Uncategorizedಹಿಂದಣ ಹೆಜ್ಜೆ

ಹಿಂದಣ ಹೆಜ್ಜೆ/ ವೀರಮಾತೆ ಅಹಲ್ಯಾಬಾಯಿ – ಕೃಷ್ಣಾಬಾಯಿ ಹಾಗಲವಾಡಿ

`ಅವನ ಕಥೆ' ಗಳಿಂದಲೇ ತುಂಬಿತುಳುಕುವ ಇತಿಹಾಸದಲ್ಲಿಅವಳ ಕಥೆ’ಗಳು ಬಹಳ ಅಪರೂಪ. ಇಂದೋರಿನ ರಾಣಿಯಾದ ಅಹಲ್ಯಾಬಾಯಿ ಹೋಳ್ಕರ್ ಅಂಥ ಅಪರೂಪದ ಕಥಾನಾಯಕಿ. ಧೀಮಂತಿಕೆ ಮತ್ತು ಧಾರ್ಮಿಕತೆ ಎರಡನ್ನೂ ಒಳಗೊಂಡ ಈ ಮುತ್ಸದ್ದಿಯ ಮೂವತ್ತಮೂರು ವರ್ಷಗಳ ಆಡಳಿತ ಪ್ರಜೆಗಳ ಹಿತವನ್ನೇ ಗುರಿಯಾಗಿ ಇಟ್ಟುಕೊಂಡಿತ್ತು. ಮಧ್ಯಪ್ರದೇಶದ ಹಲವೆಡೆ ಕಾಣುವ ಕೋಟೆಗಳು, ಸ್ಮಾರಕಗಳು ಅಹಲ್ಯಾಬಾಯಿ ಆಡಳಿತದ ಯಶಸ್ಸಿಗೆ ಸಾಕ್ಷಿ ಹೇಳುತ್ತವೆ.

ನಮ್ಮ ದೇಶದ ಇತಿಹಾಸದಲ್ಲಿ ಕಾಣುವ ಹೋರಾಟಗಾರ್ತಿ, ಇಂದೋರಿನ ಮಹಾರಾಣಿ ವೀರಮಾತೆ ಅಹಲ್ಯಾಬಾಯಿ (ಅಹಿಲ್ಯಾಬಾಯಿ) ಹೋಳ್ಕರ್, ಮಹಾರಾಷ್ಟ್ರದ ಅಹಮದ್ ನಗರದ ಚೌಂಡಿ ಗ್ರಾಮದಲ್ಲಿ ಒಂದು ಸಾಮಾನ್ಯ ಕುರಿಗಾಹಿ ಕುಟುಂಬದಲ್ಲಿ 1725 ರ ಮೇ 31 ರಂದು ಜನಿಸಿದಳು. ಅವಳ ತಂದೆ ಮಣಕೋಜಿರಾವ್ ಸಿಂಧೆ, ಗ್ರಾಮದ ಗೌಡನಾಗಿದ್ದು, ಕಂಬಳಿ ಮಾಡುವುದು ಅವರ ಕುಲಕಸುಬಾಗಿತ್ತು. ತಾಯಿ ಸುಶೀಲಾದೇವಿಗೆ ಮಗಳೆಂದರೆ ಬಹಳ ಪ್ರೀತಿ. ಅಹಲ್ಯಾಬಾಯಿ ಒಮ್ಮೆ ನಿತ್ಯದಂತೆ ದೇವಾಲಯಕ್ಕೆ ಹೋಗಿದ್ದಾಗ, ಪೇಶ್ವೆಯರ ಅಶ್ವದಳದ ಮುಖ್ಯಸ್ಥ ಮಲ್ಹಾರರಾವ್ ಹೋಳ್ಕರನ ಕಣ್ಣಿಗೆ ಬಿದ್ದಳು. ಇವಳೇ ನನ್ನ ಮಗನಿಗೆ ತಕ್ಕ ಹೆಂಡತಿ ಎಂದು ನಿರ್ಧರಿಸಿದ ಅವನು ಎಂಟು ವರ್ಷದ ಅಹಲ್ಯಾಳ ತಂದೆತಾಯಿಯನ್ನು ಒಪ್ಪಿಸಿ ಹನ್ನೊಂದು ವರ್ಷದ ಮಗ ಖಂಡೇರಾವ್ ಜೊತೆ ಮದುವೆ ಮಾಡಿದನು. ಅಷ್ಟೇ ಅಲ್ಲ, ತನ್ನ ಮಗನ ಜೊತೆ ಇವಳಿಗೂ ಶಾಸ್ತ್ರ, ಶಸ್ತ್ರವಿದ್ಯೆಗಳನ್ನು ಕಲಿಸಿದನೆಂಬುದು ಬಹಳ ವಿಶೇಷ. ಖಂಡೇರಾವ್ ಕಲಿಯಲು ಹೆಚ್ಚು ಆಸಕ್ತಿ ತೋರದಿದ್ದರೂ ಅಹಲ್ಯಾ ಮಾತ್ರ ಎಲ್ಲ ವಿದ್ಯೆಯನ್ನು ಕರಗತ ಮಾಡಿಕೊಂಡಳು.

ಮಲ್ಹಾರರಾವ್ ಯುದ್ಧಗಳಲ್ಲಿ ಪ್ರದರ್ಶಿಸುತ್ತಿದ್ದ ಶೌರ್ಯವನ್ನು ಮೆಚ್ಚಿದ ಪೇಶ್ವೆಗಳು ಅವನಿಗೆ ಮರಾಠ ರಾಜರಿಂದ ಸುಬೇದಾರ್ ಪದವಿ ಕೊಡಿಸಿ ಮಾಳ್ವ ಸಾಮ್ರಾಜ್ಯದ ಅಧಿಪತಿಯನ್ನಾಗಿ ಮಾಡಿದರು. ಅವನ ಹೆಂಡತಿ ಗೌತಮಾಬಾಯಿಗೆ ಅನೇಕ ಗ್ರಾಮಗಳ ಒಡೆತನ ನೀಡಿ ಸುಬೇದಾರಿಣಿಯನ್ನಾಗಿ ಮಾಡಿದರು. ಅವರು ಇಂದೋರಿನಲ್ಲಿ ಅರಮನೆಯನ್ನು ನಿರ್ಮಿಸಿದರು. ಅಹಲ್ಯಾಬಾಯಿ ದುಶ್ಚಟಗಳಿದ್ದ ತನ್ನ ಗಂಡ ಖಂಡೇರಾವ್ ನನ್ನು ಸರಿದಾರಿಗೆ ತಂದು ಅವನು ತನ್ನ ತಂದೆಯ ಜೊತೆ ಯುದ್ಧಗಳಲ್ಲಿ ಭಾಗವಹಿಸುವಂತೆ ಮಾಡಿದಳು. ಅವರಿಗೆ ಮಾಲೇರಾವ್ ಮತ್ತು ಮುಕ್ತಾಬಾಯಿ ಎಂಬ ಮಕ್ಕಳು ಹುಟ್ಟಿದರು.

ಕುಂಬೇರು ಯುದ್ಧದಲ್ಲಿ ಚಾಟರೊಡನೆ ನಡೆದ ಯುದ್ಧದಲ್ಲಿ ಖಂಡೇರಾವ್ ಅಸು ನೀಗಿದಾಗ, ಅಹಲ್ಯಾ ಸಹಗಮನ ಮಾಡಲು ಸಿದ್ಧಳಾದಳು. ಆದರೆ ಅದನ್ನು ತಡೆದ ಅವಳ ಅತ್ತೆಮಾವ, ಮಾಳ್ವ ಸಾಮ್ರಾಜ್ಯದ ರಕ್ಷಣೆಯ ಭಾರ ಹೊರಿಸಿದರು. ಅಹಲ್ಯಾ ಅವರಿಗೆ ನೆರವಾಗುತ್ತಾ ಆಡಳಿತ ಸೂತ್ರದ ಅನುಭವ ಪಡೆದಳು. ಮಾವ ಮಲ್ಹಾರ ರಾವ್ ಯುದ್ಧಕ್ಕೆ ಹೋಗುವಾಗ ಸೈನ್ಯವನ್ನು ಸಜ್ಜುಗೊಳಿಸುತ್ತಿದ್ದಳು, ಆಡಳಿತವನ್ನೂ ನೋಡಿಕೊಳ್ಳುತ್ತಿದ್ದಳು. ಅತ್ತೆ ಗೌತಮಾಬಾಯಿ ಮರಣ ಹೊಂದಿದಾಗ ಅವಳ ಜಹಗೀರು ಪ್ರದೇಶಕ್ಕೆ ಅಹಲ್ಯಾಬಾಯಿಯೇ ಒಡೆಯಳಾದಳು.

ಸುಬೇದಾರನಾಗಿದ್ದ ಮಗ ಮಾಲೇರಾವ್ ತಂದೆಯಂತೆಯೇ ಅಸಮರ್ಥನಾಗಿ ಕೆಲವು ದಿನಗಳಲ್ಲಿ ಮರಣ ಹೊಂದಿದಾಗ, ಪೇಶ್ವೆಗಳು ಅಹಲ್ಯಾಬಾಯಿಗೇ ಆಡಳಿತವನ್ನು ವಹಿಸಿದರು. ಅವಳು ತನ್ನ ಸೋದರ ಸಂಬಂಧಿ ತುಕ್ಕೋಜಿಯನ್ನು ದಂಡನಾಯಕನನ್ನಾಗಿ ಮಾಡಿ ಆಡಳಿತವನ್ನು ನಿರ್ವಹಿಸತೊಡಗಿದಳು. ಆದರೆ ದಿವಾನ ಗಂಗಾಧರನ ಕುತಂತ್ರದಿಂದ ಪೇಶ್ವೆ ರಘುನಾಥನು ಮಾಳ್ವ ಸಾಮ್ರಾಜ್ಯವನ್ನು ಕಬಳಿಸಲು ಅರವತ್ತು ಸಾವಿರ ಸೈನ್ಯದೊಡನೆ ಕ್ಷಿಪ್ರಾ ನದಿಯನ್ನು ದಾಟಿ ಬರುವಂತಾಯಿತು. ಆದರೆ ಅಹಲ್ಯಾಬಾಯಿ ಧೃತಿಗೆಡದೆ ಅಕ್ಕಪಕ್ಕದ ರಾಜ್ಯದವರ ನೆರವು ಪಡೆದು ಸಿದ್ಧಳಾದಳು. ನನ್ನಂಥ ಅಬಲೆಯ ಮೇಲೆ ಯುದ್ಧ ಮಾಡಿ ಸೋತರೆ ನೀನು ಕೊನೆಯವರೆಗೂ ಅಪಮಾನದಿಂದ ತಲೆತಗ್ಗಿಸಬೇಕಾಗುತ್ತದೆ. ನಾನು ನನ್ನ ಮಹಿಳಾ ಸೈನ್ಯದೊಡನೆ ಬಂದು ಯುದ್ಧ ಮಾಡುತ್ತೇನೆ' ಎಂದು ಪತ್ರ ಬರೆದಳು. ರಘುನಾಥ ಹೆದರಿನಾನು ಯುದ್ಧ ಮಾಡಲು ಬರುತ್ತಿಲ್ಲ, ಮಗನನ್ನು ಕಳೆದುಕೊಂಡ ನಿನಗೆ ಸಾಂತ್ವನ ಹೇಳಲು ಬರುತ್ತಿದ್ದೇನೆ’ ಎಂದು ಪತ್ರಕ್ಕೆ ಉತ್ತರಿಸಿದಾಗ ಹಾಗಿದ್ದರೆ ನಾಲ್ಕು ಜನರ ಜೊತೆ ಮಾತ್ರ ಬರಬಹುದು ಎಂದು ಅಹಲ್ಯಾಬಾಯಿ ಹೇಳಿದಳು. ರಘುನಾಥ ನಾಲ್ವರೊಡನೆ ಬಂದು ಅವಳಿಗೆ ಸಾಂತ್ವನ ಹೇಳಿ ಹೋದನಂತೆ.

ರಣಚಂಡಿ : ಹೀಗೆ ಅಹಲ್ಯಾಬಾಯಿ ಮುತ್ಸದ್ದಿತನದಿಂದ ರಾಜಕಾರಣವನ್ನು ನಿರ್ವಹಿಸುತ್ತಿದ್ದಳು. ಪ್ರಜೆಗಳ ಹಿತಕ್ಕಾಗಿ ಆದಷ್ಟು ಯುದ್ಧಗಳನ್ನು ಮುಂದೂಡುತ್ತಿದ್ದಳು. ರಾಮಘಡದ ಪ್ರತಾಪಸಿಂಹನು ಮಾಳ್ವದ ಮೇಲೆ ಎರಗಿದಾಗ, ಸೈನ್ಯದ ಕೊರತೆ ಇದ್ದುದರಿಂದ ಅವನ ಜೊತೆ ಸಂಧಾನ ಮಾಡಿಕೊಂಡು ಹದಿಮೂರು ಹಳ್ಳಿಗಳನ್ನು ಬಿಟ್ಟುಕೊಟ್ಟಿದ್ದಳು. ಆದರೆ ಆ ಪ್ರತಾಪಸಿಂಹ ಮತ್ತೆ ಆಕ್ರಮಣ ಮಾಡಿದಾಗ ತಾನೇ ರಣಚಂಡಿಯಂತೆ ಯುದ್ಧರಂಗಕ್ಕೆ ಧುಮುಕಿ ಎರಡೇ ದಿನದಲ್ಲಿ ರಾಮಘಡವನ್ನು ಧೂಳೀಪಟ ಮಾಡಿದಳು. ಪ್ರತಾಪಸಿಂಹನನ್ನು ಹೆಡೆಮುರಿ ಕಟ್ಟಿ ತನ್ನ ಆಸ್ಥಾನಕ್ಕೆ ಕರೆಯಿಸಿ ಅವನನ್ನು ತೋಪಿನ ಬಾಯಿಗೆ ಕಟ್ಟಿ ಕೊಲ್ಲುವ ಶಿಕ್ಷೆ ವಿಧಿಸಿದಳು. ಪದೇಪದೇ ಮಾತುಮುರಿದು ಯುದ್ಧಕ್ಕೆ ಬರುತ್ತಿದ್ದ ಅವನಿಗೆ ಕ್ಷಮೆ ತೋರಲಿಲ್ಲ. ಅಹಲ್ಯಾಬಾಯಿಯ ಆಡಳಿತ ರೀತಿಯನ್ನು ಕಂಡು ಅಕ್ಕಪಕ್ಕದ ರಾಜ್ಯದವರು ಅವಳ ತಂಟೆಗೆ ಬರಲು ಹೆದರುತ್ತಿದ್ದರು.

ಆ ಕಾಲದಲ್ಲಿ ಚಂಬಲ್ ಕಣಿವೆಯ ದರೋಡೆಕೋರರು ಪ್ರಯಾಣಿಕರ ಕೊಲೆಸುಲಿಗೆ ಮಾಡುತ್ತ ಸಿಂಹಸ್ವಪ್ನವಾಗಿದ್ದರು. ಅಹಲ್ಯಾಬಾಯಿ ಆ ದರೋಡೆಕೋರರನ್ನು ಸದೆಬಡಿಯುವ ವೀರನಿಗೆ ತನ್ನ ಮಗಳನ್ನೇ ಮದುವೆ ಮಾಡಿಕೊಟ್ಟು, ಸೂಕ್ತ ಸ್ಥಾನಮಾನ ನೀಡುವೆ ಎಂದು ಡಂಗುರ ಸಾರಿಸಿದಳು. ಯಶವಂತರಾವ್ ಫಣಸೆ ಎಂಬ ಯುವಕ ಆ ದರೋಡೆಕೋರರನ್ನು ಸದೆಬಡಿದು ಉಳಿದವರು ರಾಣಿಗೆ ಶರಣಾಗತರಾಗುವಂತೆ ಮಾಡಿದನು. ಅಹಲ್ಯಾಬಾಯಿ ಕೊಟ್ಟ ಮಾತಿನಂತೆ ಯಶವಂತರಾವ್ ಜಾತಿ ಕುಲವನ್ನು ಲೆಕ್ಕಿಸದೆ “ಶೌರ್ಯವೇ ಕುಲ, ಸಾಹಸವೇ ಜಾತಿ” ಎಂದು ಘೋಷಿಸಿ ತನ್ನ ಮಗಳು ಮುಕ್ತಾಬಾಯಿಯನ್ನು ಮದುವೆ ಮಾಡಿಕೊಟ್ಟಳು. ಅಳಿಯನಿಗೆ ಸ್ಥಾನಮಾನವನ್ನೂ ಕೊಟ್ಟಳು. ಮುಂದೆ ಮಗಳ ಮಗ ಅಂದರೆ ಮೊಮ್ಮಗನ ಮೇಲೆ ತುಂಬ ಭರವಸೆ ಇಟ್ಟುಕೊಂಡಿದ್ದಳು. ಆದರೆ ಮೊಮ್ಮಗ ಅನಾರೋಗ್ಯದಿಂದ ಮರಣ ಹೊಂದಿದ. ಕೆಲವೇ ದಿನಗಳಲ್ಲಿ ಅಳಿಯ ಯಶವಂತರಾವ್ ಫಣಸೆಯೂ ಅನಾರೋಗ್ಯದಿಂದ ಅಸು ನೀಗಿದ. ಮಗಳು ಮುಕ್ತಾಬಾಯಿ ಬೇಡವೆಂದರೂ ಕೇಳದೆ ಗಂಡನ ಜೊತೆ ಸಹಗಮನ ಮಾಡಿದಳು.

ಮಕ್ಕಳ, ಬಂಧುಗಳ ಸಾವಿನಿಂದ ಜರ್ಜರಿತಳಾದ ಅಹಲ್ಯಾಬಾಯಿ ಇಂದೋರಿನ ಅರಮನೆಯನ್ನು ತೊರೆದು ಮಾಹೇಶ್ವರಕ್ಕೆ ತನ್ನ ರಾಜಧಾನಿಯನ್ನು ವರ್ಗಾಯಿಸಿದಳು. ಪುರಾನ ಪ್ರಸಿದ್ಧವಾದ ಮಾಹಿಷ್ಮತಿಯೇ ಮಾಹೇಶ್ವರ. ಅಲ್ಲಿ ಗುಡಿ ಗೋಪುರ ಕೋಟೆ ಕೊತ್ತಲಗಳನ್ನು ನಿರ್ಮಿಸಿದಳು. ಪ್ರಜೆಗಳ ಸೇವೆಯಲ್ಲಿ ನಿರತಳಾದಳು. ನಿಪುಣ ನೇಕಾರರನ್ನು ಕರೆಸಿ, `ಮಾಹೇಶ್ವರಿ ಸೀರೆ’ ಎಂಬ ವಿಶೇಷ ಸೀರೆ ತಯಾರಿಕೆಗೆ ಉತ್ತೇಜನ ಕೊಟ್ಟಳು. ಗುಡಿ ಕೈಗಾರಿಕೆ ಮತ್ತು ಸಣ್ಣ ಕೈಗಾರಿಕೆಗಳಿಗೆ ಬೆಂಬಲ ಕೊಟ್ಟು ಪ್ರಜೆಗಳ ಜನಜೀವನವನ್ನು ಉತ್ತಮಪಡಿಸಿದಳು.

ನರ್ಮದೆಗೆ ಎಸೆದಳು : ಅಹಲ್ಯಾಬಾಯಿಯನ್ನು ಪ್ರಜೆಗಳೆಲ್ಲ ದೇವಿ ಅಹಿಲ್ಯಾ ಎಂದೇ ಸಂಬೋಧಿಸುತ್ತಿದ್ದರು. ಆದರೆ ಹೊಗಳಿಕೆಯನ್ನು ಅವಳೆಂದು ಸಹಿಸುತ್ತಿರಲಿಲ್ಲ. ಒಬ್ಬ ಕವಿ ಅವಳ ಚರಿತ್ರೆಯನ್ನು ಬರೆದು ತಂದು ಓದಲು ಪ್ರಾರಂಭಿಸಿದಾಗ “ನನ್ನನ್ನು ಹೊಗಳಬೇಡಿ, ಭಗವಂತನನ್ನು ಹಾಡಿ ಹೊಗಳಿ” ಎಂದು ಹೇಳಿ, ಅವಳ ಚರಿತ್ರೆಯನ್ನು ನರ್ಮದಾ ನದಿಗೆ ಎಸೆಯಲು ಆಜ್ಞೆಮಾಡಿದಳು. ಕವಿಗಳು ಪ್ರಜೆಗಳಿಗೆ ಸದ್ವಿಚಾರವನ್ನು ಬೋಧಿಸಬೇಕೆಂದು ವಿನಂತಿಸಿಕೊಳ್ಳುತ್ತಿದ್ದಳು.

ಆಡಳಿತವನ್ನು ಬಿಡದ ಅಹಲ್ಯಾಬಾಯಿ ಮೊಗಲರು ಮತ್ತು ನಿಜಾಮರೊಡನೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಳು. ಅವರು ಪ್ರತಿ ವರ್ಷ ಚೌಳಿ ಅಂದರೆ ಬಾಗಿನವನ್ನು ಕಳುಹಿಸಿ ಇವಳನ್ನು ಮಾತೆ ಎಂದು ಸಂಬೋಧಿಸುತ್ತಿದ್ದರು. ಅವಳ ಬೊಕ್ಕಸದಲ್ಲಿ ಅಪಾರ ಸಂಪತ್ತು ಇದ್ದುದರಿಂದ ಅಕ್ಕಪಕ್ಕದ ರಾಜ್ಯದವರು ಅವಳಿಂದ ಸಾಲ ಪಡೆದು ಬಡ್ಡಿ ಸಮೇತ ವಾಪಸು ಪಡೆಯುತ್ತಿದ್ದರು. ಬೊಕ್ಕಸದ ಹಣವನ್ನು ರಾಜ್ಯದ ಅಭಿವೃದ್ಧಿಗೆ ವ್ಯಯಿಸಿ, ಧರ್ಮಕಾರ್ಯಗಳಿಗೆ ತನ್ನ ಸ್ವಂತ ಹಣವನ್ನು ಖರ್ಚು ಮಾಡುತ್ತಿದ್ದ ಅವಳು, ರಾಣಿಯಾದರೂ ಆಡಂಬರದ ಜೀವನವನ್ನು ತೊರೆದು ಸರಳ ಜೀವನ ನಡೆಸುತ್ತಿದ್ದಳು. ತನ್ನ ಮಾವನಿಂದ ಬಂದ ಸಿಂಹಾಸನವನ್ನೇರದೆ, ಗಾದಿಯ ಮೇಲೆ ಕುಳಿತು ಶಂಕರನ ಹೆಸರಿನಲ್ಲಿ ರಾಜ್ಯಭಾರ ಮಾಡಿದಳು. ರಾಜಾಜ್ಞೆಗಳನ್ನು ಶಂಕರನಾಜ್ಞೆ ಎಂದು ಹೊರಡಿಸಿ, ಶಂಕರ ಎಂದೇ ತನ್ನ ಸಹಿ ಮಾಡಿದ ನಿಷ್ಠಾವಂತೆ ಅವಳಾಗಿದ್ದಳು. ಅವಳು ಯಾವಾಗಲೂ ಕರಸ್ಥಲದಲ್ಲಿ ಲಿಂಗಧಾರಿಯಾಗಿರುತ್ತಿದ್ದ ಶಿವಭಕ್ತೆ.

ಪ್ರಗತಿಪರ ಕಾನೂನುಗಳು : ಅಹಲ್ಯಾಬಾಯಿ ತಂದ ಕಾನೂನುಗಳು ಬಹಳ ಪ್ರಗತಿಪರ. ಗಂಡ ಸತ್ತರೆ, ಅವನ ಆಸ್ತಿಗೆ ಅವನ ಹೆಂಡತಿಯಾ ವಾರಸುದಾರಳು, ಅವಳಿಗೆ ಮಕ್ಕಳಿಲ್ಲದಿದ್ದರೆ ದತ್ತು ಮಕ್ಕಳನ್ನು ಪಡೆಯಬಹುದು, ದತ್ತು ಮಕ್ಕಳೂ ಆಸ್ತಿಯ ಹಕ್ಕು ಪಡೆಯುವರು ಎಂಬ ಕಾನೂನುಗಳನ್ನು ತಂದ ಧೀರೆ ಅವಳು. ಬಾಲ್ಯ ವಿವಾಹ, ಸತಿಸಹಗಮನ ವಿರೋಧಿಸಿದ ಅವಳು, ಪಾನ ನಿರೋಧ ತಂದಳು. ಭ್ರಷ್ಟಾಚಾರ, ಜಾತಿಪದ್ಧತಿ ನಿರ್ಮೂಲನೆ ಮಾಡಲು ಪ್ರಯತ್ನಿಸಿದಳು. ತೀರ್ಥಯಾತ್ರಿಗಳಿಗೆ, ಪ್ರಯಾಣಿಕರಿಗೆ, ಹಸಿದವರಿಗೆ ಅನ್ನಛತ್ರ, ಅರವಂಟಿಗೆಗಳನ್ನು ಕಟ್ಟಿಸಿದಳು. ಪದಾರ್ಥಗಳನ್ನು ಪಡೆದು ಅಲ್ಲಿ ತಾವೇ ಇಷ್ಟದ ಅಡುಗೆ ಮಾಡಿಕೊಳ್ಳುವ ಅವಕಾಶ ಇತ್ತು. ಪಶುಪಕ್ಷಿ ಜಲಚರಗಳಿಗೆ ಆಹಾರ ವ್ಯವಸ್ಥೆ ಕಲ್ಪಿಸಿದ ಅವಳು ಜಾನುವಾರುಗಳ ಮೇವಿಗಾಗಿ ಫಸಲಿನ ಹೊಲಗಳನ್ನು ಖರೀದಿಸುತ್ತಿದ್ದಳು.

ಅಹಲ್ಯಾಬಾಯಿ ನೂರಾರು ದೇವಾಲಯಗಳನ್ನು ನಿರ್ಮಿಸಿ ವಂಶಪಾರಂಪರ್ಯವಾಗಿ ಪೂಜೆ ನಡೆಯಲು ದಾನಪತ್ರಗಳನ್ನು ಬರೆದುಕೊಟ್ಟಿದ್ದಳು. ಆ ಕಾಲದಲ್ಲಿ ಕಾಶಿ ವಿಶ್ವೇಶ್ವರನ ದೇಗುಲ ಪರಕೀಯರ ದಾಳಿಯಿಂದ ಧ್ವಂಸವಾಗಿ ಪೂಜೆ ನಡೆಯುತ್ತಿರಲಿಲ್ಲ. ಅಹಲ್ಯಾಬಾಯಿ ಮೊಗಲರಿಂದ ಭೂಮಿಯನ್ನು ಖರೀದಿಸಿ ದೇವಾಲಯಗಳನ್ನು ನಿರ್ಮಿಸಿ ಪೂಜೆಗೆ ವ್ಯವಸ್ಥೆ ಮಾಡಿದಳು. ಗುಜರಾತ್‍ನ ಸೋಮೇಶ್ವರ ದೇವಾಲಯ ನಿರ್ಮಿಸಿದ್ದಲ್ಲದೆ, ಹನ್ನೆರಡು ಜ್ಯೋತಿರ್ಲಿಂಗಗಳ ಜೀರ್ಣೋದ್ಧಾರ ಮಾಡಿಸಿದಳು. ನದೀತೀರ, ಅರಣ್ಯಗಳಲ್ಲೂ ಅನ್ನದ ಅನುಕೂಲ ಕಲ್ಪಿಸಿದಳು. ತೀರ್ಥಯಾತ್ರೆ ಮಾಡುವ ಯಾತ್ರಿಕರಿಗೆ ಒಂದು ಜೊತೆ ಬಟ್ಟೆ, ಕಂಬಳಿ, ಕಾಲಿಗೆ ಚಪ್ಪಲಿ, ಒಂದು ಪಾತ್ರೆ, ಖರ್ಚಿಗಿ ಐದು ನಾಣ್ಯ ಕೊಡುತ್ತಿದ್ದ ದಾನಚಿಂತಾಮಣಿ ಅವಳಾಗಿದ್ದಳು. 1795 ರ ಆಗಸ್ಟ್ 13 ರಂದು ನಿಧನಳಾದ ಅಹಲ್ಯಾಬಾಯಿ ಕೊನೆಯವರೆಗೆ ಮಾಡುತ್ತಿದ್ದ ಜನಸೇವೆ ವಿವಿಧ ಸ್ವರೂಪದಲ್ಲಿತ್ತು.

ಭಾರತ ಸರ್ಕಾರ ಅಹಲ್ಯಾದೇವಿಯ ಹೆಸರನ್ನು ಶಾಶ್ವತಗೊಳಿಸಲು ಅವಳ ಹೆಸರಿನಲ್ಲಿ ಪ್ರತಿವರ್ಷ ಅತ್ಯುತ್ತಮ ಸಮಾಜಸೇವೆ ಮಾಡಿದವರಿಗೆ “ಅಹಲ್ಯಾದೇವಿ ಪುರಸ್ಕಾರ” ವನ್ನು ನೀಡುತ್ತಿದೆ. ಅವಳ ಗೌರವಾರ್ಥ ಅಂಚೆ ಚೀಟಿ ಬಿಡುಗಡೆಯಾಗಿದೆ. ಒಂದು ವಿಶ್ವವಿದ್ಯಾಲಯಕ್ಕೆ “ಅಹಿಲ್ಯಾದೇವಿ ವಿಶ್ವವಿದ್ಯಾಲಯ” ಎಂದು ಹೆಸರಿಡಲಾಗಿದೆ. ಇಂದೋರಿನ ವಿಮಾನ ನಿಲ್ದಾಣಕ್ಕೆ “ಅಹಿಲ್ಯಾದೇವಿ ವಿಮಾನ ನಿಲ್ದಾಣ” ಎಂಬ ಹೆಸರಿದೆ. ಮಾಹೇಶ್ವರ, ವಿಷ್ಣು ಗಯಾದಲ್ಲಿ ಅಹಿಲ್ಯಾದೇವಿಯ ದೇವಾಲಯಗಳೂ ಇವೆ. ಈ ಧೀಮಂತ ಮಹಿಳೆಯ ಆಡಳಿತ ನಮ್ಮ ಚರಿತ್ರೆಯ ಒಂದು ಉನ್ನತ ಅಧ್ಯಾಯವೇ ಆಗಿದೆ ಎಂಬುದೇ ಎಲ್ಲರ ಹೆಮ್ಮೆ.


-ಕೃಷ್ಣಾಬಾಯಿ ಹಾಗಲವಾಡಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *