆ ಕಾಣದಿದ್ದರೆ, ಲಿಂಗ ಅನುಪಾತ ಹೇಗೇ ಬದಲಾದರೂ ಅದು ಸಮಾಜಕ್ಕೆ ಮತ್ತಷ್ಟು ಹೊಸ ಸವಾಲುಗಳನ್ನೇ ತಂದೊಡ್ಡಬಹುದು. ಹಳೆಯ ಗಾದೆ ಎನಿಸುವ “ಗಂಡು ಹೆತ್ತವರು ಗುಂಡಾದರು, ಹೆಣ್ಣು ಹೆತ್ತವರು ಹುಣ್ಣಾದರು” ಎಂಬ ಮಾತು ಹೊಸ ಹೊಸ ರೀತಿಗಳಲ್ಲಿ ನಿಜವೇ ಆಗಬಹುದು!
Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *