FEATUREDಹಿಂದಣ ಹೆಜ್ಜೆ

ಹಿಂದಣ ಹೆಜ್ಜೆ/ ಲಲಿತಾಂಬಿಕಾ ಅಂತರ್ಜನಂ ಎಂಬ ಸಾಕ್ಷಿಪ್ರಜ್ಞೆ – ಡಾ.ಪಾರ್ವತಿ ಜಿ. ಐತಾಳ್

ಶಿಕ್ಷಣ ಪಡೆಯಲು ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡು ತಲೆಮಾರಿನ ಸಾಕ್ಷಿಪ್ರಜ್ಞೆಯಾಗಿ ಬೆಳೆದವರು ಲಲಿತಾಂಬಿಕಾ ಅಂತರ್ಜನಂ (1909-1987). ಅವರು ಕೇರಳ ಮಾತ್ರವಲ್ಲ ಅದರಾಚೆಗೂ ಕಲ್ಪನೆಯನ್ನು ವಿಸ್ತರಿಸಿಕೊಂಡು ಬರೆದರು. ಅಲ್ಲದೆ ಸಾಮಾಜಿಕ ನಿರ್ಬಂಧಗಳ ಸಂಕೇತಗಳನ್ನು ಎಸೆದು ಅವನ್ನು ಮೀರುವ ಸಾಹಸ ಮಾಡಿದರು. ಜೊತೆಗೆ ಗಾಂಧೀಜಿಯವರು ಬಿತ್ತಿದ ರಾಷ್ಟ್ರೀಯ ಜಾಗೃತಿಯನ್ನೂ ತಮ್ಮ ಬರಹಗಳಲ್ಲಿ ತಂದರು. ಸಾಮಾಜಿಕ ಪರಿವರ್ತನೆಯ ಕೆಲಸಗಳಲ್ಲೂ ಸಕ್ರಿಯವಾಗಿ ದುಡಿದ ಅವರ ಕರ್ತೃತ್ವ ಶಕ್ತಿ ನಿಜವಾಗಿಯೂ ಅದ್ಭುತ.


ಲಲಿತಾಂಬಿಕಾ ಅಂತರ್ಜನಂ ಕೊಲ್ಲಂ ಜಿಲ್ಲೆಗೆ ಸೇರಿದ ಕೊಟ್ಟವಟ್ಟಂ ಎಂಬಲ್ಲಿ ಒಂದು ಬಹಳ ಸಂಪ್ರದಾಯಸ್ಥ ಮನೆತನದಲ್ಲಿ ಜನಿಸಿದರು. ಕೇರಳದ ಇತರ ಹೆಣ್ಣುಮಕ್ಕಳಿಗೆ ಸಿಕ್ಕದ ಒಂದು ಅವಕಾಶ ಲಲಿತಾಂಬಿಕಾ ಅವರಿಗೆ ಸಿಕ್ಕಿತು. ಆಕೆಯ ತಂದೆ ತಾಯಿಯರು ಸುಸಂಸ್ಕøತರೂ ಪ್ರಗತಿಪರ ಧೋರಣೆಯುಳ್ಳವರೂ ಆಗಿದ್ದರು. ಮುಖ್ಯವಾಗಿ ಆಕೆಯ ತಂದೆ ಸುಶಿಕ್ಷಿತರೂ ಸುಧಾರಣಾವಾದಿ ಮನೋಭಾವವುಳ್ಳವರೂ ಆಗಿದ್ದರು. ಹೆಣ್ಣುಮಕ್ಕಳಿಗೆ ಶಿಕ್ಷಣಕ್ಕೆ ಅವಕಾಶ ಮಾಡಿ ಕೊಡಕೂಡದು ಎಂದು ಅಂದಿನ ಸಮಾಜ ಹೇಳಿದರೂ ಅವರು ಲಲಿತಾಂಬಿಕಾಳಿಗೆ ಆಕೆಯ ಅಣ್ಣಂದಿರೊಂದಿಗೆ ಮನೆಯಲ್ಲೇ ಅನೌಪಚಾರಿಕವಾಗಿ ವಿದ್ಯಾ ಬೋಧನೆ ಮಾಡಿದರು. ಪುಸ್ತಕಗಳನ್ನು ಓದುವುದು ಮತ್ತು ಸಾಹಿತ್ಯ, ಸಂಸ್ಕøತಿ, ಧರ್ಮ, ರಾಜಕೀಯ ಮತ್ತು ಸಾಮಾಜಿಕ ವಿಷಯಗಳಿಗೆ ಸಂಬಂಧಿಸಿದ ಚರ್ಚೆಗಳಲ್ಲಿ ಆಕೆಯನ್ನು ಸೇರಿಸಿಕೊಂಡರು.

ತಮ್ಮ ‘ಓರ್ಮಯಿಲೆ ನಿಧಿಗಳ್’ (ನೆನಪಿನ ನಿಧಿಗಳು) ಎಂಬ ಕೃತಿಯಲ್ಲಿ ಲಲಿತಾಂಬಿಕಾ ಅವರು ತಮ್ಮ ಸ್ವಂತ ಅನುಭವಗಳನ್ನು ಪ್ರಥಮ ಪುರುಷ ನಿರೂಪಣಾ ಶೈಲಿಯಲ್ಲಿ ನಿರೂಪಿಸುತ್ತಾರೆ : ‘ಆಕೆ ಬೆಳೆದಂತೆ ಸಮಾಜವು ತಾನು ಬೆಳೆದು ಬಂದ ರೀತಿಯನ್ನು ಒಪ್ಪುವುದಿಲ್ಲ ಎಂಬುದು ಆಕೆಗೆ ಅರಿವಾಗುತ್ತದೆ. ಸಮಾಜದ ದೃಷ್ಟಿಯಲ್ಲಿ ಬೆಳೆದ ಹೆಣ್ಣುಮಗಳು ಅಷ್ಟೊಂದು ಸ್ವಾತಂತ್ರ್ಯ ತೆಗೆದುಕೊಳ್ಳುವುದು ತಪ್ಪಾಗಿತ್ತು.’ ತಮ್ಮ ಆತ್ಮಚರಿತ್ರೆಯಲ್ಲಿ ರಾಷ್ಟ್ರೀಯತೆ ಹಾಗೂ ಸ್ವಾತಂತ್ರ್ಯ ಹೋರಾಟಗಳು ಹೇಗೆ ದಕ್ಷಿಣ ಭಾರತದ ತುದಿಯಲ್ಲಿರುವ ಕೇರಳವನ್ನೂ ಪ್ರವೇಶಿಸಿದವು ಮತ್ತು ಮನೆಯೊಳಗಿನ ಬಂಧಿತ ವಾತಾವರಣದಲ್ಲಿ ಬೆಳೆಯುತ್ತಿದ್ದ ತಮ್ಮಲ್ಲಿ ಆಸಕ್ತಿ ಹುಟ್ಟಿಸಿದವು ಎಂಬುದನ್ನು ಅವರು ಹೇಳುತ್ತಾರೆ. ‘ಕೊಡುಂಗಾಟ್ಟಿಲ್ ಪೆಟ್ಟ ಒರಿಲ’ (ಬಿರುಗಾಳಿಗೆ ಸಿಕ್ಕಿದ ಒಂದು ಎಲೆ), `ಧೀರೇಂದು ಮಜುಂದಾರಿಂಡೆ ಅಮ್ಮ’ (ಧೀರೇಂದು ಮಜುಂದಾರನ ಅಮ್ಮ), ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಪಂಜಾಬ್ ಮತ್ತು ಬಂಗಾಳದ ವಿಭಜನೆಯಾದಾಗ ಪಡಬಾರದ ನರಕ ಯಾತನೆಗಳನ್ನು ಅನುಭವಿಸಿದ ಹಿಂದೂ-ಮುಸ್ಲಿಂ ಮತ್ತು ಸಿಕ್ಖರ ಕಥೆಯನ್ನು- ಮುಖ್ಯವಾಗಿ ಸ್ತ್ರೀಯರ ಸಂಕಟವನ್ನು ಚಿತ್ರಿಸುತ್ತವೆ. ಹೀಗೆ ಕೇರಳದ ಮಾತ್ರವಲ್ಲದೆ ಅದರಾಚೆಗೂ ತಮ್ಮ ಕಲ್ಪನೆಯನ್ನು ವಿಸ್ತರಿಸಿಕೊಂಡು ಬರೆದವರು ಲಲಿತಾಂಬಿಕಾ.

ಚಿಕ್ಕ ವಯಸ್ಸಿನಲ್ಲೇ ಟಾಗೋರ್, ಗಾಂಧೀಜಿ ಮತ್ತು ವಿವೇಕಾನಂದರ ಆಲೋಚನೆ ಹಾಗೂ ಸಿದ್ಧಾಂತಗಳಿಂದ ಆಕೆ ಪ್ರಭಾವಿತರಾದರು. ಬಂಗಾಳಿ ಸಮಾಜದ ಸಾಂಪ್ರದಾಯಿಕ ವ್ಯವಸ್ಥೆಯೊಳಗೆ ಸ್ತ್ರೀಯರು ಅನುಭವಿಸಿದ ಕಷ್ಟಗಳ ಬಗ್ಗೆ ಟಾಗೋರ್ ತಮ್ಮ ಕೃತಿಗಳಲ್ಲಿ ಚಿತ್ರಿಸಿದ್ದನ್ನು ಲಲಿತಾಂಬಿಕಾ ಬಹಳವಾಗಿ ಮೆಚ್ಚಿಕೊಂಡಿದ್ದರು. ಆ ಕುರಿತು ಅವರು ಹೀಗೆ ಹೇಳುತ್ತಾರೆ : ‘ಟಾಗೋರ್ ನನ್ನ ಪಾಲಿನ ದೇವರು’ ಎಂದು. ಟಾಗೋರ್ ಅವರು ಸ್ತ್ರೀಯರನ್ನು ಅವರ ವೈಯಕ್ತಿಕ ಹಾಗೂ ರಾಜಕೀಯ ಜೀವನಗಳ ನಡುವೆ ಸಂಘರ್ಷವಾಗುವುದನ್ನು ಉಲೇಖಿಸುತ್ತಾರೆ. ಟಾಗೋರರ ಸ್ತ್ರೀಪಾತ್ರಗಳು ವಿಚಾರವಾದಿಗಳಾಗಿದ್ದು ಲಲಿತಾಂಬಿಕಾ ಪ್ರೌಢರಾದ ನಂತರ ಬರೆದ ತಮ್ಮ ಕೃತಿಯಾದ ‘ಅಗ್ನಿಸಾಕ್ಷಿ’ಯಲ್ಲಿ ಶಾಂತವಾದ ವೈವಾಹಿಕ ಜೀವನ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮಧ್ಯೆ ಆಯ್ಕೆ ಮಾಡಬೇಕಾದ ಅನಿವಾರ್ಯತೆ ಬರುವ ಸ್ತ್ರೀಪಾತ್ರಗಳನ್ನು ಸೃಷ್ಟಿಸಿದರು. ತಮಗೆ ಉಡುಗೊರೆಯಾಗಿ ಸಿಕ್ಕಿದ ಟಾಗೋರರ ‘ಮನೆ ಮತ್ತು ಜಗತ್ತು’ ಕಾದಂಬರಿಯ ಮಲಯಾಳ ಅನುವಾದವನ್ನು ತಾವು ಓದಿದ್ದರ ಬಗ್ಗೆ ಆಕೆ ಅಲ್ಲಲ್ಲಿ ಉಲ್ಲೇಖಿಸುತ್ತಾರೆ.

ಕುದಿವ ಕುಲುಮೆ

ಲಲಿತಾಂಬಿಕಾ 1930ರ ದಶಕದಲ್ಲಿ ಬರೆಯಲಾರಂಭಿಸಿದಾಗ ಕೇರಳವು ಜಾತಿ-ಧರ್ಮ- ಹಾಗೂ ಲಿಂಗ ಭೇದಗಳ ಸಾಮಾಜಿಕ ಅನಿಷ್ಟಗಳ ಕುಲುಮೆಯಲ್ಲಿ ಕುದಿಯುತ್ತಿತ್ತು. ಸ್ತ್ರೀಶೋಷಣೆ ಒಂದೆಡೆಯಾದರೆ ದಲಿತರಿಗೆ ಹಾಗೂ ಕೆಳಜಾತಿಯವರಿಗೆ ದೇವಸ್ಥಾನ ಪ್ರವೇಶ ನಿಷೇಧ, ಜಮೀನ್ದಾರರಿಂದ ಬಡವರ ಶೋಷóuಗಳು É –ಎಲ್ಲೆಡೆ ತುಂಬಿಕೊಂಡಿದ್ದವು. ಮುಖ್ಯವಾಗಿ ವಸಾಹತು ಶಾಹಿಯ ಮತ್ತು ಊಳಿಗಮಾನ್ಯರ ವಿರುದ್ಧ ನಡೆದ ಮಾಪಿಳ್ಳೆ ದಂಗೆ (1921) ವೈಕ್ಕಂ ಸತ್ಯಾಗ್ರಹ (1924), ಗುರುವಾಯೂರು ಸತ್ಯಾಗ್ರಹ (1931)ಗಳು ಅಸ್ಪøಶ್ಯತೆಯ ವಿರುದ್ಧ ನಡೆದ ಪ್ರತಿಭಟನೆಗಳು. ‘ಒಂದೇ ಜಾತಿ, ಒಂದೇ ದೈವ ಮತ್ತು ಒಂದೇ ಧರ್ಮ’ ಎಂದು ಘೋಷಿಸಿದ ಶ್ರೀನಾರಾಯಣ ಗುರು ಮತ್ತು ‘ದುರವಸ್ಥ’ ಎಂಬ ಸ್ತ್ರೀಪರ ಕೃತಿಯನ್ನು ಆಗಲೇ ಪ್ರಕಟಿಸಿದ್ದ ಕವಿ ಕುಮಾರನ್ ಆಶಾನ್ ಈ ಹೋರಾಟದ ನೇತೃತ್ವ ವಹಿಸಿದವರು. ಅವರಿಂದ ಅಪಾರವಾಗಿ ಪ್ರಭಾವಿತರಾzವರು ಲಲಿತಾಂಬಿಕಾ. ಶಿಕ್ಷಣ ಹಾಗೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸೇರಿಕೊಳ್ಳುವ ಅವಕಾಶಗಳಿಂದ ವಂಚಿತರಾಗಿ ಮನೆಯೊಳಗಿನ ದ್ವೀಪದಲ್ಲಿ ಕೂಡಿ ಹಾಕಲ್ಪಟ್ಟು ಸಂಕಟ ಅನುಭವಿಸುತ್ತಿದ್ದ ನಂಬೂದಿರಿ ಸ್ತ್ರೀಯರು ಮತ್ತು ಮುಸ್ಲಿಂ ಮಹಿಳೆಯರ ಪರವಾಗಿ ಸಕ್ರಿಯವಾಗಿ ಅವರು ಹೋರಾಟಕ್ಕಿಳಿದರು. ಸುಧಾರಣಾವಾದಿ ಲೇಖಕರೂ ಸಕ್ರಿಯ ಹೋರಾಟಗಾರರೂ ‘ಅಡುಗೆ ಮನೆಯಿಂದ ರಂಗವೇದಿಕೆಗೆ‘ ಎಂಬ ಕೃತಿಯನ್ನು ರಚಿಸಿದವರೂ ಆದ ವಿ.ಟಿ. ಭಟ್ಟಾದಿರಿಪ್ಪಾಡ್ ‘ಮರಕ್ಕುಡಯಿಲೆ ಮಹಾನರಕಂ (ಮರದಕೊಡೆಯ ಹಿಂದಿನ ಮಹಾನರಕ) ಎಂಬ ಕೃತಿಯನ್ನು ರಚಿಸಿದ ಎಂ.ಆರ್. ಭಟ್ಟಾದಿರಿಪ್ಪಾಡ್ ಅವರೊಂದಿಗೆ ಸೇರಿಕೊಂಡದ್ದರಿಂದ ಅದು ಅವರ ವೈಯಕ್ತಿಕ ಬದುಕಿನ ಮೇಲೆ ಪರಿಣಾಮ ಬೀರಿತು. 1932ರಲ್ಲಿ ಲಲಿತಾಂಬಿಕಾ ಅವರ ಮದುವೆಯಾಯಿತು. ಅದೃಷ್ಟವಶಾತ್ ಅವರ ಪತಿಯೂ ಪತ್ನಿಯೊಂದಿಗೆ ಮಾಡಿದ ಚರ್ಚೆ ಮಾತುಕತೆಗಳಿಂದ ಪ್ರಗತಿಪರ ಧೋರಣೆಗಳನ್ನು ತಾಳಿ ಪತ್ನಿಯ ಹೋರಾಟವನ್ನು ಬೆಂಬಲಿಸಿದರು. ಮನ್ನತ್ತ್ ಪದ್ಮನಾಭನ್ ಎಂಬವರು ಏರ್ಪಡಿಸಿದ ‘ನಾಯರ್ ಸಮ್ಮೇಳನ’ದಲ್ಲಿ ಭಾಗವಹಿಸಿ ಮರದ ಕೊಡೆಯನ್ನು ಮತ್ತು ಮುಖಪರದೆಗಳನ್ನು ಕಿತ್ತೊಗೆಯುವ ಧೈರ್ಯ ತೋರಿದ ಪಾರ್ವತಿ ನೆನ್ಮಿನಿಮಂಗಲಂ ಮತ್ತು ಆರ್ಯಾ ಪಳ್ಳಂ ಎಂಬ ಇಬ್ಬರು ಮಹಿಳೆಯರನ್ನು ಅಲ್ಲಿ ಲಲಿತಾಂಬಿಕಾ ಅವರೇ ಸನ್ಮಾನಿಸಿದರು.

‘ಮರಕ್ಕುಡ ನೀಙುÐನ್ನು (ಮರದ ಕೊಡೆಗಳನ್ನು ನಾವು ಕಿತ್ತೆಸೆಯುತ್ತದ್ದೇವೆ) ಎಂಬ ಕೃತಿಯಲ್ಲಿ ಲಲಿತಾಂಬಿಕಾ ಮತ್ತೆ ಪ್ರಥಮ ಪುರುಷ ನಿರೂಪಣೆಯನ್ನು ಬಳಸಿ ತಾನು ಹೇಗೆ ಬೌದ್ಧಿಕವಾಗಿ ಬೆಳೆದು ನೈತಿಕ ದೃಢತೆಯನ್ನು ಪ್ರತಿಪಾದಿಸಿದೆ ಎಂಬುದನ್ನು ವಿವರಿಸುತ್ತಾರೆ : `ಮರದ ಕೊಡೆಯನ್ನು ಕಿತ್ತೆಸೆಯಲು ಧೈರ್ಯ ಮಾಡಿದ ಕೆಲವು ಮಹಿಳೆಯರ ಗುಂಪೇ ಅಲ್ಲಿತ್ತು. ಆಕೆ ತಾನು ದೇವಸ್ಥಾನಕ್ಕೆ ಹೋಗುತ್ತಿರುವವಳಂತೆ ನಟಿಸಿದಳು. ಮರದ ಕೊಡೆ ಹಾಗೂ ಮುಖಪರದೆಗಳನ್ನು ಧರಿಸಿಕೊಂಡಳು. ಮನೆಯಿಂದ ಹೊರಬೀಳುತ್ತಿದ್ದಂತೆಯೇ ಕೊಡೆಯನ್ನು ತೆಗೆದೆಸೆದು ಮುಂಡನ್ನು ತನಗೆ ಬೇಕಾದಂತೆ ಉಟ್ಟುಕೊಂಡು ಬಸ್ ಹಿಡಿದು ಸಭೆ ನಡೆಯುವಲ್ಲಿಗೆ ಹೋಗಿ ಬಂದಳು. ತಾನು ಮಾಡಿದ ಕೆಲಸವು ಆಕೆಗೆ ತುಂಬ ತೃಪ್ತಿ ತಂದಿತು. ‘ಪ್ರತೀಕಾರ ದೇವತ’ ಮತ್ತು ‘ಕುಟ್ಟಸಮ್ಮತಂ’ (ತಪ್ಪೊಪ್ಪಿಗೆ) ಎಂಬ ಕಥೆಗಳಲ್ಲಿ ಲಲಿತಾಂಬಿಕಾ ನಂಬೂದಿರಿ ಮಹಿಳೆಯರ ಸಾಮಾಜಿಕ ಹಾಗೂ ಸಾಂಸ್ಕøತಿಕ ಬಿಡುಗಡೆಯ ಕುರಿತು ಬರೆಯುತ್ತಾರೆ.

ಈ ಕಥೆಗಳಲ್ಲಿ ಅವರು ನಂಬೂದಿರಿ ಪುರುಷರ ಆಷಾಢಭೂತಿತನ ಮತ್ತು ಹೆಣ್ಣುಮಕ್ಕಳು ತಮ್ಮಿಷ್ಟದ ಹುಡುಗನ ಜತೆಗೆ ಲೈಂಗಿಕ ಸಂಬಂಧ ಬೆಳೆÉಸಿಕೊಂಡರೆ ಅವರನ್ನು ಜಾತಿಯಿಂದ ಬಹಿಷ್ಕರಿಸಲು ಅನುಸರಿಸುವ ‘ಸ್ಮಾರ್ತವಿಚಾರಂ’ ಎಂಬ ವಿಧಿಯ ಹಿಂದಿನ ಕುತಂತ್ರವನ್ನು ನೇರವಾಗಿ ಬಯಲಿಗೆಳೆಯುತ್ತಾರೆ: ‘ ಹನ್ನೊಂದು ವರ್ಷ ಮೂರು ತಿಂಗಳು ವಯಸ್ಸಿನ ನನ್ನನ್ನು ನನ್ನ ತಂದೆಯ ವಯಸ್ಸಿನ ಒಬ್ಬ ಪುರುಷನಿಗೆ ವಿವಾಹ ಮಾಡಿ ಕೊಟ್ಟು, ನನ್ನ ತಂದೆ ನನ್ನ ಗಂಡನ ಮೂವತ್ತು ವರ್ಷ ವಯಸ್ಸಿನ ಮಗಳನ್ನು ಮದುವೆಯಾದ. ಹೀಗೆ ಅವರು ಮಗಳಂದಿರನ್ನು ಪರಸ್ಪರ ವಿನಿಮಯ ಮಾಡಿಕೊಂಡರು’ ಎಂದು ಲಲಿತಾಂಬಿಕಾ ತಮ್ಮ ‘ಕುಟ್ಟಸಮ್ಮತಂ’ ಕತೆಯಲ್ಲಿ ಬರೆಯುತ್ತಾರೆ. ಎರಡೇ ವರ್ಷಗಳಲ್ಲಿ ಆ ವೃದ್ಧ ನಂಬೂದಿರಿ ತೀರಿಕೊಂಡಾಗ ಅವಳಿಗೆ ಕೇವಲ ಹದಿಮೂರು ವರ್ಷ. ವಿಧವೆಯಾಗಿ ಅಮಂಗಳೆಯೆನ್ನಿಸಿಕೊಂಡು ಮನೆಯ ದೇವರÀಕೋಣೆಯೊಳಗೆ ಬಂಧಿಯಾಗಿ, ಕನಿಷ್ಠ ಆಭರಣಗಳೂ ಇಲ್ಲದೆ, ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶವೂ ಇಲ್ಲದೆ ಒಂಟಿಯಾಗಿ ಖಿನ್ನತೆಯಲ್ಲಿ ಕರಗುತ್ತಾಳೆ. ತನ್ನದೇ ವಯಸ್ಸಿನ ಅಣ್ಣ-ಅತ್ತಿಗೆಯರು ಸಂತೋಷದಿಂದ ಮಾತು ಕಥೆಯಾಡುತ್ತ ಕಳೆಯುವುದನ್ನು ನೋಡಿದಾಗ ಅವಳ ದುಃಖ ನೂರ್ಮಡಿಸುತ್ತದೆ. ದುಃಖ ಸಹಿಸಿಕೊಳ್ಳಲಾಗುವುದಿಲ್ಲ. ಕ್ರಮೇಣ ಅವಳು ಬೇರೊಬ್ಬ ಪುರುಷನೊಂದಿಗೆ ಲೈಂಗಿಕ ಸಂಬಂಧವಿಟ್ಟುಕೊಳ್ಳುತ್ತಾಳೆ. ಕುಟುಂಬದವರು ಅವಳ ಬಹಿಷ್ಕಾರ ವಿಧಿಗೆ ತಯಾರಿ ನಡೆಸಿದಾಗ ಅವಳು ತನ್ನ ಮನಸ್ಥಿತಿಯನ್ನು ವಿವರಿಸುತ್ತಾಳೆ: ‘ನನ್ನ ಅಣ್ಣನ ಹೆಂಡತಿ ನನಗಿಂತ ಕೇವಲ ಆರೇ ತಿಂಗಳು ಚಿಕ್ಕವಳು. ಅವರಿಬ್ಬರು ಸಂತೋಷದಿಂದ ನಗುವಾಗ ನನ್ನಿಂದ ಸಹಿಸಿಕೊಳ್ಳಲಾಗಲಿಲ್ಲ. ವಿಧವೆ ಹೆಣ್ಣಿಗೆ ಇನ್ನೊಬ್ಬರ ಕಣ್ಣೀರಿಗಿಂತಲೂ ನಗು ಭಯ ಹುಟ್ಟಿಸುತ್ತದೆ. ತನಗೆ ಜೀವನ ಪೂರ್ತಿ ಸಿಗಲಾರದ ಸಂತೋಷ ಬೇರೆಯವರಿಗೆ ಸಿಗುತ್ತದೆ ಎಂಬುದನ್ನು ನೋಡಿದಾಗ ಎಷ್ಟು ನೋವಾಗುತ್ತದೆ ಅನ್ನುವುದು ವೈದಿಕರಾದ ನಿಮಗೆಲ್ಲಿ ಅರ್ಥವಾದೀತು? ನೋವಿನ ಬೆಂಕಿಗೆ ತುಪ್ಪ ಸುರಿಯುವ ಇಂಥ ಸಂಗತಿಗಳೇ ನಂಬೂದಿರಿ ಮನೆಗಳ ಅಂತಃಪುರಗಳನ್ನು ಸುಡುತ್ತದೆ.’

‘ಮಣಿಕ್ಕನ್’ ಎಂಬ ಕಥೆಯಲ್ಲಿ ಲಲಿತಾಂಬಿಕಾ ಅವರು ಜಮೀನ್ದಾರರಿಂದ ಶೋಷಣೆಗೊಳಗಾಗುವ ಬಡ ಒಕ್ಕಲುಗಳ ದುಸ್ಥಿತಿಯ ಕುರಿತು ಬರೆಯುತ್ತಾರೆ. ಅವರ ‘ಅಗ್ನಿಸಾಕ್ಷಿ’ ಎಂಬ ಕಾದಂಬರಿಯಲ್ಲಿ ಅಂದಿನ ಕಾಲದಲ್ಲಿ ಸ್ತ್ರೀಯರು ಅನುಭವಿಸುತ್ತಿದ್ದ ಎಲ್ಲ ಸಂಕಷ್ಟಗಳು ಚಿತ್ರಿತವಾಗಿವೆ. ತಂಗಂ ಎಂಬ ಪಾತ್ರವು ತನ್ನ ಮಕ್ಕಳಿಗಾಗುವ ಅವಮಾನವನ್ನು ಅನುಭವಿಸುವ ಕಥೆಯು ಮನಕರಗುವ ರೀತಿಯಲ್ಲಿದೆ. ತಂಗಂಳ ತಂದೆ ಸಾಯುವ ಸ್ಥಿತಿಯಲ್ಲಿದ್ದಾಗ ಅವನನ್ನು ನೋಡಲೆಂದು ಬಯಸುವ ತಂಗಂ, ತನ್ನ ತಂದೆಯ ಮೂಲಮನೆಗೆ ಬಂದು ತಂದೆಯ ಆತ್ಮವು ದೇಹವನ್ನು ಬಿಟ್ಟುಹೋಗುವ ಸರಿಯಾದ ಸಮಯದಲ್ಲಿ ಅವಳು ಅವನನ್ನು ಸ್ಪರ್ಶಿಸಿದ್ದರಿಂದ ನಂಬೂದಿರಿಗಳ ಮನೆಯವರು ಅಶುದ್ಧವಾಯಿತೆಂದು ಹೇಳಿ ಅವಳನ್ನೂ ಅವಳ ತಾಯಿಯನ್ನೂ ಅವಮಾನಿಸಿ, ಶುದ್ಧೀಕರಣ ಕಾರ್ಯ ನಡೆಸಿ ಅವರನ್ನು ಅಲ್ಲಿಂದ ಹೊರಗಟ್ಟಿದ ನಂತರವೇ ಶವ ಸಂಸ್ಕಾರದ ಕಾರ್ಯವನ್ನು ಮುಂದುವರೆಸುತ್ತಾರೆ. ನಂಬೂದಿರಿ ಹೆಣ್ಣುಮಕ್ಕಳು ಮದುವೆಯಾಗುವ ಮನೆಯ ಹಿರಿಯನು ನಾಲ್ಕು ಐದು ಮದುವೆಗಳನ್ನು ಆಗುತ್ತಿದ್ದ, ಮಾತ್ರವಲ್ಲ, 50-60 ವರ್ಷ ವಯಸ್ಸಿನ ಮುದುಕ 15 ವರ್ಷದ ಹೆಣ್ಣುಮಗಳನ್ನು ವರದಕ್ಷಿಣೆ ತೆಗೆದುಕೊಂಡು ಮದುವೆಯಾಗುತ್ತಿದ್ದ. ಎಲ್ಲ ನಂಬೂದಿರಿ ಕುಟುಂಬದವರು ಸ್ಥಿತಿವಂತರಾಗಿರಲಿಲ್ಲವಾದ್ದರಿಂದ ವರದಕ್ಷಿಣೆ ಕೊಟ್ಟು ಹೆಣ್ಣುಮಕ್ಕಳ ಮದುವೆ ಮಾಡುವುದು ಅವರ ಪಾಲಿಗೆ ದೊಡ್ಡ ಸಮಸ್ಯೆಯಾಗಿತ್ತು. ಆದ್ದರಿಂದ ಅವರು ತಮ್ಮ ಎಳೆಯ ವಯಸ್ಸಿನ ಹೆಣ್ಣು ಮಕ್ಕಳನ್ನು ಮುದಿ ವಯಸ್ಸಿನ ಗಂಡಸರಿಗೆ ಐದನೇ ಅಥವಾ ಆರನೆಯ ಪತ್ನಿಯಾಗಿಯಾದರೂ ಸರಿ, ಮದುವೆ ಮಾಡಿ ಕೊಡುತ್ತಿದ್ದರು. ಐದಾರು ಮಂದಿ ಪತ್ನಿಯರಿದ್ದ ಮನೆಯಲ್ಲಿ ಸವತಿ ಮಾತ್ಸರ್ಯವೂ ಹೊಗೆಯಾಡಿ ಸಮಸ್ಯೆ ಸೃಷ್ಟಿಯಾಗುತ್ತಿತ್ತು. ಹೀಗೆ ಕನ್ಯಾಪಿತೃಗಳು ವರದಕ್ಷಿಣೆಯಿಂದ ತಪ್ಪಿಸಲು ಇದ್ದ ಇನ್ನೊಂದು ದಾರಿಯಾಗಿತ್ತು ‘ಮಾರುರತ್ತಿನು ಕಲ್ಯಾಣಂ’.

ಉತ್ತರ ಸಿಗದ ಪ್ರಶ್ನೆ

ಮೊದಮೊದಲು ಸಹೋದರರ ನಡುವೆ ಹೆಣ್ಣುಮಕ್ಕಳ ವಿನಿಮಯ ಮಾಡಿ ಮದುವೆಗಳು ನಡೆಯುತ್ತಿದ್ದವು. ಕಾಲಕ್ರಮೇಣ ಅದು ತಂದೆ-ಮಗಳಂದಿರ ವಿನಿಮಯವಾಗಿ ಮಾರ್ಪಟ್ಟಿತು. ಮದುವೆಯ ವಿಚಾರದಲ್ಲಿ ಹೆಣ್ಣಿನ ಅಭಿಪ್ರಾಯವನ್ನು ಎಂದೂ ಕೇಳುತ್ತಿರಲಿಲ್ಲ. ಅಲ್ಲದೆ ಒಬ್ಬ ‘ಮೂಸ್ಸಂಪೂರಿ’ (ಹಿರಿಯ ನಂಬೂದಿರಿ) ಮದುವೆಯಾಗುವಾಗ ಅವನು ಅತ್ಯಂತ ಹಿರಿಯ ಹೆಂಡತಿಯ ಒಪ್ಪಿಗೆ ಕೇಳುವ ಪದ್ಧತಿಯಿತ್ತು. ಆದರೆ ಅದು ಹೆಚ್ಚಾಗಿ ಆಕೆಯನ್ನು ಬೆದರಿಸಿಯೇ ಪಡೆಯಲಾಗುತ್ತಿತ್ತು. ಸವತಿ ಮಾತ್ಸರ್ಯದಿಂದಾಗಿ ಹೆಂಡತಿಯರೆಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ನರಕವಾಸವನ್ನೇ ಅನುಭವಿಸುತ್ತಿದ್ದರು. ತಮ್ಮ ವಿಧಿಯನ್ನು ಹಳಿಯುತ್ತ ದಿನದೂಡುತ್ತಿದ್ದರು. ಒಂದು ವೇಳೆ ತಮ್ಮ ಹೆಣ್ಣು ಮಕ್ಕಳಿಗೆ ಸರಿಯಾದ ವರ ದೊರೆಯದಿದ್ದಲ್ಲಿ ಬಡ ನಂಬೂದಿರಿಗಳು ಅವರನ್ನು ಬಹಳ ದೂರದ- ಸಿರ್ಸಿ, ಮಂಗಳೂರು, ಕೊಯಂಬತ್ತೂರು ಮೊದಲಾದ- ಸ್ಥಳಗಳಲ್ಲಿದ್ದ ವರಗಳಿಗೆ ಮದುವೆ ಮಾಡಿ ಕೊಡುತ್ತಿದ್ದರು. ಹಾಗೆ ಮಾಡಿದಾಗ ಕೆಲವೊಮ್ಮೆ ಆ ಹೆಣ್ಣುಮಕ್ಕಳು ವೇಶ್ಯಾವಾಟಿಕೆಯ ಜಾಲಕ್ಕೆ ಬೀಳುವುದೂ ಇತ್ತು. ಈ ಸಮಸ್ಯೆಯನ್ನು ವಿ.ಟಿ. ಭಟ್ಟಾದಿರಿಪ್ಪಾಡ್ ತಮ್ಮ ‘ಉತ್ತರಂ ಕಿಟ್ಟಾತ್ತ ಚೋದ್ಯಂ’ (ಉತ್ತರ ಸಿಗದ ಪ್ರಶ್ನೆ) ಎಂಬ ಕಥೆಯಲ್ಲಿ ಚರ್ಚಿಸಿದ್ದಾರೆ.

ಸಂಪ್ರದಾಯಗಳ ವಿರುದ್ಧ ನಡೆದ ಹೋರಾಟಕ್ಕೆ ಕೆಲವೊಮ್ಮೆ ಸಂಪ್ರದಾಯಸ್ಥ ಮಹಿಳೆಯರೇ ಅಡ್ಡಿಯಾಗಿರುತ್ತಿದ್ದರು. ಲಲಿತಾಂಬಿಕಾ ಅವರ ಕಾದಂಬರಿ ‘ಅಗ್ನಿಸಾಕ್ಷಿ’ಯಲ್ಲಿನ ತೇತಿ ಎಂಬ ಕೇಂದ್ರ ಪಾತ್ರವು ಹಳೆಯ ಸಂಪ್ರದಾಯಗಳಿಗೆ ಅಂಟಿಕೊಂಡ ಉಣ್ಣಿ ನಂಬೂದಿರಿಗಳ ಹೆಂಡತಿ. ಆಕೆ ನಾಲ್ಕು ಹಂತಗಳಲ್ಲಿ ಪರಿವರ್ತನೆಗೆ ಪಕ್ಕಾಗುತ್ತಾಳೆ. ಆಕೆಗೆ ಸದಾ ತನ್ನ ಪತ್ರಗಳ ಮೂಲಕ ಉಪದೇಶ ನೀಡುವವನು ಆಕೆಯ ಅಣ್ಣ ಪಿ.ಕೆ.ಪಿ. ನಂಬೂದಿರಿ. ಆತನ ಮೂಲಕ ಆಕೆಗೆ ಹೊರ ಜಗತ್ತಿನ ಪರಿಚಯವಾಗುತ್ತದೆ. ಆಕೆಗೆ ತಂಗಂ ಆಸರೆಯಾಗಿರುತ್ತಾಳೆ. ತಂಗಂ ಓರ್ವ ಸುಧಾರಣಾವಾದಿ ಮನೋಭಾವದ, ಆದರೆ ಬಡ ಕುಟುಂಬದಿಂದ ಬಂದ ಹೆಣ್ಣು. ಗಂಡನ ಮನೆಯಲ್ಲಿ ಅವಳು ಹಿರಿಯರ ಚುಚ್ಚು ಮಾತು-ಬೈಗುಳಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ಆಕೆ ಮನೆಯವರ ಕೆಂಗಣ್ಣಿಗೆ ಗುರಿಯಾಗುತ್ತಾಳೆ. ತನ್ನ ಪತಿಯ ಬಗ್ಗೆ ಅವಳೆನ್ನುತ್ತಾಳೆ: ‘ನನ್ನ ಗಂಡನಿಗೆ ಎಲ್ಲರ ಬಗ್ಗೆ ಇರುವ ಭಯದಿಂದಾಗಿ ಯಾರ ಬಗ್ಗೆಯೂ ಪ್ರೀತಿಯಿಲ್ಲ. ತಾಯಿ ಬಗ್ಗೆ ಭಯ, ಸಂಪ್ರದಾಯಗಳ ಬಗ್ಗೆ ಭಯ, ದೇವರ ಬಗೆಗೂ ಭಯ. ಇಲ್ಲೇ ಇದ್ದರೆ ನಾನೂ ಒಂದು ದಿನ ಹುಚ್ಚಿಯಾಗಿ ಬಿಡುವನೇನೋ ಅನ್ನುವ ಭಯ’. ಉಣ್ಣಿ ಹೇಳುತ್ತಾನೆ: ‘ಈ ಮನೆಯಲ್ಲಿ ನಾವು ನಮ್ಮ ಇಷ್ಟದ ಪ್ರಕಾರ ಬದುಕುವ ಹಾಗಿಲ್ಲ. ಬೇರೆಯವರ ಇಷ್ಟಾನಿಷ್ಟಗಳಿಗೂ ಬೆಲೆ ಕೊಡಬೇಕಾಗುತ್ತದೆ. ಇಲ್ಲಿ ಧರ್ಮ ಹೆಚ್ಚು ಮುಖ್ಯ. ಭೋಗ ಮುಖ್ಯವಲ್ಲ, ತ್ಯಾಗ ಮುಖ್ಯ ಬದುಕೇ ಒಂದು ಯಜ್ಞ’. ಇದರಿಂದಲೇ ನಮಗೆ ಗೊತ್ತಾಗುತ್ತದೆ ಕೇಂದ್ರ ಪಾತ್ರ ತೇತಿ, ದೇವಕಿ/ದೇವಕಿ ಬೆಹನ್ ಮತ್ತು ಇತರರ ನಡುವೆ ಧ್ರುವಗಳ ಅಂತರವಿದೆ ಎಂದು. ಅವಳು ಸ್ತ್ರೀತ್ವದ, ಸ್ತ್ರೀಯರ ಹಕ್ಕು ತೀವ್ರ ಸ್ವಾತಂತ್ರ್ಯದ ಬಯಕೆಗಳ ಪ್ರತೀಕ. ಲಲಿತಾಂಬಿಕಾ ಅವರಂತೆ ಆಕೆಯೂ ರಾಷ್ಟ್ರೀಯತೆಯ ಪ್ರತಿನಿಧಿ.

ಲಲಿತಾಂಬಿಕಾ ಅವರು ಗಾಂಧೀಜಿಯವರು ಎಬ್ಬಿಸಿದ ರಾಷ್ಟ್ರೀಯ ಜಾಗೃತಿಯನ್ನು ಕಾದಂಬರಿಯೊಳಗೆ ಹೆಣೆದಿದ್ದಾರೆ. ಸಮಾಜದ ರೀತಿ-ನೀತಿಗಳಿಗೆ ವಿರುದ್ಧವಾಗಿ ನಡೆಯುವ ಹೆಣ್ಣುಮಕ್ಕಳಿಗೆ ಪಾಠ ಕಲಿಸಲು ನಂಬೂದಿರಿಗಳು ಮಾಡುತ್ತಿದ್ದ ಕೆಲಸವೆಂದರೆ ಅವರ ಚರಿತ್ರಹಾನಿ. ನಂಬೂದಿರಿ ಸಮುದಾಯದವರು ಕಂಡುಕೊಂಡ ಈ ದಾರಿ ಸ್ಮಾರ್ತವಿಕಾರಂ ಎನ್ನುವುದು. ತೇತಿ ಸಮಾಜದ ವಿರುದ್ಧ ಸೆಟೆದು ನಿಂತು ವಿವಾಹದಿಂದ ಹೊರನಡೆದಾಗ ನಂಬೂದಿರಿ ಸಮುದಾಯವು ಅವಳನ್ನು ಸ್ಮಾರ್ತವಿಕಾರಕ್ಕೆ ಗುರಿಪಡಿಸಿ ಅವಳಿಗೆ ಜಾತಿಯಿಂದ ಬಹಿಷ್ಕಾರ ಹಾಕಿ ಉಣ್ಣಿಗೆ ಎರಡನೆಯ ಮದುವೆ ಮಾಡಲು ಹೊರಟರು. ಆದರೆ ಉಣ್ಣಿ ಅದಕ್ಕೆ ಒಪ್ಪದೆ ಇದ್ದಾಗ ಅವರ ಸಂಚು ವಿಫಲವಾಗುತ್ತದೆ. ತೇತಿ ಮನೆಗೆ ಹಿಂತಿರುಗಿ ಬರುವಾಗ, ಅವಳು ರವಿಕೆ ಧರಿಸುತ್ತಾಳೆಂಬ ಸುದ್ದಿಯನ್ನು ಬೇರೆಯವರಿಂದ ಕೇಳಿ ತಿಳಿದುಕೊಂಡ ಮನೆಯ ಹೆಂಗಸರು ಅವಳ ಪೆಟ್ಟಿಗೆ ತೆರೆದು ಅವಳು ಇನ್ನಷ್ಟು ರವಿಕೆಗಳನ್ನು ಹೊಲಿಸಿಟ್ಟಿದ್ದಾಳೆಯೇ ಎಂದು ನೋಡುತ್ತಾರೆ. ಸಮಾಜದಲ್ಲಿ ನಡೆಯುತ್ತಿದ್ದ ಬದಲಾವಣೆಗಳಿಗೆ ಅವರು ಎಷ್ಟರ ಮಟ್ಟಿಗೆ ವಿರುದ್ಧವಾಗಿದ್ದರು ಎಂಬುದು ಇದರಿಂದ ತಿಳಿಯುತ್ತದೆ. ಪರಿವರ್ತನೆ ಹಾಗೂ ಬೆಳವಣಿಗೆಯ ವಿಚಾರದಲ್ಲಿ ಹೆಣ್ಣಿಗೆ ಹಣ್ಣೇ ಹೇಗೆ ಶತ್ರುವಾಗಿದ್ದಳು ಅನ್ನುವುದನ್ನೂ ಇಲ್ಲಿ ನೋಡಬಹುದು.

ತನ್ನ ನಂಬೂದಿರಿ ಬೇರೆ ಕೆಳಜಾತಿಯ ಸುಂದರಿ ಹೆಣ್ಣಿನ ಜತೆಗೆ ಅನೈತಿಕ ಸಂಬಂಧವಿರಿಸಿಕೊಂಡು ಪ್ರತಿ ರಾತ್ರಿಯೂ ಅವಳ ಮನೆಗೇ ಹೋಗಿ ಮಲಗುವುದನ್ನು ಸಹಿಸಲಾಗದೆ ಮನೆಯ ಮುಂದಿನ ಅಂಗಳಕ್ಕೆ ಬಂದು ನಿಂತು ಗೋಳೋ ಎಂದು ಅಳುತ್ತ ಬೊಬ್ಬೆ ಹಾಕುವ ‘ಭ್ರಾಂತ ಸಿರಿಯಮ್ಮ’ ಹೇಗೆ ನಿಜವಾಗಲೂ ಹುಚ್ಚಿಯಾಗಿ ಬಿಡುತ್ತಾಳೆ ಅನ್ನುವುದನ್ನೂ ನಾವು ಗಮನಿಸಬೇಕು. ಅವಳ ಪರವಾಗಿ ಮಾತನಾಡುವ ನೇತ್ಯಾರಮ್ಮ ಹೇಳುತ್ತಾಳೆ: ‘ಅವಳು ಹುಚ್ಚಿಯಾಗದಿರಲು ಹೇಗೆ ಸಾಧ್ಯ ? ಮದುವೆಯಾದ ಮೇಲೆ ತನ್ನ ಗಂಡ ಒಂದು ರಾತ್ರಿಯೂ ತನ್ನ ಜತೆಗೆ ಮಲಗದಿದ್ದರೆ ಯಾವ ಹೆಣ್ಣು ತಾನೇ ಸ್ವಸ್ಥಳಾಗಿದ್ದಾಳು?’ ಒಬ್ಬ ಅಂತರ್ಜನಂ ಹೆಣ್ಣಿನ ಸ್ಥಿತಿಯನ್ನು ಇದರಿಂದ ಊಹಿಸಬಹುದು. ಕೆಲವು ಮಂದಿ ನಂಬೂದಿರಿಗಳು ಒಳ್ಳೆಯವರಾಗಿದ್ದು ಗೌರವಯುತ ಜೀವನವನ್ನು ನಡೆಸಿದವರೂ ಇಲ್ಲವೆಂದಲ್ಲ.

ಲಲಿತಾಂಬಿಕಾ ಅವರು ಸಣ್ಣ ಕಥೆ, ಕಾದಂಬರಿ, ನಾಟಕ, ವೈಚಾರಿಕ ಲೇಖನ ಎಲ್ಲ ಪ್ರಕಾರಗಳಲ್ಲೂ ಬರೆದಿದ್ದರೂ ಅವರು ತಮ್ಮ ಅಂತರಂಗದ ಧ್ವನಿಯ ಅಭಿವ್ಯಕ್ತಿಗೆ ಹೆಚ್ಚು ಬಳಸಿದ್ದು ಸಣ್ಣ ಕಥಾ ಪ್ರಕಾರವನ್ನೇ ಆಗಿತ್ತು. ಬರವಣಿಗೆ ಮತ್ತು ಕಲೆಗಳು ಜನರಲ್ಲಿ ಅರಿವು ಮೂಡಿಸುವ ಅಪಾರ ಶಕ್ತಿಯಲ್ಲಿ ದೃಢವಾದ ನಂಬಿಕೆಯಿಟ್ಟ ಆಕೆ ತನ್ನ ‘ಕಥಕ್ಕಾರ್ತಿಯುಡೆ ಮರುಪಡಿ’ (ಕಥೆಗಾರ್ತಿಯ ಉತ್ತರ) ಎಂಬ ಕೃತಿಯಲ್ಲಿ ಕಲಾತ್ಮಕ ಕೃತಿಯು ಒಂದು ರಚನಾತ್ಮಕ ಪ್ರಯತ್ನ ಎಂಬುದಾಗಿ ಹೇಳುತ್ತಾರೆ: ಒಬ್ಬ ಕಲಾವಿದ-ಸ್ತ್ರೀಯಾಗಲಿ ಪುರುಷನಾಗಲಿ- ಒಂದು ಜರ್ಝರಿತ ಸಮಾಜದ ಅರ್ಥಹೀನ ಪದ್ಧತಿಗಳನ್ನು ಕೆಡವಿ ಹಾಕುವಾಗ ಒಂದು ಆರೋಗ್ಯಕರವಾದ ಹೊಸ ಸಂಸ್ಕøತಿಯನ್ನು ಕಟ್ಟುವ ಉಪಕರಣಗಳನ್ನೂ ಹೊಂದಿರಬೇಕು’ ಎಂದು. ಒಬ್ಬ ಪ್ರಜ್ಞಾವಂತ ಹಾಗೂ ಜವಾಬ್ದಾರಿಯುತ ತಾಯಿಯಾಗಿ ಸಾಮಾಜಿಕ ಪರಿವರ್ತನೆಯ ಕೆಲಸಗಳಲ್ಲೂ ಸಕ್ರಿಯವಾಗಿ ದುಡಿದ ಆಕೆಯ ಕರ್ತೃತ್ವ ಶಕ್ತಿ ನಿಜವಾಗಿಯೂ ಅದ್ಭುತ! (ಸಶೇಷ)

  • ಪಾರ್ವತಿ ಜಿ. ಐತಾಳ್

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *