`ಹಿತೈಷಿಣಿ’ – ತುಂಬಿದ ವರ್ಷ, ಹೆಚ್ಚಿದ ಜವಾಬ್ದಾರಿ

`ಹಿತೈಷಿಣಿ’ ಅಂತರಜಾಲ ಮಹಿಳಾ ಪತ್ರಿಕೆಯನ್ನು ಒಂದು ವರ್ಷದ ಹಿಂದೆ ಆರಂಭಿಸುವಾಗ ಸಮಾನತೆಯ ಸದಾಶಯದ ಜೊತೆಗೆ, ನಿರೀಕ್ಷೆ, ಆಕಾಂಕ್ಷೆ ಎಲ್ಲವೂ ಮೇಳೈಸಿದ್ದು ಸಹಜ. ಇದೀಗ ಒಂದು ವರ್ಷದಲ್ಲಿ ಪತ್ರಿಕೆಗೆ ಸಮಾನ ಮನಸ್ಕರಿಂದ ಸಿಕ್ಕ ಬೆಂಬಲ, ಹೆಣ್ಣಿನ ಕಣ್ಣೋಟಕ್ಕೊಂದು ಪರದೆ ಸಿಕ್ಕ ಸಂತಸ ಇವೆಲ್ಲ ಇನ್ನಷ್ಟು ಕಸುವು ತುಂಬುತ್ತಿವೆ. ಇದರ ಜೊತೆಗೇ ಮಾಡಬೇಕಾದ ಕೆಲಸಗಳ, ಇಡಬೇಕಾದ ಹೆಜ್ಜೆಗಳ ಲೆಕ್ಕ, ಬುದ್ಧಿಭಾವಗಳನ್ನು ಎಚ್ಚರಿಸುತ್ತಿದೆ. ಜುಲೈ 14 ರ ಭಾನುವಾರ ನಡೆದ `ಹಿತೈಷಿಣಿ’ ಅಂತರಜಾಲ ಪತ್ರಿಕೆಯ ವಾರ್ಷಿಕೋತ್ಸವದಲ್ಲಿ ಇವೆಲ್ಲದರ ಹೊಳಹು ಇದ್ದೇ ಇತ್ತು.

1882 ರಲ್ಲಿ ರಚಿತವಾಗಿ, `ಭಾರತದ ಮೊದಲ ಸ್ತ್ರೀವಾದಿ ಪಠ್ಯ’ ಎಂಬ ಮಾನ್ಯತೆ ಪಡೆದ ತಾರಾಬಾಯಿ ಶಿಂಧೆ ಅವರ “ಸ್ತ್ರೀ-ಪುರುಷ ತುಲನೆ” ಪುಸ್ತಕದ ಕನ್ನಡ ಆವೃತ್ತಿಯನ್ನು ಡಾ. ವಸುಂಧರಾ ಭೂಪತಿ ಬಿಡುಗಡೆ ಮಾಡಿ ವಾರ್ಷಿಕೋತ್ಸವಕ್ಕೆ ಸೂಕ್ತ ಚಾಲನೆ ನೀಡಿದರು. ಮಹಿಳೆಯರು ತಮ್ಮ ಬದುಕಿನ ಆಯ್ಕೆಗಳನ್ನು ಮಾಡಿಕೊಳ್ಳುವ ಸ್ವಾತಂತ್ರ್ಯ ಪಡೆದಾಗ ಸಮಾಜವೇ ಸಶಕ್ತವಾಗುತ್ತದೆ ಎಂದರು. ಡಾ. ಎನ್. ಗಾಯತ್ರಿ ಅನುವಾದಿಸಿದ “ಸ್ತ್ರೀ-ಪುರುಷ ತುಲನೆ” ಪುಸ್ತಕದ ಐತಿಹಾಸಿಕ ಮಹತ್ವವನ್ನು ಮತ್ತು ವೈಶಿಷ್ಟ್ಯಗಳನ್ನು ವಿವರಿಸಿದವರು ಲೇಖಕಿ ನೇಮಿಚಂದ್ರ. ನಂತರ “ಸಂವಿಧಾನ ಮತ್ತು ಮಹಿಳೆ” ಕುರಿತು ಉಪನ್ಯಾಸ ನೀಡಿದ ಅಬ್ದುಲ್ ರೆಹಮಾನ್ ಪಾಷ ಭಾರತೀಯ ಮಹಿಳೆಗೆ ಸಿಕ್ಕ ಸ್ಥಾನಮಾನಕ್ಕೆ ಸಂವಿಧಾನವೇ ಕಾರಣ ಎಂದು ಪ್ರತಿಪಾದಿಸಿದರು. `ಹಿತೈಷಿಣಿ’ಯ ಸಂಪಾದಕರಾದ ಡಾ. ಆರ್. ಪೂರ್ಣಿಮಾ ಮತ್ತು ಡಾ. ಎನ್. ಗಾಯತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೈತ್ರಿ ಬೆಂಗಳೂರು ನಿರ್ವಹಣೆ ಮಾಡಿದರು. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಹಿತೈಷಿಣಿ ಮಹಿಳಾ ಅಧ್ಯಯನ ಕೇಂದ್ರ ಆಯೋಜಿಸಿದ್ದ ಸಮಾರಂಭದ ಅರ್ಥವಂತಿಕೆ, ಅಲ್ಲಿಗೆ ಆಗಮಿಸಿದ್ದ ಪ್ರಜ್ಞಾವಂತ ಸಾಹಿತಿಗಳು ಮತ್ತು ಸಂಗಾತಿಗಳ ಇರವಿನಿಂದ ಇಮ್ಮಡಿಸಿತು.

– ಹಿತೈಷಿಣಿ ಬಳಗ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *