ಧೀಮಂತ ಮಹಿಳೆಯರು/ ಸ್ವಾತಂತ್ರ್ಯ ಹೋರಾಟದಲ್ಲಿ ನಾಯಕಸಾನಿಯರು – ಮಾಲತಿ ಭಟ್

ಸ್ವಾತಂತ್ರ್ಯ ಹೋರಾಟವೆಂಬ ಸಾಗರಕ್ಕೆ ಹಿರಿಯರು ಹೇಳುವಂತೆ ಸಾವಿರ ತೊರೆಗಳು ಸೇರಿಕೊಂಡಿವೆ. ಆದರೆ ಆ ಕಿರಿ ತೊರೆ ಝರಿಗಳ ರೂಪದಲ್ಲಿ ಸಮಾಜದ ಅಂಚಿನಲ್ಲಿದ್ದ ಮಹಿಳೆಯರೂ ಇದ್ದರೆಂಬುದನ್ನು ಯಾರೂ ಸ್ಮರಿಸಿಕೊಳ್ಳುವುದಿಲ್ಲ. ಆದರೆ ಸ್ವಾತಂತ್ರ್ಯ ದಿನಾಚರಣೆ ಅಂಥ ಧೀಮಂತ ಮಹಿಳೆಯರ ಸ್ಮರಣೆಯಿಲ್ಲದೆ ಅರ್ಥಪೂರ್ಣವಾಗುವುದಿಲ್ಲ.

ಭಾರತದ ಸ್ವಾತಂತ್ರ್ಯ ಹೋರಾಟದ ಕತೆ, ದಂತಕತೆ ಹಾಗೂ ದಾಖಲೆಗಳನ್ನು ಪರಿಶೀಲಿಸಿದಾಗ ಕೇವಲ ವಿದ್ಯಾವಂತರಾದ, ಮೇಲುವರ್ಗ ಹಾಗೂ ಆಳುವ ವರ್ಗಕ್ಕೆ ಸೇರಿದ ಪುರುಷರ ಸಾಹಸ, ಹೋರಾಟದ ವಿವರಗಳೇ ಕಣ್ಣಿಗೆ ಬೀಳ್ತವೆ. ಅದರೆ, ಕೆಳವರ್ಗದ ಹೆಣ್ಣುಮಕ್ಕಳು, ಸಂಗೀತಗಾರ್ತಿಯರು, ನೃತ್ಯಗಾತಿಯರು, ವೇಶ್ಯೆಯರು … ಇವೇ ಮೊದಲಾದ ಬಹಿಷ್ಕಾರಗೊಂಡು ಅಂಚಿಗೆ ಸೇರಿದ ಹೆಣ್ಣು ಮಕ್ಕಳೆಲ್ಲ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಬೇರೆ, ಬೇರೆ ಸ್ತರದಲ್ಲಿ ಕೈಜೋಡಿಸಿದ್ದರು.

ನಿಜವಾಗಿ ಹೇಳಬೇಕು ಅಂದರೆ … ಇವರೆಲ್ಲ ಅನ್‍ಸಂಗ್ ಹಿರೋಯಿನ್ಸ್ ಆಫ್ ಫ್ರೀಡಂ ಸ್ಟ್ರಗಲ್’. ಇವರ ಬಗ್ಗೆ ಈಗಲೂ ಸರಿಯಾದ ದಾಖಲೆಗಳು ಲಭ್ಯವಿಲ್ಲ. ಭಾರತದಲ್ಲಿ ಬ್ರಿಟಿಷ ಆಡಳಿತದ ವಿರುದ್ಧ ಕಟು ಆಕ್ರೋಶ ವ್ಯಕ್ತವಾಗಿದ್ದು 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ವೇಳೆ. ಮಳೆಗಾಲದಲ್ಲಿ ಜಲದ ಒರತೆ ಉಕ್ಕುವಂತೆ ಆಗ ಬ್ರಿಟಿಷರ ವಿರುದ್ಧ ಪ್ರತಿಭಟನೆಯ ಕೂಗು ಎಲ್ಲೆಲ್ಲೂ ಉಕ್ಕುತ್ತಾ ಇತ್ತು. ಅದಕ್ಕೆ ಈ ಸಂಗೀತಗಾರ್ತಿಯರು, ನೃತ್ಯಗಾರ್ತಿಯರು ಅಥವಾ ವೇಶ್ಯೆಯರು ಹೊರತಾಗಿರಲಿಲ್ಲ. ಕೆಲ ಸಿರಿವಂತ ಕೋಟೇವಾಲಿಗಳು ಹಣಕಾಸು ಸಹಾಯ ಒದಗಿಸಿದರೆ, ಮತ್ತೆ ಕೆಲವರು ಹೋರಾಟಗಾರರಿಗೆ ಗುಟ್ಟಾಗಿ ಆಶ್ರಯ ನೀಡುತ್ತಿದ್ದರು. ಇನ್ನೂ ಕೆಲವರು ಬೇಹುಗಾರರಾಗಿ ಕೆಲಸ ಮಾಡುತ್ತಾ ಇದ್ದರು.

ಇಲ್ಲೊಂದು ಆಸಕ್ತಿಕರ ಘಟನೆ ನೆನಪಾಗುತ್ತದೆ. 1857ರ ಜೂನ್‍ನಲ್ಲಿ ಬ್ರಿಟಿಷ್ ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಸೈನಿಕರು ಕಾನ್ಪುರದ ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿಗಳಿಗೆ ಮುತ್ತಿಗೆ ಹಾಕುತ್ತಾರೆ. ಆ ಮುತ್ತಿಗೆ ಹಾಕಿದ ತಂಡದಲ್ಲಿ ಅಜೀಜುನ್ ಭಾಯಿ ಎನ್ನುವ ತವಾಯಫ್ ಸಹ ಇದ್ದಳು. ಮೂಲತಃ ಲಖನೌದವಳಾದ ಆಕೆ ಚಿಕ್ಕ ವಯಸ್ಸಿನಲ್ಲೇ ಕಾನ್ಪುರಕ್ಕೆ ಹೋಗಿ ನೆಲೆಸಿರುತ್ತಾಳೆ. ಬ್ರಿಟಿಷ್ ಸೈನ್ಯದ ಸೈನಿಕರಿಗೆ ಹತ್ತಿರದವಳಾಗುತ್ತಾಳೆ. ಶಸ್ತ್ರಸಜ್ಜಿತ ಸೈನಿಕರ ಜೊತೆ ಕುದುರೆ ಸವಾರಿ ಮಾಡುತ್ತಾಳೆ. ತಾನೂ ಸಹ ಪುರುಷರಂತೆ ವೇಷ ಧರಿಸುತ್ತಾಳೆ. ಅದರಲ್ಲೂ ಸಂಶುದ್ದೀನ್ ಖಾನ್ ಎಂಬಾತ ಆಕೆಗೆ ಆಪ್ತನಾಗಿರುತ್ತಾನೆ.

ಹಾಗೆಯೇ, ನಾನಾಸಾಹೇಬನ ಸೈನಿಕರು ಕಾನ್ಪುರವನ್ನು ವಶಪಡಿಸಿಕೊಂಡ ನಂತರ 100ಕ್ಕೂ ಹೆಚ್ಚು ಬ್ರಿಟಿಷ್ ಮಹಿಳೆಯರು ಮತ್ತು ಮಕ್ಕಳನ್ನು ಬೀಬಿಘರ್ ಎಂಬಲ್ಲಿ ಒತ್ತೆಯಾಳಾಗಿ ಇಟ್ಟುಕೊಂಡಿರಲಾಗುತ್ತದೆ. ಅವರನ್ನು ಬಿಡಿಸಿಕೊಳ್ಳಲು ಬ್ರಿಟಿಷರು ಹೆಚ್ಚಿನ ಸೈನ್ಯದೊಂದಿಗೆ ಬರುತ್ತಾ ಇರುವಾಗ ಅವರನ್ನೆಲ್ಲ ಬರ್ಬರವಾಗಿ ಹತ್ಯೆ ಮಾಡಲಾಗುತ್ತದೆ. ನಾನಾಸಾಹೇಬನ ಪರಿವಾರದಲ್ಲಿ ವೇಶ್ಯೆಯಾಗಿದ್ದ ಹುಸೇನಿಖಾನಂ ಬೀಬಿಘರ್‍ನ ಉಸ್ತುವಾರಿ ವಹಿಸಿಕೊಂಡಿರುತ್ತಾಳೆ. ಈ ಹತ್ಯಾಕಾಂಡದ ಸಂಚುಕೋರರಲ್ಲಿ ಈಕೆಯೂ ಒಬ್ಬಳು ಎಂದು ಗುರುತಿಸಲಾಗಿದೆ.

ಮತ್ತೆ ಇಲ್ಲಿ ನೆನಪಾಗ್ತಿರೋದು ಗೋಹರ್ ಜಾನ್. ಗಾಂಧಿಯವರು ಬ್ರಿಟಿಷರ ವಿರುದ್ಧ ಸ್ವದೇಶಿ ಚಳವಳಿ ಮತ್ತು ಅಸಹಕಾರ ಆಂದೋಲನ ಆರಂಭಿಸಿದಾಗ ಬಹಳಷ್ಟು ತವಾಯಫ್‍ಗಳು ಮತ್ತು ವೇಶ್ಯೆಯರು ಇದರಲ್ಲಿ ಭಾಗಿಯಾಗಿದ್ದರು. ಸ್ವರಾಜ್ ಫಂಡ್‍ಗೆ ನಿಧಿ ಸಂಗ್ರಹಿಸಲು ನೆರವಾಗುವಂತೆ ಸ್ವತಃ ಗಾಂಧೀಜಿ ಗೋಹರ್ ಜಾನ್ ಅವರನ್ನು ಕೇಳಿಕೊಂಡಿದ್ದರಂತೆ. ಇದಕ್ಕೆ ಒಪ್ಪಿಕೊಂಡಿದ್ದ ಗೋಹರ್ ಜಾನ್ ತಮ್ಮ ಸಂಗೀತ ಕಛೇರಿಗೆ ಗಾಂಧೀಜಿ ಬರಬೇಕು ಎಂದು ಷರತ್ತು ಹಾಕಿದ್ದರಂತೆ. ಗಾಂಧೀಜಿ ಅವರಿಗೆ ಬರಲು ಸಾಧ್ಯವಾಗಲಿಲ್ಲ. ಒಟ್ಟು 24 ಸಾವಿರ ರೂಪಾಯಿ ಒಟ್ಟಾಗುತ್ತದೆ. ಅದರಲ್ಲಿ 12 ಸಾವಿರ ರೂಪಾಯಿಯನ್ನು ಆಕೆ ಗಾಂಧಿಯವರಿಗೆ ಕಳುಹಿಸುತ್ತಾರೆ. ವಿಕ್ರಂ ಸಂಪತ್ ಅವರ `ಮೈ ನೇಮ್ ಈಸ್ ಗೋಹರ್ ಜಾನ್’ ಪುಸ್ತಕದಲ್ಲಿ ಇದನ್ನೆಲ್ಲ ವಿವರಿಸಲಾಗಿದೆ.

1920-22ರ ಅಸಹಕಾರ ಆಂದೋಲನದ ಸಮಯದಲ್ಲಿ ವಾರಣಾಸಿಯ ವೇಶ್ಯೆಯರೆಲ್ಲ ತವಾಯಫ್ ಸಭಾ ಎಂಬ ಸಂಘಟನೆ ಮಾಡಿಕೊಂಡು ವಿದೇಶಿ ವಸ್ತುಗಳಿಗೆ ಬಹಿಷ್ಕಾರ ಹಾಕುತ್ತಾರೆ. ಆಭರಣಗಳ ಬದಲು ಕಬ್ಬಿಣದ ಸಂಕೋಲೆ ತೊಟ್ಟುಕೊಂಡು ಪ್ರತಿಭಟಿಸುತ್ತಾರೆ. ವಿದ್ಯಾಧರ ಭಾಯಿ ಎಂಬಾಕೆ ಗಾಂಧಿ ಅವರನ್ನು ಭೇಟಿಯಾಗಿ ಪ್ರಭಾವಿತಳಾಗುತ್ತಾಳೆ. ತಮ್ಮ ನೃತ್ಯ, ಸಂಗೀತಕ್ಕೂ ಮುನ್ನ ಅವರೆಲ್ಲ ದೇಶಭಕ್ತಿ ಗೀತೆ ಹೇಳುವುದನ್ನು ರೂಢಿಸಿಕೊಳ್ಳುತ್ತಾರೆ.

ಇದೇ ವರ್ಷದ ಏಪ್ರಿಲ್‍ನಲ್ಲಿ ಮುಂಬೈನಲ್ಲಿ ಇತಿಹಾಸ ತಜ್ಞೆ ಮಂಜರಿ ಚತುರ್ವೇದಿ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಈ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.

  • ಮಾಲತಿ ಭಟ್

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *