ಹುಡುಗಿ ಹಾಡು -ಜ್ಯೋತಿ ಇರ್ವತ್ತೂರು
ಸಮಾನತೆ ಕುರಿತಂತೆ ಭಾಷಣ ಬಿಗಿಯುವಾಗ
ನೆನಪಿದೆ ಹೊಸ್ತಿಲಲ್ಲಿ ನಗಬೇಡ ಎಂದೋ ಯಾರೋ ಕೂಗಿದ್ದು
ಹರಿದ ಬಟ್ಟೆಯಲ್ಲಿ ಚರ್ಮ ಕಾಣುತ್ತಿದ್ದಾಗ
ಕೈಯಿಂದ ಮುಚ್ಚಿಕೋ ಎಂದು ಗೊಣಗಿದವರ ಚಹರೆ
ಹಾದಿಯುದ್ದಕ್ಕೂ ಷರತ್ತು ವಿಧಿಸಿದವರು
ಷರತ್ತೇ ಇಲ್ಲದೇ ಒಂದೇ ಸಮನೆ ನಡೆದು ಹೋದವರು
ಅಲ್ಲಿ ನಿಲ್ಲಬೇಡ, ಇಲ್ಲಿ ನಗಬೇಡ, ಆ ಬಟ್ಟೆ ಬೇಡ
ಅದ್ಯಾಕೆ ಹಾಗೆ ನಿಂತಿದ್ದು, ಹೀಗ್ಯಾಕೆ ಗೋಡೆಗೊರಗಿದ್ದು
ಒಬ್ಬಳೇ ಹಾಗೇ ಸುತ್ತಬೇಡ , ಓಡಬೇಡ
ಹೆಚ್ಚು ಮಾತಾಡಬೇಡ, ಕನ್ನಡಿಯೆದುರು ನಿಲ್ಲಬೇಡ
ಅದೂ ಇದು ನೆಪವೊಡ್ಡಿ ನಿಂದಿಸಿದವರು
ಹೆಣ್ಣೆಂದು ಪ್ರತಿ ಬಾರಿ ಕುಗ್ಗಿಸಲು ಪ್ರಯತ್ನಿಸಿದವರು
ಏನು ಹೇಳದೆ ಮೌನದಲ್ಲೇ ಎಲ್ಲಾ ಕೇಳಿದ್ದು
ತಲೆಬಗ್ಗಿಸಿ ಮಾತು ಅಚ್ಚುಕಟ್ಟಾಗಿ ಪಾಲಿಸಿದ್ದು
ಇಷ್ಟೆಲ್ಲಾ ಆದ ಮೇಲೆ ಬಾಕಿವುಳಿದ ಆಸೆಗಳಿವೆ
ಆ ಹೂವಿನ ಜೊತೆ ಮಾತನಾಡಬೇಕಿತ್ತು
ದುಂಬಿಗಳ ಮುಷ್ಟಿಯಲಿ ಹಿಡಿದು ಬಿಡಬೇಕಿತ್ತು
ಅಂಗೈಗೆ ಅಂಟಿದ ಬಣ್ಣದಲಿ ಕಾಮನಬಿಲ್ಲ ಕಾಣಬೇಕಿತ್ತು
ಮರಗಳೊಂದಿಗೆ ಬಹುದೂರ ನಡೆಯಬೇಕಿತ್ತು
ಕಾಲಿಗಂಟಿದ ಮಣ್ಣಿನ ಪರಿಮಳ ಆಸ್ವಾದಿಸಬೇಕಿತ್ತು
ಹಕ್ಕಿಗಳ ಜೊತೆ ಬಹಳಷ್ಚು ಹಾಡು ಹಾಡುವುದಿತ್ತು
ಗಾಳಿಯಲಿ ತೇಲಿಬಂದ ಗಂಧದ ಪರಿಮಳವ ಹೀರುವುದಿತ್ತು
ಆಗಸಕೆ ಮೈಯೊಡ್ಡಿ ಕನಸ ಕಾಣುವುದಿತ್ತು
ಗೋಡೆಗಳ ಬಂಧನವ ಮೀರಬೇಕಿತ್ತು
ಮುಕ್ತ ಬಯಲಲಿ ನಡೆಯುತ್ತಲೇ ಇರಬೇಕಿತ್ತು
ಗುರಿಯು ಇಲ್ಲದಿರಬೇಕಿತ್ತು, ಹಾದಿ ಮುಗಿಯಬಾರದಿತ್ತು..

ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
VERY GOOD READING AREA, AM ALREADY FAN OF MADAM POORNIMA R THROUGH MAGZINE NAGEMUGULU
good