ಹಿಂದಣ ಹೆಜ್ಜೆ /ಸಸ್ಯಗಳ ಅದ್ಭುತ ಅನ್ವೇಷಕಿ ಇನೆಸ್ ಎಕ್ಸಿಯ
ಜೀವನದಲ್ಲಿ ಎಲ್ಲವೂ ಅಂದುಕೊಂಡಂತೆ ಇರುವುದಿಲ್ಲ, ಆದರೆ ಜೀವನದಲ್ಲಿ ಅಂದುಕೊಂಡದ್ದನ್ನು ಮಾಡಬಹುದು ಎಂಬುದನ್ನು ತೋರಿಸಿಕೊಟ್ಟದ್ದು ಅಸಾಮಾನ್ಯ ಸಸ್ಯಾನ್ವೇಷಕಿ ಇನೆಸ್ ಎಕ್ಸಿಯ. ಐವತ್ತೈದರ ವಯಸ್ಸಿನಲ್ಲಿ ಆರಂಭವಾದ ಇನೆಸ್ ಅನ್ವೇಷಣೆ, ಸಸ್ಯಶಾಸ್ತ್ರವನ್ನು ಕುರಿತ ಅದುವರೆಗಿನ ಅನೇಕ ಹಳೆಯ ನಂಬಿಕೆಗಳನ್ನು ಬದಲಾಯಿಸಿತು, ಹೊಸ ಸಸ್ಯ ಪ್ರಭೇದಗಳನ್ನು ಮಾನವರಿಗೆ ಪರಿಚಯಿಸಿತು. ಮುಂದೆ ಸುಮಾರು ಐವತ್ತು ಸಸ್ಯಗಳಿಗೆ ಅವರ ಹೆಸರನ್ನೇ ಇಡಲಾಯಿತು.
ನಿಸರ್ಗದ ಸಸ್ಯ ಸಂಪತ್ತಿನ ಅನ್ವೇಷಣೆಯಲ್ಲಿ ತುಂಬ ಆಸಕ್ತಳಾಗಿದ್ದ ಆ ಮಹಿಳೆ ಬೆಟ್ಟಗುಡ್ಡ, ಕಾಡುಮೇಡುಗಳನ್ನು ಬಿಡದೆ ತಿಂಗಳುಗಟ್ಟಲೆ ಅಲೆಯುತ್ತಿದ್ದಳು. ದೂರದ ಅಗ್ನಿಪರ್ವತ, ನದಿಪಾತ್ರ ಯಾವುದನ್ನೂ ಬಿಡದ ಈ ಸಸ್ಯವಿಜ್ಞಾನಿ, ಕಣ್ಣಿಗೆ ಕಂಡ ಒಂದೊಂದು ಗಿಡಮೂಲಿಕೆಯನ್ನೂ ಹಿಡಿದು ಪರೀಕ್ಷಿಸುತ್ತಿದ್ದಳು. ಯಾವುದೋ ಬೆಟ್ಟದ ತುದಿ ಏರುತ್ತ ಬಿದ್ದು ಕೈಮುರಿದುಕೊಂಡಳು. 1925ರ ಆಚೀಚೆಗಿನ ಆ ಕಾಲದಲ್ಲಿ ಒಬ್ಬ ಮಹಿಳೆ ಇಂಥ ಅಲೆದಾಟದ ಸಾಹಸ ಕೈಗೊಂಡರೆ ಅದು ಯಾವ ದೇಶದಲ್ಲಾದರೂ ವಿಚಿತ್ರ ಪ್ರತಿಕ್ರಿಯೆಗಳನ್ನು ಮೂಡಿಸುತ್ತಿತ್ತು. ಆದರೆ ಅವುಗಳನ್ನೆಲ್ಲಾ ಲೆಕ್ಕಿಸದೆ, ಸಸ್ಯಶಾಸ್ತ್ರದಲ್ಲಿ ಪದವಿಯನ್ನೂ ಪಡೆಯದೆ, ಸಸ್ಯಲೋಕದಲ್ಲಿ ತಲ್ಲೀನಳಾಗಿ ಅಪ್ರತಿಮ ಕೆಲಸ ಮಾಡಿ ಅಮರಳಾದ ಆ ಸಸ್ಯಶಾಸ್ತ್ರಜ್ಞೆಯ ಹೆಸರು ಇನೆಸ್ ಎಕ್ಸಿಯ. ( Ynes Mexía )
ಸಸ್ಯಶಾಸ್ತ್ರದ ದಾಖಲೆಗಳ ಪ್ರಕಾರ ಇನೆಸ್ ಎಕ್ಸಿಯ ಸುಮಾರು 150,000 ಸಸ್ಯಪ್ರಭೇದಗಳನ್ನು ಸಂಶೋಧಿಸಿರುವುದಾಗಿ ನಮೂದಾಗಿದೆ. ಇಂಥ ಸಸ್ಯ ಸಂಗ್ರಾಹಕರು ಇನ್ನೊಬ್ಬರಿಲ್ಲ ಎಂಬ ಪ್ರಶಂಸೆ ಸಿಕ್ಕಿದೆ. ಹಾಗೆ ನೋಡಿದರೆ, ಸಾಮಾಜಿಕ ಕಾರ್ಯಕರ್ತೆಯಾಗಿ ಸಮಾಜ ಸೇವೆ ಮಾಡಿಕೊಂಡಿದ್ದ ಇನೆಸ್ ಗೆ ಸಸ್ಯಶಾಸ್ತ್ರದಲ್ಲಿ ಆಸಕ್ತಿ ಹುಟ್ಟಿದ್ದು ಅವರಿಗೆ 50 ವರ್ಷ ವಯಸ್ಸಾದ ನಂತರ! ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಲ್ಲಿ ಪದವಿ ತರಗತಿಗೆ ಸೇರಿದ ಅವರು, 1925 ರ ಸೆಪ್ಟೆಂಬರ್ 15 ರಂದು ದೊಡ್ಡ ಗುಂಪಿನೊಂದಿಗೆ ತಮ್ಮ ಪ್ರಥಮ ಸಸ್ಯಶಾಸ್ತ್ರ ಸಂಶೋಧನಾ ಪ್ರವಾಸಕ್ಕೆ ಹೊರಟರು. (ಅದರ ಸ್ಮರಣೆಗಾಗಿಯೆ ಈ ದಿನ ಗೂಗಲ್ ಅವರಿಗೆ ತನ್ನ ಡೂಡಲ್ ಗೌರವ ಸಲ್ಲಿಸಿದೆ.) ಆದರೆ ತಾನೊಬ್ಬಳೆ ಇದ್ದರೆ ಇನ್ನಷ್ಟು ಅಪರೂಪದ ಸಸ್ಯಗಳನ್ನು ಗುರುತಿಸಬಹುದು ಎಂದು ಮನವರಿಕೆಯಾದೊಡನೆ ಇನೆಸ್ ಪದವಿ ತರಗತಿಗೆ ವಾಪಸ್ ಹೋಗದೆ, ಏಕಾಂಗಿಯಾಗಿ ಸಸ್ಯಾನ್ವೇಷಣೆ ಮಾಡಿದರು.
ಮುಂದಿನ ಹದಿಮೂರು ವರ್ಷ ಇನೆಸ್ ಏಕಾಂಗಿಯಾಗಿ ಪ್ರವಾಸ ಮಾಡುತ್ತ, ಲಕ್ಷಾಂತರ ಸಸ್ಯಗಳನ್ನು ಗುರುತಿಸಿದರು. 1929ರಲ್ಲಿ ಅಮೆಜಾನ್ ನದಿ ತೀರದಗುಂಟ ಮೂರು ಸಾವಿರ ಮೈಲುಗಳ ಅಲೆದಾಟ ನಡೆಸಿದರು. ಅಲ್ಲಿನ ಮೂಲನಿವಾಸಿಗಳ ಜೊತೆ ವಾಸ ಮಾಡಿದರು. ಅಲಾಸ್ಕ, ಮೆಕ್ಸಿಕೊ, ಪೆರು, ಅರ್ಜೆಂಟೀನ, ಚಿಲಿ, ಬ್ರೆಜಿಲ್, ಇಕ್ವೆಡಾರ್, ದಕ್ಷಿಣ ಅಮೆರಿಕಗಳಲ್ಲಿ ಸುತ್ತಾಡಿ ಸಸ್ಯ ಸಂಗ್ರಹ ಮಾಡಿದರು. ಮನುಷ್ಯರು ಕಣ್ಣಿಂದ ನೋಡಿರದಿದ್ದ, ಅಪರೂಪದ ಸಸ್ಯಗಳನ್ನು ಸಂಗ್ರಹಿಸಿ ಅವನ್ನು ಸಂಶೋಧನಾ ಕೇಂದ್ರಗಳಿಗೆ ಮಾರಾಟ ಮಾಡಿ ಮುಂದಿನ ಪ್ರವಾಸಗಳಿಗೆ ದುಡ್ಡು ಹೊಂದಿಸಿಕೊಳ್ಳುವಷ್ಟು ಅತ್ಯಾಸಕ್ತಿ ಅವರಲ್ಲಿತ್ತು.
ಇನೆಸ್ ಎಕ್ಸಿಯ ಹುಟ್ಟಿದ್ದು 1870ರ ಮೇ 24 ರಂದು. ಮೆಕ್ಸಿಕೋ ದೇಶದ ತಂದೆ ಎನ್ರಿಕ್ ಎಕ್ಸಿಯ ಮತ್ತು ಅಮೆರಿಕದ ತಾಯಿ ಸಾರಾ ವಿಲ್ಮರ್ – ಇವರಿಬ್ಬರ ನಡುವೆ ಹೊಂದಾಣಿಕೆ ಇರದೆ ವಿಚ್ಛೇದನ ಅನಿವಾರ್ಯವಾಯಿತು. ವಿಭಿನ್ನ ದೇಶಗಳ ಅಪ್ಪಅಮ್ಮನ ಜಗಳವನ್ನೇ ಬಾಲ್ಯದಲ್ಲಿ ನೋಡಿದ್ದೆ, ಆದರೆ ಮುಂದೆ ಮೆಕ್ಸಿಕೋ ಮತ್ತು ಅಮೆರಿಕ ಎರಡರಲ್ಲೂ ತನ್ನ ಅಧ್ಯಯನ ಮತ್ತು ಸಂಶೋಧನೆ ನಡೆಯಿತು ಎಂದು ಇನೆಸ್ ಹೇಳಿಕೊಂಡಿದ್ದಾರೆ. ಕ್ರೈಸ್ತ ಸನ್ಯಾಸಿನಿ ಆಗಬೇಕೆಂದು ಬಯಸಿದ್ದ ಯುವತಿ ಇನೆಸ್ ಅಪ್ಪನ ಅಸಮ್ಮತಿಯ ಕಾರಣ, ಆ ಯೋಚನೆ ಕೈಬಿಟ್ಟರು. ವಿವಿಧ ನಗರಗಳಲ್ಲಿ ಶಿಕ್ಷಣ, ಕುಟುಂಬದ ಜಗಳ, ಪರದಾಟ ಇವುಗಳಿಂದ ಅವರ ಬಾಲ್ಯ ಸುಖಕರವಾಗೇನೂ ಇರಲಿಲ್ಲ. ಮುಂದೆ ಎರಡು ಮದುವೆ, ಎರಡು ವಿಚ್ಛೇದನ ಹೀಗೆ ವೈವಾಹಿಕ ಜೀವನವೂ ನೆಮ್ಮದಿ ಕೊಡಲಿಲ್ಲ. ನಂತರ ಸ್ಯಾನ್‍ಫ್ರಾನ್ಸಿಸ್ಕೊನಲ್ಲಿ ಸಾಮಾಜಿಕ ಕಾರ್ಯಕರ್ತೆಯಾಗಿ, ಕಾಲೇಜು ವಿದ್ಯಾಭ್ಯಾಸಕ್ಕೆ ಮನಸ್ಸು ಮಾಡಿದರು. ಆದರೆ ಸಸ್ಯಶಾಸ್ತ್ರದ ಅಸಾಧ್ಯ ಸೆಳೆತಕ್ಕೆ ಒಳಗಾಗಿ ಅದಕ್ಕೇ ತಮ್ಮನ್ನು ಸಮರ್ಪಿಸಿಕೊಂಡರು. ಹಸಿರೇ ಅವರ ಉಸಿರಾಯಿತು.
ಇನೆಸ್ ಸಂಶೋಧನಾ ಪ್ರವಾಸಗಳಿಂದಾಗಿ, ಸಸ್ಯಶಾಸ್ತ್ರದಲ್ಲಿ ಪದವಿ ಪಡೆಯಲು ಆಗಲೇ ಇಲ್ಲ. ಆದರೆ ಕಾಡುಮೇಡುಗಳ ಅಲೆದಾಟದಲ್ಲಿ ಅವರು ಮಾಡಿದ ಸಾಧನೆಯನ್ನು ಗುರುತಿಸಿ ಅನೇಕ ಪ್ರಸಿದ್ಧ ವಿಶ್ವವಿದ್ಯಾಲಯಗಳು ಅವರನ್ನು ಉಪನ್ಯಾಸ, ಬೋಧನೆಗೆ ಆಹ್ವಾನಿಸಿದವು. ಅವರಿಂದ ಪಡೆದ ಅಮೂಲ್ಯ ಸಸ್ಯಪ್ರಭೇದಗಳನ್ನು ಮ್ಯೂಸಿಯಂಗಳಲ್ಲಿ ಜೋಪಾನ ಮಾಡಿದವು. ಹಾರ್ವರ್ಡ್, ಶಿಕಾಗೋ ಮುಂತಾದ ಹಲವು ವಿಶ್ವವಿದ್ಯಾಲಯಗಳು ಇನೆಸ್ ಸಂಶೋಧನೆಗೆ ಸೂಕ್ತ ಗೌರವ ನೀಡಿದವು. ಜಗತ್ತಿನ ಪ್ರಸಿದ್ಧ ವಿಜ್ಞಾನ ಪತ್ರಿಕೆಗಳು ಅವರ ಬಗ್ಗೆ ಲೇಖನ ಪ್ರಕಟಿಸಿ ಕೊಂಡಾಡಿದವು. ಅನೇಕ ವಿಜ್ಞಾನ ಸಂಸ್ಥೆಗಳು ಗೌರವ ಸದಸ್ಯತ್ವ ನೀಡಿದವು. ಅಮೆರಿಕ ಮಾತ್ರವಲ್ಲದೆ, ಮೆಕ್ಸಿಕೊ ದೇಶವೂ ಅವರ ಸಾಧನೆಗೆ ಹಲವು ಬಗೆಯ ಮನ್ನಣೆ ನೀಡಿತು.
ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕಾದರೆ ಅದಕ್ಕೆ ವಯಸ್ಸಿನ ಗಡಿ ಮತ್ತು ಮಿತಿ ಇಲ್ಲ ಎಂಬುದು ಇನೆಕ್ಸ್ ಅವರ ಬದುಕಿನ ಸಾಧನೆಯಿಂದ ಜಗತ್ತಿಗೆ ಹೊಳೆಯಿತು. ತಡವಾಗಿ ಆರಂಭಿಸಿದರೂ ತನ್ನ ಗುರಿ ಸಾಧನೆಗೆ ಅವಿಶ್ರಾಂತವಾಗಿ ಶ್ರಮಿಸುತ್ತಿದ್ದ ಇನೆಸ್ ಮೆಕ್ಸಿಕೋದಲ್ಲಿ ಸುತ್ತಾಟದಲ್ಲಿದ್ದಾಗ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ತಗುಲಿರುವುದು ಪತ್ತೆಯಾಯಿತು. ಮರಳಿ ಕ್ಯಾಲಿಫೋರ್ನಿಯಕ್ಕೆ ಬಂದ ಅವರು 1938 ರ ಜುಲೈ 12 ರಂದು ತಮ್ಮ 68ನೇ ವಯಸ್ಸಿನಲ್ಲಿ ತೀರಿಕೊಂಡರು. ಅಸಾಧ್ಯ ಛಲ, ಅತೀವ ಆಸಕ್ತಿ ಮತ್ತು ಸಂಶೋಧನ ಪ್ರವೃತ್ತಿಯ ಇನೆಸ್ ಎಕ್ಸಿಯ ಅನೇಕ ರೀತಿಯಲ್ಲಿ ಮುಂದಿನ ತಲೆಮಾರುಗಳಿಗೆ ಮಾದರಿಯಾಗಿ ನಿಂತರು. (ವಿವಿಧ ಮೂಲಗಳಿಂದ)
- ಹಿತೈಷಿಣಿ ಬಳಗ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.