ಹೆಣ್ಣು ಜಾತಿ: ಆಯ್ಕೆಯ ಪ್ರಶ್ನೆಗಳು – ರೂಪ ಹಾಸನ

ಈಗ್ಗೆ ಕೆಲವು ತಿಂಗಳ ಹಿಂದೆ, ಉತ್ತರ ಭಾರತದ ಧಾರ್ಮಿಕ ಸಂಘಟನೆಯೊಂದು “ಬೇಟಿ ಬಚಾವೋ, ಬಹೂ ಲಾವೋ” ಆಂದೋಲನವನ್ನು ಪ್ರಾರಂಭಿಸಿದ ಸುದ್ದಿ, ಪತ್ರಿಕೆಗಳಲ್ಲಿ ಓದಿ ದಿಗ್ಭ್ರಾಂತಳಾದೆ. ಇದರ ಹಿಂದೆ ಇರುವುದು ಹೆಣ್ಣಿನ ಬಗೆಗಿನ ಅಪರಿಮಿತ ಪ್ರೀತಿ-ಗೌರವ ಎಂದುಕೊಂಡರೆ ಮೂರ್ಖರಾದೇವು! ‘ತಮ್ಮ ಮತ/ಜಾತಿಯಲ್ಲಿ ಹುಟ್ಟಿರುವ ಹೆಣ್ಣುಮಗಳನ್ನು ತಮ್ಮ ಮತ/ಜಾತಿಯಲ್ಲೇ ಉಳಿಸಿಕೊಳ್ಳಿ, ಬೇರೆ ಮತ/ಜಾತಿಯ ಹೆಣ್ಣನ್ನು ಮದುವೆಯಾಗಿ ತಮ್ಮ ಮತ/ಧರ್ಮಕ್ಕೆ ಕರೆತನ್ನಿ’ ಎಂಬ ಅಘೋಷಿತ ಸಂದೇಶ ಆ ಘೋಷಣೆಯ ಹಿಂದಿರುವುದು ಅರ್ಥವಾಗದ್ದೇನಲ್ಲಾ.

ಅದೊಂದು ಧಾರ್ಮಿಕ ಸಂಘಟನೆಯ ಬಹಿರಂಗ ಹೇಳಿಕೆಯಷ್ಟೇ. ಆದರೆ ಹೆಣ್ಣನ್ನು ಒಂದು ಜೀವವೆಂದು ಕಾಣುವ ಕಣ್ಣಿಲ್ಲದೇ, ವಸ್ತುವಿನಂತೆ, ‘ಆಸ್ತಿ’ಯಂತೆ ಪರಿಗಣಿಸುವ ಎಲ್ಲ ಮತ/ಧರ್ಮಗಳ ಗುಪ್ತ ಅಜೆಂಡಾ ಬಹುಶಃ ಇದಕ್ಕಿಂಥಾ ಭಿನ್ನವಾಗಿಲ್ಲವೆನಿಸುತ್ತದೆ. ಇಡೀ ಸಮಾಜದ ದೃಷ್ಟಿಕೋನವೇ ಹೆಣ್ಣನ್ನು ಲಾಭ-ನಷ್ಟದ ಸರಕಿನಂತೆ ಕಾಣುವುದಾಗಿರುವಾಗ ಹೆಣ್ಣಿನ ಅಸ್ತಿತ್ವವನ್ನು, ಅಸ್ಮಿತೆಯನ್ನು, ಕುರುಹನ್ನು ಯಾವ ಮಾಯಾದೀಪ ಹಿಡಿದು ಹುಡುಕೋಣ?
ಇದಕ್ಕೆ ಕಾರಣವನ್ನು ಹುಡುಕುತ್ತಾ ಹೊರಟರೆ, ನಮ್ಮ ಪಿತೃಪ್ರಧಾನ ವ್ಯವಸ್ಥೆ ತನ್ನ ಮೂಗಿನ ನೇರಕ್ಕೇ ಸೃಷ್ಟಿಸಿಕೊಂಡಿರುವ ಕೌಟುಂಬಿಕ ವ್ಯವಸ್ಥೆಗೆ ಬಂದು ನಿಲ್ಲುತ್ತೇವೆ. ಇಲ್ಲಿ ಹೆಣ್ಣು ತನ್ನ ಮೂಲ ಮಣ್ಣಿಗೆ ಊರಿಕೊಂಡಿರುವ ತಾಯಿಬೇರನ್ನು ಕಿತ್ತುಕೊಂಡು ಮದುವೆಯ ಹೆಸರಿನಲ್ಲಿ ಬೇರೊಂದು ಮಣ್ಣಿನಲ್ಲಿ ತನ್ನ ಅಸ್ತಿತ್ವ ಕಂಡುಕೊಳ್ಳಲು ಅನುವಾಗಬೇಕು. ಹೆಣ್ಣಿನಂತೆ ಅಪರಿಚಿತ ಪರಿಸರದಲ್ಲಿ, ಕುಟುಂಬದ ಪ್ರತಿ ಸದಸ್ಯರೊಂದಿಗೂ ‘ಹೊಂದಿಕೊಳ್ಳುವ’, ತನ್ನ ಇಷ್ಟಾನಿಷ್ಟಗಳನ್ನು ಅವುಡುಗಚ್ಚಿ ಹೊಟ್ಟೆಯೊಳಗಡಗಿಸಿಟ್ಟು ಬಾಳ್ವೆ ಮಾಡುವ ಸಂಕಷ್ಟ ಪುರುಷನಿಗಿಲ್ಲದಂತೆ ನಾಜೂಕಾಗಿ ಕುಟುಂಬದ ಪದರಗಳನ್ನು ಹೆಣೆಯಲಾಗಿದೆ. ಹೀಗಾಗಿ ತವರಿನವರು ‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ’ ಎಂದರೆ, ಪತಿಯ ಮನೆಯವರು ‘ಮಗ ನಮ್ಮವನಾದರೆ, ಸೊಸೆ ನಮ್ಮವಳೇ?’ ಎನ್ನುತ್ತಾರೆ! ಹೆಣ್ಣನ್ನು ಹೊರ ದಬ್ಬುವ, ಒಳ ಸೇರಿಸದ ಎರಡಲುಗಿನ ಕತ್ತಿಯ ಮಧ್ಯೆ ಸಿಕ್ಕ ಹೆಣ್ಣಿನ ಅಸ್ತಿತ್ವ ಎಲ್ಲಿದೆ? ಒಟ್ಟಿನಲ್ಲಿ ಅವಳು ಸದಾ ಎಲ್ಲಿಯೂ ಸಲ್ಲದವಳು! ಹೊರಗಿನವಳು!
ಜೊತೆಗೀಗ ಅಂಕೆಯಿಲ್ಲದೇ ನಡೆಸುತ್ತಿರುವ ಹೆಣ್ಣು ಭ್ರೂಣಹತ್ಯೆಯಿಂದಾಗಿ, ಹೆಣ್ಣುಮಕ್ಕಳು ಹುಟ್ಟುವ ಸಂಖ್ಯೆಯೇ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಇದರಿಂದಾಗಿ, ಎಲ್ಲ ಜಾತಿ/ಮತಗಳಲ್ಲೂ ಈಗ ವಧುವಿನ ತೀವ್ರ ಕೊರತೆ ಉಂಟಾಗಿದೆ! 20011ರ ಜನಗಣತಿಯಂತೆ ಧರ್ಮಾಧಾರಿತವಾಗಿ ಪ್ರತಿ 1000 ಪುರುಷರಿಗೆ ಉಳಿದಿರುವ ಹೆಣ್ಣುಮಕ್ಕಳ ಸಂಖ್ಯೆ ಹೀಗಿದೆ….. ಸಿಖ್-828 ಜೈನ-889, ಹಿಂದೂ-913, ಬೌದ್ಧ-933, ಮುಸ್ಲಿಂ-943, ಕ್ರೈಸ್ತ-958. ಹಾಗಾದರೆ, ತಮ್ಮ ಧರ್ಮಗಳಲ್ಲಿ ಉಂಟಾಗಿರುವ ಹೆಣ್ಣಿನ ಈ ಅಗಾಧ ಕೊರತೆಯನ್ನು ನೀಗುವುದು ಹೇಗೆ? ಹೀಗಾಗಿ ಹೆಣ್ಣು “ಬೇಟಿ ಬಚಾವೋ, ಬಹೂ ಲಾವೋ” ಎಂಬ ಕುತಂತ್ರದ ಬಲಿಪಶುವಾಗಬೇಕಾಗಿದೆ. ಈ ಪರಿಸ್ಥಿತಿ ಹೀಗೇ ಮುಂದುವರೆದರೆ ಹೆಣ್ಣಿಗೆ ಉಳಿಗಾಲವಿದೆಯೇ? ಮುಂದೆ ಹೆಣ್ಣಿಗಾಗಿ ಜಾತಿ-ಮತಗಳ ನಡುವೆ ಭೀಕರ ಕಾಳಗಗಳೇ ಸೃಷ್ಟಿಯಾಗುವ ಮುನ್ಸೂಚನೆ ಇದು! ಹೆಣ್ಣು ಹುಟ್ಟುವ ಹಕ್ಕನ್ನೊಳಗೊಂಡು, ಹೆಣ್ಣಿನ ಎಲ್ಲ ರೀತಿಯ ಆಯ್ಕೆಯ ಹಕ್ಕನ್ನು ದಮನಿಸುವ ನೀಚತನಗಳು, ಮರ್ಯಾದಾಹೀನ ಹತ್ಯೆಯ ಹೆಸರಿನ ಕೊಲೆಗಳು, ಕೆಲವೆಡೆ ಹೆಣ್ಣುಮಕ್ಕಳು ಅನ್ಯ ಜಾತಿ/ಮತದವರನ್ನು ಪ್ರೀತಿಸುತ್ತಿದ್ದರೆ, ಕೇವಲ ಸಲಿಗೆಯಿಂದಿದ್ದರೂ ಅವರ ಮೇಲೆ ದಾಳಿ ನಡೆಸುವ ದೌರ್ಜನ್ಯದ ಕರಾಳ ರೂಪವನ್ನು ಈಗಾಗಲೇ ಕಾಣುತ್ತಿದ್ದೇವೆ.
ಆದರೆ ಇದನ್ನು ಮೀರಲು ದಾರಿ ಎಲ್ಲಿದೆ? ಯಾವುದೇ ಜಾತಿ/ಮತಗಳನ್ನು ಸೃಷ್ಟಿಸದ ಹೆಣ್ಣು ಬಹುಶಃ ಅದರೊಳಗಿದ್ದೇ ಅದರ ಕಟ್ಟುಪಾಡನ್ನು ಶಕ್ತಿ ಮೀರಿ ಮೀರಲು ಪ್ರಯತ್ನಿಸಬೇಕಿದೆಯೆನಿಸುತ್ತದೆ. ನಮ್ಮ ಜಾತ್ಯತೀತ ದೇಶದಲ್ಲಿ ಜಾತಿ/ಮತವನ್ನು ಒಲ್ಲದವರು, ಮೀರಿದವರು, ಸರಕಾರದ ಆಡಳಿತಾತ್ಮಕ ವ್ಯವಸ್ಥೆಯಲ್ಲಿ, ದಾಖಲೆಗಳಲ್ಲಿ ಪ್ರತ್ಯೇಕವಾಗಿ ತಮ್ಮನ್ನು ಗುರುತಿಸಿಕೊಳ್ಳುವ ಅವಕಾಶ ಇದುವರೆಗೆ ಇಲ್ಲದುದರಿಂದ ಜಾತಿ/ಮತಗಳನ್ನು ಮೀರಲು ಬಯಸುವವರೂ ಮತ್ತೇ ತಾವು ಹುಟ್ಟಿದ ಜಾತಿ/ಮತಕ್ಕೆ ಜೋತು ಬೀಳಬೇಕಿರುವುದು ವಿಪರ್ಯಾಸ.
ಇದುವರೆಗೆ ಹೆಣ್ಣು ಬೇರೆ ಜಾತಿ/ಮತದವನನ್ನು ವಿವಾಹವಾದರೆ ಪತಿಯ ಜಾತಿ/ಮತದಿಂದ ಅವಳೂ, ಅವಳಿಗೆ ಹುಟ್ಟುವ ಮಕ್ಕಳೂ ಗುರುತಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಒಳಗಾಗಬೇಕಾಗುತ್ತಿತ್ತು. ವಾಸ್ತವದಲ್ಲಿ ಈಗಲೂ ಅದು ಮುಂದುವರೆದಿದೆ! ಅಂತರ್ಜಾತಿ, ಅಂತರ್‍ಧರ್ಮೀಯ ವಿವಾಹವಾದ ಹೆಣ್ಣುಮಕ್ಕಳನ್ನು ಎಷ್ಟೋ ಕುಟುಂಬಗಳಲ್ಲಿ ತಮ್ಮ ಜಾತಿ/ಮತಕ್ಕೆ ಮತಾಂತರ ಮಾಡುವುದು ಇಂದಿಗೂ ಬಹಿರಂಗವಾಗಿಯೇ, ಯಾವುದೇ ಲಜ್ಜೆಯೂ ಇಲ್ಲದೇ ನಡೆಯತ್ತದೆ. ಇದಕ್ಕೆ ಯಾರ ಆಕ್ಷೇಪವೂ, ಪ್ರತಿರೋಧವೂ ಕಾಣುವುದೇ ಇಲ್ಲ! ಹೆಣ್ಣು ಇಲ್ಲಿಯೂ ನಾಗರೀಕ ಹಕ್ಕುಗಳಿಲ್ಲದ ಒಂದು ಬೊಂಬೆ ಮಾತ್ರ. ಇದರಿಂದ ಮಹಿಳೆಯ ‘ಗುರುತಿಸುವಿಕೆ’ [ಐಡೆಂಟಿಟಿ]ಯ ಮಾನದಂಡವೇ ಮುಕ್ಕಾಗುತ್ತಾ ಬಂದಿದೆ.
ಹಾಗಿದ್ದರೆ ಜಾತಿ/ಮತವನ್ನು ಮೀರಿ ಅಂತರ್ಜಾತಿ/ಅಂತರ್‍ಧರ್ಮೀಯ ವಿವಾಹವಾಗುವುದರ ಅರ್ಥವೇನು? ಇಂತಹ ವಿವಾಹಗಳಿಂದ ಮಾತ್ರ ಜಾತಿವಿನಾಶ ಎನ್ನುವ ಮಾತಿಗೇನಾದರೂ ಅರ್ಥವಿದೆಯೇ? ಮೂಲದಲ್ಲಿಯೇ ಹೆಣ್ಣಿನ ಹಕ್ಕು, ಸಮಾನತೆಯ ಪರಿಕಲ್ಪನೆಯ ಅಡಿಪಾಯವೇ ಹೀಗೆ ಮುಕ್ಕಾಗಿರುವಾಗ ಹೆಣ್ಣಿನ ಅಸ್ಮಿತೆಯನ್ನು ಯಾವ ತಕ್ಕಡಿಯಿಂದಳೆಯುವುದು? ಈ ಪ್ರಶ್ನೆಗಳು ಇನ್ನಾದರೂ ನಮ್ಮನ್ನು ಎಚ್ಚರಿಸಿ ನಮ್ಮ ಆಯ್ಕೆಯನ್ನು ದೃಢಪಡಿಸಿಕೊಳ್ಳಲು ಪ್ರೇರೇಪಿಸಬೇಕಿದೆ.
ಸಂವಿಧಾನದ 25ನೇ ಕಲಂ ಹೇಳುವಂತೆ ಯಾವುದೇ ವ್ಯಕ್ತಿ ತನಗೆ ಯಾವುದೇ ಜಾತಿ-ಮತದಲ್ಲಿ ಗುರುತಿಸಿಕೊಳ್ಳುವ ಇಚ್ಛೆ ಇಲ್ಲದಿದ್ದಾಗ ಹಾಗೆ ಗುರುತಿಸುಕೊಳ್ಳುವಂತೆಯೂ, ಹೇರುವಂತೆಯೂ ಯಾರಿಗೂ ಹಕ್ಕಿಲ್ಲ. ಇದಕ್ಕೆ ಪೂರಕವಾಗಿ ಮುಂಬಯಿ ಹೈಕೋರ್ಟ್ ಇತ್ತೀಚೆಗೆ ನೀಡಿರುವ ತೀರ್ಪಿನಲ್ಲಿ ಮತಯಂತ್ರಗಳಲ್ಲಿ ಲಭ್ಯವಿರುವ ‘ನೋಟಾ’ ಆಯ್ಕೆ ಜಾತಿ/ಮತಕ್ಕೂ ಅನ್ವಯಿಸಬೇಕೆಂದು ಒತ್ತಿಹೇಳುತ್ತದೆ. ಜೊತೆಗೇ, ‘’ಯಾವುಧೇ ಅರ್ಜಿಯಲ್ಲಿ ತಮ್ಮ ಮತವನ್ನು ಘೋಷಿಸುವಂತೆ ಯಾರಿಗೂ ತಾಕೀತು ಮಾಡುವಂತಿಲ್ಲ. ಯಾವುದೇ ಧರ್ಮವನ್ನು ಪಾಲಿಸುವಂತೆ ಯಾವುದೇ ವ್ಯಕ್ತಿ ಅಥವಾ ನಾಗರಿಕರ ಮೇಲೆ ಒತ್ತಡ ಹೇರುವಂತಹಾ ಕಾನೂನು ಇಲ್ಲ. ಯಾವುದೇ ಜಾತಿಯಲ್ಲಿ ವಿಶ್ವಾಸ ಇಲ್ಲ ಎಂದು ಮುಕ್ತವಾಗಿ ಹೇಳುವ ಹಕ್ಕು ವ್ಯಕ್ತಿಗೆ ಇರುವುದರಿಂದ ಯಾವುದೇ ಧರ್ಮವನ್ನು ಪಾಲಿಸದಿರಲೂ ಅವಕಾಶವಿದೆ” ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಆದೇಶಿಸಿದೆ. ಧರ್ಮ ಅಥವಾ ಮತ ಹುಟ್ಟನ್ನಾಧರಿಸಿದ್ದಲ್ಲ! ಸ್ವಯಂಘೋಷಣೆಗೆ ಸಂಬಂಧಿಸಿದ್ದು ಎಂಬುದು ನ್ಯಾಯಾಲಯದ ಅಭಿಪ್ರಾಯ. ಯಾವುದೇ ವ್ಯಕ್ತಿಯನ್ನು ನಿರ್ದಿಷ್ಟ ಜಾತಿ/ಮತದಡಿ ಗುರುತಿಸಿಕೊಳ್ಳುವಂತೆ ಸರಕಾರ ತಾಕೀತು ಮಾಡುವಂತಿಲ್ಲವೆಂದೂ, ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಅದು ನಾಗರಿಕರಿಗಿರುವ ಹಕ್ಕೆಂದೂ ಕೋರ್ಟ್ ಸ್ಪಷ್ಟಪಡಿಸಿದೆ.
ಇದರೊಂದಿಗೆ ಬಹು ಮುಖ್ಯವಾಗಿ, ಕಳೆದ ವರ್ಷ ಸುಪ್ರೀಂಕೋರ್ಟ್ ನೀಡಿದ ತೀರ್ಪಿನನ್ವಯ ಮಹಿಳೆಯನ್ನು ಅವಳು ಹುಟ್ಟಿದ ಜಾತಿಯಿಂದ ಗುರುತಿಸಬೇಕೇ ವಿನಃ ಅವಳು ಮದುವೆಯಾಗಿ ಹೋದ ಕುಟುಂಬದ ಜಾತಿಯಿಂದಲ್ಲಾ ಎಂಬ ಬಹು ಮಹತ್ವದ, ಶಕ್ತಿಶಾಲಿಯಾದ ತೀರ್ಪನ್ನು ನೀಡಿದೆ. ಹೀಗಾಗಿ, ಯಾವುದೇ ಹೆಣ್ಣಿನ ಮದುವೆಯ ನಂತರ ಒತ್ತಾಯದಿಂದ ಮಾಡಿಸುವ ಜಾತಿ/ಮತದ ಮತಾಂತರಗಳು ಊರ್ಜಿತವಲ್ಲ! ಹೀಗಾಗಿ ನಮ್ಮ ಸಮಾಜದಲ್ಲಿ ತಲತಲಾಂತರದಿಂದ ನಡೆದು ಬಂದ ಅಲಿಖಿತ, ಅಸಾಂವಿಧಾನಿಕ ವ್ಯವಸ್ಥೆಯನ್ನು ಹೆಣ್ಣುಮಕ್ಕಳು ಈಗಲಾದರೂ ಪ್ರಶ್ನಿಸಿ ತಮ್ಮ ನಿಜವಾದ ಅಸ್ಮಿತೆಯನ್ನು ಕಂಡುಕೊಳ್ಳಬೇಕಿದೆ.
ಆದರೆ ಇದರ ಜೊತೆಗೇ ತಾವು ಯಾವ ಜಾತಿ-ಮತಗಳ ಜೊತೆಗೂ ಗುರುತಿಸಿಕೊಳ್ಳಲು ಒಲ್ಲದ, ಯಾವ ಮೀಸಲಾತಿಯನ್ನೂ ನಿರೀಕ್ಷಿಸದ, ಅಂತರ್ಜಾತಿ/ಧರ್ಮಿಯ ವಿವಾಹವಾದವರ ಒಂದು ಜಾತ್ಯತೀತ ದೊಡ್ಡ ಸಮುದಾಯ ನಮ್ಮ ನಡುವೆ ಇದೆ. ಕಡ್ಡಾಯವಾಗಿ ಜಾತಿ ನಮೂದಿಸಬೇಕಾದ ಹಲವು ಸಮೀಕ್ಷೆಗಳಿಂದ, ಶಿಕ್ಷಣ/ವೃತ್ತಿ ಪಡೆಯುವ ಕಾಲಂಗಳಲ್ಲಿ, ಜಾತಿ/ಮತದ ಪ್ರಮಾಣಪತ್ರ ಕಡ್ಡಾಯವೆಂದು ಘೋಷಿಸುವ ಯಾವುದೇ ಅರ್ಜಿ, ಪ್ರವೇಶಾತಿಗೂ,…. ಮತ್ತೆ ಅವರನ್ನು ಅವರ ಮತ ಅಥವಾ ಜಾತಿಗೇ ಕಟ್ಟುವ ಕೆಲಸ ಇದುವರೆಗೆ ನಡೆಯುತ್ತಾ ಬಂದಿದೆ.
ಆದ್ದರಿಂದ ಯಾವುದೇ ಅರ್ಜಿಯಲ್ಲಿ ಜಾತಿ/ಮತವನ್ನು ಕಡ್ಡಾಯವಾಗಿ ಗುರುತಿಸಲು ಬಯಸಿದ್ದಲ್ಲಿ ಜಾತಿಯೊಲ್ಲದ, ಜಾತಿಮೀರಿದ, ಜಾತಿಯಲ್ಲಿ ನಂಬಿಕೆಯಿಲ್ಲದವರನ್ನು ಗುರುತಿಸಲು ‘ನೋಟಾ’[ಮೇಲಿನ ಯಾವುದಕ್ಕೂ ಸೇರಿಲ್ಲದ] ಆಯ್ಕೆಯಂತೆಯೇ, ಜಾತಿ/ಮತದ ವಿಷಯದಲ್ಲೂ ಅನ್ವಯವಾಗುವಂತೆ ಪ್ರತ್ಯೇಕ ಗುರುತಿಸುವಿಕೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇನ್ನಾದರೂ ಅನುವು ಮಾಡಿಕೊಡಬೇಕು. ಜನ ಸಮುದಾಯ ಇದಕ್ಕೆ ಒತ್ತಡ ಹೇರಬೇಕು. ತಳಸಮುದಾಯದ/ಹಿಂದುಳಿದ ಜಾತಿ-ಸಮುದಾಯಗಳವರು ಅದರಲ್ಲೂ ಹಿಂದುಳಿದ ವರ್ಗದವರು ಸಮಾನತೆಯ ಗುರಿ ಸಾಧಿಸಲು ಬೇಕಿರುವ ಅಭಿವೃದ್ಧಿ ಯೋಜನೆಗಳ ಲಾಭ ಪಡೆಯಲು ತಮ್ಮ ಜಾತಿ/ಮತಗಳನ್ನು ದಾಖಲಿಸುವುದು ಅನಿವಾರ್ಯವಾಗಿರುತ್ತದೆ. ಇದಕ್ಕೆ ಹೊರತಾದ ಹೆಣ್ಣುಮಕ್ಕಳು ನಮ್ಮ ಆಯ್ಕೆ ಒತ್ತಾಯದ್ದೋ, ಒತ್ತಡದ್ದೋ, ಕುರುಡಿನದೋ, ಪರಂಪರಾಗತದ್ದೋ ಆಗದೇ ನಮ್ಮ ಅಸ್ಮಿತೆಯನ್ನೊಳಗೊಂಡು ಬುದ್ಧಿಪೂರ್ವಕ ಆಯ್ಕೆಯೇ ಆಗುವಂತೆ ನೋಡಿಕೊಳ್ಳಬೇಕು. ತನ್ಮೂಲಕ ಈ ಎಲ್ಲಾ ಪಿತೃಪ್ರಧಾನ ತಾರತಮ್ಯವನ್ನು, ಜಾತಿ/ಮತದ ರಾಜಕಾರಣದ ಪೊಳ್ಳು ವ್ಯವಸ್ಥೆಯನ್ನು, ದಿಟ್ಟತನದಿಂದ ನಿರಾಕರಿಸಿ, ಹೊಸ ಸಮಾಜದ ಹುಟ್ಟಿಗೆ ನಾಂದಿ ಹಾಡಬೇಕಿದೆ.

ರೂಪ ಹಾಸನ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *