ಹಿಂದಣ ಹೆಜ್ಜೆ/ ಸಾಹಿತ್ಯದಲ್ಲಿ ಮೂಡಿದ ಮಹಿಳಾ ಪ್ರತಿರೋಧ – ಡಾ. ಪಾರ್ವತಿ ಜಿ. ಐತಾಳ್
ಇಂಗ್ಲಿಷ್ ವಿದ್ಯಾಭ್ಯಾಸ, ರಷ್ಯಾದ ಕ್ರಾಂತಿ ಮತ್ತು ರಾಷ್ಟ್ರೀಯ ಸ್ವಾತಂತ್ರ್ಯ ಚಳವಳಿಯ ಪ್ರಭಾವದಿಂದಾಗಿ ಮಲಯಾಳಂ ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆ, ಸ್ವಾತಂತ್ರ್ಯಪ್ರೇಮದ ಹೊಸ ಅಲೆಯ ಸಾಹಿತ್ಯ ರಚನೆ ಆಯಿತು. ಹೆಣ್ಣುಮಕ್ಕಳ ಶಿಕ್ಷಣ ಮತ್ತು ಸ್ತ್ರೀಸ್ವಾತಂತ್ರ್ಯದ ಆಶಯಗಳು ಅದರಲ್ಲಿ ಕಾಣಿಸಿಕೊಂಡವು. ಮಹಿಳೆಯರೂ ಸಾಹಿತ್ಯ ರಚನೆ ಆರಂಭಿಸಲು ಇವು ಇನ್ನಿಲ್ಲದ ಪ್ರೇರಣೆ ನೀಡಿದವು. ಕೇರಳದ ಸಾಮಾಜಿಕ, ಆಂತರಿಕ ವ್ಯವಸ್ಥೆಯಲ್ಲಿ ಮಹಿಳೆಯ ಶೋಷಣೆ ಕುರಿತ ಪ್ರಶ್ನೆಗಳೂ ಸಾಹಿತ್ಯದಲ್ಲಿ ದಾಖಲಾಗಿದ್ದು ವಿಶೇಷ.
ಮಲಯಾಳಂ ಭಾಷೆಯಲ್ಲಿ ಮಹಿಳಾ ಸಾಹಿತ್ಯ ಆರಂಭವಾಗಿದ್ದು 1930ರ ದಶಕದಲ್ಲಿ. 19ನೆಯ ಶತಮಾನದ ಕೊನೆ ಮತ್ತು 20ನೆಯ ಶತಮಾನದ ಆರಂಭದಲ್ಲಿ ಪುರುಷರ ಸಾಹಿತ್ಯದಲ್ಲಿ ಸ್ತ್ರೀಪರ ಧ್ವನಿ ಕಾಣಿಸ ತೊಡಗಿತ್ತು. ಕವಿ ಹಾಗೂ ಇತಿಹಾಸಕಾರರಾದ ಉಳ್ಳೂರು ಪರಮೇಶ್ವರ ಅಯ್ಯರ್ ಅವರು, 1760ರಿಂದ ಆರಂಭವಾಗಿ 1947ರ ತನಕ 12 ಮಂದಿ ಮಹಿಳಾ ಸಾಹಿತಿಗಳನ್ನು ಗುರುತಿಸುತ್ತಾರೆ. ಆ ಮಹಿಳೆಯರ ಸಾಹಿತ್ಯವು ಭಕ್ತಿಗೀತೆ, ತಿರುವಾದಿರ (ಓಣಂ ಹಬ್ಬದ ಸಂದರ್ಭದಲ್ಲಿ ಹೆಂಗಸರು ಮಾಡುವ ನೃತ್ಯಕ್ಕೆ ಸಂಬಂಧಿಸಿದ) ಹಾಡುಗಳು ಮತ್ತು ಕೈಕೊಟ್ಟಿಕಳಿ (ಚಪ್ಪಾಳೆ ನೃತ್ಯದ) ಹಾಡುಗಳಿಗೆ ಸೀಮಿತವಾಗಿದ್ದು ಸಂಸ್ಕøತಮಯವಾಗಿದ್ದವು.
ಇಂಗ್ಲಿಷ್ ವಿದ್ಯಾಭ್ಯಾಸದ ಪರಿಣಾಮವಾಗಿ ಸಾಕಷ್ಟು ಇಂಗ್ಲಿಷ್ ಸಾಹಿತ್ಯವನ್ನು ಓದಿಕೊಂಡವರಿಂದ ಹೊಸ ಪ್ರಕಾರದ ಕೃತಿಗಳು ಪ್ರಾದೇಶಿಕ ಭಾಷೆಗಳಲ್ಲೂ ಹುಟ್ಟಿಕೊಂಡವು. ರಷ್ಯಾದ ಕ್ರಾಂತಿಯಿಂದ ಪ್ರಭಾವಿತರಾದ ಲೇಖಕರೂ ಬಂದರು. ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಆರಂಭವಾಯಿತು. ಅದುವರೆಗೆ ಇದ್ದ ಪೌರಾಣಿಕ ಹಾಗೂ ಐತಿಹಾಸಿಕ ನಾಟಕಗಳು ಸಾಮಾಜಿಕ ವಸ್ತುವಿನ ಮೇಲಿನ ನಾಟಕಗಳಿಗೂ ಎಡೆ ಮಾಡಿ ಕೊಟ್ಟವು. ಸಣ್ಣ ಕಥೆ, ಕಾದಂಬರಿ, ಪ್ರಬಂಧ, ಪತ್ರಿಕೋದ್ಯಮ, ಪ್ರವಾಸ ಕಥನಗಳು ಬಂದವು. ಸ್ವಾತಂತ್ರ್ಯದ ಆಶಯದೊಂದಿಗೆ ಗಾಂಧೀಜಿಯವರ ಕರೆಗೆ ಓಗೊಟ್ಟು ರಂಗಕ್ಕೆ ಧುಮುಕಿದ ಅನೇಕ ಬರಹಗಾರರು ಹೊಸ ಹುರುಪಿನಿಂದ ಬರೆಯ ತೊಡಗಿದರು. ಕುಮಾರನ್ ಆಶಾನ್, ವಲ್ಲತ್ತೋಳ್ ನಾರಾಯಣ ಮೆನೋನ್ ಮತ್ತು ಉಳ್ಳೂರು ಪರಮೇಶ್ವರ ಅಯ್ಯರ್ ಮೊದಲಾದ ಮಹತ್ವದ ಕವಿಗಳು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಮತ್ತು ಸ್ತ್ರೀಸ್ವಾತಂತ್ರ್ಯಕ್ಕೆ ಒತ್ತು ನೀಡಿ ಬರೆದರು. ಈ ಸಮಯದಲ್ಲಿ ಮೇರಿ ಜಾನ್ ತೋಟ್ಟಂ, (1901-85), ಕಡತ್ತುನಾಟ್ಟು ಮಾಧವಿಯಮ್ಮ (1909-2000), ಬಾಲಾಮಣಿಯಮ್ಮ (1909-2004), ಲಲಿತಾಂಬಿಕಾ ಅಂತರ್ಜನಮ್ (1909-1987), ಕೆ. ಸರಸ್ವತಿಯಮ್ಮ (1909-1976) ಮೊದಲಾದವರು ಬರೆಯತೊಡಗಿದರು.
ಬಾಲಾಮಣಿಯಮ್ಮ ಅವರ ಕವಿತೆಗಳು ಮಾತೃ ಹೃದಯದ ಪ್ರೀತಿ ಮತ್ತು ಸಂವೇದನೆಗಳನ್ನು ಕಟ್ಟಿಕೊಟ್ಟವು. ಕೆ. ಸರಸ್ವತಿಯಮ್ಮ ಪ್ರಬಲ ಸ್ತ್ರೀವಾದಿಯಾಗಿದ್ದರು. ಅವರು ಪುರುಷ ಪ್ರಾಧಾನ್ಯವನ್ನು ತೀವ್ರವಾಗಿ ವಿರೋಧಿಸಿದ ಬರಹಗಾರ್ತಿಯಾಗಿದ್ದರು. ಪುರುಷ ಸಮಾಜವನ್ನು ಎದುರು ಹಾಕಿಕೊಂಡದ್ದರಿಂದಾಗಿ ಅವರು ಬಹಳಷ್ಟು ಕಷ್ಟಗಳನ್ನು ಅನುಭವಿಸಬೇಕಾಯಿತು. ಅವಿವಾಹಿತೆಯಾಗಿ ಒಂಟಿ ಬದುಕನ್ನು ನಡೆಸುತ್ತಿದ್ದ ಆಕೆ ತನ್ನ ಖಾಸಗಿ ಬದುಕಿನಲ್ಲೂ ಅನೇಕ ರೀತಿಯಿಂದ ನೋವು ಅನುಭವಿಸಿದರು.
ಲಲಿತಾಂಬಿಕಾ ಅಂತರ್ಜನಂ ಅವರು ನಂಬೂದಿರಿ ಪುರುಷರ ಕ್ರೌರ್ಯ-ದಬ್ಬಾಳಿಕೆಗಳನ್ನು ತಮ್ಮ ಕಥೆಗಳಲ್ಲಿ ಚಿತ್ರಿಸಿದರು. ‘ಪುರುಷರ ದೃಷ್ಟಿಯಲ್ಲಿ ಸ್ತ್ರೀಯರು ಕೇವಲ ಭೋಗದ ವಸ್ತುಗಳೇ ಹೊರತು ಅವರಿಗೂ ಒಂದು ಮನಸ್ಸಿದೆ-ಹೃದಯವಿದೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಲೇ ಇಲ್ಲ’ ಎಂದು ಅವರು ಹೇಳಿದರು. ಪುರುಷರು ವಿಧಿಸಿದ ಸಂಪ್ರದಾಯದ ಕಟ್ಟುಪಾಡುಗಳಿಂದ ಬಂಧನಕ್ಕೊಳಗಾದ ನಂಬೂದಿರಿ ಸ್ತ್ರೀಯರನ್ನು ಮುಕ್ತಗೊಳಿಸುವುದು ಲಲಿತಾಂಬಿಕಾ ಅವರ ಮುಖ್ಯ ಉದ್ದೇಶವಾಗಿತ್ತು. ಅವರು ಟಾಗೋರ್ ಸಾಹಿತ್ಯದಿಂದಲೂ ಸ್ವಾಮಿ ವಿವೇಕಾನಂದರ ಧಾರ್ಮಿಕ ಸಿದ್ಧಾಂತಗಳಿಂದಲೂ, ಗಾಂಧೀಜಿಯವರ ರಾಷ್ಟ್ರೀಯ ಜಾಗೃತಿಯಿಂದಲೂ ತುಂಬಾ ಪ್ರಭಾವಿತರಾಗಿದ್ದರು. ತಮ್ಮದೇ ಸಮುದಾಯದಲ್ಲಿ ಸ್ತ್ರೀಸ್ವಾತಂತ್ರ್ಯಕ್ಕಾಗಿ ಧ್ವನಿಯೆತ್ತಿದ ವಿ.ಟಿ. ಭಟ್ಟಾದಿರಿಪ್ಪಾಡ್, ಎಂ.ಆರ್. ಭಟ್ಟಾದಿರಿಪ್ಪಾಡ್ ಆರ್ಯ ಪಳ್ಳಂ ಮತ್ತು ಇ.ಎಂ.ಎಸ್. ನಂಬೂದಿರಿಪ್ಪಾಡ್ ಅವರಿಂದಲೂ ಅವರಿಗೆ ಸ್ಫೂರ್ತಿ ಸಿಕ್ಕಿತು. ಅದೃಷ್ಟವಶಾತ್ ಅವರ ತಂದೆ ತಾಯಿಯರು ಬಹಳ ಸುಧಾರಣಾವಾದಿ ಮನೋಭಾವದವರಾಗಿದ್ದು ಆಕೆಗೆ ಒಳ್ಳೆಯ ಶಿಕ್ಷಣವನ್ನು ಕೊಡಿಸಿದರು. ಅವರಿಗೆ ಎನ್.ಎಸ್. ಪಂದಳ ಅನ್ನುವವರು ಮನೆಪಾಠ ಹೇಳಿದ್ದರು. ಅವರನ್ನು ಆಕೆ ತನ್ನ ‘ಗುರು’ ಎಂದು ಪರಿಗಣಿಸಿದ್ದರು. ಎಳೆಯ ನಂಬೂದಿರಿ ತರುಣಿಯರು ಮುದಿ ವಯಸ್ಸಿನ ಗಂಡಸರನ್ನು ಬಲವಂತಕ್ಕೆ ಬಗ್ಗಿ ನಾಲ್ಕನೇ ಅಥವಾ ಐದನೆಯ ಹೆಂಡತಿಯಾಗಿ ಮದುವೆ ಮಾಡಿಕೊಳ್ಳಬೇಕಾದ ದುಸ್ಥಿತಿ ಕೊನೆಗೊಳ್ಳಬೇಕು ಅನ್ನುವುದು ಅವರ ಆಶಯವಾಗಿತ್ತು. ಇದು ಅವರ ‘ಮೂಡುಪಟಂ’ (ಮುಸುಕಿನೊಳಗಿನ ಚಿತ್ರ) ಎಂಬ ಕಥೆಯಲ್ಲಿ ವ್ಯಕ್ತವಾಗಿದೆ. ನಂಬೂದಿರಿ ಮಹಿಳೆಯರ ಪರಿಸ್ಥಿತಿ ಉತ್ತಮಗೊಳ್ಳಬೇಕಾದರೆ ಅವರು ತಾವು ವಾಸಿಸುತ್ತಿದ್ದ ಕತ್ತಲೆ ತುಂಬಿದ ‘ಇಲ್ಲಂ’ ಅಥವಾ ‘ಮನ’ಗಳ ಒಳಗಿಂದ ಹೊರಗೆ ಹೆಜ್ಜೆಯಿಡುವ ಧೈರ್ಯ ಮಾಡಬೇಕು ಎನ್ನುವುದು ಅವರ ನಿಲುವು ಆಗಿತ್ತು.
ಯೋಗ ಕ್ಷೇಮ ಸಭಾ
ಸಮಾಜದಲ್ಲಿ ಇಂಥ ಬದಲಾವಣೆ ತರುವ ಉದ್ದೇಶದಿಂದ ಯುವಕ-ಯುವತಿಯರೆಲ್ಲರೂ ಸೇರಿ ‘ಯೋಗ ಕ್ಷೇಮ ಸಭಾ’ ವನ್ನು ಸ್ಥಾಪಿಸಿದ್ದರು. ಆದರೆ ಅವರ ಸಮುದಾಯದ ಸಂಪ್ರದಾಯವಾದಿ ಹಿರಿಯರು ಕ್ರಾಂತಿಕಾರಿ ಯುವಜನತೆಯ ವಿರುದ್ಧ ಕಿಡಿ ಕಾರುತ್ತಲೇ ಇದ್ದರು. ಲಲಿತಾಂಬಿಕಾ, ಆರ್ಯಾ ಪಳ್ಳಂ ಮೊದಲಾದ ಮಹಿಳೆಯರು ಪುರುಷರೊಂದಿಗೆ ಸೇರಿ ಬದಲಾವಣೆಗಳನ್ನು ಸೂಚಿಸುವ ಕಥೆ, ಕವಿತೆ, ಲೇಖನ, ನಾಟಕಗಳನ್ನು ಬರೆದರು. ವಿ.ಟಿ.ಯವರ ದೃಷ್ಟಿಯಲ್ಲಿ ಅಂತರ್ಜಾತೀಯ ವಿವಾಹ, ವಿಧವಾ ಮರುವಿವಾಹಗಳಿಗೆ ಸಮಾಜವು ಸಮ್ಮತಿಸಬೇಕಾಗಿತ್ತು. ಹಲವು ಮಂದಿ ಮಹಿಳೆಯರಿಗೆ ಅವರೇ ಅಂತರ್ಜಾತೀಯ ವಿವಾಹಗಳನ್ನೂ ವಿಧವಾ ಮರುವಿವಾಹಗಳನ್ನೂ ಸ್ವತಃ ನಿಂತು ಮಾಡಿಸಿದರು. ಸ್ತ್ರೀಯರ ಇಂಥ ಸಮಸ್ಯೆಗಳನ್ನು ಕುರಿತು ವಿ.ಟಿ.ಬಿ. ಅವರು ‘ರಜನಿರಂಗಂ’, ಮತ್ತು ‘ಪೋಂವಳಿ’ (ಬಿಡುಗಡೆಯ ದಾರಿ) ಎಂಬ ಕಥೆಗಳನ್ನೂ ‘ಅಡುಕ್ಕಳಯಿಲ್‍ನಿನ್ನು ಅರಞ್ಞತ್ತೇಕ್ಕ್’ (ಅಡುಗೆಮನೆಯಿಂದ ರಂಗವೇದಿಕೆಗೆ) ಎಂಬ ನಾಟಕವನ್ನೂ ಬರೆದರು. ಎಂ.ಆರ್. ಭಟ್ಟಾದಿರಿಪ್ಪಾಡ್ ಅವರ ‘ವಾಲ್ ಕಣ್ಣಾಡಿ’ (ನಂಬೂದಿರಿ ಸ್ತ್ರೀಯರು ಉಪಯೋಗಿಸುತ್ತಿದ್ದ ಸುಂದರ ವಿನ್ಯಾಸದ ಕೈಗನ್ನಡಿ) ಮೂತ್ತಿರಿಙಡ್ ಅವರ ‘ಪೂಂಗುಲ’ (ಹೂಗೊಂಚಲು)ಮೊದಲಾದ ಕೃತಿಗಳೂ ಇದೇ ದಾರಿಯಲ್ಲಿ ಸಾಗಿದವು. ಎಂ.ಆರ್. ಭಟ್ಟಾದಿರಿಪ್ಪಾಡ್ ಅವರ ‘ಮರಕ್ಕುಡಕ್ಕುಳ್ಳಿಲೆ ಮಹಾನರಕಂ’ (ಮರದ ಕೊಡೆಯೊಳಗಿನ ಮಹಾನರಕ), ‘ಆಫಂಡೆ ಮಗಳ್’ (ಆಫನ್’ ಅಂದರೆ ನಂಬೂದಿರಿ ಕುಟುಂಬದ ಹಿರಿಯನಲ್ಲದ ಗಂಡಸು) ಮೊದಲಾದ ಕೃತಿಗಳು ನಂಬೂದಿರಿ ಸ್ತ್ರೀಯರ ಸಂಕಟಗಳು ಮತ್ತು ಹಿರಿಯರಲ್ಲದ ಗಂಡುಮಕ್ಕಳು ಸಂಬಂಧಂ ಮೂಲಕ ಪಡೆದ ಮಕ್ಕಳು ಆಸ್ತಿಯ ಹಕ್ಕಿಲ್ಲದೆ ಕಷ್ಟ ಪಡುವÀ ದುಸ್ಥಿತಿಗಳನ್ನು ಚಿತ್ರಿಸಿದವು.
8ನೇ ಶತಮಾನದಲ್ಲಿ ಎರಡನೆಯ ಚೇರ ಸಾಮ್ರಾಜ್ಯವಿದ್ದ ಕಾಲದಲ್ಲಿ ಬ್ರಾಹ್ಮಣ ಸಮುದಾಯವು ಕೇರಳದ ಸಾಮಾಜಿಕ ಮತ್ತು ರಾಜಕೀಯ ವಲಯಗಳಲ್ಲಿ ಬಲಿಷ್ಠವಾಗಿತ್ತು. ದೇವಸ್ಥಾನಗಳು ಸಾಮಾಜಿಕ ಸಂಸ್ಥೆಗಳಾಗಿ ಹೆಚ್ಚು ಮಹತ್ವ ಪಡೆದು ಅವುಗಳ ಗರ್ಭಗುಡಿಯೊಳಗೆ ಪ್ರವೇಶಿಸುವ ಹಕ್ಕನ್ನು ಬ್ರಾಹ್ಮಣರು ತಮ್ಮ ಬಿಗಿ ಮುಷ್ಟಿಯೊಳಗೇ ಇಟ್ಟುಕೊಂಡಿದ್ದರು. ಆ ಮೂಲಕ ಅವರು ಚಾತುರ್ವಣ್ಯ ಆಧಾರಿತ ಸಮಾಜವನ್ನು ಸೃಷ್ಟಿಸಿದರು. ವೇದವನ್ನು ಬಲ್ಲವರು ತಾವು ಮಾತ್ರವೆಂದು ಅವರು ದೇವಸ್ಥಾನದ ಪೂಜೆಯ ಹಕ್ಕನ್ನು ಇತರ ಜಾತಿಗಳಿಗೆ ಬಿಟ್ಟು ಕೊಡಲಿಲ್ಲ. ಬ್ರಾಹ್ಮಣರ ನಂತರದ ಉಚ್ಚಜಾತಿಯವರಾದ ನಾಯರ್ ಸಮುದಾಯದವರು ಮುಖ್ಯವಾಗಿ ಕೃಷಿ ಉದ್ಯೋಗ ಮಾಡಿಕೊಂಡಿದ್ದವರು ದೇವಸ್ಥಾನಗಳಿಗೆ ಬೇಕಾದ ಕೃಷಿ ಕಾಣಿಕೆಗಳನ್ನು ಕೊಡುಗೆಯಾಗಿ ಕೊಡುತ್ತಿದ್ದುದರಿಂದ ಅವರು ದೇವಸ್ಥಾನದೊಳಗೆ ಪ್ರವೇಶಿಸುವ ಹಕ್ಕನ್ನು ಪಡೆದರು. ವಾರಿಯರ್, ಚಾಕ್ಯಾರ್, ಮಾರಾರ್ ಮೊದಲಾದ ಜಾತಿಯವರು ‘ಅಂಬಲವಾಸಿ’ಗಳೆನ್ನಿಸಿಕೊಂಡು ದೇವಸ್ಥಾನದ ಸುತ್ತು ಕೆಲಸಗಳಿÀಗೆ ಮಾತ್ರ ಹಕ್ಕು ಪಡೆದರು. ನಾಯರ್‍ಗಳು ದೇವಸ್ಥಾನಕ್ಕೆ ರಕ್ಷಣೆಯೊದಗಿಸುವವರಾಗಿದ್ದರು. ಮಾತ್ರವಲ್ಲದೆ ಅವರು ರಾಜಮಹಾರಾಜರುಗಳ ಅಂಗರಕ್ಷಕರೂ ಆಗಿದ್ದರು. ಅಲ್ಲದೆ ಅವರಲ್ಲಿ ಕೆಲವರಿಗೆ ದೇವಸ್ಥಾನಕ್ಕೆ ಸೇರಿದ ಕೃಷಿಭೂಮಿಯನ್ನೂ ಕೊಡಲಾಗುತ್ತಿತ್ತು. ದೇವಸ್ಥಾನದ ಉತ್ಸವ-ಮೆರವಣಿಗೆಗಳಲ್ಲಿ ಅವರನ್ನು ಸೇರಿಸಿಕೊಳ್ಳುತ್ತಿದ್ದರು. ಇತರ ನಿಮ್ನ ಜಾತಿಗಳ ಜನರಿಗೆ ದೇವಸ್ಥಾನದ ಪ್ರವೇಶ ಪೂರ್ತಿಯಾಗಿ ನಿಷಿದ್ಧವಾಗಿತ್ತು. ಗಾಂಧೀಜಿಯವರು ತಮ್ಮ ಅನುಯಾಯಿಗಳೊಂದಿಗೆ ವೈಕ್ಕಂನ ದೇವಸ್ಥಾನವನ್ನು ಬಲವಂತವಾಗಿ ಪ್ರವೇಶಿಸಿದ ಘಟನೆಯು ದೇವಸ್ಥಾನ ಪ್ರವೇಶ ಚಳುವಳಿಯಾಗಿ ರೂಪುಗೊಂಡಿತು.
ಬೇಕಾದಂತೆ ಬದಲಾವಣೆ
ಉಚ್ಚ ಜಾತಿಯವರೆನ್ನಿಸಿಕೊಂಡವರು ನಿಮ್ನ ಜಾತಿಯವರನ್ನು ತಮಗೆ ಬೇಕಾದಂತೆ ಉಪಯೋಗಿಸಿಕೊಂಡು ಅವರನ್ನು ಶೋಷಿಸಿ, ಹೀನಾಯವಾಗಿ ನಡೆಸಿಕೊಂಡು, ಅವರನ್ನು ಮಾನಸಿಕವಾಗಿಯೂ ದೈಹಿಕವಾಗಿಯೂ ಅಪಾರ ಹಿಂಸೆಗೆ ಗುರಿ ಪಡಿಸುತ್ತಿದ್ದರು. ಬ್ರಾಹ್ಮಣ ನಂಬೂದಿರಿಗಳು ತಮ್ಮ ಮೇಲ್ಮೆಯನ್ನು ಸ್ಥಾಪಿಸುವುದಕ್ಕೋಸ್ಕರ ಮನುಸ್ಮøತಿಯಲ್ಲಿ ತಮಗೆ ಬೇಕಾದಂತೆ ಬದಲಾವಣೆಗಳನ್ನು ಮಾಡಿಕೊಂಡು ಹೊಸದಾಗಿ ಶಂಕರಸ್ಮøತಿಯನ್ನು ರಚಿಸಿ, ಅದನ್ನು ಅನುಷ್ಠಾನಕ್ಕೆ ತಂದು ಸಮಾಜದ ಇತರರ ಮೇಲೆ ಹೇರಿದರು. ಮನುಸ್ಮøತಿಯ ಪ್ರಕಾರ ಪುರುಷರು ಯಜಮಾನರಾಗಿ ಹೆಂಗಸರು ಮತ್ತು ಮಕ್ಕಳು ಅವರಿಗೆ ವಿಧೇಯರಾಗಿರಬೇಕಾದ ಗುಲಾಮರಾಗಿದ್ದರು. ಅದನ್ನು ಬೆಂಬಲಿಸುವಂತಹ ಶ್ಲೋಕವನ್ನು ಅವರು ನಂಬಿದ್ದರು : ಸ್ತ್ರೀಯನ್ನು ಕುಮಾರಿಯಾಗಿದ್ದಾಗ ತಂದೆಯೂ ಯೌವನದಲ್ಲಿ ಗಂಡನೂ ವಾರ್ಧಕ್ಯ ಸ್ಥಿತಿಯಲ್ಲಿ ಮಗನೂ ರಕ್ಷಿಸಬೇಕು ಮತ್ತು ಸ್ತ್ರೀ ಯಾವಾಗಲೂ ಪುರುಷರ ರಕ್ಷಣೆಯಲ್ಲಿರಬೇಕಾದವಳು (ಆದ್ದರಿಂದ ಅವರು ಹೇಳಿದಂತೆ ಕೇಳಿಕೊಂಡಿರಬೇಕು) ಎಂದಾಗಿತ್ತು.
ಅಷ್ಟು ಮಾತ್ರವಲ್ಲದೆ ಪುರುಷರು ದ್ರಾವಿಡ ಸಂಸ್ಕøತಿಯಲ್ಲಿ ಮೊದಲ ಚೇರ ಸಾಮ್ರಾಜ್ಯದ ಆಡಳಿತ ಕಾಲದಲ್ಲಿ ಸ್ತ್ರೀಯರಿಗಿದ್ದ ಸಮಾನ ಹಕ್ಕು ಮತ್ತು ಅವಕಾಶಗಳನ್ನು ಬದಲಾಯಿಸಿದರು. ಸ್ತ್ರೀಯರಿಗಿದ್ದ ಶಿಕ್ಷಣದ ಅವಕಾಶವನ್ನೂ ಕಸಿದುಕೊಂಡು ಅವರನ್ನು ತಮ್ಮ ದೊಡ್ಡ ಮನೆಯ (ಇಲ್ಲಂ) ಅತ್ಯಂತ ಒಳಗಿನ ಕತ್ತಲ ಕೋಣೆಯಾದ ‘ಅಂತಃಪುರ’ದ ಕತ್ತಲೆಯೊಳಗೆ ಮತ್ತು ಅಡುಗೆ ಮನೆಗೆ ಸೀಮಿತವಾಗಿಸಿದರು. ಆರ್ಥಿಕವಾಗಿ ನಂಬೂದಿರಿಗಳು ಅತ್ಯಂತ ಮೇಲುಸ್ತರದಲ್ಲಿದ್ದರೂ ಅವರ ಸ್ತ್ರೀಯರು ಮಾತ್ರ ಅಂತಃಪುರದೊಳಗಿನ ಉಸಿರು ಕಟ್ಟಿಸುವ ವಾತಾವರಣದಲ್ಲಿ ನರಕವಾಸವನ್ನು ಅನುಭವಿಸುತ್ತಿದ್ದರು. ವೇಳಿ, ಅಧಿವೇಡನಂ, ಪರಿವೇಡನಂ, ಮಾರುಕಲ್ಯಾಣಂ ಇವೇ ಮೊದಲಾದ ವೈವಾಹಿಕ ವ್ಯವಸ್ಥೆಯನ್ನು ನಂಬೂದಿರಿ ಪುರುಷರು ಸೃಷ್ಟಿಸಿಕೊಂಡರು. ಕುಟುಂಬದ ಹಿರಿಯ ಗಂಡಸು ನಂಬೂದಿರಿ ಹೆಣ್ಣನ್ನೇ ಮದುವೆಯಾಗುವುದು ವೇಳಿ. ಅನಂತರ ಹುಟ್ಟಿದ ತಮ್ಮಂದಿರು ನಾಯರ್ ಸಮುದಾಯದ ಹೆಣ್ಣನ್ನು ಸಂಬಂಧಂ ಮೂಲಕ ಇಟ್ಟುಕೊಂಡರೆ ಅವರ ಹೆಂಡತಿಯರು ತೌರುಮನೆಯಲ್ಲೇ (ತರವಾಡು) ಇದ್ದು ಮಕ್ಕಳನ್ನು ನೋಡಿಕೊಳ್ಳಬೇಕು ಮತ್ತು ಆಗಾಗ ಭೇಟಿಕೊಡುವ ಗಂಡಂದಿರನ್ನು ಲೈಂಗಿಕವಾಗಿ ತೃಪ್ತಿ ಪಡಿಸಬೇಕು. ಆ ಹೆಂಗಸರು ಗಂಡ ಹುಟ್ಟಿ ಬೆಳೆದ ಮನೆಯೊಳಗೆ ಕಾಲಿಡುವಂತಿಲ್ಲ. ಕಾಲಿಟ್ಟರೆ ಅದು ಅಶುದ್ಧ. ಅವರ ಮಕ್ಕಳಿಗೆ ಅಪ್ಪನ ಮೂಲ ಮನೆಯೊಳಗೆ ಪ್ರವೇಶವಿಲ್ಲ. ಈ ಪರಿಸ್ಥಿತಿ 1924ರ ತನಕ ಮುಂದುವರೆಯಿತು.
ಹೆಚ್ಚು ಕಡಿಮೆ ಇದೇ ಕಾಲದಲ್ಲಿ ಮಲೆಯಾಳ ಸಾಹಿತ್ಯದಲ್ಲಿ ಮಹಿಳಾ ಧ್ವನಿ ಮೊಳಗ ತೊಡಗಿತು. ಕಡತ್ತನಾಟ್ಟ್ ಮಾಧವಿಯಮ್ಮ, ಮೇರಿ ಜಾನ್ ತೋಟ್ಟಂ, ಲಲಿತಾಂಬಿಕಾ ಅಂತರ್ಜನಂ, ಕೆ. ಸರಸ್ವತಿಯಮ್ಮ, ಬಾಲಾಮಣಿಯಮ್ಮ, ರಾಜಲಕ್ಷ್ಮಿ ಮೊದಲಾದ ಮಹಿಳಾ ಸಾಹಿತಿಗಳು ರಂಗ ಪ್ರವೇಶ ಮಾಡಿದರು.
ಮೇರಿ ಜಾನ್ ತೋಟ್ಟಂ (1899-1985)
ಮೇರಿ ಜಾನ್ ತೋಟ್ಟಂ ಮಲೆಯಾಳದ ಮೊದಲ ಕವಯಿತ್ರಿ. 1899 ನವೆಂಬರ್ 6ರಂದು ಇವರು ಎರ್ನಾಕುಲಂ ಜಿಲ್ಲೆಗೆ ಸೇರಿದ ಇಲಞಞಯ ತೋಟ್ಟಂ ಕುಟುಂಬದ ಉಲಹನ್ನ ಮತ್ತು ಮಾನ್ನಾನಂಪಟ್ಟಶೇರಿಯ ಮರಿಯಮ್ಮರ ಮಗಳಾಗಿ ಜನಿಸಿದರು. ಆಶಾನ್ ತರಬೇತಿ ಕೇಂದ್ರದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸದ ನಂತರ ಮಾನ್ನಾನದ ಶಾಲೆಯಲ್ಲೂ ಮೂತ್ತೋಲಿ ಕಾನ್ವೆಂಟ್ ಶಾಲೆಯಿಂದ ವರ್ನಾಕ್ಯುಲರ್ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟನ್ನೂ ಪಡೆದರು. ಮುಂದೆ ವಡಕ್ಕನ್ ಪರವೂರಿನ ಸೈಂಟ್ ಥಾಮಸ್ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕಿಯಾಗಿ ಕೆಲಸಕ್ಕೆ ಸೇರಿದರು. ಅವರು ಕನ್ಯಾಸ್ತ್ರೀಮಠ ಸೇರಿದ ನಂತರ ಅವರ ಹೆಸರು ಸಿಸ್‍ಟರ್ ಮೇರಿ ಬನೀಜ್ಞ ಎಂದಾಯಿತು. ಎರಡು ವರ್ಷಗಳ ನಂತರ ಕೊಲ್ಲಂ ಸರಕಾರಿ ಮಲೆಯಾಳ ಶಾಲೆಯಲಿ ಸೇರಿ ಮಲೆಯಾಳದ ಉನ್ನತ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಅನಂತರ ವಡಕ್ಕನ್ ಪರವೂರಿನಲಿದ್ದ ಒಂದು ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಕೆಲಸಕ್ಕೆ ಸೇರಿದರು. 1961ರಲ್ಲಿ ಸೇವೆಯಿಮದ ನಿವೃತ್ತರಾದರು. ಮೇ 21, 1985 ರಂದು ನಿಧನರಾದರು.
‘ಗೀತಾವಲಿ’ ಎಂಬುದು ಮೇರಿ ಅವರ ಮೊದಲ ಕವನ ಸಂಕಲನವಾಗಿತ್ತು. ಮಹಾಕವಿ ಉಳ್ಳೂರು ಅವರ ಮುನ್ನುಡಿಯೊಂದಿಗೆ ಪ್ರಕಟವಾದ ಇದು ಅವರಿಗೆ ಕವಯಿತ್ರಿಯೆಂಬ ಹೆಸರನ್ನು ತಂದಿತು. ಕನ್ಯಾಮಠವನ್ನು ಸೇರಿ ಸಿಸ್ಟರ್ ಆಗುವುದಕ್ಕೆ ಮೊದಲು ಅವರು ಬರೆದ ‘ಲೋಕಮೇ ಯಾತ್ರ (ಲೋಕವೇ ಯಾತ್ರೆ) ಎಂಬ ಕವಿತೆ ಪ್ರಸಿದ್ಧವಾಗಿದೆ. 1971ರಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಅವರ ಒಟ್ಟು ಕೊಡುಗೆಗಳನ್ನು ಪರಿಗಣಿಸಿ ಮಾರ್ಪಾಪ್ಪದಲ್ಲಿ ‘ಬೆನೇನಮೇರೇಂದಿ’ ಎಂಬ ಬಿರುದು ಕೊಟ್ಟು ಸಮ್ಮಾನಿಸಲಾಯಿತು. ಕೇರಳ ಕ್ಯಾಥೋಲಿಕ್ ಅಸೋಸೊಯೇಶನ್ 1981ರಲ್ಲಿ ಸಿಸ್ಟರ್ ಮೇರಿ ಬನೀಜ್ಞಳನ್ನು ಗೌರವಿಸಿದರು. ಆಯ್ದ ಕವನಗಳ ಮೊದಲ ಸಂಕಲನ ‘ತೋಟ್ಟಂ ಕವಿತಗಳ್ ‘,1973ರಲ್ಲೂ ಎರಡನೆಯ ಸಂಕಲನ ‘ಲೋಕಮೇ ಯಾತ್ರ’ ಅವರ ಮರಣಾ ನಂತರ 1986ರಲ್ಲೂ ಅವರ ಆತ್ಮಕತೆ ‘ವಾನಂಬಾಡಿ’ (ಬಾನಾಡಿ) 1986ರಲ್ಲೂ ಪ್ರಕಟವಾದವು.
ಗೀತಾವಲಿ, ಲೋಕಮೇ ಯಾತ್ರ, ಕವಿತಾರಾಮಂ, ಈಶ್ವರಪ್ರಸಾದಂ, ಚೆರುಪುಷ್ಪತ್ತಿಂದೆ ಬಾಲ್ಯಕಾಲ ಸ್ಮರಣಗಳ್ (ಪುಟ್ಟ ಪುಷ್ಪದ ಬಾಲ್ಯಕಾಲ ಸ್ಮರಣೆಗಳು), ವಿಧಿ ವೈಭವಂ, ಆತ್ಮಾವಿಂದ ಎಸ್ನೇಹಗೀತ, ಆಧ್ಯಾತ್ಮಿಕ ಗೀತ, , ಮಾಗ್ಗಿ, ಮಧುಮಂಜರಿ, ಭಾರತ ಮಹಾಲಕ್ಷ್ಮಿ, ಕವನಮೇಳ, ಮಾರ್ಥೋಮಾ ವಿಜಯ ಮಹಾಕಾವ್ಯಂ, ಕರಯುನ್ನ ಕವಿತಗಳ್( ಅಳುವ ಕವಿತೆಗಳು), ಗಾಂಧಿಜಯಂತಿ ಮಹಾಕಾವ್ಯಂ ಮತ್ತು ಅಮೃತಧಾರಾ. ಇವರಿಗೆ ಅನೇಕ ಪ್ರಶಸ್ತಿ-ಪುರಸ್ಕಾರಗಳೂ ಲಭಿಸಿದ್ದವು.
ಕೂತ್ತಾಟ್ಟುಕ್ಕುಳಂ ಮೇರಿ ಜಾನ್ (1905-1950)
ಇವರು ವಡಗರದ ಯೋಹಾನ್ ಮಾಂದಾನ ಯಾಕೋಬಯ ಸುರಿಯಾನಿ ಚರ್ಚಿನ ಪಾದ್ರಿಗಳಾದ ಯೋಹಾನನ್ ಕೋರ್ ಎಪಿಸ್ಕೋಪ ಮತ್ತು ಎರ್ನಾಕುಳಂ ಚೊಳ್ಳಂಬೇಲೆ ಅನ್ನಮ್ಮರ ಮಗಳಾಗಿ ವಡಗರದಲ್ಲಿ 22 ಜನವರಿ 1905ರಂದು ಜನಿಸಿದರು. ವಡಗರದ ಸೇಂಟ್ ಜಾನ್ಸ್ ಪ್ರೌಢಶಾಲೆಯಲಿ ವಿದ್ಯಾಭ್ಯಾಸ ಮಾಡಿ ವಿದ್ವಾನ್ ಕೋರ್ಸನ್ನು ಮುಗಿಸಿ ಅಧ್ಯಾಪಕಿಯಾದರು. ಇಷ್ಟವಿಲ್ಲದ ಮದುವೆಯಿಂದ ಹೊರನಡೆದು ಸಮಾಜ ಸೇವೆ ಮಾಡುತ್ತಿದ್ದ ಡಾ. ಪಾಲ್ಪು ಅವರ ಆಶ್ರಯದಲ್ಲಿ ಕಳೆದರು. ಅನಂತರ ಅಂಚೆ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದರು. ಈ ಸಮಯದಲಿಯೇ ಸಾಹಿತ್ಯದಲ್ಲಿ ಆಸಕ್ತಿ ವಹಿಸಿ ಕವಿತೆಗಳನ್ನು ಬರೆಯ ತೊಡಗಿದರು. ಇವರ ಕವಿತಾ ಸಂಕಲನಗಳು : ಅಂದಿ ನಕ್ಷತ್ರಂ (ರಾತ್ರಿಯ ನಕ್ಷತ್ರ), ಭಾಷ್ಪ ಮಣಿಗಳ್, ಪ್ರಭಾತ ಪುಷ್ಪಂ, ಕಾಟ್ಟ್ ಪರಞ್ಞ ಕಥ (ಗಾಳಿ ಹೇಳಿದ ಕಥೆ), ಮತ್ತು ಕಬೀರಿಂದೆ ಕಥ (ಕಬೀರರ ಕಥೆ). 1996ರಲ್ಲಿ ಇವರ ಸಾಹಿತ್ಯ ಸಾಧನೆಗಳಿಗಾಗಿ ಇವರಿಗೆ ಕೇರಳ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿತು.
ಕಡತ್ತನಾಟ್ಟ್ ಮಾಧವಿಯಮ್ಮ (1909-1999)
ಈಕೆ 1909ರಲ್ಲಿ ತಿರುವೋರದಲ್ಲಿ ಕೃಷ್ಣಕುರುಪ್ ಮತ್ತು ಕಲ್ಯಾಣಿಯಮ್ಮರ ಮಗಳಾಗಿ ಜನಿಸಿದರು. ಕಡತ್ತನಾಟ್ಟ್ ಕೃಷ್ಣ ವಾರ್ಯರ್ ಎಂಬ ಗುರುವಿನ ಕೈಯಲ್ಲಿ ಅವರು ವಿದ್ಯಾಭ್ಯಾಸ ಮಾಡಿದರು. ಎಳೆಯ ವಯಸ್ಸಿನಲ್ಲೇ ಕವಿತಾ ರಚನೆಯಲ್ಲಿ ಆಸಕ್ತಿ ಹೊಂದಿದ್ದರು. ಕಡತ್ತನಾಡಿನ ಜಾನಪದ ಹಾಡುಗಳು ಅವರಿಗೆ ಕಂಠಸ್ಥವಾಗಿದ್ದವು. ಎ.ಕೆ. ಕುಂಜಿಕೃಷ್ಣನ್ ಅವರ ಪತಿ. ಮಾಲತಿ ಎಂಬ ಕಾವ್ಯ ನಾಮದಲ್ಲೂ ಅವರು ಕವನಗಳನ್ನು ಬರೆಯುತ್ತಿದ್ದರು. ಹಲವಾರು ಬಾರಿ ಸಾಹಿತ್ಯ ಪರಿಷತ್ತು ಏರ್ಪಡಿಸಿದ ಸಮ್ಮೇಳನಗಳಲಿ ಅವರು ಅಧ್ಯಕ್ಷ ಸ್ಥಾನ ವಹಿಸಿದ್ದರು. ಕಾವ್ಯೋಪಹಾರಂ, ಕಣಿಕ್ಕೊನ್ನ, ಜೀವಿತ ತಂತುಕ್ಕಳ್, ತಚ್ಚೋಳಿ ಒದೇನನ್, ಪಯ್ಯಂಬಳ್ಳಿ ಚಂದು ಮುತ್ತಚ್ಛಂಡೆ ಕಣ್ಣುನೀರ್, ಮತ್ತು ಗ್ರಮಾಶ್ರೀಗಳ್ ಎಂಬ ಕೃತಿಗಳನ್ನು ರಚಿಸಿದ್ದಾರೆ. ಇವರ ‘ಕಣಿಕ್ಕೊನ್ನ’ ಕೃತಿಗೆ ಕೇರಳ ಸಾಹಿತ್ಯ ಅಕಾಡೆಮಿ’ ಪ್ರಶಸ್ತಿ ಲಭಿಸಿತ್ತು. ಇವರ ಹೆಚ್ಚಿನ ಹಾಡುಗಳು ಲಯಬದ್ಧವಾಗಿದ್ದು ಜಾನಪದ ಹಾಡುಗಳ ರೀತಿಯಲಿ ಹಾಡಲು ಸೂಕ್ತವಾಗಿದ್ದವು. (ಸಶೇಷ)
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.