ಹುಟ್ಟಲಾರಳೆಂದೂ – ಬೀನಾ ಶಿವಪ್ರಸಾದ
ಹುಟ್ಟಲಾರಳೆಂದೂ ಹೆಣ್ಣು
ಕೈ ಹಿಡಿದ ಸತಿಗೇ
ಕಲ್ಲಾಗೆಂದು ಶಾಪಕೊಡುವವರೆಗೂ
ಸಿಟ್ಟಿದ್ದ ಪತಿಯ ಸಹಿಸಿಕೊ0ಡಿದ್ದ
ಅಹಲ್ಯೆಯಂತಹ ಹೆಣ್ಣು
ಬೆಂಕಿಯಷ್ಟೇ ಪವಿತ್ರಳಾದರೂ
ಲೋಕದ ಮಾತಿಗೆ ಕಟ್ಟು ಬಿದ್ದು
ಕಟ್ಟಿಕೊಂಡವಳನ್ನೇ
ಬೆಂಕಿಗೆ ಹಾರೆಂದ ಶ್ರೀರಾಮನ
ಸತಿ, ಸೀತೆಯಂತಹ ಹೆಣ್ಣು
ಹೆಣ್ಣಿಗಾಗಿ ರಾಜ್ಯವನ್ನೇ
ಬಲಿಕೊಟ್ಟ ಕ್ರೂರ ಪತಿಯನ್ನೂ
ಸಹಿಸಿಕೊ0ಡಿದ್ದ
ಸಾಧ್ವಿ ಸಂಯಮವತಿ
ಮಂಡೋದರಿಯಂತಹ ಹೆಣ್ಣು
ಪಟ್ಟದ ರಾಣಿಯಾಗಿ ಮೆರೆಯಬೇಕಾದ ಮಡದಿ
ಮುಸುರೆ ಆಳಾಗಿ, ಸ್ಮಶಾನಕ್ಕೆ ಹೋಗಿ
ತಲೆದಂಡ ತೆತ್ತಬೇಕಾದರೂ
ಭೂಮಿ ಒಡೆಯ ಹರಿಶ್ಚಂದ್ರ
ಸತ್ಯವಂತನಾಗಿರಲೆಂದು ಹರಿಸಿದಾ ತಾರೆಯಂತಹ ಹೆಣ್ಣು
ಹುಟ್ಟಲಾರಳೆಂದೂ
ತನ್ನ ಮಕ್ಕಳೇ
ತನ್ನ ದೋಚುತ್ತಿದ್ದರೂ
ಮೂಕ ಪ್ರೇಕ್ಷಕಳಾಗಿಹ
`ಭೂಮಿ-ತಾಯಿ’ ಯಂತಹ ಹೆಣ್ಣು
ಬೀನಾ ಶಿವಪ್ರಸಾದ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.